| ಗೌರಿ ಲಂಕೇಶ್ |
23 ಸೆಪ್ಟೆಂಬರ್, 2009 (ಸಂಪಾದಕೀಯದಿಂದ)
ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರತಿಭೆಯನ್ನು ಗುರುತಿಸುವುದಾಗಲಿ, ಅದನ್ನು ಪ್ರೋತ್ಸಾಹಿಸಿ ಬೆಳೆಸುವುದಾಗಲಿ ಗೊತ್ತಿಲ್ಲ ಎಂಬುದಕ್ಕೆ ಈ ಬಾರಿ ರಾಷ್ಟ್ರೀಯ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗಳನ್ನು ಪಡೆದಿರುವ ಪ್ರಕಾಶ್ ರೈ ಮತ್ತು ಉಮಾಶ್ರೀಯವರೇ ಉತ್ತಮ ಉದಾಹರಣೆಗಳು.
ಇಂಗ್ಲಿಷ್‍ನಲ್ಲಿ ‘Think out of the box’ ಎಂಬ ಜಾಣ್ಣುಡಿ ಇದೆ. ಇದರರ್ಥ ಸಾಂಪ್ರದಾಯಿಕವಾಗಿ ಯೋಚಿಸುವ ಬದಲಾಗಿ ಹೊಸ ರೀತಿಯಲ್ಲಿ, ಸೃಜನಾತ್ಮಕವಾಗಿ ಮತ್ತು ಬುದ್ಧಿವಂತಿಕೆಯಿಂದ ಚಿಂತಿಸಿ ಕ್ರಿಯಾಶೀಲರಾಗುವುದು. ಆದರೆ ಕನ್ನಡ ಚಿತ್ರರಂಗದವರಿಗೆ ಕ್ಲೀಷೆ, ಫಾರ್ಮುಲಾ, ರಿಮೇಕ್ ತರಹದ ಸಿದ್ಧ ತಂತ್ರಗಳ ಚೌಕಟ್ಟನ್ನು ಮೀರುವ ಕ್ರಿಯಾಶೀಲತೆಯೇ ಇಲ್ಲದಂತಾಗಿದೆ. ಆದ್ದರಿಂದಲೇ ಪಕ್ಕದ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ಚಿತ್ರರಂಗಗಳಲ್ಲಿ ಸಾಧ್ಯವಾಗುತ್ತಿರುವ ಹೊಸ ಬಗೆಯ ಕಥಾವಸ್ತುಗಳನ್ನು ಹೊಂದಿರುವ ಚಿತ್ರಗಳು ನಮ್ಮವರಿಂದ ಸಾಧ್ಯವಾಗುತ್ತಿಲ್ಲ.
ಇದಕ್ಕೊಂದು ಉದಾಹರಣೆ ಕೊಡಬಹುದು. ಕಳೆದ ವರ್ಷ ‘ಅಭಿಯುಂ ನಾನುಂ’ (ಅಭಿ ಮತ್ತು ನಾನು) ಎಂಬ ಚಿತ್ರವನ್ನು ತಮಿಳಿನಲ್ಲಿ ನಿರ್ಮಿಸಿ-ನಟಿಸಿದ್ದರು ಪ್ರಕಾಶ್ ರೈ. ತಂದೆ ಮತ್ತು ಮಗಳ ನಡುವಿನ ಸಂಬಂಧವನ್ನು ಕುರಿತ ಆ ಸಿನಿಮಾ, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮನ್ನಣೆ ಪಡೆದಿತ್ತು. ಆ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಬೇಕೆಂದು ಹಲವರು ಯೋಚಿಸಿದರಾದರೂ ಕನ್ನಡದವರೇ ಆದ ಪ್ರಕಾಶ್ ಬದಲಾಗಿ ತಂದೆಯ ಪಾತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಹಾಕಿದರೆ ವಾಸಿ ಎಂದು ಭಾವಿಸಿದರು. ಅದಕ್ಕೆ ಅವರು ನೀಡಿದ ಕಾರಣ “ಪ್ರಕಾಶ್ ರೈಗೆ ಕನ್ನಡದಲ್ಲಿ ಮಾರ್ಕೆಟ್ ಇಲ್ಲ” ಎಂಬುದು.
