ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಕಛೇರಿಯಲ್ಲಿ ಹಲವರು ಕೋವಿಡ್ -19 ಇಂದ ಬಾಧಿತರಾಗಿರುವ ಕಾರಣ, ತಮ್ಮ ಮನೆಯಲ್ಲೇ ಕ್ವಾರಂಟೇನ್‍ನಲ್ಲಿದ್ದುಕೊಂಡು ವಿ. ಎಸ್. ಖಾಂಡೇಕರ್ ಅವರ ‘ಯಯಾತಿ’ ಕಾದಂಬರಿಯನ್ನು ಓದುತ್ತಿರುವುದನ್ನು ಇತ್ತೀಚೆಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಭಗೀರಥ ಹೋರಾಟ ನಡೆಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಿ, ಬಿಜೆಪಿ ಸರ್ಕಾರ ರಚಿಸಿ ವರ್ಷ ಪೂರೈಸುತ್ತಿರುವ ಈ ಹೊತ್ತಿನಲ್ಲಿ 78 ವರ್ಷದ ಯಡಿಯೂರಪ್ಪನವರು ಯಯಾತಿಯಂತೆಯೇ ಕಾಣುತ್ತಿರುವುದು ದಿಟ.
ಫೆಬ್ರವರಿಯಲ್ಲಿ ಕೊರೊನಾ ಇನ್ನೂ ನಮ್ಮ ಜೀವನವನ್ನು ಇನ್ನಿಲ್ಲದಂತೆ ಆಕ್ರಮಿಸಿಕೊಂಡಿರದ ಕಾಲದಲ್ಲಿ ಯಡಿಯೂರಪ್ಪನವರು ಎಂದೂ ಇಲ್ಲದಂತೆ ತಮ್ಮ 78ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಅದೇ ಆಸುಪಾಸಿನಲ್ಲಿ ಬಿಜೆಪಿಯ ಶಾಸಕರ ಒಂದು ಕೂಟವು ಎರಡು ಅನಾಮಧೇಯ ಪತ್ರಗಳನ್ನು ಹರಿದು ಬಿಟ್ಟಿದ್ದವು. ಆ ಎರಡು ಪತ್ರಗಳ ತಥ್ಯ ಇಷ್ಟು. ಯಡಿಯೂರಪ್ಪನವರಿಗೆ ವಯಸ್ಸಾಗಿದೆ, ಮೊದಲಿನ ಚುರುಕಿಲ್ಲ, ಆರೋಗ್ಯ ಕೈಕೊಡುತ್ತಿದೆ. ಆಡಳಿತ ನಡೆಸಲು ಮಗ ವಿಜಯೇಂದ್ರನ ಮೇಲೆ ಅವರು ವಾಲುತ್ತಿದ್ದಾರೆ. ಇದು ಅಸಂವಿಧಾನಿಕವಷ್ಟೇ ಅಲ್ಲ, ನಾವೇಕೆ ವಿಜಯೇಂದ್ರನಿಗೆ ತಲೆಬಾಗಬೇಕು, ಮೇಲಾಗಿ ಆತ ಕಡುಭ್ರಷ್ಟ ಎಂದು ದೂರಿದ್ದರು. ಈ ಎರಡು ಪತ್ರಗಳು ಸೂಚಿಸಿದ್ದ ಪರಿಹಾರ – ನಾಯಕತ್ವ ಬದಲಾವಣೆ.
ನರೇಂದ್ರ ಮೋದಿ-ಅಮಿತ್ ಶಾ ಬಿಜೆಪಿಯು 75ರ ವಯೋಮಿತಿ ವಿಧಿಸಿದ ಮೇಲೂ ಅದನ್ನು ಮೀರಿ ಅಧಿಕಾರದಲ್ಲಿರುವ ಏಕೈಕ ನಾಯಕ ಯಡಿಯೂರಪ್ಪನವರು. ಅಷ್ಟೇ ಅಲ್ಲ, ಅದನ್ನು ಸೆಲಿಬ್ರೇಟ್ ಮಾಡಿಕೊಂಡವರೂ ಕೂಡ. ಅವತ್ತಿನ ಕಾರ್ಯಕ್ರಮ ಯಡಿಯೂರಪ್ಪನವರು ಈ ವಯೋಮಿತಿಯ ವಾದವನ್ನು ಹೇಗೆ ಎದುರಿಸಲು ಹೊರಟಿದ್ದಾರೆ ಎಂಬುದರ ಸುಳಿವು ನೀಡಿತ್ತು. ಅವತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದವರು ವಿರೋಧಪಕ್ಷದ ನಾಯಕರಾದ ಸಿದ್ಧರಾಮಯ್ಯ! ವೇದಿಕೆಯ ಮೇಲೆ ಅವತ್ತು ನಾಲ್ವರು ಮಾಜಿ ಮುಖ್ಯಮಂತ್ರಿಗಳಿದ್ದರು. ಯಡಿಯೂರಪ್ಪನವರ ಬದುಕು-ಹೋರಾಟದ ಕುರಿತು ಅಭಿನಂದನಾ ಗ್ರಂಥಗಳೂ ಬಿಡಿಗುಡೆಯಾದವು. ಒಂದು ಕಡೆ ನಾಯಕನೊಬ್ಬನ “ಲೆಗೆಸಿ” ಬಗ್ಗೆ ಇದು ಮಾತಾಡುತ್ತಿರುವಂತೆನಿಸಿದರೂ ಮತ್ತೊಂದೆಡೆ ಯಡಿಯೂರಪ್ಪನವರನ್ನು ಪಕ್ಷ ರಾಜಕಾರಣ ಮೀರಿದ ಕರ್ನಾಟಕದ ಪ್ರಮುಖ ಜನನಾಯಕರಾಗಿ ಒಂದು ಪರಂಪರೆಯಲ್ಲಿ ಗುರುತಿಸುವ ಸೂಕ್ಷ್ಮ ಪ್ರಯತ್ನವಿತ್ತು. ಬಿಜೆಪಿ ಪಕ್ಷದ ಹೈಕಮಾಂಡಿಗೆ ಯಡಿಯೂರಪ್ಪನವರು ಕೊಟ್ಟಿದ್ದ ಸಂದೇಶವದು. ಈ ಸಂದೇಶದೊಳಗೇ ಅಡಕವಾಗಿರುವ ಮತ್ತೊಂದು ಸಂಗತಿ: ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆದ ಕಾಂಗ್ರೆಸ್ ನಡೆ ಮತ್ತು ಆ ಕಾರಣವಾಗಿ ಲಿಂಗಾಯತ ಸಮುದಾಯ ಇವತ್ತಿಗೂ ಕಾಂಗ್ರೆಸ್ ಇಂದ ದೂರವಾಗಿರುವುದನ್ನು ಬಿಜೆಪಿ ಹೈಕಮಾಂಡಿಗೆ ನೆನಪಿಸುವುದು. ಆದರೆ ಹೈಕಮಾಂಡಿಗೆ ಅದರದೇ ಆದ ಲೆಕ್ಕಾಚಾರಗಳಿದ್ದಂತಿವೆ.
