Homeಮುಖಪುಟಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ: ಆರ್‌ಎಸ್‌ಎಸ್‌ ಶಿಬಿರಗಳಲ್ಲಿ ಲೈಂಗಿಕ ದೌರ್ಜನ್ಯ ಆರೋಪ

ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ: ಆರ್‌ಎಸ್‌ಎಸ್‌ ಶಿಬಿರಗಳಲ್ಲಿ ಲೈಂಗಿಕ ದೌರ್ಜನ್ಯ ಆರೋಪ

- Advertisement -
- Advertisement -

ಕೇರಳದ ತಿರುವನಂತಪುರದ ತಂಪನೂರಿನ ಲಾಡ್ಜ್ ಕೊಠಡಿಯಲ್ಲಿ ಗುರುವಾರ (ಅ.9) 26 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆನಂದು ಅಜಿ ಎಂಬಾತನ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗ್ತಿದೆ.

ಕೊಟ್ಟಾಯಂ ಜಿಲ್ಲೆಯ ತಂಪಲಕಾಡ್ ನಿವಾಸಿ ಆನಂದು, ಸಾಯುವ ಮುನ್ನ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೆಡ್ಯೂಲ್ ಮಾಡಿಟ್ಟಿದ್ದರು ಎನ್ನಲಾದ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ “ಬಾಲ್ಯದಲ್ಲಿ ಆರ್‌ಎಸ್‌ಎಸ್‌ ಕ್ಯಾಂಪ್‌ನಲ್ಲಿ ಹಲವು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ಪರಿಣಾಮ ತೀವ್ರ ತರಹದ ಮಾನಸಿಕ ಖಿನ್ನತೆಗೆ ಜಾರಿದ್ದೆ. ಸಾವಲ್ಲದೆ ನನಗೆ ಬೇರೆ ದಾರಿ ಇರಲಿಲ್ಲ” ಎಂದು ಬರೆಯಲಾಗಿದೆ.

ಆನಂದು ಅವರ ಸಾವು ಮತ್ತು ಅವರು ಆರ್‌ಎಸ್‌ಎಸ್‌ ಸದಸ್ಯರ ವಿರುದ್ದ ಮಾಡಿರುವ ಆರೋಪಗಳು ಕೇರಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದಿನೇ ದಿನೇ ಪ್ರಕರಣ ದೇಶದ ಗಮನ ಸೆಳೆಯುತ್ತಿದೆ.

ಆನಂದು ಬರೆದಿದ್ದಾರೆ ಎನ್ನಲಾದ ಡೆತ್‌ ನೋಟ್‌ ಈಗಲೂ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲಭ್ಯವಿದೆ. ಅದರಲ್ಲಿ ತನ್ನ ಬಾಲ್ಯ ಕಾಲದಲ್ಲಿ ಆರ್‌ಎಸ್‌ಎಸ್‌ ಕ್ಯಾಂಪ್‌ನಲ್ಲಿ ಸಂಘದ ಕಾರ್ಯಕರ್ತರು ಹೇಗೆ ಲೈಂಗಿಕ ದೌರ್ಜನ್ಯ ಎಸಗಿದರು. ಪರಿಣಾಮ ತಾನು ಯಾವ ರೀತಿಯ ಮಾನಸಿಕ ಹಿಂಸೆ ಅನುಭವಿಸಿದೆ. ಇತರ ಮಕ್ಕಳು ಕೂಡ ಸಂಘದ ಕ್ಯಾಂಪ್‌ನಲ್ಲಿ ಯಾವ ರೀತಿಯ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಲಾಗಿದೆ. ಗಂಭೀರ ಆರೋಪಗಳನ್ನು ಮಾಡಲಾಗಿದೆ.

“ಯಾವುದೇ ಹುಡುಗಿ, ಪ್ರೇಮ ಪ್ರಕರಣ, ಸಾಲ ಅಥವಾ ಅಂತಹ ಯಾವುದರ ಕಾರಣಕ್ಕೂ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ನನ್ನ ಆತಂಕ ಮತ್ತು ಖಿನ್ನತೆಯ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೇನೆ. ಅಲ್ಲದೆ, ನನ್ನ ಔಷಧಿಗಳಿಂದಾಗಿ. ನನಗೆ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ” ಎಂದು ಆನಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಾರೆ.

