Homeಮುಖಪುಟದರ್ಶನ್‍ಗೆ ಧಿಕ್ಕಾರ, ಏನಿದರ ಹುನ್ನಾರ?

ದರ್ಶನ್‍ಗೆ ಧಿಕ್ಕಾರ, ಏನಿದರ ಹುನ್ನಾರ?

- Advertisement -
  • ಗಿರೀಶ್ ತಾಳಿಕಟ್ಟೆ |

ಇತ್ತೀಚೆಗೆ ನಟ ದರ್ಶನ್ ಸಿಎಂ ಸಿದ್ರಾಮಯ್ಯ ಪರ ಪ್ರಚಾರ ಮಾಡಲು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋದಾಗ ಒಂದಷ್ಟು ಜೆಡಿಎಸ್ ಕಾರ್ಯಕರ್ತರ ದಂಡು ದರ್ಶನ್‍ಗೆ ಧಿಕ್ಕಾರ ಕೂಗಿತ್ತು, ಹಾಗೆ ಧಿಕ್ಕಾರ ಕೂಗಲು ಆ ಪ್ರತಿಭಟನಾಕಾರರ ಬಳಿ ಇದ್ದದ್ದು ಎರಡು ಆಪಾದನೆಗಳು. ಮೊದಲನೆಯದ್ದು, ಎಲ್ಲಾ ಪಕ್ಷದಲ್ಲೂ ದರ್ಶನ್ ಅಭಿಮಾನಿಗಳು ಇರೋದ್ರಿಂದ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡಬಾರದು. ಎರಡನೆಯದ್ದು, ಕಾವೇರಿ ವಿವಾದದಲ್ಲಿ ದರ್ಶನ್ ಏನೂ ಮಾಡದಿರುವುದರಿಂದ ಆತನಿಗೆ ಮತ ಕೇಳುವ ಹಕ್ಕಿಲ್ಲ!

ಒನ್ಸ್ ಎಗೇನ್, ಇವೆರಡೂ ಕಾರಣಗಳು ಜಸ್ಟ್ ನೆಪವಷ್ಟೇ. ಇವುಗಳ ಹಿಂದೆ ಇರೋದು ಮತ್ತದೇ ಪೊಲಿಟಿಕ್ಸ್, ಅದರಲ್ಲೂ ಜೆಡಿಎಸ್‍ನ ಜಾತಿ ಪೊಲಿಟಿಕ್ಸ್! ಮೊದಲನೇ ಕಾರಣವನ್ನೇ ತೆಗೆದುಕೊಳ್ಳೋಣ. ದರ್ಶನ್‍ಗಿರುವ ಪಕ್ಷಾತೀತ ಅಭಿಮಾನಿಗಳ ಕಾಳಜಿಯಿಂದ ಈ ಮಾತು ಹೇಳುವುದೇ ಆಗಿದ್ದರೆ, ಒಂದು ತಟಸ್ಥ ಅಭಿಮಾನಿ ಸಮೂಹವಾಗಿ ಅಂತಹ ಪ್ರತಿರೋಧವನ್ನು ಹೊರಹಾಕಬೇಕಿತ್ತು. ಅದನ್ನು ಬಿಟ್ಟು ಜೆಡಿಎಸ್ ಅನ್ನೊ ಒಂದು ಪೊಲಿಟಿಕಲ್ ಪಾರ್ಟಿಯ ಬ್ಯಾನರ್‍ನಡಿ, ಆ ಪಕ್ಷದ ಕಾರ್ಯಕರ್ತರಾಗಿ ಎದುರಾಳಿ ಪಕ್ಷದ ಪ್ರಚಾರ ಮಾಡಬೇಡ ಎಂದು ಅಭಿಮಾನವನ್ನು ಮುಂದೆ ಮಾಡೋದೇ ಒಂದರ್ಥದಲ್ಲಿ ಸಾಂಸ್ಕೃತಿಕ ಬೆದರಿಕೆ ಹಾಕಿದಂತೆ.

ಇನ್ನು ಎರಡನೇ ಕಾರಣವೂ ಅಷ್ಟೇ ಸವಕಲು. ಕಾವೇರಿ ವಿವಾದದಲ್ಲಿ ಏನನ್ನಾದರು ಮಾಡಲು ಪಾಪ ದರ್ಶನ್ ಚುನಾಯಿತ ಜನಪ್ರತಿನಿಧಿಯೇನಲ್ಲ. ಒಬ್ಬ ಕಲಾವಿದನಾಗಿ, ತನ್ನ ಕಲಾಬಳಗದ ಜೊತೆಗೂಡಿ ಯಾವ ಪ್ರತಿಭಟನೆಯನ್ನು ದಾಖಲಿಸಬೇಕಿತ್ತೊ ಅದನ್ನು ದರ್ಶನ್ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಿನದನ್ನು ಆತನಿಂದ ನಿರೀಕ್ಷಿಸಲಿಕ್ಕಾಗದು. ಈಗ ಆತನ ಪ್ರಚಾರಕ್ಕೆ ಆ ನೆಪವಿಟ್ಟುಕೊಂಡು ಅಡ್ಡಿಪಡಿಸೋದು ರಾಜಕಾರಣವಲ್ಲದೆ ಮತ್ತೇನೂ ಅಲ್ಲ.

