Homeಮುಖಪುಟ‘ಮಧ್ಯಂತರ ಚುನಾವಣೆ ಗ್ಯಾರಂಟಿ’: ದೇವೇಗೌಡರ ಶಾಕಿಂಗ್ ಸ್ಟೇಟ್‌ಮೆಂಟ್‌ನ ಪರಿಣಾಮ ಏನಾಗಬಹುದು?

‘ಮಧ್ಯಂತರ ಚುನಾವಣೆ ಗ್ಯಾರಂಟಿ’: ದೇವೇಗೌಡರ ಶಾಕಿಂಗ್ ಸ್ಟೇಟ್‌ಮೆಂಟ್‌ನ ಪರಿಣಾಮ ಏನಾಗಬಹುದು?

- Advertisement -

| ಗಿರೀಶ್ ತಾಳಿಕಟ್ಟೆ |

ಹಗ್ಗದ ಮೇಲೆ ನಡೆದಷ್ಟು ನಾಜೂಕಾಗಿ ತೂಗಾಡುತ್ತಿರುವ ರಾಜ್ಯ ಮೈತ್ರಿ ಸರ್ಕಾರದ ಮೇಲೆ ಇದೀಗ ಇನ್ನೊಂದು ತೂಗುಗತ್ತಿ ಬಿದ್ದಿದೆ. ಸೀರಿಯಸ್ ವಿಷಯ ಅಂದ್ರೆ, ಆ ತೂಗುಗತ್ತಿಯನ್ನು ಗುರಿಯಿಟ್ಟು ಬಿಸಾಡಿರೋದು ಮಾಜಿ ಪ್ರಧಾನಿ ದೇವೇಗೌಡ್ರು. ಇವತ್ತು ಮಾಧ್ಯಮದವರ ಜೊತೆ ಮಾತನಾಡುತ್ತ ಮಧ್ಯಂತರ ಚುನಾವಣೆ ನಡೆಯೋದರ ಬಗ್ಗೆ ಡೌಟೇ ಬೇಡ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅದು ಬ್ರೇಕಿಂಗ್ ನ್ಯೂಸ್ ಆಗುವ ಸುಳಿವು ಸಿಗುತ್ತಿದ್ದಂತೆಯೇ ಸ್ಪಷ್ಟೀಕರಣ ಕೊಟ್ಟಿರುವ ಅವರು ಇಲ್ಲ ನನ್ನ ಮಾತನ್ನು ತಪ್ಪಾಗಿ ಅರ್ಥೈಸಬೇಡಿ. ನಾನು ಹೇಳಿದ್ದು ಲೋಕಲ್ ಬಾಡಿ ಎಲೆಕ್ಷನ್ ಬಗ್ಗೆಯೇ ಹೊರತು, ರಾಜ್ಯ ವಿಧಾನಸಭೆ ಕುರಿತಂತೆ ಅಲ್ಲ. ಕುಮಾರಸ್ವಾಮಿಯವರು ಹೇಳಿದಂತೆ ಈ ಸರ್ಕಾರ ಇನ್ನು ನಾಲ್ಕು ವರ್ಷ ನಿರಾತಂಕವಾಗಿ ಮುಂದುವರೆಯಲಿದೆ ಎಂದು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

