Homeಅಂತರಾಷ್ಟ್ರೀಯಪಾಲ್ ಥಾಮಸ್ ಆಂಡರ್ಸನ್ - ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಪಾಲ್ ಥಾಮಸ್ ಆಂಡರ್ಸನ್ – ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಕೆಲವರು ಮನುಷ್ಯರ ಆಳ, ಸಾರ್ಥಕತೆಯನ್ನು ತಮ್ಮ ಸಿನೆಮಾಗಳಲ್ಲಿ ಕೆದಕಿದರೆ ಕೆಲವರು ನಮ್ಮ ವಿಶ್ವ, ದೇಶಕಾಲಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

- Advertisement -
- Advertisement -

| ರಾಜಶೇಖರ್ ಅಕ್ಕಿ |
ಇವನಿಗೆ ಏಳು ಅಕ್ಕಂದಿರಿದ್ದಾರೆ; ಅವರೆಲ್ಲರ ದಾದಾಗಿರಿಯಲ್ಲೇ ತನ್ನ ಬಾಲ್ಯವನ್ನು ಕಳೆದವನು. ಈಗ ತನ್ನದೊಂದು ಬಿಸಿನೆಸ್ ಶುರುಮಾಡಿದ್ದಾನೆ. ಏಕಾಂಗಿತನದಿಂದ, ಮತ್ತಿತರ ಕ್ಷೋಭೆಗಳಿಂದ ಬಳಲುತ್ತಿರುವ ಈತ ಸೆಕ್ಸ್ ಟಾಕ್ ಸೌಲಭ್ಯ ಒದಗಿಸುವ ಒಂದು ಸರ್ವಿಸ್‍ಗೆ ಕರೆ ಮಾಡುತ್ತಾನೆ. ಅವರಿಂದ ಬ್ಲ್ಯಾಕ್‍ಮೇಲ್‍ಗೆ ಒಳಗಾಗುತ್ತಾನೆ.

ಇವನು ಎರಡನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದವ, ಕುಡಿಯುತ್ತಾನೆ, ಯಾವುದೇ ನೈತಿಕತೆಯ ಒತ್ತಡವಿಲ್ಲ. ತನ್ನದೇ ಸಾರಾಯಿ ತಯಾರಿಸುತ್ತಾನೆ. ಈತ ಒಂದು ಧಾರ್ಮಿಕ ಚಳವಳಿಯನ್ನು ನಡೆಸುತ್ತಿರುವ ವ್ಯಕ್ತಿ, ದಿ ಮಾಸ್ಟರ್‍ನೊಂದಿಗೆ ಸೇರಿಕೊಳ್ಳುತ್ತಾನೆ. ದಿ ಮಾಸ್ಟರ್‍ನ ಅಸಂಬದ್ಧ ಧಾರ್ಮಿಕ ಚಳವಳಿ, ಇವರಿಬ್ಬರ ಸಂಬಂಧ.

ಈತ 19ನೇ ಶತಮಾನದ ಅಂತ್ಯದಲ್ಲಿ ಅಮೆರಿಕದಲ್ಲಿ ತೈಲ ನಿಕ್ಷೇಪಗಳನ್ನು ಹುಡುಕಿ ತನ್ನದೇ ಆದ ಸಾಮ್ರಾಜ್ಯ ಕಟ್ಟಲು ಹೊರಟವ. ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯೂ ಆಗುತ್ತಾನೆ. ಅವನ ನೈತಿಕತೆ ಏನು?

ಈತ ಒಂದು ಹೊಟೇಲ್‍ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿರುವ ಹುಡುಗ. ಒಬ್ಬ ನೀಲಿ ಚಿತ್ರಗಳ ನಿರ್ದೇಶಕ ಸಂಪರ್ಕಕ್ಕೆ ಬರುತ್ತಾನೆ. ಈ ನಿರ್ದೇಶಕ ಈ ಹುಡುಗನನ್ನು ನೀಲಿಚಿತ್ರಗಳ ಸ್ಟಾರ್ ಆಗುವಂತೆ ಮಾಡುತ್ತಾನೆ. ಇವನಿಗೆ ತಾನು ನಿಜವಾದ ಸ್ಟಾರ್ ಅಲ್ಲ ಎಂದು ಗೊತ್ತಿಲ್ಲ. ಹಿಂಸೆ, ಮಾದಕವಸ್ತು, ನಿರಾಶೆ, ಸೋಲುಗಳ ಪಯಣಕ್ಕೆ ಕಾಲಿಡುತ್ತಾನೆ ಈ ಸ್ಟಾರ್.

ಈತ 20ನೇ ಶತಮಾನದ ಪ್ರಾರಂಭದ ಲಂಡನ್ನಿನ ಖ್ಯಾತ ವಿನ್ಯಾಸಕಾರ. ಯಶಸ್ಸಿನ ತುತ್ತುಂಗದಲ್ಲಿರುವ ಈತ ತನ್ನದೇ ಆತ ನಿಯಮಗಳನ್ನು ರಚಿಸಿಕೊಂಡು, ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಜೀವಿಸುತ್ತಾನೆ.

ಕೆಲವರು ಮನುಷ್ಯರ ಆಳ, ಸಾರ್ಥಕತೆಯನ್ನು ತಮ್ಮ ಸಿನೆಮಾಗಳಲ್ಲಿ ಕೆದಕಿದರೆ ಕೆಲವರು ನಮ್ಮ ವಿಶ್ವ, ದೇಶಕಾಲಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಮನುಷ್ಯನ ಕ್ರೌರ್ಯ, ರಾಜಕೀಯ, ಆರ್ಥಿಕ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ, ಜನರ ಜೀವನ ಹೇಗೆ ಇವೆಲ್ಲವುಗಳಿಂದ ಪರಿಣಾಮವಾಗುತ್ತೆ ಎನ್ನುವುದನ್ನು ತಮ್ಮ ಚಿತ್ರಗಳಲ್ಲಿ ಪರಿಶೀಲಿಸುತ್ತಾರೆ. ಇನ್ನೂ ಕೆಲವರಿಗೆ ವೀಕ್ಷಕರ ಮನರಂಜನೆಯೇ ಮುಖ್ಯ. ಪಾಲ್ ಥಾಮಸ್ ಆ್ಯಂಡರ್ಸನ್ ನಮ್ಮ ಸಮಾಜದ, ಮನುಷ್ಯರ ವಿಕೃತಿಗಳನ್ನು ಕೆದಕುತ್ತಾರೆ. ಸಮಾಜ ತಾನು ಮಾಡಿಕೊಂಡಿರುವ, ಅವುಗಳ ಉಲ್ಲಂಘನೆಯಾದಲ್ಲಿ ಉಲ್ಲಂಘಿಸಿದ ವ್ಯಕ್ತಿಯು ಅಪರಾಧಿಯೆಂದು ಪರಿಗಣಿಸಲಾಗುತ್ತದೆ ಅಥವಾ ಹುಚ್ಚನೆಂದು ಕರೆಯಲಾಗುತ್ತದೆ. ಈ ಅಪರಾಧಿಗಳ, ಹುಚ್ಚರ ಕಥೆಗಳನ್ನೂ ಯಾರಾದರೂ ಹೇಳಬೇಕಲ್ಲವೇ. ಅವರೂ ನಮ್ಮ ಸಮಾಜದ ಅವಿಭಾಜ್ಯ ಅಂಗವಲ್ಲವೇ?

ಪಾಲ್ ಥಾಮಸ್ ಅ್ಯಂಡರ್ಸನ್ ಹುಟ್ಟಿದ್ದು 1970ರಲ್ಲಿ ಅಮೆರಿಕದ ಲಾಸ್ ಅಂಜೆಲಿಸ್‍ನಲ್ಲಿ. ಇವರ ತಂದೆ ಪಾಲ್‍ಗೆ ಚಿಕ್ಕವನಾಗಿದ್ದಾಗಲೇ ಒಂದು ಕ್ಯಾಮೆರಾ ತಂದುಕೊಟ್ಟರು. ಪಾಲ್ ತನ್ನ ಎಂಟನೇ ವಯಸ್ಸಿನಲ್ಲಿ ತನ್ನ ಮೊದಲ ಸಿನೆಮಾ ನಿರ್ದೇಶಿಸಿದ. ಸಿನೆಮಾ ಧ್ಯಾನದಲ್ಲೇ ಬೆಳೆದ ಪಾಲ್‍ಗೆ ಚಿತ್ರನಿರ್ದೇಶಕ ಆಗುವುದನ್ನು ಬಿಟ್ಟರೆ ಬೇರಾವ ಆಯ್ಕೆಯೂ ಇದ್ದಿಲ್ಲ. ಹಲವಾರು ಶಾಲೆಗಳಲ್ಲಿ ಓದಿದ ಪಾಲ್ ನ್ಯೂಯಾರ್ಕ್‍ನ ಒಂದು ಫಿಲ್ಮ್ ಸ್ಕೂಲಿಗೆ ಸೇರಿ, ಎರಡೇ ದಿನಗಳಲ್ಲಿ ಅಲ್ಲಿಂದ ಹೊರಬಿದ್ದು, ತನ್ನ ಶುಲ್ಕವನ್ನು ಮರುಪಡೆದು ಕಾಫಿ ಆ್ಯಂಡ್ ಸಿಗಾರೇಟ್ಸ್ ಎನ್ನುವ ಕಿರುಚಿತ್ರವನ್ನು ನಿರ್ಮಿಸಿದ. 1996ರಲ್ಲಿ ತನ್ನ ಕಿರುಚಿತ್ರವನ್ನೇ ಇಟ್ಟುಕೊಂಡು ಹಾರ್ಡ್ ಏಯ್ಟ್ ಎನ್ನುವ ತನ್ನ ಮೊದಲ ಪೂರ್ಣಪ್ರಮಾಣದ ಚಿತ್ರವನ್ನು ನಿರ್ದೇಶಿಸಿದ ಪಾಲ್ ಮೊದಲ ಚಿತ್ರದಲ್ಲೇ ತಾನೊಬ್ಬ ಪ್ರತಿಭಾವಂತ ಎನ್ನುವ ಝಲಕ್ ಈ ಸಿನೆಮಾದಲ್ಲಿ ತೋರಿಸಿದ.

ಅಂಕಣದ ಪ್ರಾರಂಭದಲ್ಲಿದ್ದದ್ದು ಪಾಲ್ ಆ್ಯಂಡರ್ಸನ್ ಅವರ ಚಿತ್ರಗಳಲ್ಲಿಯ ಮುಖ್ಯಪಾತ್ರಗಳ ಸಣ್ಣ ಪರಿಚಯ. 1997ರಲ್ಲಿ ಬೂಗೀ ನೈಟ್ಸ್ ಎನ್ನುವ ಚಿತ್ರ 70ರ ದಶಕದಲ್ಲಿ ಪಾರ್ನ್ ಸ್ಟಾರ್ ಆಗಿದ್ದ ಜಾನ್ ಹೋಮ್ಸ್ ಅವರ ಜೀವನವನ್ನು ಆಧರಿಸಿತ್ತು. ಪಾರ್ನ್ ಸಿನೆಮಾಗಳ ಜಗತ್ತಿನ ಬಗ್ಗೆ ಯಾವುದೇ ತೀರ್ಪನ್ನು ನೀಡದೇ, ಹಿಂಸೆ, ಮಾದಕವಸ್ತುಗಳ ಬಳಕೆಯನ್ನು ವೈಭವೀಕರಿಸದೇ , ಆ ಜಗತ್ತನ್ನು ಇದ್ದ ಹಾಗೇ ಚಿತ್ರಿಸಿ, ಕ್ಲಿಷ್ಟ ಪಾತ್ರಗಳನ್ನು ಸರಳವಾಗಿ ಚಿತ್ರಿಸಲಾದ ಬೂಗೀ ನೈಟ್ಸ್‍ನಿಂದ ಪಾಲ್ ಹಾಲಿವುಡ್‍ನಲ್ಲಿ ಪ್ರಮುಖ ನಿರ್ದೇಶಕರಲ್ಲೊಬ್ಬರಾದರು. ಈ ಚಿತ್ರ ನಿರ್ಮಾಪಕರಿಗೆ ಎಷ್ಟು ಇಷ್ಟವಾಯಿತೆಂದರೆ, ಮುಂದಿನ ಸಿನೆಮಾ ನಿನಗೆ ತೋಚಿದಂತೇ ಮಾಡು, ನಮ್ಮ ಯಾವ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಚಿತ್ರದ ನಿರ್ಮಾಪಕರು ಪಾಲ್‍ಗೆ ಹೇಳಿಬಿಟ್ಟರು. ಅದರ ಪರಿಣಾಮವಾಗಿ ಬಂದಿದ್ದು ಮಾಗ್ನೋಲಿಯಾ ಎನ್ನುವ ಅದ್ಭುತ ಚಿತ್ರ. ಅನೇಕ ಮುಖ್ಯಪಾತ್ರಗಳು, ಕಥೆಗಳನ್ನು ಹೊಂದಿದ ಈ ಚಿತ್ರ ಅಮೆರಿಕದ ಕೆಟ್ಟುಹೋಗುತ್ತಿರುವ ಕುಟುಂಬ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಮುಖ್ಯವಾಗಿ ಪಾಲಕರು ಮತ್ತು ಮಕ್ಕಳ ನಡುವಿನ ಸಂಬಂಧ, ಸಂಬಂಧದ ಕೊರತೆ, ತಮ್ಮ ನಿರೀಕ್ಷೆಗಳನ್ನು ಮಕ್ಕಳಲ್ಲಿ ಬಲವಂತವಾಗಿ ಹುಡುಕುವುದು, ತಮ್ಮ ಸಮಸ್ಯೆಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳನ್ನು ಈ ಚಿತ್ರದ ನಾಲ್ಕೂ ಕಥೆಗಳು ಹುಡುಕುತ್ತವೆ. ಮೂರು ಗಂಟೆ ಎಂಟು ನಿಮಿಷದ ಈ ಚಿತ್ರ ಅಂತ್ಯವಾಗುವುದು ಬೈಬಲ್‍ನಲ್ಲಿ ಬರುವ ಒಂದು ಕಥಾನಕದೊಂದಿಗೆ. ಇದರ ನಂತರ ಆ್ಯಡಮ್ ಸ್ಯಾಂಡ್ಲರ್‍ನೊಂದಿಗೆ ಪಂಚ್ ಡ್ರಂಕ್ ಲವ್ ಎನ್ನುವ ಕಾಮೆಡಿ ನಿರ್ದೇಶಿಸಿದ ಪಾಲ್, ತಮ್ಮ ಜೀವನದ ಅತೀ ಮಹತ್ವದ ಸಿನೆಮಾ ‘ದೇರ್ ವಿಲ್ ಬಿ ಬ್ಲಡ್’ಗೆ ಕೈ ಹಾಕಿದರು.

ದೇರ್ ವಿಲ್ ಬಿ ಬ್ಲಡ್ ಚಿತ್ರವು ಅಪ್ಟನ್ ಸಿನ್‍ಕ್ಲೇರ್ ಎನ್ನುವ ಅಮೆರಿಕದ ಬರಹಗಾರ 1926ರಲ್ಲಿ ಬರೆದ ‘ಆಯಿಲ್’ ಎನ್ನುವ ಕಾದಂಬರಿಯನ್ನಾಧರಿಸಿ ಮಾಡಿದ ಚಿತ್ರ ಎಂದು ಹೇಳಲಾಗಿತ್ತು. ಚಿತ್ರದಿಂದ ಪ್ರಭಾವಿತನಾದ ನಾನು ಆ ಕಾದಂಬರಿಯನ್ನು ಕೊಂಡು ಓದಿದಾಗ ಕಾಡಿದ್ದು ಒಂದು ರೀತಿಯ ನಿರಾಸೆ. ಮೊದಲ ಕೆಲವು ಪುಟಗಳನ್ನಷ್ಟೇ ತನ್ನ ಚಿತ್ರಕ್ಕೆ ಬಳಸಿಕೊಂಡ ಪಾಲ್ ಮುಂದಿನ ಎಲ್ಲವನ್ನೂ ಬದಲಿಸಿದ್ದಾರೆ. ಪಾತ್ರಗಳ ಮೂಲ ವ್ಯಕ್ತಿತ್ವದಿಂದ ಸಂಪೂರ್ಣ ಕಥೆಯನ್ನು ಇನ್ನೊಂದು ಸಲ ಬರೆದರು ಪಾಲ್. 19ನೇ ಶತಮಾನದ ಅಂತ್ಯದಲ್ಲಿ ಆರಂಭವಾಗುವ ಇದರ ಕಥೆ, ನಾಯಕ ಅಮೆರಿಕದ ಅತಿ ದೊಡ್ಡ ತೈಲ ಸಾಮ್ರಾಜ್ಯವನ್ನು ಕಟ್ಟಿದ್ದನ್ನು ತೋರಿಸುತ್ತದೆ. ಇದಕ್ಕಿಂತ ಮುಖ್ಯವಾಗಿ ಕಥಾನಾಯಕನ ವ್ಯಕ್ತಿತ್ವ ಪ್ರೇಕ್ಷಕರ ದಂಗುಬಡಿಸಿತು. ಈ ಚಿತ್ರದಲ್ಲಿಯ ಯಾವ ಪಾತ್ರಗಳು ಬದಲಾಗುವುದಿಲ್ಲ, ಮಹಿಳಾಪಾತ್ರಗಳೇ ಇಲ್ಲ, ನಿಷ್ಕರುಣೆಯ, ಪಟ್ಟುಬಿಡದ ಪಾತ್ರಗಳು. ಇಂತಹ ಕ್ಲಿಷ್ಟ ಪಾತ್ರಗಳಿದ್ದರೂ ಕಥೆಯನ್ನು ಸರಳವಾಗಿಯೇ ಹೇಳಲಾಗಿದೆ. ಕಥಾನಾಯಕನ ಜೀವನವನ್ನು ನೋಡಿ ದುಃಖಿಸಬೇಕೇ, ಸಂತೋಷಪಡಬೇಕೇ ತಿಳಿಯುವುದಿಲ್ಲ. ಇಂಥವರು ಇರಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದರೆ ಆಶ್ಚರ್ಯವಲ್ಲ. ವಿಶ್ವದ ಅತ್ಯಂತ ಶ್ರೇಷ್ಠ ನಟರಲ್ಲಿ ಒಬ್ಬರಾದ ಡ್ಯಾನಿಯಲ್ ಡೇ ಲೆವಿಸ್ ಅವರನ್ನು ನಾಯಕನ ಪಾತ್ರವನ್ನು ಮಾಡಲು ಸಂತೋಷದಿಂದಲೇ ಒಪ್ಪಿಕೊಂಡರು. (ಅತ್ಯಂತ ಚ್ಯೂಸಿ ನಟನಾದ ಡ್ಯಾನಿಯಲ್, ಮೂರು ಶ್ರೇಷ್ಠ ನಟ ಆಸ್ಕರ್ ಪ್ರಶಸ್ತಿ ಗೆದ್ದ ಏಕೈಕ ವ್ಯಕ್ತಿ). ಈ ಪಾತ್ರದ ತಯಾರಿಗೆ ಒಂದು ವರ್ಷ ತೆಗೆದುಕೊಂಡ ಡ್ಯಾನಿಯಲ್, ತಮ್ಮ ಜೀವನದ ಕೊನೆಯ ಚಿತ್ರವನ್ನೂ ಪಾಲ್ ಜೊತೆಗೇ ಮಾಡಿ ಅಭಿನಯಕ್ಕೆ ವಿದಾಯ ಹೇಳಿದ್ದಾರೆ.

ದೇರ್ ವಿಲ್ ಬಿ ಬ್ಲಡ್ ನಂತರ ಇನ್ಹರಂಟ್ ವಾೈಸ್ ಮತ್ತು ಮಾಸ್ಟರ್ ಎನ್ನುವ ಚಿತ್ರಗಳಲ್ಲೂ ನಮ್ಮ ನಾಗರಿಕ ಸಮಾಜವು ಒಪ್ಪದ ಪಾತ್ರಗಳನ್ನೇ ವಿಶ್ಲೇಷಿಸಿದ ಪಾಲ್ 2017ರಲ್ಲಿ ಫ್ಯಾಂಟಮ್ ಥ್ರೆಡ್ ಎನ್ನುವ ಚಿತ್ರವನ್ನು ನಿರ್ದೇಶಿಸಿದರು. ಲಂಡನ್ನಿನ 20ನೇ ಶತಮಾನದ ಪ್ರಾರಂಭ, ಅಲ್ಲಿಯ ಖ್ಯಾತ ವಿನ್ಯಾಸಕಾರ, ತನ್ನ ಕಟ್ಟುನಿಟ್ಟಿನ ಜೀವನ ನಡೆಸುತ್ತಿದ್ದಾಗ ಅವನ ಜೀವನದಲ್ಲಿ, ಮನೆಯಲ್ಲಿ ಕಾಲಿಡುವ ಅವನ ಗೆಳತಿ, ಅವಳಿಂದಾಗುವ ಅಲ್ಲೋಲಕಲ್ಲೋಲಗಳು.
ಎಂಟು ಚಿತ್ರಗಳನ್ನು ನಿರ್ದೇಶಿಸಿದ ಪಾಲ್ ಥಾಮಸ್ ಆ್ಯಂಡರ್ಸನ್‍ಗೆ ಈಗ 48 ವರ್ಷ ವಯಸ್ಸು. ಜಗತ್ತಿನ ಚಿತ್ರಪ್ರೇಮಿಗಳೆಲ್ಲ ಅವರಿಂದ ಅನೇಕ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳನ್ನು ಹುಸಿಯಾಗಿಸಲಾರರು ಎನ್ನುವುದ ನನ್ನ ಖಚಿತ ನಂಬಿಕೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...