ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ, ಗುಜರಾತಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಮತ್ತೊಂದು ಆರೋಪವನ್ನು ಅಮೆರಿಕದ ಅಧಿಕಾರಿಗಳು ಮಾಡಿದ್ದು, ಗೌತಮ್ ಅದಾನಿ ಮತ್ತು ಅವರ ಸೋದರ ಸಂಬಂಧಿ ಸಾಗರ್ ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ. ಅಮೆರಿಕ ಬಂಧನದ ವಾರೆಂಟ್ ಹೊರಡಿಸಿದ್ದು ಗೌತಮ್ ಅದಾನಿಗೆ ಆಗಿದ್ದರೆ, ಅದರಿಂದ ವಿಚಲಿತರಾಗಿದ್ದು ಮತ್ತು ಈ ಉದ್ಯಮಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಬಿಜೆಪಿ ಮತ್ತು ಅದರ ಬೆಂಬಲಿಗರಾಗಿದ್ದಾರೆ. ಅಷ್ಟಕ್ಕೂ ಅದಾನಿ ಮತ್ತು ಬಿಜೆಪಿ ಜೊತೆಗಿನ ನಂಟಿನ ಬಗ್ಗೆ ಈ ದೇಶದ ಜನರಿಗೆ ಗೊತ್ತಿಲ್ಲದೆ ಏನಿಲ್ಲ. ಇಷ್ಟು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಉದ್ಯಮಿಯನ್ನು ಈ ಮಟ್ಟಿಗೆ ಸಮರ್ಥನೆ ಮಾಡುವುದು ಬಿಜೆಪಿಗೆ ಏಕೆ ಅನಿವಾರ್ಯ ಅನ್ನುವುದೂ ಗುಟ್ಟಾಗಿ ಉಳಿದಿಲ್ಲ.
2023ರ ಜನವರಿಯಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಗ್ರೂಪ್ ಅನ್ನು “ಕಾರ್ಪೊರೇಟ್ ಇತಿಹಾಸದಲ್ಲಿ ಅತಿದೊಡ್ಡ ವಂಚಕ” ಎಂದು ಆರೋಪಿಸಿ ವರದಿಯನ್ನು ಪ್ರಕಟಿಸಿತ್ತು. ಈ ವರದಿಯಲ್ಲಿ ಅದಾನಿ ಗ್ರೂಪ್ ನಡೆಸಿದೆ ಎನ್ನಲಾದ ವ್ಯಾಪಕವಾದ ಲೆಕ್ಕಪತ್ರ ವಂಚನೆ, ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಮನಿ ಲಾಂಡರಿಂಗ್‌ಅನ್ನು ಬಯಲಿಗೆಳೆದಿತ್ತು. ಅದಾನಿ ಗ್ರೂಪ್ ತನ್ನ ಆದಾಯ ಮತ್ತು ಷೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿಕೊಳ್ಳಲು ವಿದೇಶಿ ಕಂಪನಿಗಳ ಜಾಲವನ್ನು ಬಳಸಿಕೊಂಡಿದೆ ಎಂದು ವರದಿ ಹೇಳಿಕೊಂಡಿತ್ತು.
ಪ್ರಧಾನಿ ಮೋದಿಯವರ ಆಪ್ತ ಉದ್ಯಮಿ ಅದಾನಿ ವಿರುದ್ಧದ ಆರೋಪಗಳೇನು?
ಹಿಂಡೆನ್‌ಬರ್ಗ್‌ನ ವರದಿಯನ್ನು ಅನುಸರಿಸಿ, ಅಮೆರಿಕದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (SEC) ಅದಾನಿ ಗ್ರೂಪ್ ಬಗ್ಗೆ ತನಿಖೆಯನ್ನು ಪ್ರಾರಂಭಿಸಿತ್ತು. ಈ ತನಿಖೆಯ ಆಧಾರದಲ್ಲಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಏಳು ಆರೋಪಿಗಳು 20 ವರ್ಷಗಳಲ್ಲಿ 1 ಲಕ್ಷದ 5 ಸಾವಿರ ಕೋಟಿ ರೂಗಳು ಲಾಭ ಬರುವ ಸೌರಶಕ್ತಿ ಪೂರೈಕೆ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 265 ಮಿಲಿಯನ್ ಡಾಲರ್ ಅಥವಾ 2,200 ಕೋಟಿ ರೂಪಾಯಿಗಳನ್ನು ಲಂಚ ನೀಡಲು ಒಪ್ಪಿದ್ದರು ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಛತ್ತೀಸ್‌ಗಢ ಮತ್ತು ಜಮ್ಮು ಕಾಶ್ಮೀರದ ಅಧಿಕಾರಿಗಳು ಲಂಚ ಪಡೆದಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ, ಸಾಗರ್ ಆರ್. ಅದಾನಿ ಹಾಗೂ ವಿನೀತ್ ಎಸ್. ಜೈನ್ ವಿರುದ್ಧ ಐದು ಅಂಶಗಳ ಕ್ರಿಮಿನಲ್ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ನ್ಯೂಯಾರ್ಕ್‌ನ ಪೂರ್ವ ಜಿಲ್ಲಾ ನ್ಯಾಯಾಲಯದಲ್ಲಿರುವ ಅಮೆರಿಕದ ಅಟಾರ್ನಿ ಕಚೇರಿಯ ಮಾಹಿತಿ ನೀಡಿದೆ. ಅಮೆರಿಕದ ಹೂಡಿಕೆದಾರರು ಹಾಗೂ ಜಾಗತಿಕ ಹಣಕಾಸು ಸಂಸ್ಥೆಗಳ ಬಂಡವಾಳವನ್ನು ಆಕರ್ಷಿಸಲು ಇವರು ಸುಳ್ಳು ಮತ್ತು ತಪ್ಪು ಹೇಳಿಕೆ ನೀಡಿದ್ದಾರೆ ಎಂಬ ಆರೋಪವಿದೆ. ಹಾಗಾಗಿ ಅಲ್ಲಿನ ನ್ಯಾಯಾಧೀಶರು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಬಂಧನ ವಾರೆಂಟ್‌ಗಳನ್ನು ಹೊರಡಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವ್ಯವಹಾರ ನಡೆಸಿದ್ದ ಕಂಪನಿಯ ಮಾಜಿ ಅಧಿಕಾರಿಗಳಾದ ರಂಜಿತ್ ಗುಪ್ತಾ ಹಾಗೂ ರೂಪೇಶ್ ಅಗರವಾಲ್ ಹಾಗೂ ಕೆನಡಾ ಮೂಲದ ಹೂಡಿಕೆದಾರರಾದ ದೀಪಕ್ ಮಲ್ಹೋತ್ರಾ ಮತ್ತು ಸೌರಭ್ ಅಗರವಾಲ್ ಅವರು ಲಂಚ ನೀಡಿರುವುದು, ಅಮೆರಿಕದ ಕಾನೂನಾದ, ’ವಿದೇಶಿ ಭ್ರಷ್ಟ ಕಾರ್ಯಾಚರಣೆ ಕಾಯ್ದೆ’ಯಡಿ ಅಪರಾಧವಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಇಡೀ ಬೆಳವಣಿಗೆಯ ಬಗ್ಗೆ ನ್ಯಾಯಪಥ ಪತ್ರಿಕೆಯ ಜೊತೆಗೆ ಮಾತನಾಡಿದ ಚಿಂತಕ ಶಿವಸುಂದರ್ ಅವರು, “ಪ್ರಧಾನಿ ಮೋದಿ ಅರೆಸ್ಟ್ ಆಗುತ್ತಾರೆ ಎಂದರೆ ಅದಾನಿ ಕೂಡಾ ಅರೆಸ್ಟ್ ಆಗುತ್ತಾರೆ ಎಂದರ್ಥ. ಯಾಕೆಂದರೆ ಅವರು ಒಬ್ಬರ ಮೇಲೆ ಒಬ್ಬರು ನಿಂತಿದ್ದಾರೆ. ಬರಿಯ ಮೋದಿ ಮಾತ್ರವಲ್ಲ, ಇಡೀ ಬಿಜೆಪಿಯೇ ಅದಾನಿ ಮತ್ತು ಅದಾನಿ ರೀತಿಯ ಜನರ ಮೇಲೆ ನಿಂತಿದೆ. ಇದು ಮೊದಲಿನಿಂದಲೂ ಗೊತ್ತಿರುವ ವಿಚಾರ. ಭಾರತದ ತನಿಖಾ ಸಂಸ್ಥೆಗಳು ಮಾಡಬೇಕಿದ್ದ ಕೆಲಸವನ್ನು ಅಮೆರಿಕದ ಸಂಸ್ಥೆಗಳು ಮಾಡಿವೆ. ಹಾಗಾಗಿ ಇದು ಭಾರತಕ್ಕಾದ ಅವಮಾನ ಮಾತ್ರವಲ್ಲ, ಭಾರತದ ಆರ್ಥಿಕತೆಗೆ ಕೂಡಾ ಅವಮಾನ ಆಗಿದೆ. ಅಷ್ಟೇ ಅಲ್ಲದೆ, ಇದು ಇಲ್ಲಿಗೇ ನಿಲ್ಲುವುದಿಲ್ಲ. ಯಾಕೆಂದರೆ ಅದಾನಿ ಮಾಡಿದ ತಪ್ಪುಗಳನ್ನು ’ಸೆಬಿ’ ಗುರುತಿಸಿ ಅದನ್ನು ತಡೆಹಿಡಿದಿಲ್ಲ. ಹಾಗಾಗಿ ಭಾರತದ ಎಲ್ಲಾ ಬಂಡವಾಳಶಾಹಿ ಸಂಸ್ಥೆಗಳು ವಿದೇಶದಲ್ಲಿ ಹಣ ಹೂಡಿಕೆಗಾಗಿ ಹೋದರೆ ಅವರ ಮೇಲೆ ಅನುಮಾನಗಳು ವ್ಯಕ್ತಪಡಿಸುತ್ತಾರೆ. ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ಭಾರತದ ಸಂಸ್ಥೆಗಳ ರೇಟಿಂಗ್ ಕಡಿಮೆ ಮಾಡುತ್ತವೆ. ಈ ಅರ್ಥದಲ್ಲಿ ಹೇಳುವುದಾದರೆ, ಪ್ರಧಾನಿ ಮೋದಿ ಅವರು ಅದಾನಿಯನ್ನು ರಕ್ಷಿಸಲು ಹೋಗಿ, ಭಾರತದ ಆರ್ಥಿಕತೆಯನ್ನು ಅಧಃಪತನಕ್ಕೆ ತಳ್ಳುತ್ತಿದ್ದಾರೆ” ಎಂದು ಹೇಳಿದರು.
