Homeಮುಖಪುಟರಂಗೀಲಾ ರಾಘುನಿಂದ ಗೋಕರ್ಣ ಮಹಾಬಲೇಶ್ವರನಿಗೆ ಮುಕ್ತಿ!!

ರಂಗೀಲಾ ರಾಘುನಿಂದ ಗೋಕರ್ಣ ಮಹಾಬಲೇಶ್ವರನಿಗೆ ಮುಕ್ತಿ!!

- Advertisement -
ಗೋಕರ್ಣದ ಆಗರ್ಭ ಸಿರಿ-ಸಂಪತ್ತಿನ ಮಹಾಬಲೇಶ್ವರ ದೇಗುಲವನ್ನು ಅನಾಮತ್ತು ಎತ್ತಿ ತನ್ನ ಜೋಳಿಗೆಗೆ ಇಳಿಸಿಕೊಂಡಿದ್ದ ರಾಮಚಂದ್ರಾಪುರ ಮಠದ ಸಗಣಿ  ಸ್ವಾಮಿ ರಾಘು ಹೈಕೋರ್ಟಿನ ಒಂದೇ ಒಂದು ಚಾಟಿಗೆ ತತ್ತರಿಸಿಹೋಗಿದ್ದಾನೆ! ಸರ್ವೋಚ್ಚ ನ್ಯಾಯಾಲಯ ಆದಿಯಾಗಿ ವಿವಿಧ ನ್ಯಾಯಾಲಯಗಳಲ್ಲಿ ರೇಪ್‍ನಿಂದ ಹಿಡಿದು ನಾನಾ ಮೂಲೆಯ ಭಾನ್ಗಡಿಗಳ ಆರೋಪಿಯಾಗಿರುವ ರಾಘುಗೆ ಎಂತೆಂಥ ಗ್ರಹಚಾರ ಕಾದಿದೆಯೋ? ಸಧ್ಯಕ್ಕಂತೂ ರಾಘುನ ರಾಮಚಂದ್ಯಪುರ ಮಠಕ್ಕೆ ಯಡ್ಡಿ ಸಿಎಂ ಆಗಿದ್ದಾಗ ಗೋಕರ್ಣ ದೇವಸ್ಥಾನ ಹಸ್ತಾಂತರಿಸಿದ್ದು ಅಕ್ರಮ-ಕಾನೂನುಬಾಹೀರ ಎಂದು ಉಚ್ಚ ನ್ಯಾಯಾಲಯದ ವಿಶೇಷ ಪೀಠ ಬರೋಬ್ಬರಿ 252 ಪುಟಗಳ ಜಡ್ಜಮೆಂಟ್‍ನಲ್ಲಿ ಎಳೆಯೆಳೆಯಾಗಿ ವಿವರಿಸಿದೆ…..
ಅತ್ಯಾಚಾರ-ಅನಾಚಾರ, ಕೊಲೆ ಪ್ರಕರಣಗಳು, ಕಾಮ ಕತೆಗಳು, ಕೋರ್ಟು-ಕಚೇರಿ ವ್ಯಾಜ್ಯಗಳನ್ನೆಲ್ಲ ಗೋಕರ್ಣ ದೇವಳದ ಹುಂಡಿ ಬಲದಿಂದಲೇ ನಿಭಾಯಿಸುತ್ತ ಬಂದಿದ್ದ ರಾಘುಗೆ ಈಗ ನಿಂತ ಮೇಲೇ ಬಾಯ್ತೆರೆದು ಆಪೋಷನ ಪಡೆಯುತ್ತಿರುವಂತೆ ಬೆಚ್ಚಿ ಬೀಳಿಸುತ್ತಿದೆ. ಕಾವಿಕಾನ್‍ನಂತೆ ಮೆರೆಯುತ್ತಲೇ ಇದ್ದ ರಾಘು ತನ್ನ ಅಧ: ಪತನದ ಪರ್ವದಲ್ಲಿ ಮೊದಲ ಬಾರಿ ಕಳೆಗುಂದಿದ್ದಾನೆ! ಎರಡೆರಡು ರೇಪ್ ಕೇಸುಗಳು, ಪಾಪದ ಶ್ಯಾಮ ಶಾಸ್ತ್ರಿ, ಬಲಿ ಪಡೆದು ಪೀಠಕ್ಕೆ ರಕ್ತ ತರ್ಪಣ ಕೊಟ್ಟ ಬರ್ಬರ ಪ್ರಕರಣ, ಕೋರ್ಟಗಳನ್ನೇ ದಿಕ್ಕು ತಪ್ಪಿಸಿದ ತರಲೆ. ನ್ಯಾಯಾಲಯದಲ್ಲೇ ಸ್ತ್ರೀ ಸಖ್ಯ ಸುಖ-ಸಂತೃಪ್ತಿ ಸನ್ಯಾಸಿಯೆಂದು ಜಗಜ್ಜಾಹೀರಾದ ಪ್ರಸಂಗ, ಈ ಅನಾಚಾರಗಳ ಆಚೀಚೆಯ ಸರಣಿ ಪಾತಕಿಗಳಲ್ಲಿ ಸಿಕ್ಕಿಬಿದ್ದು ಮಾನ ಹರಾಜಾದರೂ ರಾಘು ಬಂಡತನದಿಂದ ನಿರ್ಲಜ್ಜ ಹಾರಾಟ ನಡೆಸಿಕೊಂಡೇ ಇದ್ದು; ಆಳುವವರು-ಆರೆಸೆಸ್-ಕೋರ್ಟು-ಕಚೇರಿ ನಿಭಾಯಿಸುತ್ತ, ಹವ್ಯಕ ಸಮುದಾಯದಲ್ಲಿ ಬಹಿಷ್ಕಾರ-ಬ್ಯ್ಲಾಕ್‍ಮೇಲ್‍ನಿಂದ ಅಟ್ಟಹಾಸಗೈಯುತ್ತಿದ್ದ. ಈ ಗೋಲ್ ಮಾಲ್ ಸ್ವಾಮಿಯ ಕೃತಕ ಚೈತನ್ಯದ ಶಕ್ತಿ ಮೂಲವೇ ಗೋಕರ್ಣ ದೇವಾಲಯದ ಕೋಟ್ಯಾಂತರ ರೂ. ಆದಾಯದ ಹುಂಡಿಯಾಗಿತ್ತು.
