Homeಆರೋಗ್ಯಸಫಲತೆ ಮತ್ತು ಸಂತೋಷಕ್ಕೆ ಕೇವಲ ಜಾಣರಾಗಿದ್ದರೆ, ಒಳ್ಳೆಯ ಐ.ಕ್ಯು. ಇದ್ದರೆ ಸಾಲದು, ಅದಕ್ಕೆ ಒಳ್ಳೆಯ ಇ.ಕ್ಯು....

ಸಫಲತೆ ಮತ್ತು ಸಂತೋಷಕ್ಕೆ ಕೇವಲ ಜಾಣರಾಗಿದ್ದರೆ, ಒಳ್ಳೆಯ ಐ.ಕ್ಯು. ಇದ್ದರೆ ಸಾಲದು, ಅದಕ್ಕೆ ಒಳ್ಳೆಯ ಇ.ಕ್ಯು. ಸಹ ಇರಬೇಕು.

ಒಂದು ಸ್ಟಾಪ್-ವಾಚ್ ಹಿಡಿದು, ಶಾಂತ ಚಿತ್ತರಾಗಿ, ಒಂದೆಡೆ ಕುಳಿತು ಒಂದು ನಿಮಿಷ ನಿಮ್ಮ ಮನಸ್ಸನ್ನು ನಿರಾಳವಾಗಿ ಯೋಚಿಸಲು ಬಿಡಿ, ಆದರೆ ಅದು ಹೇಗೆ ಹೋಗುತ್ತಿದೆ, ಅದರಲ್ಲಿ ಯಾವ ಭಾವನೆ/ಯೋಚನೆ ಬರುತ್ತಿದೆ ಎಂದು ನಿರೀಕ್ಷಿಸಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-19

ಭಾವನೆಗಳ ನಿರ್ವಹಣೆ

ನಮ್ಮಲ್ಲಿ ಹಲವರಿಗೆ ತಮ್ಮ ಬುದ್ಧಿ ಕೋಷ್ಟಕ (ಇಂಟೆಲಿಜೆನ್ಸ್ ಕೋಶಂಟ್ – ಐ.ಕ್ಯು.) ಎಷ್ಟೆಂದು ತಿಳಿದಿರಬಹುದು. ಜೊತೆಗೆ, ಅವರು ತಮ್ಮ ಶಾಲಾ/ಕಾಲೇಜು ಪರೀಕ್ಷೆಗಳಲ್ಲಿ ಉತ್ತಮ ಅಂಕವನ್ನೂ ಪಡೆದು, ಒಳ್ಳೆಯ ಕೆಲಸವನ್ನೂ ಗಿಟ್ಟಿಸಿರಬಹುದು. ಆದರೆ ತಮ್ಮ  ಜೀವನದಲ್ಲಿ ಅಷ್ಟೇ ಸಫಲರಾಗಿರುತ್ತಾರೆ ಮತ್ತು ಸಂತೋಷದಿಂದಿರುತ್ತಾರೆ ಎನ್ನುವುದು ಸದಾ ಸರಿಯಲ್ಲ, ಏಕೆಂದರೆ ಸಫಲತೆ ಮತ್ತು ಸಂತೋಷಕ್ಕೆ ಕೇವಲ ಜಾಣರಾಗಿದ್ದರೆ, ಒಳ್ಳೆಯ ಐ.ಕ್ಯು. ಇದ್ದರೆ ಸಾಲದು, ಅದಕ್ಕೆ ಒಳ್ಳೆಯ ಇ.ಕ್ಯು. ಸಹ ಇರಬೇಕು.

ಏನಿದು ಇ.ಕ್ಯು.? ಎಮೋಷನಲ್ ಕೋಶಂಟ್ ಅಥವಾ ಎಮೋಷನಲ್ ಇಂಟೆಲಿಜೆನ್ಸ್ ಅಥವಾ ಭಾವನಾತ್ಮಕ ಬುದ್ಧಿವಂತಿಕೆ ಚೆನ್ನಾಗಿರುವ ವ್ಯಕ್ತಿಗಳು ತಮ್ಮಸ್ವಂತ, ಮತ್ತು ಗುಂಪಿನಲ್ಲಿ ಇತರರ, ಭಾವನೆಗಳನ್ನು ಎಷ್ಟು ಸಮರ್ಪಕವಾಗಿ ಅರಿತು, ನಿರ್ವಹಣೆ ಮಾಡುತ್ತಾರೆ ಅದರ ಮಾಪನವಾಗಿರುತ್ತದೆ. ಇಂತಹ ವ್ಯಕ್ತಿಗಳು ತಾವೂ ಸುಖವಾಗಿದ್ದು ಇತರರನ್ನು ಸಹ ಸಂತೋಷವಾಗಿ ಇರಲು ಬಿಡುತ್ತಾರೆ.

