ಕೇಂದ್ರದ ‘ಸಹಯೋಗ್’ ಪೋರ್ಟಲ್ ವಿರುದ್ದ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ ಕಾರ್ಪ್ ಹೇಳಿದೆ.
ಹೈಕೋರ್ಟ್ ಆದೇಶವನ್ನು ಒಪ್ಪುವುದಿಲ್ಲ ಎಂದು ಗೌರಯುತವಾಗಿ ಹೇಳುತ್ತಿದ್ದೇವೆ. ಇದರ ವಿರುದ್ದ ಮೇಲ್ಮನವಿಯ ಸಲ್ಲಿಸುತ್ತೇವೆ ಎಂದು ಎಕ್ಸ್ ಕಂಪನಿಯ ಗ್ಲೋಬಲ್ ಅಫೇರ್ಸ್ ವಿಭಾಗ ಸೋಮವಾರ ತಿಳಿಸಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ ‘ಸಹಯೋಗ್’ ಪೋರ್ಟಲ್ ಪರಿಚಯಿಸಿದ ನಂತರ ವಾಕ್ ಸ್ವಾತಂತ್ರ್ಯ ಮತ್ತು ಪಾರದರ್ಶಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಮೈಕ್ರೋ-ಬ್ಲಾಗಿಂಗ್ ಸೈಟ್ ಎಕ್ಸ್ ಮತ್ತು 92 ಮಾಧ್ಯಮ ಸಂಸ್ಥೆಗಳ ಸಮೂಹವಾದ ಡಿಜಿಪಬ್ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಬುಧವಾರ (ಸೆ.24) ವಜಾಗೊಳಿಸಿತ್ತು.
ಜುಲೈ 29ರಂದು ಕಾಯ್ದರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪ್ರಕಟಿಸಿದ್ದು, “ನಮ್ಮ ಸಮಾಜದ ಬೆಳವಣಿಗೆಯ ಇತಿಹಾಸ ನೋಡಿದರೆ, ಒಂದು ವಿಷಯ ಸ್ಪಷ್ಟವಾಗಿ ಗೊತ್ತಾಗುತ್ತದೆ. ಮಾಹಿತಿ ಮತ್ತು ಸಂವಹನ, ಅದು ಎಷ್ಟೇ ವೇಗವಾಗಿ ಹರಡಿದರೂ, ಅದನ್ನು ಎಂದಿಗೂ ಸಂಪೂರ್ಣ ಸ್ವತಂತ್ರವಾಗಿ ಬಿಡಲಾಗಿಲ್ಲ. ಯಾವಾಗಲೂ ಅದರ ಮೇಲೆ ಕೆಲವು ನಿಯಮಗಳು ಮತ್ತು ನಿಯಂತ್ರಣಗಳು ಇದ್ದೇ ಇವೆ” ಎಂದು ಹೇಳಿದ್ದರು.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು (ಮೈಟಿ) ಪೊಲೀಸರನ್ನೂ ಒಳಗೊಂಡಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಸೆಕ್ಷನ್ 69A ಮೀರಿ ಸೆಕ್ಷನ್ 79(3)(b) ಅಡಿ ಮಾಹಿತಿ ನಿರ್ಬಂಧಿಸಲು ನಿರ್ದೇಶಿಸಿದೆ ಎಂದು ಎಕ್ಸ್ ಆರೋಪಿಸಿತ್ತು. ಅಲ್ಲದೇ, ನಿರ್ಬಂಧ ಆದೇಶ ಮಾಡಲು ಸಿದ್ಧ ಮಾದರಿಯನ್ನೂ ಮೈಟಿಯು ನೀಡಿದೆ. ಇದು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಎಂದು ಎಕ್ಸ್ ಆಕ್ಷೇಪಿಸಿತ್ತು.
ಎಕ್ಸ್ ಕಂಪನಿಯು ಕರ್ನಾಟಕ ಹೈಕೋರ್ಟ್ ತೀರ್ಪು ಬಾಂಬೆ ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ಬಾಂಬೆ ಹೈಕೋರ್ಟ್ ಈ ಹಿಂದೆ ಕೇಂದ್ರ ಸರ್ಕಾರ ಸ್ಥಾಪಿಸಿದ್ದ ‘ಫ್ಯಾಕ್ಟ್ ಚೆಕ್ ಯೂನಿಟ್’ ಅನ್ನು ರದ್ದುಗೊಳಿಸಿತ್ತು.
ವಿದೇಶಿ ಕಂಪನಿಯೊಂದು ಭಾರತದ ಸಂವಿಧಾನದ ಆರ್ಟಿಕಲ್ 19(1)(a) ಅಡಿ ವಾಕ್ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ಅಭಿಪ್ರಾಯವನ್ನು ಎಕ್ಸ್ ಒಪ್ಪಿಕೊಂಡಿಲ್ಲ.
X is deeply concerned by the recent order from the Karnataka court in India, which will allow millions of police officers to issue arbitrary takedown orders through a secretive online portal called the Sahyog. This new regime has no basis in the law, circumvents Section 69A of…
— Global Government Affairs (@GlobalAffairs) September 29, 2025
ಹೈಕೋರ್ಟ್ ಸಂವಿಧಾನದ 19 ನೇ ವಿಧಿಯಡಿ ವಿದೇಶಿ ಕಂಪನಿಗಳು ಮೂಲಭೂತ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಲು ಸಾಧ್ಯವಿಲ್ಲ ಎಂದಿದೆ.
ಆ ರೀತಿಯ ಹಕ್ಕುಗಳು ಭಾರತದ ನಾಗರಿಕರಿಗೆ ಮಾತ್ರ ಮೀಸಲಾಗಿದ್ದುಎಕ್ಸ್ ಕಾರ್ಪ್ ರೀತಿಯ ಮಧ್ಯಸ್ಥ ಸಂಸ್ಥೆಗಳು ದೇಶದಲ್ಲಿ ಕಾರ್ಯನಿರ್ವಹಿಸಲು ಬಯಸಿದರೆ ಕಾನೂನು ಪಾಲಿಸಬೇಕು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತೀರ್ಪು ನೀಡಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಸೆಕ್ಷನ್ 79(3)(ಬಿ) ಅಡಿಯಲ್ಲಿ ಮಾಹಿತಿ ನಿರ್ಬಂಧಿಸುವ ಆದೇಶಗಳನ್ನು ಹೊರಡಿಸಲು ಸಹಯೋಗ್ ಪೋರ್ಟಲ್ ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಐಟಿ ಕಾಯ್ದೆಯ ಸೆಕ್ಷನ್ 69ಎ ಮತ್ತು ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಕಡ್ಡಾಯಗೊಳಿಸಲಾದ ಮಾರ್ಗಸೂಚಿ ಪಾಲಿಸಲು ಅಡ್ಡಿಯಾಗುತ್ತದೆ ಎಂದು ವಾದಿಸಿ ಎಕ್ಸ್ ಕಾರ್ಪ್ ನ್ಯಾಯಾಲಯದ ಮೆಟ್ಟಿಲೇರಿತ್ತು.
ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಪ್ರಕಟವಾದ ಟ್ವೀಟ್‌ಗಳನ್ನು ತೆಗೆಯುವಂತೆ ರೈಲ್ವೆ ಸಚಿವಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿತ್ತು.
ಹೀಗಾಗಿ, ಸೆಕ್ಷನ್ 79(3)(b) ಮಾಹಿತಿ ನಿರ್ಬಂಧ ಆದೇಶ ಮಾಡಲು ಸರ್ಕಾರಕ್ಕೆ ಅವಕಾಶವಿಲ್ಲ. ಇದು ವಿಶೇಷವಾಗಿ ಸೆಕ್ಷನ್ 69Aರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಆದೇಶಿಸಬೇಕು ಎಂದು ಎಕ್ಸ್ ಕೋರಿತ್ತು.
ತೀರ್ಪಿನ ಮೂಲಕ ನ್ಯಾಯಾಲಯ ನಿಸ್ಸಂದಿಗ್ಧವಾಗಿ 19ನೇ ವಿಧಿಯಡಿ ಒದಗಿಸಲಾದ ಹಕ್ಕುಗಳನ್ನು ವಿದೇಶಿಯರಿಗೆ ನೀಡಲಾಗದು ಎಂದಿದೆ. 19ನೇ ವಿಧಿಯ ಮೂಲಕ ದೇಶದ ಕಾನೂನನ್ನು ಪ್ರಶ್ನಿಸಲು ಯತ್ನಿಸುವುದನ್ನು ಸಹಿಸಲಾಗದು ಎಂದಿರುವ ತೀರ್ಪು, ಸಂವಿಧಾನದ 19(1)(ಎ) ವಿಧಿಯಡಿ ವಾಕ್ ಸ್ವಾತಂತ್ರ್ಯ ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂಬುದಾಗಿ ಪುನರುಚ್ಚರಿಸಿದೆ.
ಅಲ್ಲದೆ ಯಾವುದೇ ಮಾಧ್ಯಮ ಕಾನೂನು ವ್ಯಾಪ್ತಿಯಿಂದ ಹೊರಗೆ ಇರುವಂತಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳ ನಿಯಂತ್ರಣ ಅಗತ್ಯ: ಕೇಂದ್ರದ ‘ಸಹಯೋಗ್ ಪೋರ್ಟಲ್’ ಪ್ರಶ್ನಿಸಿದ್ದ ಎಕ್ಸ್ ಕಾರ್ಪ್ ಅರ್ಜಿ ವಜಾ


