ಮಧ್ಯಪ್ರದೇಶದಿಂದ ಮೊದಲ ಬಾರಿಗೆ ಬಿಜೆಪಿ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿರುವ ಪ್ರಗ್ಯಾ ಸಿಂಗ್ ಠಾಕೂರ್ ಅವರು “ಚರಂಡಿಗಳು ಮತ್ತು ಶೌಚಾಲಯಗಳನ್ನು ಸ್ವಚ್ಚಗೊಳಿಸಲು ಆಯ್ಕೆಯಾಗಿಲ್ಲ” ಎಂದು ಪಕ್ಷದ ಕಾರ್ಯಕರ್ತರಿಗೆ ಖಾರವಾಗಿ ತಿಳಿಸಿದ್ದಾರೆ. ಇದು ಸೊಕ್ಕಿನ ಮತ್ತು ಪ್ರಧಾನಿ ನರೇಂದ್ರ ಮೋದಿಯವರ “ಸ್ವಚ್ಚ ಭಾರತ್ ಅಭಿಯಾನ್”ಕ್ಕೆ ವಿರುದ್ಧವಾದ ಹೇಳಿಕೆಯೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಭೋಪಾಲ್‌ನ ಸಂಸತ್ ವ್ಯಾಪ್ತಿಗೆ ಬರುವ ಸೆಹೋರ್‌ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿದ ಪ್ರಗ್ಯಾ ಠಾಕೂರ್, “ನಿಮ್ಮ ಚರಂಡಿಗಳನ್ನು ಸ್ವಚ್ಚಗೊಳಿಸಲು ನಾವು ಆಯ್ಕೆಯಾಗಿಲ್ಲ, ದಯವಿಟ್ಟು ಅರ್ಥಮಾಡಿಕೊಳ್ಳಿ. ಸಂಸತ್ ನಲ್ಲಿ ಕೆಲಸ ಮಾಡುತ್ತೇನೆ ಮತ್ತು ಇದಕ್ಕಾಗಿ ನಾನು ಆಯ್ಕೆಯಾಗಿದ್ದೇನೆ, ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ, ಮೊದಲೇ ಹೇಳಿದ್ದೇನೆ ಮತ್ತು ಅದನ್ನು ಮತ್ತೆ ಹೇಳುತ್ತೇನೆ.” ಎಂದಿದ್ದಾರೆ.
“ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಸ್ಥಳೀಯ ಶಾಸಕರು (ಶಾಸಕರು) ಮತ್ತು ಪುರಸಭೆಯ ಕೌನ್ಸಿಲರ್‌ಗಳು ಸೇರಿದಂತೆ ಸ್ಥಳೀಯ ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುವುದು ಸಂಸತ್ ಸದಸ್ಯರ ಕರ್ತವ್ಯ. ಪ್ರತಿನಿತ್ಯ ನನಗೆ ಫೋನ್ ಮಾಡಿ ಸಮಸ್ಯೆ ಹೇಳುವ ಬದಲು ನಿಮ್ಮ ಸ್ಥಳೀಯ ಸಮಸ್ಯೆಗಳನ್ನು, ಸ್ಥಳೀಯ ಪ್ರತಿನಿಧಿಗಳ ಮೂಲಕ ಕೆಲಸ ಮಾಡಿಸಿ ಕೊಳ್ಳಿ” ಎಂದು ಪ್ರಗ್ಯಾ ಠಾಕೂರ್ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.
49 ವರ್ಷದ ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಪ್ರದೇಶದಲ್ಲಿ ನೈರ್ಮಲ್ಯ ಮತ್ತು ಸ್ವಚ್ಚತೆಯ ಕೊರತೆಯ ಬಗ್ಗೆ ಪದೇ ಪದೇ ದೂರು ನೀಡಿದ್ದಕ್ಕಾಗಿ ಈ ರೀತಿ ಪ್ರಗ್ಯಾ ಪ್ರತ್ಯುತ್ತರ ನೀಡಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಲೋಕಸಭಾ ಚುನಾವಣೆಗೆ ಪ್ರಚಾರ ಮಾಡುವಾಗ, 2008 ರ ಮಾಲೆಗಾಂವ್ ಸ್ಫೋಟದ ಆರೋಪಿ ಪ್ರಗ್ಯಾ, ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಬಣ್ಣಿಸುವಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಅವರ ಹೇಳಿಕೆಗಳು ಪಿಎಂ ಮೋದಿಯನ್ನು ಕೆರಳಿಸಿದ್ದವು. ಆಗ ಅವರು ಗಾಂಧಿಯನ್ನು ಕೊಂದ ವ್ಯಕ್ತಿಯನ್ನು”ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು.
ಪ್ರಗ್ಯಾ ಠಾಕೂರ್ ಅವರ ಇತ್ತೀಚಿನ ಹೇಳಿಕೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಕಾಂಗ್ರೆಸ್ ಮುಖಂಡ ತಾರಿಕ್ ಅನ್ವರ್ “ಅವರ ಮಾತುಗಳು ಸ್ವಚ್ಚ ಭಾರತ್ ಅಭಿಯಾನದ ಬಗ್ಗೆ ಅವರಿಗಿರುವ ಅಸಡ್ಡೆಯನ್ನು ತೋರಿಸುತ್ತಿದೆ. ಪ್ರಧಾನಿ ಮೋದಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.