ಕಳೆದ ಒಂದು ವರ್ಷದಲ್ಲಿ ಯಡಿಯೂರಪ್ಪನವರ ವಿರುದ್ಧ `ಅಧಿಕಾರ ವಂಚಿತ’ ಶಾಸಕರ ಗುಂಪು ಮೂರು ಬಾರಿ ಬಂಡೆದ್ದಿದೆ. ಪ್ರತಿ ಬಾರಿಯೂ ಬಂಡಾಯಗಾರರು ಮಂತ್ರಿಯಾಗಲು ಬಯಸಿದರು, ಅದು ಕೈಗೂಡದೇ ಇದ್ದಾಗ ನಾಯಕತ್ವ ಬದಲಾವಣೆಯ ಸೊಲ್ಲೆತ್ತಿದರು. ಅನಾಮಧೇಯ ಪತ್ರಗಳು ಹರಿದಾಡಿದವು. ಸದ್ಯಕ್ಕೆ ಯಡಿಯೂರಪ್ಪನವರು ಅವರಿಗೆ ಹಲವು ಆಶ್ವಾಸನೆಗಳು ನೀಡುವ ಮೂಲಕ ತಮ್ಮ ಮಟ್ಟದಲ್ಲೇ ಈ ಬಂಡಾಯಗಳನ್ನು ಶಮನ ಮಾಡಿದರು. ಪಕ್ಷದ ಹೈಕಮಾಂಡ್ ಬೇರೆಯದೇ ಆಟ ಹೂಡಿದೆ, ಅದು ಇನ್ನೂ ಹಣ್ಣಾಗಬೇಕಿದೆ. ಇತ್ತೀಚಿನ ಬಂಡಾಯದಲ್ಲಿ ಉಮೇಶ ಕತ್ತಿ ತನಗೆ ಮಂತ್ರಿ ಪದವಿಯನ್ನೂ ತನ್ನ ತಮ್ಮನಿಗೆ ರಾಜ್ಯಸಭೆಯ ಸೀಟನ್ನು ಕೇಳಿದ್ದರು. ಯಡಿಯೂರಪ್ಪನವರು ಆಶ್ವಾಸನೆ ಕೊಟ್ಟು, ರಮೇಶ ಕತ್ತಿಯ ಹೆಸರನ್ನು ಹೈಕಮಾಂಡಿಗೆ ಸೂಚಿಸಿದ್ದರು ಕೂಡ. ಆದರೆ ಯಾರೂ ಊಹಿಸದಂತೆ ಹೈಕಮಾಂಡ್ ಇಬ್ಬರು ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆಯ ಬಾಗಿಲನ್ನು ತೆರೆಯಿತು. ಇದರ ಸಂದೇಶ ಸ್ಪಷ್ಟವಿದೆ: ಪಕ್ಷದಲ್ಲಿ ಅವಕಾಶ, ಅಧಿಕಾರ ಬೇಕಿದ್ದರೆ ಅದನ್ನು ಕೊಡಬಲ್ಲವರು ಹೈಕಮಾಂಡ್ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯ ಹುದ್ದೆಯ ದೆಸೆಯಿಂದ ಹೈಕಮಾಂಡೇ ಆಗಿರುವ ರಾಜ್ಯದ ಸಂಘಪರಿವಾರದ ನಾಯಕ ಬಿ. ಎಲ್. ಸಂತೋಷ್ ಹೊರತು ಯಡಿಯೂರಪ್ಪನವರಲ್ಲ. ಯಡಿಯೂರಪ್ಪನವರ ಆಶ್ವಾಸನೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವಾಗಿ ಮುಂದಿನ ಬಂಡಾಯದ ರಾಜಿ-ಪಂಚಾಯಿತಿ ಬಹುಶಹ ದೆಹಲಿಯಲ್ಲಿ ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತದೆ. ಅಲ್ಲಿಗೆ ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆಯೆಂದೇ ಅರ್ಥ.
