Homeಮುಖಪುಟದ್ವೀಪವಾಗಲು ನಿರಾಕರಿಸಿದ, ಚಳುವಳಿಗಳ ಸಖ ಜಿ.ಕೆ ಗೋವಿಂದ ರಾವ್

ದ್ವೀಪವಾಗಲು ನಿರಾಕರಿಸಿದ, ಚಳುವಳಿಗಳ ಸಖ ಜಿ.ಕೆ ಗೋವಿಂದ ರಾವ್

ಅಪ್ರಾಮಾಣಿಕತೆ, ಮೋಸ, ಮತಾಂಧತೆಯ ವಿರುದ್ದ ಸದಾ ಸಿಡಿದೇಳುವಂತೆ ಮಾತನಾಡುತ್ತಿದ್ದ ಜಿಕೆಜಿಯವರ ವರ್ತನೆ ಒಣ ಎಗರಾಟದಂತಿರಲಿಲ್ಲ. ಅವರ ಮನದಾಳದ ದಿಗ್ಬ್ರಮೆ ಮತ್ತು ಆತಂಕವು ನಮಗೆ ಅರ್ಥವಾಗುತ್ತಿತ್ತು.

- Advertisement -
- Advertisement -

(ಇದು ಹೊಸ ಬರಹದಲ್ಲಿದೆ. ಮಹಾಪ್ರಾಣಗಳನ್ನು ನಿಯಮಿತವಾಗಿ ಬಳಸಲಾಗಿದೆ)

ತಮ್ಮ 84ನೆ ವಯಸ್ಸಿನಲ್ಲಿ ಅನಾರೋಗ್ಯದ ಕಾರಣ ನಿದನರಾದ ಜಿಕೆಜಿ ಕುರಿತು ಮಾತನಾಡುವಾಗ ತಟ್ಟನೆ ನೆನಪಾಗುವುದು ಈ ಪ್ರಸಂಗ. ಎಂಬತ್ತರ ದಶಕದ ತಮ್ಮ ಟೀಕೆ ಟಿಪ್ಪಣಿ ಅಂಕಣವೊಂದರಲ್ಲಿ ಲಂಕೇಶ್ ‘ಕೆಲವರು ಸೂಟು ಬೂಟು ಹಾಕಿಕೊಂಡು ಪ್ರತಿಭಟಿಸುತ್ತಿರುವುದನ್ನು ಟೀಕಿಸಿದ್ದಾರೆ. ಆದರೆ ಆ ಪ್ರತಿಭಟನಾಕಾರರು ವ್ಯವಸ್ಥೆಯ ಅನ್ಯಾಯದ ವಿರುದ್ದ ಪ್ರತಿಬಟಿಸುತ್ತಿರುವುದು ಮುಖ್ಯವಾಗಬೇಕೆ ಹೊರತು ಅವರ ತೊಟ್ಟ ವೇಷವಲ್ಲ’ ಎನ್ನುವ ಅರ್ಥದ ಮಾತುಗಳಲ್ಲಿ ಬರೆದಿದ್ದರು. ಅಲ್ಲಿ ಸೂಟುಬೂಟು ಹಾಕಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಪ್ರಾದ್ಯಾಪಕರಾಗಿದ್ದ ಜಿ.ಕೆ.ಗೋವಿಂದರಾವ್. ಬಹುಶಃ ‘ಬುಕ್ತ’ದ (ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಸಂಘಟನೆ) ಸಂಚಾಲಕರಾಗಿದ್ದೆಂದು ಕಾಣುತ್ತದೆ. ಆದರೆ ಜಿಕೆಜಿಯವರ ಸಂವೇದನೆ ಮತ್ತು ಕಾಳಜಿ ಪ್ರಶ್ನಾತೀತವಾಗಿತ್ತು ಎನ್ನುವುದಕ್ಕೆ ಮೇಲಿನ ಒಂದು ಘಟನೆ ಉದಾಹರಣೆ. ಇಂತಹ ನೂರಾರು ಪ್ರಸಂಗಗಳಿವೆ.

ಬೆಂಗಳೂರಿನಲ್ಲಿ ಮೇಲ್ಜಾತಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದ ಜಿಕೆಜಿ ಒಬ್ಬ ನಗರ ಶಿಶುವಿನಂತಿದ್ದರು. ಅವರ ನಗರ ಪ್ರಜ್ಞೆ ಪ್ರಖರವಾಗಿತ್ತು. ವಿಜ್ಞಾನದಲ್ಲಿ ಪದವಿ ಪಡೆದು ನಂತರ ಭಾಷೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿ ಉದ್ಯೋಗದ ನಿಮಿತ್ತ ಕೊಂಕಣ ಸುತ್ತಿ ಕೊನೆಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಅದ್ಯಾಪಕರಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಇಂಗ್ಲೀಷ್ ಪಾಠ ಮಾಡಿ ನಿವೃತ್ತರಾದರು. ಇವರ ಗುರುಗಳಾದ ಬಿ.ಸಿ.ರಾಮಚಂದ್ರ ಶರ್ಮರ ಕುರಿತೂ ಸಹ ಲಂಕೇಶ್ ‘ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಕವಿ’ ಎಂದು ತಮಾಶೆ ಮಾಡುತ್ತಿದ್ದರು. ಆದರೆ ತಮ್ಮ ಗುರುಗಳಂತೆ ಕವಿತೆಯನ್ನು ಬರೆಯುವ ಗೋಜಿಗೆ ಹೋಗದ ಜಿಕೆಜಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ನಾಟಕಗಳಲ್ಲಿ, ಸಿನಿಮಾಗಳಲ್ಲಿ ಅಭಿನಯಿಸಿದ್ದು, ಚರ್ಚಿಸಿದ್ದು, ಸ್ಪಂದಿಸಿದ್ದು ಮತ್ತು ಅದನ್ನು ಇಂಗ್ಲೀಷ್ ಸಾಹಿತ್ಯದ ಕಡು ವ್ಯಾಮೋಹದಿಂದ ಗಳಿಸಿದ ಜ್ಞಾನವನ್ನು ಹವ್ಯಾಸಿ ರಂಗಭೂಮಿಗೆ ಧಾರೆ ಎರೆದಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದಂತಿದೆ. ರವೀಂದ್ರ ಕಲಾಕ್ಷೇತ್ರದ ಕಟ್ಟೆ, ಸಂಸ ಬಯಲು ರಂಗಮಂದಿರದ ಮೆಟ್ಟಿಲುಗಳು, ಜೆ.ಸಿ.ರಸ್ತೆಯ ಲಾವಣ್ಯ ಬಾರ್ ಮತ್ತೆ ಮತ್ತೆ ಪ್ರತಿಮಾ ರೂಪದಲ್ಲಿ ಸುಳಿಯುತ್ತವೆ. ಜೊತೆಗೆ ಜಿಕೆಜಿ ಸಹ.

