Homeಕರ್ನಾಟಕಯಡಿಯೂರಪ್ಪ ನಿರ್ಗಮನ; ಜಾತಿ ಓಲೈಕೆ ಮತ್ತು ದೆಹಲಿ ದರ್ಬಾರ್‌ನ ಮುಂದಿನ ನಡೆಗಳೇನಾಗಿರಬಹುದು?

ಯಡಿಯೂರಪ್ಪ ನಿರ್ಗಮನ; ಜಾತಿ ಓಲೈಕೆ ಮತ್ತು ದೆಹಲಿ ದರ್ಬಾರ್‌ನ ಮುಂದಿನ ನಡೆಗಳೇನಾಗಿರಬಹುದು?

- Advertisement -
- Advertisement -

ಬಿಜೆಪಿಯ ಹೈಕಮಾಂಡ್ ಆದೇಶದ ಮೇರೆಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ’ಸ್ವಯಂ ಪ್ರೇರಿತರಾಗಿ’ ಅಧಿಕಾರ ತ್ಯಜಿಸಿದ್ದಾರೆ. ಪ್ರಬಲ ರಾಷ್ಟ್ರೀಯ ಪಕ್ಷವೊಂದು ರಾಜ್ಯದ ಮುಖ್ಯಮಂತ್ರಿಯೊಬ್ಬರನ್ನು ಹೀಗೆ ಕೆಳಗಿಳಿಸುವುದರಲ್ಲಿ ಹೊಸತೇನೂ ಇಲ್ಲ. ಹಿಂದೆ ಕಾಂಗ್ರೆಸ್ ಹೀಗೆಲ್ಲಾ ಮಾಡುತ್ತಿದ್ದಾಗ ಬಿಜೆಪಿಯವರು ಅದನ್ನು ’ಹೈಕಮಾಂಡ್ ಸಂಸ್ಕೃತಿ’, ’ಲಕೋಟೆ ಸಂಸ್ಕೃತಿ’ ಎಂಬಿತ್ಯಾದಿ ತರಹೇವಾರಿ ಪದಗಳಿಂದ ಅಣಕಿಸುತ್ತಿದ್ದರು. ಕಾಂಗ್ರೆಸ್ ಹಿಂದೆ ಮಾಡುತ್ತಿದ್ದ ಎಲ್ಲವನ್ನೂ ಬಿಜೆಪಿ ಈಗ ಹೆಚ್ಚು ಸಮರ್ಥವಾಗಿಯೂ ನಾಜೂಕಾಗಿಯೂ ಮಾಡುತ್ತಿದೆ ಎನ್ನುವುದಕ್ಕೆ ಇದು ಮತ್ತೊಂದು ನಿದರ್ಶನ ಅನ್ನಿಸುತ್ತದೆ. ಯಾಕೆಂದರೆ, ಕೊನೆಗೂ ಬಿಜೆಪಿ ಯಡಿಯೂರಪ್ಪನವರನ್ನು ಯಾವ ಕಾರಣಕ್ಕಾಗಿ ಅಧಿಕಾರ ಬಿಡುವಂತೆ ಸೂಚನೆ ನೀಡಿತು ಎನ್ನುವುದನ್ನು ಸಾರ್ವಜನಿಕವಾಗಿ ಹೇಳಲೇ ಇಲ್ಲ. ಕಾಂಗ್ರೆಸ್ 1990ರಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಹೀಗೆಯೇ ಒಂದು ರೀತಿ ನಾಟಕೀಯವಾಗಿ ಕೆಳಗಿಳಿಸಿತು. ಆಗ ಕಾಂಗ್ರೆಸ್‌ಗೆ ಹೇಳಿಕೊಳ್ಳುವುದಕ್ಕೆ ಒಂದು ಕಾರಣವಾದರೂ ಇತ್ತು. ವೀರೇಂದ್ರ ಪಾಟೀಲರು ಅಸೌಖ್ಯದಿಂದ ಆಸ್ಪತ್ರೆಯಲ್ಲಿದ್ದರು. ಯಡಿಯೂರಪ್ಪ ಹಾಗಲ್ಲ. ಅವರು ನನಗಿನ್ನೂ ಚೈತನ್ಯವಿದೆ. ನನಗೆ ಇನ್ನೂ ಹಲವಾರು ವರ್ಷಗಳ ಕಾಲ ಕೆಲಸ ಮಾಡುವ ಮನಸ್ಸಿದೆ ಅಂತ ಹೇಳುತ್ತಿದ್ದಾರೆ. ವಿದಾಯ ಭಾಷಣದ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದಾರೆ.

