ತಮಿಳುನಾಡಿನ ಕಡಲೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಕ್ಲಾಸ್ ತಪ್ಪಿಸಿಕೊಂಡಿದ್ದಕ್ಕಾಗಿ ವಿದ್ಯಾರ್ಥಿಯೋರ್ವನಿಗೆ ಶಿಕ್ಷಕನೊಬ್ಬ ಮನಬಂದಂತೆ ಥಳಿಸಿ, ಕಾಲಿನಿಂದ ಒದ್ದು, ತಲೆ ಕೂದಲು ಹಿಡಿದ ಎಳೆದಾಡಿ ಅಮಾನವೀಯ ಶಿಕ್ಷೆ ನೀಡಿದ ಘಟನೆ ಜರುಗಿದೆ. ವಿದ್ಯಾರ್ಥಿ ನೀಡಿದ ದೂರಿನ ಆಧಾರದಲ್ಲಿ ಶಿಕ್ಷಕನ ಮೇಲೆ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಕಡಲೂರಿನ ಚಿದಂಬರಂನಲ್ಲಿನ ನಂದನಾರ್ ಸರ್ಕಾರಿ ಬಾಲಕರ ಹೈಯರ್ ಸೆಕಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಭೌತಶಾಸ್ತ್ರ ಶಿಕ್ಷಕ ಸುಬ್ರಮಣಿಯನ್ ಕ್ಲಾಸ್‌ ತಪ್ಪಿಸಿಕೊಂಡಿದ್ದಕ್ಕಾಗಿ ವಿದ್ಯಾರ್ಥಿಯೊರ್ವನನ್ನು ಮೊಣಕಾಲಿನ ಮೇಲೆ ಕುಳ್ಳಿರಿಸಿ ಮನಬಂದಂತೆ ಥಳಿಸಿದ್ದರು. ಕಾಲಿನಿಂದ ಒದ್ದಿದ್ದರು. ಈ ದೃಶ್ಯಗಳನ್ನು ಅದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ವಿಡಿಯೋ ಮಾಡಿದ್ದರು. ಆ ವಿಡಿಯೋ ವೈರಲ್ ಆದ ನಂತರ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

7 ಜನ ವಿದ್ಯಾರ್ಥಿಗಳು ಮೊದಲ ತರಗತಿಯನ್ನು ಅಟೆಂಡ್ ಮಾಡಿ ಎರಡನೇ ತರಗತಿಗೆ ತಪ್ಪಿಸಿಕೊಂಡಿದ್ದರು. ಹಾಗಾಗಿ ಅವರಿಗೆ ಶಿಕ್ಷೆ ನೀಡಲು ಮುಂದಾಗಿದ್ದರು. ಆದರೆ ಈ ದಲಿತ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಖಂಡಿಸಿದ್ದರು. ಶಿಕ್ಷಕನನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

“ಇಂತಹ ದ್ರೋಣಾಚಾರ್ಯರನ್ನು ಜೈಲಿಗೆ ಕಳುಹಿಸುವ ತಮಿಳುನಾಡು ಪೊಲೀಸರ ನಿರ್ಧಾರ ನ್ಯಾಯಯುತವಾಗಿದೆ. ಈ ಶಿಕ್ಷಕನಿಗೆ ಕಠಿಣ ಶಿಕ್ಷೆಯಾಗಬೇಕು. ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಸಂಬಂಧವು ಗುರು ಮತ್ತು ಗುಲಾಮರ ರೀತಿಯ ಸಂಬಂಧವಲ್ಲ. ವಂಚಿತ ಜಾತಿಯ ಮಕ್ಕಳು ಶಿಕ್ಷಣವನ್ನು ತೊರೆಯಲು ಇಂತಹ ಶಿಕ್ಷಕರು ಕೂಡ ಕಾರಣ” ಎಂದು ದೆಹಲಿಯ ಹಿರಿಯ ಪತ್ರಕರ್ತ ದಿಲೀಪ್ ಮಂಡಲ್ ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ರೈತ ಹೋರಾಟ: ಸಿಂಘು ಗಡಿಯಲ್ಲಿ ಅನಾಮಧೇಯ ಮೃತದೇಹ ಪತ್ತೆ

LEAVE A REPLY

Please enter your comment!
Please enter your name here