ಅಭಿಮಾನವನ್ನು ಅಡ್ಡವಿಟ್ಟುಕೊಂಡು ದರ್ಶನ್ ಪ್ರಚಾರಕ್ಕೆ ಅಡ್ಡಿಪಡಿಸೋ ದರ್ದು ಜೆಡಿಎಸ್‍ಗೆ ಏನಿತ್ತು ಅಂತ ಕೆದಕಲು ಶುರು ಮಾಡಿದರೆ ಚಾಮುಂಡೇಶ್ವರಿ ಕ್ಷೇತ್ರದ ಜಾತಿ ಚುನಾವಣೆಯ ರಂಗು ತೆರೆದುಕೊಳ್ಳುತ್ತೆ. ದೇವೇಗೌಡರ ಕುಟುಂಬದ ವೈಯಕ್ತಿಕ ಸಿಟ್ಟಿಗೆ ತುತ್ತಾಗಿರುವ ಸಿದ್ರಾಮಯ್ಯರನ್ನು ಸೋಲಿಸಲು ಚಾಮುಂಡೇಶ್ವರಿಯಲ್ಲಿ ಭರ್ಜರಿ ಜಾತಿ ರಣತಂತ್ರವನ್ನೇ ಹೆಣೆಯಲಾಗಿದೆ. ಸಿದ್ರಾಮಯ್ಯ ರನ್ನು ಒಕ್ಕಲಿಗರ ವಿರೋಧಿಯಂತೆ ಬಿಂಬಿಸಿ ಕ್ಷೇತ್ರದಲ್ಲಿರುವ ಒಕ್ಕಲಿಗರ ನಡುವೆ ಒಂದು ಬಗೆಯ ಕಡುಕೆಟ್ಟ ಉನ್ಮತ್ತ ಒಗ್ಗಟ್ಟನ್ನು ಹುಟ್ಟಿಸಲಾಗಿದೆ. ಹೀಗೆ ಜಾತಿ ರಾಜಕಾರಣವನ್ನು ರೊಚ್ಚಿಗೆಬ್ಬಿಸದಿದ್ದರೆ ಚಾಮುಂಡೇಶ್ವರಿಯಲ್ಲಿ ಸಿದ್ರಾಮಯ್ಯರನ್ನು ಮಣಿಸೋದು ಕಷ್ಟ ಅನ್ನೋದು ಜೆಡಿಎಸ್ ಅಭ್ಯರ್ಥಿ ಜಿ,ಟಿ,ದೇವೇಗೌಡರಿಗೆ ಸ್ಪಷ್ಟವಾಗಿತ್ತು. ಯಾಕೆಂದರೆ 2006ರ ಉಪಚುನಾವಣೆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್ ಪಾರ್ಟಿಗಳು ಜಂಟಿಯಾಗಿ ಸಿದ್ರಾಮಯ್ಯರನ್ನು ಸೋಲಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಿರಲಿಲ್ಲ. ಆ ಮಟ್ಟಕ್ಕೆ ಸಿದ್ರಾಮಯ್ಯ ಚಾಮುಂಡೇಶ್ವರಿಯಲ್ಲಿ ತಮ್ಮದೇ ಮತಬ್ಯಾಂಕ್ ಹೊಂದಿದ್ದಾರೆ. ಅಂತದ್ದರಲ್ಲಿ ಈಗ ಸಿಎಂ ಆಗಿರುವ ಅವರನ್ನು ಅಲ್ಲಿ ಸೋಲಿಸೋದು ಅಂದ್ರೆ ಸುಮ್ನೇ ಮಾತಾ?

ಅದೇ ಕಾರಣಕ್ಕೆ ಒಕ್ಕಲಿಗ ಜಾತಿ ಕೆಮಿಸ್ಟ್ರಿಯನ್ನೇ ಜೆಡಿಎಸ್ ಅಲ್ಲಿ ವಿಪರೀತ ನಂಬಿ ಕೂತಿದೆ. ದರ್ಶನ್ ಬಂದು ಪ್ರಚಾರ ಮಾಡಿದರೆ ಒಕ್ಕಲಿಗರ ಜಾತಿ ಮತಗಳ ಈ ಕಟ್ಟು ಮುಕ್ಕಾಗಿ ಬಿಡುತ್ತೆ ಎಂಬ ಆತಂಕ ಜೆಡಿಎಸ್ ಅಭ್ಯರ್ಥಿಗೆ ಶುರುವಾಗಿದ್ದೇ ಈ ಪ್ರತಿಭಟನೆ ಹಿಂದಿರುವ ಅಸಲೀ ಕಾರಣ. ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಭಾವಿ ಎನಿಸಿಕೊಂಡಿರುವ ಒಕ್ಕಲಿಗರಿಗೆ, ಅದರಲ್ಲೂ ಒಕ್ಕಲಿಗ ಸಮುದಾಯದ ಯುವಜನರಿಗೆ ದರ್ಶನ್ ಎಂದರೆ ಐಕಾನ್ ಇದ್ದಂತೆ. ಆತ ಒಮ್ಮೆ ಕೈಬೀಸಿದರೆ ಅಭಿಮಾನದ ಹುಚ್ಚು ಹೊಳೆಯಲ್ಲಿ ಅವರೆಲ್ಲಿ ಕೊಚ್ಚಿ ಹೋಗುತ್ತಾರೋ ಎಂಬ ಆತಂಕ ಆ ಪ್ರತಿಭಟನೆಯನ್ನು ಆಯೋಜಿಸಿದೆ.

ವಿಪರ್ಯಾಸವೆಂದರೆ, ನಟ ದರ್ಶನ್ ಒಕ್ಕಲಿಗ ಸಮುದಾಯದವರೇ ಅಲ್ಲ. ಆತ ಬಲಿಜ ಜಾತಿಯವ. ಆದಾಗ್ಯೂ ಒಕ್ಕಲಿಗರ ಸಾಂಸ್ಕøತಿಕ ಐಕಾನ್‍ನಂತಿರುವ ಅಂಬರೀಷ್‍ರ ಸಿನಿ ಹೀರೊ ವ್ಯಾಕ್ಯೂಮನ್ನು ತುಂಬಿದ ಬದಲೀ ನಟನಾಗಿ ದರ್ಶನ್ ತನ್ನನ್ನು ತಾನು ಬಿಂಬಿಸಿಕೊಂಡರೆ, ಅದಕ್ಕೆ ತಕ್ಕಂತೆ ದರ್ಶನ್‍ರ ಸಿನಿ ಪಯಣದ ಮೊದಲ ದಿನದಿಂದ ಇಲ್ಲಿಯವರೆಗೂ ಅಂಬರೀಶ್ ಆತನ ಗಾಡಫಾದರ್‍ನಂತೇ ವರ್ತಿಸಿದ್ದಾರೆ. ಹಾಗಾಗಿ ಒಕ್ಕಲಿಗ ಸಿನಿ ಪ್ರಿಯರು ಅಂಬರೀಷ್ ಮೇಲಿಟ್ಟಿದ್ದ ಅಷ್ಟೂ ಅಭಿಮಾನವನ್ನು ದರ್ಶನ್‍ಗೂ ಹರಿಸಿದ್ದಾರೆ. ಯಾವ ಮಟ್ಟಕ್ಕೆಂದರೆ, ದರ್ಶನ್‍ರನ್ನು ಒಕ್ಕಲಿಗ ಅಂತಲೇ ಸುಮಾರಷ್ಟು ಮಂದಿ ಭ್ರಮಿಸುವಷ್ಟರ ಮಟ್ಟಿಗೆ ಗೊಂದಲ ಗೂಡುಕಟ್ಟಿದೆ. ಇದೇ ಗೊಂದಲ ಎಲ್ಲಿ ತಮ್ಮ ಜಾತಿ ರಾಜಕಾರಣವನ್ನು ದಿಕ್ಕೆಡಿಸಿಬಿಡುತ್ತೋ ಎಂಬ ಭಯ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಪಾಳಯವನ್ನು ಕಾಡಿದೆ. ಅದರ ಫಲವಾಗಿಯೇ ಅಭಿಮಾನ, ಕಾವೇರಿ ವಿವಾದಗಳನ್ನು ಮುಂದಿಟ್ಟುಕೊಂಡು ದರ್ಶನ್‍ಗೆ ಧಿಕ್ಕಾರದ ಕೂಗು ಹುಟ್ಟಿಕೊಂಡಿದೆ.

ಈ ಸಿನಿ ಮಂದಿ ಪ್ರಸ್ತುತ ರಾಜಕೀಯದ ಅರಿವು ಇಲ್ಲದೆ, ಸೈದ್ಧಾಂತಿಕ ಬದ್ಧತೆ ಇಲ್ಲದೆ ಹತ್ತು ಹಲವು ಮರ್ಜಿಗಳಿಗೆ ಕಟ್ಟುಬಿದ್ದು ಬಣ್ಣದ ಬೊಂಬೆಯಂತೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸೋದು ಎಷ್ಟು ಅಸಮಂಜಸವೋ, ರಾಜಕೀಯ ಲೆಕ್ಕಾಚಾರದ ಕಾರಣಕ್ಕೆ ಅಭಿಮಾನವನ್ನು ನೆಪ ಮಾಡಿಕೊಂಡು ಅದೇ ಸಿನಿ ಮಂದಿಯ ಚುನಾವಣಾ ಪ್ರಚಾರಕ್ಕೆ ಅಡ್ಡಿ ಮಾಡೋದು ಕೂಡಾ ಅಷ್ಟೇ ಅಸಂಬದ್ಧ ರಾಜಕಾರಣ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್‌ ಮೈದಾನ ಸಜ್ಜು, ಸಾರ್ವಜನಿಕರಿಗಿಲ್ಲ ಪ್ರವೇಶ

0
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ  ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ...
Wordpress Social Share Plugin powered by Ultimatelysocial
Shares