ತುಮಕೂರು ರಾಜಕಾರಣವೆಂದರೇನೆ ಅದು ಜಾತಿ ಆಧಾರಿತ ರಾಜಕಾರಣ. ಒಕ್ಕಲಿಗ ಮತ್ತು ಲಿಂಗಾಯತ ಮತಗಳು ಇಲ್ಲಿ ಹೆಚ್ಚೂಕಮ್ಮಿ ಸೋಲುಗೆಲುವನ್ನು ನಿರ್ಧರಿಸುತ್ತವೆ. ಅದೇ ಕಾರಣಕ್ಕೆ ಕಳೆದ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಜಿಲ್ಲೆಯ ಒಟ್ಟು 11 ಕ್ಷೇತ್ರಗಳ ಪೈಕಿ ಜೆಡಿಎಸ್ 6 ಕ್ಷೇತ್ರಗಳನ್ನು ತನ್ನ ವಶ ಮಾಡಿಕೊಂಡಿತ್ತು. ಕಾಂಗ್ರೆಸ್ ಪಾರ್ಟಿಯು ನಾಲ್ಕರಲ್ಲಿ ಗೆದ್ದಿದ್ದರೆ, ಬಿಜೆಪಿ 1 ಸ್ಥಾನದಲ್ಲಿ ಗೆದ್ದಿತ್ತು. ಆದರೆ ಈ ಸಲ ಚುನಾವಣಾ ಲೆಕ್ಕಾಚಾರವೇ ತಲೆಕೆಳಗಾಗುವ ಸಾಧ್ಯತೆಯಿದ್ದು ತುಮಕೂರು ಜಿಲ್ಲೆ ಕಾಂಗ್ರೆಸ್‍ಗೆ ಭರ್ಜರಿ ಫಸಲು ಕೊಡುವ ಸಂಭವವಿದೆ.

ಗುಬ್ಬಿಯಲ್ಲಿ ಮೇಲ್ನೋಟಕ್ಕೆ ಮೂರೂ ಪಾರ್ಟಿಗಳ ನಡುವೆ ತ್ರಿಕೋನ ಸ್ಪರ್ಧೆಯಿರುವಂತೆ ಕಂಡುಬಂದರೂ ಜೆಡಿಎಸ್‍ನ ಹಾಲಿ ಶಾಸಕ ಎಸ್.ಆರ್. ಶ್ರೀನಿವಾಸ್, ಬಿಜೆಪಿಯ ಬೆಟ್ಟಸ್ವಾಮಿಯ ನಡುವೆಯೇ ಕತ್ತುಕತ್ತಿನ ಪೈಪೋಟಿ ಇರೋದು ಎದ್ದು ಕಾಣುತ್ತೆ. ಸತತ ಮೂರು ಚುನಾವಣೆಗಳಲ್ಲಿ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧನೆಗೈದಿರುವ ಶ್ರೀನಿವಾಸ್ ನಾಲ್ಕನೇ ಅದೃಷ್ಟದಾಟಕ್ಕೆ ಕಾತರರಾಗಿದ್ದಾರೆ. ಇವರಿಗೆ ಪೈಪೋಟಿ ಇರೋದು ಬಿಜೆಪಿಯ ಬೆಟ್ಟಸ್ವಾಮಿಯವರಿಂದ. ಆದರೆ ಬಿಜೆಪಿಯ ಟಿಕೆಟ್‍ಗೆ ಪ್ರಯತ್ನಿಸಿ ಈಗ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರುವ ದಿಲೀಪ್ ಕುಮಾರ್‍ರ ಪ್ರಚಾರದ ವೇಗ ಬೆಟ್ಟಸ್ವಾಮಿಗೆ ಅಡ್ಡಗಾಲು ಹಾಕುತ್ತಿದೆ. ಇನ್ನು ಕಾಂಗ್ರೆಸಿನ ಬಾಲಾಜಿ ಕುಮಾರ್, ಸರ್ಕಾರದ ಜನಪರ ಕೆಲಸಗಳನ್ನು ಮುಂದಿಟ್ಟು ಮತಯಾಚಿಸುತ್ತಿದ್ದಾರಾದರು ಕಳೆದ ಸಲ ಕೈ ಅಭ್ಯರ್ಥಿಯಾಗಿದ್ದ ಹೊನ್ನಗಿರಿಗೌಡರಿಗೆ ದಕ್ಕಿದ ಫಲಿತಾಂಶಕ್ಕಿಂತ ಭಿನ್ನ ರಿಜಲ್ಟೇನೂ ಇವರಿಗೆ ಸಿಕ್ಕದು.