ಅಂದಹಾಗೆ ‘ಮುಂಗಾರುಮಳೆ’ಯ ಮುನ್ನ ನಟ ಗಣೇಶನಿಗಾಗಲೀ, ‘ದುನಿಯಾ’ ಮುನ್ನ ವಿಜಯ್‍ಗಾಗಲಿ, ‘ನಂದಾ ಲವ್ಸ್ ನಂದಿತಾ’ ಮುನ್ನ ಯೋಗೇಶ್ ಅರ್ಥಾತ್ ಲೂಸ್ ಮಾದನಿಗಾಗಲಿ’ ಯಾವ ಮಾರುಕಟ್ಟೆ ಇತ್ತು? ಇಂತಹ ಪ್ರಶ್ನೆಗಳ ಬಗ್ಗೆ ಗಾಂಧಿನಗರ ಯೋಚಿಸುವುದೇ ಇಲ್ಲ. ಚಿತ್ರವೊಂದರ ಯಶಸ್ಸಿಗೆ ಮಾರುಕಟ್ಟೆ ಮುಖ್ಯ ಎಂಬುದನ್ನು ಒಪ್ಪಿಕೊಂಡರೂ ಅದರೊಂದಿಗೆ ಚಿತ್ರದ ಕಥೆ, ಅದರ ನಿರೂಪಣಾ ಶೈಲಿ ಮತ್ತು ಸದಭಿರುಚಿಯೂ ಅಷ್ಟೇ ಮುಖ್ಯ ಎಂಬುದನ್ನು ಪರಿಗಣಿಸಲೇಬೇಕು. ಈಗ ಆ ಚಿತ್ರವನ್ನು ಪ್ರಕಾಶ್ ರೈ ಸ್ವತಃ ನಿರ್ಮಿಸಿ, ನಿರ್ದೇಶಿಸಿ ನಟಿಸಲು ಹೊರಟಿದ್ದಾರೆ ಎನ್ನುವುದು ಬೇರೆ ಮಾತು.
ಪ್ರಕಾಶ್ ರೈಗೆ ರಾಷ್ಟ್ರಪ್ರಶಸ್ತಿ ಘೋಷಣೆಯಾದಾಗ ನಮ್ಮ ಮಾಧ್ಯಮಗಳು ಅದು ಕನ್ನಡಿಗರಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ಸಂದ ಗೌರವ ಎಂಬಂತೆ ಬಿಂಬಿಸಿದ್ದವು. ಆದರೆ ಎರಡು ದಶಕಗಳಿಂದ ಇವತ್ತಿನವರೆಗೂ ಕನ್ನಡ ಚಿತ್ರರಂಗ ಪ್ರಕಾಶ್ ರೈ ಎಂಬ ನಟನನ್ನು ತಿರಸ್ಕರಿಸುತ್ತಲೇ ಬಂದಿದೆ ಎಂಬುದು ವಾಸ್ತವ. 90ರ ದಶಕದ ಆರಂಭದಲ್ಲಿ ನಟನೆಯನ್ನೇ ತನ್ನ ಉಸಿರಾಗಿಸಿಕೊಂಡು ಅವಕಾಶಗಳಿಗಾಗಿ ಪರದಾಡುತ್ತಿದ್ದ ಪ್ರಕಾಶ್ ರೈ ಆಗಿನಿಂದಲೂ ನನಗೆ ಪರಿಚಯ.
