ಪಿ.ಕೆ. ಮಲ್ಲನಗೌಡರ್ |
ಪುಲ್ವಾಮಾ ಹತ್ಯಾಕಾಂಡ ಸಂಭವಿಸಲು ಮೂಲ ಕಾರಣ ಕಾಶ್ಮೀರದಲ್ಲಿ ಈ 5 ವರ್ಷಗಳಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಉಲ್ಬಣವಾಗಿರುವುದು. ಇದಕ್ಕೆ ಮೋದಿ ಸರ್ಕಾರದ ನೀತಿಗಳೇ ಕಾರಣ. ಕಾಶ್ಮೀರ ಸಮಸ್ಯೆಗೆ ಮಿಲಿಟರಿ ಪರಿಹಾರವೊಂದೇ ಮಾರ್ಗ ಎಂಬ ಅದರ ಧೋರಣೆಯಿಂದಾಗಿ ಕಾಶೀರದಲ್ಲಿ ಇಂದು ಜನಜೀವನವೂ ಕಷ್ಟವಾಗಿದೆ.
ಫೆಬ್ರುವರಿ 5ರಂದು ಲೋಕಸಭೆಯಲ್ಲಿ ಮತ್ತು ಫೆಬ್ರುವರಿ 7ರಂದು ರಾಜ್ಯಸಭೆಯಲ್ಲಿ ಗೃಹ ಸಚಿವಾಲ ನೀಡಿದ ಅಂಕಿಅಂಶಗಳ ಪ್ರಕಾರ, 2014-18ರ ಅವಧಿಯಲ್ಲಿ ಸೈನಿಕರ ಹತ್ಯೆ, ನಾಗರಿಕರ ಹತ್ಯೆ ಪ್ರಮಾಣ ಏರಿಕೆಯಾಗಿದೆ. ಹಾಗೆಯೇ ಉಗ್ರ ನುಸುಳುವಿಕೆ ಪ್ರಮಾಣವೂ ಗೆಚ್ಚಿದೆ.
ಸೈನಿಕರ ಹತ್ಯೆ: ಶೇ. 93ರಷ್ಟು ಹೆಚ್ಚಳ!

ಕಳೆದ ಐದು ವರ್ಷಗಳ (2014-18) ಮೋದಿ ಅವಧಿಯಲ್ಲಿ ಕಾಶ್ಮೀರದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮೋದಿಯ ‘ಬಲಿಷ್ಠ ಸರ್ಕಾರ’ದ ಅವಧಿಯಲ್ಲಿ ಅಲ್ಲಿ ಸೈನಿಕರ ಹತ್ಯೆಯ ಪ್ರಮಾಣ ಶೇ. 93ರಷ್ಟು ಹೆಚ್ಚಿದೆ. ಉಗ್ರ ದಾಳಿಯ ಪ್ರಕರಣಗಳು ಶೇ. 173ರಷ್ಟು ಹೆಚ್ಚಿವೆ. ಆದರೆ ಇವತ್ತು ಪುಲ್ವಾಮಾದ ಬಗ್ಗೆ ತಲೆ ಕೆಡಿಸಿಕೊಂಡಿರುವ ಬಿಜೆಪಿಗರು ಮತ್ತು ಸೋಷಿಯಲ್ ಮೀಡಿಯಾದ ‘ಭಕ್ತರ’ ಕಣ್ಣಿಗೆ ದಿನವೂ ಕಾಶ್ಮೀರದಲ್ಲಿ ಹುತಾತ್ಮರಾಗುತ್ತಲೇ ಇರುವ ಒಬ್ಬಿಬ್ಬರು ಸೈನಿಕರ ಬಗ್ಗೆ ಎಂದೂ ತಲೆ ಕೆಡಿಸಿಕೊಂಡಿಲ್ಲ. ಈಗ ಚುನಾವಣೆ ಹತ್ತಿರ ಬಂದಿರುವುದರಿಂದ, ಪುಲ್ವಾಮಾ ಘಟನೆಯನ್ನು ಮುಂದು ಮಾಡಿ, ಕಾಶ್ಮೀರ ಸಮಸ್ಯೆಗೆ ಬಿಜೆಪಿ ಮಾತ್ರ, ಅದರಲ್ಲೂ ಮೋದಿ ಮಾತ್ರ ಉತ್ತರ ನೀಡಬಲ್ಲರು ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಇದೇ ಮೋದಿಯ ಅವಧಿಯಲ್ಲಿ ಕಾಶ್ಮೀರದಲ್ಲಿ ಸೈನಿಕರು ಮತ್ತು ನಾಗರಿಕರ ಹತ್ಯೆ ಸಂಖ್ಯೆ ಏರುತ್ತಲೇ ಬಂದಿದೆ.
ಇದೇ ಫೆಬ್ರುವರಿ 5ರಂದು ಲೋಕಸಭೆಯಲ್ಲಿ ಸರ್ಕಾರವೇ ನೀಡಿದ ಮಾಹಿತಿ-ಅಂಕಿಸಂಖ್ಯೆಯ ಪ್ರಕಾರ, 2014-18ರ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಒಟ್ಟು 1,708 ಭಯೋತ್ಪಾದನಾ ಕೃತ್ಯಗಳು ನಡೆದಿವೆ. ಅಂದರೆ ತಿಂಗಳಿಗೆ ಸರಾಸರಿ 28 ಕೃತ್ಯಗಳು! ಆಗ ಮೋದಿಗೆ ಮತ್ತು ಅವರ ಭಕ್ತರಿಗೆ ಕಾಶ್ಮೀರ ನೆನಪೇ ಆಗಲಿಲ್ಲ! ಅಲ್ಲಿ ಮಿಲಿಟರಿಯನ್ನು ಇನ್ನಷ್ಟು ಹೆಚ್ಚಿಸಿ ಪರಿಸ್ಥಿತಿಯನ್ನು ಕೇಂದ್ರ ಇನ್ನಷ್ಟು ಹದಗೆಡಿಸಿತು.

2018ರಲ್ಲಂತೂ ಅಲ್ಲಿ ಪ್ರತಿ ತಿಂಗಳು ಸರಾಸರಿ 15 ಭಯೋತ್ಪಾದನಾ ಕೃತ್ಯಗಳು ನಡೆದಿವೆ. ಸೈನಿಕರು ಹುತಾತ್ಮರಾಗುತ್ತಲೇ ಇದ್ದಾರೆ. ನಾಗರಿಕರೂ ಬಲಿಯಾಗುತ್ತಿದ್ದಾರೆ. ಭಯೋತ್ಪಾದಕರ ದಾಳಿ ಮತ್ತು ಸೇನೆಯ ಅಟ್ಟಹಾಸ ಎರಡರ ನಡುವೆ ಸಿಕ್ಕಿರುವ ಅಲ್ಲಿಯ ಸಾಮಾನ್ಯ ನಾಗರಿಕರ ಬಗ್ಗೆ ವೇಷಭಕ್ತರು ಎಂದೂ ಯೋಚಿಸಲೇ ಇಲ್ಲವಲ್ಲ? ಮೋದಿ ಅವಧಿಯಲ್ಲಿ ಭಯೋತ್ಪಾದನಾ ಕೃತ್ಯ ಮತ್ತು ಸೇನೆಯ ಕ್ರಮಗಳಿಂದ ಪ್ರತಿವರ್ಷವೂ ನೂರಾರು ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಈ ಅಮಾಯಕರ ಸಾವುಗಳ ಬಗ್ಗೆ ಸಂತಾಪ ಇರದವನಿಗೆ ಮೊನ್ನೆ ಹುತಾತ್ಮರಾದ ಸೈನಿಕರ ಬಗ್ಗೆ ಸಂತಾಪ ಮಿಡಿಯುವ ಯಾವ ಹಕ್ಕೂ ಇಲ್ಲ. ಅಷ್ಟಕ್ಕೂ ಈಗ ಸೈನಿಕರ ಹೆಸರಲ್ಲಿ ಇವರೆಲ್ಲ ಮೊಸಳೆ ಕಣ್ಣೀರು ಹಾಕುತ್ತಲೇ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟವರು. ಮೋದಿ ಅವಧಿಯಲ್ಲಿ (2014-18) ಕಾಶ್ಮೀರದಲ್ಲಿ ಒಟ್ಟು 339 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅಂದರೆ ಸೈನಿಕರ ಹತ್ಯೆಯ ಪ್ರಮಾಣ ಶೇ. 93ರಷ್ಟು ಹೆಚ್ಚಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ.
