| ಎಚ್.ಎಸ್ ದೊರೆಸ್ವಾಮಿ |
ಸರ್ವೋದಯ ಸಮಾಜ ಚುನಾವಣೆಗಳಲ್ಲಿ ರೂಢಮೂಲ ಬದಲಾವಣೆಯನ್ನು ಬಯಸುತ್ತದೆ. ರಾಜಕೀಯ ಪಕ್ಷಗಳ ವಿಚಾರ ರಾಜ್ಯಾಂಗದಲ್ಲಿ ಎಲ್ಲೋ ಒಂದು ಕಡೆ ಪ್ರಸ್ತಾಪಿಸಲಾಗಿದೆ. ಆದರೆ ಇಂದು ರಾಜಕೀಯ ಪಕ್ಷಗಳು ರಾಜಕೀಯವನ್ನು ಕಬ್ಜಾ ಮಾಡಿವೆ. ಈಗ ಇರುವುದು ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರೀಯ ಕಾಂಗ್ರೆಸ್ ಅಲ್ಲ, ಅದು ಇಂದಿರಾ ಕಾಂಗ್ರೆಸ್. ಭಾರತೀಯ ಜನತಾಪಕ್ಷ ಜಾತೀಯ ಸಂಸ್ಥೆ. ಹಾಗೆಯೇ ಅಕಾಲಿದಳ ಸಿಖ್ಖರ ಸಂಸ್ಥೆ. ಅದೇ ರೀತಿ ಮುಸ್ಲಿಮರದೂ ಒಂದೆರಡು ರಾಜಕೀಯ ಪಕ್ಷಗಳಿವೆ. ಜಾತ್ಯತೀತ ಭಾರತದಲ್ಲಿ ಜಾತೀಯ ಸಂಸ್ಥೆಗಳಿಗೆ ಮತೀಯ ಸಂಸ್ಥೆಗಳಿಗೆ ಸ್ಥಾನ ಇರಬಾರದು. ದೇವೇಗೌಡರ ಜಾತ್ಯತೀತ ಜನತಾದಳ ಒಕ್ಕಲಿಗ ಸಂಸ್ಥೆ. ಜಾತ್ಯತೀತ ಎಂದು ಘೋಷಿಸಿಕೊಂಡು ಜಾತಿ ಸಂಸ್ಥೆ ನಡೆಸುವುದು ನ್ಯಾಯಬಾಹಿರ. ಕಮ್ಯುನಿಸ್ಟ್ ಪಕ್ಷ ನೆಲಕಚ್ಚಿದೆ. ಕೇರಳದಲ್ಲಿ ಬಿಟ್ಟು ಉಳಿದ ಕಡೆ ಕಮ್ಯುನಿಸ್ಟ್ ಪಕ್ಷವು ಇತರೇ ಪಕ್ಷಗಳನ್ನು ನಮಗೆ ಒಂದೆರಡು ಸೀಟು ಬಿಟ್ಟು ಕೊಡಿ ಎಂದು ಕೇಳುವ ದುರವಸ್ಥೆಯಲ್ಲಿದೆ.
ಸರ್ವೋದಯ ಸಮಾಜದ ರಚನೆಯಾದಾಗ ಜಾತಿ, ಮತ ಸಂಸ್ಥೆಗಳಿಗೆ ಭಾರತದಲ್ಲಿ ಎಲ್ಲೂ ಮಾನ್ಯತೆ ಇರುವುದಿಲ್ಲ. ಎರಡನೆಯದಾಗಿ ಈಗಿರುವ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿ, ಜನರ ಮತ ಕೇಳುತ್ತವೆ. ಮತೀಯ ರಾಜಕೀಯ ಪಕ್ಷಗಳಿಗೆ ಮತ ನೀಡಬೇಕಾದ ದುಸ್ಥಿತಿ ಭಾರತದ ಪ್ರಜೆಗಳದು.
ಇದು ಪ್ರಜಾಪ್ರಭುತ್ವ ಎನಿಸಿಕೊಳ್ಳುವುದಾದರೂ ಹೇಗೆ? ಪ್ರಜೆಯಿಂದ ಪ್ರಜೆಗಾಗಿ, ಪ್ರಜೆಗೋಸ್ಕರ ರಚಿಸಿಕೊಂಡಿರುವ ರಾಜ್ಯಾಂಗ ನಮ್ಮದು. ಅಂದರೆ ಪ್ರಜಾರಾಜ್ಯದಲ್ಲಿ ಪ್ರಜೆಯ ಪರ ಸೇವೆ ಸಲ್ಲಿಸುವ ಪ್ರತಿನಿಧಿ ಇರಬೇಕೇ ಹೊರತು ರಾಜಕೀಯ ಪಕ್ಷದ ಪ್ರತಿನಿಧಿಯಲ್ಲ. ಈಗ ಪ್ರಜೆ ತನ್ನ ಮತವನ್ನು ರಾಜಕೀಯ ಪಕ್ಷ ನಿಲ್ಲಿಸುವ ಉಮೇದುದಾರನಿಗೆ ನೀಡುತ್ತಿದ್ದಾನೆಯೇ ಹೊರತು ಪ್ರಜೆಗಲ್ಲ. ಹಾಗಾಗಿ ಈಗ ಆಯ್ಕೆಯಾಗಿ ಬರುವವರು ಪ್ರಜಾಪ್ರತಿನಿಧಿಗಳಲ್ಲ. ಪಕ್ಷಗಳ ಪ್ರತಿನಿಧಿಗಳು.
ಆದ್ದರಿಂದ ಸರ್ವೋದಯ ಸಮಾಜದಲ್ಲಿ ರಾಜಕೀಯ ಪಕ್ಷಗಳನ್ನು ರದ್ದು ಮಾಡಲಾಗುತ್ತದೆ. ನಿಜವಾದ ಪ್ರಜಾಪ್ರತಿನಿಧಿಯನ್ನು ಪ್ರಜೆಯೇ ಆಯ್ಕೆ ಮಾಡಿಕೊಳ್ಳುತ್ತಾನೆ. ಗ್ರಾಮದಿಂದ ಹಿಡಿದು ದೆಹಲಿಯವರೆಗೆ ಆಯ್ಕೆಯಾಗುವ ಎಲ್ಲರೂ ನಿಜವಾದ ಪ್ರಜಾಪ್ರತಿನಿಧಿಗಳಾಗುತ್ತಾರೆ. ಪಂಚಾಯ್ತಿಯಿಂದ ಹಿಡಿದು ಪಾರ್ಲಿಮೆಂಟ್‍ವರೆಗೆ ಎಲ್ಲಾ ಹಂತದಲ್ಲೂ ಮತದಾರರ ಸಂಘಗಳನ್ನು ರಚಿಸಲಾಗುವುದು. ಈ ಮತದಾರರ ಸಂಘ, ತನ್ನ ಪ್ರತಿನಿಧಿ ಯಾರು ಎಂಬುದನ್ನು ನಿರ್ಧರಿಸುತ್ತದೆ. ದೆಹಲಿಯಲ್ಲಿ ಕೂತು, ಬೆಂಗಳೂರಿನಲ್ಲಿ ಕೂತು ಈ ಮತದಾರರ ಸಂಘಗಳು ತಮ್ಮ ನಿಜ ಪ್ರತಿನಿಧಿಗಳನ್ನು ಗೊತ್ತು ಮಾಡುವುದಿಲ್ಲ. ಮತದಾರರನ್ನು ಕೇಳಿಯೇ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮತದಾರರ ಸಂಘ ಒಂದಕ್ಕಿಂತ ಹೆಚ್ಚು ಜನರ ಹೆಸರುಗಳನ್ನು ಸೂಚಿಸುವುದಾದರೆ, ಅವರೆಲ್ಲ ಚುನಾವಣೆಯ ಕಣದಲ್ಲಿರುತ್ತಾರೆ.
ಚುನಾವಣೆಗೆ ಪ್ರತಿನಿಧಿಗಳನ್ನು ನಿಲ್ಲಿಸಬೇಕಾದರೆ ಅಭ್ಯರ್ಥಿಯ ಅರ್ಹತೆಗಳನ್ನೂ ಮಾನದಂಡವಾಗಿ ಬಳಸಲಾಗುತ್ತದೆ. ಅಭ್ಯರ್ಥಿ ವಿಚಾರವಂತನಾಗಿರಬೇಕು. ಜನಪರ ಸೇವೆಯನ್ನು ಮಾಡಿದವನಾಗಿರಬೇಕು. ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಅಪರಾಧಗಳನ್ನು ಮಾಡಿರಬಾರದು. ಅವನ ಮೇಲೆ ಚಾರ್ಜ್ ಶೀಟ್ ಹಾಕಿರಬಾರದು. ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ, ಹಣ ಅವನಲ್ಲಿರಬಾರದು. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಅಭ್ಯರ್ಥಿ ಗಳಿಸಿರುವ ಆದಾಯದ ವಿವರ ನೀಡಬೇಕು. ಅದು ಕಳೆದ ಚುನಾವಣೆಯಲ್ಲಿ ಸಲ್ಲಿಸಿರುವ ಆದಾಯಕ್ಕಿಂತ ಹೆಚ್ಚಾಗಿದ್ದರೇ, ಕಡ್ಡಾಯವಾಗಿ ಅದನ್ನು ಚುನಾವಣಾಧಿಕಾರಿ ಪರಿಶೀಲಿಸಬೇಕು. ಅಕ್ರಮವಾಗಿ ಸಂಪಾದಿಸಿದ ಆಸ್ತಿ ಇದ್ದರೆ ಅವರ ಚುನಾವಣಾ ಅರ್ಜಿಯನ್ನು ಅಂಗೀಕರಿಸಬಾರದು.
ಚುನಾವಣಾ ಸಂದರ್ಭದಲ್ಲಿ ಕಳ್ಳತನದಲ್ಲಿ ಸಾಗಿಸುತ್ತಿದ್ದ ಮದ್ಯವನ್ನು ನಾಶ ಮಾಡಲಾಗುತ್ತದೆ. ಹಿಡಿದ ಹಣವನ್ನು ಟ್ರೆಷರಿಗೆ ಕಳಿಸಲಾಗುತ್ತದೆ. ಆದರೆ ಹಿಡಿದು ಉಳಿದ ವಸ್ತುಗಳ ಬಗೆಗೆ ತನಿಖೆಯೂ ಆಗುತ್ತಿಲ್ಲ. ಶಿಕ್ಷೆಯೂ ಆಗುತ್ತಿಲ್ಲ. ಕಟ್ಟುನಿಟ್ಟಾಗಿ ತನಿಖೆ ನಡೆಸಿ ಮಾಲು ಸಾಗಿಸುವವನಿಗೆ, ದಾಸ್ತಾನು ಮಾಡಿದವನಿಗೆ ಆ ಮಾಲು ಯಾವ ಅಭ್ಯರ್ಥಿಯ ಪರವಾಗಿ ಸಾಗಿಸಲಾಗುತ್ತವೆ, ಹಂಚಿಕೆಯಾಗುತ್ತಿದೆ, ದಾಸ್ತಾನು ಮಾಡಲಾಗಿದೆ ಎಂಬುದನ್ನು ತನಿಖೆಮಾಡಿ ತಪ್ಪಿತಸ್ಥರ ಮೇಲೆ ಖಟ್ಳೆ ಹೂಡಬೇಕು. ಈಗ ಈ ಪ್ರಕ್ರಿಯೆ ನಡೆಯುತ್ತಿಲ್ಲ. ಅದರಿಂದಾಗಿ ವರ್ಷದಿಂದ ವರ್ಷಕ್ಕೆ ಚುನಾವಣೆಗಳಲ್ಲಿ ಅಕ್ರಮಗಳು ಹೆಚ್ಚುತ್ತಲೇ ಹೋಗುತ್ತವೆ.
ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಪ್ರಧಾನಿಯವರ ಅಥವಾ ಸರ್ಕಾರದ ಅಧೀನ ನೌಕರರಲ್ಲ. ಅವರು ನೇರವಾಗಿ ರಾಷ್ಟ್ರಪತಿಗಳ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಾರೆ. ಶೇಷನ್ ಅವಧಿಯಲ್ಲಿ ಅವರನ್ನು ಕಟ್ಟಿಹಾಕಲು ಇನ್ನಿಬ್ಬರು ಆಯುಕ್ತರನ್ನು ಸರ್ಕಾರ ನೇಮಿಸಿತು. ಈ ಪದ್ಧತಿ ಈಗಲೂ ಮುಂದುವರೆಯುತ್ತಿದೆ. ಈ ಇಬ್ಬರೂ ಸರ್ಕಾರದಿಂದ ನೇಮಿಸಲ್ಪಟ್ಟವರಾಗಿದ್ದು ಇವರಿಗೆ ಮುಖ್ಯ ಆಯುಕ್ತರಿಗಿರುವ ಸ್ವಾತಂತ್ರ್ಯ ಇಲ್ಲ. ಯಾವುದೋ ಅಕ್ರಮವಾದಾಗ ಮುಖ್ಯ ಆಯುಕ್ತರು ಕ್ರಮ ಕೈಗೊಳ್ಳಲು ನಿರ್ಧರಿಸಿದರೆ ಉಳಿದಿಬ್ಬರು ಅದಕ್ಕೆ ನಮ್ಮ ಸಮ್ಮತಿ ಇಲ್ಲ ಎನ್ನುತ್ತಾರೆ. ಓಟಿಗೆ ಹಾಕಿ ಅನ್ನುತ್ತಾರೆ. ಮತ ಹಾಕಿದಾಗ ಮುಖ್ಯ ಆಯುಕ್ತರ ತೀರ್ಮಾನ ಬಹುಮತದಿಂದ ನೆಲಕಚ್ಚುತ್ತದೆ.
ಸರ್ವೋದಯ ಸಮಾಜದಲ್ಲಿ ಈ ಮೂವರು ಸದಸ್ಯರೂ ಸ್ವಾತಂತ್ರರು. ಸರ್ಕಾರದ ಮರ್ಜಿ ಅನುಸರಿಸಿ ನಡೆಯುವವರಲ್ಲ ಎಂದು ಘೋಷಿಸಲಾಗುತ್ತದೆ.
ಚುನಾವಣೆ ಸಂಬಂಧದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಸರಳಗೊಳಿಸಲು, ಭ್ರಷ್ಟಾಚಾರವನ್ನು ತೊಡೆದುಹಾಕಲು ಚುನಾವಣೆಯ ವೆಚ್ಚವನ್ನು ಕಡಿತಗೊಳಿಸಲು ಅಥವಾ ಚುನಾವಣೆಯ ವೆಚ್ಚವನ್ನು ಸರ್ಕಾರವೇ ವಹಿಸಲು ತಿಳಿದುಕೊಳ್ಳಬೇಕಾದ ಕ್ರಮಗಳನ್ನು ತಜ್ಞರÀ ಸಮಿತಿ ತೀರ್ಮಾನಿಸುತ್ತದೆ. ಈ ತಜ್ಞರ ಸಮಿತಿಯ ಸದಸ್ಯರು ಸರ್ವೋದಯ ತತ್ವಗಳನ್ನು ಅರಿತವರಾಗಿರಬೇಕು. ಮತ, ಜಾತಿ, ಪಂಥದಿಂದ ಮುಕ್ತರಾದವರಾಗಿರಬೇಕು. ಸಮಾನತೆ, ಭ್ರಾತೃತ್ವದ ತತ್ವಗಳನ್ನು ಮೈಗೂಡಿಸಿಕೊಂಡವರಾಗಿರಬೇಕು. ನಮ್ಮ ರಾಜ್ಯಾಂಗದ ಆಶಯಗಳನ್ನು ಕಾರ್ಯರೂಪಕ್ಕೆ ಇಳಿಸುವ ಸೃಜನಶೀಲತೆಯ ವ್ಯಕ್ತಿಗಳಾಗಿರಬೇಕು. ಎಲ್ಲಾ ಇಸಂಗಳನ್ನು ತೊರೆದು ಆ ಇಸಂಗಳಲ್ಲೆಲ್ಲ ಇರುವ Humanism ಅನ್ನು ಮಾತ್ರ ಸರ್ವೋದಯ ಅಂಗೀಕರಿಸುತ್ತದೆ.
ಗಣರಾಜ್ಯದಲ್ಲಿ ಪ್ರಜೆಯದೇ ಪರಮಾಧಿಕಾರ ಎಂದು ರಾಜ್ಯಾಂಗ ಹೇಳುತ್ತದೆ. ಆದರೆ ಪ್ರಜೆ ಜಡವಾಗಿದ್ದಾನೆ, ಗಾಢ ನಿದ್ರೆಯಲ್ಲಿದ್ದಾನೆ. ‘ಇಣeಡಿಟಿಚಿಟ ‘Eternal vigilance is the price of liberty’ ಎಂಬುದನ್ನು ಅರಿಯುವಂತಾಗಬೇಕು. ಅದಕ್ಕಾಗಿ ಪ್ರಜೆಗಳೆಲ್ಲರನ್ನೂ ಗಾಢನಿದ್ರೆಯಿಂದ ಎಬ್ಬಿಸುವ ಅವರಿಗೆ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಪಾಠ ಮಾಡಬೇಕು. ಚುನಾವಣಾ ಪದ್ಧತಿಯನ್ನು ಶುದ್ಧೀಕರಿಸುವ ಪಾಠವನ್ನು ಎಲ್ಲ ಮತದಾರರಿಗೂ ಮಾಡಬೇಕು. ಬೌದ್ಧಿಕವಾಗಿ, ನೈತಿಕವಾಗಿ ಅವರಿಗೆ ಶಿಕ್ಷಣ ಸಿಗುವ ವ್ಯವಸ್ಥೆ ಆಗಬೇಕು.
ಈ ಮೂಲಭೂತ ಬದಲಾವಣೆಗಳನ್ನು ಸಮಾಜದಲ್ಲಿ ತರುವ ಮೂಲಕ ಹೊಸ ಅಹಿಂಸಕ ಸಮಾಜವನ್ನು ಕಟ್ಟುವ ಸಂಕಲ್ಪ ಮಾಡಬೇಕು.


