Homeಮುಖಪುಟಕಾಂಗ್ರೆಸ್‍ಗೆ ಎಚ್ಚರ, ಪಕ್ಷ ಕಟ್ಟುವ ಫಜೀತಿ, ಸರ್ಕಾರದ ಉಳಿವಿಗಷ್ಟೇ ಮೈತ್ರಿ

ಕಾಂಗ್ರೆಸ್‍ಗೆ ಎಚ್ಚರ, ಪಕ್ಷ ಕಟ್ಟುವ ಫಜೀತಿ, ಸರ್ಕಾರದ ಉಳಿವಿಗಷ್ಟೇ ಮೈತ್ರಿ

- Advertisement -
| ಮಲ್ಲನಗೌಡರ್ |
ಮೇಲಿನ ತಲೆಬರಹದಷ್ಟೇ ಸಂಕೀರ್ಣವಾಗಿದೆ ರಾಜ್ಯದ ಸದ್ಯದ ರಾಜಕಾರಣ. ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಸ್ನೇಹ, ಮುನಿಸು, ಅಧಿಕಾರ ಪಾಲು, ಆಂತರಿಕ ಭಿನ್ನಮತ ಮತ್ತು ಪಕ್ಷಗಳ ಬಲವರ್ಧನೆ, ನಾಯಕರ ವೈಯಕ್ತಿಕ ಆಕಾಂಕ್ಷೆಗಳು- ಇವೆಲ್ಲವೂ ಸದ್ಯ ಮೇಲುನೋಟಕ್ಕೆ ಭಿನ್ನ ಆಯಾಮಗಳಂತೆ ಕಂಡು ಬಂದರೂ, ಇವೆಲ್ಲವೂ ಹಾಸು ಹೊಕ್ಕಾಗಿ ಒಂದರೊಳಗೊಂದು ಹೆಣೆದುಕೊಂಡಿವೆ. ಸದಾ ಅಧಿಕಾರ ಹಿಡಿಯುವ ಕಾರ್ಯಾಚರಣೆಯನ್ನು ಜೀವಂತವೇ ಇಟ್ಟಿರುವ ಬಿಜೆಪಿಗೆ, 25 ಸೀಟುಗಳ ದಿಗ್ವಿಜಯದ ನಂತರ ಹೈಕಮಾಂಡಿನಿಂದ ಬೆಂಬಲವೂ ಸಿಕ್ಕಂತಿದೆ. ಇಡೀ ರಾಜ್ಯದ ಬಹುಭಾಗದಲ್ಲಿ ನೀರಿನ ಕೊರತೆಯಿದೆ, ಮಳೆಯ ವಿಳಂಬದಿಂದಾಗಿ ಜೂನ್ ಮೂರನೇ ವಾರದಲ್ಲೂ ಬಿತ್ತನೆಯಾಗಿಲ್ಲ. ರಾಜಧಾನಿಯಲ್ಲಿ ಮಾತ್ರ ‘ಕುರ್ಚಿಗಾಗಿ ಕಾಳು ಹಾಕುವ’, ಕಾಲೆಳೆಯುವ ರಾಜಕಾರಣ ಎಗ್ಗಿಲ್ಲದೇ ಸಾಗಿದೆ.