ಆ ಭರ್ಜರಿ ಹುಂಡಿ ಹೈಕೋರ್ಟಿನ ಖಡಕ್ ತೀರ್ಪಿನಿಂದ ರಗಳೆ ರಾಘುನ ಕೈಜಾರಿಹೋಗಿದೆ, ಪಾಪ! ಅದು 2005ನೇ ಇಸ್ವಿಯ ಸಮಯ. ಮುಜರಾಯಿ ಇಲಾಖೆಯ ಏಕರೂಪ ಶಾಸನ ಜಾರಿಗೆ ತಂದಿತ್ತು. ಆಗ ಮಠಗಳು ಮತ್ತು ಅದಕ್ಕೆ ಸಂಬಂಧಿಸಿದ್ದ ದೇವಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲ ದೇವಸ್ಥಾನಗಳನ್ನು ವಶಕ್ಕೆ ಪಡೆದಿತ್ತು ಸರ್ಕಾರ. ಈ ಪ್ರಕ್ರಿಯೆಯಲ್ಲಿ ಗೋಕರ್ಣ ದೇವಸ್ಥಾನ ಮುಜರಾಯಿ ಇಲಾಖೆ ಸುಪರ್ದಿಗೆ ಒಳಪಟ್ಟಿತ್ತು. ಅದೇ ಹೊತ್ತಿಗೆ ಉಡುಪಿಯ ಅಷ್ಟಮಠಗಳು ಕೃಷ್ಣ ದೇವಸ್ಥಾನ ಬಂಡವಾಳ ಮಾಡಿಕೊಂಡು ಭಕ್ತಾದಿಗಳ ಆಕರ್ಷಿಸುತ್ತ ಧರ್ಮದ ವ್ಯಾಪಾರ ನಡೆಸುತ್ತ ಕೊಳ್ಳೆ ಹೊಡೆಯುತ್ತಿರುವುದು ರಾಘುನ ಕಣ್ಣು ಕುಕ್ಕಿಸಿತ್ತು. ತಾನೇಕೆ ಗೋಕರ್ಣ ಮಹಾಬಲೇಶ್ವರನ ಕಬ್ಜಾ ಮಾಡಿಕೊಂಡು ಕಾಸು- ಖ್ಯಾತಿಗಳಿಸಬಾರದೆಂಬ ಯೋಚನೆ ಆತನಿಗೆ ಬಂತು. ದೇಶಭಕ್ತ ಬಿಜೆಪಿಗಳ ಕಿತ್ತಾಟದಿಂದ 2008ರಲ್ಲಿ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಿತ್ತು. ಆ ವರ್ಷದ ಎಪ್ರಿಲ್‍ನಲ್ಲಿ ರಾಘುನ ರಾಮಚಂದ್ರಾಪುರ ಮಠ ರಾಜ್ಯಪಾಲರಿಗೆ–ಗೋಕರ್ಣ ದೇವಸ್ಥಾನದ ರಾಮಚಂದ್ರಾಪುರ ಮಠದ್ದು. ಆದ್ದರಿಂದ ದೇಗುಲದ ಆಡಳಿತ ಮಠಕ್ಕೆ ವಹಿಸಬೇಕು ಎಂಬ ಕೋರಿಕೆ ಸಲ್ಲಿಸಿತ್ತು.
ಈ ಎಡವಟ್ಟು ಮನವಿ ಕಂಡು ನಖಶಿಖಾಂತ ಉರಿದುಬಿದ್ದು ರಾಜ್ಯಪಾಲರ ಅಧೀನ ಕಾರ್ಯದರ್ಶಿ “ಇಂಥ ಪ್ರಸ್ತಾವನೆ” ತರಬೇಡಿ ಎಂದು ಝಾಡಿಸಿ ಕಳಿಸುತ್ತಾರೆ. ಆದರೂ ರಾಘು ಪಟಾಲಮ್ ಸುಮ್ಮನಾಗುವುದಿಲ್ಲ ರಾಘು ಮೂರ್ಮೂರು ಬಾರಿ ಸರ್ಕಾರಕ್ಕೆ ಪತ್ರ ಗೀಚಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಮತ್ತು ಅದರ ಸುತ್ತಲಿನ ನಾಲ್ಕು ಬೇರೆ-ಬೇರೆ ದೇವಸ್ಥಾನ ಹಾಗು ನಾಲ್ಕು ಮಠಗಳನ್ನು ತನ್ನ ಪಾರುಪತ್ಯಕ್ಕೆ ವಹಿಸುವಂತೆ ಕೇಳಿದ್ದಾನೆ. ಸ್ವಜಾತಿ ಸ್ವಾಮಿಯ ಈ ಪತ್ರಗಳನ್ನು ಅಂದಿನ ಧಾರ್ಮಿಕ ದತ್ತಿ ಎಲಾಖೆಯ ಆಯುಕ್ತ ಶ್ಯಾಮ್‍ಭಟ್ಟ ಮುತುವರ್ಜಿಯಿಂದ ಪರಿಗಣಿಸಿದ್ದಾರೆ. ಈ ಇಡೀ ಷಡ್ಯಂತ್ರದ ಮಾರ್ಗದರ್ಶಕ-ಸಲಹೆಗಾರನೇ ಶ್ಯಾಮ್‍ಭಟ್ಟನಾಗಿದ್ದ. ರಾಘುನ ಚೇಲಾನಂತಿದ್ದ (ಈಗಿನ ಕಡುವೈರಿ) ಶ್ಯಾಮ್‍ಭಟ್ಟ ಅಂದಿನ ಉತ್ತರ ಕನ್ನಡದ ಜಿಲ್ಲಾಧಿಕಾರಿಗೆ ಪತ್ರ ಬರೆದು ಗೋಕರ್ಣ ದೇವಸ್ಥಾನ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಬಾರದೆಂದು ಕೇಳುತ್ತಾನೆ.
ಇದಕ್ಕೆ ಉತ್ತರವಾಗಿ ಡಿಸಿ-“ರಾಮಚಂದ್ರಾಪುರ ಮಠ ಹವ್ಯಕ ಜಾತಿಗೆ ಸೇರಿದ ಖಾಸಗಿ ಸಂಸ್ಥೆ. ಆದರೆ ಗೋಕರ್ಣ ದೇವಸ್ಥಾನ ಸಾರ್ವಜನಿಕರಿಗೆ ಸೇರಿದ್ದು. ಹೀಗಿರುವಾಗ ಸಾರ್ವಜನಿಕ ದೇವಸ್ಥಾನ ಒಂದನ್ನು ಖಾಸಗಿ ಮಠಕ್ಕೆ ಕೊಡುವುದು ಯಾವ ರೀತಿಯಲ್ಲೂ ಸರಿಯಲ್ಲ….” ಎಂದು ವಾಸ್ತವಾಂಶದ ವರದಿ ಕಳಿಸಿದ್ದಾರೆ. ಡಿಸಿ ಈ ವರದಿ ಮರೆಮಾಚಿ ಶ್ಯಾಮ್‍ಭಟ್ಟ ಕಂದಾಯ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ಗೋಕರ್ಣ ದೇವಸ್ಥಾನ ರಾಘುನ ಮಠಕ್ಕೆ ಕೊಡಲೇನಡ್ಡಿ ಎಂದು ಕೇಳುತ್ತಾನೆ. ರಾಮಚಂದ್ರಾಪುರ ಮಠ ದೇವಸ್ಥಾನ ಯಾವುದೇ ಜಾತಿಗೆ ಸೇರದ ಸಂಸ್ಥೆ ಎಂಬುದು ನಾಲಾಯಕ್ ಶ್ಯಾಮ್‍ಭಟ್ಟನ ಕುತರ್ಕವಾಗಿತ್ತು. ಮಜಾ ಎಂದರೆ ರಾಘುನೇ ಮುಜರಾಯಿ ಇಲಾಖೆಗೆ ಬರೆದ ಪತ್ರದಲ್ಲಿ ತನ್ನದು ಶುದ್ಧ ಹವ್ಯಕ ಸಂಪ್ರದಾಯ ಮಠವೆಂದು ಹೇಳಿದ್ದಾನೆ. ಆದರೆ ಕಾನೂನು ಕೋಶ ಮತ್ತು ರಾಜ್ಯಪಾಲರ ಆಡಳಿತದ ಸಲಹೆಗಾರರು ದೇಗುಲ ಮಠಕ್ಕೆ ವಹಿಸುವುದಕ್ಕೆ ಬಿಲ್‍ಕುಲ್ ಒಪ್ಪುವುದಿಲ್ಲ.
ಧಾರ್ಮಿಕ-ದತ್ತಿ ಇಳಾಖೆಯ ಆಯುಕ್ತ ಶ್ಯಾಮ್‍ಭಟ್ಟನೆಂಬ ರಾಘುನ ಎಜೆಂಟನಿಗೆ ಕಂದಾಯ ಎಲಾಖೆಯ ಕಾರ್ಯದರ್ಶಿ “ಎಚ್ಚರಿಕೆ” ಪತ್ರ ಬರೆಯುತ್ತಾರೆ. ಇನ್ನುಮುಂದೆ ಗೋಕರ್ಣ ದೇವಸ್ಥಾನದ ಡಿನೋಟಿಫಿಕೇಷನ್ ಉಸಾಬರಿಗೆ ಹೋಗಬೇಡವೆಂದು ಹೇಳುತ್ತಾರೆ. ಕಂದಾಯ ಇಲಾಖೆಯ ಪೀಠಾಧಿಕಾರಿ ಶ್ರೀಕಂಠಯ್ಯ ಪ್ರಸ್ತಾವನೆ ತಿರಸ್ಕರಿಸಲಾಗಿದೆ ಎಂದು ಮಂಗಳಾರತಿ ಎತ್ತುತ್ತಾರೆ ಶ್ಯಾಮ ಭಟ್ಟನಿಗೆ ಅಲ್ಲಿಗೆ ಗೋಕರ್ಣ ದೇವಸ್ಥಾನ ಪರಭಾರೆ, ಕಿತಾಪತಿಗೆ ತಡೆಬೀಳುತ್ತದೆ. ಆದರೆ ಆ ನಂತರ ರಾಘುನ ಘನಶಿಷ್ಯೋತ್ತಮ ಯಡ್ಡಿಯ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ರಾಘು ಯಡ್ಡಿಯನ್ನು ಬುಕ್ ಮಾಡಿಕೊಂಡು ಗೋಕರ್ಣ ದೇವಸ್ಥಾನಕ್ಕಾಗಿ ಹೊಸ ಪ್ರಸ್ತಾವನೆ ಸಲ್ಲಿಸುತ್ತಾನೆ! ತನ್ನ ಮಂತ್ರಿಮಂಡಲದ ಸಚಿವರೊಂದಿಗೂ ಸಣ್ಣದೊಂದು ಚರ್ಚೆ ಸಹ ಮಾಡದೇ ಯಡ್ಡಿ ಏಕಪಕ್ಷೀಯವಾಗಿ 2008ರ ಆಗಸ್ಟ್ 12ರಂದು ದೇಗುಲವನ್ನು ಮುಜರಾಯಿ ಇಲಾಖೆಯಿಂದ ಕೈಬಿಟ್ಟು ರಾಘುಗೆ ಬಳುವಳಿಯಾಗಿ ಕೊಟ್ಟುಬಿಡುತ್ತಾರೆ! ಸಿಎಂ ಯಡ್ಡಿ ಕಂದಾಯ, ಧಾರ್ಮಿಕ ದತ್ತಿ ಇಲಾಖೆಯನ್ನೆಲ್ಲ ಕಡೆಗಣಿಸಿ ತನ್ನ ಅಧೀನ ಕಾರ್ಯದರ್ಶಿ ಮೂಲಕ ದೇವಳ “ಹಸ್ತಾಂತರ ಆಜ್ಞೆ” ಹೊರಡಿಸುತ್ತಾರೆ!
ದೇಗುಲ ಡಿನೋಟಿಫಿಕೇನ್ ಮಾಡುವ ಅಧಿಕಾರ ಸಿಎಂ ಯಡ್ಡಿಗೆ ಇರುವುದೇಯಿಲ್ಲ; ಅಷ್ಟೇ ಅಲ್ಲ, ದೊಡ್ಡ ಆದಾಯದ ಗೋಕರ್ಣ ದೇವಸ್ಥಾನದ ಆಡಳಿತ ನಡೆಸುವ ಅಷ್ಟೂ ಅರ್ಹತೆ, ತಾಕತ್ತು ಮುಜರಾಯಿ ಇಲಾಖೆಗೆ ಇದ್ದಾಗಲೂ ಅದನ್ನು ಬುದ್ಧಿಪೂರ್ವಕವಾಗೇ ಧಿಕ್ಕರಿಸಿ ರಾಘು ಸ್ವಾಮಿಗೆ ಲಾಭ ಮಾಡಿಕೊಡುವ ಏಕೈಕ ಉದ್ದೇಶದಿಂದ ಹಸ್ತಾಂತರ ಯಡ್ಡಿ ಮಾಡುತ್ತಾರೆ. ಈ ಅನ್ಯಾಯ ಅಕ್ರಮದ ವಿರುದ್ಧ ಗೋಕರ್ಣದಲ್ಲಿ ಪ್ರತಿರೋಧ-ಪ್ರತಿಭಟನೆ ನಡೆಯುತ್ತದೆ. ಇಷ್ಟು ದಿನ ದೇವಸ್ಥಾನದಲ್ಲಿ ಕಾರುಬಾರು ಮಾಡಿಕೊಂಡಿದ್ದ ಕೋಟ ಬ್ರಾಹ್ಮಣ ಸಮುದಾಯದ ಅರ್ಚಕರು, ಉಪಾಧಿವಂತರು, ಅದರ ಪರಿವಾರ ಒಂದೆಡೆಯಾದರೆ, ರಾಘುನ ಹವ್ಯಕ ಮಂಡಲ ಇನ್ನೊಂದೆಡೆ ನಿಂತು ಜಿದ್ದಾಜಿದ್ದಿ ಕಾಳಗ ಮಾಡಿದರು. ರಾಃಉಗೆ ಯಡ್ಡಿ ಸರ್ಕಾರದ ಪೊಲೀಸ್ ಬಲ ಇರುತ್ತದೆ. ವಿರೋಧಿಗಳನ್ನು ದೌರ್ಜನ್ಯ, ದಬ್ಬಾಳಿಕೆ, ಬೆದರಿಕೆ, ಸುಳ್ಳುಕೇಸುಗಳಿಂದ ಪಳಗಿಸಲು ರಾಘು ಆಡಳಿತ ಯಂತ್ರ ಯಥೇಚ್ಛವಾಗಿ ದುರ್ಬಳಕೆ ಮಾಡಿಕೊಳ್ಳುತ್ತಾನೆ. ಹಸ್ತಾಂತರ ಪ್ರಶ್ನಿಸಿದವರನ್ನು ನಿರ್ದಯವಾಗಿ ಹಣೀಯಲು ಪೊಲೀಸರನ್ನು ಛೂಬಿಡಲಾಗುತ್ತದೆ. ಹಿಂಸಾಕಾಂಡವೇ ಗೋಕರ್ಣದಲ್ಲಿ ರಾಘುನ ಗೂಂಡಾಪಡೆ ನಿರಂತರವಾಗಿ ನಡೆಸಹತ್ತಿತು.
ರಾಘು ಪುಂಡಪಡೆ ಅಸಹಾಯಕರ ಗೋಳು ಹೊಯ್ದುಕೊಂಡ ಪರಿ ಹೇಳತೀರದು. ಒಂದೆಡೆ ಬೀದಿ ಕಾಳಗ ನಡೆದರೆ ಮತ್ತೊಂದೆಡೆ ದೇವಳದ ಹಸ್ತಾಂತರ ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಕೆ ಆಗುತ್ತದೆ. ಗೋಕರ್ಣದ ಬಾಲಚಂದ್ರ ದೀಕ್ಷಿತ್ ಮತ್ತಿತರ ಐದು ಮಂದಿ ಪಿಐಎಲ್ ಹಾಕಿ ಯಡ್ಡಿ ಸರ್ಕಾರದ ಹಸ್ತಾಂತರದ ವಿರುದ್ಧ ತಕರಾರು ತೆಗೆಯುತ್ತಾರೆ. 2008ರಲ್ಲಿ ದೇವಸ್ಥಾನ ರಾಘುಮಠಕ್ಕೆ ಹಸ್ತಾಂತರ ಆಗುವ ಮೊದಲು ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಚಿಂತನೆ ನಡೆಸಿತ್ತು. ಇದಕ್ಕೆ ಬಾಲಚಂದ್ರ ದೀಕ್ಷಿತ್ ತಡೆಯಾಜ್ಞೆ ತಂದಿದ್ದರು. ಆ ನಂತರ ಬಂದ ಯಡ್ಡಿ ಸರ್ಕಾರ ಏಕಪಕ್ಷೀಯವಾಗಿ ರಾಘುಗೆ ದೇವಸ್ಥಾನ ಕೊಡುತ್ತದೆ. ಆಗ ದೀಕ್ಷಿತ್ ಅಧಿಕಾರಗಣದ ಮೇಲೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುತ್ತಾರೆ. ಜತೆಗೆ ಎರಡು ರಿಟ್ ಪಿಟೇಷನ್ ಹಾಕಲಾಗುತ್ತದೆ. ಕೋರ್ಟ್ ಎಲ್ಲ ಪ್ರಕರಣ ಒಗ್ಗೂಡಿಸಿ ವಿಚಾರಣೆ ನಡೆಸಲು ವಿಶೇಷ ಪೀಠ ರಚನೆ ಮಾಡುತ್ತದೆ.
