Homeಮುಖಪುಟಚುನಾವಣಾ ನೀತಿಸಂಹಿತೆಯನ್ನೇ ಧಿಕ್ಕರಿಸಿದ ‘ಮೋದಿ’ ಸಿನಿಮಾ ತಂಡದ ಬೆನ್ನಿಗೆ ಯಾರಿದ್ದಾರೆ?

ಚುನಾವಣಾ ನೀತಿಸಂಹಿತೆಯನ್ನೇ ಧಿಕ್ಕರಿಸಿದ ‘ಮೋದಿ’ ಸಿನಿಮಾ ತಂಡದ ಬೆನ್ನಿಗೆ ಯಾರಿದ್ದಾರೆ?

- Advertisement -

ಚುನಾವಣಾ ಆಯೋಗದ ಬಗ್ಗೆ ಬಿಜೆಪಿಗೆ ನಿಜಕ್ಕೂ ಗೌರವ ಇದೆಯಾ? ಮೋದಿಯವರ ಈ ಐದು ವರ್ಷದ ಆಳ್ವಿಕೆಯಲ್ಲಿ ಚುನಾವಣಾ ಆಯೋಗ ತನ್ನ ಸ್ವಾಯತ್ತೆಯನ್ನು ಉಳಿಸಿಕೊಂಡಿದೆಯಾ? ಮುಂಬರುವ ಲೋಕಸಭಾ ಚುನಾವಣೆಯನ್ನು ಆಯೋಗ ಪಾರದರ್ಶಕವಾಗಿ ನಡೆಸುತ್ತಾ?………

ಇಷ್ಟೆಲ್ಲ ಪ್ರಶ್ನೆಗಳು ಹುಟ್ಟಲು ಕಾರಣವಾಗಿರೋದು ಒಂದು ಸಿನಿಮಾ! ಅದು ಸಾಮಾನ್ಯ ಸಿನಿಮಾವಲ್ಲ ಪ್ರಧಾನಿ ಮೋದಿಯವರ ಜೀವನಚರಿತ್ರೆ ಆಧರಿಸಿದ ಸಿನಿಮಾ ‘ಪಿಎಂ ನರೇಂದ್ರ ಮೋದಿ’. ಈ ಸಿನಿಮಾವನ್ನು ಏಪ್ರಿಲ್ 12ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಇತ್ತೀಚೆಗೆ ಘೋಷಿಸಿದ ನಂತರ ಚುನಾವಣಾ ಆಯೋಗವನ್ನು ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ.

ಯಾಕೆಂದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಸದರಿ ಚುನಾವಣೆಯ ಪ್ರಮುಖ ರಾಜಕಾರಣಿಯೊಬ್ಬರ ಸಿನಿಮಾವನ್ನು ಬಿಡುಗಡೆ ಮಾಡುವುದು ಎಷ್ಟು ಸರಿ? ಇದಕ್ಕೆ ಆಯೋಗ ಸಮ್ಮತಿ ನೀಡುತ್ತದೆಯಾ? ಮೊದಲ ಹಂತದ ಮತದಾನ ಚುನಾವಣೆ ಮುಕ್ತಾಯಗೊಂಡ ಮಾರನೇ ದಿನವೆ, ಇನ್ನೂ ಆರು ಹಂತಗಳ ಮತದಾನ ಬಾಕಿ ಇರುವಾಗಲೇ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಘೋಷಿಸುತ್ತದೆಯೆಂದರೆ, ಆಯೋಗದ ಭಯ ಆ ತಂಡಕ್ಕಿಲ್ಲವೇ? ಅಥವಾ ಆ ಭಯವನ್ನೂ ಮೀರುವ ಅಭಯ ಆ ತಂಡಕ್ಕೆ ಲಭಿಸಿದೆಯೇ? ಈ ಎಲ್ಲಾ ಪ್ರಶ್ನೆಗಳು ಈಗ ದೊಡ್ಡ ಚರ್ಚೆಯಾಗಿ ಬೆಳೆಯುತ್ತಿವೆ.

ಪ್ರಜಾತಂತ್ರವನ್ನು ಗೌರವಿಸುವವರ ವಾದ ಇದಾದರೆ, ವ್ಯಕ್ತಿ ಪೂಜೆಯ ಮೋಹಕ್ಕೆ ಸಿಕ್ಕಿರುವ ಕೆಲವರು ಆ ಸಿನಿಮಾಕ್ಕೂ ಬಿಜೆಪಿ ಪಕ್ಷಕ್ಕೂ ಯಾವ ಸಂಬಂಧವೂ ಇಲ್ಲ, ಅಲ್ಲದೇ ಪ್ರಧಾನಿ ಮೋದಿಯವರೇನು ಅದರಲ್ಲಿ ನಟಿಸಿದ್ದಾರಾ? ಹಾಗಾಗಿ ಅದು ಬಿಡುಗಡೆಯಾಗುವುದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂಬ ವಾದ ಮುಂದಿಡುತ್ತಿದ್ದಾರೆ.

ನಿಜಕ್ಕೂ ಬಿಜೆಪಿ ಪಕ್ಷಕ್ಕೂ ಆ ಸಿನಿಮಾಗೂ ಯಾವ ನಂಟೂ ಇಲ್ಲವೇ? ಬನ್ನಿ ಒಂದೊಂದಾಗಿ ನೋಡೋಣ…..

ಮಹಾರಾಷ್ಟ್ರ ಸಿಎಂ ಫಡ್ನವೀಸ್ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು

ನಿರ್ಮಾಣದಿಂದಲೇ ಶುರು ಮಾಡೋಣ. ಆ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾದದ್ದು ಇದೇ ವರ್ಷದ ಜನವರಿ 7 ರಂದು, ಮುಂಬೈನಲ್ಲಿ. ಬಿಡುಗಡೆ ಮಾಡಿದ್ದು ಮಹಾರಾಷ್ಟ್ರದ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್! ಬಿಜೆಪಿ ನಂಟೇ ಇರದಿದ್ದರೆ ಬಿಜೆಪಿ ರಾಜಕಾರಣಿ ಯಾಕೆ ಬಿಡುಗಡೆ ಮಾಡುತ್ತಿದ್ದರು?

ಇನ್ನು ಸಿನಿಮಾದ ಶೂಟಿಂಗ್ ಶುರುವಾದದ್ದು ಜನವರಿ 28ರಂದು. ಅದಾಗಿ ಸರಿಯಾಗಿ ನಲವತ್ತೆರಡು ದಿನಗಳಿಗೆ ಚಿತ್ರತಂಡ ರಿಲೀಸಿಂಗ್ ದಿನಾಂಕವನ್ನೇ ಪ್ರಕಟಿಸುತ್ತೆ. ಅದ್ಯಾವಾಗ ಏಪ್ರಿಲ್ 12ಕ್ಕೆ. ಅಂದರೆ ಶೂಟಿಂಗ್ ಶುರುವಾಗಿ ಕೇವಲ ಎರಡೂವರೆ ತಿಂಗಳಿಗೆ ಪ್ರಿ-ಪ್ರೊಡಕ್ಷನ್, ಪೋಸ್ಟ್-ಪ್ರೊಡಕ್ಷನ್ ಎಲ್ಲವನ್ನೂ ಮುಗಿಸಿ ಸಿನಿಮಾ ಸಿದ್ಧವಾಗಿಬಿಡುತ್ತೆ! ಬಿಜೆಪಿ ಎದುರಿಸ ಹೊರಟಿರುವ ಚುನಾವಣೆಯೇ ಈ ಸಿನಿಮಾದ ಆತುರದ ಪ್ರೊಡಕ್ಷನ್ ಕೆಲಸಕ್ಕೆ ಕಾರಣವಾ?

ಇನ್ನು ಸಿನಿಮಾ ರಿಲೀಸ್ ಆಗುತ್ತಿರೋದು ಹಿಂದಿ ಭಾಷೆಯಲ್ಲಿ ಮಾತ್ರ ಎಂದು ತಿಳಿದು ಬಂದಿದೆ. ಆದರೆ ಪೋಸ್ಟರ್ ರಿಲೀಸ್ ಆಗಿರೋದು 23 ಭಾರತೀಯ ಭಾಷೆಗಳಲ್ಲಿ. ಸಿನಿಮಾವೇ ತಯಾರಾಗದ ಭಾಷೆಯಲ್ಲೂ ಪೋಸ್ಟರ್‌ಗಳ ಅಗತ್ಯವೇನಿತ್ತು? ಇದು ಪ್ರಚಾರ ತಂತ್ರದ ಭಾಗ ಎನಿಸುವುದಿಲ್ಲವೇ, ಸಿನಿಮಾ ಪ್ರಚಾರವಲ್ಲ, ರಾಜಕೀಯ ಪ್ರಚಾರ!

