Homeಮುಖಪುಟಅತ್ತ ಸಿನಿಮಾನೂ ಇಲ್ಲ, ಇತ್ತ ರಾಜಕೀಯದಲ್ಲೂ ಸ್ಪಷ್ಟತೆ ಇಲ್ಲ; ಎಡಬಿಡಂಗಿ ಪವನ್ ಕಲ್ಯಾಣ್ ಏನು ನಿಮ್ಮ...

ಅತ್ತ ಸಿನಿಮಾನೂ ಇಲ್ಲ, ಇತ್ತ ರಾಜಕೀಯದಲ್ಲೂ ಸ್ಪಷ್ಟತೆ ಇಲ್ಲ; ಎಡಬಿಡಂಗಿ ಪವನ್ ಕಲ್ಯಾಣ್ ಏನು ನಿಮ್ಮ ಲೀಲೆ?

ಕಳೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಾರ್ಟಿ ಚುನಾವಣೆಗೆ ಸ್ಪರ್ಧಿಸಿತಾದರೂ ಗಳಿಸಿದ್ದು ಮಾತ್ರ ಕೇವಲ 1 ಸ್ಥಾನ. ಆದರೆ, ತನ್ನ ರಾಜಕೀಯ ಹೋರಾಟವನ್ನು ಪವನ್ ಕಲ್ಯಾಣ್ ಹೀಗೆ ನಡೆಸಿದ್ದರೂ ಸಹ ಜನರ ಪ್ರಶಂಸೆಗೆ ಪಾತ್ರರಾಗುತ್ತಿದ್ದರೇನೋ?

- Advertisement -

ಪವನ್ ಕಲ್ಯಾಣ್.. ಈತ ತೆಲುಗು ಸಿನಿಮಾ ರಂಗದ ಪವರ್ ಸ್ಟಾರ್. ಅದಕ್ಕೂ ಮೇಲಾಗಿ ಮೆಗಾ ಸ್ಟಾರ್ ಹಾಗೂ ಮಾಜಿ ಕೇಂದ್ರ ಸಚಿವ ಚಿರಂಜೀವಿ ಅವರ ಖಾಸಾ ತಮ್ಮ. ಮಾಡಿದ್ದು ಕೇವಲ 25 ಚಿತ್ರಗಳು. ಈ ಪೈಕಿ ಹಿಟ್ ಸಾಲಿಗೆ ಸೇರುವ ಚಿತ್ರಗಳ ಸಂಖ್ಯೆ ಮೂರು ಮತ್ತೊಂದು ಮಾತ್ರ. ಹೀಗಿದ್ದೂ ಈತ ಪವರ್ ಸ್ಟಾರ್ ಪಟ್ಟಕ್ಕೆ ಏರಿದ್ದು ಹೇಗೆ? ಎಂಬುದು ಈಗಲೂ ಉತ್ತರವಿಲ್ಲದ ಪ್ರಶ್ನೆಯೇ ಸರಿ.

ಆದರೆ, ಈತ ಕೇವಲ ಸಿನಿ ರಂಗದಲ್ಲೇ ಮುಂದುವರೆದಿದ್ದರೆ ಸಮಸ್ಯೆ ಇರುತ್ತಿರಲಿಲ್ಲವೇನೋ? ಆದರೆ, ರಾಜಕೀಯಕ್ಕೂ ಧುಮುಕಿರುವ ಈತನ ಕೆಲವು ಎಡಬಿಡಂಗಿ ನಿಲುವುಗಳು ಇದೀಗ ಪೇಚಿಗೆ ಸಿಲುಕುವಂತಾಗಿದೆ. ಸ್ವತಃ ಈತನ ಅಭಿಮಾನಿಗಳೇ ಗೊಂದಲದಲ್ಲಿದ್ದಾರೆ.

ಅಸಲಿಗೆ ಆಂಧ್ರಪ್ರದೇಶದಲ್ಲಿ ಪರ್ಯಾಯ ರಾಜಕೀಯ ಕಟ್ಟಬೇಕು ಎಂಬ ಮಹತ್ವಾಕಾಂಕ್ಷೆಯ ಉದ್ದೇಶದಿಂದ ನಟ ಚಿರಂಜೀವಿ 2008ರಲ್ಲಿ ತಿರುಪತಿಯಲ್ಲಿ ಮದರ್ ತೆರೆಸಾ ಅವರ ಹುಟ್ಟುಹಬ್ಬದ ದಿನವಾದ ಆಗಸ್ಟ್ 2 ರಂದು ಅದ್ದೂರಿಯಾಗಿ “ಪ್ರಜಾರಾಜ್ಯಂ” ಎಂಬ ಪಕ್ಷವನ್ನು ಸ್ಥಾಪಿಸಿ ಚುನಾವಣೆ ಎದುರಿಸಿದ್ದರು. ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ತನ್ನ ಅಣ್ಣನ ಬೆನ್ನಿಗೆ ನಿಂತಿದ್ದರು. ಆದರೆ, ಪ್ರಜಾರಾಜ್ಯಂ ನಿರೀಕ್ಷಿತ ಸ್ಥಾನ ಗಳಿಸುವಲ್ಲಿ ವಿಫಲವಾಗಿತ್ತು. ಪರಿಣಾಮ ಕಾಂಗ್ರೆಸ್ ಪಕ್ಷದ ಜೊತೆಗೆ ತನ್ನ ಪ್ರಜಾರಾಜ್ಯಂ ಪಕ್ಷವನ್ನು ವಿಲೀನ ಮಾಡಿದ್ದ ಜಿರಂಜೀವಿ, ಸೋನಿಯಾ ಗಾಂಧಿ ಅವರ ಕೃಪಕಟಾಕ್ಷದಿಂದ ಕೇಂದ್ರ ಸಚಿವ ಹುದ್ದೆಗೆ ಏರುವ ಮೂಲಕ ರಾಜಕೀಯವಾಗಿ ತಣ್ಣಗಾಗಿದ್ದರು.

ಆದರೆ, ಪವನ್ ಕಲ್ಯಾಣ್ ತನ್ನ ಅಣ್ಣನ ಈ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೆ, ತನ್ನ ಅಣ್ಣನಿಂದ ದೂರವಾಗಿ 2014 ಮಾರ್ಚ್ 14 ರಂದು “ಜನಸೇನಾ ಪಾರ್ಟಿ” ಎಂಬ ಮತ್ತೊಂದು ಹೊಸ ಪಕ್ಷವನ್ನು ಸ್ಥಾಪಿಸಿದರು. ರಾಜ್ಯವ್ಯಾಪಿ ಮಿಂಚಿನ ಸಂಚಾರ ನಡೆಸಿ ಪ್ರಚಾರ ನಡೆಸಿದ್ದರು. ಅಸಲಿಗೆ ಈ ಪ್ರಚಾರ ಜನಸೇನಾ ಪಕ್ಷದ ಚುನಾವಣೆಗೆ ಮಾತ್ರ ಸೀಮಿತವಾಗಿದ್ದರೆ ಸಮಸ್ಯೆ ಇರಲಿಲ್ಲ. ಆದರೆ, ಈ ಪ್ರಚಾರ ಪವನ್ ಕಲ್ಯಾಣ್ ಅವರ ರಾಜಕೀಯ ಅಪಕ್ವತೆ ಹಾಗೂ ಎಡಬಿಡಂಗಿ ತನವನ್ನು ಎದ್ದು ಕಾಣುವಂತೆ ಮಾಡಿತ್ತು.

ಪವನ್ ಕಲ್ಯಾಣ್.

ಪವನ್ ರಾಜಕೀಯ ಎಡಬಿಡಂಗಿ ತನಕ್ಕೆ ಕೊನೆ ಎಂದು?;

2014ರಲ್ಲಿ ಪವನ್ ಕಲ್ಯಾಣ್ ರಾಜಕೀಯ ಪ್ರವೇಶಿಸಿದಾಗ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಇಲ್ಲದೆ ಸ್ವತಂತ್ರ್ಯವಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದೇ ಊಹಿಸಲಾಗಿತ್ತು.

ಆದರೆ, ಈ ಸಂದರ್ಭದಲ್ಲಿ ತಮ್ಮ ದ್ವನಿ ಬದಲಿಸಿದ್ದ ಪವನ್, ನೇರಾನೇರ ಪ್ರಧಾನಿ ನರೇಂದ್ರ ಮೋದಿಯ ಪರ ಬ್ಯಾಟಿಂಗ್ ನಡೆಸಿದ್ದರು. ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿ ಅನಿವಾರ್ಯ ಎಂದು ಹೋದಲ್ಲಿ ಬಂದಲ್ಲೆಲ್ಲಾ ಬೊಬ್ಬೆ ಹೊಡೆದಿದ್ದರು. ಹೀಗಾಗಿ ಚಿರಂಜೀವಿಯಂತೆ ಪವನ್ ಕಲ್ಯಾಣ್ ಸಹ ತಮ್ಮ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನಗೊಳಿಸುವುದು ಖಚಿತ ಎನ್ನುವ ಮಾತು ಚಾಲ್ತಿಗೆ ಬರಲಾರಂಭಿಸಿತು.

2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜನಸೇನಾ ಪಕ್ಷ ಚುನಾವಣೆಗೆ ಸ್ಪರ್ಧಿಸಲಿದೆ ಎಂದೇ ಬಿಂಬಿಸಲಾಗಿತ್ತು. ಆದರೆ, ಈ ವೇಳೆ ಉಲ್ಟಾ ಹೊಡೆದಿದ್ದ ಪವನ್ ಕಲ್ಯಾಣ್, “ಬಿಜೆಪಿ ದೇಶಕ್ಕೆ ಮಾರಕ. ಇವರಿಗೆ ಮತ ಹಾಕಬೇಡಿ. ಕೆಲವು ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ ಯುದ್ಧ ಘೋಷಣೆ ಮಾಡುವ ಮೂಲಕ ಮತಗಳನ್ನು ಸೆಳೆಯುತ್ತೇವೆ ಎಂದು ಸ್ವತಃ ನನ್ನ ಬಳಿಯೇ ಹೇಳಿದ್ದಾರೆ. ಇವರು ಗೆಲ್ಲುವುದಕ್ಕಾಗಿ ಏನುಬೇಕಾದರೂ ಮಾಡಿಯಾರು. ಹೀಗಾಗಿ ಎರಡನೇ ಅವಧಿಗೂ ಬಿಜೆಪಿ ಗೆಲುವು ಸಾಧಿಸಿದರೆ ಭಾರತವನ್ನು ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ಇಡೀ ದೇಶವನ್ನೇ ಅಚ್ಚರಿಗೆ ದೂಡಿದ್ದರು.

ಅಲ್ಲದೆ, ನಮ್ಮ ಪಕ್ಷ ನೇರವಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಬದಲಾಗಿ ಯಾರೂ ಬಿಜೆಪಿ ಮತಹಾಕಬೇಡಿ ಎಂದು ಪ್ರಚಾರ ನಡೆಸುತ್ತೇವೆ ಎಂದು ಹೇಳುವ ಮೂಲಕ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗುರಿಯಾಗಿದ್ದರು.

ನಂತರ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಾರ್ಟಿ ಚುನಾವಣೆಗೆ ಸ್ಪರ್ಧಿಸಿತಾದರೂ ಗಳಿಸಿದ್ದು ಮಾತ್ರ ಕೇವಲ 1 ಸ್ಥಾನ. ಆದರೆ, ತನ್ನ ರಾಜಕೀಯ ಹೋರಾಟವನ್ನು ಪವನ್ ಕಲ್ಯಾಣ್ ಹೀಗೆ ನಡೆಸಿದ್ದರೂ ಸಹ ಜನರ ಪ್ರಶಂಸೆಗೆ ಪಾತ್ರರಾಗುತ್ತಿದ್ದರೇನೋ?

ಪವನ್ ಕಲ್ಯಾಣ್.

ಆದರೆ, ಕಳೆದ ಎರಡು ವರ್ಷದಿಂದ ಪವನ್ ಕಲ್ಯಾಣ್ ಯಾವ ಪಕ್ಷದ ನಾಯಕರ ವಿರುದ್ಧ ಹೋರಾಟ ನಡೆಸಿದ್ದರೋ ಇದೀಗ ಮತ್ತೆ ಅದೇ ಬಿಜೆಪಿ ನಾಯಕರ ಜೊತೆಗೆ ಕೈಜೋಡಿಸಿದ್ದಾರೆ. ಬಿಜೆಪಿ ಪರ ಬ್ಯಾಟ್ ಬೀಸುವ ಕೆಲಸವನ್ನು ಶಿರಸಾವಹಿಸಿ ಪಾಲಿಸುತ್ತಿದ್ದಾರೆ. ಅಲ್ಲದೆ, ಬಿಜೆಪಿ ಪಕ್ಷದ ನೂತನ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಪಿ. ನಡ್ಡಾ ಅವರನ್ನು ಇಂದು ಖುದ್ದು ಭೇಟಿ ಮಾಡಿ ಅಭಿನಂದನೆಗಳನ್ನೂ ಸಲ್ಲಿಸಿದ್ದಾರೆ.

ಅತ್ತ ಒಳ್ಳೆಯ ಚಿತ್ರಗಳನ್ನೂ ನೀಡದ ಪವನ್ ಕಲ್ಯಾಣ್, ಇತ್ತ ರಾಜಕೀಯವಾಗಿಯೂ ಸರಿಯಾದ ಗುರಿ ಹಾಗೂ ನಿಲುವುಗಳಿಲ್ಲದ ಇಲ್ಲದ ರಾಜಕೀಯ ಎಡಬಿಡಂಗಿ ತನವನ್ನು ಕಂಡು ಸ್ವತಃ ಆಂಧ್ರಪ್ರದೇಶದ ಅವರ ಅಭಿಮಾನಿ ಬಳಗವೇ ಪವನ್ ಕಲ್ಯಾಣ್ ಏನಪ್ಪಾ ನಿನ್ನ ಲೀಲೆ? ಎಂದು ಪ್ರಶ್ನಿಸುವಂತಾಗಿರುವುದು ಮಾತ್ರ ವಿಪರ್ಯಾಸ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial