ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರ ಸಿ.ಡಿ.ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿವೆ. ಹೀಗಾಗಿ ಹಲವರು ಕೋರ್ಟ್‌ನಿಂದ ತಡೆಯಾಜ್ಞೆಯನ್ನು ತಂದಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿ.ಡಿ. ಮೊದಲು ಬಿಡುಗಡೆಯಾಗಿತ್ತು. ನಂತರದಲ್ಲಿ ಹಲವು ನಾಯಕರು ಕೋರ್ಟ್ ಮೆಟ್ಟಿಲೇರಿ ಎಚ್ಚರಿಕೆ ವಹಿಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡರದ್ದು ಎನ್ನಲಾದ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. “ಆತ್ಮೀಯ ಹಿತೈಷಿಗಳೇ, ನನ್ನ ಮಾರ್ಫ್ ಮಾಡಿದ (ನಕಲಿ) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೊದಲ್ಲಿ ಇರುವುದು ನಾನಲ್ಲ, ನನ್ನ ವಿರೋಧಿಗಳು ನನ್ನ ನಿಷ್ಪಕ್ಷಪಾತ ವ್ಯಕ್ತಿತ್ವವನ್ನು ಹಾಳುಮಾಡಲು ಇದನ್ನು ನಿರ್ಮಿಸಿದ್ದಾರೆ ಎಂದು ತಿಳಿಸಲು ಇಚ್ಚಿಸುತ್ತೇನೆ” ಎಂದು ಸದಾನಂದಗೌಡರು ಹೇಳಿದ್ದರು. ಈಗ ಯತ್ನಾಳ್ ಅವರ ಭಾವಚಿತ್ರವನ್ನು ಹೋಲುವ ಫೋಟೋವೊಂದು ವೈರಲ್ ಆಗಿದೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿ ವಿಜಯಪುರ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಡಿ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.
ಇದನ್ನೂ ಓದಿರಿ: ವಿಡಿಯೊದಲ್ಲಿ ಇರುವುದು ನಾನಲ್ಲ- ಬಿಜೆಪಿ ಸಂಸದ ಸದಾನಂದ ಗೌಡ ಸ್ಪಷ್ಟನೆ
“ಇದರಲ್ಲಿ ಯಾರ್ಯಾರು ಇದ್ದಾರೆ, ಎಲ್ಲವೂ ಗೊತ್ತಿದೆ. ದಾಖಲೆ ಸಮೇತ ನಮಗೆ ಮಾಹಿತಿ ಇದೆ. ಫೋಟೋ ವೈರಲ್ ಹಿಂದೆ ಇರುವವರಿಗೆ ತಕ್ಕ ಶಾಸ್ತಿಯಾಗುತ್ತೆ. ಭ್ರಷ್ಟಾಚಾರದ ವಿರುದ್ಧ, ಹಿಂದುತ್ವದ ಪರ ಮಾತನಾಡುತ್ತೇನೆ. ನನ್ನ ಮಾತು ಅವರಿಗೆ ಸಮಸ್ಯೆಯಾಗುತ್ತಿದೆ. ಫೋಟೋ ವೈರಲ್ ಪ್ರಕರಣದಲ್ಲಿ ಎಲ್ಲ ಪಕ್ಷದವರಿದ್ದಾರೆ ” ಎಂದು ಯತ್ನಾಳ್ ಆರೋಪಿಸಿದ್ದಾರೆ.
ಸಿ.ಡಿ. ಮಾಡುವಂತಹದ್ದು ಬಿಜೆಪಿ, ಕಾಂಗ್ರೆಸ್‌ನಲ್ಲಿ ಫ್ಯಾಕ್ಟರಿ ಇದೆ. ಎರಡೂ ಪಕ್ಷದಲ್ಲಿಯೂ ಸಿ.ಡಿ. ಮಾಡುವ ಒಬ್ಬರದು ಫ್ಯಾಕ್ಟರಿ ಇದೆ. ನನಗೆ ಅವಕಾಶ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಸಿ.ಡಿ. ಇದ್ದರೆ ಬಿಡುಗಡೆ ಆಗಬೇಕಲ್ಲ. ಕಾರ್ಯಕರ್ತರು ಕೆಲವೊಮ್ಮೆ ವಿಡಿಯೋ ಕಾಲ್ ಮಾಡ್ತಾರೆ. ವಿಡಿಯೋ ಕಾಲ್ ಮಾಡಿದಾಗ ನಾನು ರಿಸೀವ್ ಮಾಡುತ್ತೇನೆ. ಸಿ.ಡಿ. ಇದ್ದರೆ ಬಿಡುಗಡೆ ಮಾಡಲಿ ಎಂದಿದ್ದಾರೆ.
ಪೊಲೀಸರು ಫೋಟೋ ಪ್ರಕರಣವನ್ನು ತನಿಖೆ ಮಾಡುತ್ತಾರೆ. ಇಂತಹ ನೂರು ಆರೋಪ ಬಂದರೂ ಎದುರಿಸುವ ತಾಕತ್ತಿದೆ. ಕಳ್ಳರು ಇನ್ನೊಂದು ಸ್ವಲ್ಪ ದಿನದಲ್ಲಿ ಸಿಗುತ್ತಾರೆ. ಜನರ ಮುಂದೆ ಬೆತ್ತಲಾಗುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಕುರಿತು ಕಾಂಗ್ರೆಸ್ ಮುಖಂಡ ಸಲೀಂ ಹಾಗೂ ಉಗ್ರಪ್ಪ ನಡುವಿನ ಸಂಭಾಷಣೆ ವಿಚಾರಕ್ಕೆ ಸಂಬಂಧಿಸಿ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ. ಜಲಸಂಪನ್ಮೂಲ ಇಲಾಖೆ ಭ್ರಷ್ಟಾಚಾರ ಪ್ರಕರಣ ನಿಜ. ಅದು ಸತ್ಯವೇ ಇದೆ, ಆ ಕಾರಣಕ್ಕೆ ರೇಡ್ ಆಗಿದೆ. ಸಾವಿರಾರು ಕೋಟಿ ಮೌಲ್ಯದ ಆಸ್ತಿ ಸಿಕ್ಕಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ್ದೇ ರೇಡ್ ಆಗಿದೆ. ಅದರಲ್ಲಿ ಎಲ್ಲ ಪಕ್ಷದವರಿದ್ದಾರೆ, ಯಾವುದೇ ಒಂದು ಪಕ್ಷದವರಿಲ್ಲ. ಇನ್‌ಕಮ್ ಟ್ಯಾಕ್ಸ್‌ನವರು ರೇಡ್ ಮಾಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರದ ಹಣವನೆಲ್ಲ ವಸೂಲಿ ಮಾಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶದ ಮನೆಗಳು ಅರ್ಧಕ್ಕೆ ನಿಂತಿವೆ. ಬಡವರಿಗೆ ಹೋಗಿ ಅದು ಮುಟ್ಟಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಸಿಡಿ ಭಯ: ಕೋರ್ಟ್‌ನಿಂದ ತಡೆಯಾಜ್ಞೆ ತರಲಿರುವ ಶಾಸಕ ರೇಣುಕಾಚಾರ್ಯ!


