ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ಎಡಪಂಥೀಯ ಸಮಾಜವಾದಿ, 34 ವರ್ಷದ ಝೊಹ್ರಾನ್ ಕ್ವಾಮೆ ಮಮ್ದಾನಿ ಜಯಗಳಿಸಿದ್ದಾರೆ. ಈ ಮೂಲಕ ಅಮೆರಿಕದ ಅತಿದೊಡ್ಡ ನಗರದ ಮೊದಲ ಮುಸ್ಲಿಂ ಮೇಯರ್ ಆಗಿ ಇತಿಹಾಸ ಸೃಷ್ಟಿಸಿದ್ದಾರೆ.
ಮಂಗಳವಾರ (ನವೆಂಬರ್ 4, 2025) ನಡೆದ ಚುನಾವಣೆಯಲ್ಲಿ ಒಟ್ಟು 20 ಲಕ್ಷ ಮತಗಳು ಚಲಾವಣೆಯಾಗಿದ್ದು, ಅದರಲ್ಲಿ ಅತಿ ಹೆಚ್ಚು, ಅಂದರೆ ಶೇಕಡ 50ರಷ್ಟು ಅಥವಾ 10 ಲಕ್ಷ ಮತಗಳನ್ನು ಪಡೆಯುವ ಮೂಲಕ ಮಮ್ದಾನಿ ಗೆಲುವು ಸಾಧಿಸಿದ್ದಾರೆ.
ಅವರ ಪ್ರತಿಸ್ಪರ್ಧಿಗಳಾದ ಸ್ವತಂತ್ರ ಅಭ್ಯರ್ಥಿ ಆಂಡ್ರ್ಯೂ ಕ್ಯೂಮೋ ಪರ ಶೇಕಡ 40ರಷ್ಟು ಅಥವಾ 8 ಲಕ್ಷ ಮತಗಳು ಚಲಾವಣೆಯಾಗಿವೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಪರ ಕೇವಲ 10 ಶೇಕಡ ಜನರು ಮಾತ್ರ ಮತ ಹಾಕಿದ್ದಾರೆ. ಇನ್ನು ಭ್ರಷ್ಟಾಚಾರದ ಆರೋಪ ಹೊತ್ತು ಮೇಯರ್ ಸ್ಥಾನದಿಂದ ನಿರ್ಗಮಿಸಿದ್ದ ಸ್ವತಂತ್ರ ಅಭ್ಯರ್ಥಿ ಎರಿಕ್ ಆಡಮ್ಸ್ ಈ ಬಾರಿ ಚುನಾವಣೆಯಿಂದ ಹೊರಗುಳಿದಿದ್ದರು.
2025ರ ಜೂನ್‌ನಲ್ಲಿ ಎಲ್ಲಾ ಪಕ್ಷಗಳ ಒಳಗೆ ಯಾರು ಅಭ್ಯರ್ಥಿಯಾಗಬೇಕು ಎಂಬ ಪ್ರಾಥಮಿಕ ಚುನಾವಣೆ ನಡೆದಿತ್ತು. ಡೆಮಾಕ್ರಟಿಕ್ ಪಕ್ಷದಲ್ಲಿ ಆಂಡ್ರ್ಯೂ ಕ್ಯೂಮೋ ವಿರುದ್ದ ಮಮ್ದಾನಿ ಗೆದ್ದಿದ್ದರು. ನವೆಂಬರ್ 4ರಂದು ಸಾರ್ವತ್ರಿಕ ಚುನಾವಣೆ (ಜನರಲ್ ಎಲೆಕ್ಷನ್) ನಡೆದಿದೆ. ಇದರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕ್ಯೂಮೋ ಅವರನ್ನು ಮತ್ತೆ ಸೋಲಿಸಿ ಮಮ್ದಾನಿ ಗೆಲುವಿನ ನಗೆ ಬೀರಿದ್ದಾರೆ.