ಒಂದು ಬಿಳಿ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಮಾತ್ರ ಹೊಂದಿದ್ದ ಪ್ರಕಾಶ್ ಮಿತ್ರರ ಬಟ್ಟೆ ಧರಿಸಿ ಮಿಂಚುತ್ತಿದ್ದುದ್ದು, ಗೆಳೆಯರೇ ನಾಟಕಗಳಲ್ಲಿ ಅವಕಾಶ ನೀಡದಿದ್ದಾಗ ಗಲಾಟೆ ಮಾಡಿದ್ದು, ಒಂದು ಹೊತ್ತಿನ ಊಟ ಸಿಗುತ್ತದೆಂದು ಚಿಕ್ಕಪುಟ್ಟ ಪಾತ್ರಗಳಿಗೆ ಡಬ್ ಮಾಡುತ್ತಿದ್ದದ್ದು, ಜೇಬಿನಲ್ಲಿ ಕಾಸಿಲ್ಲದೇ ‘ನಟರಾಜ್ ಎಕ್ಸ್‍ಪ್ರೆಸ್’ನಲ್ಲಿ ಓಡಾಡುತ್ತಿದ್ದುದು ಎಲ್ಲವೂ ನನಗೆ ನೆನಪಿದೆ. ಹಾಗಾಗಿ ಖ್ಯಾತ ನಿರ್ದೇಶಕ ಬಾಲಚಂದರ್ ಅವರು ಪ್ರಕಾಶನಿಗೆ ಅವಕಾಶ ಕೊಟ್ಟಾಗ ಅದರ ಬಗ್ಗೆ ಊರಿಗೆಲ್ಲಾ ಢಂಗೂರ ಸಾರಿ ಚೆನ್ನೈಗೆ ಹೋದ ಪ್ರಕಾಶ್ ಆನಂತರ ತೆಲುಗು ಸಿನಿಮಾಗಳಲ್ಲೂ ಖ್ಯಾತಿ ಪಡೆದಿದ್ದು, ಮಣಿರತ್ನಂ ಅವರ ‘ಇರುವರ್’ ಚಿತ್ರದಲ್ಲಿ ಕರುಣಾನಿಧಿಯ ಪಾತ್ರ ಮಾಡಿ ಜನಪ್ರಿಯತೆ ಪಡೆದದ್ದು, ಅದರೆಲ್ಲದರ ಮಧ್ಯೆಯೂ ಕನ್ನಡ ಚಿತ್ರರಂಗದೊಂದಿಗೆ ಸಂಪರ್ಕ ಇಟ್ಟುಕೊಂಡಿರಬೇಕೆಂದು ನಮ್ಮವರು ನೀಡಿದ ಪಾತ್ರಗಳಲ್ಲೂ ನಟಿಸಿದ್ದು, ಗಿರೀಶ್ ಕಾರ್ನಾಡ್ ಬರೆದಿರುವ ನಾಗಾಭರಣ ನಿರ್ದೇಶನದ ‘ನಾಗಮಂಡಲ’ದಲ್ಲಿ ಅದ್ಭುತವಾಗಿ ನಟಿಸಿದ್ದರೂ ರಾಜ್ಯ ಪ್ರಶಸ್ತಿಯಿಂದ ವಂಚಿತನಾಗಿ ಹಲುಬಿದ್ದು… ಎಲ್ಲವೂ ನೆನಪಿದೆ. ಅಪ್ಪಟ ಕನ್ನಡಿಗನಾದ ಪ್ರಕಾಶ್ ಇವತ್ತು ಇಲ್ಲಿ ಮಾರುಕಟ್ಟೆ ಹೊಂದಿರದೆ ತಮಿಳಿನ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆಂದರೆ ಅದು ಆತನ ಪ್ರತಿಭೆಗೆ ಸಂದ ಗೌರವ ಮಾತ್ರವಲ್ಲ, ಕನ್ನಡ ಚಿತ್ರರಂಗಕ್ಕಾದ ಮುಖಭಂಗವೂ ಹೌದು ಎಂದೇ ಭಾವಿಸಬಹುದು. ನಮ್ಮ ಚಿತ್ರರಂಗದಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಪರಂಪರೆ ವಿಸ್ತಾರಗೊಳ್ಳಬೇಕಿದೆ.


