- ಗಿರೀಶ್ ತಾಳಿಕಟ್ಟೆ |
ಪ್ರತಿ ಎಲೆಕ್ಷನ್‍ನಂತೆ ಈ ಸಲವೂ ಸಿನಿಮಾ ಸ್ಟಾರ್‍ಗಳ ಪ್ರಚಾರ ಜೋರಾಗಿದೆ. ಅದರಲ್ಲೂ ನಟ ಯಶ್ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರೂ ಪಾರ್ಟಿಗಳಲ್ಲಿ ಪ್ರಚಾರ ಮಾಡ್ತಾ ಜನರಲ್ಲಿ ಶ್ಯಾನೆ ಗೊಂದಲ ಎಬ್ಬಿಸಿದ್ದಾರೆ. `ಎಲ್ಲಿದ್ದೀರಾ ಯಶ್, ಇದೇನ್ ಮಾಡ್ತಾ ಇದೀರಾ ಯಶ್’ ಅಂತ ಕೇಳಿದ್ರೆ, `ಪಕ್ಷ, ಸಿದ್ಧಾಂತ ನಂಗೆ ಗೊತ್ತಿಲ್ಲ. ಒಳ್ಳೇ ಅಭ್ಯರ್ಥಿ ಪರ ಪ್ರಚಾರ ಮಾಡ್ತೀನಿ’ ಅನ್ನೋ ಉತ್ತರ ಕೊಡ್ತಾರೆ. ಈ `ಒಳ್ಳೇ ಅಭ್ಯರ್ಥಿ’ `ಹತ್ತಿರದ ನೆಂಟ’ `ಒಳ್ಳೇ ಸ್ನೇಹಿತ’ ಹೀಗೆ ನೆಪ ಹೇಳಿಕೊಂಡು ಚುನಾವಣಾ ಪ್ರಚಾರ ನಡೆಸೋ ಯಶ್ ಮತ್ತು ಇನ್ನುಳಿದ ಸಿನಿ ಸಿಬ್ಬಂದಿಗಳಿಗೆ ಇಲ್ಲೊಂದು ಮಾತನ್ನು ಹೇಳಲೇಬೇಕಿದೆ.
ರಾಜಕೀಯ ಪ್ರಜ್ಞೆ ಮತ್ತು ಸಾಮಾಜಿಕ ಸನ್ನಿವೇಶಗಳ ಅರಿವಿಲ್ಲದೆ ತಮ್ಮ ಸ್ಟಾರ್‍ಗಿರಿಯನ್ನು ಮಾರ್ಕೆಟಿಂಗ್ ಸರಕುಗಳಾಗಿ ಮಾರಾಟಕ್ಕಿಡೋದು ಅಪಾಯಕಾರಿ ಮಾತ್ರವಲ್ಲ, ಜನರಿಗೆ ಎಸಗುವ ನಂಬಿಕೆ ದ್ರೋಹವೂ ಆಗಿರುತ್ತೆ. ಯಾಕೆಂದ್ರೆ ಚುನಾವಣೆಯಲ್ಲಿ ಒಬ್ಬ ವ್ಯಕ್ತಿ ಗೆದ್ದ ನಂತರ ಆತ ರಾಜಕೀಯ ಜವಾಬ್ಧಾರಿಯನ್ನು ನಿಭಾಯಿಸಬೇಕಿರುತ್ತದೆಯೇ ವಿನಾಃ ನಮ್ಮ ಜೊತೆಗಿನ ವೈಯಕ್ತಿಕ ಬಾಂಧವ್ಯವನ್ನಲ್ಲ. ಆ ರಾಜಕೀಯ ಜವಾಬ್ಧಾರಿ ಆತನ ಪಕ್ಷ, ಆ ಪಕ್ಷದ ಸಿದ್ಧಾಂತ, ನೀತಿಗಳನ್ನು ಅವಲಂಭಿಸಿರುತ್ತದೆ. ಒಂದು ಪಾರ್ಟಿ ಪ್ರಸ್ತುತ ಸನ್ನಿವೇಶದಲ್ಲಿ ಅಪಾಯಕಾರಿ ನಿಲುವುಗಳನ್ನು ತಳೆದಿದ್ದರೆ ಆ ಪಕ್ಷದ ಪರವಾಗಿ ಗೆದ್ದ ಆ `ಒಳ್ಳೆ ಅಭ್ಯರ್ಥಿ’ ಸಮಾಜದ ಜೊತೆ ಅಪಾಯಕಾರಿಯಾಗಿಯೇ ವರ್ತಿಸಬೇಕಾಗುತ್ತದೆ. ಅದನ್ನಾತ ಮೀರಲು ಸಾಧ್ಯವಿರುವುದಿಲ್ಲ.