ಈ ಬಾರಿ ಚಲಾವಣೆಯಾದ 20 ಲಕ್ಷ ಮತಗಳು ಕಳೆದ 40 ವರ್ಷಗಳಲ್ಲಿ ಅತ್ಯಧಿಕ ಎಂದು ವರದಿಗಳು ಹೇಳಿವೆ. ಶೇಕಡ 80ರಷ್ಟು ಮತಗಳು ಎಣಿಕೆಯಾದ ಬಳಿಕ, ಮಮ್ದಾನಿ ಗೆಲುವಿನ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳಾದ ಎನ್‌ಬಿಸಿ, ಸಿಎನ್‌ಎನ್ ಮತ್ತು ಪೊಲಿಟಿಕೋ ವರದಿ ಮಾಡಿವೆ.
ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮಮ್ದಾನಿ ಡೆಮಾಕ್ರಟಿಕ್ ಪಕ್ಷದ ಮೇಯರ್ ಅಭ್ಯರ್ಥಿಯಾಗಿ ಆಯ್ಕೆಯಾದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿದ್ದರು. ಮಮ್ದಾನಿ ‘ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚ’ ಎಂದು ಜರೆದಿದ್ದರು.
ಅಮೆರಿಕದ ಕಾಂಗ್ರೆಸ್ (ಸಂಸತ್) ಸದಸ್ಯೆ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕೊರ್ಟೆಝ್ (ಎಒಸಿ) ಮತ್ತು ಸೆನೆಟರ್ ಚಕ್ ಶುಮರ್ ಸೇರಿದಂತೆ, ಮಮ್ದಾನಿ ಅವರನ್ನು ಬೆಂಬಲಿಸಿದ ಇತರ ಪ್ರಗತಿಪರ ನಾಯಕರ ವಿರುದ್ದವೂ ಟ್ರಂಪ್ ಕಿಡಿಕಾರಿದ್ದರು.
“ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚರಾದ ಝೊಹ್ರಾನ್ ಮಮ್ದಾನಿ ಅವರನ್ನು ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿಯ ಪ್ರಾಥಮಿಕ ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ, ಡೆಮೋಕ್ರಾಟ್‌ಗಳು ತಮ್ಮ ನಿಜ ಬಣ್ಣ ಬಯಲು ಮಾಡಿದ್ದಾರೆ ” ಎಂದು ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
“ಮಮ್ದಾನಿ ಭಯಾನಕವಾಗಿ ಕಾಣುತ್ತಾರೆ, ಅವರ ಧ್ವನಿ ಗಡಸುತನದಿಂದ ಕೂಡಿದೆ, ಅವರು ತುಂಬಾ ಬುದ್ಧಿವಂತರಲ್ಲ. ಆದರೆ, ಡೆಮೊಕ್ರಾಟ್‌ಗಳು ಇಂತಹವರನ್ನು ಬೆಂಬಲಿಸುತ್ತಿದ್ದಾರೆ” ಎಂದು ಟ್ರಂಪ್ ತೀವ್ರ ಅಸಮಾಧಾನ ಹೊರಹಾಕಿದ್ದರು.
ಭಾರತದ ಪ್ರಖ್ಯಾತ ಸಿನಿಮಾ ನಿರ್ಮಾಪಕಿ ಮೀರಾ ನಾಯರ್ ಮತ್ತು ಭಾರತೀಯ ಮೂಲದ ಉಗಾಂಡಾದ ಮಾರ್ಕ್ಸ್‌ವಾದಿ ವಿದ್ವಾಂಸ ಮಹಮೂದ್ ಮಮ್ದಾನಿ ಅವರ ಮಗನಾಗಿರುವ ಝೊಹ್ರಾನ್ ಮಮ್ದಾನಿ, 1991ರಲ್ಲಿ ಆಫ್ರಿಕಾದ ಉಗಾಂಡದಲ್ಲಿ ಜನಿಸಿದವರು. ನಂತರ ಅವರು ಅಮೆರಿಕದ ನ್ಯೂಯಾರ್ಕ್ ನಗರದಲ್ಲಾಗಿದೆ ಬೆಳೆದದ್ದು.