ಅದಾನಿಯ ಈ ಭ್ರಷ್ಟಾಚಾರದಿಂದ ಭಾರತದ ಪ್ರತಿಯೊಬ್ಬ ಪ್ರಜೆಯು ಮುಂದಿನ ದಿನಗಳಲ್ಲಿ ಬೆಲೆತೆರಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ. “ಒಂದು ಯೂನಿಟ್ ಸೌರ ವಿದ್ಯುತ್ ಉತ್ಪಾದನೆಗೆ 2.50 ರೂ. ನಂತೆ ಅದಾನಿ ಮತ್ತು ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ(SECI) ನಡುವೆ ಒಪ್ಪಂದ ಕುದುರಿಸಲಾಗಿದೆ. ಆದರೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಪ್ರಸ್ತುತ ಸೋಲಾರ್ ವಿದ್ಯುತ್ ಉತ್ಪಾದನೆಗೆ ಖರ್ಚು ಆಗುವುದು ಕೇವಲ 2 ರೂ. ಮಾತ್ರವಾಗಿದೆ. ಇದರ ಉತ್ಪಾದನೆಗೆ ಒಂದು ಬಾರಿ ಮಾತ್ರ ಬಂಡವಾಳ ಹೂಡಬೇಕಾಗಿದ್ದು, ಉತ್ಪಾದನೆಗಾಗಿ ಖರ್ಚು ಮಾಡಬೇಕಾಗಿಲ್ಲ. ಯಾಕೆಂದರೆ ಸೂರ್ಯನ ಬೆಳಕು, ಭೂಮಿ ಎಲ್ಲವೂ ಉಚಿತವಾಗಿ ಸಿಗುತ್ತದೆ. ಸೋಲಾರ್ ವಿದ್ಯುತ್ ಉತ್ಪಾದನೆಗೆ ನಿರ್ವಹಣೆ ಖರ್ಚು ಮಾತ್ರ ಮಾಡಬೇಕಾಗುತ್ತದೆ. ಹಾಗಾಗಿ, ಮುಂದಿನ ನಾಲ್ಕೈದು ವರ್ಷಗಳಲ್ಲಿ ಕೇವಲ 1 ರೂಗಳಿಗೆ ವಿದ್ಯುತ್ ಉದ್ಪಾದನಾ ವೆಚ್ಚ ಇಳಿಯುತ್ತದೆ. ಆದರೆ, 25 ವರ್ಷಗಳಿಗೆ ಪ್ರತಿ ಯೂನಿಟ್‌ಗೆ 2.5 ರೂಗಳಂತೆ ಅದಾನಿ ಮತ್ತು SECI ಒಪ್ಪಂದ ಮಾಡಿಕೊಂಡಿದೆ” ಎಂದು ಶಿವಸುಂದರ್ ಅವರು ವಿವರಿಸಿದರು.
“ಸರಾಸರಿಯಾಗಿ 25 ವರ್ಷಗಳಲ್ಲಿ ಒಂದು ಯೂನಿಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ 1.25 ಅಥವಾ 1.50 ರೂ. ವೆಚ್ಚ ಗ್ರಾಹಕರಿಗೆ ಬೀಳುತ್ತದೆ. ಆದರೆ ಅದಾನಿ ಅವರು ಮಾಡಿರುವ ಒಪ್ಪಂದಿಂದಾಗಿ ಅದರ 2 ಪಟ್ಟು ಹಣವನ್ನು ಸುಲಿಗೆ ಮಾಡಲಾಗುತ್ತದೆ. ಒಟ್ಟಾರೆಯಾಗಿ, 8000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅದಾನಿಗೆ ಖರ್ಚು ಬೀಳುವುದು ಅಂದಾಜು 36,000 ಕೋಟಿ ರೂಗಳಾಗಿದೆ. ಈ ಹಣವನ್ನು ಅವರು ಕೇವಲ 4 ವರ್ಷಗಳಲ್ಲಿ ವಾಪಾಸು ಪಡೆಯುತ್ತಾರೆ. ಉಳಿದ 21 ವರ್ಷಗಳ ಕಾಲ ಲಾಭ ಮಾಡಲಿದ್ದಾರೆ, ಅಂದರೆ ಸುಮಾರು 1 ಲಕ್ಷದ 5 ಸಾವಿರ ಕೋಟಿ ರೂಗಳು ಲಾಭ ಮಾಡಲಿದ್ದಾರೆ. ಹಾಗಾಗಿಯೆ ಅವರು 2,200 ಕೋಟಿ ರೂಪಾಯಿಗಳನ್ನು ಲಂಚ ನೀಡುತ್ತಿದ್ದಾರೆ. ಇದು ದೇಶದ ಜನರಿಗೆ ಮಾಡಿರುವ ದ್ರೋಹವಾಗಿದ್ದು, ಇದನ್ನು ಭರಿಸಬೇಕಾಗಿದ್ದು ಈ ದೇಶದ ಸಾಮಾನ್ಯ ಜನರೇ ಆಗಿದ್ದಾರೆ. 1 ರೂಗಳಿಗೆ ಸಿಗಬೇಕಾಗಿದ್ದ ವಿದ್ಯುತ್ 2.5 ರೂಗಳು ನೀಡಿ ಕೊಂಡುಕೊಳ್ಳಬೇಕಾಗುವ ಪರಿಸ್ಥಿತಿ ಬರುತ್ತದೆ” ಎಂದು ಶಿವಸುಂದರ್ ಹೇಳಿದರು.
ಭ್ರಷ್ಟಾಚಾರ ಆರೋಪದ ನಂತರದ ಬೆಳವಣಿಗೆ ಮತ್ತು ವಿಪಕ್ಷಗಳ ದಾಳಿ
ಅಮೆರಿಕ ಮಾಡಿರುವ ಭ್ರಷ್ಟಾಚಾರ ಆರೋಪದ ನಂತರ ವಿಪಕ್ಷಗಳು ಇದನ್ನು ವ್ಯಾಪಕವಾಗಿ ಚರ್ಚೆ ಮಾಡುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗೌತಮ್ ಅದಾನಿಯನ್ನು ಬಂಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನೇತೃತ್ವದ ಇಂಡಿಯಾ ಮೈತ್ರಿಕೂಟವು ಅದಾನಿ ವಿರುದ್ಧದ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅಗ್ರಹಿಸುತ್ತಿದೆ. ಆಡಳಿತಾರೂಢ ಸರ್ಕಾರವು ಅವರನ್ನು ರಕ್ಷಿಸುತ್ತಿದೆ ಮತ್ತು ದೋಷಾರೋಪಣೆಗಳ ಗಂಭೀರ ಆತಂಕಗಳನ್ನು ಪರಿಹರಿಸಲು ವಿಫಲವಾಗಿದೆ ಎಂದು ಆರೋಪಿಸಲಾಗುತ್ತಿದೆ. ಅದಾನಿ ಗ್ರೂಪ್‌ನ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಉತ್ತರದಾಯಿತ್ವ ಮತ್ತು ಪಾರದರ್ಶಕತೆಗಾಗಿ ವಿರೋಧ ಪಕ್ಷದ ಸದಸ್ಯರು ಕರೆ ನೀಡಿದ್ದು, ಸಂಸತ್ತಿನಲ್ಲಿ ಪ್ರತಿಭಟನೆಗಳು ಭುಗಿಲೆದ್ದು ಅಧಿವೇಶನಕ್ಕೆ ಅಡ್ಡಿಯಾಗಿವೆ. ಆದಾಗ್ಯೂ, ಕೇಂದ್ರ ಸರ್ಕಾರ ಈ ಬಗ್ಗೆ ಚರ್ಚೆಗೆ ಮುಂದಾಗುತ್ತಿಲ್ಲ.
ಈ ಆರೋಪದ ನಂತರ, “ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಸಲ್ಲಿಸಿರುವ ಚಾರ್ಜ್‌ಶೀಟ್ ವರದಿಗಳ ಬಳಿಕ ಕ್ರಮ ಕೈಗೊಳ್ಳಲಾಗುವುದು” ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಜೊತೆಗೆ ಅದಾನಿ ಸಂಸ್ಥೆ ಜೊತೆಗಿನ ವಿದ್ಯುತ್ ಒಪ್ಪಂದ ರದ್ದುಗೊಳಿಸಲು ಆಂಧ್ರ ಸರ್ಕಾರ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ಈ ಹಿಂದಿನ ಮುಖ್ಯಮಂತ್ರಿಯಾಗಿದ್ದ ಜಗನ್‌ಮೋಹನ್ ರೆಡ್ಡಿಗೆ ಈ ಪ್ರಕರಣದಲ್ಲಿ ಅದಾನಿ 1,750 ಕೋಟಿ ಲಂಚದ ಭರವಸೆ ನೀಡಿದ್ದರು ಎಂದು ಆರೋಪ ಕೇಳಿಬಂದಿದೆ. ಈ ನಡುವೆ ತೆಲಂಗಾಣದ ಕಾಂಗ್ರೆಸ್ ಸರ್ಕಾರವು, ಯಂಗ್ ಇಂಡಿಯಾ ಸ್ಕಿಲ್ ಯೂನಿವರ್ಸಿಟಿಗಾಗಿ ಅದಾನಿ ಫೌಂಡೇಶನ್ ವಾಗ್ದಾನ ಮಾಡಲಾಗಿದ್ದ 100 ಕೋಟಿಗಳನ್ನು ಸ್ವೀಕರಿಸುವುದಿಲ್ಲ ಎಂದು ನಿರ್ಧರಿಸಿದೆ. ತನ್ನ ನೆಲದಲ್ಲಿ ಅದಾನಿ ಸಂಸ್ಥೆ ಹೂಡಿಕೆ ಮಾಡಿರುವ ಯೋಜನೆಗಳ ಕುರಿತು ಶ್ರೀಲಂಕಾ ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ಬಾಂಗ್ಲಾದೇಶದಲ್ಲಿ ನಡೆದ ಕ್ರಾಂತಿಯ ನಂತರ ಹೊಸ ಮಧ್ಯಂತರ ಸರ್ಕಾರ ಅದಾನಿ ಜೊತೆಗಿನ ಒಪ್ಪಂದವನ್ನು ಪರಿಶೀಲಿಸುವ ಬಗ್ಗೆ ಮಾತನಾಡುತ್ತಿದೆ. ಕೀನ್ಯಾ ಸರ್ಕಾರ ಅದಾನಿ ಜೊತೆಗಿನ ಒಪ್ಪಂದಗಳನ್ನು ರದ್ದು ಮಾಡಿದೆ.
ಅಮೆರಿಕದ ಆರೋಪದ ನಂತರ ಅವರ ಸಂಸ್ಥೆಯ ಶೇರುಗಳ ಮೌಲ್ಯ 20% ಕುಸಿದಿತ್ತು. ಎಂದಿನಂತೆ, ಅದಾನಿ ಮತ್ತು ಅವರ ಗ್ರೂಪ್ ಈ ಆರೋಪಗಳನ್ನು ಅಲ್ಲಗಳೆದಿದ್ದು, ಇವು ಆಧಾರರಹಿತ ಮತ್ತು ರಾಜಕೀಯಪ್ರೇರಿತವಾಗಿವೆ ಎಂದು ಪ್ರತಿಪಾದಿಸಿದ್ದಾರೆ. ನಮ್ಮ ಮೇಲೆ ನಡೆಯುವ ಪ್ರತಿ ದಾಳಿಯು ನಮ್ಮನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸಮರ್ಥನೆ ಮಾಡುತ್ತಿರುವ ಬಿಜೆಪಿ ಮತ್ತು ಇನ್ನೂ ಎಚ್ಚೆತ್ತುಕೊಳ್ಳದ ತನಿಖಾ ಸಂಸ್ಥೆಗಳು!
ಅದಾನಿ ಮತ್ತು ಬಿಜೆಪಿ ನಡುವಿನ ನಂಟು ವಿಶ್ವಕ್ಕೆ ಗೊತ್ತಿದ್ದರೂ, ಭಾರಿ ಭ್ರಷ್ಟಾಚಾರ ನಡೆದಿರುವ ಅರೋಪಗಳು ಜಗತ್‌ಜಾಹೀರವಾಗಿದ್ದರೂ ಆಡಳಿತ ಪಕ್ಷ ಬಿಜೆಪಿಯ ಪ್ರತಿನಿಧಿಗಳು ಗೌತಮ್ ಅದಾನಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಭಾರತದ ಆರ್ಥಿಕ ಪ್ರಗತಿಯನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ರಾಜಕೀಯಪ್ರೇರಿತ ದಾಳಿ ಇದು ಎಂದು ಹುಸಿ ’ದೇಶಪ್ರೇಮ’ವನ್ನು ಮುನ್ನಲೆಗೆ ತರುತ್ತಿದ್ದಾರೆ. ದೂರು ದಾಖಲಾದ ಕೂಡಲೆ ಎಚ್ಚೆತ್ತು ಈ ದೇಶದ ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ತಳ್ಳುವ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳು ಈ ಬಗ್ಗೆ ಇನ್ನೂ ಎಚ್ಚರವಾಗಿಲ್ಲ. ದೇಶದ ಎಲ್ಲಾ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಅದಾನಿಯನ್ನು ಇನ್ನಿಲ್ಲದಂತೆ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬೆಲೆಕೇರಿ ಅಕ್ರಮ ಗಣಿ ಅದಿರು ಪ್ರಕರಣದಲ್ಲಿ ಅದಾನಿ ವಿರುದ್ಧ ಪ್ರಕರಣ ದಾಖಲಾಗಲಿ: ಬಿ.ಕೆ. ಹರಿಪ್ರಸಾದ್
ಶ್ರೀಲಂಕಾ, ಬಾಂಗ್ಲಾದೇಶ, ಕೀನ್ಯಾ ಸೇರಿದಂತೆ ಹಲವಾರು ಏಜೆನ್ಸಿಗಳು ಅದಾನಿಯನ್ನು ಕಪ್ಪು ಪಟ್ಟಿಗೆ ಇಡುತ್ತಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಇದು ನಡೆಯುತ್ತಿಲ್ಲ. ಯಾಕೆಂದರೆ ಇದರ ಹಿಂದೆ ಮೋದಿ ಮತ್ತು ಬಿಜೆಪಿ ಇದೆ ಎಂಬುವುದು ಸ್ಪಷ್ಟವಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ 2014ರಲ್ಲಿ ದೇಶದ ಪ್ರಧಾನಿಯಾಗಿ ಆಯ್ಕೆಯಾದಾಗ ಅಹ್ಮದಾಬಾದ್‌ನಿಂದ ದೆಹಲಿಗೆ ತೆರಳಿದ್ದೇ ಅದಾನಿ ಅವರ ವಿಮಾನದಲ್ಲಾಗಿದೆ. “ಇದು ಒಂದು ರೂಪಕವೆಂಬಂತೆ ನಾವು ನೋಡಬಹುದು” ಎಂದು ಶಿವಸುಂದರ್ ಅವರು ಹೇಳುತ್ತಾರೆ.
“ಆಂಧ್ರಪ್ರದೇಶದಲ್ಲಿ 8 ಸಾವಿರ ವಿದ್ಯುತ್ ಉತ್ಪಾದನೆಗೆ ಅದಾನಿ ಒಪ್ಪಂದ ಮಾಡಿಕೊಂಡಿದ್ದು, ಹಾಗಾಗಿಯೇ ಪ್ರಕರಣದಲ್ಲಿ ಅತೀಹೆಚ್ಚು ಲಂಚ ಅವರಿಗೆ ಹೋಗಿದೆ. ಉಳಿದಂತೆ ಜಮ್ಮು ಕಾಶ್ಮೀರದಲ್ಲಿ 2019ರ ನಂತರ ಮೋದಿ ಸರ್ಕಾರವೇ ನೇರವಾಗಿ ಆಡಳಿತ ನಡೆಸುತ್ತಿವೆ. ತಮಿಳುನಾಡು ಮತ್ತು ಛತ್ತೀಸ್‌ಗಡ ನಮಗೆ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಅವರು ಕೂಡಾ ಲಂಚಕೋರರೇ ಆಗಿದ್ದಾರೆ. ಬಿಜೆಪಿ ಬೃಹತ್ ಲಂಚಕೋರರಾಗಿದ್ದರೆ, ಕಾಂಗ್ರೆಸ್ ಮಹಾ ಲಂಚಕೋರರು” ಎಂದು ಅವರು ಹೇಳಿದರು.
“ಅದಾನಿ ಜೊತೆಗೆ ಈ ಒಪ್ಪಂದವನ್ನು ಕುದುರಿಸಿರುವುದು ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (SECI) ಆಗಿದೆ. ಒಪ್ಪಂದದಂತೆ, ಅದಾನಿ ಉತ್ಪಾದನೆ ಮಾಡಿರುವ ವಿದ್ಯುತ್ ಅನ್ನು SECI ಖರೀದಿ ಮಾಡಿ ದೇಶದ ಇತರ ರಾಜ್ಯಗಳಿಗೆ ಮಾರಾಟ ಮಾಡುತ್ತದೆ. ಸಿಬಿಐ, ಇಡಿ, ಸೆಬಿ ಈ ಭ್ರಷ್ಟಾಚಾರವನ್ನು ತನಿಖೆ ನಡೆಸಬೇಕಾಗಿದೆ. ಆದರೆ ಕೇಂದ್ರದಲ್ಲಿ ಬಿಜೆಪಿ ಇರುವುದರಿಂದ ಅದಾನಿಯ ವಿರುದ್ಧ ತನಿಖೆ ನಡೆಸುತ್ತದೆ ಎಂದು ಭಾವಿಸುವುದು ಮೂರ್ಖತನ. ಒಂದುವೇಳೆ ಸೆಬಿ ಇವರ ವಿರುದ್ಧ ತನಿಖೆ ನಡೆಸಿದರೂ ಏನೂ ಸಿಕ್ಕಿಲ್ಲ ಎಂದು ಪ್ರಕರಣ ಮುಚ್ಚಿಹಾಕುತ್ತಾರೆ. ಅಷ್ಟೇ ಅಲ್ಲದೆ, ಸೆಬಿ ಮುಖ್ಯಸ್ಥೆಯೇ ಈ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದಾರೆ. ಹಾಗಾಗಿ ಬಿಜೆಪಿಯ ಮೋದಿ ಇರುವವರೆಗೂ ಈ ಪ್ರಕರಣದಲ್ಲಿ ಏನೂ ನಡೆಯುವುದಿಲ್ಲ, ಒಂದುವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ, ದೊಡ್ಡ ಪರಿಣಾಮ ಬೀಳುವುದಿಲ್ಲ. ಯಾಕೆಂದರೆ ಕಾಂಗ್ರೆಸ್ ಕೂಡಾ ಬಂಡವಾಳಶಾಹಿಗಳ ಮತ್ತು ಹಿಂದುತ್ವದ ಪರವಾಗಿದ್ದಾರೆ. ಆದರೆ ಬಿಜೆಪಿ ತೀವ್ರವಾಗಿದ್ದು, ಕಾಂಗ್ರೆಸ್ ಮಂದಗಾಮಿ ಅಷ್ಟೆ” ಎಂದು ಶಿವಸುಂದರ್ ಅವರು ಹೇಳಿದರು.
ಚಿಂತಕ ಶ್ರೀಪಾದ ಭಟ್ ಅವರು ಮಾತನಾಡಿ, “ನೆಹರೂ ಕಾಲದಲ್ಲಿ ಸಮಾಜವಾದಿ ಪರಿಕಲ್ಪನೆಯೊಂದಿಗೆ ಸಾರ್ವಜನಿಕ ಉದ್ಯಮಗಳನ್ನು ಖಾಸಗಿ ಪಾಲುದಾರಿಕೆಯೊಂದಿಗೆ ಬೆರೆಸಿ ದೇಶದ ಆರ್ಥಿಕತೆಯನ್ನು ಕಟ್ಟಲಾಗಿತ್ತು. ಇಂದಿರಾ ಗಾಂಧಿ ಕಾಲದಲ್ಲಿ ದೇಶದ ಆರ್ಥಿಕತೆಯು ಸಮಾಜವಾದದ ಮತ್ತೊಂದು ರೂಪಕ್ಕೆ ಹೊರಳಿತು. ಇಂದಿರಾ ಕಾಲದ ಹಲವಾರು ನೀತಿಗಳು ಸಮಾಜವಾದದ ಭ್ರಮೆ ಹುಟ್ಟಿಸಿತ್ತು. ನಂತರ ಭಾರತವು 90ರ ದಶಕದ ಖಾಸಗೀಕರಣದ ಸಮಯದಲ್ಲಿ ಬಂಡವಾಳಶಾಹಿ ವ್ಯವಸ್ಥೆಗೆ ಹೊರಳಿತು. ಆದರೆ, ಪ್ರಧಾನಿ ಮೋದಿ ಕಾಲದಲ್ಲಿ ಖಾಸಗೀಕರಣ ಮತ್ತೊಂದು ಹೆಜ್ಜೆಯಿಟ್ಟು, ದೇಶದ ಆರ್ಥಿಕ ವ್ಯವಸ್ಥೆಯನ್ನು Oligarchy ಸ್ಥಿತಿಗೆ ಕೊಂಡೊಯ್ದಿದೆ. ಈ ವ್ಯವಸ್ಥೆಯಲ್ಲಿ ಇಡೀ ದೇಶದ ಆರ್ಥಿಕತೆ ಕೆಲವೇ ಕೆಲವು ಕುಟುಂಬಗಳ ಕೈಯ್ಯಲ್ಲಿ ಇರುತ್ತದೆ. ಪ್ರಸ್ತುತ ದೇಶದ ಆರ್ಥಿಕತೆ ಅದಾನಿ, ಅಂಬಾನಿ ಅವರ ಕೈಯ್ಯಲ್ಲಿ ಇದೆ. ಇವರಿಬ್ಬರ ಸಂಪತ್ತು ನಮ್ಮ ದೇಶದ ಏಳು ರಾಜ್ಯಗಳ ಬಜೆಟ್ ವೆಚ್ಚವಾಗಿದೆ. ಇದರ ಮುಂದುವರೆದ ಭಾಗವೇ ಸೋಲಾರ್ ವಿದ್ಯುತ್ ಮತ್ತು ಅದಾನಿಯ ಹಗರಣ” ಎಂದು ಹೇಳಿದರು.
“ಅದಾನಿಗೆ ಬಂದರು, ಏರ್‌ಪೋರ್ಟ್, ಅದಿರು, ಕಲ್ಲಿದ್ದಲು ಗಣಿ ಈ ಹಿಂದೆ ಕೊಟ್ಟಿದ್ದರು. ಈಗ ವಿದ್ಯುತ್ ಉತ್ಪಾದನೆಯನ್ನೂ ಕೊಟ್ಟಿದ್ದಾರೆ. ಈ ಸೋಲಾರ್ ವಿದ್ಯುತ್ ಉತ್ಪಾದನೆಗೆ ತಾನು ನ್ಯಾಯಯುತ ಮಾರ್ಗದಲ್ಲಿ ಒಪ್ಪಂದ ಮಾಡಿದ್ದೇನೆ ಎಂದು ಹೇಳಿ ಅಮೆರಿಕದಲ್ಲಿ ಬಂಡವಾಳ ಕ್ರೋಢೀಕರಿಸಿದರು. ಆದರೆ ಈ ಒಪ್ಪಂದ ಲಂಚ ಪಡೆದು ಮಾಡಿದ್ದು ಎಂದು ತಿಳಿದನಂತರ, ಸುಳ್ಳು ಹೇಳಿ ಬಂಡವಾಳ ಕ್ರೋಢೀಕರಿಸಿದ್ದಕ್ಕಾಗಿ ಅಮೆರಿಕ ಅವರ ವಿರುದ್ಧ ತನಿಖೆ ನಡೆಸಿ ಬಂಧನದ ವಾರೆಂಟ್ ಕಳುಹಿಸಿದೆ. ಈ ಹಿಂದೆ ಹಿಂಡನ್‌ಬರ್ಗ್ ಅದಾನಿ ವಿರುದ್ಧ ಆರೋಪ ಮಾಡಿದಾಗ ಸೆಬಿ ತನ್ನ ವಿರುದ್ಧ ತನಿಖೆ ನಡೆಸುತ್ತಿದೆ ಎಂಬ ವಿಚಾರವನ್ನು ಕೂಡಾ ಅದಾನಿ ಬಂಡವಾಳ ಹಾಕುವವರೊಂದಿಗೆ ಮುಚ್ಚಿಟ್ಟಿದ್ದರು. ಸೆಬಿ ಕೂಡಾ ಅವರೊಂದಿಗೆ ಸೇರಿ ಯಾವುದೇ ತನಿಖೆ ನಡೆಸದೆ ಕ್ಲೀನ್‌ಚಿಟ್ ನೀಡಿತ್ತು. ಸುಪ್ರೀಂಕೋರ್ಟ್ ಅವರೊಂದಿಗೆ ಸಹಕರಿಸಿತ್ತು. ಇವೆಲ್ಲವೂ ಮೋದಿ ಅವರ Oligarchy ಆರ್ಥಿಕ ನೀತಿಯ ಪರಿಣಾಮವಾಗಿದೆ. ಈ ಎರಡು ಕುಟುಂಬಗಳಿಗೆ ಮಾತ್ರ ಮಣೆ ಹಾಕಿರುವುದರಿಂದ ದೇಶದ 30%ಕ್ಕೂ ಹೆಚ್ಚು ಸಣ್ಣ ಉದ್ಯಮಗಳು ನಿಂತುಹೋಗಿವೆ ಅಥವಾ ಮುಚ್ಚಿಹೋಗಿವೆ. ಈ ಸಣ್ಣ ಉದ್ಯಮಗಳು ದೇಶದಲ್ಲಿ ಸುಮಾರು 12 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದವು. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸುತ್ತಿರುವ ಅದಾನಿ ಸೃಷ್ಟಿ ಮಾಡುತ್ತಿರುವ ಉದ್ಯೋಗ ಕೇವಲ 25 ಸಾವಿರ ಮಾತ್ರ. ಇವರು ಉದ್ಯೋಗವೂ ಸೃಷ್ಟಿ ಮಾಡುತ್ತಿಲ್ಲ, ಭ್ರಷ್ಟಾಚಾರ ಕೂಡಾ ಮಾಡುತ್ತಿದ್ದಾರೆ, ಆದರೆ ಅವರ ವಿರುದ್ಧ ತನಿಖೆ ನಡೆಯುತ್ತಿಲ್ಲ ಇದು ಬಿಜೆಪಿ ಎಸಗುತ್ತಿರುವ ದೇಶದ್ರೋಹವಲ್ಲವೆ?: ಎಂದು ಶ್ರೀಪಾದ್ ಭಟ್ ಕೇಳುತ್ತಾರೆ. ಈ ಎಲ್ಲಾ ಬೆಳವಣಿಗೆಗಳು ದೇಶದ ಆರ್ಥೀಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಮತ್ತು ಒಬ್ಬ ವ್ಯಕ್ತಿಗೆ, ಒಂದು ಕುಟುಂಬಕ್ಕೆ ಇಡೀ ದೇಶದ ಬಂಡವಾಳವನ್ನು ಕೊಟ್ಟರೆ, ಭಾರತಕ್ಕೆ ಕೆಟ್ಟ ಹೆಸರು ಬರುತ್ತವೆ ಎಂದು ಅವರು ಹೇಳುತ್ತಾರೆ.
ಅದಾನಿ ವಿರುದ್ಧ ಬಂದಿರುವ ಈ ತಾಜಾ ಆರೋಪಗಳು ಎಂದಿನಂತೆ ಸರ್ಕಾರಿ ರಕ್ಷಣೆಯೊಂದಿಗೆ ಕಸದಬುಟ್ಟಿಗೆ ಸೇರುತ್ತವೆಯೇ? ಮುಖ್ಯವಾಹಿನಿ ಮಾಧ್ಯಮ ಈ ಆರೋಪಗಳನ್ನು ಜನರಿಂದ ಮರೆಮಾಚಿ ಬಂಡವಾಳಶಾಹಿ ಮತ್ತು ಪ್ರಭುತ್ವಕ್ಕೆ ತನ್ನ ನಿಷ್ಠೆಯನ್ನು ಮೆರೆಯಲಿದೆಯೇ? ಅಥವಾ ಎಲ್ಲೋ ಬೆಳಕಿನ ಕಿರಣವೊಂದು ಕಾಣಿಸಿ ಆರೋಪಿಗಳ ವಿರುದ್ಧ ತನಿಖೆಗೆ ಕಾರಣವಾಗುವಂಥ ಬೆಳವಣಿಗೆ ಏನಾದರೂ ಆಗಬಹುದೇ?