ಸದ್ಯಕ್ಕೆ ಮುಖ್ಯ ಬೆಳವಣಿಗೆ ಎನಿಸಿದ್ದು ಎಐಸಿಸಿಯು ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿರುವುದು. ಇದರ ಜೊತೆಗೇ ಮೈತ್ರಿ ಸರ್ಕಾರವನ್ನು ಮುಂದುವರೆಸಿಕೊಂಡು ಹೋಗಲು ಸೂಚಿಸಿರುವುದು. ಕಾಂಗ್ರೆಸ್ ಹೈಕಮಾಂಡಿನ ಈ ನಡೆಯಿಂದ ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಪ್ರಾಬಲ್ಯ ಇನ್ನಷ್ಟು ಹೆಚ್ಚಿದೆ, ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯರ ಮಾತಿಗೆ ತಲೆದೂಗಿರುವ ಹೈಮಾಂಡ್ ಪಕ್ಷ ಕಟ್ಟುವ ಗಟ್ಟಿ ತೀರ್ಮಾನಕ್ಕೆ ಬಂದಿದೆ. ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರನ್ನು ಬಿಟ್ಟು ಎಲ್ಲ ಹಂತದ ಪದಾಧಿಕಾರಿಗಳಿಗೆ ಗೇಟ್ ತೋರಿಸಲಾಗಿದೆ. ದಶಕಗಳಿಂದ ಪಕ್ಷ ಸಂಘಟನೆ ಮಾಡದೇ ಬರೀ ಅಧಿಕಾರದ ಲಾಭ ಪಡೆಯುತ್ತಲೇ ಬಂದಿದ್ದ ಬಹುಪಾಲು ವಿಸರ್ಜಿತ ಪದಾಧಿಕಾರಿಗಳ ಜಾಗಕ್ಕೆ ನಿಷ್ಟಾವಂತ ಕಾರ್ಯಕರ್ತರನ್ನು ನೇಮಿಸುವ ಕೆಲಸ ನಿರಾಂತಕದ ವಿಷಯ ಅಲ್ಲವೇ ಅಲ್ಲ. ಇತ್ತ ಸಿದ್ದರಾಮಯ್ಯ ಪಕ್ಷ ಸಂಘಟನೆ ಜೊತೆಗೆ ತಮ್ಮ ಶಾಸಕರು ಬಿಜೆಪಿ ಆಮಿಷಕ್ಕೆ ಬೀಳದಂತೆ ತಡೆಯುವ, ಮೂಲ ಕಾಂಗ್ರೆಸ್ ನಾಯಕರ ಭಿನ್ನಮತವನ್ನು ತಡೆಯುವ ಜವಾಬ್ದಾರಿಗಳನ್ನು ತಾವೇ ಹೊತ್ತುಕೊಂಡು ಬಂದಿದ್ದಾರೆ.
ಮೈತ್ರಿಯಿಂದ ಕಾಂಗ್ರೆಸ್‍ಗೆ ನಷ್ಟ
ಇದನ್ನು ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಲೋಕಸಭೆಯಲ್ಲಿ ಮೈತ್ರಿ ಕಾರಣದಿಂದಾಗಿಯೇ ಕಾಂಗ್ರೆಸ್‍ಗೆ ದೊಡ್ಡ ಹಿನ್ನಡೆ ಆಗಿದ್ದು ಮತ್ತು ಅದರ ಲಾಭ ಬಿಜೆಪಿಗೆ ಹೋಗಿದ್ದು ಸತ್ಯ. ಹೀಗಾಗಿ ಮೈತ್ರಿ ಸರ್ಕಾರವನ್ನು ಕಾಪಾಡಿಕೊಂಡೇ, ಪಕ್ಷ ಸಂಘಟನೆ ಮಾಡುವತ್ತ ಕಾಂಗ್ರೆಸ್ ಹೆಜ್ಜೆ ಇಟ್ಟಿದೆ. ಆದರೆ, ಬಿಜೆಪಿಯ ಆಪರೇಷನ್ ಕಮಲ ಮುಂದುವರೆದೇ ಇರುವ ಹೊತ್ತಿನಲ್ಲಿ ಕಾಂಗ್ರೆಸ್ ತನ್ನ ಭಿನ್ನಮತೀಯ ಶಾಸಕರನ್ನು ಉಳಿಸಿಕೊಳ್ಳುವ ಕಸರತ್ತನ್ನೂ ಮಾಡಬೇಕಿದೆ. ಸದ್ಯಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಸರ್ಕಾರ ಬೀಳದೇ ಇದ್ದರೆ ಸಾಕು ಎಂಬ ಗುರಿಯಷ್ಟೇ ಇರುವಂತಿದೆ.