ಇನ್ನು ಈ ಸಿನಿಮಾ ತಯಾರಕರ ವಿಚಾರಕ್ಕೆ ಬರೋಣ. ಮೊದಲು ನಟನಿಂದಲೇ ಶುರು ಮಾಡೋಣ. ಇದರಲ್ಲಿ ಮೋದಿಯವರ ಪಾತ್ರ ಮಾಡುತ್ತಿರೋದು ಬಾಲಿವುಡ್ ನಟ ವಿವೇಕ್ ಒಬೆರಾಯ್. ಈತ ಬಿಜೆಪಿಯ ಅಧಿಕೃತ ಸದಸ್ಯನಲ್ಲದೇ ಹೋದರು, ಬಿಜೆಪಿಯ ರೆಗ್ಯುಲರ್ ಸ್ಟಾರ್ ಪ್ರಚಾರಕ. 2014ರಲ್ಲಿ ಈತ ಮೋದಿಯವರ ಬಿಜೆಪಿ ಪರವಾಗಿ ಮಹಾರಾಷ್ಟ್ರದ ನಕ್ಸಲ್‌ಪೀಡಿತ ಜಿಲ್ಲೆಯಾದ ಗಡ್ಚರೋಲಿಯಲ್ಲಿ ಮತ್ತು ಉತ್ತರಪ್ರದೇಶದ ಘಜಿಯಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳಿಗಾಗಿ ಮತ ಯಾಚಿಸಿದ್ದರು.

ಬಿಜೆಪಿ ಕಮಲ ಲಾಂಛನದೊಂದಿಗೆ ಪ್ರಮಾಣವಚನದಲ್ಲಿ

ಇನ್ನು ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೂ ಈತನಿಗೆ ಆತ್ಮೀಯ ಆಹ್ವಾನವಿತ್ತು. ಅವತ್ತಿನ ಸಮಾರಂಭದಲ್ಲಿ ವಿವೇಕ್ ಒಬೆರಾಯ್ ಅಲ್ಲದೆ ಬೇರೆ ಸಾಕಷ್ಟು ಸಿನಿಮಾ ನಟರು ಭಾಗವಹಿಸಿದ್ದರು ಎಂದು ತಳ್ಳಿಹಾಕಲಿಕ್ಕಾಗುವುದಿಲ್ಲ. ಯಾಕೆಂದರೆ ವಿವೇಕ್ ಅವತ್ತು ತನ್ನ ಎದೆಯ ಮೇಲೆ ಬಿಜೆಪಿ ಚಿಹ್ನೆಯಾದ ಕಮಲದ ಗುರುತನ್ನು ಧರಿಸಿ ಬಿಜೆಪಿ ಜೊತೆಗಿನ ತನ್ನ ನಿಕಟತೆಯನ್ನು ಪ್ರದರ್ಶಿಸಿದ್ದರು. ಅಂದಹಾಗೆ ವಿವೇಕ್ ಒಬೆರಾಯ್ 2013ರಲ್ಲೇ (ಅಂದರೆ ಮೋದಿಯವರು 2014ರ ಚುನಾವಣಾ ತಯಾರಿಯಲ್ಲಿದ್ದಾಗಲೇ) ಮೋದಿ ಕುರಿತ ಸಿನಿಮಾದಲ್ಲಿ ಮೋದಿ ಪಾತ್ರ ಮಾಡುತ್ತಿರುವುದಾಗಿ ಹೇಳಿದ್ದಾಗಿ ಔಟ್‌ಲುಕ್ ವರದಿ ಮಾಡಿತ್ತು. ಅಂದರೆ ವಿವೇಕ್‌ನ ಪ್ರಕಾರ ಮೋದಿ ಸಿನಿಮಾ ಚುನಾವಣಾ ಸಂದರ್ಭದಲ್ಲೇ ಕದಲಿಕೆ ಕಾಣುತ್ತದೆ ಎಂಬುದು ಇದರಿಂದ ಅರ್ಥವಾಗುತ್ತೆ.

ಈಗ ನಿರ್ಮಾಪಕರ ವಿಚಾರಕ್ಕೆ ಬಂದರೆ, ಈ ಸಿನಿಮಾದ ಇಬ್ಬರು ನಿರ್ಮಾಪಕರಲ್ಲಿ ಒಬ್ಬರು ಈ ವಿವೇಕ್‌ನ ತಂದೆ ಸುರೇಶ್ ಒಬೆರಾಯ್! ಈತ 2004ರಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಅಲ್ಲಿಂದ ಇಲ್ಲಿವರೆಗೂ ಸುರೇಶ್, ಬಿಜೆಪಿ ಸಕ್ರಿಯ ಸದಸ್ಯ ಮತ್ತು ಮಗನಂತೆ  ತಾನೂ ಬಿಜೆಪಿಯ ಸ್ಟಾರ್ ಪ್ರಚಾರಕ!

ಸುರೇಶ್ ಒಬೆರಾಯ್ 2004ರಲ್ಲಿ ಬಿಜೆಪಿ ಸೇರ್ಪಡೆ

ಇನ್ನು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿರೋದು ಓಮಂಗ್ ಕುಮಾರ್ ಎಂಬ ಪ್ರತಿಭಾವಂತ ನಿರ್ದೇಶಕ. ಜೀವನಚರಿತ್ರೆಗಳನ್ನು ಚಿತ್ರವಾಗಿಸುವುದರಲ್ಲಿ ನಿಸ್ಸೀಮ. ಈ ಹಿಂದೆ ‘ಸರಬ್ಜಿತ್’ ಮತ್ತು ‘ಮೇರಿ ಕೋಮ್’ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದವರು. ಇವರು ನಟ, ನಿರ್ಮಾಪಕನಷ್ಟು ಬಿಜೆಪಿ ಸಖ್ಯ ಹೊಂದಿಲ್ಲವಾದರು ಇವರ ‘ಸರಬ್ಜಿತ್’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದು ಬಿಜೆಪಿಯ ಅಮಿತ್ ಶಾ ಮತ್ತು ನಿತಿನ್ ಗಡ್ಕರಿ. ಅಷ್ಟಕ್ಕೇ ಆತನಿಗೆ ಬಿಜೆಪಿ ನಂಟು ಥಳುಕು ಹಾಕಲಾಗದು. ಆದರೂ ಮೋದಿಯವರ ಬಯೋಪಿಕ್ ತಯಾರಾದ ಸಂದರ್ಭ, ಧಾವಂತ, ರಾಜಕೀಯ ಲಿಂಕ್‌ಗಳನ್ನು ಗಮನಿಸಿದರೆ ಒಮಂಗ್‌ನ ಈ ಸಣ್ಣ ನಂಟನ್ನೂ ಅನುಮಾನದಿಂದಲೇ ನೋಡಬೇಕಾಗುತ್ತೆ. ಅಂದಹಾಗೆ, 2015ರಲ್ಲಿ ಈತನ ‘ಮೇರಿ ಕೋಮ್’ ಸಿನಿಮಾಗೆ ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಇವೆಲ್ಲವೂ ಕಾಕತಾಳೀಯ ಎನ್ನುವಂತೆ ಕಂಡರೂ, ನಂಬಲು ಹರಸಾಹಸ ಪಡುವಂಥ ವಾತಾವರಣ ಈಗ ದೇಶದಲ್ಲಿ ನಿರ್ಮಾಣವಾಗಿದೆ.

ಒಮಂಗ್ ಕುಮಾರ್ ಅಮಿತ ಶಾ, ಗಡ್ಕರಿ ಜೊತೆ

ಆದರ್ಶ ರಾಜಕಾರಣ ಮಾಡುವುದೇ ನಿಜವಾದರೆ ಮೋದಿಯವರ ಮೇಲೆ ಈಗ ದೊಡ್ಡ ಹೊರೆ ಇದೆ. ಅದು ಅವರದೇ ಸಿನಿಮಾ ಆಗಿರೋದ್ರಿಂದ ಅವರ ಅನುಮತಿ ಅತ್ಯಮೂಲ್ಯ, ಕಥೆಗೂ ಮತ್ತು ಬಿಡುಗಡೆಗೂ. ಅವರು ಈ ಕೂಡಲೇ ಸಿನಿಮಾ ತಂಡಕ್ಕೆ ‘ಚುನಾವಣಾ ನೀತಿ ಸಂಹಿತೆ ಮುಗಿಯವವರೆಗೆ ರಿಲೀಸ್ ಮಾಡಬೇಡಿ’ ಎಂದು ಹೇಳಬೇಕಿದೆ. ಅದನ್ನು ಬಿಟ್ಟು, ಇದು ಸಿನಿಮಾ ತಂಡಕ್ಕೂ ಚುನಾವಣಾ ಆಯೋಗಕ್ಕು ಸಂಬಂಧಿಸಿದ ವಿಷಯ ನಾನೇಗೆ ಮಧ್ಯಪ್ರವೇಶಿಸಲಿ ಎಂಬ ಕುಂಟು ನೆಪ ಹೇಳಿದರೆ, ಆ ಸಿನಿಮಾದಿಂದ ಲಾಭ ಪಡೆಯಲು ಅವರು ಯೋಚಿಸಿದ್ದಾರೆ ಎಂದು ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತಾಗುತ್ತೆ.

ಯಾಕೆಂದರೆ, ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ಉತ್ತರಾಖಂಡ್ ರಾಜ್ಯಗಳ ಚುನಾವಣಾ ಸೋಲುಗಳ ನಂತರ ತನ್ನ ವರ್ಚಸ್ಸು ವೃದ್ದಿಸಿಕೊಳ್ಳುವ ಯಾವ ಅವಕಾಶವನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ……

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ | Naanu Gauri

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ

0
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) 159 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹೆಸರಿಸಲಾದ ಪ್ರಮುಖ ಮುಖಗಳಲ್ಲಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು...
Wordpress Social Share Plugin powered by Ultimatelysocial
Shares