ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್, ಪತ್ರಕರ್ತ ಮೊಹಮ್ಮದ್ ಜುಬೇರ್ ಬಂಧನ ಪ್ರಕರಣದ ಕುರಿತಂತೆ ದೆಹಲಿ ಪೊಲೀಸರು ಟ್ವಿಟರ್‌ಗೆ ಶುಕ್ರವಾರ ನೋಟಿಸ್ ಕಳುಹಿಸಿದ್ದು, ‘ಹನುಮಾನ್ ಭಕ್ತ್@balajikijaiin’ ಖಾತೆಯ ವಿವರಗಳನ್ನು ನೀಡುವಂತೆ ಕೇಳಿದ್ದಾರೆ. ಈ ಖಾತೆಯೂ, 2018 ರಲ್ಲಿ ಜುಬೇರ್ ಪೋಸ್ಟ್ ಮಾಡಿದ ಟ್ವೀಟ್ ಅನ್ನು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿತ್ತು. ಇದರ ನಂತರ ದೆಹಲಿ ಪೊಲೀಸರ ‘ಐಎಫ್‌ಎಸ್‌ಒ’ ಶಾಖೆ ಜುಬೈರ್ ವಿರುದ್ಧ ಪ್ರಕರಣ ದಾಖಲಿಸಿ ಸೋಮವಾರ ಅವರನ್ನು ಬಂಧಿಸಿತ್ತು.
ಟ್ರಯಲ್ ಕೋರ್ಟ್ ನೀಡಿದ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯನ್ನು ಪ್ರಶ್ನಿಸಿ ಜುಬೇರ್ ಸಲ್ಲಿಸಿರುವ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. ಅವರಿಗೆ ನೀಡಲಾಗಿದ್ದ ನಾಲ್ಕು ದಿನಗಳ ರಿಮಾಂಡ್ ಆದೇಶವು ನಾಳೆ ಕೊನೆಗೊಳ್ಳುತ್ತದೆ, ಜುಲೈ 2 ರಂದು ಅವರನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಅವರು ಕಸ್ಟಡಿ ವಿಸ್ತರಣೆಗೆ ಪ್ರಯತ್ನಿಸುತ್ತಿದ್ದಾರೆಯೇ ಎಂದು ನನಗೆ ತಿಳಿದಿಲ್ಲ, ಬಹಷಃ… ಆರೋಪಿಯನ್ನು ಬಿಡುಗಡೆ ಮಾಡಬಹುದು ಅಥವಾ ನ್ಯಾಯಾಂಗ ಬಂಧನಕ್ಕೆ ಕಳುಹಿಸಬಹುದು. ನೀವು ಈ ವಿಚಾರಗಳನ್ನು ಟ್ರಯಲ್ ಕೋರ್ಟ್‌ನಲ್ಲಿ ಯಾಕೆ ಒತ್ತಾಯಿಸಬಾರದು?… ನೀವು ಪ್ರಕರಣದ ಕಾನೂನು ಬದ್ಧತೆಯ ಬಗ್ಗೆ ಮಾತನಾಡುತ್ತಿದ್ದರೆ, ನಾನು ನೋಟಿಸ್ ಜಾರಿ ಮಾಡಬೇಕು, ಇನ್ನೊಂದು ಕಡೆಯವರಿಗೆ ಕಳುಹಿಸಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತೀಸ್ತಾ, ಜುಬೇರ್ ಬಂಧನ ಆತಂಕಕಾರಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಮಾರಿಯಾ ಪ್ರತಿಕ್ರಿಯೆ
ಜುಬೇರ್ ವಿರುದ್ಧ ಸಲ್ಲಿಸಲಾದ ಪ್ರಕರಣದ ಬಗ್ಗೆ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯವು ಎರಡು ವಾರಗಳ ಕಾಲಾವಕಾಶವನ್ನು ಪ್ರತಿವಾದಿಗಳಿಗೆ ನೀಡಿದೆ. ಪ್ರತಿವಾದಗಳು ಏನಾದರೂ ಇದ್ದರೆ, ಒಂದು ವಾರದೊಳಗೆ ಅವುಗಳನ್ನು ಸಲ್ಲಿಸಬೇಕು ಎಂದು ಹೇಳಿದ್ದು, ಜುಲೈ 27 ರಂದು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದೆ.
ಸಿಆರ್‌ಪಿಸಿಯ ಸೆಕ್ಷನ್ 91 ರ ಅಡಿಯಲ್ಲಿ ಬುಧವಾರ ಸಂಜೆ ಟ್ವಿಟರ್‌ಗೆ ನೋಟಿಸ್ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. “ಅನಾಮಧೇಯ ಟ್ವಿಟರ್ ಹ್ಯಾಂಡಲ್ @balajikijaiin ನ ಐಪಿ ಲಾಗ್ ವಿವರಗಳು, ಖಾತೆಯ ನೋಂದಣಿ ವಿವರಗಳು, ಮೊಬೈಲ್ ಸಂಖ್ಯೆ, ಸಂಪರ್ಕಿತ ಇಮೇಲ್ ಐಡಿ ಮತ್ತು ಬಳಕೆದಾರರು ಬಳಸುವ ಸಾಧನವನ್ನು ಒದಗಿಸಲು ನಾವು ಅವರನ್ನು ಕೇಳಿದ್ದೇವೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬುಧವಾರದಂದು ಈ ಖಾತೆಯನ್ನು ಅಳಿಸಲಾಗಿತ್ತು, ಆದರೆ ನಂತರ ಗುರುವಾರ ಸಂಜೆಯ ಹೊತ್ತಿಗೆ ಅದು ಮತ್ತೇ ವಾಪಾಸಾಗಿತ್ತು. ಈ ಬಗ್ಗೆ ಬುಧವಾರದಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, “ವ್ಯಕ್ತಿ ತನ್ನ ಖಾತೆಯನ್ನು ಅಳಿಸಿದ್ದಾನೆ ಎಂದು ನಮಗೆ ತಿಳಿದು ಬಂದಿದೆ. ಆದಾಗ್ಯೂ, ಇದು ನಮ್ಮ ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ. ಜುಬೈರ್ ಅವರ ಹಳೆಯ ಟ್ವೀಟ್ ವಿಚಾರವಾಗಿ ತನಿಖೆ ಮಾಡುತ್ತಿದ್ದೇವೆ. ನಾವು ವ್ಯಕ್ತಿಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಮತ್ತು ದೂರಿನ ಬಗ್ಗೆ ಕೇಳುತ್ತೇವೆ. ಅವರು ಹೆದರಿ ಅಕೌಂಟ್ ಡಿಲೀಟ್ ಮಾಡಿರಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅನಾಮಧೇಯ ಟ್ವಿಟರ್ ಅಕೌಂಟ್ ಬಿಜೆಪಿ ಐಟಿ ಸೆಲ್‌ನದ್ದು: ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ
ಮಂಗಳವಾರ ನಡೆದ ಜುಬೈರ್ ಅವರ ಬಂಧನದ ವಿಚಾರಣೆಯ ಸಂದರ್ಭದಲ್ಲಿ, ಟ್ವಿಟರ್ ಖಾತೆಯನ್ನು ನಡೆಸುತ್ತಿರುವ ವ್ಯಕ್ತಿ ‘ಅನಾಮಧೇಯನಲ್ಲ’ ಎಂದು ಪೊಲೀಸರು ನ್ಯಾಯಾಲಯದಲ್ಲಿ ಹೇಳಿದ್ದರು.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸವಾರಿಯಾ ಅವರ ಮುಂದೆ ರಿಮಾಂಡ್ ಅರ್ಜಿಯನ್ನು ವಿರೋಧಿಸಿದ ಜುಬೈರ್ ಅವರ ವಕೀಲೆ ವೃಂದಾ ಗ್ರೋವರ್, ಪ್ರಕರಣದಲ್ಲಿ ಇರುವ ಟ್ವಿಟರ್ ಖಾತೆಯು ಕಿಡಿಗೇಡಿತನವನ್ನು ಸೃಷ್ಟಿಸಲು ಮಾಡಿದ ಅನಾಮಧೇಯ ಹ್ಯಾಂಡಲ್ ಎಂದು ವಾದಿಸಿದ್ದರು.
ಈ ಟ್ವಿಟ್ಟರ್ ಖಾತೆಯನ್ನು ಜುಬೇರ್ ಅವರನ್ನು ಗುರಿಯಾಗಿಸಲು ಮಾಡಲಾಗಿದ್ದು, ಖಾತೆಯ ಬಳಕೆದಾರರನ್ನು ಪೊಲೀಸರು ತನಿಖೆ ಮಾಡಬೇಕು ಎಂದು ಅವರು ವಾದಿಸಿದ್ದರು.
ಇದನ್ನೂ ಓದಿ: ಜುಬೇರ್ ಬಂಧನ: ಬರವಣಿಗೆ, ಟ್ವೀಟ್ ಆಧಾರದಲ್ಲಿ ಪತ್ರಕರ್ತರನ್ನು ಜೈಲಿಗೆ ಹಾಕಬಾರದು- ವಿಶ್ವಸಂಸ್ಥೆ
ಆದರೆ ಇದನ್ನು ತಳ್ಳಿಹಾಕಿದ ಪೊಲೀಸರು, “ಅದು ಅನಾಮಧೇಯ ಟ್ವಿಟರ್ ಹ್ಯಾಂಡಲ್ ಅಲ್ಲ. ಅವರು ಕೇವಲ ಮಾಹಿತಿದಾರ. ಅವರು ಅನಾಮಧೇಯ ದೂರುದಾರರಲ್ಲ. ಅವರ ವಿವರಗಳು ಇಲ್ಲಿವೆ. ವಿವರಗಳಿಲ್ಲದೆ, ಯಾರೂ ಟ್ವಿಟರ್ ಖಾತೆಯನ್ನು ಪಡೆಯಲು ಸಾಧ್ಯವಿಲ್ಲ” ಎಂದು ವಾದಿಸಿದ್ದರು.