“ಒಬ್ಬ ವ್ಯಕ್ತಿ ಮತ್ತು ಒಂದು ಸಂಘಟನೆಯನ್ನು ಹೊರತುಪಡಿಸಿ ನನಗೆ ಯಾರ ಮೇಲೂ ಕೋಪವಿಲ್ಲ. ಆ ಸಂಘಟನೆ ಆರ್‌ಎಸ್ಎಸ್‌. ನನ್ನ ತಂದೆ (ಬಹಳ ಒಳ್ಳೆಯ ವ್ಯಕ್ತಿ) ನನ್ನನ್ನು ಅದಕ್ಕೆ ಸೇರಿಸಿದರು. ಅಲ್ಲಿಯೇ ನಾನು ಸಂಘಟನೆ ಮತ್ತು ಆ ವ್ಯಕ್ತಿಯಿಂದ ಜೀವಮಾನದ ಆಘಾತವನ್ನು ಅನುಭವಿಸಿದೆ” ಎಂದು ಆನಂದು ಹೇಳಿದ್ದಾರೆ.

ತನ್ನನ್ನು ತಾನು ಅತ್ಯಾಚಾರದ ‘ಬಲಿಪಶು’ ಎಂದು ಹೇಳಿಕೊಂಡಿರುವ ಆನಂದು, ತಾನು ಅನುಭವಿಸಿದ ದೌರ್ಜನ್ಯವನ್ನು ವಿವರಿಸಿದ್ದಾರೆ. “ನಾನು ಮಗುವಾಗಿದ್ದಾಗ ಒಬ್ಬ ವ್ಯಕ್ತಿಯಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ. ಆರ್‌ಎಸ್ಎಸ್‌ನ ಹಲವಾರು ಸದಸ್ಯರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರೆಲ್ಲ ಯಾರೆಂದು ನನಗೆ ತಿಳಿದಿಲ್ಲ. ಆದರೆ, ನಾನು ಕೇವಲ 3-4 ವರ್ಷದವನಿದ್ದಾಗ ನನ್ನ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಯ ಬಗ್ಗೆ ನಾನು ಬಹಿರಂಗಪಡಿಸುತ್ತೇನೆ” ಎಂದಿದ್ದಾರೆ.

“ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಸಕ್ರಿಯ ಸದಸ್ಯ, ನೆರೆಮನೆಯವರು ಮತ್ತು ಸಹೋದರನಂತೆ ನಂಬಿಕಸ್ಥರಾಗಿದ್ದ ‘ಎನ್ಎಂ’ ಎಂಬ ವ್ಯಕ್ತಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ದೌರ್ಜನ್ಯದಿಂದಾಗಿ ನಂತರದ ಜೀವನದಲ್ಲಿ ತನಗೆ ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ಇರುವುದು ಪತ್ತೆಯಾಯಿತು” ಎಂದು ಆನಂದು ಹೇಳಿದ್ದಾರೆ.

“ಆತ ನಿರಂತರವಾಗಿ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದ. ನನ್ನ ದೇಹಕ್ಕೆ ಬಹಳಷ್ಟು ಹಾನಿ ಮಾಡಿದ್ದಾನೆ. ನಾನು ಅವನಿಗೆ ಲೈಂಗಿಕ ಸಾಧನದಂತೆ ಇದ್ದೆ. ದುಃಖಕರ ಸಂಗತಿಯೆಂದರೆ, ನನಗೆ ಒಸಿಡಿ ಇರುವುದು ಪತ್ತೆಯಾದಾಗ ಮಾತ್ರ ಈ ದೌರ್ಜನ್ಯ ನನ್ನ ಮಾನಸಿಕ ಅಸ್ವಸ್ಥತೆಗೆ ಕಾರಣ ಎಂದು ನನಗೆ ಅರಿವಾಯಿತು. ಅಲ್ಲಿಯವರೆಗೆ, ಇದು ನನಗೆ ಯಾವುದೇ ಸಮಸ್ಯೆಗಳನ್ನು ಉಂಟು ಮಾಡುವುದಿಲ್ಲ ಎಂದು ನಂಬಿದ್ದೆ. ಅವನು ಸಹೋದರನಂತೆ ಇದ್ದ. ನನ್ನ ಕುಟುಂಬವು ಅವನನ್ನು ಸಂಬಂಧಿಯಂತೆ ಪರಿಗಣಿಸಿತ್ತು” ಎಂದು ಆನಂದು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಶಿಬಿರಗಳಲ್ಲಿ ಸಂಘಟನೆಯ ಸದಸ್ಯರು ತೀವ್ರ ಲೈಂಗಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಆನಂದು ಆರೋಪಿಸಿದ್ದಾರೆ.

“ನಾನು ಆರ್‌ಎಸ್‌ಎಸ್ ಶಿಬಿರಗಳಲ್ಲಿಯೂ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ. ನನಗೆ ದೌರ್ಜನ್ಯ ಎಸಗಿದವರ ಹೆಸರುಗಳು ನೆನಪಿಲ್ಲ. ಆದರೆ, ಐಟಿಸಿ ಮತ್ತು ಒಟಿಸಿ ಶಿಬಿರಗಳಲ್ಲಿ ನನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ. ನನ್ನ ಮೇಲೆ ದೈಹಿಕ ಹಲ್ಲೆ ಮಾಡಲಾಗಿದೆ. ಯಾವುದೇ ಕಾರಣವಿಲ್ಲದೆ ಅವರು ನನ್ನನ್ನು ಲಾಠಿಯಿಂದ ಹೊಡೆಯುತ್ತಿದ್ದರು” ಎಂದು ಆನಂದು ಹೇಳಿಕೊಂಡಿದ್ದಾರೆ.

ಆರ್‌ಎಸ್‌ಎಸ್ ತೀವ್ರ ದೌರ್ಜನ್ಯ ಮತ್ತು ದ್ವೇಷದ ಮೂಲ ಎಂದಿರುವ ಆನಂದು, ಈ ಸಂಘಟನೆಯ ಸದಸ್ಯರೊಂದಿಗೆ ನಿಕಟ ಬಂಧಗಳನ್ನು ರೂಪಿಸಿಕೊಳ್ಳುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

“ಆರ್‌ಎಸ್‌ಎಸ್‌ ಹೊರತು ನಾನು ಸಂಪೂರ್ಣವಾಗಿ ದ್ವೇಷಿಸುವ ಬೇರೆ ಯಾವುದೇ ಸಂಘಟನೆ ಇಲ್ಲ. ನಾನು ಅವರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿರುವುದರಿಂದ ನನಗೆ ಅದು ಚೆನ್ನಾಗಿ ತಿಳಿದಿದೆ. ಆರ್‌ಎಸ್‌ಎಸ್ ಸದಸ್ಯರೊಂದಿಗೆ ಎಂದಿಗೂ ಸ್ನೇಹ ಬೆಳೆಸಬೇಡಿ. ಅವರು ನಿಮ್ಮ ಸ್ನೇಹಿತ ಮಾತ್ರವಲ್ಲ, ನಿಮ್ಮ ಕುಟುಂಬ, ತಂದೆ, ಸಹೋದರ ಅಥವಾ ಮಗನಾಗಿದ್ದರೂ ಸರಿ, ಅವರು ನಿಮ್ಮ ಜೀವನವನ್ನು ಹಾಳು ಮಾಡುತ್ತಾರೆ. ಅವರು ತುಂಬಾ ವಿಷವನ್ನು ಹೊತ್ತಿದ್ದಾರೆ. ಅವರು ನಿಜವಾಗಿ ದುರುಪಯೋಗ ಮಾಡುವವರು” ಎಂದು ಆನಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಶಿಬಿರಗಳಲ್ಲಿ ಇದೇ ರೀತಿಯ ದೌರ್ಜನ್ಯಕ್ಕೆ ಒಳಗಾಗಿರುವ ಹಲವಾರು ಮಕ್ಕಳನ್ನು ತಾನು ಬಲ್ಲೆ ಎಂದು ಆನಂದು ಹೇಳಿಕೊಂಡಿದ್ದಾರೆ.

“ನಾನು ವಿವರಿಸಿದ್ದು ಅವರು ನನಗೆ ಮಾಡಿದ್ದನ್ನು ಮಾತ್ರ. ಅವರು ಬಹಳಷ್ಟು ಮಕ್ಕಳ ಮೇಲೆ ಲೈಂಗಿಕವಾಗಿ ಮತ್ತು ದೈಹಿಕವಾಗಿ ದೌರ್ಜನ್ಯ ಎಸಗಿದ್ದಾರೆ. ನಾನು ಸಂಘಟನೆಯನ್ನು ತೊರೆದ ಕಾರಣ ಇದನ್ನು ಬಹಿರಂಗವಾಗಿ ಹೇಳಲು ಸಾಧ್ಯವಾಗಿದೆ. ನನ್ನ ಬಳಿ ಯಾವುದೇ ಪುರಾವೆಗಳಿಲ್ಲದ ಕಾರಣ ಯಾರೂ ನನ್ನನ್ನು ನಂಬುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ, ನನ್ನ ಜೀವನವೇ ನನ್ನ ಪುರಾವೆ. ನಾನು ಅನುಭವಿಸಿದ ಅನುಭವವನ್ನು ಇನ್ನೊಂದು ಮಗು ಅನುಭವಿಸಬಾರದು ಎಂದು ನಾನು ಇದನ್ನು ಮಾಡುತ್ತಿದ್ದೇನೆ” ಎಂದಿದ್ದಾರೆ.

ಅಂತಹ ಮಕ್ಕಳನ್ನು ರಕ್ಷಿಸಿ, ಅವರಿಗೆ ಕೌನ್ಸೆಲಿಂಗ್ ನೀಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿರುವ ಆನಂದು, ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣವನ್ನು ನೀಡುವುದನ್ನು ಮತ್ತು ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಮರ್ಥರಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ.

“ನಾನು ಅನುಭವಿಸಿದ್ದು ಜಗತ್ತಿನ ಯಾವುದೇ ಮಗುವಿಗೂ ಆಗಬಾರದು. ಪೋಷಕರು ಅದನ್ನು ಖಚಿತಪಡಿಸಿಕೊಳ್ಳಬೇಕು. ದೌರ್ಜನ್ಯದ ನಂತರ ಮಕ್ಕಳು ತಮ್ಮ ಭಾವನೆಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಾಗದಿರಬಹುದು. ಏಕೆಂದರೆ, ಅವರು ಭಯಭೀತರಾಗುತ್ತಾರೆ. ಪೋಷಕರು ಮಗುವಿನೊಂದಿಗೆ ಸಂಪರ್ಕವನ್ನು ಬೆಳೆಸಿಕೊಳ್ಳಬೇಕು, ಇದರಿಂದ ಅವರು ನಿಮ್ಮೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯವಾಗುತ್ತದೆ” ಎಂದಿದ್ದಾರೆ.

7 ಪುಟಗಳ ಪತ್ರದಲ್ಲಿ ಒಂದು ಕಾಲದಲ್ಲಿ ಆಪ್ತರಾಗಿದ್ದವರು ಕೂಡ ತಮ್ಮ ಮೇಲೆ ಕೋಪಗೊಂಡಿರುವುದು ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಟೀಕೆಯಿಂದಾಗಿಯೋ ಅಥವಾ ತನ್ನ ಸಹೋದರಿಯ ಅಂತರ್ಜಾತಿ ಸಂಬಂಧ ಸೇರಿದಂತೆ ಆಕೆಯ ಆಯ್ಕೆಗಳನ್ನು ಬೆಂಬಲಿಸಿದ್ದರಿಂದಲೋ ಎಂದು ಅವರು ಪ್ರಶ್ನೆ ಎತ್ತಿದ್ದಾರೆ.

“ಎಲ್ಲರೂ ಮನುಷ್ಯರೇ. ನಾನು ಧರ್ಮದ ಆಧಾರದ ಮೇಲೆ ಜನರನ್ನು ನಿರ್ಣಯಿಸಲು ಸಾಧ್ಯವಿಲ್ಲ, ನಿಮ್ಮ ಸುತ್ತಲಿರುವ ಎಲ್ಲರೂ ಮನುಷ್ಯರೇ” ಎಂದಿರುವ ಅನಂದು, ತನ್ನ ಜೀವನವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಕೆಲವು ಜನರು ಸಹೋದರಿ ಅಮ್ಮು ಅವರನ್ನು ದೂಷಿಸಬಹುದು. ಆದರೆ, ಇದರಲ್ಲಿ ಆಕೆಯ ತಪ್ಪು ಏನೂ ಇಲ್ಲ ಎಂದಿದ್ದಾರೆ.

“ಅವಳು ತನ್ನ ಜೀವನವನ್ನು ತಾನೇ ಆರಿಸಿಕೊಂಡಳು” ಎಂದಿರುವ ಆನಂದು, ಇಂತಹ ಹೆಜ್ಜೆ (ಆತ್ಮಹತ್ಯೆ) ಇಟ್ಟಿದ್ದಕ್ಕಾಗಿ ತಾಯಿ, ಸಹೋದರಿ ಮತ್ತು ಸೋದರ ಮಾವನಿಗೆ ಕ್ಷಮೆಯಾಚಿಸಿದ್ದಾರೆ.

