ಅಯೋಧ್ಯೆ ವಿವಾದದಲ್ಲಿ ಪ್ರಮುಖ ದಾವೆದಾರರಲ್ಲಿ ಒಂದಾಗಿದ್ದ ಸುನ್ನಿ ವಕ್ಫ್ ಬೋರ್ಡ್ ಮಂಡಳಿಯು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನೆ ಮನವಿಯನ್ನು ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ ಮಂಡಳಿಯ ಅಧ್ಯಕ್ಷ ಜಫರ್ ಅಹ್ಮದ್ ಫರೂಕಿಯವರು ಸುದ್ದಿಗೋಷ್ಠಿ ನಡೆಸಿ “ಮಂಡಳಿಯು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತದೆ. ಹಾಗಾಗಿ ತೀರ್ಪಿನ ಮರುಪರಿಶೀಲನೆ ಮಾಡುವ ಮೇಲ್ಮನವಿಯನ್ನು ಸಲ್ಲಿಸದಿರಲು ನಿರ್ಧರಿಸಿದೆ. ಮಂಡಳಿಯು ಸಂಪೂರ್ಣ ವರದಿಯನ್ನು ಕೂಲಂಕಷವಾಗಿ ಓದಿದ ತರುವಾಯ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಲಾಗುವುದು. ಆದರೆ ಮೇಲ್ಮನವಿ ಸಲ್ಲಿಸದಿರುವುದು ಮಾತ್ರ ಖಚಿತ” ಎಂದು ತಿಳಿಸಿದ್ದಾರೆ.
ಇದಕ್ಕು ಮುನ್ನ, ತೀರ್ಪು ಹೊರಬರುತ್ತಿದ್ದಂತೆಯೇ, ಸುನ್ನಿ ವಕ್ಫ್ ಬೋರ್ಡ್ ಪರ ವಾದ ಮಂಡಿಸಿದ್ದ ಮತ್ತು ಸುನ್ನಿ ವಕ್ಪ್ ಮಂಡಳಿಯ ಸದಸ್ಯರೂ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಕಾರ್ಯದರ್ಶಿಯೂ ಆದ ಜಫರ್ಯಾಬ್ ಜಿಲಾನಿಯವರು ಪತ್ರಿಕಾಗೋಷ್ಠಿಯಲ್ಲಿ “ತೀರ್ಪಿನ ಬಗ್ಗೆ ಗೌರವವಿದೆ, ಆದರೆ ಸಮಾಧಾನ ತಂದಿಲ್ಲ. ಹಾಗಾಗಿ ಮರುಪರಿಶೀಲನೆ ಅರ್ಜಿ ಹಾಕುವ ಬಗ್ಗೆ ಯೋಚಿಸಿ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದರು. ಆದರೆ ಫರೂಕಿಯವರ ಹೇಳಿಕೆಯಿಂದ ಮರು ಪರಿಶೀಲನೆ ಅರ್ಜಿ ಸಲ್ಲಿಸಲಾಗುವುದಿಲ್ಲ ಎಂಬುದು ಖಾತ್ರಿಯಾಗಿದೆ.
ಈ ಬಗ್ಗೆ ಜಫರ್ಯಾಬ್ ಜಿಲಾನಿಯವರ ಸ್ಪಷ್ಟಣೆ ಕೇಳಿದಾಗ, “ಮಧ್ಯಾಹ್ನ ನಾನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅದರ ಕಾರ್ಯದರ್ಶಿಯಾಗಿ ಅಭಿಪ್ರಾಯ ಹೇಳಿದ್ದೆ. ವಕ್ಫ್ ಮಂಡಳಿಯ ಪರವಾಗಿ ಅಲ್ಲ.” ಎಂದರು.
`ಸುನ್ನಿ ವಕ್ಫ್ ಮಂಡಳಿಯಲ್ಲದೆ ನಿರ್ಮೋಹಿ ಅಖಾರ, ಶಿಯಾ ವಕ್ಫ್ ಮಂಡಳಿಗಳೂ ಈ ಪ್ರಕರಣದಲ್ಲಿ ದಾವೆದಾರರಾಗಿದ್ದವು. ಅವು ಮೇಲ್ಮನವಿ ಸಲ್ಲಿಸುತ್ತವೋ, ಇಲ್ಲವೋ ಗೊತ್ತಿಲ್ಲ. ಅದು ಅವರಿಗೆ ಬಿಟ್ಟ ವಿಚಾರ’ ಎಂಬ ಮಾತನ್ನೂ ಫರೂಕಿಯವರು ಹೇಳಿದರು.
ಬೆಳಿಗ್ಗೆ ತನ್ನ ಅಂತಿಮ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್ ಅಯೋಧ್ಯೆಯ ವಿವಾದಿತ 2.7 ಎಕರೆ ಜಾಗವನ್ನು ಮಂದಿರ ನಿರ್ಮಾಣಕ್ಕೆ ಬಿಟ್ಟುಕೊಡಬೇಕು, ಈ ಕುರಿತು ಕೇಂದ್ರ ಸರ್ಕಾರ ಒಂದು ಟ್ರಸ್ಟ್ ಸ್ಥಾಪಿಸಬೇಕು. ಮತ್ತು ಇದಕ್ಕೆ ಬದಲಾಗಿ ಅಯೋಧ್ಯೆಯಲ್ಲೇ ಬೇರೆಡೆ ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಮೀನು ನೀಡಬೇಕು ಎಂದು ಆದೇಶಿಸಿತ್ತು.