ಅಪ್ರಾಮಾಣಿಕತೆ, ಮೋಸ, ಮತಾಂಧತೆಯ ವಿರುದ್ದ ಸದಾ ಸಿಡಿದೇಳುವಂತೆ ಮಾತನಾಡುತ್ತಿದ್ದ ಜಿಕೆಜಿಯವರ ವರ್ತನೆ ಒಣ ಎಗರಾಟದಂತಿರಲಿಲ್ಲ. ಅವರ ಮನದಾಳದ ದಿಗ್ಬ್ರಮೆ ಮತ್ತು ಆತಂಕವು ನಮಗೆ ಅರ್ಥವಾಗುತ್ತಿತ್ತು. ಎಲ್ಲಾ ಬಗೆಯ ಪ್ರಗತಿಪರ ಚಳುವಳಿಗಳ ಸಖನಂತಿದ್ದರು. ವ್ಯವಸ್ಥೆಯ ಹಿಂಸೆ ಮತ್ತು ಪ್ರಭುತ್ವದ ಕ್ರೌರ್ಯದ ಆ ಎಲ್ಲಾ ಮಜಲುಗಳನ್ನು ದಿಟ್ಟತನದಿಂದ ಮುಖಾಮುಖಿಯಾಗುವ ದಾರಿಗಳು ಕಾಣದೆ ಅಸಹಾಯಕರಾಗಿ ವ್ಯಗ್ರರಾಗುತ್ತಿದ್ದರು. ಹದಿಹರೆಯದವರು ಬಂಡಾಯಕ್ಕೆ ಕರೆ ಕೊಟ್ಟಂತೆ ಸ್ವೀಕರಿಸುತ್ತಿದ್ದರು. ಇದು ನನ್ನ ತಲೆಮಾರಿಗೂ ನಿಜ. ನಂತರದ ತಲೆಮಾರಿನ ಸಂದರ್ಭಕ್ಕೂ ನಿಜ. ಆದರೆ ಒಂದು ಸಹನೀಯ, ಸಹಿಷ್ಣುತೆಯ ವ್ಯವಸ್ಥೆಯನ್ನು ರೂಪಿಸಲು ಅಗತ್ಯವಾದ ಕಾರ್ಯ ಯೋಜನೆಗಳ ಕುರಿತು, ತಂತ್ರಗಾರಿಕೆ ಕುರಿತು ಜಿಕೆಜಿ ತಲೆಕಡೆಸಿಕೊಂಡಿರಲಿಲ್ಲ ಮತ್ತು ಅವರಿಗೆ ಅದು ಆ ಕ್ಷಣದ ಅನಿವಾರ್ಯತೆ ಎಂದೂ ಅನಿಸಿದಂತಿರಲಿಲ್ಲ. ಫ್ಯಾಸಿಸಂ ಹೇಗೆ ಆಳವಾಗಿ ಬೇರು ಬಿಡುತ್ತಾ ಎಲ್ಲವನ್ನೂ ನುಂಗಿ ಬಿಡುತ್ತದೆ ಎನ್ನುವುದರ ಕುರಿತು ಗ್ರಾಮ್ಷಿಯ ಅಭಿಮಾನಿಯಾಗಿದ್ದ ಜಿಕೆಜಿಯವರಿಗೆ ಸ್ಪಷ್ಟತೆ ಇದ್ದಂತಿರಲಿಲ್ಲ. ಆದರೆ ಇಡೀ ವ್ಯವಸ್ಥೆ ಹದಗೆಟ್ಟ ಸಂದರ್ಭದಲ್ಲಿ ತಠಸ್ಥರಾಗಿರುವುದು ಹೇಡಿತನದ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದ ಜಿಕೆಜಿ ಅದನ್ನು ಮೀರಲು ಹಠವಾದಿಯಂತೆ ಸ್ಪೋಟಿಸುತ್ತಿದ್ದರು. ಇಲ್ಲಿ ಪ್ರಾಮಾಣಿಕತೆ ಮತ್ತು ದಿಟ್ಟತನದಿಂದ ಮಾತನಾಡುವ ಗೈರತ್ತು ಎರಡೂ ಜಿಕೆಜಿಯವರ ಶಕ್ತಿಯಾಗಿತ್ತು. ಇಂದು ಇಡೀ ಶಿಕ್ಷಣ ವ್ಯವಸ್ಥೆಯನ್ನು ದಾರಿ ತಪ್ಪಿಸಿ ಮತ್ತೆ ಅಸಮಾನ, ಮತಾಂಧ, ಅವೈಜ್ಞಾನಿಕ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಮುಂದಾಗಿರುವ ಬಿಜೆಪಿ ಪಕ್ಷದ ಕುಟಿಲತೆಯನ್ನು ಕಂಡೂ ಸಹ ಕಾಣದಂತೆ ಜಾಣ ಕುರುಡು, ಜಾಣ ಕಿವುಡರಂತೆ, ಹೊಣಗೇಡಿಗಳಂತೆ ವರ್ತಿಸುತ್ತಿರುವ ಇಂದಿನ ಬಹುಪಾಲು ಶಿಕ್ಷಕರನ್ನು ಕಂಡಾಗ ಆ ಸೂಟು ಬೂಟು ಧರಿಸಿ ಪ್ರತಿಭಟಿಸುತ್ತಿದ್ದ ಜಿಕೆಜಿ ಮತ್ತೆ ಮತ್ತೆ ಕಾಡುತ್ತಾರೆ. ಈಗಿನ ಬೋಧಕರ ಬೂಟಾಟಿಕೆಯನ್ನು ನೋಡುವಾಗ ಜಿಕೆಜಿಯವರ ನಿಷ್ಠುರತೆ ಮತು ಕಡು ಪ್ರಾಮಾಣಿಕತೆ ಬಿಡದೇ ಕಾಡುತ್ತದೆ.