ಇತ್ತ ತುರುವೇಕೆರೆಯಲ್ಲಿ ಜೆಡಿಎಸ್‍ನ ಹುರಿಯಾಳಾಗಿ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನೇ ಕಣಕ್ಕಿಳಿದಿದ್ದಾರಾದರು ಅವರಿಗೆ ಗೆಲುವು ಕಳೆದ ಬಾರಿಯಷ್ಟು ಸಲೀಸಾಗಿಲ್ಲ. ಯಾಕೆಂದರೆ ಜನರ ನಡುವೆ ಅವರ ಬಗ್ಗೆ ವಿಪರೀತ ಅಸಮಧಾನವಿದೆ. ರಸ್ತೆ, ಒಳಚರಂಡಿ, ಆಸ್ಪತ್ರೆ ಹೀಗೆ ಮೂಲ ಸೌಕರ್ಯಗಳ್ಯಾವುವು ಹೇಳಿಕೊಳ್ಳುವಷ್ಟು ನೆಮ್ಮದಿಯಾಗಿಲ್ಲ. ಇವತ್ತಿಗೂ ಜನ ಆಸ್ಪತ್ರೆಗೆ ಪಕ್ಕದ ಚಿಕ್ಕನಾಯಕನಹಳ್ಳಿಯತ್ತ ಮುಖ ಮಾಡಬೇಕಾದ ಪರಿಸ್ಥಿತಿಯಿದೆ. ಇವೆಲ್ಲವೂ ಕೃಷ್ಣಪ್ಪನ ಓಘಕ್ಕೆ ಬ್ರೇಕ್ ಹಾಕುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ. ಇತ್ತ ಬಿಜೆಪಿಯಲ್ಲಿ ಒಳಬೇಗುದಿ ಆ ಪಕ್ಷವನ್ನು ದಿನದಿಂದ ದಿನಕ್ಕೆ ಮೆತ್ತಗಾಗಿಸುತ್ತಿದೆ. ಕಳೆದ ಸಲ ಯಡ್ಯೂರಪ್ಪನವರ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಸಾಲೆ ಜಯರಾಂಗೆ ಬಿಜೆಪಿಯ ಟಿಕೇಟು ಕೊಟ್ಟಿರೋದು ಹಲವರ ಬೇಸರಕ್ಕೆ ಕಾರಣವಾಗಿದೆ. ಇನ್ನು ಕಾಂಗ್ರೆಸ್‍ನಲ್ಲಿ ಹಿರಿಯ ಮುಖಂಡ ಚೌದ್ರಿ ರಂಗಪ್ಪ ಅಭ್ಯರ್ಥಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿರುವುದು ನಿಜವಾದರೂ ಪಕ್ಷೇತರ ಸ್ಪರ್ಧಿಗಳಾದ ಎಂ.ಡಿ.ರಮೇಶ್ ಗೌಡ ಮತ್ತು ನಾರಾಯಣಗೌಡ ಫ್ಯಾಕ್ಟರೂ ಗೆಲುವನ್ನು ಅತ್ತಿಂದಿತ್ತ ಹೊಯ್ದಾಡಿಸುತ್ತಿವೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಸುರೇಶ್‍ಗೌಡರಿಗೆ ಜೆಡಿಎಸ್‍ನ ಹಿರಿಯ ಮುಖಂಡ ಚೆನ್ನಿಗಪ್ಪನವರ ಮಗ ಬಿ.ಸಿ.ಗೌರಿಶಂಕರ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ. ಸುರೇಶ್‍ಗೌಡರಿಗೆ ಸ್ಥಳೀಯವಾಗಿ ಒಳ್ಳೆಯ ಹೆಸರಿದೆ. ಆದರೆ ಕ್ಷೇತ್ರದಲ್ಲಿ ಎರಡನೇ ಹಂತದ ನಾಯಕತ್ವವನ್ನು ಬೆಳೆಸದೇ ಇರೋದು ಸುರೇಶ್ ಗೌಡ ವಿರುದ್ಧ ಸ್ವಪಕ್ಷೀಯರೆ ಸಣ್ಣ ಸಂಚು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಜೆಡಿಎಸ್‍ನ ಗೌರಿಶಂಕರ್, ಕುಮಾರಸ್ವಾಮಿ ಮತ್ತು ದೇವೇಗೌಡರ ನಾಮಬಲದ ಮೇಲೆ ಗೆಲುವಿಗಾಗಿ ಹಂಬಲಿಸುತ್ತಿದ್ದಾರೆ. ಕಾಂಗ್ರೆಸ್‍ನಿಂದ ಲಿಂಗಾಯತ ಸಮುದಾಯದ ರಾಯಸಂದ್ರ ರವಿಕುಮಾರ್ ಸ್ಪರ್ಧಿಸಿರೋದು ಬಿಜೆಪಿಗೆ ಇಕ್ಕಟ್ಟು ಸೃಷ್ಟಿಸಿದೆ. ಅಜಮಾಸು 30 ಸಾವಿರದಷ್ಟಿರುವ ಲಿಂಗಾಯತ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇಬ್ಭಾಗವಾಗಲಿದ್ದು ಇದು ಲಾಭ ಜೆಡಿಎಸ್‍ಗೆ ತರಲಿದೆ ಎನ್ನಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿಯಿರುವ ಇಲ್ಲಿ, ಇತ್ತೀಚೆಗೆ ಮಾಜಿ ಶಾಸಕ ನಿಂಗಪ್ಪನವರು ಜೆಡಿಎಸ್ ಸೇರಿರೋದು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

ಕುಣಿಗಲ್‍ನಲ್ಲಿ ಪೈಪೋಟಿ ಇರೋದು ಜೆಡಿಎಸ್‍ನ ಹಾಲಿ ಶಾಸಕ ಡಿ.ನಾಗರಾಜಯ್ಯ ಮತ್ತು ಕಾಂಗ್ರೆಸ್‍ನ ಡಾ.ರಂಗನಾಥ್ ನಡುವೆ. ಅಂದಹಾಗೆ ಈ ರಂಗನಾಥ್, ಕೈ ಪಾರ್ಟಿಯ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‍ರ ಹತ್ತಿರದ ಸಂಬಂಧಿ. ಕಳೆದ 4 ವರ್ಷಗಳಿಂದಲೇ ಕ್ಷೇತ್ರದಲ್ಲಿ ಓಡಾಡಿಕೊಂಡು ಜನರ ಒಡನಾಟ ಹೊಂದಿರುವ ರಂಗನಾಥ್, ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್‍ರ ಪ್ರಭಾವದ ನೆರಳಲ್ಲೇ ಸ್ಪರ್ಧೆಯಲ್ಲಿದ್ದಾರೆ. ಆದರೆ ಕಾಂಗ್ರೆಸ್‍ನ ಮಾಜಿ ಶಾಸಕ ರಾಮಸ್ವಾಮಿಗೌಡರು ಪ್ರಚಾರದಿಂದ ಹಿಂದೆ ಸರಿದಿರುವುದು ರಂಗನಾಥ್‍ಗೆ ಹಿನ್ನಡೆಯಾಗಿದೆ. ಇತ್ತ ನಾಗರಾಜಯ್ಯನವರ ಸರಳ ಸ್ವಭಾವದ ವ್ಯಕ್ತಿತ್ವ ಮತ್ತು ಭರಾಟೆಯ ಪ್ರಚಾರಗಳು ಜೆಡಿಎಸ್‍ಗೆ ಮತ್ತೊಂದು ಗೆಲುವಿನ ಆಸೆ ಚಿಗುರಿಸಿವೆ. ಬಿಜೆಪಿಯ ಡಿ.ಕೃಷ್ಣಕುಮಾರ್ ಸ್ಪರ್ಧೆ ಹೆಚ್ಚೇನೂ ಪರಿಣಾಮ ಬೀರುವಂತದ್ದಲ್ಲ ಎನ್ನಲಾಗುತ್ತಿದೆ.
ತಿಪಟೂರಿನಲ್ಲಿ ಕಾಂಗ್ರೆಸ್ ಟಿಕೇಟ್ ಹಂಚಿಕೆಯಲ್ಲಿ ಮಾಡಿಕೊಂಡ ಯಡವಟ್ಟು ಕಾಂಗ್ರೆಸ್‍ಗೆ ಕೊಂಚ ಹಿನ್ನಡೆ ಉಂಟು ಮಾಡಿತ್ತು. ವಯಸ್ಸು, ಅನಾರೋಗ್ಯ ಮತ್ತು ಪರ್ಸನಲ್ ಭಾನ್ಗಡಿಗಳ ಕಾರಣಕ್ಕೆ ಹಾಲಿ ಶಾಸಕ ಷಡಕ್ಷರಿಗೆ ಬಿ ಫಾರಂ ದಯಪಾಲಿಸದೆ ನಂಜಾಮರಿಗೆ ಟಿಕೇಟ್ ಘೋಷಿಸಲಾಗಿತ್ತು. ಆದರೆ ಯಾವಾಗ ಷಡಕ್ಷರಿ ಪಟಾಲಮ್ಮಿನಿಂದ ಪ್ರತಿಭಟನೆಯ ಕಾವು ಹೆಚ್ಚಾಯ್ತೊ, ಆಗ ಎಚ್ಚೆತ್ತುಕೊಂಡ ಪಕ್ಷ ಷಡಕ್ಷರಿಗೆ ಟಿಕೆಟ್ ನಿಕ್ಕಿ ಮಾಡಿದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ನಂಜಾಮರಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರೋದು ಕಾಂಗ್ರೆಸ್‍ನ ಮತಗಳನ್ನು ವಿಭಜಿಸುವ ಅಪಾಯ ತಂದಿಟ್ಟಿದೆ. ಬಿಜೆಪಿಯಿಂದ ಮಾಜಿ ಶಾಸಕ ಬ್ರಾಹ್ಮಣರ ಬಿ.ಸಿ.ನಾಗೇಶ್ ಮತ್ತು ಜೆಡಿಎಸ್‍ನಿಂದ ಮಾಜಿ ಪೊಲೀಸಪ್ಪ ಲೋಕೇಶ್ವರ್ ಕಣದಲ್ಲಿದ್ದಾರೆ. ಆದರೆ ನೇರ ಸ್ಪರ್ಧೆ ಇರೋದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ.

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 3 ಬಾರಿ ಶಾಸಕರಾಗಿರುವ ಜೆಡಿಎಸ್‍ನ ಸುರೇಶ್‍ಬಾಬು, ಜಿಲ್ಲಾ ಉಸ್ತುವಾರಿ ಮಂತ್ರಿ ಟಿ.ಬಿ.ಜಯಚಂದ್ರರ ಅವರ ಮಗ ಸಂತೋಷ್, ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ನಡುವೆ ತ್ರಿಕೋನ ಪೈಪೋಟಿಯಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಕ್ಷೇತ್ರದಿಂದ ಬಂದಿದ್ದ 58 ಸಾವಿರ ಮತಗಳ ಮೇಲೆ ನಂಬಿಕೆಯಿಟ್ಟುಕೊಂಡು ತನ್ನ ವರ್ಚಸ್ಸನ್ನೆಲ್ಲ ಫಣಕ್ಕಿಟ್ಟು ಪ್ರಚಾರ ಮಾಡುತ್ತಿರುವ ಜಯಚಂದ್ರ ಅವರು ತಮ್ಮದೇ ಒಕ್ಕಲಿಗ ಮತ್ತು ಸಿದ್ರಾಮಯ್ಯನವರ ಕುರುಬ ಸಮುದಾಯದ ಮತಗಳನ್ನು ವಿಪರೀತ ನಂಬಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಚುನಾವಣೆಯ ರೇಸಿನಲ್ಲಿ ಜೆಡಿಎಸ್‍ನ ಸುರೇಶ್ ಬಾಬು ಮುಂಚೂಣಿಯಲ್ಲಿ ಕಂಡುಬರುತ್ತಿದ್ದಾರೆ.

ತುಮಕೂರು ನಗರದಲ್ಲಿ ಕಾಂಗ್ರೆಸ್‍ನ ಹಾಲಿ ಶಾಸಕ ಡಾ.ರಫೀಕ್ ಅಹಮದ್, ಜೆಡಿಎಸ್‍ನ ಗೋವಿಂದರಾಜು ಮತ್ತು ಬಿಜೆಪಿಯ ಜ್ಯೋತಿ ಗಣೇಶ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ರಫೀಕ್ ಅಹಮದ್ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಜೊತೆಗೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಮತ್ತು ದಲಿತ ಮತಗಳನ್ನು ನಂಬಿಕೊಂಡಿದ್ದಾರೆ. ಜೆಡಿಎಸ್‍ನ ಗೋವಿಂದರಾಜು ಒಕ್ಕಲಿಗ ಮತಗಳನ್ನು ಅವಲಂಬಿಸಿದ್ದರೆ, ಮಾಜಿ ಲೋಕಸಭಾ ಸದಸ್ಯ ಬಸವರಾಜ್‍ರವರ ಮಗ ಜ್ಯೋತಿ ಗಣೇಶ್ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಸೊಗಡು ಶಿವಣ್ಣ ಸೇರಿದಂತೆ ಅನೇಕ ಬಿಜೆಪಿಯ ಹಿರಿಯ ನಾಯಕರು ತಟಸ್ಥವಾಗಿರೋದು ಕಾಂಗ್ರೆಸ್‍ಗೆ ನೆರವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಕೊರಟಗೆರೆ ಈ ಸಲ ವಿಶೇಷ ಗಮನ ಸೆಳೆದಿದೆ. ಯಾಕೆಂದರೆ ಇದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‍ರ ಕರ್ಮಭೂಮಿ. ಕಳೆದ ಸಲ ಅಚ್ಚರಿಯ ಫಲಿತಾಂಶ ಹೊರಬಿದ್ದು ಪರಮೇಶ್ವರ್, ಜೆಡಿಎಸ್‍ನ ಸುಧಾಕರ್ ಲಾಲ್ ಎದುರು ಮುಗ್ಗರಿಸಿದ್ದರು. ಈ ಬಾರಿ ಅವರು ಕ್ಷೇತ್ರವನ್ನೇ ಬಿಟ್ಟು ಬೆಂಗಳೂರಿನತ್ತ ಮುಖ ಮಾಡಲಿದ್ದಾರೆ ಎಂಬ ಗಾಳಿ ಸುದ್ದಿಗಳು ಕೇಳಿ ಬಂದವಾದರು ಕೊನೆಗೇ ಕೊರಟಗೆರೆಯಿಂದಲೇ ಕಣಕ್ಕಿಳಿದಿದ್ದಾರೆ. ಜೊತೆಗೆ ಕಳೆದ ಸಲದ ಆಲಸ್ಯದಿಂದ ಹೊರಬಂದಿರುವ ಅವರು ಸ್ಪರ್ಧೆಯಲ್ಲಿ ಜೆಡಿಎಸ್‍ನ ಸುಧಾಕರ್, ಬಿಜೆಪಿಯ ಹುಚ್ಚಯ್ಯನಿಗಿಂತ ಮುಂಚೂಣಿಯಲ್ಲಿದ್ದಾರೆ.
ಮಧುಗಿರಿಯಲ್ಲಿ ಹಾಲಿ ಕೈ ಶಾಸಕ ಕೆ.ಎನ್.ರಾಜಣ್ಣ ಮತ್ತು ಜೆಡಿಎಸ್‍ನ ವೀರಭದ್ರಯ್ಯ ನಡುವೆ ಪೈಪೋಟಿಯಿದೆ. ರಾಜಣ್ಣ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದರೆ, ವೀರಭದ್ರಯ್ಯ ಕಳೆದ ಸಲದ ಸೋಲಿನ ಅನುಕಂಪ ಹಾಗೂ ದೇವೇಗೌಡರ ಕುಟುಂಬದ ವರ್ಚಸ್ಸನ್ನು ನಂಬಿಕೊಂಡು ಪೈಪೋಟಿ ಒಡ್ಡುತ್ತಿದ್ದಾರೆ.
ಪಾವಗಡ ಕ್ಷೇತ್ರದಲ್ಲಿ ಹಾಲಿ ಶಾಸಕ ಜೆಡಿಎಸ್‍ನ ತಿಮ್ಮರಾಯಪ್ಪ, ಕಾಂಗ್ರೆಸ್‍ನ ವೆಂಕಟರಮಣಪ್ಪ ಮತ್ತು ಬಿಜೆಪಿಯ ಬಲರಾಂ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಜೆಡಿಎಸ್‍ಗೆ ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದೆ. ಒಟ್ಟಾರೆ ತುಮಕೂರು ಜಿಲ್ಲೆಯ ಎಲೆಕ್ಷನ್ ರಾಜಕಾರಣ ಜಾತಿ ಆಧಾರಿತ ಸಮೀಕರಣದಲ್ಲೇ ಸಾಗುತ್ತಿದೆಯಾದರು ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಪ್ರಚೋದಿತ ಮೋದಿ ಮೇನಿಯಾ, ದೇವೇಗೌಡರ ಕೌಟುಂಬಿಕ ವರ್ಚಸ್ಸಿನ ಹಿಡಿತಕ್ಕೂ ಎಡತಾಕುತ್ತಿವೆ. ಮೇಲ್ನೋಟಕ್ಕೆ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಲಾಭವಾಗುವ ಸೂಚನೆಗಳಿದ್ದು ಜೆಡಿಎಸ್ ಎರಡನೇ ಸ್ಥಾನ ಮತ್ತು ಬಿಜೆಪಿ ಮೂರನೇ ಸ್ಥಾನ ಗಳಿಸಬಹುದು. ಆದರೆ ಇದೆಲ್ಲವೂ ಕೊನೇಕ್ಷಣದಲ್ಲಿ ನಡೆಯುವ ಪೊಲಿಟಿಕಲ್ ಹೈಡ್ರಾಮಾದ ನಿಬಂಧನೆಗೆ ಒಳಪಟ್ಟಿರುತ್ತವೆ.
– ವರದಿಗಾರ


