ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ: ಬಾಂಗ್ಲಾ ಪ್ರಧಾನಿ

ಮುಸ್ಲಿಂ ಬಹುಸಂಖ್ಯಾತರಿರುವ ಬಾಂಗ್ಲಾದೇಶದಲ್ಲಿ ಸರ್ಕಾರವು ಅಲ್ಪಸಂಖ್ಯಾತರ ರಕ್ಷಣೆಗೆ ಸಾಕಷ್ಟು ಕೆಲಸ ಮಾಡಿಲ್ಲ ಎಂಬ ಟೀಕೆಗಳನ್ನು ಎದುರಿಸುತ್ತಿದೆ. ಇದರ ನಡುವೆಯೇ ಸರ್ಕಾರ ಹಿಂದೂ ದೇವಾಲಯಗಳಲ್ಲಿ ದುರ್ಗಾಪೂಜೆಯ ಆಚರಣೆಗಳ ವೇಳೆ ದಾಳಿ ಮಾಡಿದವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

ದುರ್ಗಾ ಪೂಜೆ ಆಚರಣೆ ನಡೆಯುತ್ತಿದ್ದ ವೇಳೆ ಕೆಲವರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ್ದರು. ಈ ಹಿಂಸಾಚಾರದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ  22 ಜಿಲ್ಲೆಗಳಲ್ಲಿ ಅರೆಸೇನಾ ಪಡೆ ನಿಯೋಜಿಸಲು ಆದೇಶಿಸಿದ್ದಾರೆ.

ದ್ವಾರಕೇಶ್ವರಿ ರಾಷ್ಟ್ರೀಯ ದೇವಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪ್ರಧಾನಿ ಶೇಖ್ ಹಸೀನಾ, “ಕಮಿಲಾದಲ್ಲಿನ ಘಟನೆಗಳನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ. ಯಾರನ್ನೂ ಬಿಡುವುದಿಲ್ಲ. ಅವರು ಯಾವ ಧರ್ಮಕ್ಕೆ ಸೇರಿದವರು ಎಂಬುದು ಮುಖ್ಯವಲ್ಲ. ಅವರನ್ನು ಹುಡುಕಿ  ಶಿಕ್ಷಿಸಲಾಗುವುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಜರಂಗದಳ ಟಾರ್ಗೆಟ್‌ ಮಾಡಿದ್ದ ನಾಲ್ವರು ಮುಸ್ಲಿಂ ಯುವಕರ ಬಂಧನ

“ನಾವು ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಇದು ತಂತ್ರಜ್ಞಾನದ ಯುಗವಾಗಿದೆ. ಈ ಘಟನೆಯಲ್ಲಿ ಭಾಗಿಯಾದವರನ್ನು ತಂತ್ರಜ್ಞಾನದ ಬಳಕೆಯಿಂದ ಖಂಡಿತವಾಗಿ ಪತ್ತೆ ಮಾಡಲಾಗುತ್ತದೆ” ಎಂದು ಭರವಸೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುವ ವಿಡಿಯೊಗಳಲ್ಲಿ ದೊಡ್ಡ ಗುಂಪು ದುರ್ಗಾಪೂಜೆಯ ವಿಗ್ರಹಗಳನ್ನು ಒಡೆಯುವುದು, ದೇವಾಲಯಕ್ಕೆ ಕಲ್ಲುಗಳನ್ನು ಎಸೆದು ಧ್ವಂಸಗೊಳಿಸುವುದನ್ನು ನೋಡಬಹುದು.

ದುರ್ಗಾ ಪೂಜೆ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಕೋರಿತ್ತು. ಈಗ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಹಿಂದೂ ದೇವಾಲಯಗಳಲ್ಲಿ ದುರ್ಗಾಪೂಜೆಯ ಆಚರಣೆಗಳ ವೇಳೆ ದಾಳಿ ಮಾಡಿದವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.


ಇದನ್ನೂ ಓದಿ: ಕೊಲ್ಕತ್ತಾ: ದುರ್ಗಾ ಪೂಜೆ ಮಂಟಪಗಳಲ್ಲಿ ಹೊರಹೊಮ್ಮಿದ ರೈತ ಹೋರಾಟದ ಚಿತ್ರಗಳು

LEAVE A REPLY

Please enter your comment!
Please enter your name here