ಹೆಚ್ಚಿನ ಇ.ಕ್ಯು. ಇರುವವರು ಪರಸ್ಪರ ವೈಯುಕ್ತಿಕ ಸಂಬಂಧಗಳನ್ನು ಜೋಡಿಸುವಲ್ಲಿ, ನಿಭಾಯಿಸುವಲ್ಲಿ, ಯಶಸ್ವಿಯಾಗುತ್ತಾರೆ. ತಾವು ಸೇರಿದ ಯಾವುದೇ ಗುಂಪಿಗೆ ಹೊಂದಿಕೊಳ್ಳುತ್ತಾರೆ.

ತಮ್ಮ ಮನಃಸ್ಥಿತಿ ಅರಿತು, ತಮ್ಮ ಆತಂಕ, ದುಗುಡಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ. ಹಾಗಾಗಿ, ಮಾನಸಿಕ ಖಿನ್ನತೆ ಮುಂತಾದ ಕಾಯಿಲೆಗಳಿಂದ ದೂರವಿರುತ್ತಾರೆ.

ಮೇಲೆ ಹೇಳಿದ ಐ.ಕ್ಯು. ಮತ್ತು ಇ.ಕ್ಯು., ಎರಡೂ ಬೇರೆ ಬೇರೆ, ಒಂದಕ್ಕೊಂದು ಸಂಬಂಧವಿಲ್ಲ. ಕಡಿಮೆ ಐ.ಕ್ಯು. ಇರುವ ವ್ಯಕ್ತಿಗೆ ಹೆಚ್ಚಿನ ಇ.ಕ್ಯು. ಅಥವಾ ಹೆಚ್ಚಿನ ಐ.ಕ್ಯು. ಇರುವ ವ್ಯಕ್ತಿಗೆ ಕಡಿಮೆ ಇ.ಕ್ಯು. ಇರಬಹುದು. ಎರಡು ಹೆಚ್ಚು ಅಥವಾ ಎರಡೂ ಕಡಿಮೆಯೂ ಇರಬಹುದು. ಅದು ಅವರವರ ಸಮಗ್ರ ವ್ಯಕ್ತಿತ್ವದ ಮೇಲೆ ಅವಲಂಬಿಸಿರುತ್ತದೆ. ಆದರೆ ಒಂದಂತೂ ನಿಜ, ಮಾನವರು ಹೊಸ ಕಲೆಗಳನ್ನು ಕಲಿಯುವ/ಪ್ರಯೋಗಕ್ಕೆ ತರುವ ಮೂಲಕ ತಮ್ಮ ಇ.ಕ್ಯು. ಹೆಚ್ಚಿಸಿಕೊಳ್ಳಬಹುದು.

ಹಿಂದೂ/ಬುದ್ಧ/ಜೈನ ಧರ್ಮದ ಪರಿಕಲ್ಪನೆಯಲ್ಲಿ ಅರಿಷಡ್ವರ್ಗ ಎನಿಸಿಕೊಳ್ಳುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೇ ನಿರ್ವಹಿಸಬೇಕಾಗಿರುವ ನಮ್ಮ ಭಾವನಾತಿರೇಕಗಳು ಮತ್ತು ಶತ್ರುಗಳು. ಯಾವ ಕಾಲದಲ್ಲಿ, ಯಾವ ವ್ಯಕ್ತಿಯಲ್ಲಿ, ಯಾವ ಭಾವನೆಗಳು ಕೆರಳಿ, ಯಾರು ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೋ ಹೇಳುವುದು ಕಷ್ಟ. ಕೆಲವು ಮನೋವಿಕಾರಗಳು ವಯೋಧರ್ಮದಿಂದ ಬಂದಿದ್ದರೆ ಕೆಲವು ಸಂದರ್ಭ ಅಥವಾ ಪರಿಸ್ಥಿತಿಯಿಂದಾಗಿ ಕಾಣಿಸಿಕೊಳ್ಳಬಹುದು. ಇವೆಲ್ಲವೂ ಮಾನವ ಸಹಜ ಧರ್ಮವಾದರೂ ಸಹ ಅತಿರೇಕಕ್ಕೆ ಹೋದಾಗ, ಇದರಿಂದ ಬೇರೊಬ್ಬರಿಗೆ ತೊಂದರೆ ಆದಾಗ, ಸಮಾಜದ ಶಾಂತಿ, ಸಾಮರಸ್ಯ ಹಾಳಾಗುತ್ತದೆ. ಹಾಗಾಗಿ ಭಾವನಾತಿರೇಕವನ್ನು ಹದ್ದುಬಸ್ತಿನಲ್ಲಿ ಇಡಬೇಕಾದ ಕೆಲಸ ಎಲ್ಲರಿಗೂ ಸೇರುತ್ತದೆ.

ಖ್ಯಾತ ಲೇಖಕ ಮತ್ತು ವಿಜ್ಞಾನ ವಿಷಯದ ಪತ್ರಕರ್ತ ಡೇನಿಯಲ್ ಗೋಲ್ಮನ್ ಭಾವನಾತ್ಮಕ ಬುದ್ಧಿವಂತಿಕೆಯನ್ನು ಅತ್ಯಾವಶ್ಯಕ ಕಲೆ ಎನ್ನುತ್ತಾರೆ. ವೈಯುಕ್ತಿಕ ಸ್ತರದಲ್ಲಿ “ಸ್ವ-ಅರಿವು”, “ಸ್ವ-ನಿಯಂತ್ರಣ” ಮತ್ತು ಸ್ವ-ಪ್ರೇರಣೆ ಹಾಗೂ ಸಮಾಜದ ಸ್ತರದಲ್ಲಿ “ಅನುಭೂತಿ” ಮತ್ತು “ಇತರ ಸಾಮಾಜಿಕ ಕಲೆ” ಎಂದು ವಿಂಗಡಿಸುತ್ತಾರೆ.

ಸ್ವ-ಅರಿವಿನಡಿಯಲ್ಲಿ ನಮ್ಮನ್ನು ನಾವೇ ಪರೀಕ್ಷಿಸಿಕೊಂಡು, ಯಾವ ಭಾವನೆಗಳು ನಮ್ಮನ್ನು ಅತಿ ಹೆಚ್ಚು ಕಾಡುತ್ತವೆ, ಅದಕ್ಕೆ ಕಾರಣಗಳೇನು, ಅದನ್ನು ಶಾಂತಗೊಳಿಸಲು ನಮ್ಮ ವಿಧಾನಗಳೇನು ಎಂಬುದನ್ನು ಗುರುತು ಹಾಕಿಕೊಳ್ಳುವುದು. ಒಂದು ದಿನಚರಿ ಪುಸ್ತಕ ಇಟ್ಟು ಅದರಲ್ಲಿ ಸನ್ನಿವೇಶಗಳು, ಅದರಿಂದ ಉತ್ಪನ್ನವಾದ ನಮ್ಮ ಭಾವನೆಗಳನ್ನು ಮತ್ತು ಅದು ಹೇಗೆ ಶಾಂತವಾಯಿತು ಎಂಬುದನ್ನು ಬರೆಯುತ್ತಾ ಹೋದಲ್ಲಿ, ನಮ್ಮ ಸಮಸ್ಯೆಗೆ ತಾನೇ ಉತ್ತರ ಸಿಗುತ್ತದೆ. ಸಿಗದಿದ್ದಲ್ಲಿ, ಅದಕ್ಕೆ ಪರಿಣಿತರ/ಹಿರಿಯರ ಸಲಹೆ ಪಡೆಯಬಹುದು. ಈ ಭಾವನೆಗಳನ್ನು ಧನಾತ್ಮಕ ಅಥವಾ ಋಣಾತ್ಮಕ ಎಂದು ವರ್ಗೀಕರಿಸುವ ಅವಶ್ಯಕತೆ ಇಲ್ಲ. ಉದಾ: ಎಲ್ಲರೂ ಕೋಪ ಕೆಟ್ಟದ್ದು ಎನ್ನುತ್ತಾರೆ, ಆದರೆ ಸನ್ನಿವೇಶಕ್ಕೆ ಅನುಗುಣವಾಗಿ ಕೋಪ ಸಹಜವೂ, ಉಪಯುಕ್ತವೂ ಆಗಿರಬಹುದು. ಎಲ್ಲಾ ಭಾವನೆಗಳಿಗೂ ಒಂದು ನಿರ್ದಿಷ್ಟ ಕೆಲಸ ಇರುತ್ತದೆ.

ಸ್ವ-ನಿಯಂತ್ರಣ ನಮ್ಮ ಸಂಸ್ಕೃತಿ, ಲಾಲನೆ-ಪೋಷಣೆಯಿಂದಾಗಿ ಬರುತ್ತದೆ. ಇದು ನಮ್ಮ ನೈತಿಕ ದಿಕ್ಸೂಚಿಯೂ ಹೌದು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಯಾರೂ ಹೇಳದಿದ್ದರೂ, ನಮ್ಮ ಅಂತರಂಗ ನಮಗೆ ನಿರಂತರವಾಗಿ ಸೂಚಿಸುತ್ತಿರುತ್ತದೆ. ಅದರ ಕೂಗನ್ನು ಬಲವಂತವಾಗಿ ಹತ್ತಿಕ್ಕಿ ಮಾಡುವ ಕೆಲಸ ಖಂಡಿತಾ ತಪ್ಪು.

ಸ್ವ-ಪ್ರೇರಣೆ ನಮ್ಮನ್ನು ಗುರಿಯತ್ತ ತಲುಪಿಸುವ ಕೆಲಸ ಮಾಡುತ್ತದೆ. ಗುರಿಯ ಪ್ರತಿ ನಮ್ಮ ಬದ್ಧತೆ, ಮೊದಲ ಹೆಜ್ಜೆ, ಆಶಾವಾದ, ಸ್ವಸ್ಥಿತಿಗೆ ಹಿಂತಿರುಗುವ ತವಕ ಇವೆಲ್ಲವೂ ನಮ್ಮನ್ನು ದಾರಿ ತಪ್ಪದಂತೆ ನೋಡಿಕೊಳ್ಳುತ್ತವೆ.

ಸಾಮಾಜಿಕ ಸ್ತರದಲ್ಲಿ ಅನುಭೂತಿ ನಮಗೆ ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.ನಮಗಿಂತ ಭಿನ್ನವಾದ ವ್ಯಕ್ತಿಗಳು, ಅವರು ದಿವ್ಯಾಂಗರಾಗಿರಬಹುದು, ಬೇರೆ ದೇಶ, ಪ್ರಾಂತ್ಯ, ಭಾಷೆ, ವೇಷ-ಭೂಷ-ಆಹಾರ-ವಿಚಾರದವರಾಗಿರಬಹುದು, ಎಲ್ಲರನ್ನೂ ನಮ್ಮವರಂತೆ ಕಾಣಲು ಸಹಾಯಕವಾಗುತ್ತದೆ. ಸಮಾಜದ ವಿವಿಧತೆಯಲ್ಲಿ ಏಕತೆ, ಐಕ್ಯತೆ ಕಾಣಲು ಸಹಕಾರಿಯಾಗುತ್ತದೆ. ಸಮಾಜ ಸೇವೆಯಲ್ಲಿ ತೊಡಗಲು ಪ್ರೇರೇಪಿಸುತ್ತದೆ.

ಇತರ ಸಾಮಾಜಿಕ ಕಲೆಗಳಲ್ಲಿ, ಆತ್ಮ ವಿಶ್ವಾಸ, ಪ್ರಭಾವ ಬೀರುವುದು, ಸಂವಹನ, ನಾಯಕತ್ವ, ವ್ಯಾಜ್ಯಗಳ ಪರಿಹಾರ, ತಂಡ ಸಾಮರ್ಥ್ಯ, ಸಹೋದ್ಯಮ, ಸಹಕಾರ, ಸಹಬಾಳ್ವೆ ಮುಂತಾದವುಗಳನ್ನು ಕಲಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ, ಭಾವನಾತ್ಮಕ ಬುದ್ಧಿವಂತಿಕೆಯ ಕೊರತೆಯಿಂದಾಗಿ, ಗುಂಪು ಘರ್ಷಣೆ, ಮತ್ತು ಎಲ್ಲಾ ರೀತಿಯ ಸಮಾಜವಿರೋಧಿ ಚಟುವಟಿಕೆಗಳು ಕಾಣಿಸಿಕೊಳ್ಳುತ್ತಿವೆ. ಇತ್ತೀಚೆಗೆ ನಡೆಸಿದ ಸರ್ವೇಕ್ಷಣೆಗಳಿಂದ, ನಾವು ಮಕ್ಕಳಿಗೆ ಚಿಕ್ಕಂದಿನಿಂದ ಭಾವನಾತ್ಮಕ ಬುದ್ಧಿವಂತಿಕೆಯನ್ನು ಕಲಿಸಿದ್ದೇ ಆದಲ್ಲಿ, ಅವರ ಅಸಾಮಾಜಿಕ ನಡತೆಯಲ್ಲಿ ಗಣನೀಯ ಇಳಿತ ಕಂಡುಬಂದು, ಒಳ್ಳೆಯ ನಡತೆಯೂ ಉತ್ತಮಗೊಳ್ಳುವುದರ ಜೊತೆಗೆ ಅವರ ಶೈಕ್ಷಣಿಕ ಪ್ರಗತಿಯೂ ಉತ್ತಮಗೊಂಡಿರುವುದು ಕಂಡುಬಂದಿದೆ.

ಸ್ವಾಮಿ ವಿವೇಕಾನಂದರು ಮನಸ್ಸನ್ನು, ಯೋಚನೆಗಳನ್ನು, ಭಾವನೆಗಳನ್ನು ಲಗಾಮಿಲ್ಲದ ಕುದುರೆಗೆ ಹೋಲಿಸುತ್ತಾರೆ. ಅದು ಹೇಗೆಂದರೆ ಹಾಗೆ ಓಡುತ್ತಿರುತ್ತದೆ. ಅದನ್ನು ನಿಯಂತ್ರಿಸಲು ಅವರು ಸುಲಭ ಉಪಾಯ ಸೂಚಿಸುತ್ತಾರೆ. ಒಂದು ಸ್ಟಾಪ್-ವಾಚ್ ಹಿಡಿದು, ಶಾಂತ ಚಿತ್ತರಾಗಿ, ಒಂದೆಡೆ ಕುಳಿತು ಒಂದು ನಿಮಿಷ ನಿಮ್ಮ ಮನಸ್ಸನ್ನು ನಿರಾಳವಾಗಿ ಯೋಚಿಸಲು ಬಿಡಿ, ಆದರೆ ಅದು ಹೇಗೆ ಹೋಗುತ್ತಿದೆ, ಅದರಲ್ಲಿ ಯಾವ ಭಾವನೆ/ಯೋಚನೆ ಬರುತ್ತಿದೆ ಎಂದು ನಿರೀಕ್ಷಿಸಿ. ಒಂದು ನಿಮಿಷವಾದ ಕೂಡಲೇ ಎಲ್ಲವನ್ನು ನಿಲ್ಲಿಸಿ, ನಿಮ್ಮ ಮನಸ್ಸನ್ನು ಒಂದು ನಿಮಿಷದ ಹಿಂದಕ್ಕೆ ರಿವೈಂಡ್ ಮಾಡಿ. ಯೋಚನೆ ಎಲ್ಲಿಂದ ಪ್ರಾರಂಭವಾಯಿತು, ಎಲ್ಲಿಂದ ಎಲ್ಲಿಗೆ ಹಾರಿತು, ಎಲ್ಲಿಗೆ ಬಂದು ನಿಂತಿತು ಎಂಬುದನ್ನು ಗುರುತು ಹಾಕಿಕೊಳ್ಳಿ. ಒಂದು ನಿಮಿಷದ ಲಾಗ್-ಬುಕ್ ಸಿಕ್ಕ ನಂತರ, ಕಾಲಾವಕಾಶವನ್ನು ಎರಡು, ಮೂರು, ಐದು, ಹತ್ತು ನಿಮಿಷಕ್ಕೆ ಏರಿಸುತ್ತಾ ಹೋಗಿ. ನಿಮ್ಮ ಯೋಚನೆ ಮತ್ತೆ ಮತ್ತೆ ಅದೇ ವಿಷಯದತ್ತ ಓಡುತ್ತಿದ್ದರೆ, ಅಲ್ಲಿದೆ ನಿಮ್ಮ ಸಮಸ್ಯೆ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿನ ಮೇಲೆ, ಯೋಚನೆಯ ಮೇಲೆ, ಭಾವನೆಯ ಮೇಲೆ ನಿಮಗೆ ನಿಯಂತ್ರಣ ಸಿಗಲು ಸಾಧ್ಯವಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...