ಒಂದು ಹಂತದಲ್ಲಿ ಸಾಕ್ಷಾತ್ ಯಡ್ಡಿಯೇ ಗೋಕರ್ಣ ದೇವಸ್ಥಾನದ ವ್ಯಾಜ್ಯದ ಪರಿಕಂಡು ಕಂಗಾಲಾಗಿ ಹೋಗಿದ್ದರು. ಅಧಿಕಾರಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಕೇಸು ತನ್ನ ಬುಡಕ್ಕೆ ಬರಬಹುದೆಂಬ ಆತಂಕದಿಂದ ಯಡ್ಡಿ ನಿದ್ದೆಗೆಡುತ್ತಾರೆ. ಆಗಾತ ರಾಘುಗೆ ಹತ್ತಿರವಿರುವ ಸಾಗರದ ವಿಪ್ರೋತ್ತಮನೊಬ್ಬನ ಮೂಲಕ ದೇವಸ್ಥಾನ ಮರಳಿ ಸರ್ಕಾರಕ್ಕೆ ಕೊಡುವಂತೆ ಸಂದೇಶ ಕಳಿಸಿದ್ದೂ ಇದೆ. ಇದರಿಂದ ಕೆರಳಿದ ರಾಘು “ದೇವಸ್ಥಾನ ಕೊಡುವಾಗ ಇದೆಲ್ಲ ಕಾನೂನು ಕ್ರಮದ ಬಗ್ಗೆ ಸಿಎಂ ಆದೋನು ಪರಿಶೀಲಿಸಬೇಡವಾ…… ಈಗ ವಾಪಸ್ ಕೊಡೆಂದರೆ ಹೆಂಗೆ?….. ನಾನು ಕೊಡೋದಿಲ್ಲ….. ಬೇಕಾದ್ದು ಆಗಲಿ….. ಯಡ್ಡಿ ಹಣೆಬರಹಕ್ಕೆ ನಾನೇನು ಮಾಡಲಿ…..” ಎಂದು ಹಾರಾಡಿದ್ದರು. ಸತತ ಹತ್ತು ವರ್ಷ ಪಿಐಎಲ್ ವಿಚಾರಣೆ ಹೈಕೋರ್ಟಲ್ಲಿ ನಡೆಯಿತು. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್‍ರ ವಿಭಾಗೀಯ ಪೀಠ ಪಿಐಎಲ್ ಮತ್ತಿತರ ತಕರಾರು ಅರ್ಜಿಗಳ ವಾದ ಆಲಿಸಿ ಐತಿಹಾಸಿಕ ತೀರ್ಪು ನೀಡಿದೆ; 2008ರ ಆಗಸ್ಟ್ 12ರಂದು ಅಂದಿನ ಸರ್ಕಾರದ ಹಸ್ತಾಂತರ ಆದೇಶ ರದ್ದುಪಡಿಸಿ ದೇಖರೇಖಿ ಸಮಿತಿ ರಚಿಸಿದೆ. ಅಲ್ಲಿಗೆ ನ್ಯಾಯಾಲಯಗಳನ್ನೂ ದಿಕ್ಕು ತಪ್ಪಿಸಬಲ್ಲ ಸ್ವಾಮಿ ಎಂಬ ಕುಖ್ಯಾತಿಯ ರಾಘು ಈ ಬಾರಿ ಪ್ರಚಂಡ ಪರಾಜಯ ಕಂಡಿರುವುದು ದೊಡ್ಡ ಚರ್ಚೆಗೆ ವಸ್ತುವಾಗಿ ಹೋಗಿದೆ!!
ಯಡ್ಡಿ ಸರ್ಕಾರ ಗೋಕರ್ಣ ದೇವಸ್ಥಾನವನ್ನು ಅಧಿಸೂಚಿತ ಪಟ್ಟಿಯಿಂದ ಕೈಬಿಟ್ಟ ಆದೇಶವನ್ನು ಅನೂರ್ಜಿತಗೊಳಿಸಿರುವ ವಿಭಾಗೀಯ ಪೀಠ ಡಿನೋಟಿಫೈ ಮಾಡಿರುವುದು ಕಳಂಕಿತ ಕ್ರಮವೆಂದು ಹೇಳಿದೆ. ರಾಮಚಂದ್ರಾಪುgಮಠಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಡಿನೋಟಿಫÉೈ ಮಾಡಲಾಗಿದೆ ಎಂದು ನೇರಾನೇರ ಹೇಳಿದೆ. ಕಾನೂನಿನ ದೃಷ್ಟಿಯಲ್ಲಿ ದೇವಸ್ಥಾನದ ಹಸ್ತಾಂತರ ಮಾಡುವ ಸರ್ಕಾರದ ಆದೇಶ ಕಾನೂನು ಬಾಹಿರವೆಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳು ದೇಗುಲವನ್ನು ಸರ್ಕಾರದ ಸುಪರ್ದಿಗೆ ವಹಿಸಿದ್ದಾರೆ. ಧಾರ್ಮಿಕ ಕೈಂಕರ್ಯ ನೆರವೇರಿಸಲು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀ ಕೃಷ್ಣ ಸಲಹೆಗಾರರಾಗಿರುವ ಸಮಿತಿಯೊಂದನ್ನು ರಚಿಸಲಾಗಿದೆ. ಕುಮಟಾದ ಎಸ್ಪಿ ಮತ್ತು ಇನ್ನಿಬ್ಬರು ಪ್ರಖ್ಯಾತ ಪಂಡಿತರು ಸದಸ್ಯರಾಗಿರುತ್ತಾರೆ.
ರಾಜ್ಯ ಸರ್ಕಾರಕ್ಕೆ ದೇವಾಲಯ ಅಧಿಸೂಚಿತ ಪಟ್ಟಿಯಿಂದ ತೆಗೆಯುವ ಅಧಿಕಾರವಿಲ್ಲ. ಗೋಕರ್ಣ ದೇವಸ್ಥಾನ ಅಧಿಸೂಚಿತ ಪಟ್ಟಿಯಿಂದ ಕೈಬಿಟ್ಟಿರುವುದು ಸಂವಿಧಾನದ 14ನೇ ಕಲಂನ ವಿರುದ್ಧ ಕೈಗೊಂಡಿರುವ ತೀರ್ಮಾನ ಎಂದು ವಿಭಾಗೀಯ ಪೀಠದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಗೋಕರ್ಣ ದೇವಸ್ಥಾನ ರಾಮಚಂದ್ರಾಪುರ ಮಠಕ್ಕೆ ಸೇರಿದ್ದಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಸರ್ಕಾರ ಮಠಕ್ಕೆ ದೇವಸ್ಥಾನ ಸೇರಿದ್ದೆಂದು ಕಲ್ಪನೆ ಮಾಡಿಕೊಂಡು ಹಸ್ತಾಂತರ ಮಾಡಬಾರದಿತ್ತು ಎಂದು ಹೇಳಿದ್ದಾರೆ. ಸರ್ಕಾರದ ಆದೇಶ ಕಾನೂನು ಬಾಹಿರ ಮಾತ್ರವಲ್ಲ ಅನುಮಾನಕ್ಕೆಡೆ ಮಾಡುವಂಥದ್ದು ಎಂದು ವಿಭಾಗೀಯ ಪೀಠ ಹೇಳಿದೆ. ಇಷ್ಟಾದರೂ ರಾಘು ಗ್ಯಾಂಗು ದೇವಸ್ಥಾನ ಮಠಕ್ಕೆ ಸೇರಿದ್ದೆಂಬ ಬಗ್ಗೆ ದಾಖಲೆಗಳಿವೆ ಎನ್ನುತ್ತಿದೆ. ಸುಪ್ರಿಮ್‍ಗೆ ಹೋಗ್ತೇವೆ ಎಂದು ಆವಾಜು ಮಾಡುತ್ತಿದೆ. ಕತ್ತಲಲ್ಲಿ ಕೋಲು ಕಳೆದುಕೊಂಡ ಕುರುಡನಂತಾಗಿದೆ ರಾಘು ರಗಳೆ ಠೋಳಿಯ ಕತೆ! ದಾಖಲೆಗಳಿದ್ದರೆ ಹೈ ಕೋರ್ಟ್‍ಗೇಕೆ ಸಲ್ಲಿಸಲಿಲ್ಲ ಎಂದು ರಾಘುಭಟ್ಟ ಎಂದು ಹವ್ಯಕರೆ ಮುಸುಮುಸಿ ನಗುತ್ತಿದ್ದಾರೆ!
ಹೈಕೋರ್ಟ್ ತೀರ್ಪು ರಾಘು ಸ್ವಾಮಿಯದಷ್ಟೇ ಅಲ್ಲ, ಯಡ್ಡಿ ಮಹಾತ್ಮನದೂ ಬಣ್ಣ ಬಯಲಾಗಿಸಿದೆ. ಈ ಕಾವಿ-ಖಾದಿ ಸೇರಿ ಮಾಡಿರುವ ಅನ್ಯಾಯ-ಅನಾಹುತದಿಂದ ಇವತ್ತಿಗೂ ಗೋಕರ್ಣ ದೇವಸ್ಥಾನದ ಪರಿಸರ ಹೈರಾಂಗಣವಾಗೇ ಇದೆ. ರಾಘು ಕರ್ಮಕಾಂಡಗಳಲ್ಲಿ ಸಿಲುಕಿ ಹೈರಾಣಾದಾಗ ಒಂಚೂರು ತಣ್ಣಗಿದ್ದ ಹವ್ಯಕ-ಕೋಟ ಬ್ರಾಹ್ಮಣ ಬಡಿದಾಟ ಈಗ ತಾರ್ಕಿಕ ಅಂತ್ಯಕ್ಕೆ ಬಂದುನಿಂತಿದೆ. ರಾಘು ಗ್ಯಾಂಗು ದೇಗುಲ ವಶಪಡಿಸಿಕೊಳ್ಳುವ ಮೊದಲು ಕೋಟ ಬ್ರಾಹ್ಮಣರ ಶೋಷಣೆಯ ಅಡ್ಡೆಯಂತಾಗಿದ್ದು ನಿಜ. ಆದರೆ ರಾಘು ಕೋಟ ಬ್ರಾಹ್ಮಣ ವೈದಿಕರಿಗಿಂತ ಹಿಚ್ಚು ಅಪಾಯಕಾರಿ ಆಗಿಹೋದ. ಸುಲಿಗೆ ಅವ್ಯವಹಾರಕ್ಕೆ ಕಾವಿ ಖದರು ಬಂತಷ್ಟೇ. ಶೂದ್ರರು ಈ ಬ್ರಾಹ್ಮಣರ ಕಿತ್ತಾಟ ದೂರವೇ ನಿಂತು ನೋಡಿ ನಕ್ಕಿದ್ದರು. ಆದರೆ ನಾಡವ ಜಾತಿಯ ತೋಳ್ಬಲದ ಹುಡುಗರನ್ನು ರಾಘು ದುರುಪಯೋಗಿಸಿಕೊಂಡದ್ದೂ ಇದೆ. ಈಗ ಗೋಕರ್ಣದಲ್ಲಿ ಎಲ್ಲರಿಗೂ ರಾಘುನ ಅಸಲಿ ಅವತಾರ ಅರ್ಥವಾಗಿದೆ.
ಯಡ್ಡಿಯೊಬ್ಬನ ಮೇಲೆ ಬರಬಾರದಂಥ ಲಂಪಟತನ, ಲಜ್ಜೆಗೇಡಿತನ, ಅತ್ಯಾಚಾರ, ಅನಾಚಾರದಂಥ ಹೇಯ-ಬರ್ಬರ-ಕ್ರಿಮಿನಲ್ ಅಪರಾಧದ ಕುಖ್ಯಾತಿಗೆ ಬಿದ್ದು ಮಾನ-ಮರ್ಯಾದೆ ಕಳೆದುಕೊಂಡರೂ ತಲೆ ಕೆಡಿಸಿಕೊಳ್ಳದ ರಾಘು ಈಗ ತನ್ನ ರಂಗೀಲಾ ಕಾರ್ಯಾಚರಣೆಯ ಶಕ್ತಿಕೇಂದ್ರವಾಗಿದ್ದ ಗೋಕರ್ಣ ದೇವಸ್ಥಾನ ಹಿಡಿದಿಟ್ಟುಕೊಳ್ಳುವ ಕಸರತ್ತಿಗೆ ಬಿದ್ದು ಒದ್ದಾಡುತ್ತಿರುವುದು ಮೋಜಾಗಿದೆ. ರಾಘು ನSರಾ ಮಾಡೋದು ಬಿಟ್ಟು ಹೈಕೋರ್ಟ್ ತೀರ್ಪಿಗೆ ತಲೆಬಾಗಿ ಗೋಕರ್ಣದಿಂದ ಜಾಗ ಖಾಲಿ ಮಾಡುವುದು ಒಳಿತು. ಹಾಗೆಯೇ ಪೀಠತ್ಯಾಗ ಮಾಡಬೇಕು, ತನ್ಮೂಲಕ ಇಷ್ಟು ದಿನ ಆತನ ಪೊರೆದು ಬಚಾವು ಮಾಡಿಟ್ಟುಕೊಂಡ ಸ್ವ-ಜಾತಿ ಹವ್ಯಕರ ಋಣ ತೀರಿಸಬೇಕಾಗಿದೆ. ರಾಘುನ ಪೀಠದಿಂದ ಇಳಿಸದಿದ್ದರೆ ಹವ್ಯಕರಿಗೆ ಗಂಡಾಂತರ ಖಂಡಿತ.
ಅಲ್ಲಿಂದಿಲ್ಲಿಗೂ ಬುದ್ಧಿವಂತ ಹವ್ಯಾಕರನ್ನು ಯಾಮಾರಿಸುತ್ತಲೇ ಬಂದಿರುವ ರಾಘು ಈ ಬಾರಿಯ “ಚತುರ್ಮೋಸ” ಸಿದ್ದಾಪುರದ ಬಾನ್ಕುಳಿ ಶಾಖಾಮಠದಲ್ಲಿ ಮಾಡುವ ಸ್ಕೆಚ್ ಹಾಕಿಕೊಂಡಿದ್ದ. ಚತುರ್ಮಾಸಕ್ಕೆ ಎರಡು ದಿನವಿರುವಾಗ ದಿಢೀರ್ ಕಾರ್ಯಕ್ರಮ ರದ್ದಾಯಿತು. ರಾಘುನ ಕಿಡ್ನಿಯಲ್ಲಿ ಕಲ್ಲಾಗಿ ತೊಂದರೆ ಆಗುತ್ತಿರುವುದರಿಂದ ಚಾತುರ್ಮಾಸ ಬೆಂಗಳೂರಿನ ಗಿರಿನಗರ ಮಠಕ್ಕೆ ವರ್ಗಾಯಿಸಲಾಗಿದೆಯೆಂಬ ಅನಧಿಕೃತ ಬುಲೆಟಿನ್ ಮಠದ ಮೂಲದಿಂದ ಬಂತು. ವಾಸ್ತವವೆಂದರೆ ಸುಪ್ರಿಮ್ ಕೋರ್ಟ್‍ನಲ್ಲಿ ರಾಘು ವಿರುದ್ಧ ಹಾಕಲಾಗಿರುವ ರೇಪ್ ಕೇಸ್ ವಿಚಾರಣೆ ಶುರುವಾಗುವ ಭಯದಿಂದ ಆತ ಬೆಂಗಳೂರು ಮಠದ ಬಿಲ ಸೇರಿಕೊಂಡಿದ್ದ! ಈಗ ಗೋಕರ್ಣ ದೇವಸ್ಥಾನ ಬಿಟ್ಟುಹೋಗುವ ಪರಿಸ್ಥಿತಿ ಬಂದಿದೆ.
ಮಾಡಿದುಣ್ಣೋ ಮಾರಾಯ!!
-ಶುದ್ಧೋದನ
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...