ವೀರೇಂದ್ರ ಪಾಟೀಲ್ ಅವರನ್ನು ಅವಮಾನಕಾರಿ ರೀತಿಯಲ್ಲಿ ಕಾಂಗ್ರೆಸ್ ಕೆಳಗಿಳಿಸಿದ್ದಕ್ಕೆ ವ್ಯಗ್ರಗೊಂಡ ಲಿಂಗಾಯತ ಸಮುದಾಯ ಕಾಂಗ್ರೆಸ್‌ನಿಂದ ದೂರವಾಯಿತು ಅಂತ ಕರ್ನಾಟಕದ ರಾಜಕೀಯ ಚರಿತ್ರೆ ಹೇಳುತ್ತದೆ. ಕಾಂಗ್ರೆಸ್ ಮೇಲಿನ ಲಿಂಗಾಯತರ ಆ ಕೋಪ ಈಗ ಯಡಿಯೂರಪ್ಪನವರ ಕಣ್ಣೀರಿನ ಕಾರಣಕ್ಕೆ ಬಿಜೆಪಿಯತ್ತ ತಿರುಗೀತೇ? ಆ ಕಾರಣಕ್ಕಾಗಿಯೇ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಗಿದೆಯೇ ಎಂಬ ಪ್ರಶ್ನೆ ಏಳುತ್ತದೆ.

ಬಿಜೆಪಿ ಕರ್ನಾಟಕದಲ್ಲಿ ಎರಡು ಬಾರಿ ಸರಕಾರ ರಚಿಸುವಂತಾಗಲು ಲಿಂಗಾಯತ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ನೀಡಿದ ಬೆಂಬಲವೇ ಕಾರಣ ಎನ್ನುವುದರಲ್ಲಿ ಈಗ ಯಾರಿಗೂ ಸಂಶಯ ಉಳಿದಿಲ್ಲ. ಆದರೆ,
ಲಿಂಗಾಯತ ಸಮುದಾಯಕ್ಕೆ ಬಿಜೆಪಿಯ ಜತೆಗಿರುವ ಸಂಬಂಧ ಬಿಜೆಪಿಯನ್ನು ಸಾಂಪ್ರದಾಯಿಕವಾಗಿ ಬೆಂಬಲಿಸುತ್ತಾ ಬಂದ ಸಮುದಾಯಗಳ ಜೊತೆಗೆ ಇರುವಂತದ್ದಲ್ಲ. ವೀರೇಂದ್ರ ಪಾಟೀಲರ ಪದಚ್ಯುತಿಯ ನಂತರ ಲಿಂಗಾಯಿತರು ರಾಜಕೀಯವಾಗಿ ಅನಾಥರಾದರು ಎನ್ನುವ ಹಂತದಲ್ಲೂ ಲಿಂಗಾಯತರೇನೂ ಏಕಾಏಕಿ ಬಿಜೆಪಿಯತ್ತ ಮುಖ ಮಾಡಿರಲಿಲ್ಲ. ಲಿಂಗಾಯತರ ಬೆಂಬಲ ಬಿಜೆಪಿಯತ್ತ ಗಣನೀಯವಾಗಿ ವಾಲಿದ್ದು 2006ರ ಬಿಜೆಪಿ-ಜಾತ್ಯಾತೀತ ಜನತಾದಳ ಸರಕಾರದಲ್ಲಿ ಆದ ಒಪ್ಪಂದದ ಪ್ರಕಾರ ಜನತಾದಳ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದೆ ಹೋದ ಪ್ರಕರಣದ ನಂತರ. ಒಕ್ಕಲಿಗ ಮುಖ್ಯಮಂತ್ರಿ ಜನತಾದಳದ ಕುಮಾರಸ್ವಾಮಿಯವರು ಬಿಜೆಪಿಯಿಂದ ಮುಖ್ಯಮಂತ್ರಿಯಾಗಬೇಕಿದ್ದ ಲಿಂಗಾಯತ ಯಡಿಯೂರಪ್ಪನವರನ್ನು ವಂಚಿಸಿದ್ದು ಸಮುದಾಯವನ್ನು ಕೆರಳಿಸಿತು. ಅದರ ಲಾಭ ಬಿಜೆಪಿ ಪಡೆಯಿತು. ಮತ್ತೆ 2013ರಲ್ಲಿ ಯಡಿಯೂರಪ್ಪ ಬಿಜೆಪಿಯಿಂದ ಹೊರಹೋದಾಗ ಸಮುದಾಯದ ಮತಗಳೂ ಹಂಚಿಹೋಗಿ ಬಿಜೆಪಿ ನೆಲಕಚ್ಚಿದ್ದು ಕೂಡಾ ಯಡಿಯೂರಪ್ಪ ಇಲ್ಲದೆ ಹೋದರೆ ಲಿಂಗಾಯತರ ಬೆಂಬಲ ಬಿಜೆಪಿಗೆ ಇಲ್ಲ ಎನ್ನುವ ಅಂಶವನ್ನು ಮತ್ತೆ ಸಮರ್ಥಿಸುತ್ತದೆ. ಲಿಂಗಾಯತರ ಹೊರತಾಗಿ ಬಿಜೆಪಿಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಜನ ಬೆಂಬಲ ಅಂತೇನೂ ಇಲ್ಲ – ಇದ್ದರೂ ಅದು ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿದೆ. ಆದುದರಿಂದ ಯಡಿಯೂರಪ್ಪ ಹೊಸ ಸರ್ಕಾರದಿಂದ ದೂರ ಸರಿದು ನಿಂತರೆ ಲಿಂಗಾಯತ-ಬಿಜೆಪಿ ಸಂಬಂಧ ಹೇಗಿರಬಹುದು ಎನ್ನುವುದು ಕುತೂಹಲದ ಪ್ರಶ್ನೆಯಾಗಿ ಈಗ ಮೇಲೆದ್ದಿರುವುದು.

ಲಿಂಗಾಯತ ಮಠಗಳ ಮುಖ್ಯಸ್ಥರಲ್ಲಿ ಹೆಚ್ಚಿನವರು ಲಿಂಗಾಯಿತರು ಮುಖ್ಯಮಂತ್ರಿ ಸ್ಥಾನದಲ್ಲಿರಬೇಕು ಎಂಬುದಕ್ಕಿಂತ ಯಡಿಯೂರಪ್ಪನವರನ್ನು ಇಳಿಸಬಾರದು ಎಂದು ಪಟ್ಟು ಹಿಡಿದಿದ್ದರ ಹಿಂದೆ ಇಂತಹದೊಂದು ಸೂಚನೆಯಿತ್ತು. ಅವರನ್ನು ಕೆಳಗಿಳಿಸಿದರೆ ಸಮುದಾಯದ ಬೆಂಬಲ ನಿಲ್ಲಿಸುತ್ತೇವೆ ಅಂತ ಬೆದರಿಕೆ ಬೇರೆ ಹಾಕಿದರು. ಹೀಗಾಗಿ ಯಡಿಯೂರಪ್ಪನವರನ್ನು ಇಳಿಸಲೇಬೇಕೆಂದು ತೀರ್ಮಾನಿಸಿದ್ದ ಬಿಜೆಪಿಯ ಹೈಕಮ್ಯಾಂಡ್ ಮತ್ತೊಬ್ಬ ಲಿಂಗಾಯಿತರಿಗೆ ಮಣೆ ಹಾಕಿದೆ. ಆ ಮೂಲಕ ಮುಖ್ಯಮಂತ್ರಿ ಆಯ್ಕೆಯಿಂದಲೇ ಕರ್ನಾಟಕದಲ್ಲಿ ಒಂದು ದೊಡ್ಡ ಓಲೈಕೆ ಪರ್ವವೊಂದು ಆರಂಭವಾಗಿದೆ. ಮೊದಲಿಗೆ ಕೋಪಗೊಂಡಿರುವ ಲಿಂಗಾಯತರ ಓಲೈಕೆ, ಅದು ಅತಿಯಾಯಿತು ಎಂದು ಉಳಿದ ಸಮುದಾಯಗಳು ಕೆರಳಿದರೆ ಅವುಗಳ ಓಲೈಕೆ. ಒಂದು ಕಾಲದಲ್ಲಿ ಅಲ್ಪಸಂಖ್ಯಾತ ಧರ್ಮಗಳ ಓಲೈಕೆ ಆಗುತ್ತಿದೆ ಅಂತ ಬೊಬ್ಬಿಡುತಿದ್ದ ಬಿಜೆಪಿ ಇನ್ನು ಕರ್ನಾಟಕದಲ್ಲಿ ಜಾತಿಜಾತಿಗಳ ಓಲೈಕೆಯಲ್ಲಿ ತೊಡಗಬೇಕಾದ ಸ್ಥಿತಿಯಲ್ಲಿ ಸಿಲುಕಿದಂತೆ ತೋರುತ್ತದೆ. ಒಂದುವೇಳೆ ಮತ್ತೆ ಲಿಂಗಾಯತರೂ ಸೇರಿದಂತೆ ವಿವಿಧ ಸಮುದಾಯದವರು ಮೀಸಲಾತಿ ಹೆಚ್ಚಿಸುವ ಬೇಡಿಕೆ ಇಟ್ಟರಂತೂ ಮುಂದಿನ ಇಪ್ಪತ್ತು ತಿಂಗಳುಗಳ ಬಿಜೆಪಿಯ ರಾಜ್ಯಭಾರ ಇನ್ನಷ್ಟೂ ರಂಗೇರಲಿದೆ. ಬಹುಶಃ ನಿರ್ಗಮಿಸುತ್ತಿರುವ ಮುಖ್ಯಮಂತ್ರಿ ಕರ್ನಾಟಕಕ್ಕೆ ನೀಡಿದ ಬಹುದೂಡ್ಡ ಕೊಡುಗೆ ಎಂದರೆ ಅದು ಜಾತಿಗಳ ಅಭಿವೃದ್ಧಿಯ ಹೆಸರಿನಲ್ಲಿ ಓಲೈಕೆಯ ರಾಜಕಾರಣದ ಪರ್ವವೊಂದನ್ನು ಉದ್ಘಾಟಿಸಿದ್ದು. ಮಠಗಳಿಗೆ ಅನುದಾನ, ಆ ಜಾತಿ ಅಭಿವೃದ್ಧಿ ನಿಗಮ, ಈ ಜಾತಿ ಅಭಿವೃದ್ಧಿ ನಿಗಮ ಅಂತ ಅಭಿವೃದ್ಧಿಯನ್ನು ಜಾತಿಯಲ್ಲಿ ಅದ್ದಿ ತೆಗೆದ ಯಡಿಯೂರಪ್ಪ ಮಾದರಿಯನ್ನು ಕಾಂಗ್ರೆಸ್ಸಿನವರೇ ಒಪ್ಪಿಕೊಂಡಿದ್ದಾರೆ. ಮಠಗಳಿಗೆ ಅನುದಾನ ನೀಡುವ ಕೆಟ್ಟ ಪರಂಪರೆಯನ್ನು ಸಿದ್ಧರಾಮಯ್ಯರಂತಹವರೇ ಮುಂದುವರೆಸಿದ್ದು ನಮ್ಮ ಕಣ್ಣ ಮುಂದಿರುವಾಗ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಓಲೈಕೆಯ ಪರಂಪರೆಯ ಇನ್ನೊಂದು ಮಜಲನ್ನು ಪ್ರವೇಶಿಸದೆ ಇರುತ್ತಾರೆಯೇ? ಒಂದುವೇಳೆ ಮುಂಬರುವ ದಿನಗಳಲ್ಲಿ ಲಿಂಗಾಯತರ ಬೆಂಬಲ ಕುಸಿದರೆ ಅದನ್ನು ಸರಿದೂಗಿಸಲು ಇರಲಿ ಎಂಬಂತೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸಣ್ಣಸಣ್ಣ ಜಾತಿಗಳನ್ನು ಓಲೈಸುವ ಪರ್ವವೊಂದನ್ನು ಕರ್ನಾಟಕದಲ್ಲಿ ಪ್ರಾರಂಭಿಸಿತ್ತು. ಇದು ಕೂಡಾ ದೊಡ್ಡ ಮಟ್ಟದಲ್ಲಿ ಮುಂದುವರಿಯಬಹುದು.

ಇನ್ನೊಂದು ವಿಷಯ. ಇನ್ನು ಮುಂದೆ ಕರ್ನಾಟಕದ ಆಡಳಿತ ನಡೆಯುವುದು ನೇರವಾಗಿ ದೆಹಲಿಯಿಂದ ಆಗಿರಬಹುದೇ ಎನ್ನುವ ಒಂದು ಆತಂಕ ಕೂಡಾ ರಾಜ್ಯದ ಜನರನ್ನು ಈಗ ಕಾಡಬೇಕು. ಯಾಕೆಂದರೆ, ಬಿಜೆಪಿ ಯಾವ್ಯಾವ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆಯೋ ಅಲ್ಲೆಲ್ಲಾ ಮುಖ್ಯಮಂತ್ರಿಗಳು ಅಂತ ಇರುವುದು ನೆಪಮಾತ್ರಕ್ಕೆ. ಇದಕ್ಕೆ ಸ್ವಲ್ಪ ಅಪವಾದ ಎನ್ನುವಂತೆ ಉತ್ತರ ಪ್ರದೇಶ ಇರಬಹುದೇನೋ. ಉಳಿದಂತೆ, ಬಿಜೆಪಿಯ ಆಡಳಿತ ಇರುವ ರಾಜ್ಯಗಳನ್ನು ಪಕ್ಷದ ಹೈಕಮಾಂಡ್ ನೇರವಾಗಿ ಆಳುತ್ತಿದೆ. ಕೆಲವೊಂದು ರಾಜ್ಯಗಳಲ್ಲಿ ಕೇಂದ್ರದಿಂದ ರವಾನಿಸಲ್ಪಟ್ಟ ಅಧಿಕಾರಿಗಳ ತಂಡವೊಂದು ಆಯಕಟ್ಟಿನ ಜಾಗದಲ್ಲಿ ಕುಳಿತು ನಿರ್ಧಾರಗಳನ್ನು ಕೈಗೊಳ್ಳುತ್ತಿವೆ ಅಂತ ವರದಿಗಳಿವೆ. ಇನ್ನು ಮುಂದೆ ಕರ್ನಾಟಕದ ಕತೆಯೂ ಇದುವೇ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಬಸವರಾಜ ಬೊಮ್ಮಾಯಿ ಯಡಿಯೂರಪ್ಪನವರ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಾತಿ ಬೆಂಬಲವನ್ನೂ ಹೊಂದಿಲ್ಲ; ಬೆನ್ನಿಗೆ ಶಾಸಕರ ದೊಡ್ಡ ಹಿಂಡನ್ನೂ ಹೊಂದಿಲ್ಲ; ಜನನಾಯಕರೂ ಅಲ್ಲ. ಇವೆಲ್ಲಾ ಕಾರಣಗಳಿಂದ ಕರ್ನಾಟಕವು ಚುನಾವಣೆಯ ಹೊಸ್ತಿಲಲ್ಲಿ ಇರುವ ಕಾರಣ ಇಲ್ಲಿನ ಆಡಳಿತದ ಎಲ್ಲಾ ಆಗುಹೋಗುಗಳೂ ದೆಹಲಿಯ ನೇರ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇನ್ನೂ ಹೆಚ್ಚು.ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಲು ಇದ್ದಿರಬಹುದಾದ ಇತರ ಕಾರಣಗಳ ಜತೆ ಅವರು ಮುಂದುವರಿದಿದ್ದರೆ ದೆಹಲಿಯ ನೇರ ಆಡಳಿತಕ್ಕೆ ಅವರು ತಡೆ ಒಡ್ಡುತ್ತಿದ್ದರು ಎಂಬ ಆತಂಕವೂ ಸೇರಿಕೊಂಡಿದೆ ಅನ್ನಿಸುತ್ತದೆ. ಹೋದ ಎರಡು ವರ್ಷಗಳಲ್ಲಿ ಸ್ವತಃ ಯಡಿಯೂರಪ್ಪನವರೇ ಬಿಜೆಪಿಯ ಹೈಕಮಾಂಡ್ ಮುಂದೆ ತಗ್ಗಿ ಬಗ್ಗಿ, ಎಲ್ಲ ಅವಮಾನಗಳನ್ನು ಸಹಿಸಿಕೊಂಡೇ ಆಡಳಿತ ನಡೆಸಿದ್ದರು. ಅದನ್ನು ಅವರು ನೇರವಾಗಿಯೂ, ಪರೋಕ್ಷವಾಗಿಯೂ ತಮ್ಮ ವಿದಾಯ ಭಾಷಣದಲ್ಲೂ ಹೇಳಿದ್ದಾರೆ.

ಆದರೂ, ಬಿಜೆಪಿಯ ಹೈಕಮಾಂಡ್‌ನ ಪ್ರಮುಖರಿಗೆ ತಮಗೆ ಬೇಕಾದಂತೆ ನಡೆಸಿಕೊಳ್ಳಲು ಸ್ವಲ್ಪ ಕಷ್ಟವಾಗಿದ್ದ ಏಕೈಕ ಪ್ರಾದೇಶಿಕ ನಾಯಕ ಅಂತ ಇದ್ದರೆ ಯಡಿಯೂರಪ್ಪ ಮಾತ್ರ ಆಗಿದ್ದರು. ಇನ್ನು ಕರ್ನಾಟಕವನ್ನು ತಮಗೆ ಬೇಕಾದಂತೆ ಆಳಲು ದೆಹಲಿಯ ನಾಯಕರಿಗೆ ತಡೆಯೊಡ್ಡುವವರು ಯಾರೂ ಇಲ್ಲ. ಮುಖ್ಯಮಂತ್ರಿಯ ಬದಲಾವಣೆ ಎಂಬ ಬಿಜೆಪಿಯ ಆಂತರಿಕ ವಿಚಾರ, ಸಂವಿಧಾನಾತ್ಮಕ ಒಕ್ಕೂಟ ತತ್ವದ ಉಲ್ಲಂಘನೆಯ ಪ್ರಶ್ನೆ ಆಗುವುದು ಇಲ್ಲಿ. ಮೇಲ್ನೋಟಕ್ಕೆ ಎಲ್ಲವೂ ಸಂವಿಧಾನಾತ್ಮಕವಾಗಿಯೇ ನಡೆಯುತ್ತಿದೆ. ರಾಜ್ಯದಲ್ಲಿ ಸಾಂವಿಧಾನಿಕವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಮುಖ್ಯಮಂತ್ರಿ ಇರುತ್ತಾರೆ. ಒಂದು ಮಂತ್ರಿ ಮಂಡಲವೂ ಇರುತ್ತದೆ. ಆದರೆ ವಾಸ್ತವದಲ್ಲಿ ಆ ಮುಖ್ಯಮಂತ್ರಿ ಕೇಂದ್ರ ಸರಕಾರದ ಸಾಮಂತರಂತೆ ಅಧಿಕಾರ ನಡೆಸುತ್ತಿರುತ್ತಾರೆ.

ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಬಸವರಾಜ್‌ ಬೊಮ್ಮಾಯಿ! | Naanu gauri

ರಾಜ್ಯವೊಂದರಲ್ಲಿ ಒಂದೋ ಪ್ರಬಲ ನಾಯಕ ಇರಬೇಕು. ಇಲ್ಲವೇ ಒಂದು ಪ್ರಾದೇಶಿಕ ಪಕ್ಷದ ಆಡಳಿತ ಇರಬೇಕು. ಎರಡೂ ಇಲ್ಲದ ಸನ್ನಿವೇಶದಲ್ಲಿ, ದೈತ್ಯ ಶಕ್ತಿಯ ರಾಷ್ಟ್ರೀಯ ಪಕ್ಷವೊಂದಕ್ಕೆ ರಾಜ್ಯದ ಅಧಿಕಾರ ವಹಿಸಿಕೊಟ್ಟ ಕಾರಣಕ್ಕೆ ಕರ್ನಾಟಕದ ಜನ ಈ ಅವಮಾನವನ್ನು ಸಹಿಸಬೇಕು. ಅವಮಾನ ಎಂದದ್ದು ಯಡಿಯೂರಪ್ಪನವರಿಗೆ ಆದ ಅವಮಾನದ ಕುರಿತಾಗಿ ಅಲ್ಲ. ಮುಖ್ಯಮಂತ್ರಿಯ ಬದಲಾವಣೆಯ ಜತೆಗೆ ರಾಜ್ಯವು ಕೇಂದ್ರದ ದಾಸ್ಯಕ್ಕೆ ಒಳಪಡಬೇಕಾದ ಸಾಧ್ಯತೆಯೊಂದು ತೆರೆದುಕೊಳ್ಳುತ್ತದೆ ಎನ್ನುವ ಕಾರಣಕ್ಕೆ ಆ ಪದ ಬಳಸಿದ್ದು. ಇದರ ಜತೆಗೆ ಬಿಜೆಪಿಗೆ ಹಿಂದುತ್ವದ ರಾಜಕೀಯವನ್ನು ನಿರ್ಭಿಡೆಯಿಂದ ಮಾಡಲು ಯಡಿಯೂರಪ್ಪನವರು ಅಡ್ಡಿಯಾಗಿದ್ದರು ಎನ್ನುವ ಕಾರಣಕ್ಕೂ ಕೂಡಾ ಅವರು ಹೈಕಮಾಂಡ್‌ನವರಿಗೆ ಸಹ್ಯವಾಗುತ್ತಿರಲಿಲ್ಲ ಎನ್ನುವ ಮಾತಿದೆ. ಅದರಲ್ಲಿ ನಿಜಾಂಶ ಇಲ್ಲ ಎನ್ನುವ ಹಾಗಿಲ್ಲ. ಅಂದರೆ, ಈ ಬದಲಾವಣೆಯೊಂದಿಗೆ ಆಡಳಿತವನ್ನು ದೆಹಲಿಯ ದೊರೆಗಳ ಕೈಗೆ ಮತ್ತು ರಾಜಕೀಯವನ್ನು ಹಿಂದುತ್ವವಾದಿಗಳ ಕೈಗೆ ಒಪ್ಪಿಸಿದ ಹಾಗೆ ಎಂದಾಯಿತು. ಹಾಗಾಗಿ ಕರ್ನಾಟಕ ಈಗ ಕಾಣುತ್ತಿರುವುದು ಕೇವಲ ಮುಖ್ಯಮಂತ್ರಿಯ ಬದಲಾವಣೆಯನ್ನಷ್ಟೇ ಅಲ್ಲ. ಒಂದು ರಾಜಕೀಯ ಮತ್ತು ಆಡಳಿತಾತ್ಮಕ ಸ್ಥಿತ್ಯಂತರದ ಆರಂಭವನ್ನು. ದೆಹಲಿಯ ಆಡಳಿತವು ರಾಜ್ಯಗಳ ಕತ್ತು ಹಿಸುಕುವುದು ಈಗ ಶುರುವಾಗಿದ್ದಲ್ಲ; ಆದರೆ ಈಗ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಲಿದೆ.

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು


ಇದನ್ನೂ ಓದಿ: ಆಷಾಢದ ಗಾಳಿಯಲ್ಲಿ ಹಾರಿದ ಪಟ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಹೊಸ ಮುಖ್ಯಮಂತ್ರಿ ಒಕ್ಕೂಟ ತತ್ವದ ಆದರ್ಶಕ್ಕೆ ಆಗ್ರಹಿಸಿ ನಿಲ್ಲಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...