ಮಮ್ದಾನಿ ಅವರ ರಾಜಕೀಯ ಜೀವನ 2018ರಲ್ಲಿ ಆರಂಭವಾಯಿತು. ಆದರೆ, ಆ ವರ್ಷ ನ್ಯೂಯಾರ್ಕ್ ರಾಜ್ಯ ಸಭೆಯ ಪ್ರಾಥಮಿಕ ಚುನಾವಣೆಯಲ್ಲಿ ಅವರು ಸೋತರು. 2020ರಲ್ಲಿ ಡೆಮಾಕ್ರಟಿಕ್ ಸೋಷಲಿಸ್ಟ್ಸ್ ಆಫ್ ಅಮೆರಿಕ (ಡಿಎಸ್‌ಎ) ಬೆಂಬಲದೊಂದಿಗೆ ಅದೇ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಿ, ಪ್ರಾಥಮಿಕ ಚುನಾವಣೆಯಲ್ಲಿ ಶೇಕಡ 55ರಷ್ಟು ಮತ ಪಡೆದು ಗೆದ್ದರು. ನಂತರ ಸಾರ್ವತ್ರಿಕ ಚುನಾವಣೆಯಲ್ಲಿ (ಜನರಲ್ ಎಲೆಕ್ಷನ್) ಶೇಕಡ 80ಕ್ಕಿಂತ ಹೆಚ್ಚು ಮತಗಳನ್ನು ಪಡೆದು ಗೆಲ್ಲುವ ಮೂಲಕ ಕ್ವೀನ್ಸ್‌ನ 36ನೇ ಜಿಲ್ಲೆಯ ವಿಧಾನಸಭಾ ಸದಸ್ಯರಾದರು.
2024ರ ಡಿಸೆಂಬರ್‌ನಲ್ಲಿ ಮೇಯರ್ ಚುನಾವಣೆಗೆ ಪ್ರಚಾರ ಆರಂಭಿಸಿದ ಮಮ್ದಾನಿ, ಜೂನ್ 2025ರ ಪ್ರಾಥಮಿಕ ಚುನಾವಣೆಯಲ್ಲಿ ಹಿಂದಿನ ಗವರ್ನರ್ ಆಂಡ್ರ್ಯೂ ಕ್ಯೂಮೋವನ್ನು ಶೇಕಡ 52ರಷ್ಟು ಮತಗಳ ಅಂತರದಿಂದ ಸೋಲಿಸಿದರು. ನವೆಂಬರ್ 4, 2025ರ ಸಾರ್ವವತ್ರಿಕ ಚುನಾವಣೆಯಲ್ಲಿ ಶೇಕಡ 50.2ರಷ್ಟು ಮತಗಳನ್ನು ಪಡೆದು ಕ್ಯೂಮೋವನ್ನು ಮತ್ತೆ ಸೋಲಿಸಿ, ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ ಮತ್ತು 100 ವರ್ಷಗಳಲ್ಲಿ ಅತ್ಯಂತ ಕಿರಿಯ ಮೇಯರ್ ಆದರು.
2026ರ ಜನವರಿ 1ರಂದು ಅಧಿಕಾರ ಸ್ವೀಕರಿಸಲಿರುವ ಮಮ್ದಾನಿ, ತಳಹಂತದ ಧನಸಹಾಯ, ಯುವಕರ ಬೆಂಬಲ ಮತ್ತು ಟಿಕ್ ಟಾಕ್-ಆಧಾರಿತ ಪ್ರಚಾರದೊಂದಿಗೆ ಸೋಷಲಿಸ್ಟ್ ರಾಜಕಾರಣದ ಹೊಸ ಮುಖವಾಗಿ ಹೊರಹೊಮ್ಮಿದ್ದಾರೆ.
ಎಸ್‌ಐಆರ್‌ಗೆ ತೀವ್ರ ವಿರೋಧ : ಕೋಲ್ಕತ್ತಾದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ ಮಮತಾ ಬ್ಯಾನರ್ಜಿ