ತನ್ನ ಬಳಿ ಔಪಚಾರಿಕ ವಿಲ್ ಏನೂ ಇಲ್ಲ ಎಂದಿರುವ ಆನಂದು, ತಾನು ಮಾಡಿರುವ ಸಾಲಗಳನ್ನು ತನ್ನ ಷೇರುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಡಿಜಿಟಲ್ ಚಿನ್ನದ ರೂಪದಲ್ಲಿ ಮಾಡಿರುವ ಉಳಿತಾಯದಿಂದ ತೀರಿಸಬೇಕೆಂದು ಕೋರಿದ್ದಾರೆ. ಅಗತ್ಯವಿದ್ದರೆ ತನ್ನ ಸ್ನೇಹಿತರ ಸಹಾಯ ಪಡೆಯುವಂತೆ ಹೇಳಿದ್ದಾರೆ.

ಕೇರಳದ ಆಡಳಿತಾರೂಢ ಸಿಪಿಐ(ಎಂ) ಮತ್ತು ಅದರ ಯುವ ಘಟಕ ಡಿವೈಎಫ್‌ಐ ಆನಂದು ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ಲಿಖಿತ ದೂರು ನೀಡಿವೆ.

ಆನಂದು ಸಾವಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿರುವ ಡಿವೈಎಫ್‌ಐ ಕೇರಳ ರಾಜ್ಯ ಸಮಿತಿ ಉಪಾಧ್ಯಕ್ಷ ವಿಕೆ ಸನೋಜ್, “ಈ ಘಟನೆಯು ‘ಆರ್‌ಎಸ್‌ಎಸ್‌ನ ಅಮಾನವೀಯ ಮುಖ’ವನ್ನು ಬಹಿರಂಗಪಡಿಸಿದೆ ಎಂದಿದ್ದಾರೆ.

“ಅನಂದು ಅವರ ಅಂತಿಮ ನುಡಿಗಳು ಸಮಾಜವು ಸಂಪೂರ್ಣವಾಗಿ ತಿರಸ್ಕರಿಸಬೇಕಾದ ಆರ್‌ಎಸ್‌ಎಸ್ ಉತ್ತೇಜಿಸುವ ಸಿದ್ಧಾಂತ ಮತ್ತು ಕ್ರಿಯೆಗಳ ಪ್ರಕಾರವನ್ನು ಬಹಿರಂಗಪಡಿಸುತ್ತವೆ” ಎಂದು ಸನೋಜ್ ಹೇಳಿದ್ದಾಗಿ ಮಕ್ತೂಬ್ ಮೀಡಿಯಾ ವರದಿ ಮಾಡಿದೆ.

“ನಮ್ಮ ಮಕ್ಕಳು ಇಂತಹ ಶಿಬಿರಗಳಿಗೆ ಹೋಗದಂತೆ ನಾವು ಜಾಗರೂಕರಾಗಿರಬೇಕು. ಆರ್‌ಎಸ್ಎಸ್‌ ಸದಸ್ಯ ಹತ್ತಿರದ ಸಂಬಂಧಿಯಾಗಿದ್ದರೂ ಕೂಡ, ಅವರೊಂದಿಗೆ ಸಖ್ಯ ಬೆಳೆಸಬಾರದು ಎಂದು ಆನಂದು ಹೇಳಿರುವುದು ಅವರಿಗೆ ಎಷ್ಟು ನೋವುಂಟುಮಾಡಿದೆ ಮತ್ತು ಆಘಾತವನ್ನುಂಟುಮಾಡಿದೆ ಎಂಬುದನ್ನು ತೋರಿಸುತ್ತದೆ” ಎಂದು ಸನೋಜ್ ಹೇಳಿದ್ದಾರೆ.

ಆನಂದು ಸಾವಿನ ಸಂದರ್ಭವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಸದ್ಯಕ್ಕೆ ಇದನ್ನು ಅಸ್ವಾಭಾವಿಕ ಸಾವು ಎಂದು ದಾಖಲಿಸಿಕೊಂಡಿದ್ದಾರೆ.

ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104

ಪಶ್ಚಿಮ ಬಂಗಾಳದಲ್ಲಿ ಒಡಿಶಾ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -