- Advertisement -
2015ರ ಆಗಸ್ಟ್ 30ರಂದು ಮುಂಜಾನೆ ಧಾರವಾಡದಲ್ಲಿ ಒಂದು ದುರಂತ ನಡೆದುಹೋಗಿತ್ತು. ಅಂದು ನಾಡಿನ ಹಿರಿಯ ಸಾಹಿತಿ ಎಂ.ಎಂ.ಕಲ್ಬುರ್ಗಿಯವರ ಮನೆಯ ಬಾಗಿಲು ಬಡಿದ ಆಗಂತುಕ ಅವರ ಹಣೆಗೆ ಗುಂಡಿಟ್ಟು ಕೊಂದಿದ್ದ. ಹೀಗೆ ಮಹಾರಾಷ್ಟ್ರದಲ್ಲಿ ಶುರುವಾಗಿದ್ದ ಬುದ್ಧಿಜೀವಿಗಳ ಹತ್ಯಾ ಸರಣಿ ಕರ್ನಾಟಕಕ್ಕೂ ಕಾಲಿಟ್ಟಿತ್ತು. ಸಾಹಿತಿ ಕಲ್ಬುರ್ಗಿಯವರ ಕೊಲೆ ಎಲ್ಲರನ್ನೂ ಆಶ್ಚರ್ಯಕ್ಕೆ ಗುರಿ ಮಾಡಿತು. ಮೊದಲಿಗೆ ನಂಬುವುದೇ ಕಷ್ಟವೆನಿಸಿತು. ಈ ಕುರಿತು ಪ್ರತಿಭಟನೆಗಳಾದವು, ತನಿಖೆಗೆ ಒತ್ತಾಯಗಳಾದವು. ಈ ಬಗ್ಗೆ ನಡೆದ ಅನೇಕ ಪ್ರತಿಭಟನೆಗಳಲ್ಲಿ ಗೌರಿ ಲಂಕೇಶ್ ಮುಂಚೂಣಿಯಲ್ಲಿದ್ದರು. ಮಹಾರಾಷ್ಟ್ರದ ನರೇಂದ್ರ ದಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರ ಕೊಲೆಗಳಿಗೆ ಬಳಸಿದ ಬಂದೂಕು ಮತ್ತು ಕಲ್ಬುರ್ಗಿಯವರನ್ನು ಕೊಲ್ಲಲು ಬಳಸಿದ ಬಂದೂಕಿಗೂ ವಿಧಿವಿಜ್ಞಾನ ಪ್ರಯೋಗಾಲಯವು ತಳುಕು
ಹಾಕಿದಾಗ ಇದು ಬಲಪಂಥೀಯ ‘ಹಿಂದುತ್ವವಾದಿ’ಗಳದೇ ಕೈವಾಡ ಎಂಬ ಅನುಮಾನ ಬಲಗೊಳ್ಳುತ್ತಾ ಹೋಯಿತು. ಆದರೆ ಎರಡು ವರ್ಷಗಳಲ್ಲಿ ತನಿಖೆ ಯಾವುದೇ ಯಶಸ್ಸು ಕಾಣಲಿಲ್ಲ, ಯಾರನ್ನೂ ಇದುವರೆಗೂ ಸಹ ಬಂಧಿಸಲಾಗಿಲ್ಲ. ಕಲ್ಬುರ್ಗಿಯವರ ಕೊಲೆಯ ತರುವಾಯ ನಮ್ಮ ರಾಜ್ಯದಲ್ಲಿ ಕೆಲವು ಬಲಪಂಥೀಯ ಉಗ್ರವಾದಿಗಳು ಬಹಿರಂಗವಾಗಿ ಹಿಟ್ಲಿಸ್ಟ್ ಬಗ್ಗೆ ಮಾತನಾಡಿದ್ದರು. ಆದರೆ ಈ ಹೇಳಿಕೆಗಳನ್ನು “ಫ್ರಿಂಜ್” ಎಂದು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಅದೇ ಮುಳುವಾಯಿತು.
ಹಾಕಿದಾಗ ಇದು ಬಲಪಂಥೀಯ ‘ಹಿಂದುತ್ವವಾದಿ’ಗಳದೇ ಕೈವಾಡ ಎಂಬ ಅನುಮಾನ ಬಲಗೊಳ್ಳುತ್ತಾ ಹೋಯಿತು. ಆದರೆ ಎರಡು ವರ್ಷಗಳಲ್ಲಿ ತನಿಖೆ ಯಾವುದೇ ಯಶಸ್ಸು ಕಾಣಲಿಲ್ಲ, ಯಾರನ್ನೂ ಇದುವರೆಗೂ ಸಹ ಬಂಧಿಸಲಾಗಿಲ್ಲ. ಕಲ್ಬುರ್ಗಿಯವರ ಕೊಲೆಯ ತರುವಾಯ ನಮ್ಮ ರಾಜ್ಯದಲ್ಲಿ ಕೆಲವು ಬಲಪಂಥೀಯ ಉಗ್ರವಾದಿಗಳು ಬಹಿರಂಗವಾಗಿ ಹಿಟ್ಲಿಸ್ಟ್ ಬಗ್ಗೆ ಮಾತನಾಡಿದ್ದರು. ಆದರೆ ಈ ಹೇಳಿಕೆಗಳನ್ನು “ಫ್ರಿಂಜ್” ಎಂದು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಅದೇ ಮುಳುವಾಯಿತು.2017, ಸೆಪ್ಟೆಂಬರ್ 5ರ ಸಂಜೆ: ಸುಮಾರು 7:45ರಿಂದ 8ರ ನಡುವೆ. ಬಸವನಗುಡಿಯ ಪತ್ರಿಕಾ ಕಛೇರಿಯಿಂದ ಆ ವಾರದ ಪತ್ರಿಕೆಯ ಕೆಲಸ ಮುಗಿಸಿದ ಗೌರಿ ಒಬ್ಬರೇ ಡ್ರೈವ್ ಮಾಡಿಕೊಂಡು ರಾಜರಾಜೇಶ್ವರಿನಗರದ ತಮ್ಮ ಮನೆಗೆ ಬರುತ್ತಾರೆ. ಮನೆಯ ಮುಂದೆ ಗೇಟಿಗೆ ಉದ್ದವಾಗಿ ಕಾರು ನಿಲ್ಲಿಸಿ, ಕಾರು ಒಳಗೆ ಪಾರ್ಕ್ ಮಾಡಲು ಗೇಟಿನ ಬಾಗಿಲು ತೆಗೆಯಲು ಕೆಳಗಿಳಿಯುತ್ತಾರೆ. ಹೀಗೆ ಇಳಿದಾಗ ಅವರು ಕಾರಿನ ರಸ್ತೆ ದೀಪ ಆರಿಸಿರಲಿಲ್ಲ. ಮುಂದೆ ಇದು ಪೋಲೀಸರ ಸಹಾಯಕ್ಕೆ ಬರುತ್ತದೆ. ಗೌರಿ ಗೇಟಿನ ಬಾಗಿಲು ತೆಗೆದು ಕಾಂಪೌಂಡಿನ ಒಳಗೆ ಹೋಗುತ್ತಿದ್ದಂತಯೇ ಹಿಂದಿನಿಂದ ಯಾರೋ ಕರೆದಂತಾಗಿ ರಸ್ತೆಯ ಕಡೆಗೆ ತಿರುಗುತ್ತಾರೆ. ಕೇವಲ 10 ಸೆಕೆಂಡುಗಳಲ್ಲಿ ನಾಲ್ಕು ಗುಂಡುಗಳು ಸಿಡಿದಿವೆ. ಅದರಲ್ಲಿ ಮೊದಲ ಗುಂಡು ಗುರಿ ತಪ್ಪಿ ಮನೆಯ ಗೋಡೆಗೆ ತಗಲುತ್ತದೆ. ಆದರೆ ಕೂಡಲೇ ಮೂರು ಗುಂಡು ಗೌರಿಯವರ ಗುಬ್ಬಿ ಗಾತ್ರದ ದೇಹ ಹೊಕ್ಕು ಅವರು ಅಲ್ಲೇ ಕುಸಿದುಬಿದ್ದು ಪ್ರಾಣ ಬಿಡುತ್ತಾರೆ. ಈ ಘಟನೆಯು ಗೌರಿಯವರ ಮನೆಯ ಮುಂದೆ ಹಾಕಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಗುಂಡು ಹೊಡೆದ ಕೊಲೆಗಾರ ಬಿಳಿ ಷರ್ಟು ಧರಿಸಿದ್ದು ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದ. ಅವನೂ ಸಹ ಕ್ಯಾಮೆರಾದಲ್ಲಿ ಸೆರೆಯಾಗಿದ್ದ. ಗೌರಿ ಕಾರಿನ ರಸ್ತೆ ದೀಪ ಆರಿಸಿದ್ದರೆ ಆ ಕತ್ತಲ್ಲಲ್ಲಿ ಏನೂ ಕಾಣಿಸುತ್ತಿರಲಿಲ್ಲ.
ಕೂಡಲೇ ತನಿಖೆಯ ನೇತೃತ್ವ ವಹಿಸಿದವರು ಅಂದಿನ ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಕಮಿಷನರ್ ಎಂ.ಎನ್. ಅನುಚೇತ್. ಇವರೇ ಮುಂದೆ ಈ ಪ್ರಕರಣದ ತನಿಖೆಗೆ ರಚಿಸಲಾದ ವಿಶೇಷ ತನಿಖಾದಳದ ವಿಚಾರಣಾಧಿಕಾರಿಯಾಗಿ ಈ ತನಿಖೆಯನ್ನು ಮುನ್ನಡೆಸಿದರು. ಯಾವುದೇ ಅಪರಾಧ ತನಿಖೆಯ ಅತಿ ಪ್ರಮುಖ ಭಾಗ ಕೃತ್ಯ ನಡೆದ ಸ್ಥಳದಲ್ಲಿ ಸಿಗುವ ಸಾಕ್ಷ್ಯಾಧಾರಗಳು. ಅವತ್ತು ಪೋಲೀಸರಿಗೆ ತಕ್ಷಣಕ್ಕೆ ಸಿಕ್ಕಿದ್ದು ಸಿಡಿದ ಗುಂಡಿನ ನಾಲ್ಕು ಖಾಲಿ ಕಾಟ್ರಿಡ್ಜ್ಗಳು ಮತ್ತು ಸಿಸಿಟಿವಿ ದೃಶ್ಯ ಮಾತ್ರ. ಈ ಗುಂಡಿನ ಕಾಟ್ರಿಡ್ಜ್ಗಳು 7.65 ಮಿಲಿಮೀಟರ್ ಬೋರ್ನ ನಾಡಪಿಸ್ತೂಲಿನಲ್ಲಿ ತುಂಬುವ ಗುಂಡುಗಳು ಎಂಬುದು ಪ್ರಾಥಮಿಕ ತನಿಖೆಯಿಂದ ತೇಲಿತು. ಈ ಹಿಂದೆ ನಡೆದಿದ್ದ ದಭೋಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿಯವರ ಕೊಲೆಗಳಿಗೂ ಇದೇ ಬೋರ್ನ ನಾಡಪಿಸ್ತೂಲನ್ನೇ ಬಳಸಲಾಗಿತ್ತು ಮತ್ತು ಅಲ್ಲೂ ಸಹ ಕಾಟ್ರಿಡ್ಜ್ಗಳು ಲಭಿಸಿದ್ದವು. ಅದಲ್ಲದೆ ಕೊಲೆ ನಡೆಸಿದ ರೀತಿಯೂ ಒಂದೇ ಆಗಿತ್ತು. ಬೈಕಿನ ಮೇಲೆ ಬರುವ ಇಬ್ಬರು ಆಗಂತುಕರು, ಬೈಕ್ ಸವಾರ ಗಾಡಿಯ ಮೇಲೇ ಇದ್ದರೆ ಹಿಂಬದಿ ಸವಾರ ಬಂದೂಕು ಹಿಡಿದು ಕೆಳಗಿಳಿದು ಅತ್ಯಂತ ಸನಿಹದಿಂದ ಗುಂಡು ಹಾರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಾರೆ. ನಾಲ್ಕು ಕೊಲೆಗಳಿಗೂ ಕೆಲವು ಸಾಮ್ಯತೆಗಳಿದ್ದವು – ಬಳಸಿದ ಬಂದೂಕಿನ ಬಗೆ, ಕೃತ್ಯ ನಡೆಸಿದ ರೀತಿ ಮತ್ತು ಮೇಲಾಗಿ ಕೊಲೆಯಾದವರ ಪ್ರೊಫೈಲ್. ಆದರೆ ತನಿಖೆಯು ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವಂತಿರಲಿಲ್ಲ. ಬಹುಪಾಲು ಎಲ್ಲ ಸುಪಾರಿ ಕೊಲೆಗಳು ಹೀಗೇ ನಡೆಯುತ್ತವೆ ಹಾಗೂ ಬಹುತೇಕ ವೃತ್ತಿಪರ ಕೊಲೆಗಾರರು 7.65 ಎಂಎಂ ಬೋರ್ನ ನಾಡಪಿಸ್ತೂಲನ್ನೇ ಬಳಸುತ್ತಾರೆ. ಹೀಗಾಗಿ ಅದು ನಿರ್ದಿಷ್ಟ ಗುಂಪಿನ ಸಾಕ್ಷಿಯೆಂದು ಪರಿಗಣಿಸುವಂತಿರಲಿಲ್ಲ. ಹೀಗೆ ಸಿಕ್ಕ ನಾಲ್ಕು ಕಾಟ್ರಿಡ್ಜ್ಗಳನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಯಿತು. ಇನ್ನು ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಇಮೇಜ್ ಎನ್ಹ್ಯಾನ್ಸ್ಮೆಂಟ್ ತಂತ್ರಜ್ಞಾನ ಬಳಸಿ ಕೊಲೆಗಾರನ ಮುಖಚಹರೆಯನ್ನು ಪಡೆಯಲು ಪ್ರಯತ್ನಿಸಲಾಯಿತಾದರೂ ಯಾವುದೇ ಯಶ ಕಾಣಲಿಲ್ಲ.
ಕೂಡಲೇ ತನಿಖಾಧಿಕಾರಿಗಳು ದೃಷ್ಟಿ ಹಾಯಿಸಿದ್ದು ಗೌರಿಯವರ ಮನೆಯ ಸುತ್ತಮುತ್ತಲಿನ ಪರಿಸರದ ಮೇಲೆ. ಒಂದು, ಅವತ್ತು ಆ ಪ್ರಾಂತ್ಯದಲ್ಲಿ ಯಾರಿದ್ದರು, ಅವರಲ್ಲಿ ಯಾರಾದರೂ ಕೊಲೆಗಡುಕರನ್ನು ನೋಡಿದ್ದಾರೆಯೇ? ಎರಡು, ಘಟನೆ ನಡೆದ ಒಂದೆರಡು ದಿನಗಳ ಹಿಂದೆ ಕೊಲೆಗಡುಕರು ರೆಕೀ ಮಾಡೇ ಇರುತ್ತಾರೆ. ಅದರ ಸಿಸಿಟಿವಿ ದೃಶ್ಯಾವಳಿ ಸೆರೆಯಾಗಿದೆಯೇ? ಮೂರು, ಗೌರಿ ಮನೆಯ ಪ್ರಾಂತ್ಯದಲ್ಲಿ ಕೊಲೆ ನಡೆದ ದಿನ ಮತ್ತು ಅದರ ಹಿಂದೆ ಅನುಮಾನಾಸ್ಪದ ಮೊಬೈಲುಗಳು ಚಲಾವಣೆಯಲ್ಲಿದ್ದವೆ? ಈ ಮೂರೂ ಸಂಭವನೀಯ ಸುಳಿವುಗಳು ಕಾಲವಿಳಂಬವಾದಂತೆ ಮಸುಕಾಗಿಬಿಡುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ವಿಶೇಷ ತಂಡಗಳು ಕೂಡಲೇ ಕಾರ್ಯಪ್ರವೃತ್ತವಾದವು.ಅಕ್ಕಪಕ್ಕದ ಮನೆಗಳವರು, ಆಕೆ ಕುಸಿದುಬಿದ್ದದ್ದನ್ನು ಮೊದಲು ನೋಡಿದ್ದ ಎದುರು ಅಪಾರ್ಟ್ಮೆಂಟಿನವರು ತಾವ್ಯಾರೂ ಈ ಘಟನೆಯನ್ನು ನೋಡಿಲ್ಲ ಎಂದುಬಿಟ್ಟರು. ಗೌರಿ ಮನೆಯ ಆಸುಪಾಸಿನಲ್ಲಿ ಮತ್ತು ಬಸವನಗುಡಿ ಕಛೇರಿಯಿಂದ ಅವರ ಮನೆಗೆ ಬರುವ ಮಾರ್ಗದುದ್ದಕ್ಕೂ ಇದ್ದ ಎಲ್ಲ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಾವಳಿಯನ್ನು ಸಂಗ್ರಹಿಸಿ ನೂರಾರು ಘಂಟೆಗಳ ಅವಧಿಯ ಆ ದೃಶ್ಯಾವಳಿಯನ್ನು ನೋಡಿ ಅನಲೈಸ್ ಮಾಡಲಿಕ್ಕೆಂದೇ ಒಂದು ಕಂಟ್ರೋಲ್ ರೂಂ ಸ್ಥಾಪಿಸಲಾಯಿತು. ಮತ್ತೊಂದು ತಂಡ ರಾಜರಾಜೇಶ್ವರಿ ನಗರದ ಮೊಬೈಲ್ ಟವರ್ ಡಂಪ್ ಪಡೆದು ಲಕ್ಷಾಂತರ ಕರೆಗಳನ್ನು, ಮೊಬೈಲ್ ಸಂಖ್ಯೆಗಳನ್ನು ಅನಲೈಸ್ ಮಾಡಲು ಶುರು ಮಾಡಿತು. ಮೊಬೈಲ್ ಟವರ್ ಡಂಪ್ ಯಾವುದೇ ಲೀಡ್ ನೀಡಲಿಲ್ಲವಾದರೂ, ಸಿಸಿಟಿವಿ ದೃಶ್ಯಾವಳಿ ಮೊದಲ ಸುಳಿವುಗಳನ್ನು ನೀಡಿತು. ಗೌರಿ ಮನೆಯ ರಸ್ತೆಯ ಮತ್ತೊಂದು ಕ್ಯಾಮೆರಾದಲ್ಲಿ ಕೊಲೆ ಮಾಡಿದ ನಂತರ ಆಗಂತುಕರು ಬೈಕಿನ ಮೇಲೆ ಪರಾರಿಯಾಗುವ ದೃಶ್ಯ ಸೆರೆಯಾಗಿತ್ತು. ಅದರಲ್ಲಿ ಹಿಂಬದಿ ಸವಾರನು ಹಿಂತಿರುಗಿ ನೋಡುತ್ತಿರುವುದು ಕಾಣಿಸಿತು. ಹೆಲ್ಮೆಟ್ ಹಾಕಿದ್ದರಿಂದ ಆತನ ಮುಖಚಹರೆ ಕಾಣಲಿಲ್ಲವಾದರೂ ಅಲ್ಲಿ ಯಾರೋ ಇದ್ದದ್ದು ವಿದಿತ. ಗೌರಿ ಮನೆಯ ಬಳಿ ಒಂದು ಮನೆ ಕಟ್ಟಲಾಗುತ್ತಿತ್ತು. ಅವತ್ತು ರಾತ್ರಿ ಅಲ್ಲಿ ರಾಯಚೂರು ಕಡೆಯ ಇಬ್ಬರು ಗಾರೆ ಕೆಲಸಗಾರರು ಮತ್ತು ಊರಿಂದ ಅವರನ್ನು ನೋಡಲು ಬಂದ ಅವರ ಸಂಬಂಧಿಕ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬನಿದ್ದ. ಇವರೇ ಮೊದಲ ಪ್ರತ್ಯಕ್ಷಸಾಕ್ಷಿಗಳು. ಅವತ್ತು ಮಧ್ಯಾಹ್ನ ಮತ್ತು ಹಿಂದಿನ ಎರಡು ದಿನಗಳ ದೃಶ್ಯಾವಳಿಗಳಲ್ಲಿ ಕೆಲವರು ಗೌರಿ ಮನೆಯನ್ನು ರೆಕೀ ಮಾಡಿರುವ ದೃಶ್ಯಗಳು ಸಿಕ್ಕವು. ಎಲ್ಲದರಲ್ಲೂ ಹೆಲ್ಮೆಟ್, ಮುಖಚಹರೆ ಇಲ್ಲ. ಆದರೆ ಹಗಲಿನ ಈ ದೃಶ್ಯಗಳಲ್ಲಿ ಅವರು ಬಳಸಿದ್ದ ಬೈಕು, ಮೈಕಟ್ಟು ಸ್ಪಷ್ಟವಾಗಿ ಕಾಣಿಸಿದ್ದವು. ಇವರು ಎಲ್ಲಾದರೂ ಹೆಲ್ಮೆಟ್ ತೆಗೆದಿರಲೇಬೇಕಲ್ಲವೆ? ಎಲ್ಲಿ ಎಂದು ಹುಡುಕಲಾರಂಭಿಸಿದರು ಪೋಲೀಸರು. ಆಗ ಅವರ ಕಣ್ಣಿಗೆ ಬಿದ್ದದ್ದು ಹತ್ತಿರದಲ್ಲೇ ಇದ್ದ ಸಿಗರೇಟು ಅಂಗಡಿ. ಆಗಂತುಕರು ಅಲ್ಲಿಗೆ ಎಡತಾಕಿದ್ದರು. ಹೀಗೆ ಇವರೆಲ್ಲರ ಒಟ್ಟು ಇನ್ಪುಟ್ಗಳ ಸಹಾಯದಿಂದ ತನಿಖಾ ತಂಡದವರು ಮೂರು ರೇಖಾಚಿತ್ರಗಳನ್ನು ಬಿಡಿಸಿದರು, ಸಾರ್ವಜನಿಕವಾಗಿ ಬಿಡುಗಡೆ ಕೂಡಾ ಮಾಡಿದರು.
ಹೀಗೆ ಬಿಡುಗಡೆ ಮಾಡಿದ ಮೂರು ರೇಖಾಚಿತ್ರಗಳಲ್ಲಿ ಒಬ್ಬ ವ್ಯಕ್ತಿಯು ಹಣೆಗೆ ಕುಂಕುಮವಿಟ್ಟ ಹಾಗೆ ಚಿತ್ರವಿತ್ತು. ಅಷ್ಟರಲ್ಲಾಗಲೇ ಈ ತನಿಖೆಯ ಬಗೆಗೆ ಎಡ-ಬಲ ದೋಷಾರೋಪಣೆಗಳು ತಾರಕಕ್ಕೇರಿದ್ದವು. ವಿಶೇಷ ತನಿಖಾ ದಳವು ಕುಂಕುಮವಿಟ್ಟಿರುವ ವ್ಯಕ್ತಿಯ ರೇಖಾಚಿತ್ರವನ್ನು ಬಿಡುಗಡೆ ಮಾಡಿರುವುದು ಅವರು ಹಿಂದೂ ಬಲಪಂಥೀಯರೇ ಈ ಕೊಲೆ ಮಾಡಿದ್ದಾರೆ ಎಂಬ ನಿರ್ಣಯಕ್ಕೆ ಬಂದಿರುವುದನ್ನು ತೋರಿಸುತ್ತದೆ ಎಂದು ಅನೇಕ ಹಿಂದೂ ಬಲಫಂಥೀಯರು ಗದ್ದಲವೆಬ್ಬಿಸಿದರು. ಇದರಿಂದ ಘಾಸಿಗೊಂಡ ತನಿಖಾದಳವು ಮತ್ತೆಂದೂ ಮಾಧ್ಯಮಘೋಷ್ಠಿಯನ್ನೇ ನಡೆಸಿಲ್ಲ.
ಅವತ್ತು ಇನ್ನೂ ಗೌರಿಯವರನ್ನು ಮಣ್ಣು ಸಹ ಮಾಡಿರಲಿಲ್ಲ. ಇತ್ತ ಪ್ರಗತಿಪರರು ಈ ಕೊಲೆಯನ್ನು ಬಲಪಂಥೀಯ ಉಗ್ರವಾದಿಗಳೇ ಮಾಡಿದ್ದಾರೆಂದೂ, ಅದಕ್ಕೆ ದಭೋಲ್ಕರ್-ಪನ್ಸಾರೆ-ಕಲ್ಬುರ್ಗಿ ಕೊಲೆಗಳಿಗೂ ಗೌರಿ ಕೊಲೆಗೂ ಇರುವ ಸಾಮ್ಯತೆಗಳು ಮತ್ತು ದಭೋಲ್ಕರ್-ಪನ್ಸಾರೆ ಕೊಲೆಗಳಿಗೆ ಹಿಂದುತ್ವದ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಉಗ್ರವಾದಿಗಳನ್ನು ಬಂಧಿಸಿರುವುದೇ ಸಾಕ್ಷಿ ಎಂದು ವಾದಿಸುತ್ತಿದ್ದರೆ, ಅತ್ತ ಬಲಪಂಥೀಯರನೇಕರು ಈ ಕೃತ್ಯದ ಹಿಂದೆ ನಕ್ಸಲರ ಕೈವಾಡವಿರಬಹುದೆಂದು ವಾದಿಸಿದರು. ಕೆಲವು ಮಾಜಿ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಗೌರಿ ಪ್ರಮುಖ ಪಾತ್ರ ವಹಿಸಿದ್ದರಿಂದ ನಕ್ಸಲ್ ಚಳುವಳಿಯ ವಿರೋಧ ಕಟ್ಟಿಕೊಂಡಿದ್ದರು ಎಂಬುದು ಆ ವಾದ. ಗೌರಿಯವರ ತಮ್ಮ ಇಂದ್ರಜಿತ್ ಲಂಕೇಶ್ ಸಹ ಈ ವಾದಕ್ಕೆ ಪುಷ್ಠಿ ನೀಡಿ ಈ ಕುರಿತು ತನಿಖೆಗೆ ಆಗ್ರಹಿಸಿದ್ದೂ ನಡೆಯಿತು.
2005ರಲ್ಲಿ ಗೌರಿ ಮಲೆನಾಡಿನ ಕಾಡಿಗೆ ಹೋಗಿ ನಕ್ಸಲೀಯ ನಾಯಕ ಸಾಕೇತ್ ರಾಜನ್ ಅವರ ಸಂದರ್ಶನ ಮಾಡಿದ್ದೇ ನೆಪವಾಗಿ ಇಂದ್ರಜಿತ್ ಮತ್ತು ಗೌರಿ ಬೇರೆಬೇರೆಯಾಗಿದ್ದರು. ಈ ತಿಕ್ಕಾಟದ ಒಂದು ಹಂತದಲ್ಲಿ ಇಂದ್ರಜಿತ್ ಸ್ವಂತ ಅಕ್ಕ ಗೌರಿಯವರಿಗೆ ಪಿಸ್ತೂಲ್ ತೋರಿಸಿ ಜೀವಬೆದರಿಕೆ ಹಾಕಿದ್ದರು. ಈ ಬಗ್ಗೆ ಬಸವನಗುಡಿ ಠಾಣೆಯಲ್ಲಿ ಕಂಪ್ಲೈಂಟ್ ಕೂಡ ದಾಖಲಾಗಿತ್ತು. ಗೌರಿಯವರು ‘ಗೌರಿ ಲಂಕೇಶ್’ ಪತ್ರಿಕೆ ಸ್ಥಾಪಿಸಿದ್ದು ಇದೇ ಸಂದರ್ಭದಲ್ಲಿ. ಈ ಎಲ್ಲ ಹಿನ್ನೆಲೆಯಲ್ಲಿ ಕೆಲವರು ಸ್ವತಃ ಇಂದ್ರಜಿತ್ ಅವರನ್ನೇ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿದರು. ಕುಟುಂಬದ ಆಸ್ತಿ ವ್ಯಾಜ್ಯೆಗಳು ಕೊಲೆಗೆ ಕಾರಣವಾಗಿರಬಹುದೆಂದು ಅನುಮಾನಿಸಲಾಯಿತು. ಚೆನ್ನಾಗಿ ನೆನಪಿದೆ. ಕಲ್ಬುರ್ಗಿಯವರ ಹತ್ಯೆಯಾದ ದಿನ ರಾಜ್ಯ ಪೋಲೀಸರು, ಸ್ವತಃ ಮುಖ್ಯಮಂತ್ರಿಗಳ ಕಛೇರಿಯಲ್ಲಿ ಇದು ವೈಯಕ್ತಿಕ ವ್ಯಾಜ್ಯಗಳಿಗೆ ನಡೆದ ಕೊಲೆಯೆಂದೇ ಭಾವಿಸಿದ್ದರು.
ತನಿಖೆಯಲ್ಲಿ ಎರಡು ರೀತಿ. ಮೊದಲನೆಯದು ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕ ಸಾಕ್ಷಿಗಳ (ಮೆಟೀರಿಯಲ್ ಎವಿಡೆನ್ಸ್) ಬೆನ್ನತ್ತಿದಾಗ ಅದು ಕೃತ್ಯ ನಡೆಸಿದವರ ಬಳಿ ನಿಲ್ಲಿಸುತ್ತದೆ. ಉದಾಹರಣೆಗೆ 2013ರ ಏಪ್ರಿಲ್ನಲ್ಲಿ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಛೇರಿಯ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣ. ಬಾಂಬ್ ಇಡಲಾಗಿದ್ದ ಬೈಕಿನ ಬೆನ್ನತ್ತಿ ಹೋದ ಪೋಲೀಸರಿಗೆ ತಮಿಳುನಾಡಿನ ಒಂದು ಮುಸ್ಲಿಂ ಭಯೋತ್ಪಾದಕ ಗುಂಪನ್ನು ಮುಟ್ಟಿಸಿತ್ತು. ಒಂದೆಡೆ ಇದು ಕೊಂಚ ಸುಲಭದ ತನಿಖೆಯಾಗಿತ್ತಲ್ಲದೆ, ಮತ್ತೊಂದೆಡೆ ಗಟ್ಟಿ ಸಾಕ್ಷ್ಯಾಧಾರಗಳು ಲಭ್ಯವಾಗುವ ಕಾರಣಕ್ಕೆ ನ್ಯಾಯಾಲಯದಲ್ಲಿ ಈ ಪ್ರಕರಣ ಹೆಚ್ಚು ಗಟ್ಟಿಯಾಗಿ ನಿಲ್ಲುತ್ತದೆ. ಆದರೆ ಎಲ್ಲ ಪ್ರಕರಣಗಳಲ್ಲೂ ಹೀಗೆ ಆಗುವುದಿಲ್ಲ. ಹಲವು ಪ್ರಕರಣಗಳಲ್ಲಿ ಕೃತ್ಯ ನಡೆದ ಸ್ಥಳದಲ್ಲಿ ಯಾವುದೇ ಲೀಡ್ ಸಿಗುವುದಿಲ್ಲ. ಉದಾಹರಣೆಗೆ ಕಲ್ಬುರ್ಗಿ ಕೊಲೆ ಪ್ರಕರಣ. ಆ ಪ್ರಕರಣದಲ್ಲಿ ಎರಡು ಗುಂಡಿನ ಕಾಟ್ರಿಡ್ಜ್ಗಳು ಮತ್ತು ಕಲ್ಬುರ್ಗಿಯವರ ಪತ್ನಿ ಉಮಾ ಅವರ ಸಹಾಯದಿಂದ ರಚಿಸಿದ ಎರಡು ಭಾವಚಿತ್ರಗಳು ಬಿಟ್ಟರೆ ಬೇರೇನೂ ಸಿಗಲಿಲ್ಲ. ಅಲ್ಲಿ ಸಿಸಿಟಿವಿಗಳೂ ಇರಲಿಲ್ಲ. ಗೌರಿ ಲಂಕೇಶ್ ಅವರ ಪ್ರಕರಣ ಸಹ ಇದಕ್ಕಿಂತಲೂ ಭಿನ್ನವಾಗೇನೂ ಇರಲಿಲ್ಲ. ಸಿಕ್ಕ ಕೆಲವು ಸಿಸಿಟಿವಿ ದೃಶ್ಯಗಳು ಮತ್ತು ಗುಂಡಿನ ಕಾಟ್ರಿಡ್ಜ್ಗಳು ಯಾವುದೇ ನಿರ್ದಿಷ್ಟ ವ್ಯಕ್ತಿಯೆಡೆ ಬೊಟ್ಟು ಮಾಡುತ್ತಿರಲಿಲ್ಲ. ಇನ್ನು ರೆಕೀ ಮಾಡುವ ದೃಶ್ಯಾವಳಿಯಲ್ಲಿ ಆಗಂತುಕನೊಬ್ಬ ಕಪ್ಪು, ಕೆಂಪು ಬಣ್ಣದ ಪಲ್ಸರ್ ಬೈಕಿನ ಮೇಲೆ ಬರುವುದನ್ನು ಗಮನಿಸಿದ ಪೋಲೀಸರು ರಾಜ್ಯದಲ್ಲಿನ ಎಲ್ಲ ಕೆಂಪು ಪಲ್ಸರ್ ಬೈಕುಗಳ ಹಿಂದೆ ಬಿದ್ದರೂ ಫಲ ಕೊಡಲಿಲ್ಲ. ಇನ್ನು ಮೊಬೈಲ್ ಟವರ್ ಡಂಪ್ನ ಲಕ್ಷಾಂತರ ಕರೆಗಳನ್ನು ತಡಕಾಡಿದರೂ ಸಹ ಯಾವುದೇ ಲೀಡ್ ಸಿಗಲಿಲ್ಲ. ನಂತರದ ದಿನಗಳಲ್ಲಿ ಹಂತಕರ ತಂಡ ಅಸಲು ಮೊಬೈಲೇ ಬಳಸುತ್ತಿರಲಿಲ್ಲ ಎಂಬುದು ತಿಳಿದು ಬಂತು. ಆದರೆ ಇಡೀ ಕೊಲೆ ಬೇಧಿಸುವಲ್ಲಿ ಮೊಬೈಲ್ ಕರೆಗಳು ನಿರ್ಣಾಯಕ ಪಾತ್ರ ವಹಿಸಿದವು. ವಿವರಗಳನ್ನು ಮುಂದೆ ನೋಡೋಣ.
ಹೀಗೆ ಕೃತ್ಯ ನಡೆದ ಸ್ಥಳದಲ್ಲಿ ಯಾವುದೇ ಸಾಕ್ಷಿಗಳು ದೊರೆಯದಿದ್ದಾಗ ಎರಡನೆಯ ಬಗೆಯ ತನಿಖೆ ಅನಿವಾರ್ಯ. ಇದರಲ್ಲಿ ಕ್ರೈಂ ಹಿಂದಿನ ಮೋಟಿವ್ ಪ್ರಮುಖ ಲೀಡ್. ಅಂದರೆ ಇಂತಿಪ್ಪ ವ್ಯಕ್ತಿಯನ್ನು ಹೀಗೆ ಕೊಲ್ಲಲು ಯಾರಿಗೆ ಕಾರಣಗಳಿದ್ದವು, ಅವರನ್ನು ಕರೆತಂದು ವಿಚಾರಣೆ ನಡೆಸುವುದು. ಕೃತ್ಯ ನಡೆದ ದಿನ, ಅದರ ಹಿಂದು-ಮುಂದಿನ ಕೆಲ ದಿನಗಳ ಅವರ ಚಲನವಲನ ಗಮನಿಸುವುದು. ಎಲ್ಲಾದರೂ ಎಡರುತೊಡರುಗಳಿವೆಯೇ ಎಂದು ಪರೀಕ್ಷಿಸುವುದು. ಇಂತಹ ತನಿಖೆಗೆ ಸತ್ತ ವ್ಯಕ್ತಿಯ ಜೀವನವೇ ಅತಿ ದೊಡ್ಡ ಲೀಡ್, ಅವರ ಮೊಬೈಲ್ ಫೋನ್ ಅವರ ಜೀವನದ ಕೈಪಿಡಿಯಾಗಿರುತ್ತದೆ. ನಾವು ನಮಗೇ ಸುಳ್ಳು ಹೇಳಿಕೊಳ್ಳಬಹುದಾದರೂ, ಇವತ್ತು ನಮ್ಮ ಫೋನಿಗೆ ಸುಳ್ಳು ಹೇಳಲಾಗುವುದಿಲ್ಲ. ಸತ್ತ ವ್ಯಕ್ತಿಗೆ ಆರ್ಥಿಕ ತೊಂದರೆಗಳಿದ್ದವೆ? ಸಾಲ, ಆಸ್ತಿ ವ್ಯಾಜ್ಯಗಳು, ಅವರಿಗೆ ಯಾರೊಂದಿಗಾದರೂ ಅಫೇರುಗಳಿದ್ದವೆ? …ಇಂಥವೇ ಸರಳ ಪ್ರಶ್ನೆಗಳೊಂದಿಗೆ ಈ ತನಿಖೆ ಪ್ರಾರಂಭವಾಗುತ್ತದೆ. ಹೀಗೆ ಸಾಂಧರ್ಭಿಕವಾಗಿ ಒಂದು ಶಂಕಿತರ ಪಟ್ಟಿಯನ್ನು ತಯಾರಿಸಲಾಗುತ್ತದೆ. ಗೌರಿಯವರ ಪ್ರಕರಣದಲ್ಲಿ ಈ ಪಟ್ಟಿಯಲ್ಲಿ ಪ್ರಮುಖವಾಗಿ ಮೂರು ಶಂಕಿತರಿದ್ದರು – ಆಸ್ತಿ ವ್ಯಾಜ್ಯ, ನಕ್ಸಲ್ ಚಳವಳಿ ಮತ್ತು ಹಿಂದುತ್ವ ಹೆಸರಿನ ಬಲಪಂಥೀಯ ಉಗ್ರವಾದ. ಇದಲ್ಲದೆ ಕೊಲೆಗೂ ಮುಂಚಿನ ಕೆಲದಿನಗಳಲ್ಲಿ ಅವರು ತಮ್ಮ ಪತ್ರಿಕೆಯಲ್ಲಿ ಯಾರ ವಿರುದ್ಧ ಬರೆದಿದ್ದರು, ಯಾರೊಂದಿಗೆ ನ್ಯಾಯಾಲಯದಲ್ಲಿ ವ್ಯಾಜ್ಯಗಳಲ್ಲಿ ಬಡಿದಾಡುತ್ತಿದ್ದರು… ಅವರದೂ ಒಂದು ಪಟ್ಟಿ ತಯಾರಾಯಿತು.
ಬಹುಶಃ ಒಂದು ತಿಂಗಳಿಗೂ ಮಿಗಿಲು ವಿಶೇಷ ತನಿಖಾದಳ ಈ ಪಟ್ಟಿಯಲ್ಲಿರುವ ವ್ಯಕ್ತಿಗಳ ವಿಚಾರಣೆಗೇ ಎರಡು ತಂಡಗಳನ್ನು ರಚಿಸಿತ್ತು. ಈ ತಂಡಗಳು ನೂರಾರು ಜನರನ್ನು ವಿಚಾರಣೆಗೊಳಪಡಿಸಿದರು. ಆದರೆ ಎಲ್ಲೂ ಯಾವುದೇ ಸುಳಿವು ಸಿಗಲಿಲ್ಲ, ಶಂಕಿತರ ಪಟ್ಟಿಯಿಂದ ಒಬ್ಬೊಬ್ಬರನ್ನೇ ತೆಗೆದುಹಾಕುತ್ತಾ ಬರಲಾಯಿತು. ಇಂದ್ರಜಿತ್ ಲಂಕೇಶ್ ಮತ್ತು ಇತರ ಕುಟುಂಬ ಸದಸ್ಯರ ತನಿಖೆಯ ನಂತರ ಆಸ್ತಿ ವ್ಯಾಜ್ಯ ಯಾವುದೂ ಇರಲಿಲ್ಲವೆಂದೂ, ಅದು ಕೊಲೆಗೆ ಕಾರಣವಲ್ಲವೆಂದೂ ನಿರ್ಣಯಿಸಿದರು. ಅಲ್ಲಿಗೆ ಉಳಿದದ್ದು ನಕ್ಸಲ್ ಮತ್ತು ಬಲಪಂಥೀಯ ಉಗ್ರವಾದಿಗಳು.
ನಕ್ಸಲರು ಈ ಕೊಲೆಯ ಹಿಂದಿರಬಹುದೆಂಬ ಥಿಯರಿ ಹುಟ್ಟಿದ್ದಕ್ಕೂ ಒಂದು ಹಿನ್ನೆಲೆ ಇದೆ. ಈ ಮೊದಲೇ ಹೇಳಿದಂತೆ 2005ರಲ್ಲಿ ಗೌರಿ ಕಾಡಿಗೆ ಹೋಗಿ ಅವರ ದೆಹಲಿ ಕಾಲೇಜಿನ ಸಹಪಾಠಿಯಾಗಿದ್ದ ನಾಡಿನ ನಕ್ಸಲ್ ಹೋರಾಟದ ನಾಯಕತ್ವ ವಹಿಸಿಕೊಂಡಿದ್ದ ಸಾಕೇತ್ ರಾಜನ್ ಅವರನ್ನು ಸಂದರ್ಶನ ನಡೆಸಿ ಬರೆದಿದ್ದರು. ಆಗಿಂದ ಅವರಿಗೆ ನಕ್ಸಲ್ ಸಿಂಪಥೈಸರ್ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಇದೇ ಗೌರಿ-ಇಂದ್ರಜಿತ್ ನಡುವಿನ ಒಡಕಿಗೂ ಕಾರಣವಾಗಿತ್ತು. ಮುಂದೆ 2006ರಲ್ಲಿ ಸಾಕೇತ್ ರಾಜನ್ ಎನ್ಕೌಂಟರ್ನಲ್ಲಿ ಹತರಾದರು. 2014ರಲ್ಲಿ ಗೌರಿ ಲಂಕೇಶ್, ಶಿವಸುಂದರ್ ಮತ್ತಿತರರು ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಎಂಬಿಬ್ಬರು ಮಾಜಿ ಮಾವೋವಾದಿ ಹೋರಾಟಗಾರರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕಾಗಿ ಸಿದ್ಧರಾಮಯ್ಯನವರ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ನೇತೃತ್ವದಲ್ಲಿ ಎ ಕೆ ಸುಬ್ಬಯ್ಯ ಮತ್ತು ಗೌರಿ ಲಂಕೇಶರು ಸದಸ್ಯರಾಗಿ ಒಂದು ಸಮಿತಿಯನ್ನೂ ರಚಿಸಿತ್ತು. ನೂರ್ ಮತ್ತು ಸಿರಿಮನೆಯವರ ನಂತರದಲ್ಲಿ ಇತರೆ ನಕ್ಸಲ್ ಹೋರಾಟಗಾರರನ್ನೂ ಸಹ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿದ್ದರು ಗೌರಿ. ಇದು ತಮ್ಮ ಚಳವಳಿಗೆ ದೊಡ್ಡ ಹೊಡೆತ ನೀಡುತ್ತಿದ್ದುದರಿಂದ ಅದಕ್ಕಾಗಿ ರಾಜ್ಯದಲ್ಲಿ ಚಳವಳಿಯ ನೇತೃತ್ವ ವಹಿಸಿದ್ದ ವಿಕ್ರಂಗೌಡ ಗೌರಿಯನ್ನು ಕೊಲ್ಲಿಸಿದ ಎಂಬುದು ಥಿಯರಿ. ನಕ್ಸಲರು ರಾಜಕೀಯ ಕಾರ್ಯಕರ್ತರು. ಅವರು ಒಂದು ಕೊಲೆ ಮಾಡಿದರೆ ಅದಕ್ಕೆ ಒಂದು ರಾಜಕೀಯ ಕಾರಣವಿರುತ್ತದೆ, ಮತ್ತು ಅದನ್ನು ಅವರು ಬಹಿರಂಗವಾಗಿ ಘೋಷಿಸುತ್ತಾರೆ ಸಹ. ಆದರೆ ಗೌರಿ ಕೊಲೆ ಪ್ರಕರಣದಲ್ಲಿ ಅಂತಹ ಯಾವುದೇ ಹೇಳಿಕೆ ಬಂದಿರಲಿಲ್ಲ. ಸಿಪಿಐ (ಮಾವೋವಾದಿ) ಪಕ್ಷವು ಮೌನವಾಗಿದ್ದದ್ದು ಅನೇಕ ಅನುಮಾನಗಳಿಗೆ ಕಾರಣವಾಗಿತ್ತು. ಹಿಗಿದ್ದಾಗ 2017ರ ಸೆಪ್ಟೆಂಬರ್ 14ರಂದು ಸಿಪಿಐ (ಮಾವೋವಾದಿ) ಪಕ್ಷದ ಅಭಯ್ ಎಂಬ ವಕ್ತಾರನ ಲಿಖಿತ ಹೇಳಿಕೆ ಎಲ್ಲ ಪ್ರಮುಖ ಪತ್ರಿಕಾ ಕಛೇರಿಗಳಿಗೆ ತಲುಪಿತು. ಸೆಪ್ಟೆಂಬರ್ 9ರ ತೇದಿಯ ಆ ಹೇಳಿಕೆಯಲ್ಲಿ ಸಿಪಿಐ (ಮಾವೋವಾದಿ) ಪಕ್ಷವು ಗೌರಿ ಕೊಲೆಯನ್ನು ತಾನು ಮಾಡಿಲ್ಲವೆಂದು ಹೇಳಿತಲ್ಲದೆ, ಗೌರಿಯವರ ಕೊಲೆಯನ್ನು ತೀವ್ರವಾಗಿ ಖಂಡಿಸಿತು. ಈ ಕೊಲೆಯನ್ನು ಸಂಘ ಪರಿವಾರದ ಫ್ಯಾಸಿಸ್ಟ್ ಗೂಂಡಾಗಳು ಮಾಡಿದ್ದಾರೆಂದು ಆರೋಪಿಸಿತು. ಇತ್ತ ಕರ್ನಾಟಕ ಪೊಲೀಸರು ತಮ್ಮ ನಕ್ಸಲ್ ನಿಗ್ರಹ ಪಡೆಯ ಮುಖೇನ ಕಾಡೊಳಗಿನ ನಕ್ಸಲರ ಚಲನವಲನದ ಮೇಲೆ ಕಣ್ಣಿಟ್ಟಿದ್ದು, ಕೊಲೆ ನಡೆದ ಆಸುಪಾಸಿನಲ್ಲಿ ಯಾವುದೇ ಕಾರ್ಯಕರ್ತರು ಬೆಂಗಳೂರಿಗೆ ಬಂದು ಹೋಗಿರಲಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಇದರೊಂದಿಗೆ ಗೌರಿ ಕೊಲೆಯಲ್ಲಿ ನಕ್ಸಲರ ಪಾತ್ರದ ಶಂಕೆಯನ್ನು ಕೈಬಿಡಲಾಯಿತು.ಈಗ ಶಂಕಿತರ ಪಟ್ಟಿಯಲ್ಲಿ ಉಳಿದದ್ದು ಬಲಪಂಥೀಯ ಉಗ್ರವಾದಿಗಳು ಮಾತ್ರ. ಅವರ ಬಗ್ಗೆ ಶಂಕೆ ಮೂಡಲು ಅನೇಕ ಸಾಂಧರ್ಭಿಕ ಸಾಕ್ಷಿಗಳಿದ್ದವು. ದಭೋಲ್ಕರ್-ಪನ್ಸಾರೆ-ಕಲ್ಬುರ್ಗಿ ಪ್ರಕರಣಗಳಿಗೂ ಗೌರಿ ಕೊಲೆಗೂ ಇದ್ದ ಅನೇಕ ಸಾಮ್ಯತೆಗಳು – ಕೊಲೆ ಮಾಡಿದ ರೀತಿ, ಬಳಸಿದ ಬಂದೂಕಿನ ಬಗೆ ಮತ್ತು ಕೊಲೆಯಾದವರ ಪ್ರೊಫೈಲ್, ಎಲ್ಲರೂ ‘ಹಿಂದುತ್ವ’ ಹೆಸರಿನ ಬಲಪಂಥೀಯ ರಾಜಕಾರಣದ ಕಡು ವಿಮರ್ಶಕರಾಗಿದ್ದರು. ಮೇಲಾಗಿ ಗೌರಿ ಸತ್ತ ತಕ್ಷಣದಲ್ಲಿ ಅನೇಕ ಬಲಪಂಥೀಯರು ಸಾಮಾಜಿಕ ಜಾಲತಾಣಗಳಲ್ಲಿ ಗೌರಿ ಕೊಲೆಯನ್ನು ಸಂಭ್ರಮಿಸಿದ್ದರು. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯ ಮೌನವನ್ನು ಪ್ರಶ್ನಿಸುವುದರೊಂದಿಗೆ ಪ್ರಕಾಶ ರೈ ಎಂದು ಹೋರಾಟಗಾರನೊಬ್ಬ ಹುಟ್ಟಿಕೊಂಡದ್ದು. ಇರಲಿ. ಈ ಎಲ್ಲ ಹಿನ್ನೆಲೆಯಲ್ಲಿ, ಈ ಕೊಲೆಯ ಹಿಂದೆ ಬಲಪಂಥೀಯ ಉಗ್ರವಾದಿಗಳಿರಬಹುದೆಂಬ ಅನುಮಾನ ತನಿಖಾದಳದಲ್ಲಿ ಬಲವಾಗುತ್ತಾ ಹೋಗಿದ್ದು ಸಹಜವಾಗಿತ್ತು. ಆದರೆ ತಿಂಗಳುಗಳು ಕಳೆದರೂ ಆ ಬಗ್ಗೆ ಯಾವುದೇ ಸಾಕ್ಷಿ, ಲೀಡ್ ದೊರೆಯಲಿಲ್ಲ. ಕಲ್ಬುರ್ಗಿ ಪ್ರಕರಣದಲ್ಲಾದಂತೆ ತನಿಖೆ ಒಂದು ಬಗೆಯ ಡೆಡ್ ಎಂಡ್ಗೆ ಬಂದು ನಿಂತುಬಿಟ್ಟಿತು. ಪ್ರತಿ ಕ್ರೈಂನ ತನಿಖೆಯಲ್ಲೂ ಅವಿರತ ಶ್ರಮದ ಹೊರತಾಗಿಯೂ ಒಂದು ಸಣ್ಣ ಪ್ರಮಾಣದ ಅದೃಷ್ಟ ಬೇಕಾಗುತ್ತದೆ. ಆ ಅದೃಷ್ಟ ಬಾಗಿಲು ಬಡಿದದ್ದು ನವೆಂಬರ್ನಲ್ಲಿ.
(ಮುಂದುವರೆಯುವುದು)
• ಸೂರ್ಯತೇಜ