ಆದ್ರೆ, ದೇವೇಗೌಡ್ರು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಾ ಆಡಿದ್ದ ಸಂಪೂರ್ಣ ಮಾತುಗಳನ್ನು ಕೇಳಿಸಿಕೊಂಡವರಿಗೆ ಅವರು ರಾಜ್ಯ ವಿಧಾನಸಭೆ ಗಮನದಲ್ಲಿಟ್ಟುಕೊಂಡೇ ಹೇಳಿರೋದು ಎಂಬುದು ಖಾತ್ರಿಯಾಗುತ್ತದೆ. ಯಾಕೆಂದರೆ ಮಧ್ಯಂತರ ಚುನಾವಣೆಯ ಮಾತನ್ನು ಮುಂದುವರೆಸುತ್ತಾ ಮಧ್ಯಂತರ ಚುನಾವಣೆ ನಡೆಯೋದ್ರ ಬಗ್ಗೆ ಡೌಟೇ ಬೇಡ. ಅವರು (ಕಾಂಗ್ರೆಸ್) ಐದು ವರ್ಷ ಸಪೋರ್ಟ್ ಮಾಡ್ತೀವಿ ಅಂತ ಹೇಳಿದ್ದ್ರು, ಆದ್ರೆ ಅವರು ಈಗ ಹೇಗೆ ವರ್ತಿಸ್ತಿದಾರೆ ನೋಡಿ. ನಮ್ಮ ಜನ ಬುದ್ದಿವಂತರು. ಎಲ್ಲವನ್ನೂ ಗಮನಿಸ್ತಾ ಇರ್‍ತಾರೆ. ನಾವೇನು ಮೈತ್ರಿ ಮಾಡಿಕೊಳ್ಳಿ ಅಂತ ಕೇಳಿರಲಿಲ್ಲ. ನನ್ನ ಮಗನನ್ನೇ (ಕುಮಾರಸ್ವಾಮಿ) ಮುಖ್ಯಮಂತ್ರಿ ಮಾಡಿ ಅಂತಾನು ಕೇಳಿರಲಿಲ್ಲ. ಅವರೇ (ಕಾಂಗ್ರೆಸ್) ನನ್ನನ್ನು ಕರೆದ್ರು, ಸರ್ಕಾರ ರಚಿಸುವಂತೆ ಹೇಳಿದ್ರು. ನಾನು ನನ್ನ ಕೆಲಸ ಮುಂದುವರೆಸ್ತೀನಿ. ಯಾರನ್ನೂ ದೂಷಿಸೋದಕ್ಕೆ ಹೋಗಲ್ಲ ಎಂದಿದ್ದರು. ಅಲ್ಲಿಗೆ ದೇವೇಗೌಡರು ಯಾವ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡ್ತಾ ಇದಾರೆ ಅನ್ನೋದು ಖಾತ್ರಿ ಆಯ್ತು. ಅತ್ತ ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಲು ಕಲ್ಬುರ್ಗಿಗೆ ತೆರಳಿರುವ ವೇಳೆಯಲ್ಲಿ ಕ್ಯಾಪಿಟಲ್ ಸಿಟಿಯಲ್ಲಿ ಕೂತು ದೇವೇಗೌಡರು ಈ ಮಾತು ಹೇಳಿರೋದು ಕೇವಲ ಬಾಯಿ ತಪ್ಪಿ ಆಡಿದ ಮಾತಲ್ಲ. ಯಾಕೆಂದರೆ, ದೇವೇಗೌಡರು ಮಾತನಾಡೋದು ಕಮ್ಮಿ. ಆಡುವ ಮಾತನ್ನೂ ಬಲು ತೂಗಿಯೇ ಮಾತನಾಡಿರುತ್ತಾರೆ. ಲೋಕಲ್ ಬಾಡಿ ಎಲೆಕ್ಷನ್‌ಗಳ ಬಗ್ಗೆ ತಾನು ಮಾತನಾಡಿದ್ದು ಎಂಬುದಾಗಿ ದೇವೇಗೌಡರು ಕೊಟ್ಟಿರುವ ಸ್ಪಷ್ಟೀಕರಣರ ನೆಪ ಮಾತ್ರದ್ದಷ್ಟೆ. ಅದರ ಹಿಂದೆ ನಿರ್ದಿಷ್ಟ ಲೆಕ್ಕಾಚಾರಗಳಿವೆ. ಬಸವಳಿದು ಕೂತಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಸಿ ಮುಟ್ಟಿಸುವ ಸ್ಪಷ್ಟ ಇರಾದೆಯಿದೆ.

ಸಿದ್ದರಾಮಯ್ಯನ ದಿಲ್ಲಿ ಭೇಟಿಯ ತರುವಾಯ ಕೆಪಿಸಿಸಿಯನ್ನು ಹೆಚ್ಚೂಕಮ್ಮಿ ವಿಸರ್ಜಿಸಿ ಹೊಸ ಪದಾಧಿಕಾರಿಗಳ ಆಯ್ಕೆಗೆ ಹೈಕಮಾಂಡ್ ಸಿದ್ದುಗೆ ಗ್ರೀನ್ ಸಿಗ್ನಲ್ ಕೊಟ್ಟಿರುವುದರ ಉದ್ದೇಶ ದೇವೇಗೌಡರ ದೂರದೃಷ್ಟಿಗೆ ಸ್ಪಷ್ಟವಾಗಿ ಗೋಚರಿಸಿದೆ. ಪಕ್ಷ ಸಂಘಟನೆ ಅಂದ್ರೆ, ಅದು ಯುದ್ದ ಸನಿಹದ ಶಸ್ತ್ರಾಸ್ತ್ರಾಭ್ಯಾಸವಿದ್ದಂತೆ ಎಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ದೇವೇಗೌಡರು ದಡ್ಡರೇನಲ್ಲ. ಅದೂ ಅಲ್ಲದೆ ಮೈತ್ರಿಗೆ ಮೊದಲಿಂದಲೂ ಮಗ್ಗುಲ ಮುಳ್ಳಾಗಿ ಇರಿಯುತ್ತಿರುವ ಸಿದ್ರಾಮಯ್ಯ ‘ಮೈತ್ರಿಯಿಂದ ಏನೂ ಪ್ರಯೋಜನವಿಲ್ಲ’ ಎಂಬ ಹೇಳಿಕೆ ನೀಡಿದ್ದು ಅವರ ಅನುಮಾನವನ್ನು ಸ್ಪಷ್ಟವಾಗಿಸಿದೆ. ಒಂದುಕಡೆಯಿಂದ ದಾಳಿ ಶುರುವಾದ ಮೇಲೆ ಮತ್ತೊಂದು ಕಡೆಯಿಂದ ಪ್ರತಿದಾಳಿ ನಡೆಸಲೇಬೇಕಾಗುತ್ತೆ. ಮಧ್ಯಂತರ ಚುನಾವಣೆಗೆ ನೀವಷ್ಟೆ ಅಲ್ಲ, ನಾವೂ ತಯಾರಾಗಿದ್ದೇವೆ ಎಂಬ ಸೂಚ್ಯ ಮೆಸೇಜನ್ನು ದಿಲ್ಲಿ ಕೈ ನಾಯಕರಿಗೆ ರವಾನಿಸುವ ಇರಾದೆಯಿಂದಲೇ ದೇವೇಗೌಡರು ಈ ಬಾಣ ಬಿಟ್ಟಿದ್ದಾರೆ.

ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಕಡೆಗಣಿಸಿರುವ ಒಂದು ವಾಸ್ತವವಿದೆ. ತಾವು ಮೈತ್ರಿ ಮುರಿದುಕೊಂಡು ಸರ್ಕಾರವನ್ನು ಪತನಗೊಳಿಸಿದ ಕೂಡಲೇ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದುಬಿಡುತ್ತೆ ಎಂದುಕೊಂಡಂತಿವೆ. ಆದರೆ ಸೆಂಚುರಿ ಮೇಲೆ ಒಂದು ಅದ್ಭುತ ಬೌಂಡರಿ ಮೂಲಕ 104 ನಾಟ್‌ಔಟ್ ಪೊಸೀಷನ್‌ನಲ್ಲಿರುವ; ಅಂಪೈರ್ (ರಾಜ್ಯಪಾಲ), ಥರ್ಡ್ ಅಂಪೈರ್ (ಪ್ರಧಾನಿ), ಮ್ಯಾಚ್ ರೆಫರಿ (ರಾಷ್ಟ್ರಪತಿ) ಸೇರಿದಂತೆ ಸಮಸ್ತ ತನ್ನದೇ ಹೋಮ್‌ಗ್ರೌಂಡ್‌ನಲ್ಲಿ ಸಜ್ಜಾಗಿ ನಿಂತಿರುವ ಬಿಜೆಪಿ ಅಷ್ಟು ಸುಲಭವಾಗಿ ಮಧ್ಯಂತರ ಚುನಾವಣೆ ನಡೆಸಲು ಬಿಡುತ್ತಾ? ಖಂಡಿತ ಇಲ್ಲ. ಅವರೇ ಕಿತ್ತಾಡಿ ಸರ್ಕಾರ ಬೀಳಿಸಿಕೊಳ್ಳುವ ಸನಿಹಕ್ಕೆ ಬರುತ್ತಿದ್ದಾರೆ ಎಂದಕೂಡಲೇ ಅಖಾಡಕ್ಕಿಳಿಯುವ ಬಿಜೆಪಿ ಈಗ ಸಚಿವಗಿರಿ ಸಿಗದೆ ಅತೃಪ್ತರಾಗಿರುವ ಕೈ-ತೆನೆ ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚನೆಗೆ ಹಕ್ಕು ಮಂಡಿಸಿಬಿಡುತ್ತೆ.

ಮೇಲ್ನೋಟಕ್ಕೆ ಯಡಿಯೂರಪ್ಪನವರು ನಾವು ಆಪರೇಷನ್ ಕಮಲ ಮಾಡಲ್ಲ, ರಚನಾತ್ಮಕ ವಿರೋಧ ಪಕ್ಷವಾಗಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುತ್ತೇವೆ ಎಂದು ಈಗಾಗಲೇ ಅಹೋರಾತ್ರಿ ಧರಣಿಗಳನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ಸದ್ದಿಲ್ಲದೆ ಬಿಜೆಪಿ ಹೈಕಮಾಂಡ್, ಆಪರೇಷನ್ ಕಮಲ ನಡೆಸಲು ಯಡ್ಯೂರಪ್ಪನವರಿಗೆ ಲಾಸ್ಟ್ ಚಾನ್ಸ್ ನೀಡಿದ್ದು, ನಾವು ನೇರವಾಗಿ ಅಖಾಡಕ್ಕಿಳಿಯದೆ ದೂರದಲ್ಲೆ ನಿಂತು ಗೈಡ್ ಮಾಡುತ್ತೇವೆ, ಸಾಧಕ ಬಾಧಕಗಳನ್ನೆಲ್ಲ ಲೋಕಲ್ ಲೀಡರುಗಳೇ ಹೊತ್ತುಕೊಂಡು ಆಪರೇಷನ್ ನಡೆಸಬೇಕು ಎಂಬ ಗ್ರೀನ್ ಸಿಗ್ನಲ್ ನೀಡಿದೆ ಎಂಬ ವರ್ತಮಾನ ಬಿಜೆಪಿ ಮೂಲಗಳಿಂದಲೇ ಬೆಳಕಿಗೆ ಬಂದಿದೆ. ಈಚೆಗೆ ನಡೆದ ಲೋಕಸಭಾ ಎಲೆಕ್ಷನ್‌ನಲ್ಲಿ ಮೈತ್ರಿ ಅಖಾಡದ ಸುಮಾರು ಮೂವತ್ತು ಕಾಂಗ್ರೆಸ್-ಜೆಡಿಎಸ್ ಎಮ್ಮೆಲ್ಲೆಗಳು ಬೇರೆಬೇರೆ ಸ್ಥಳೀಯ ಕಾರಣಗಳಿಗಾಗಿ ಬಿಜೆಪಿಯನ್ನು ಬೆಂಬಲಿಸಿದ್ದರಿಂದಲೇ ೨೫ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದದ್ದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆ ಮೂವತ್ತು ಜನರು ಆಪರೇಷನ್ ಕಮಲಕ್ಕೆ ಈಡಾಗುವ ಸಂಭವ ಇಲ್ಲವಾದರು ಅದರಲ್ಲಿ ಅರ್ಧದಷ್ಟು ಜನರಾದರು ಬಿಜೆಪಿಯತ್ತ ಒಲವಿಟ್ಟುಕೊಂಡೇ ಈ ಪಕ್ಷದ್ರೋಹ ಬಗೆದಿರೋದು ಬಿಜೆಪಿಯ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿದೆಯಂತೆ.

ಇಂಥಾ ಸಮಯದಲ್ಲಿ ಕಾಂಗ್ರೆಸ್, ಜೆಡಿಎಸ್‌ಗಳು ಮಧ್ಯಂತರ ಚುನಾವಣೆಯ ಕನವರಿಸುತ್ತಾ ಒಬ್ಬರ ಕಾಲು ಮತ್ತೊಬ್ಬರು ಎಳೆದಾಡಿಕೊಳ್ಳುತ್ತಿರೋದು ಬಿಜೆಪಿ ಪಾಲಿಗೆ ‘ಲಡ್ಡು ಬಂದು ಬಾಯಿಗೆ ಬಿತ್ತು’ ಎಂಬಂತಾಗಿದೆ…

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial