HomeUncategorizedಜೆ ಎನ್ ಯು ಕನ್ನಡ ಪೀಠದ ಹೊಸ ಪ್ರಯತ್ನ: ಕನ್ನಡ ಕಲಿಕೆಗೊಂದು ಹೊಸ ಜಾಲತಾಣ

ಜೆ ಎನ್ ಯು ಕನ್ನಡ ಪೀಠದ ಹೊಸ ಪ್ರಯತ್ನ: ಕನ್ನಡ ಕಲಿಕೆಗೊಂದು ಹೊಸ ಜಾಲತಾಣ

- Advertisement -
- Advertisement -

ಕನ್ನಡ ನಾಡು ಹೆಮ್ಮೆ ಪಡಬೇಕಾದ ಒಂದು ಪ್ರಯತ್ನವು ದೆಹಲಿಯಲ್ಲಿ ನಡೆದಿದೆ. ಜೆ.ಎನ್.ಯು ಕನ್ನಡ ಪೀಠವು ಕೈಗೆತ್ತಿಕೊಂಡು ಯಶಸ್ವಿಯಾಗಿ ಜಾರಿ ಮಾಡಿದ ಮಹತ್ಕಾರ್ಯಗಳಲ್ಲಿ ಕನ್ನಡ ಕಲಿಕೆ ಜಾಲತಾಣವೂ (www.kannadakalike.org)ಒಂದು. ಅದರ ಕುರಿತು ಅಲ್ಲಿನ ಸಂಶೋಧನಾ ಸಹಾಯಕರಾದ ಕೃಷ್ಣಮೂರ್ತಿ ಇಲ್ಲಿ ಪರಿಚಯಿಸಿದ್ದಾರೆ.

ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಕನ್ನಡಿಗರು ಕರ್ನಾಟಕವನ್ನು ಬಿಟ್ಟು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ಜಗತ್ತಿನ ಅನೇಕ ದೇಶಗಳಲ್ಲಿ  ಕೆಲಸ ಮಾಡುವುದು ಅನಿವಾರ್ಯವಾಗಿದೆ. ಹೀಗೆ ಹೋದವರಲ್ಲಿ ಮೊದಲ ತಲೆಮಾರಿನ ಜನರು ತಮ್ಮ ಜೊತೆ ಕರ್ನಾಟಕದ ಸಾಂಸ್ಕೃತಿಕ ನೆನಪುಗಳನ್ನೂ ಕನ್ನಡ ಭಾಷೆಯನ್ನೂ ಕೊಂಡೊಯ್ಯುತ್ತಾರೆ, ಮನೆಯೊಳಗೆ ಮಾತೃಭಾಷೆಯನ್ನೂ ಉಳಿಸಿಕೊಳ್ಳುತ್ತಾರೆ.  ಆದರೆ ಇವರಲ್ಲಿ ಎರಡನೇ ತಲೆಮಾರಿನ ಜನರ ಅಗತ್ಯಗಳೇ ಬೇರೆ. ಅವರು ಸಾಮಾನ್ಯವಾಗಿ ತಾವು ಎಲ್ಲಿ ಬದುಕುತ್ತಾರೋ ಅಲ್ಲಿನ ಭಾಷೆಯನ್ನು ಕಲಿತು ವ್ಯವಹರಿಸುತ್ತಾರೆ. ಬಹಳ ಕ್ಷಿಪ್ರವಾಗಿ ಸ್ಥಳೀಯ ಭಾಷೆಯನ್ನು ಮನೆಯೊಳಕ್ಕೆ ತರುತ್ತಾರೆ. ಹಾಗೆಯೇ ನಿಧಾನವಾಗಿ ತಮ್ಮ ಭಾಷೆಗೆ ಅಪರಿಚಿತವಾಗಿ ಬೆಳೆಯುತ್ತಾರೆ. ತಮಿಳು, ಮಲೆಯಾಳಂ ಮತ್ತು ಬಾಂಗ್ಲಾ ಭಾಷಿಕರಲ್ಲಿ ಈ ಪ್ರಕ್ರಿಯೆ ಇಲ್ಲವೆಂಬಷ್ಟು ಕಡಿಮೆ. ಅವರು ಹೊರನಾಡಿನಲ್ಲಿ ಇದ್ದಾಗ್ಯೂ ಮಾತೃಭಾಷೆಯನ್ನು ಬಿಟ್ಟು ಕೊಡುವುದಿಲ್ಲ. ಆದರೆ ಕನ್ನಡಿಗರು ಬಹಳ ಬೇಗ ಅನ್ಯಭಾಷೆಗಳಿಗೆ ಒಲಿದುಬಿಡುತ್ತಾರೆ.  ಎರಡನೆಯದಾಗಿ, ಜಾಗತೀಕರಣದ ಪರಿಣಾಮವಾಗಿ ಇವತ್ತು ಕರ್ನಾಟಕದ ಉದ್ದಗಲಕ್ಕೂ ಅನ್ಯಭಾಷಿಕರು ಕೆಲಸಮಾಡುತ್ತಿದ್ದಾರೆ. ಇವರಲ್ಲಿ ಅನೇಕರಿಗೆ ತಾವು ಕೆಲಸ ಮಾಡುವ ನೆಲದ ಭಾಷೆಯಲ್ಲಿ ಪ್ರತಿ ದಿನ ವ್ಯವಹರಿಸಬೇಕಾದ ಅಗತ್ಯವಿರುತ್ತದೆ.

ಜೊತೆಗೆ ಅತ್ಯಂತ ಶ್ರೀಮಂತವಾದ ಸಾಹಿತ್ಯಿಕ ಪರಂಪರೆಯಿರುವ ಕನ್ನಡವನ್ನು ಅಧ್ಯಯನ ಮಾಡಲು, ಕರ್ನಾಟಕದ ಭಾಷಿಕ ವೈವಿಧ್ಯ, ವಿಭಿನ್ನ ಚರಿತ್ರೆ, ಕುತೂಹಲಕಾರಿ ವಾಸ್ತು, ಶಿಲ್ಪ, ಬುಡಕಟ್ಟುಗಳು, ಜಾನಪದ, ಪರಿಸರ, ಕರ್ನಾಟಕದ ಆಧುನಿಕತೆ  ಮೊದಲಾದ ಅನೇಕ ವಿಷಯಗಳ ಬಗೆಗೆ ಸಂಶೋಧನೆ ಮಾಡಲು ತರುಣ ವಿದ್ವಾಂಸರು ಆಸಕ್ತಿ ತೋರಿಸುತ್ತಿದ್ದಾರೆ. ಇಂಥ ಹೊಸ ತಲೆಮಾರಿನ ಅವಶ್ಯಕತೆಗಳನ್ನು ಗಮನಿಸಿ ಅವರಿಗೆ ಕನ್ನಡವನ್ನು ಕಲಿಸುವ ಕೆಲಸವನ್ನು ನಾವು ಆದ್ಯತೆಯ ಮೇಲಿಂದ ಮಾಡಬೇಕಾಗಿದೆ.

ಇಂಥ ಅವಶ್ಯಕತೆಯನ್ನು ಗಮನಿಸಿ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಕನ್ನಡ ಸಂಸ್ಕೃತಿ ಇಲಾಖೆಗೆ ಪ್ರಸ್ತಾವವನ್ನು ಸಲ್ಲಿಸಿತ್ತು. ಪ್ರಸ್ತಾವವನ್ನು ಪರಿಶೀಲಿಸಿದ ಇಲಾಖೆಯು ಜೆ ಎನ್ ಯು ವಿಗೆ 30 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿತು. ವಿಶ್ವವಿದ್ಯಾಲಯದ ನಿಯಮಾನುಸಾರ, ಪತ್ರಿಕೆಗಳಲ್ಲಿ ಟೆಂಡರ್ ಕರೆದು, ಬಂದ ಟೆಂಡರ್ ಗಳನ್ನು ವಿಶ್ವವಿದ್ಯಾಲಯ ರಚಿಸಿದ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿ ಕೊನೆಗೆ 27 ಲಕ್ಷ ರೂಪಾಯಿ ವೆಚ್ಚದಲ್ಲಿ ‘ಕನ್ನಡ ಕಲಿಕೆ ‘ ಎಂಬ ಹೆಸರಿನ ಜಾಲತಾಣವೊಂದನ್ನು ಸಿದ್ಧಪಡಿಸಲಾಯಿತು.

ಜಾಲತಾಣದ ಒಂದು ಪುಟ

ಜಾಲತಾಣದ ಸ್ವರೂಪ:

ಭಾಷಾ ಕಲಿಕೆಗೆ ಸಾಮಾನ್ಯವಾಗಿ ಸಿದ್ಧ ಪಡಿಸಲಾಗುತ್ತಿರುವ ಜಾಲತಾಣಗಳು ಪಠ್ಯ ಪುಸ್ತಕಗಳನ್ನೇ ಅಂತರ್ಜಾಲಕ್ಕೆ ಅಳವಡಿಸಿರುತ್ತವೆ. ಪ್ರಕಟಿತ ಪುಸ್ತಕಗಳ ಮಾದರಿಯಲ್ಲಿಯೇ ಇರುವ ಇವು ಆಧುನಿಕ ತಂತ್ರಜ್ಞಾನದ ಪೂರ್ಣ ಪ್ರಯೋಜನವನ್ನು ಪಡೆಯುವಲ್ಲಿ ಬಹುತೇಕವಾಗಿ ವಿಫಲವಾಗಿರುತ್ತವೆ. ಹಾಗೆಯೇ ಮೊಬಾಯಿಲ್ ಗಳಲ್ಲಿ ಇವುಗಳ ಉಪಯೋಗ ಮಾಡುವುದೂ ಲಭವಾಗಿರುವುದಿಲ್ಲ. ಇಂಥ ಮಿತಿಗಳನ್ನು ಮೀರಲು ಸಿದ್ಧಪಡಿಸಲಾದ ಪ್ರಸ್ತುತ ಜಾಲತಾಣದಲ್ಲಿ ಭಾಷಾ ಕಲಿಕೆಯ ನಾಲ್ಕು ಪ್ರಮುಖ ಕೌಶಲ್ಯಗಳಾದ ಆಲಿಸುವಿಕೆ, ಮಾತಾಡುವಿಕೆ, ಓದುವಿಕೆ  ಮತ್ತು ಬರೆಯುವಿಕೆಯನ್ನು ಪ್ರೋತ್ಸಾಹಿಸಲು 30 ವೀಡಿಯೋಗಳನ್ನು ಪಠ್ಯವಾಗಿ ಬಳಸಿಕೊಳ್ಳಲಾಗಿದೆ. ಹೀಗೆ ಮಾಡುವಾಗ ಭಾಷಾ ಕಲಿಸುವಿಕೆಯಲ್ಲಿ ಅಂತಾರಾಷ್ಟ್ರೀಯವಾಗಿ ಅನುಸರಿಸಲಾಗುತ್ತಿರುವ ಸಂವಹನ, ಸಂಸ್ಕೃತಿ, ಸಂಪರ್ಕ, ಹೋಲಿಕೆ ಮತ್ತು ಸಮುದಾಯದ  ಮಾದರಿಗಳನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಈ ವಿಧಾನದಲ್ಲಿ ಅನ್ಯಭಾಷಾ ಪರಿಸರದಲ್ಲಿ ಕನ್ನಡವು ಸಂವಹನಗೊಳ್ಳಬೇಕಾದ ರೀತಿ, ಭಿನ್ನ ಸಂಸ್ಕೃತಿಗಳ ನಡುವೆ ಕನ್ನಡವು ಅನುಷ್ಠಾನಗೊಳ್ಳಬೇಕಾದ ಬಗೆ, ಬೇರೆ ಭಾಷೆಯವರೊಡನೆ ಕನ್ನಡವು ಸಂಪರ್ಕ ಸಾಧಿಸಲು ತಯಾರಾಗಬೇಕಾದ ರೀತಿ, ಭಾಷಾ ಕಲಿಕೆಯಲ್ಲಿ ಸಹಜವಾಗಿ ಏರ್ಪಡುವ ತೌಲನಿಕ ದೃಷ್ಟಿಕೋನ ಹಾಗೂ ಯಾವ ಸಮುದಾಯಕ್ಕೆ ಕನ್ನಡವನ್ನು ಹೇಳಿಕೊಡಲಾಗುವುದು ಎಂಬ ಪ್ರಜ್ಞೆ – ಇವಿಷ್ಟನ್ನೂ ಗಮನದಲ್ಲಿರಿಸಿಕೊಳ್ಳಲಾಗಿದೆ.

ಜಾಲತಾಣ ವೀಕ್ಷಿಸುತ್ತಿರುವ ಅಂದಿನ ಸಚಿವೆ ಶ್ರೀಮತಿ ಜಯಮಾಲಾ

30 ವೀಡಿಯೋಗಳೇ ಪಠ್ಯಗಳು:

ಸಾಮಾನ್ಯವಾದ ಜಾಲ ತಾಣಗಳಲ್ಲಿ ಕಾಣಿಸಿಕೊಳ್ಳುವ ಪಾಠಗಳ ಬದಲಾಗಿ  ಪ್ರಸ್ತುತ ಜಾಲತಾಣದಲ್ಲಿ 4ರಿಂದ 6 ನಿಮಿಷಗಳ ವ್ಯಾಪ್ತಿಯ,  ಸರಾಸರಿ 500 ಪದಗಳಿರುವ  ಒಟ್ಟು 30 ವೀಡೀಯೋಗಳನ್ನು ಅಳವಡಿಸಲಾಗಿದೆ. ನೈಜ ಸಂದರ್ಭದಲ್ಲಿ ಕರ್ನಾಟಕದ ವಿವಿದೆಡೆಗಳಲ್ಲಿ ದಾಖಲಿಸಲಾದ ಈ ವೀಡಿಯೋಗಳು ಕನ್ನಡ ಭಾಷೆಯನ್ನು ಅದರ ಸಹಜ  ಸಂದರ್ಭದಲ್ಲಿರಿಸಿ ವಿವರಿಸುತ್ತವೆ ಮತ್ತು ಮೇಲೆ ಹೇಳಿದ ನಾಲ್ಕು ಕೌಶಲಗಳಲ್ಲಿ ಮೊದಲನೆಯ ಮೂರನ್ನು ( ಆಲಿಸುವುದು, ಮಾತಾಡುವುದು ಮತ್ತು ಓದುವುದು)   ಸುಲಭವಾಗಿ ಕಲಿಯಲು ಅನುವು ಮಾಡಿಕೊಡುತ್ತವೆ. ಜೊತೆಗೆ ಕನ್ನಡ ಪದಗಳ ಉಚ್ಛಾರಣೆಯನ್ನೂ ಅದು ಸ್ಪಷ್ಟ ಪಡಿಸುತ್ತದೆ.

ಆಸಕ್ತರು ಮೊದಲು ವೀಡಿಯೋವನ್ನು ಧ್ಯಾನಿಸಿ ನೋಡಬಹುದು. ಆನಂತರ ವೀಡಿಯೋದಲ್ಲಿ ಬಳಕೆಯಾದ ಪಠ್ಯವನ್ನು ಕೇಳಬಹುದು ಮತ್ತು ಓದಬಹುದು. ಅಗತ್ಯಬಿದ್ದರೆ ಸುಲಭವಾಗಿ ಅದನ್ನು ಪುನರಾವರ್ತಿಸಿಕೊಳ್ಳಬಹುದು. ಈ ಹಂತದಲ್ಲಿ ಅದು ಅರ್ಥವಾಗದಿದ್ದರೆ ಅದರ ಇಂಗ್ಲಿಷ್ ಅನುವಾದವನ್ನೂ ಗಮನಿಸಬಹುದು. ವೀಡಿಯೋದಲ್ಲಿ ಬಳಕೆಯಾದ ಮುಖ್ಯ ಪದಗಳ ಪಟ್ಟಿಯನ್ನು ಆಂಗ್ಲಾನುವಾದದ ಸಹಿತ ನೀಡಲಾಗಿದೆ, ವ್ಯಾಕರಣ ರೂಪಗಳನ್ನೂ ಕೊಡಲಾಗಿದೆ. ಕೊನೆಯಲ್ಲೆ ಮನೆಗೆಲಸ ನೀಡಲಾಗಿದೆ. ಈ ಮನೆಗೆಲಸವನ್ನು ಜಗತ್ತಿನ ಯಾವ ಮೂಲೆಯಿಂದಾದರೂ ಮಾಡಿ ಕಳಿಸಿದರೆ, ಅದನ್ನು ತಿದ್ದಿ ಹಿಂದಕ್ಕೆ ಕಳಿಸುವ ವ್ಯವಸ್ಥೆಯನ್ನೂ ಜಾಲತಾಣದಲ್ಲಿ ಅಳವಡಿಸಲಾಗಿದೆ. ಮುಂಚಿತವಾಗಿ ಸಮಯ ನಿಗದಿ ಪಡಿಸಿಕೊಂಡರೆ ಅಧ್ಯಾಪಕರನ್ನು ನೇರವಾಗಿ ಸಂಪರ್ಕಿಸಿ ಚರ್ಚಿಸಲು ಅವಕಾಶ ಮಾಡಿಕೊಡಲಾಗಿದೆ.

ಸದ್ಯ ಜಾಲತಾಣದಲ್ಲಿ ಲಭ್ಯವಿರುವ ವೀಡಿಯೋಗಳು ಈ ಕೆಳಗಿನಂತಿವೆ

ಶಿಶು ಗೀತೆಗಳು, ಕನ್ನಡ ಪತ್ರಿಕೆಗಳು, ನಮ್ಮ ಆಹಾರ, ತರಕಾರಿ ಮಾರುಕಟ್ಟೆ, ಅಧುನಿಕ ಕೃಷಿ, ಕಾಫಿ ಬೆಳೆ, ಯಕ್ಷಗಾನದ ಬಣ್ಣಗಳು , ಬಹುರೂಪಿಗಳು, ಕೊಡಗು ಸೀರೆ, ಕಡಲು, ಮಂಟೆಸ್ವಾಮಿ ಕಾವ್ಯ, ಜನಪದ ಲೋಕ , ಮೆಕ್ಕಿಕಟ್ಟೆಯ ಉರುಗಳು, ಕುಡುಬಿಯರು, ಕುಶಲ ಕರ್ಮಿಗಳ ಕತೆ , ಕನ್ನಡ ಸಂಶೋಧನೆ, ಪತ್ರಿಕೋದ್ಯಮ, ದಾಸರ ಪದಗಳು, ಹೋಟೆಲ್ ಮೈಲಾರಿ, ಭೂತರಾಧನೆ , ರಂಗಾಯಣ, ಹೋಟೆಲ್ ಉದ್ಯಮ, ಕುಶಲಕರ್ಮಿಗಳ ಶಿಕ್ಷಣ ಸಂಸ್ಥೆ , ಹಂಚಿನ ಕಾರ್ಖಾನೆ, ಶ್ರೀರಂಗಪಟ್ಟಣ, ರಂಗ ಗೀತೆ, ಹಂಪಿ, ಕಲಾವಿದನ ಆತ್ಮಕತೆ, ರವೀಂದ್ರ ಕಲಾಕ್ಷೇತ್ರ ಮತ್ತು ಜಾಗತೀಕರಣ.

ಇವು ಸ್ಥೂಲವಾಗಿ ಕನ್ನಡದ ಪ್ರಾದೇಶಿಕ ವೈವಿಧ್ಯಗಳನ್ನು ಪ್ರತಿನಿಧಿಸುವುದರ ಜೊತೆಗೆ, ದೈನಂದಿನ ವ್ಯವಹಾರಗಳಲ್ಲಿ ಕನ್ನಡವನ್ನು ಜನರು ಬಳಸುತ್ತಿರುವ ರೀತಿಯ ಬಗೆಗೆ ಬೆಳಕು ಚೆಲ್ಲುತ್ತದೆ. ಈ ವೀಡಿಯೋಗಳನ್ನು ನೋಡುವವರು ಭಾಷೆಯ ಜೊತೆಗೆ ಕನ್ನಡ ಸಂಸ್ಕೃತಿಯ ಕಡೆಗೂ ಗಮನ ಹರಿಸುತ್ತಾರೆ.

ಉದಾಹರಣೆಗೆ ಶಿಶು ಗೀತೆಗಳು ಎಂಬ ಹೆಸರಿನ ಮೊದಲಿನ ವೀಡಿಯೋವನ್ನು ನೋಡಿದರೆ, ಅದರಲ್ಲಿ  ಇತಿಹಾಸ ಪ್ರಸಿದ್ಧ ಹಂಪಿಯ ಸರಕಾರೀ ಶಾಲೆಯೊಂದರಲ್ಲಿ ದಾಖಲಿಸಿದ ಹುಯ್ಯೋ ಹುಯ್ಯೋ ಮಳೆರಾಯ, ತಕ ತಕ ಥೈ, ಮತ್ತು ಆನೆಬಂತೊಂದಾನೆ ಹಾಡುಗಳು ಸಿಗುತ್ತವೆ. ಮೊದಲನೇ ಹಾಡಿನಲ್ಲಿ ‘ಹುಯ್ಯೋ ಹುಯ್ಯೋ’ ‘ಬಾರೋ ಬಾರೋ’, ‘ಸುರಿಯೋ ಸುರಿಯೋ’  ಎಂಬ ಸಾಲುಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತವೆ. ‘ಮಳೆರಾಯ’ ಹಾಗೂ ‘ನೀರಿಲ್ಲ’ ಪದಗಳೂ ಆಗಾಗ ಕಿವಿಗೆ ಬೀಳುತ್ತವೆ. ಮಕ್ಕಳು ಸಹಜವಾಗಿ ಅವುಗಳನ್ನು ಅಭಿನಯಿಸಿ ತೋರಿಸುವುದರಿಂದ ಪದಗಳ ಅರ್ಥ ಸ್ಪಷ್ಟತೆ ಇನ್ನೂ ಹೆಚ್ಚಾಗುತ್ತದೆ. ಇದೇ ರೀತಿ ಎರಡನೆಯ ಹಾಡಿನಲ್ಲಿ ತಕ ತಕ ಥೈ,  ಕೈ, ಮೇಲೆ-ಕೆಳಗೆ , ಮುಂದೆ- ಹಿಂದೆ, ಚಾಚು ಮೊದಲಾದ ಪದಗಳು ಬಳಕೆಯಾಗಿದ್ದು ಅವು ಅಲ್ಪ ಪ್ರಾಣ -ಮಹಾಪ್ರಾಣ ಹಾಗೂ ವಿರುದ್ಧಾರ್ಥಕ ಪದಗಳನ್ನು ವಿವರಿಸಲು ಸಹಾಯ ಮಾಡುತ್ತವೆ. ಮೂರನೆಯದಾದ ‘ಆನೆಬಂತೊಂದಾನೆ ‘ ಹಾಡಿನಲ್ಲಿ ಸಣ್ಣ, ದೊಡ್ಡ, ಕಪ್ಪು, ಹೊಟ್ಟೆ, ಅಗಲ,ಉದ್ದ, ಮೋಟು, ಮೊದಲಾದ ವಿಶೇಷಣಗಳನ್ನು ಪ್ರಸ್ತುತ ಪಡಿಸಲಾಗಿದೆ. ತರಕಾರೀ ಮಾರುಕಟ್ಟೆ ವೀಡಿಯೋ ನೋಡುವವರು ವಿವಿಧ ತರಕಾರಿಗಳ ಹೆಸರುಗಳನ್ನೂ, ಒಂದರಿಂದ 20ರ ವರೆಗಣ ಅಂಕಿಗಳನ್ನೂ ಸುಲಭವಾಗಿ ಕಲಿತುಬಿಡುತ್ತಾರೆ.

ಹೀಗೇ ಎಲ್ಲಾ ವೀಡಿಯೋಗಳೂ ಕಲಿಕೆಗೆ ವಿಶೇಷವಾಗಿ ಸಹಕರಿಸುತ್ತವೆ. ಜೊತೆಗೆ ಕರ್ನಾಟಕದ ಇತಿಹಾಸ, ಜಾನಪದ, ಸಾಹಿತ್ಯ, ವರ್ತಮಾನ, ರಂಗಭೂಮಿ, ಉದ್ಯಮ, ಮಾರುಕಟ್ಟೆ, ಕೃಷಿ,  ಆಹಾರ, ಉಡುಗೆ ತೊಡುಗೆ, ಚಿತ್ರಕಲೆ, ಭೌಗೋಳಿಕತೆ ಮೊದಲಾದ ವಿಷಯಗಳ ಕಡೆಗೂ ಗಮನ ಸೆಳೆಯುತ್ತದೆ.

ಕನ್ನಡ ಪೀಠದ ಮುಖ್ಯಸ್ಥರಾದ ಡಾ.ಪುರುಷೋತ್ತಮ ಬಿಳಿಮಲೆ

ವ್ಯಾಕರಣ ಸೂತ್ರಗಳು:

ಜಾಲತಾಣದ ಇನ್ನೊಂದು ಮಗ್ಗುಲಲ್ಲಿ ಪ್ರಾಯೋಗಿಕವಾಗಿ ಅಗತ್ಯವಾಗಿರುವ ವ್ಯಾಕರಣ ಸೂತ್ರಗಳನ್ನು ನೀಡಲಾಗಿದೆ. ಅವುಗಳೆಂದರೆ-

ಕನ್ನಡ ವರ್ಣಮಾಲೆ, ವರ್ಣಮಾಲೆಯ  ಹೆಚ್ಚುವರಿ ಗುಣಗಳು, ಒತ್ತಕ್ಷರಗಳು, ಆಜ್ಞಾರ್ಥಕ ರೂಪಗಳು, ಸರ್ವನಾಮಗಳು, ನಾಮಪದಗಳು, ಕ್ರಿಯಾಪದ ರಹಿತ ವಾಕ್ಯಗಳು, ವರ್ತಮಾನ ಕಾಲ, ಭೂತ ಕಾಲ, ಭವಿಷ್ಯತ್ ಕಾಲ, ವಿಭಕ್ತಿಗಳು, ಕೃದಂತಗಳು, ಗುಣವಾಚಕಗಳು ಹಾಗೂ ಕ್ರಿಯಾ ವಿಶೇಷಣಗಳು, ಅಂಕೆಗಳು, ಪ್ರೇರಣಾತ್ಮಕ ಪ್ರತ್ಯಯಗಳು , ಕ್ರಿಯಾ ಪದಗಳ ವಿವಿಧ ರೂಪಗಳು, ಪ್ರಶ್ನಾರ್ಥಕ ಪದಗಳು ಹಾಗೂ  ಲಿಖಿತ ಮತ್ತು ಆಡು ಮಾತಿನ ರೀತಿಗಳು.

ವರ್ಣಮಾಲೆಯನ್ನು ಕಲಿಸಲು ಬಿಳಿ ಹಲಗೆಯ ಮೇಲೆ ಅಕ್ಷರ ಮೂಡುವ ವಿಧಾನವನ್ನು ಅಳವಡಿಸಲಾಗಿದೆ.  ಈ ವ್ಯಾಕರಣ ರೂಪಗಳನ್ನು ಮತ್ತು ವೀಡಿಯೋಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಬೋಧಕರು ತೋರಿಸಿಕೊಳ್ಳಬೇಕು.

ಹೀಗೆ ಇದೊಂದು ಹೊಸಬಗೆಯ ಪ್ರಯತ್ನ. ಉರ್ದು ಮತ್ತು ಹಿಂದಿ ಭಾಷೆಗಳನ್ನು ಹೊರತುಪಡಿಸಿದರೆ ಬೇರಾವ ಭಾರತೀಯ ಭಾಷೆಯಲ್ಲೂ ಇಂಥ ಪ್ರಯೋಗ ನಡೆದಿಲ್ಲ. ಹೊಸ ಹೊಸ ವೀಡಿಯೋಗಳನ್ನು ಸೇರಿಸುವುದರ ಮೂಲಕ ಈ ಜಾಲತಾಣವನ್ನು ನವೀಕರಿಸುತ್ತಲೇ ಹೋಗಬಹುದು. ಅದೇ ರೀತಿ ಉಪಯೋಗಿಸುವವರ ಅನುಭವ ಮತ್ತು ಅಭಿಪ್ರಾಯಗಳನ್ನು ಗಮನಿಸಿಕೊಂಡು ಪರಿಷ್ಕರಿಸಲೂ ಅವಕಾಶವಿದೆ.

ಜೆ ಎನ್ ಯುವಿನ ಬೇರೆ ಭಾಷೆಯ ವಿದ್ಯಾರ್ಥಿಗಳೂ ಸೇರಿದಂತೆ ವಿಶ್ವದಾದ್ಯಂತ ಈ ಜಾಲತಾಣವನ್ನು ಕನ್ನಡ ಕಲಿಕೆಗೆ ಬಳಸಿಕೊಳ್ಳಲಾಗುತ್ತಿದೆ.

 

ಕೃಷ್ಣಮೂರ್ತಿ,

ಹಿರಿಯ ಸಂಶೋಧನಾ ಸಹಾಯಕರು

ಕನ್ನಡ ಅಧ್ಯಯನ ಪೀಠ, ಜೆ ಎನ್ ಯು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...