ಒಂದು ರೀತಿಯಲ್ಲಿ ನೋಡಿದರೆ ಯಡಿಯೂರಪ್ಪನವರು ದುರಂತ ನಾಯಕರು. 2008 ಮತ್ತು 2018 ಎರಡು ಬಾರಿಯೂ 110 ಮತ್ತು 104 ಸ್ಥಾನಗಳನ್ನು ಗೆದ್ದ ಬಿಜೆಪಿ ಜನತೆಯ ಮತ ನಿಚ್ಚಳವಾಗಿ ತಮ್ಮ ಪರವಿದ್ದರೂ ಸ್ಥಿರ ಸರ್ಕಾರ ನೀಡಲು ಹೋಗಿ ಅಪರೇಷನ್ ಕಮಲಕ್ಕೆ ಕೈಹಾಕಬೇಕಾಯಿತು. ರಾಜ್ಯದ ರಾಜಕೀಯ ಸಂಸ್ಕೃತಿಯನ್ನಷ್ಟೆ ಅದು ಕುಲಗೆಡಿಸಿಲ್ಲ, ಬದಲಿಗೆ ಆಂತರಿಕವಾಗಿ ಬಿಜೆಪಿಯಲ್ಲೂ ದಳ್ಳುರಿ ಹಬ್ಬಿಸಿದೆ. ಆಪರೇಷನ್ ಕಮಲದ ಮೂಲಕ ಪಕ್ಷ ಸೇರಿದವರಿಗೆ ಮಣೆ ಹಾಕುತ್ತಾ ಹೋದಂತೆ, ದಶಕಗಳ ಕಾಲ ದುಡಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ನಾಯಕರು ಅವಕಾಶವಂಚಿತರಾದರು. ಇದು ಪಕ್ಷದೊಳಗೇ ಯಡ್ಡಿ-ಚೆಡ್ಡಿ ಗುಂಪುಗಳನ್ನು ಸೃಷ್ಟಿಸಿವೆ. ಜೆಡಿಯು ಅವಸಾನದ ಬಳಿಕ ಆ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಲಿಂಗಾಯತರು ಬಿಜೆಪಿಗೆ ವಾಲುವುದರೊಂದಿಗೆ ಜನತಾ ಪರಿವಾರದ ಹಲವು ಲಿಂಗಾಯತ ನಾಯಕರು ಯಡಿಯೂರಪ್ಪನವರ ನೇತೃತ್ವ ಒಪ್ಪಿ ಬಿಜೆಪಿಗೆ ಬಂದಿದ್ದಾರೆ ಮತ್ತು ಸೂಕ್ಷ್ಮವಾಗಿ ಗಮನಿಸಿದರೆ ಇವರೇ ಬಹುತೇಕ ಎರಡೂ ಬಿಜೆಪಿ ಸರ್ಕಾರಗಳಲ್ಲಿ ಅಧಿಕಾರ ನಡೆಸಿದ್ದಾರೆ. ಕಳೆದ ಅವಧಿಯಲ್ಲಿ ಯಡಿಯೂರಪ್ಪನವರ ಮೇಲೆ ಬಿದ್ದ ಕೇಸುಗಳು, ಪಕ್ಷ ಮೂರು ಹೋಳಾದದ್ದು ಈ ಎಲ್ಲದರ ಹಿನ್ನೆಲೆಯನ್ನು ಗಮನಿಸಿದರೆ ಅದರ ಹಿಂದೆ ಇದ್ದದ್ದೂ ಇದೇ ಮಸಲತ್ತು. ಇವತ್ತು ಬಂಡಾಯಗಾರ ಶಾಸಕರನ್ನು ನೋಡಿ – ಅವರು ದಶಕದ ಹಿಂದೆ ಆಪರೇಷನ್ ಕಮಲದ ಮೂಲಕ ಪಕ್ಷ ಸೇರಿದವರು, ಇಂದು ಎರಡನೇ ಬ್ಯಾಚಿನವರು ಅಧಿಕಾರ ಪಡೆಯುತ್ತಿದ್ದಂತೆ ಇವರು ವಂಚಿತರಾದರು, ಬಂಡಾಯವೆದ್ದಿದ್ದಾರೆ. ಸೈದ್ಧಾಂತಿಕವಾದ ಕ್ಯಾಡರ್ ಪಕ್ಷವಾದ ಬಿಜೆಪಿಯೊಳಗೆ ಇದು ಸಹಜವಾಗಿಯೇ ಅಸಮಾಧಾನ ಆಕ್ರೋಶ ಮೂಡಿಸಿದೆ. ಇದು ಇಂದು ನಿನ್ನೆಯದಲ್ಲ, ಬದಲಿಗೆ ಕಳೆದ ಒಂದೂವರೆ ದಶಕದ ಫಲ. ಈ ಅಸಮಾಧಾನಿತರ ಗುಂಪಿನ ನಾಯಕತ್ವವನ್ನು ಇವತ್ತು ಸಂತೋಷ್ ವಹಿಸಿಕೊಂಡಿದ್ದಾರೆ. ಕಟ್ಟರ್ ಹಿಂದುತ್ವವಾದಿ ಸಂಘಿಗಳಾದ ಇವರಿಗೆ ಸಹಜವಾಗಿಯೇ ಆರೆಸ್ಸೆಸ್ ಮತ್ತು ಹೈಕಮಾಂಡ್ ಬೆಂಬಲವಿದೆ.