ಜಿಕೆಜಿಯವರ ವೈಚಾರಿಕ ತಿಳುವಳಿಕೆ ಕೆಲ ಸಂದರ್ಭಗಳಲ್ಲಿ ಅವಸರದಲ್ಲಿರುವಂತೆ, ಇಲ್ಲಿನ ಸಂಕೀರ್ಣ ಸಮಾಜೋ-ರಾಜಕೀಯದ ವಾಸ್ತವತೆಯ ಅರಿವಿಲ್ಲದೆ ಅಬಾರ್ಷನ್ ಮಾಡಿಕೊಳ್ಳುವಂತೆ ಕಂಡುಬಂದರೂ ಸಹ ಆ ಅಪ್ರಜ್ಞಾಪೂರ್ವಕ ಮಿತಿಗಳಿಂದ ಹೋರಾಟಕ್ಕೆ ಹಾನಿ ಆಗಲಿಲ್ಲ. ಏಕೆಂದರೆ ಮನುಷ್ಯರು ಅನುಕೂಲವಂತರಾಗಿ, ಸಮಾನರಾಗಿ ಬದುಕಲು ಪ್ರಜಾಪ್ರಭುತ್ವದ ಮೌಲ್ಯಗಳು ಜೀವಂತವಾಗಿರಬೇಕು ಎಂದು ಜಿಕೆಜಿ ಗಾಢವಾಗಿ ನಂಬಿದ್ದರು ಮತ್ತು ಈ ಬದ್ದತೆ ಸೆಕ್ಯುರಿಸಂನ ಕುರಿತಾದ ಅವರ ಸರಳೀಕೃತ ಗ್ರಹಿಕೆಗಳನ್ನು ಮೀರಿಕೊಳ್ಳಲು ನೆರವಾಗಿತ್ತು. ತಾನು ಪ್ರಗತಿಪರ ಹೋರಾಟಗಳ ಪ್ರತಿನಿಧಿ, ಉತ್ತಮ ವ್ಯವಸ್ಥೆಗಾಗಿ ಹೋರಾಡುತ್ತಿರುವ ಸೈನಿಕ ಎಂದೇ ಗ್ರಾಮ್ಷಿಯ ಅರಿವಿನಲ್ಲಿ ತಮ್ಮ ಸಾಮಾಜಿಕ ಚಿಂತನೆಗಳನ್ನು ರೂಪಿಸಿಕೊಂಡಿದ್ದರು ಮತ್ತು ಇದು ಬಹು ಮುಖ್ಯವಾದ ಗುಣ. ಮನುಷ್ಯ ಸೂಕ್ಷ್ಮತೆ ಮತ್ತು ಮಾನವೀಯತೆಯ ಸಂವೇದನೆ ಕಳೆದುಕೊಂಡರೆ ಆತ/ಆಕೆ ಪಶುಸದೃಶ್ಯ ಸಮಾಜಕ್ಕೆ ಕಾರಣರಾಗುತ್ತಾರೆ ಎಂದು ಜಿಕೆಜಿಗೆ ಗೊತ್ತಿತ್ತು. ಇದು ಅವರ ಅಪಾರವಾದ ಓದಿನಿಂದ, ಶೇಕ್ಸಪಿಯರ್‌ನ ನಾಟಕಗಳ ಅಸಂಗತ, ಅನಿಶ್ಚತೆ ಮತ್ತು ಯಾತನೆಗಳಿಂದ ಪಡೆದುಕೊಂಡ ಅನುಭವವಾಗಿತ್ತು. ಹೀಗಾಗಿಯೇ ಜಿಕೆಜಿಗೆ ಎಪ್ಪತ್ತಾಗಿದ್ದು, ಎಂಬತ್ತಾಗಿದ್ದು ನಮಗೆ ಅನುಭವಕ್ಕೆ ಬರಲೇ ಇಲ್ಲ. ಅವರು ನಮ್ಮ ಜೊತೆಗೆ ಬರುತ್ತಾರೆ, ಬಂಡಾಯವೇಳುತ್ತಾರೆ ಎಂದೇ ಅವರೊಂದಿಗೆ ಸಂವಾದ ನಡೆಸುತ್ತಿದ್ದೆವು.