ಬಿಜೆಪಿ ಹೈಕಮ್ಯಾಂಡ್‍ನಿಂದ ಯಡ್ಡಿಗೆ ಗ್ರೀನ್ ಸಿಗ್ನಲ್?
ಲೋಕಸಭಾ ಚುನಾವಣೆಯ ಗೆಲುವು ಸಿಕ್ಕ ತಕ್ಷಣ ಭಾರೀ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಅದನ್ನು ಬಿಜೆಪಿ ನಾಯಕರು ಪದೇ ಪದೇ ಹೇಳಿಯೂ ಇದ್ದರು. ಆದರೆ, ಫಲಿತಾಂಶದ ನಂತರ ಅಂಥದ್ದೇನಕ್ಕೂ ಕೈ ಹಾಕಬೇಡಿ ಎಂದು ಹೈಕಮ್ಯಾಂಡ್ ಸೂಚಿಸಿದೆ ಎಂಬ ಮಾತನ್ನು ಸ್ವತಃ ಯಡಿಯೂರಪ್ಪ ಹೇಳಿದರು. ಕಾಂಗ್ರೆಸ್‍ನೊಳಗಿನಿಂದಲೇ ಸರ್ಕಾರ ಬೀಳಿಸುವ ಕೆಲಸ ನಡೆಯುವ ಸಾಧ್ಯತೆ ಇರುವಾಗ, ನಾವೇಕೆ ಕೆಟ್ಟ ಹೆಸರು ತಂದುಕೊಳ್ಳಬೇಕು ಎಂಬುದು ಬಿಜೆಪಿಯ ಇರಾದೆಯಾಗಿತ್ತು. ಆಪರೇಷನ್ ಮಾಡುವುದಕ್ಕಿಂತ ಚುನಾವಣೆಗೇ ಹೋದರೆ ಗೆಲುವು ಬಿಜೆಪಿಯದ್ದೇ ಎನ್ನುವ ಅನಿಸಿಕೆಯೂ ಆ ವಲಯಗಳಲ್ಲಿತ್ತು. ಹಾಗಾಗಿ ಕೆಡವುವುದಕ್ಕಿಂತ, ತಾನೇ ಬಿದ್ದು ಹೋಗಲಿ ಎಂದು ಕಾಯುವುದೇ ಸರಿ ಎಂಬುದು ಬಿಜೆಪಿಯ ನಾಯಕರ ತೀರ್ಮಾನವಾಗಿತ್ತು.
ಆದರೆ, ಅದಾಗಲಿಲ್ಲ. ಯಡಿಯೂರಪ್ಪನವರಿಗೂ ಸುಮ್ಮನೇ ಕೂರಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ‘ಆಪರೇಷನ್‍ಗೆ ಮುಂದಾಗಿ’ ಎಂಬ ಗ್ರೀನ್ ಸಿಗ್ನಲ್ ಬಂದಿದೆ ಎಂಬ ಸುದ್ದಿಗೆ ವಿಶೇಷ ಮಹತ್ವ ಬಂದಿದೆ. ಮಧ್ಯಂತರ ಚುನಾವಣೆ ಸದ್ಯಕ್ಕಂತೂ ಯಾರಿಗೂ ಬೇಡವಾಗಿದೆ. ಹಾಗಾಗಿ ಆಪರೇಷನ್ ನಡೆಯುವುದೇ ಲೇಸು ಎಂಬ ಪರಿಸ್ಥಿತಿ ಸದ್ಯಕ್ಕಿದೆ.
ಗ್ರಾಮ ವಾಸ್ತವ್ಯ ಜನಪ್ರಿಯತೆ ಮರಳಿ ಪಡೆಯುವುದಕ್ಕೋ, ಜನಪರ ಕೆಲಸ ಮಾಡುವುದಕ್ಕೋ?
ಕುಮಾರಸ್ವಾಮಿಯವರ ಮನೆ ಬಾಗಿಲಿಗೆ ಬರುವ ಜನರನ್ನು ಭೇಟಿ ಮಾಡುತ್ತಿದ್ದಾರಾದರೂ, ಅಧಿಕೃತ ಜನತಾದರ್ಶನವನ್ನು ನಡೆಸುತ್ತಿಲ್ಲ. ಗ್ರಾಮ ವಾಸ್ತವ್ಯವೂ ಇರುವುದಿಲ್ಲ ಎಂದು ಹೇಳಿದ್ದರು. ಆದರೀಗ, ಜನಪ್ರಿಯ ಕಾರ್ಯಕ್ರಮಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಬರದ ಬಿಸಿ ನಿವಾರಣೆಗೆ ಸರ್ಕಾರ ಪರಿಣಾಮಕಾರಿ ಕೆಲಸ ಮಾಡುವ ತುರ್ತಂತೂ ಈಗಿದೆ. ಆ ಮೂಲಕ ಜನರ ಹತ್ತಿರಕ್ಕೆ ಹೋಗುವ ಅವಕಾಶವೂ ಇದೆ. ಆದರೆ, ಅದನ್ನು ಮಾಡುತ್ತಾರಾ ಅಥವಾ ಪ್ರಚಾರವಷ್ಟೇ ನಡೆಯುತ್ತದಾ ಎಂಬುದನ್ನು ಕಾದು ನೋಡಬೇಕು.
ಸಿದ್ದರಾಮಯ್ಯನವರ ಡಬಲ್ ಕಷ್ಟ
ಮುಖ್ಯಮಂತ್ರಿಯಾಗಿ ಇಳಿದಿರುವ ಸಿದ್ದರಾಮಯ್ಯನವರಿಗೆ ಎರಡರಲ್ಲೊಂದು ಆಗಲೇಬೇಕು. ಒಂದೋ ಅಧಿಕಾರದಲ್ಲಿರಬೇಕು, ಇಲ್ಲವೇ ಜನನಾಯಕನಾಗಿ ಪ್ರತಿಷ್ಠಾಪನೆಯಾಗಬೇಕು. ಕುಮಾರಸ್ವಾಮಿಯವರನ್ನು ಇಳಿಸಿದರೂ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್‍ನವರು ಒಪ್ಪುವುದು ಸಾಧ್ಯವೇ ಇಲ್ಲ. ಇನ್ನು ಜನನಾಯಕನಾಗಬೇಕೆಂದರೆ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನೂ ಸಂಘಟಿಸಲು ಬೆವರು ಹರಿಸಬೇಕು. ಆದರೆ, ರಾಜ್ಯದೆಲ್ಲೆಡೆ ಹೋದಾಗ, ದೂರದ ದೆಹಲಿ ಸರ್ಕಾರವನ್ನು ಟೀಕಿಸುವುದರಿಂದ ಪ್ರಯೋಜನವಿಲ್ಲ. ರಾಜ್ಯ ಸರ್ಕಾರವನ್ನು ಬಯ್ಯುವುದಿರಲಿ, ಹೊಗಳುತ್ತಾ, ಸಮರ್ಥಿಸುತ್ತಾ ಇರಬೇಕಾಗುತ್ತದೆ. ಹೀಗಾಗಿ ಏನು ಮಾಡುವುದೋ ಗೊತ್ತಾಗದೇ, ರಾಜ್ಯ ಸರ್ಕಾರವನ್ನು ಅಭದ್ರತೆಯಲ್ಲಿಡುತ್ತಲೇ, ತಮ್ಮ ಪ್ರಸ್ತುತತೆ ಉಳಿಸಿಕೊಳ್ಳುವ ಕಸರತ್ತಷ್ಟೇ ಮಾಡುತ್ತಿದ್ದಾರೆ. ಅದರಾಚೆಗೆ, ರಾಜ್ಯದ ಜನರ ಹಿತಾಸಕ್ತಿಯಿಂದ ವರ್ತಿಸುವ ಕಷ್ಟಕರವಾದ ಕೆಲಸ ಅವರಿಂದಾಗುತ್ತಿಲ್ಲ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ...