ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಆಗ್ರಹಿಸಿ ದೆಹಲಿಯ ಗಡಿಭಾಗಗಳಲ್ಲಿ ದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ಸಿಂಘು ಗಡಿಯ ಪ್ರತಿಭಟನಾ ಸ್ಥಳದ ವೇದಿಕೆ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ. ವೇದಿಕೆ ಮುಂಭಾಗದ ಬ್ಯಾರಿಕೇಡ್‌ಗೆ ಮೃತದೇಹವನ್ನು ಕಟ್ಟಲಾಗಿದೆ ಎಂದು ವರದಿಯಾಗಿದೆ.
ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯ ಸಿಂಘು ಗಡಿಯಲ್ಲಿರುವ ವೇದಿಕೆಯ ಸಮೀಪದ ತಾತ್ಕಾಲಿಕ ಗುರುದ್ವಾರದಲ್ಲಿ ಇರಿಸಲಾಗಿರುವ ಗುರು ಗ್ರಂಥ ಸಾಹಿಬ್‌ಗೆ ಮೃತ ವ್ಯಕ್ತಿ ಅಗೌರವ ತೋರಿದ್ದಾನೆ. ಹೀಗಾಗಿ ಈ ಕೃತ್ಯದಲ್ಲಿ ನಿಹಾಂಗ್‌ಗಳ ಕೈವಾಡವಿದೆ ಎಂದು ಶಂಕಿಸಲಾಗಿದೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ.
ಬೆಳಿಗ್ಗೆ 5: 30 ರ ಸುಮಾರಿಗೆ ಹತ್ಯೆಯ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬ್ಯಾರಿಕೇಡ್‌ನಲ್ಲಿ ಕಟ್ಟಲಾಗಿದ್ದ ಮೃತದೇಹದ ಎಡಗೈನ ಮುಂಗೈ ಕತ್ತರಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ರೈತರನ್ನು ಬೆಂಬಲಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಭಾಷಣ ಹಂಚಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ
“ಇಂದು ಮುಂಜಾನೆ 5 ಗಂಟೆಗೆ, ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಕೈಗಳು, ಕಾಲುಗಳನ್ನು ಕತ್ತರಿಸಿದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಯಾರು ಕಾರಣ ಎಂಬ ಬಗ್ಗೆ ಮಾಹಿತಿಯಿಲ್ಲ. ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವೈರಲ್ ಆಗಿರುವ ವಿಡಿಯೊ ತನಿಖೆಯ ಭಾಗವಾಗಿದೆ. ವದಂತಿಗಳು ಕಾಲಹರಣ ಮಾಡಿಸುತ್ತವೆ ಅಷ್ಟೇ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹಂಸರಾಜ್ ಹೇಳಿಕೆಯನ್ನು ಸುದ್ದಿ ಸಂಸ್ಥೆ ಎಎನ್ಐ ಉಲ್ಲೇಖಿಸಿದೆ.
ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಿದ ಆರೋಪದಲ್ಲಿ ನಿಹಾಂಗ್ಸ್ ಯುವಕನನ್ನು ಹೊಡೆದಿದ್ದಾರೆ ಎಂದು ವರದಿಗಳು ಹೇಳಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೊಗಳು ವೈರಲ್ ಆಗಿವೆ.
ಶಾಂತಿಯುತವಾಗಿ ಸಾಗುತ್ತಿರುವ ರೈತರ ಪ್ರತಿಭಟನೆಗೆ ಅಪಖ್ಯಾತಿ ತರುವ ಪ್ರಯತ್ನ ಇದು ಎಂದು ಹಲವು ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿ: 2024ಕ್ಕೆ ರಾವಣನನ್ನು ಸಂಪೂರ್ಣವಾಗಿ ಸುಡುತ್ತೇವೆ: ಶಿವಸೇನೆ ಸಂಸದ ಸಂಜಯ್ ರಾವತ್