6, ಡಿಸೆಂಬರ್ 1992ರಂದು ಸಂಘ ಪರಿವಾರದ ಮತಾಂಧರು ಬಾಬರಿ ಮಸೀದಿಯನ್ನು ದ್ವಂಸಗೊಳಿಸಿದಾಗ ಬೆಂಗಳೂರಿನಲ್ಲಿಯೂ ಸಹ ಆ ಭಯೋತ್ಪಾದನೆಯನ್ನು ವಿರೋದಿಸಿ ನಿರಂತರವಾದ ಪ್ರತಿಭಟನೆಗಳು ನಡೆದವು. ಆಗ ವಿಧಾನಸೌದದ ಮುಂದಿನ ಕಬ್ಬನ್ ಪಾರ್ಕನಲ್ಲಿ ಎಡ ಮತ್ತು ದಲಿತ ಸಂಘಟನೆಗಳ ಸಹಯೋಗದಲ್ಲಿ 5 ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಘಟಕರೊಂದಿಗೆ ಸಮನ್ವಯ ಸಾಧಿಸಿ ಅವರನ್ನು ಕಬ್ಬನ್‌ಪಾರ್ಕ ಪ್ರತಿಭಟನೆಗೆ ಕರೆದುತರುವ ಜವಬ್ದಾರಿಯನ್ನು ನನಗೆ ವಹಿಸಿದ್ದರು. ಆಗ ನಮ್ಮ ಜೊತೆಗೆ ಐದು ದಿನಗಳ ಕಾಲ ಸತತವಾಗಿ ಪ್ರಭಟನೆಗಳಲ್ಲಿ ಭಾಗವಹಿಸಿದ ಜಿಕೆಜಿ ಒಬ್ಬ ನಿಷ್ಠಾವಂತ ಕಾರ್ಯಕರ್ತನಂತೆ ದುಡಿದರು.

ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ, ಬಾಬಾ ಬುಡನ್‌ಗರಿ ಹೋರಾಟದಲ್ಲಿ ಸಹ ಬೀದಿಗಿಳಿಯುವುದು ತನ್ನ ಜೀವನ್ಮರಣದ ಪ್ರಶ್ನೆ ಎಂಬಂತೆ ಕೆಚ್ಚಿನಲ್ಲಿ ಭಾಗವಹಿಸಿದ್ದರು.
ಜಿಕೆಜಿಯವರ ವಿಚಾರವಾದವು ಪ್ರಖರವಾಗಿತ್ತು ಆದರ ಬೌದ್ದಿಕತೆಯನ್ನು ರಾಚನಿಕವಾಗಿ ಗ್ರಹಿಸುವುದು ಹೇಗೆ, ನಿಜ-ಬ್ರಮೆಗಳ ಮೇಲಾಟದಲ್ಲಿ ಮುಳುಗಿರುವ ಜನ ಸಾಮಾನ್ಯರೊಂದಿಗೆ ವೈಚಾರಿಕತೆ ರೂಪಿಸಲು ಅವಶ್ಯಕವಾದ ಸಹಜ ವ್ಯಾಸಂಗಕ್ರಮಗಳೇನು (ಪೆಡಗಾಜಿ) ಎನ್ನುವುದರ ಕುರಿತು ಜಿಕೆಜಿ ತಲೆ ಕೆಡೆಸಿಕೊಂಡಿರಲಿಲ್ಲ. ಇದರ ಕುರಿತಾಗಿ ನನಗೂ ಅವರಿಗೂ ಅನೇಕ ಬಾರಿ ತೀವ್ರವಾದ ವ್ಯಾಗ್ಯುದ್ಧಗಳಾಗಿದ್ದವು. ‘ಏಯ್ ನೀನು ದೂರದೃಷ್ಟಿ ಎನ್ನುವ ನೆಪದಲ್ಲಿ ಈ ಕ್ಷಣದ ತುರ್ತನ್ನು ಮರೆಮಾಚುತ್ತೀಯ?’ ಎಂದು ಟೀಕಿಸುತ್ತಿದ್ದರು. ನಾನು ‘ನೀವು ಈ ಕ್ಷಣದ ಪರಿಹಾರದ ನೆಪದಲ್ಲಿ ದೂರಗಾಮಿ ಕಾರ್ಯ ಯೋಜನೆಗಳ ರಚನಾತ್ಮಕತೆಯನ್ನು ನಿರ್ಲಕ್ಷಿಸುತ್ತಿದ್ದೀರಿ’ ಎಂದು ಪ್ರತಿಕ್ರಿಯಿಸುತ್ತಿದ್ದೆ. ಆಗ ಕೋಪದಿಂದ ವ್ಯಗ್ರರಾಗುತ್ತಿದ್ದರು. ಆಗ ನಾನು ‘ಸರ್ ಬಿಡಿ, ಹಿಬ್ಸೆನ್‌ನ ಡಾಲ್ ಹೌಸ್ ನಾಟಕವನ್ನು ಪ್ರಸ್ತುತ ಸಂದರ್ಭಕ್ಕೆ ಅಳವಡಿಸಿಕೊಳ್ಳುವುದಕ್ಕೆ ನೀವು ಕಾರ್ಯಾಗಾರ ನಡೆಸಿಕೊಡಬೇಕು’ ಎಂದ ತಕ್ಷಣ ಮತ್ತೆ ಹುರುಪುಗೊಂಡು ನಡಿ ಮತ್ತೆ ಎಂದು ತಯಾರಾಗುತ್ತಿದ್ದರು. ಇಂಗ್ಲೀಷ್ ಸಾಹಿತ್ಯವನ್ನು ಆಳವಾಗಿ ಓದಿಕೊಂಡಿದ್ದ, ಶೇಕ್ಸಪಿಯರ್ ನಾಟಕಗಳ ಕುರಿತು ಅಥೆಂಟಕ್ ಆಗಿ ಮಾತನಾಡಬಲ್ಲ ಚಿಂತಕ ಜಿಕೆಜಿಯವರ ಕಾಲುಗಳು ಸದಾ ನೆಲದ ಮೇಲಿದ್ದವು. ತಲೆ ಭುಜದ ಮೇಲಿತ್ತು. ತಮ್ಮ ಪಾಂಡಿತ್ಯದ ಕುರಿತು ಎಂದಿಗೂ ಅಹಂ ಪ್ರದರ್ಶಿಸಲಿಲ್ಲ. ಅವರೆಂದಿಗೂ ದ್ವೀಪವಾಗಲಿಲ್ಲ.

ದುಷ್ಟ ಶಕ್ತಿಗಳ ಕೈಲಿ, ಮತಾಂದರ ಹಿಡಿತಕ್ಕೆ ದೇಶ ಸಿಲುಕಬಾರದು ಎಂದು ಪ್ರಾಮಾಣಿಕವಾಗಿ ಹಂಬಲಿಸುತ್ತಿದ್ದ ಜಿಕೆಜಿ ತಮ್ಮ ಸಮಕಾಲೀನ ಅನೇಕ ಸಾಹಿತಿ, ವಿಚಾರವಾದಿಗಳಂತೆ ರಾಜಕೀಯ, ಕ್ರಾಂತಿ, ಸಾಮಾಜಿಕ ನ್ಯಾಯದ ಕುರಿತು ಮುಗ್ಧರಾಗಿದ್ದರು. ಕೆಲವೊಮ್ಮೆ ಕಪ್ಪು ಬಿಳುಪು ದೃಷ್ಟಿಕೋನದಲ್ಲಿ ಚಿಂತಿಸುತ್ತಿದ್ದರು. ಆದರೆ ನೆರೂಡ ‘ನನ್ನ ಪುಸ್ತಕಗಳಿಗೆ ಬೆಂಕಿ ಬಿದ್ದರೆ ನಾನು ತಲೆಕಡೆಸಿಕೊಳ್ಳುವುದಿಲ್ಲ, ಅದರಿಂದ ನನಗೇನು ಉಪಯೋಗ? ಆದರೆ ಒಬ್ಬ ಹುಡುಗಿಯನ್ನು ರಕ್ಷಿಸಬಯಸುವೆ.. ನನ್ನ ಯಾವುದೇ ಪುಸ್ತಕಕ್ಕಿಂತ ಹೆಚ್ಚು ಸಂತೋಷ ಆ ಹುಡುಗಿಯಿಂದ ದೊರೆಯಬಲ್ಲದು..’ ಎಂದು ಹೇಳಿದ ಮಾತುಗಳು ಜಿಕೆಜಿಯವರಿಗೂ ಅನ್ವಯಿಸುತ್ತವೆ. ಸಾಹಿತ್ಯದ ಮಿಂಚು, ಬಡಿವಾರ, ಬಿರುದುಗಳಿಗಿಂತ ಮನುಷ್ಯರ ಘನತೆ ಮತ್ತು ನ್ಯಾಯ ಮುಖ್ಯ ಎಂದು ಖಚಿತವಾಗಿ ನಂಬಿದ್ದರು. ಹಾಗೆಯೇ ಬದುಕಿದ್ದರು. ಪ್ರಶಸ್ತಿಗಳನ್ನು, ಕೀರ್ತಿ ಶನಿಯನ್ನು ದೂರ ನೂಕಿದ್ದರು. ಅನ್ಯಾಯದ, ದೌರ್ಜನ್ಯದ ವಿರುದ್ದ ಪ್ರತಿಬಟಿಸಲು ನೂರಾರು ಕಿ.ಮಿ. ಪ್ರಯಾಣಿಸುತ್ತಿದ್ದರು. ಸಾಮಾಜಿಕ ಕಾರ್ಯಕರ್ತ ವಿಠಲ್ ಮಲೆಕುಡಿಯನನ್ನು ನಕ್ಸಲ್ ಎಂದು ಸುಳ್ಳು ಆರೋಪದ ಅಡಿಯಲ್ಲಿ ಅಕ್ರಮವಾಗಿ ಬಂದಿಸಿದಾಗ ಮಂಗಳೂರಿಗೆ ಭೇಟಿ ಕೊಟ್ಟು ಆ ಪ್ರಭುತ್ವದ ಕ್ರೌರ್ಯದ ವಿರುದ್ದ ಪ್ರತಿಬಟಿಸಿದರು. ವಿಠಲನನ್ನು ಜೈಲಿನಲ್ಲಿ ಬೇಟಿಯಾಗಿ ಸಂತೈಸಿದರು. ಆತನ ಬಿಡಗಡೆಗಾಗಿ ರಚಿಸಿದ ವೇದಿಕೆಗೆ ಅದ್ಯಕ್ಷರಾಗಿ ನ್ಯಾಯಕ್ಕಾಗಿ ಶ್ರಮಿಸಿದರು. ಇಂತಹ ನೂರಾರು ಉದಾಹರಣೆಗಳಿವೆ.

ಇಂದು ಜಿಕೆಜಿ ನಮ್ಮೊಡನಿಲ್ಲ. ಆದರೆ ಅವರು ರೂಪಿಸಿದ ಕಟ್ಟಿ ಬೆಳೆಸಿದ ಸೆಕ್ಯುಲರಿಸಂನ ಮನಸ್ಸು, ಮಾನವೀಯತೆಯ ಹಂಬಲ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಪರವಾದ ಹೋರಾಟ ಸದಾ ಕಾಲ ನಮ್ಮನ್ನು ಪೊರೆಯುತ್ತವೆ. ದೌರ್ಜನ್ಯದ ವಿರುದ್ಧ ಪ್ರತಿಭಟಿಸುವಾಗ ಸಜ್ಜನಿಕೆಯ ಹೆಸರಿನಲ್ಲಿ ಸೋಗಲಾಡಿತನದ ಪ್ರದರ್ಶನ ಕ್ರೌರ್ಯವೆನಿಸುತ್ತದೆ ಎನ್ನುವ ಮೂಲ ಪಾಠವನ್ನು, ಆಕ್ರಂದನ, ನೋವನ್ನು ಸೂಚಿಸುವ ಓಲಗದ ಸದ್ದನ್ನು ಎಂದಿಗೂ ನಿರ್ಲಕ್ಷಿಸಬೇಡ ಎನ್ನುವ ಮಾನವೀಯತೆಯನ್ನು ಜಿಕೆಜಿಯಿಂದ ಕಲಿತಿದ್ದೇವೆ. ಅವರಿಗೆ ನಮನಗಳು

 * ಬಿ. ಶ್ರೀಪಾದ ಭಟ್


ಇದನ್ನೂ ಓದಿ: ಹಿರಿಯ ರಂಗಕರ್ಮಿ, ಚಿಂತಕ ಪ್ರೊ.ಜಿ.ಕೆ ಗೋವಿಂದ ರಾವ್ (84) ನಿಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...