ಮೋದಿ-ಅಮಿತ್ ಶಾ ಅವರು ಬಿಜೆಪಿಯ ಮುಂಚೂಣಿಗೆ ಬರುವುದರೊಂದಿಗೆ ಎರಡು ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ ಮತ್ತು ಈ ಎರಡೂ ಆಂತರಿಕ ಸಂಬಂಧ ಹೊಂದಿದ್ದು, ಎರಡೂ ಕೂಡಿ ಹೊಸತೊಂದು ಬಿಜೆಪಿಯನ್ನು ಕಡೆದು ನಿಲ್ಲಿಸಿದೆ. ಮೋದಿಯ ಹಲವು ಮುಖವಾಡಗಳ ಹೊರತಾಗಿಯೂ ಪಕ್ಷವು ಸೈದ್ಧಾಂತಿಕವಾಗಿ ಹೆಚ್ಚು ಕಟ್ಟರ್ ಆಗುತ್ತಾ ಬಲಪಂಥೀಯ ಫ್ರಿಂಜ್ ಮತ್ತು ಮುಖ್ಯವಾಹಿನಿಯ ಪಕ್ಷಕ್ಕೂ ವ್ಯತ್ಯಾಸವೇ ಇಲ್ಲದಂತಾಗುತ್ತಿದೆ. ಇದಕ್ಕೆ ನೂರು ಉದಾಹರಣೆ ಕೊಡಬಹುದಾದರೂ ಯೋಗಿ ಆದಿತ್ಯನಾಥರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಡಿದ್ದು ಮತ್ತು ಭಯೋತ್ಪಾದನೆಯ ಆರೋಪ ಹೊತ್ತ ಸಾಧ್ವಿ ಪ್ರಗ್ಯಾ ಸಿಂಗಳನ್ನು ಸಂಸದೆಯಾಗಿಸಿದ್ದು ಇದರ ದ್ಯೋತಕ. ಇದರ ಜೊತೆಯೇ ಮೋದಿ-ಶಾ ಜೋಡಿಯ ಪ್ರಶ್ನಾತೀತ ಎಂಬಂತಿರುವ ಪರ್ಸನಾಲಿಟಿ ಕಲ್ಟ್. ಅದಕ್ಕೆ ಎರಡು ಸಮರ್ಥನೆಗಳು – ಮೇಲಿಂದ ಮೇಲೆ ಅವರು ಚುನಾವಣೆಗಳನ್ನು ಗೆಲ್ಲುತ್ತಿರುವುದು ಮತ್ತು ಅವರ ಹಿಂದುತ್ವದ ನಿಷ್ಠೆ. ಪಕ್ಷದ ಕಾರ್ಯಕರ್ತರಿಗೆ ಮಣೆ ಎನ್ನುವ ಹೆಸರಿನಲ್ಲಿ, ತನ್ನ ಸ್ವಂತ ಅರ್ಹತೆಯಲ್ಲಿ ನಾಯಕರೆನಿಸಿಕೊಂಡವರು, ಒಂದು ವೋಟ್‍ಬ್ಯಾಂಕ್ ಸೃಷ್ಟಿ
ಮಾಡಿಕೊಂಡಿರುವ ಪ್ರಾಂತೀಯ ನಾಯಕರನ್ನು ಅತ್ಯಂತ ವ್ಯವಸ್ಥಿತವಾಗಿ ಈ ಜೋಡಿ ತುಳಿಯುತ್ತಾ ಬಂದಿದೆ. ಅವರು ಸ್ಥಾಪಿಸಿರುವ ಮುಖ್ಯಮಂತ್ರಿಗಳನ್ನೇ ನೋಡಿ: ಹರ್ಯಾಣದಲ್ಲಿ ಮನೋಹರ ಲಾಲ್ ಖಟ್ಟರ್, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್, ಗುಜರಾತಿನಲ್ಲಿ ವಿಜಯ ರೂಪಾನಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಅಸ್ಸಾಮಿನಲ್ಲಿ ಸೋನೋವಾಲ್.. ಹೀಗೆ. ಬಲಿಷ್ಠ ಠಾಕೂರ್ ಸಮುದಾಯಕ್ಕೆ ಸೇರಿದ ಯೋಗಿ ಒಬ್ಬರನ್ನು ಬಿಟ್ಟರೆ ಇನ್ಯಾರೂ ಆ ರಾಜ್ಯದಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಿಕೊಟ್ಟ ಬಲಿಷ್ಠ ಜಾತಿಗಳಿಗೆ ಸೇರಿದವರು ಕೂಡಾ ಅಲ್ಲ. ಇವತ್ತು ಮೋದಿ-ಶಾ ಜೋಡಿಗೆ, ರಾಜ್ಯಗಳಲ್ಲೂ ಚುನಾವಣೆಗಳನ್ನು ತಮ್ಮ ಹೆಸರು-ತಂತ್ರದ ಬಲದಿಂದ ಗೆದ್ದು ತರುತ್ತೇವೆ ಎಂಬ ಧಿಮಾಕಿದೆ. ಹಾಗಾಗಿಯೇ ಅವರಿಗೆ ಪ್ರಾದೇಶಿಕವಾಗಿ ಸ್ವಂತ ಬಲದ ಮೇಲೆ ಚುನಾವಣೆಗಳನ್ನು ಗೆದ್ದುತರಬಲ್ಲ ಪ್ರಾಂತೀಯ ಜನಪ್ರಿಯ ನಾಯಕರು ಬೇಡ. ಅವರಿಗೆ ಇವತ್ತು ಕಾರಕೂನರು ಬೇಕಿದ್ದಾರೆ. ಯಾರಿಗೆ ಸ್ವಂತ ಬಲವೇ ಇಲ್ಲವೋ, ತನ್ನದು ಅಂತ ಒಂದು ರಾಜಕೀಯ, ಜಾತಿ ನೆಲೆ ಇಲ್ಲವೋ ಅವರನ್ನು ಅವರ ಯೋಗ್ಯತೆ ಮೀರಿ ಅಧಿಕಾರ ನೀಡುವುದು, ತನ್ಮೂಲಕ ಪ್ರಶ್ನಾತೀತರಾಗಿ ಉಳಿಯುವುದು. ಇವತ್ತು ಕೇಂದ್ರ ಸರ್ಕಾರದ ಅತ್ಯುನ್ನತ ಡಿಸಿಷನ್ ಮೇಕಿಂಗ್ ವ್ಯವಸ್ಥೆಯಾದ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯೂರಿಟಿಯಲ್ಲಿ ಮೋದಿ-ಶಾ ಜೊತೆಗೆ ರಾಜನಾಥ್ ಸಿಂಗರ ದನಿ ಏಕಾಂಗಿ. ನಿರ್ಮಲಾ ಸೀತಾರಾಮನ್ ಮತ್ತು ಜಯಶಂಕರ್ ಅಕ್ಷರಶಃ ಕಾರಕೂನರು. ಇದೇನೂ ಹೊಸತಲ್ಲ. ಇಂದಿರಾ ಗಾಂಧಿ ಮಾಡಿದ್ದೂ ಇದನ್ನೇ – ಅದರ ಫಲವನ್ನು ಕಾಂಗ್ರೆಸ್ ಇವತ್ತಿಗೂ ಉಣ್ಣುತ್ತಿದೆ. ಈ ಮಾದರಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ, ಸಂಖ್ಯೆಯ ದೃಷ್ಟಿಯಿಂದ ಬಲಿಷ್ಠವಲ್ಲದ, ಎಂದಿಗೂ ಅಧಿಕಾರದ ಕನಸು ಕಾಣಲಾರದ ಜಾತಿಗಳಿಂದ ಬಂದವರು ಅಧಿಕಾರ ನೋಡುತ್ತಾರೆ. ಕಾಂಗ್ರೆಸ್ಸಿನಲ್ಲಿ ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆದಂತೆ, ಇಲ್ಲ ಸವಿತಾ ಸಮಾಜಕ್ಕೆ ಸೇರಿದ ನೇರ ಚುನಾವಣೆಯಲ್ಲಿ ಗೆಲ್ಲುವ ಕನಸು ಕಾಣಲೂ ಅಂಜುವ ಸವಿತಾ ಸಮಾಜಕ್ಕೆ ಸೇರಿದ ಅಶೋಕ ಗಸ್ತಿ ಇವತ್ತು ರಾಜ್ಯಸಭೆಗೆ ಹೋದಂತೆ. ಇದನ್ನು ಸಾಮಾನ್ಯ ಕಾರ್ಯಕರ್ತರ ದಿಗ್ವಿಜಯ, ಅಸಲಿ ಪ್ರಜಾಪ್ರಭುತ್ವ ಎಂದು ಸೆಲಿಬ್ರೇಟ್ ಮಾಡಲಾಗುತ್ತದೆ. ಆದರೆ ಇದರ ಹಿಂದೆ ಇರುವುದು ಯಡಿಯೂರಪ್ಪನಂತಹ ಜನಪ್ರಿಯ ನಾಯಕರನ್ನು ತುಳಿಯುವುದೇ ಆಗಿದೆ.
ಇಂದು ಈ ಎರಡೂ ಪ್ರಕ್ರಿಯೆಗಳ ವಿರುದ್ಧವಾಗಿ ಒಂದು ಸವಾಲಿನಂತೆ ಯಡಿಯೂರಪ್ಪ ನಿಂತಿದ್ದಾರೆ. ಅವರು ಎಂದೂ ಕಟ್ಟರ್ ಹಿಂದುತ್ವವಾದಿಯಲ್ಲ. ಕೋಮುವಾದವನ್ನು ಸಹಿಸಿಕೊಳ್ಳುತ್ತಾರೆ, ಆದರೆ ಎಂದೂ ಕೋಮು ದ್ವೇಷದ ರಾಜಕಾರಣ ಮಾಡಿದವರಲ್ಲ. ಮೇಲಾಗಿ ಅಧಿಕಾರ ರಾಜಕಾರಣದ ಕಾರಣವಾಗಿ ಹಿಂದುತ್ವದ ಗಂಧಗಾಳಿಯಿಲ್ಲದ ಸಂಘಪರಿವಾರದ ಹಿನ್ನೆಲಯಿಲ್ಲದ ದಂಡುದಂಡು ನಾಯಕರನ್ನು ಪಕ್ಷಕ್ಕೆ ಕರೆತಂದು ಅಧಿಕಾರ ಕೊಟ್ಟು, ಪಕ್ಷದೊಳಗೊಂದು ಪಕ್ಷ ಕಟ್ಟಿಕೊಂಡವರು. ಸಂತೋಷ್‍ರಂತಹ ಸಂಘದ ನಾಯಕರಿಗೆ ತಮ್ಮ ಪಕ್ಷವನ್ನು ತಾವೇ ಗುರುತುಹಿಡಿಲಾರದೆಂಬಂತೆ ಮೈಲಿಗೆ ಮಾಡಿಬಿಟ್ಟವರು. ಅಧಿಕಾರ ಇಲ್ಲದಾಗ ಅಧಿಕಾರ ಹಿಡಿಯಲು ಇದೆಲ್ಲವೂ ಅನಿವಾರ್ಯ ಎನ್ನುತ್ತಾ ಇದೆಲ್ಲವನ್ನೂ ಸಹಿಸಿಕೊಂಡ ಇಂತಹ ಕಟ್ಟರ್‍ವಾದಿಗಳು, ಇವತ್ತು ದೆಹಲಿಯಲ್ಲಿ ಅಧಿಕಾರ ಗಟ್ಟಿಯಾಗುತ್ತಲೇ ಈ ಬಗ್ಗೆ ಇನ್ನಿಲ್ಲದ ಅಸಹ್ಯ ಬೆಳೆಸಿಕೊಂಡಿದ್ದಾರೆ. ಈಗಲ್ಲದಿದ್ದರೆ ಇನ್ಯಾವತ್ತು ನಾವು ಪಕ್ಷವನ್ನು ಹಿಂದುತ್ವದ ಅಜೆಂಡಾ ಮೇಲೆ ಕಟ್ಟಲು ಸಾಧ್ಯ ಎಂಬ ಪ್ರಶ್ನೆ ಎತ್ತುತ್ತಿದ್ದಾರೆ. ಇದು ಸಹಜ ಕೂಡ, ತಪ್ಪೆನ್ನಲಾಗದು. ಮತ್ತೊಂದೆಡೆ ಯಡಿಯೂರಪ್ಪನವರು ಎಂದಿಗೂ “ಜೀ..ಹುಜೂರ್” ನಾಯಕರಲ್ಲ. ಪ್ರಬಲ ಕೋಮಿನ ಬೆಂಬಲವಿರುವ ಜನಪ್ರಿಯ ಮತ್ತು ಚುನಾವಣೆಗಳನ್ನು ಗೆದ್ದು ತರಬಲ್ಲ ಛಾತಿಯ ನಾಯಕರು. ಸಾರ್ವಜನಿಕ ಸಭೆಯಲ್ಲಿ ವೇದಿಕೆಯ ಮೇಲೆ, ಕೇಂದ್ರ ಇದುವರೆಗೂ ಬಿಡುಗಡೆ ಮಾಡಿರುವ ನೆರೆ ಪರಿಹಾರ ಸಮರ್ಪಕವಲ್ಲ ಎಂದು ಪ್ರಧಾನಿ ಮೋದಿಯನ್ನು ಸಾರ್ವಜನಿಕವಾಗಿ ಕೇಳಿ ದಕ್ಕಿಸಿಕೊಂಡ ಬಹುಶಃ ಏಕೈಕ ನಾಯಕ. ಅವರು ಮನೋಹರಲಾಲ್ ಖಟ್ಟರ್ ಇಲ್ಲ ವಿಜಯ ರೂಪಾನಿ ಖಂಡಿತ ಆಗಲಾರರು. ಹಾಗಾಗಿಯೇ ಅವರನ್ನು ಅಧಿಕಾರದಿಂದ ಇಳಿಸುವ ಪ್ರಯತ್ನಗಳು ಸಹಜವಾಗಿಯೇ ವೇಗ ಪಡೆದುಕೊಂಡಿವೆ.
ಯಡಿಯೂರಪ್ಪನವರಿಗೆ ಇದನ್ನು ಮೆಟ್ಟಿನಿಲ್ಲಿ ಹೋರಾಡುವ ಛಾತಿ, ಮನೋಬಲ ಇದ್ದ ಹಾಗಿದೆ. ಆದರೆ ವಯಸ್ಸು ಅವರ ಪರ ಇಲ್ಲ. ಆದರೆ ಯಯಾತಿ ಯ ಹಪಾಹಪಿ, ಮಹತ್ವಾಕಾಂಕ್ಷೆ ಇದೆ. ಆದರೆ ಅವರು ಮಗ ಪುರುವಿನ ಯೌವನ ಕೇಳುತ್ತಿಲ್ಲ, ಆ ವಿಷಯದಲ್ಲಿ ಅವರು ಧೃತರಾಷ್ಟ್ರ. ಮುಂದಿನ ಚುನಾವಣೆಯನ್ನು ತಾನು ಗೆದ್ದು ಮತ್ತೆ ಮುಖ್ಯಮಂತ್ರಿಯಾಗುವುದು ಸಾಧ್ಯವಿಲ್ಲ. ದೇಹದ ಆರೋಗ್ಯ ಅದನ್ನು ಆಗಗೊಡುವುದಿಲ್ಲ ಎಂಬುದು ಅವರಿಗೂ ತಿಳಿದಿದೆ. ಮಗ ವಿಜಯೇಂದ್ರನನ್ನು ತನ್ನ ಉತ್ತರಾಧಿಕಾರಿಯಾಗಿ ರೂಪಿಸಲು ತಮ್ಮ ಶ್ರಮ ವ್ಯಯಿಸುತ್ತಿದ್ದಾರೆ. ಆದರೆ ವಂಶಪಾರಂಪರ್ಯ ಆಡಳಿತದ ವಿರೋಧವನ್ನೇ, ನೆಹರೂ-ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ವಿರೋಧದ ಪ್ರಮುಖ ನೆಲೆಯಾಗಿಸಿಕೊಂಡಿರುವ ಬಿಜೆಪಿ ಅದನ್ನು ಒಪ್ಪಲು ಸಾಧ್ಯವೇ ಇಲ್ಲ. ಪಕ್ಷದ ಇತರೆ ನಾಯಕರೂ ಒಪ್ಪುವುದಿಲ್ಲ, ಒಪ್ಪಬಾರದು ಕೂಡಾ.