ಉದಾಹರಣೆಗೆ, ನಮ್ಮ ಒಳ್ಳೇ ಸ್ನೇಹಿತ ಅಥವಾ ಹತ್ತಿರದ ಸಂಬಂಧಿ ಒಬ್ಬ ಅಸಹಾಯಕ ಹುಡುಗಿ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಸ್ಥಿತಿಯಲ್ಲಿ ನಮ್ಮ ಕಣ್ಣಿಗೆ ಬಿದ್ದ ಎಂದಿಟ್ಟುಕೊಳ್ಳಿ. ಆತ ನಮ್ಮ ಒಳ್ಳೆಯ ಸ್ನೇಹಿತನೇ ಆಗಿದ್ದರೂ ನಾವು ಆತನ ಪರ ನಿಲ್ಲುವುದಿಲ್ಲ. ಅದು ನಮ್ಮ ಸಾಮಾಜಿಕ ಹೊಣೆಗಾರಿಕೆ. ಅಷ್ಟರಮಟ್ಟಿಗೆ ನಮಗೆ ಪರಿಸ್ಥಿತಿಯ ಆಗುಹೋಗಿನ ಪ್ರಜ್ಞೆ ಇರುತ್ತೆ, ಇರಬೇಕು. ಇನ್ನೂ ಸಿಂಪಲ್ಲಾಗಿ ಹೇಳಬೇಕಂದ್ರೆ, ಕೆಟ್ಟ ಸ್ಕ್ರಿಪ್ಟ್ ಹಿಡಿದು ಬರುವ ನಿರ್ಮಾಪಕ ಅದೆಷ್ಟೇ ಒಳ್ಳೇ ಸ್ನೇಹಿತನಾಗಿದ್ದರೂ ಆತನಿಗೆ ಯಾವ ಸ್ಟಾರ್ ನಟನೂ ಕಾಲ್‍ಶೀಟ್ ಕೊಡೋದಿಲ್ಲ!
ಹಾಗಂತ ಸಿನಿಮಾ ಮಂದಿ ಪ್ರಚಾರ ಮಾಡಬಾರದು ಅಂತೇನಲ್ಲ. ಆದರೆ ತಮ್ಮ ಆ ಪ್ರಚಾರವನ್ನು ರಾಜಕೀಯವಾಗಿಯೇ ಸಮರ್ಥಿಸಿಕೊಳ್ಳುವ ಪೊಲಿಟಿಕಲ್ ಬದ್ಧತೆ ಮತ್ತು ಅರಿವು ಅಂತವರಲ್ಲಿ ಇರಬೇಕು. ರಾಜಕೀಯೇತರ ನೆಪವಿಟ್ಟುಕೊಂಡು ರಾಜಕೀಯ ಪ್ರಚಾರ ಮಾಡಬಾರದು! ಅಂದಹಾಗೆ, ಯಶ್‍ಗೆ ಗಣಿಮಾಫಿಯಾದ ಶ್ರೀರಾಮುಲುನಲ್ಲಿ ಅದ್ಯಾವ `ಒಳ್ಳೆ ಅಭ್ಯರ್ಥಿ’ ಕಾಣಿಸಿದನೋ ದೇವರೇ ಬಲ್ಲ…..