ಹಾಗಾದರೆ ಈ ಅವಧಿಯಲ್ಲಿ ಮೋದಿ ಏನೂ ಕ್ರಮ ಕೈಗೊಳ್ಳಲಿಲ್ಲವೇಕೆ? ರಾಜಕೀಯ ಸಮಸ್ಯೆಗೆ ಮಿಲಿಟರಿ ಪರಿಹಾರವೊಂದೇ ದಾರಿ ಎಂದು ಹೊರಟಾಗ ಇಂಥದ್ದೆಲ್ಲ ಸಂಭವಿಸುತ್ತದೆ ಎಂಬುದು ಜಗತ್ತಿನ ಹಲವಾರು ಕಡೆ ಪ್ರೂವ್ ಆಗಿದೆ. ಹಾಗಿದ್ದೂ ಇವತ್ತು ಮತ್ತೆ ಮಿಲಿಟರಿ ಕ್ರಮ ಮಾತ್ರದಿಂದಲೇ ಪರಿಹಾರ ಎಂಬಂತೆ ಕೆಲವು ಮೂರ್ಖ ಆ್ಯಂಕರ್‌ಗಳು, ಸಾವಿರಾರು ನೆಟ್ಟಿಗರು ಅರಚುತ್ತಿದ್ದಾರೆ. ಇವರೆಲ್ಲರಿಗೆ ದೇಶಭಕ್ತಿ ಎಂದರೇನೇ ಕೊಲ್ಲುವ ಆಟ, ಆದರೆ ತಾವು ಮಾತ್ರ ಸೇಫ್ ಆಗಿರಬೇಕು.
ಉಗ್ರರ ನುಸುಳುವಿಕೆಯಲ್ಲೂ ಹೆಚ್ಚಳ

ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಇದೇ ನರೇಂದ್ರ ಮೋದಿಯವರು ಭಯೋತ್ಪಾದನಾ ಕೃತ್ಯ ಖಂಡಿಸುತ್ತ, “ದೇಶದ ಪ್ರಧಾನಿ ಏನು ಮಾಡುತ್ತಿದ್ದಾರೆ? ಅವರ ಬಳಿ ಬಿಎಸ್‌ಎಫ್ ಇದೆ, ಸಿಆರ್‌ಪಿಎಫ್ ಇದೆ….ಹೀಗಿರುವಾಗ ಉಗ್ರು ಗಡಿ ದಾಟಿ ನುಸುಳಿ ಬರಲು ಹೇಗೆ ಸಾಧ್ಯವಾಯಿತು” ಎಂದೆಲ್ಲ ಧೀರೋದ್ಧಾತ ಭಾಷಣ ಮಾಡುತ್ತಿದ್ದರು. ಈಗ ಲೋಕಸಭೆ ಮತ್ತು ರಾಜ್ಯಸಭೆಗೆ ಗೃಹ ಇಲಾಖೆಯೇ ನೀಡಿದ ಅಂಕಿಅಂಶಗಳ ಪ್ರಕಾರ ಉಗ್ರ ನುಸುಳುವಿಕೆ ಈಗ ಹಿಂದೆಂದಿಗಿಂತ ಹೆಚ್ಚಾಗಿದೆ. ಪುಲ್ವಾಮಾ ದುರಂತ ನಡೆಯುವ ವಾರ ಮೊದಲಷ್ಟೇ ಈ ಅಂಕಿಅಂಶಗಳು ಹೊರಬಿದ್ದಿವೆ. ಹಾಗಾದರೆ 5 ವರ್ಷ ಈ 56 ಇಂಚಿನ ಮೋದಿ ಏನು ಮಾಡುತ್ತಿದ್ದರು? ಗೃಹ ಇಲಾಖೆಯ ಮಾಹಿತಿ ಪ್ರಕಾರ, 2016-18ರ ಅವಧಿಯಲ್ಲಿ 400ಕ್ಕೂ ಹೆಚ್ಚು ಭಯೋತ್ಪಾದಕರು ಪಾಕಿಸ್ತಾನದಿಂದ ಕಾಶ್ಮೀರಕ್ಕೆ ನುಸುಳಿದ್ದಾರೆ ಎಂಬ ಶಂಖೆಗಳಿವೆ. ಅಂದರೆ ಈ ಮೂರು ವರ್ಷದ ಅವಧಿಯಲ್ಲಿ ತಿಂಗಳಿಗೆ ಸರಾಸರಿ 11 ಉಗ್ರರು ಕಾಶ್ಮೀರದೊಳಕ್ಕೆ ನುಸುಳುತ್ತಿದ್ದಾರೆ. ರಕ್ಷಣಾ ಸಚಿವರನ್ನು ಡಮ್ಮಿ ಮಾಡಿ, ವಿದೇಶಾಂಗ ಸಚಿವಾಲಯವನ್ನು ಮೂಕಪ್ರೇಕ್ಷಕನಂತೆ ಕೂಡಿಸಿ, ಎಲ್ಲವನ್ನೂ ಪ್ರಧಾನಿ ಕಾರ್ಯಾಲಯವೇ ನಿಯಂತ್ರಿಸಲು ಹೋದದ್ದರ ಫಲವಿದು. ಇದರ ಪರಿಣಾಮವಾಗಿ ನಮ್ಮ ಸೈನಿಕರು ಜೀವ ಕಳೆದುಕೊಳ್ಳುತ್ತಲೇ ಇದ್ದಾರೆ. ದಿನವೂ ಹುತಾತ್ಮರಾಗುವ ಸೈನಿಕರ ಬಗ್ಗೆ ಎಂದೂ ಸಂತಾಪ ವ್ಯಕ್ತಪಡಿಸಿದವರು ಈಗ ಚುನಾವಣೆ ಹತ್ತಿರ ಬಂದ ಪರಿಣಾಮವಾಗಿ ಸೈನಿಕರ ಪರವಾಗಿ ಶೋಕಿಸುವ ನಾಟಕ ಆಡುತ್ತಿದ್ದಾರೆ.
ನೋಟು ಅಮಾನ್ಯೀ ನಂತರ ಉಗ್ರರ ಬೆನ್ನೆಲುಬು ಮುರಿಯಲಾಗಿದೆ ಎಂದು ಆಗಾಗ ಪ್ರಧಾನಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಸುಳ್ಳನ್ನು ಹೇಳುತ್ತಲೇ ಬಂದಿದ್ದಾರೆ. ಸರ್ಕಾರವೇ ಹೇಳಿದ ಪ್ರಕಾರ, 2018 ಜೂನ್ ತಿಂಗಳು ಒಂದರಲ್ಲೇ 38 ಉಗ್ರರು ಕಾಶ್ಮೀರದೊಳಕ್ಕೆ ನುಸುಳಿದ್ದಾರೆ ಎಂಬ ಸಂಶಯ ಇದೆ. ಇದೆಲ್ಲ ಗೊತ್ತಿದ್ದೂ ಕ್ರಮ ಕೈಗೊಳ್ಳದ ಮೋದಿ ಮತ್ತು ಅವರ ಸರ್ಕಾರವೇ ಈಗ ಪುಲ್ವಾಮಾ ಸಾವುಗಳಿಗೆ ನೇರ ಕಾರಣವಾಗಿದೆ.
Stratergical, policy ವಿಷಯವನ್ನು ಕೇವಲ ಮಿಲಿಟರಿ ನೆಲೆಯಲ್ಲಿ ಯೋಚಿಸುವ ಹುಂಬತನಕ್ಕೆ ಬಡ ಕುಟುಂಬಗಳಿಂದ ನಮ್ಮ ಸೈನಿಕರು ಪ್ರಾಣ ತೆರುತ್ತಿದ್ದಾರೆ. ಅರ್ನಾಬ್‌ಗಳು, ರಂಗ-ಇತ್ಯಾದಿಗಳು ಯುದ್ಧ ಎಂದು ಅರಚುತ್ತಿದ್ದರೆ, ಜಾಲತಾಣಗಳಲ್ಲಿ ಇತಿಹಾಸದ ಅರಿವೇ ಇಲ್ಲದವರು ಬಿಜೆಪಿಗೆ ಲಾಭ ಆಗುವಂತೆ ತಮ್ಮ ನಕಲಿ ದೇಶಪ್ರೇಮವನ್ನು ಹರಡುತ್ತಿದ್ದಾರೆ.