ಅಲ್ಲಿಗೆ ಪಕ್ಷದ ದೃಷ್ಟಿಯಿಂದ ನೋಡಿದರೆ ಯಡಿಯೂರಪ್ಪ ಮುಂದಿನ ಚುನಾವಣೆ ನೇತೃತ್ವ ವಹಿಸುವುದು ಸಾಧ್ಯವಿಲ್ಲ, ಅವರಿಗೆ ಬೇಕೂ ಇಲ್ಲ. ಅಲ್ಲಿಗೆ ಯಡಿಯೂರಪ್ಪನವರ ನಂತರ ಯಾರು ಎಂಬ ಪ್ರಶ್ನೆಗೆ ಪಕ್ಷವು 2023ರೊಳಗೆ ಉತ್ತರ ಕಂಡುಕೊಳ್ಳಬೇಕಿದೆ. ಇದರ ಭಾಗವಾಗಿಯೇ ಯಡಿಯೂರಪ್ಪನವರನ್ನು ಇಳಿಸಿ ಹೊಸಮುಖಕ್ಕೆ ಅಧಿಕಾರ ನೀಡಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬುದು ಹೈಕಮಾಂಡ್ ಲೆಕ್ಕಾಚಾರ. ಇದರ ಭಾಗವಾಗಿಯೇ ಮೂರು ಕೋಮುಗಳಿಂದ ಮೂವರು ಉಪಮುಖ್ಯಮಂತ್ರಿಗಳನ್ನು ಯಡಿಯೂರಪ್ಪನವರ ವಿರೋಧದ ನಡುವೆಯೂ ನೇಮಿಸಿದರು – ದಲಿತ ಸಮುದಾಯದ ಗೋವಿಂದ ಕಾರಜೋಳ, ಒಕ್ಕಲಿಗರ ಅಶ್ವತ್ಥ್ ನಾರಾಯಣ್ ಮತ್ತು ಲಿಂಗಾಯತರ ಲಕ್ಷ್ಮಣ ಸವದಿ. ಈ ಆಯ್ಕೆಯಲ್ಲಿಯೂ ಯಡಿಯೂರಪ್ಪನವರ ನಂತರ ಹಿರಿಯ ನಾಯಕರೆನಿಸಿಕೊಂಡ ಜಗದೀಶ ಶೆಟ್ಟರ್, ಆರ್ ಅಶೋಕ್ ಮತ್ತು ಈಶ್ವರಪ್ಪನವರನ್ನು ಪಕ್ಕಕ್ಕೆ ಸರಿಸಿ ನಾಯಕತ್ವದ ಏಣಿಯಲ್ಲಿ ಕೆಳಗಿದ್ದವರನ್ನು ಏಕದಂ ಮೇಲೆತ್ತಿ ಅವರ ತಲೆಯ ಮೇಲೆ ಕೂರಿಸಲಾಗಿದೆ. ಯೋಗ್ಯತೆ ಮೀರಿದ ಅಧಿಕಾರ ಕೊಡುವುದು ಈ ಮಾದರಿಯ ಸೂತ್ರ. ಆದರೆ ಈ ಮೂವರೂ ನಾಯಕರು ಅಧಿಕಾರ ಸಿಕ್ಕ ಮೇಲೆಯೂ ತಮ್ಮ ಛಾಪನ್ನು ಮೂಡಿಸುವಲ್ಲಿ ಸೋತಿದ್ದಾರೆ.
ಹೊಸ ನಾಯಕತ್ವಕ್ಕೆ ಹಲವು ಹೆಸರುಗಳು ಕೇಳಿಬರುತ್ತಿವೆ: ಪ್ರಹ್ಲಾದ್ ಜೋಶಿ, ಸದಾನಂದ ಗೌಡ, ಈ ಮೂವರು ಉಪಮುಖ್ಯಮಂತ್ರಿಗಳಲ್ಲಬ್ಬರು, ಇಲ್ಲ ಲಿಂಗಾಯಿತರನ್ನಿಳಿಸಿ ಲಿಂಗಾಯತರನ್ನೇ ಕೂರಿಬೇಕೆಂದಾದರೆ ಸವದಿ, ಅರವಿಂದ ಬೆಲ್ಲದ್, ಶೆಟ್ಟರ್, ಯತ್ನಾಳ್ ಅವರ ಹೆಸರುಗಳೂ ಕೇಳಿಬರುತ್ತವೆ. ಯೋಗಿಯಂತಹ ಹಿಂದುತ್ವದ ಮುಖಗಳಾಗಿ ಅನಂತ ಕುಮಾರ್ ಹೆಗಡೆ, ಯತ್ನಾಳ್ ಮತ್ತು ಸ್ವತಃ ಸಂತೋಷ್ ಹೆಸರುಗಳು ಚರ್ಚಾ ಚಾವಡಿಯಲ್ಲಿವೆ.
ಯಡಿಯೂರಪ್ಪನವರನ್ನು ಒಬ್ಬ ಜನಪ್ರಿಯ ಲಿಂಗಾಯತನೇ ರೀಪ್ಲೇಸ್ ಮಾಡಬೇಕು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಒಪ್ಪುವುದಿಲ್ಲ. ಇನ್ನು ಯಡಿಯೂರಪ್ಪನವರ ಬಣ ಸದಾಕಾಲ ವೀರೇಂದ್ರ ಪಾಟೀಲರ ಉದಾಹರಣೆಯನ್ನು ನೀಡುತ್ತಾ ಎಚ್ಚರಿಸುತ್ತದೆ. 1991ರಲ್ಲಿ ಅಂದಿನ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಲಿಂಗಾಯತರಾದ ವೀರೇಂದ್ರ ಪಾಟೀಲರನ್ನು ಅವಮಾನಕರವಾಗಿ ಕಿತ್ತೊಗೆದು ಬಂಗಾರಪ್ಪನವರನ್ನು ಮುಖ್ಯಮಂತ್ರಿ ಮಾಡಿದರು. ಅವತ್ತು ಪಾಟೀಲರಿಗೆ ಲಕ್ವ ಹೊಡೆದು ಆರೋಗ್ಯ ಕೆಟ್ಟಿತ್ತು. ಅಂದು ಕಾಂಗ್ರೆಸ್ಸಿನ ಜೊತೆ ಮುನಿಸಿಕೊಂಡ ಲಿಂಗಾಯತರು ಇವತ್ತಿಗೂ ಒಂದು ಸಮುದಾಯವಾಗಿ ಕಾಂಗ್ರೆಸ್‍ಅನ್ನು ಬೆಂಬಲಿಸಿಲ್ಲ. ಇದರ ಲಾಭ ಆದದ್ದು ಯಡಿಯೂರಪ್ಪ ಮತ್ತು ಬಿಜೆಪಿಗೆ. ಇವತ್ತು ಯಡಿಯೂರಪ್ಪ ಮತ್ತು ಬಿಜೆಪಿ ಅಂಥದೇ ಪರಿಸ್ಥಿತಿಯಲ್ಲಿ ಮತ್ತೆ ಬಂದು ನಿಂತಿದ್ದಾರೆ. ವೀರೇಂದ್ರ ಪಾಟೀಲರನ್ನು ತೆಗೆದಾಗ ಮುನಿಸಿಕೊಂಡಂತೆ ಲಿಂಗಾಯತರು ಇವತ್ತೂ ಮುನಿಸಿಕೊಂಡು ಬಿಜೆಪಿಯಿಂದ ದೂರವಾಗುತ್ತಾರಾ? ಇವತ್ತು ಕಾಂಗ್ರೆಸ್ ಮತ್ತು ಜನತಾದಳಗಳು ಒಕ್ಕಲಿಗರ ಸುಪರ್ದಿಯಲ್ಲಿರುವಾಗ.
