ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ದುರ್ಗಾದೇವಿಯ ವಿಗ್ರಹವನ್ನು ವಿಸರ್ಜಿಸಲು ತೆರಳುತ್ತಿದ್ದ ಭಕ್ತರ ಮೇಲೆ ವೇಗವಾಗಿ ಬಂದ ಕಾರು ಹರಿದು ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪಾತಲಗಾಂವ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಳೆ ಮುರಿತದಿಂದ ಗಂಭೀರವಾಗಿರುವವರನ್ನು ಎಕ್ಸ್‌ರೇಗಾಗಿ ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಬ್ಲಾಕ್ ಮೆಡಿಕಲ್ ಆಫೀಸರ್ ಜೇಮ್ಸ್ ಮಿಂಜ್ ಮಾಹಿತಿ ನೀಡಿದ್ದಾರೆ.

“ಜನರ ಸಾವಿಗೆ ಕಾರಣರಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 21 ವರ್ಷದ ಬಬ್ಲು ವಿಶ್ವಕರ್ಮ ಮತ್ತು  26 ವರ್ಷದ ಶಿಶುಪಾಲ್ ಸಾಹು ಆರೋಪಿಗಳು, ಇಬ್ಬರೂ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ನಿವಾಸಿಗಳಾಗಿದ್ದು, ಛತ್ತೀಸ್‌ಗಢದ ಮೂಲಕ ಹಾದು ಹೋಗುತ್ತಿದ್ದರು” ಎಂದು ಜಶ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಕರಾವಳಿ: ಯುವಜನರ ಕೈಗೆ ಶಸ್ತ್ರ ನೀಡಿದ ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗದಳ

ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸಂತಾಪ ಸೂಚಿಸಿದ್ದಾರೆ. “ಜಶ್‌ಪುರ ಘಟನೆ ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದ ಪೊಲೀಸರ ವಿರುದ್ಧವೂ ಕ್ರಮ ಕೈಗೊಂಡು ವಿಚಾರಣೆಗೆ ಆದೇಶಿಸಲಾಗಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗುವುದು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

ಘಟನೆ ಬಳಿಕ ಕೋಪಗೊಂಡ ಸ್ಥಳೀಯರು ವಾಹನವನ್ನು ಹಿಂಬಾಲಿಸಿದ್ದಾರೆ. ಕಾರು ರಸ್ತೆಯ ಪಕ್ಕದಲ್ಲಿ ಒಂದು ಗುಂಡಿಯಲ್ಲಿ ಕಂಡು ಬಂದಿದ್ದು, ಕಿಟಕಿ, ಬಾಗಿಲುಗಳ ಗಾಜುಗಳು ಮುರಿದಿವೆ. ಕಾರಿನಲ್ಲಿ ಗಾಂಜಾದ ಪಾಕೆಟ್‌ಗಳು ಪತ್ತೆಯಾಗಿವೆ ಎನ್ನಲಾಗಿದೆ.


ಇದನ್ನೂ ಓದಿ: ತಮಿಳುನಾಡು: ವಿದ್ಯಾರ್ಥಿಗೆ ಕಾಲಿನಿಂದ ಒದ್ದು, ಮನಬಂದಂತೆ ಥಳಿಸಿದ ಶಿಕ್ಷಕನ ಬಂಧನ

LEAVE A REPLY

Please enter your comment!
Please enter your name here