ನೇಪಾಳದಲ್ಲಿ ವಿದ್ಯಾರ್ಥಿಗಳು, ಯುವಜನರ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆ ಮಂಗಳವಾರ ಎರಡನೇ ದಿನವೂ ಮುಂದುವರೆದಿದ್ದು, ಪ್ರತಿಭಟನಾಕಾರರು ಪ್ರಧಾನಿಯ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಈ ನಡುವೆ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ನೂರಾರು ಪ್ರತಿಭಟನಾಕಾರರು ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಓಲಿ ಅವರ ಕಚೇರಿಗೆ ಪ್ರವೇಶಿಸಿದ ಸ್ವಲ್ಪ ಸಮಯದ ನಂತರ ಅವರು ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಕೆಲವು ಗಂಟೆಗಳ ಮೊದಲು, ಸೋಮವಾರ ನಡೆದ ಸಾವುನೋವುಗಳ ಹೊಣೆ ಹೊತ್ತುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಬಾಲ್ಕೋಟ್‌ನಲ್ಲಿರುವ ಪ್ರಧಾನಿಯ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನೇಪಾಳದ ನಾಲ್ಕನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾದ ರಾಷ್ಟ್ರೀಯ ಸ್ವತಂತ್ರ ಪಕ್ಷದ ಇಪ್ಪತ್ತೊಂದು ಸಂಸದರು ಮಂಗಳವಾರ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
‘ಜೆನ್ ಝೀ’ ಬ್ಯಾನರ್ ಅಡಿಯಲ್ಲಿ, ರಾಜಧಾನಿ ಕಠ್ಮಂಡುವಿನ ಹಲವು ಭಾಗಗಳಲ್ಲಿ “ಕೆಪಿ ಚೋರ್, ದೇಶ್ ಛೋಡ್” (ಕೆಪಿ ಕಳ್ಳ, ದೇಶ ಬಿಟ್ಟು ತೊಲಗಿ) ಮತ್ತು ‘”ಭ್ರಷ್ಟ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ” ಮುಂತಾದ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದ್ದಾರೆ.
ಭಕ್ತಪುರದ ಬಾಲ್ಕೋಟ್‌ನಲ್ಲಿರುವ ಪ್ರಧಾನಿ ಓಲಿ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಓಲಿ ಪ್ರಸ್ತುತ ಬಲ್ವತಾರ್‌ನಲ್ಲಿರುವ ಪ್ರಧಾನಿ ನಿವಾಸದಲ್ಲಿದ್ದಾರೆ ಎಂದು ವರದಿ ಹೇಳಿದೆ.
ಸಾಮಾಜಿಕ ಮಾಧ್ಯಮ ತಾಣಗಳ ಮೇಲಿನ ಸರ್ಕಾರದ ನಿಷೇಧವನ್ನು ಪ್ರತಿಭಟಿಸುತ್ತಿದ್ದ ಯುವಕರ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದ್ದ ಪರಿಣಾಮ ಸೋಮವಾರ 19 ಜನರು ಸಾವನ್ನಪ್ಪಿದ್ದಾರೆ ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸೋಮವಾರದಂದು ಮಾಜಿ ಗೃಹ ಸಚಿವ ರಮೇಶ್ ಲೇಖಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪ್ರತಿಭಟನಾಕಾರರು ಅವರ ನಿವಾಸಕ್ಕೂ ಮಂಗಳವಾರ ಬೆಂಕಿ ಹಚ್ಚಿದ್ದಾರೆ. ಗೃಹ ಸಚಿವರ ನಿರ್ಗಮನ ಸಾಕಾಗುವುದಿಲ್ಲ ಎಂದು ಹೇಳಿದ ಪ್ರತಿಭಟನಾಕಾರರು ಪ್ರಧಾನಿ ಓಲಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು.
ಪ್ರಮುಖ ಆನ್‌ಲೈನ್ ಸುದ್ದಿ ಪೋರ್ಟಲ್‌ಗಳು ಸೋಮವಾರ ಕಠ್ಮಂಡುವಿನಲ್ಲಿ ನಡೆದ ಪೊಲೀಸ್ ದಮನ ಕಾರ್ಯಾಚರಣೆಯನ್ನು ತೀವ್ರವಾಗಿ ಟೀಕಿಸಿದ್ದು, ನೇಪಾಳದ ಇತ್ತೀಚಿನ ಇತಿಹಾಸದಲ್ಲಿ ಇದು ಅತ್ಯಂತ ಕರಾಳ ದಿನಗಳಲ್ಲಿ ಒಂದು ಎಂದು ಬಣ್ಣಿಸಿವೆ.
ಜನಪ್ರಿಯ ಸುದ್ದಿ ಪೋರ್ಟಲ್ Ukeraa.com ಸೆಪ್ಟೆಂಬರ್ 8ಅನ್ನು ‘ಕರಾಳ ದಿನ’ ಎಂದು ಬಣ್ಣಿಸಿತ್ತು. ನೇಪಾಳದ ಇತಿಹಾಸದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂದಿದ್ದ ಮಾಧ್ಯಮ ಸಂಸ್ಥೆ, ಪ್ರಧಾನಿ ಓಲಿ ಅವರ ರಾಜೀನಾಮೆಗೆ ಒತ್ತಾಯಿಸಿತ್ತು.
ಮತ್ತೊಂದು ಸುದ್ದಿ ಪೋರ್ಟಲ್, ರಾಟೋಪತಿ, ಸರ್ಕಾರವು ಪ್ರತಿಭಟನಾ ನಿರತ ಯುವಜನರು ಮತ್ತು ವಿದ್ಯಾರ್ಥಿಗಳ ಮೇಲೆ ವಿವೇಚನೆಯಿಲ್ಲದೆ ಗುಂಡು ಹಾರಿಸಿದೆ ಎಂದು ಆರೋಪಿಸಿದೆ. ಇದು ‘ಹೇಡಿತನ’ ಮತ್ತು ‘ಅತ್ಯಂತ ಶೋಚನೀಯ’ ಕ್ರಮ ಎಂದು ಬಣ್ಣಿಸಿದೆ.
ಯುವ ನೇಪಾಳಿಗಳು ನಡೆಸಿದ ಆಂದೋಲನವು ರಾಜಕೀಯ ಪ್ರೇರಿತವಲ್ಲ, ಬದಲಾಗಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ನಿರುದ್ಯೋಗ ಮತ್ತು ಬೆಳೆಯುತ್ತಿರುವ ಸಾಮಾಜಿಕ ಅವ್ಯವಸ್ಥೆ ಹತಾಶೆಯಿಂದ ಹೊರ ಹೊಮ್ಮಿದ ಆಕ್ರೋಶ ಎಂದು ಪೋರ್ಟಲ್ ಹೇಳಿದೆ.
ಮಂಗಳವಾರ ಕಠ್ಮಂಡು ಮತ್ತು ದೇಶದ ಇತರ ಭಾಗಗಳಲ್ಲಿ ಕರ್ಫ್ಯೂ ಆದೇಶಗಳ ಹೊರತಾಗಿಯೂ ಪ್ರತಿಭಟನೆಗಳು ಉಲ್ಬಣಗೊಂಡಿದ್ದವು. ಕಠ್ಮಂಡುವಿನ ಕಲಾಂಕಿ, ಕಾಲಿಮತಿ, ತಹಚಲ್ ಮತ್ತು ಬನೇಶ್ವರ್ ಹಾಗೂ ಲಲಿತಪುರ ಜಿಲ್ಲೆಯ ಚ್ಯಾಸಲ್, ಚಾಪಗೌ ಮತ್ತು ಥೆಚೊ ಪ್ರದೇಶಗಳಲ್ಲಿ ಬೃಹತ್ ಪ್ರತಿಭಟನೆಗಳು ವರದಿಯಾಗಿವೆ.
ಪ್ರತಿಭಟನಾಕಾರರು (ಹೆಚ್ಚಾಗಿ ವಿದ್ಯಾರ್ಥಿಗಳು) ಸಾರ್ವಜನಿಕ ಸಭೆಗಳ ಮೇಲಿನ ನಿರ್ಬಂಧಗಳನ್ನು ಧಿಕ್ಕರಿಸಿ “ವಿದ್ಯಾರ್ಥಿಗಳನ್ನು ಕೊಲ್ಲಬೇಡಿ” ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಕಲಾಂಕಿಯಲ್ಲಿ ಬೆಳಗಿನ ಜಾವದಿಂದಲೇ ಪ್ರತಿಭಟನಾಕಾರರು ರಸ್ತೆಗಳನ್ನು ತಡೆದು, ಟೈರ್‌ಗಳನ್ನು ಸುಟ್ಟು ಆಕ್ರೋಶ ಹೊರ ಹಾಕಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದರಿಂದ ನಾಲ್ವರು ಗಾಯಗೊಂಡಿದ್ದಾರೆ. ಲಲಿತಪುರ ಜಿಲ್ಲೆಯ ಸುನಕೋಠಿಯಲ್ಲಿರುವ ಸಂವಹನ ಸಚಿವ ಪೃಥ್ವಿ ಸುಬ್ಬ ಗುರುಂಗ್ ಅವರ ನಿವಾಸದ ಮೇಲೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗುರುಂಗ್ ಅವರು ಸಾಮಾಜಿಕ ಮಾಧ್ಯಮ ತಾಣಗಳ ಮೇಲೆ ನಿಷೇಧ ಹೇರಲು ಆದೇಶಿಸಿದ್ದರು.
ಪ್ರತಿಭಟನಾಕಾರರು ಲಲಿತ್‌ಪುರದ ಖುಮಾಲ್ತಾರ್‌ನಲ್ಲಿರುವ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರ ನಿವಾಸವನ್ನು ಧ್ವಂಸಗೊಳಿಸಿದ್ದಾರೆ. ಕಠ್ಮಂಡುವಿನ ಬುಧನೀಲಕಂಠದಲ್ಲಿರುವ ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರ ಮನೆಯ ಮೇಲೂ ದಾಳಿ ನಡೆಸಲಾಗಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಿದ್ದ ‘ಜೆನ್ ಝೀ’ ಗುಂಪು, ಮಂತ್ರಿಗಳು ಮತ್ತು ಇತರ ಪ್ರಭಾವಿ ವ್ಯಕ್ತಿಗಳ ಮಕ್ಕಳ ಐಶಾರಾಮಿ ಜೀವನಶೈಲಿ, ದುಂದುವೆಚ್ಚವನ್ನು ಬಹಿರಂಗಪಡಿಸಲು ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡಿದ್ದರು.
ಭ್ರಷ್ಟಾಚಾರದಿಂದ ಬಂದ ಸಂಪತ್ತಿಗೆ ಹಣಕಾಸು ಒದಗಿಸುವ ಮೂಲಗಳನ್ನು ಪ್ರಶ್ನಿಸಿ ಅವರು ವಿಡಿಯೋಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಇದು ರಾಜಕೀಯ ನಾಯಕರಿಗೆ ಮುಜುಗರ ತರಿಸಿತ್ತು. ಈ ಕಾರಣಕ್ಕೆ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಲಾಗ್ತಿದೆ.
ಸರ್ಕಾರ ಫೇಸ್‌ಬುಕ್, ಎಕ್ಸ್ ಸೇರಿದಂತೆ 26 ಸಾಮಾಜಿಕ ಮಾಧ್ಯಮ ತಾಣಗಳು ಕಾನೂನು ಪ್ರಕಾರ ನೋಂದಾಯಿಸಲು ವಿಫಲವಾಗಿವೆ ಎಂಬ ಕಾರಣ ನೀಡಿ ನಿಷೇಧಿಸಲು ಆದೇಶಿಸಿತ್ತು. ಆದರೆ, ಯುವಜನರ ಆಕ್ರೋಶ ಎದುರಿಸಲಾಗದೆ ಸೋಮವಾರ ತಡರಾತ್ರಿ ಆದೇಶವನ್ನು ವಾಪಸ್ ಪಡೆದಿದೆ. ಆದರೂ, ಪ್ರತಿಭಟನೆ ಮಂಗಳವಾರ ತೀವ್ರ ಸ್ವರೂಪ ಪಡೆದುಕೊಂಡಿದೆ.
ರಾಷ್ಟ್ರೀಯ ಲಾಂಛನ ವಿರೂಪ ಪ್ರಕರಣ: ಹಜರತ್ಬಲ್‌ನಲ್ಲಿ 30ಕ್ಕೂ ಹೆಚ್ಚು ಬಂಧನ; “ಕಾಶ್ಮೀರಿಗಳ ಹತ್ಯಾಕಾಂಡ” ಎಂದ ಸಂಸದ