ಇನ್ನು ಇವತ್ತು ಬಿಜೆಪಿ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತಬ್ಯಾಂಕಿನ ಪ್ರಭಾವದಿಂದಾಗಿ ಮತ್ತು ಜೆಡಿಯುನ ಅವಸಾನದ ನಂತರ ಅದರ ನೆಲೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದೆ. ಇದು ಹಿಂದುತ್ವದ ನೆಲೆಯಲ್ಲ, ಜನತಾ ರಾಜಕಾರಣದ ನೆಲೆ. ಇದರಿಂದಲೇ ಅಧಿಕಾರ ಹಿಡಿದು ಇದನ್ನೇ ಮೈಲಿಗೆ ಎನ್ನುತ್ತಿರುವ ಬಿಜೆಪಿಯ ಖಟ್ಟರ್‍ವಾದಿಗಳಿಗೆ ಈ ಜನ ಬೆಂಬಲಿಸುತ್ತಾರಾ? ಕಳೆದ ಒಂದೂವರೆ ದಶಕದಲ್ಲಿ ಈ ನೆಲೆ ಸೈದ್ಧಾಂತಿಕವಾಗಿ ಹಿಂದುತ್ವದ ನೆಲೆಯಾಗಿ ಬದಲಾಗಿದೆಯಾ ಇಲ್ಲ ಹಿಂದುತ್ವವನ್ನು ತಿರಸ್ಕರಿಸುತ್ತದಾ? ಒಂದೊಮ್ಮೆ ತಿರಸ್ಕರಿಸಿದರೆ ಬಿಜೆಪಿ ತನ್ನ ಸೈದ್ಧಾಂತಿಕ ಬೇರುಗಳಿಗೆ ಅಂಟಿಕೊಂಡು ತನ್ನ ಮೂಲ ನೆಲೆಗೆ ಮರಳುತ್ತದಾ? ಇಲ್ಲ ಮೋದಿ-ಹಿಂದುತ್ವದ ಪ್ರವಾಹದಲ್ಲಿ ಬಿಜೆಪಿ ತನ್ನ ವ್ಯಾಪ್ತಿಯನ್ನು ವಿಸ್ತರಿಕೊಳ್ಳುತ್ತದಾ ಎಂಬುದು ರಾಜ್ಯ ರಾಜಕೀಯದಲ್ಲಿ ಸದ್ಯ ಇರುವ ಪ್ರಶ್ನೆಗಳು.
ಸರ್ಕಾರದ ಒಂದು ವರ್ಷದ ಸಾಧನೆಯನ್ನು ಅದರ ಆಡಳಿತದ ಮೌಲ್ಯಮಾಪನದಲ್ಲಿ ಗುರುತಿಸಬೇಕು. ಆದರೆ ಕೋವಿಡ್-19 ಬಂದ ನಂತರ ಎರಡು ತಿಂಗಳು ಸಾಂಕ್ರಾಮಿಕ ಪಿಡುಗು ವ್ಯಾಪಕವಾಗಿ ಹರಡುವುದನ್ನು ತಡೆದದ್ದು ಬಿಟ್ಟರೆ ಆಡಳಿತಾತ್ಮಕ ಸಾಧನೆಗಳ್ಯಾವೂ ಕಾಣುತ್ತಿಲ್ಲ. ಇದೂ ಸಹ ಈಗ ಮಣ್ಣುಪಾಲಾಗಿದೆ. ಕೋವಿಡ್-19 ವ್ಯಾಪಕವಾಗಿ ಹಬ್ಬಲಾರಂಭಿಸಿದೆ. ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಯುತ್ತಿವೆ. ಅದನ್ನು ತಪ್ಪಿಸಲು ಸರ್ಕಾರ ಶಕ್ತವಾಗಿಲ್ಲವಷ್ಟೇ ಅಲ್ಲ ಅದರಲ್ಲಿ ಭ್ರಷ್ಟಾಚಾರದ ವಾಸನೆಯೂ ಅಡರುತ್ತಿದೆ. ಕೋವಿಡ್-19 ಅನ್ನು ತಡೆಹಿಡಿಯುವ ಮರೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆದಿರುವುದು ಈಗ ನಿಚ್ಚಳವಾಗುತ್ತಿದೆ. ಇದೇ ಸಂದರ್ಭವನ್ನು ರೈತ ನಾಯಕ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಹಲವು ರೈತವಿರೋಧಿ ಕಾನೂನುಗಳನ್ನು ರೈತ ಸಂಘಟನೆಗಳ ವಿರೋಧದ ನಡುವೆಯೂ ಅಪ್ರಜಾಸತ್ತಾತ್ಮಕವಾಗಿ ಸುಗ್ರೀವಾಜ್ಞೆಗಳ ಮೂಲಕ ಜಾರಿ ಮಾಡಿದೆ.
- ಸೂರ್ಯ ಚಿಂತಾಮಣಿ, ಯುವ ಬರಹಗಾರರು.


