Homeಅಂತರಾಷ್ಟ್ರೀಯ5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸ್ವರ್ಗದಿಂದ ಉದುರುತ್ತಿಲ್ಲ: ಪ್ರಣಬ್ ಮುಖರ್ಜಿ ಕಟುನುಡಿ ಆಡಿದರೇಕೆ?

5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸ್ವರ್ಗದಿಂದ ಉದುರುತ್ತಿಲ್ಲ: ಪ್ರಣಬ್ ಮುಖರ್ಜಿ ಕಟುನುಡಿ ಆಡಿದರೇಕೆ?

ಆರ್ಥಿಕ ಬೆಳವಣಿಗೆಗೆ ತಾನೇ ಕಾರಣ ಎಂದು ಕೊಚ್ಚಿಕೊಳ್ಳುತ್ತಿರುವ ಮೋದಿ ಸರ್ಕಾರಕ್ಕೆ ಮಾಜಿ ರಾಷ್ಟ್ರಪತಿ ನೇರವಾಗಿ ಬಿಸಿ ಮುಟ್ಟಿಸಿದ್ದಾರೆ.

- Advertisement -
- Advertisement -

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅನಿರೀಕ್ಷಿತವಾಗಿ ಕಟುನುಡಿಗಳನ್ನು ಆಡಿದ್ದು, ಮೋದಿ ಸರ್ಕಾರ ಮತ್ತು ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್‍ರಿಗೆ ಮುಜುಗರವುಂಟಾಗಿದೆ. ನಿನ್ನೆ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ‘ಬಜೆಟ್ ಮಂಡನೆ ಮಾಡುತ್ತಾ ಹಣಕಾಸು ಸಚಿವೆ 2024ರೊಳಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯುತ್ತದೆ ಎಂದಿದ್ದಾರೆ. ಆದರೆ, ಅದು ಸ್ವರ್ಗದಿಂದ ಉದುರುತ್ತಿಲ್ಲ. ಅದಕ್ಕೊಂದು ಗಟ್ಟಿಯಾದ ತಳಹದಿ ಕಾರಣವಾಗಿದೆ ಮತ್ತು ಆ ತಳಹದಿಯನ್ನು ಬ್ರಿಟಿಷರು ಕಟ್ಟಿದ್ದಲ್ಲ. ಸ್ವತಂತ್ರಾನಂತರ ಭಾರತೀಯರು ಕಟ್ಟಿದ ತಳಹದಿ ಅದು’ ಎಂದು ಹೇಳಿರುವುದನ್ನು ಎಎನ್‍ಐ ಮೂಲಗಳನ್ನು ಉಲ್ಲೇಖಿಸಿ ಎನ್‍ಡಿಟಿವಿ ವರದಿ ಮಾಡಿದೆ.

ಸಾಮಾನ್ಯವಾಗಿ ಕಟುಮಾತುಗಳನ್ನು ಆಡದ ಅವರು ಈ ಕಾರ್ಯಕ್ರಮದಲ್ಲಿ ನಿಷ್ಠುರವಾದ ಹಲವು ಸಂಗತಿಗಳನ್ನು ಮುಂದಿಟ್ಟಿದ್ದಾರೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ವಿಚಾರದಲ್ಲಿ ಪ್ರಧಾನಿ ಮೋದಿಯವರೂ ಒಳಗೊಂಡಂತೆ ಬಿಜೆಪಿಯ ಹಲವು ನಾಯಕರು ತಮ್ಮ ಸಾಧನೆಯೆಂಬಂತೆ ಹೇಳಿಕೊಳ್ಳುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

‘55 ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಟೀಕೆ ಮಾಡುವವರು ಸ್ವತಂತ್ರಗೊಂಡಾಗ ಭಾರತ ಎಲ್ಲಿತ್ತು ಮತ್ತು ನಾವು ಅಲ್ಲಿಂದ ಎಷ್ಟು ಮುಂದೆ ಬಂದಿದ್ದೇವೆ ಎಂಬುದನ್ನು ಮರೆಯುತ್ತಿದ್ದಾರೆ. ಇದಕ್ಕೆ ಇತರರ ಕೊಡುಗೆಯೂ ಇದೆ. ಆದರೆ, ಯೋಜಿತ ಆರ್ಥಿಕ ನೀತಿಯ ಮೇಲೆ ವಿಶ್ವಾಸವಿಟ್ಟಿದ್ದ ನಮ್ಮ ಹಿಂದಿನವರೇ ಆಧುನಿಕ ಭಾರತಕ್ಕೆ ಅಡಿಪಾಯ ಹಾಕಿದ್ದು. ಆದರೆ ಇಂದು ಯೋಜನಾ ಆಯೋಗವನ್ನೇ ರದ್ದುಗೊಳಿಸಿದ ಕ್ರಮಕ್ಕಿಂತ ಭಿನ್ನವಾದ ಕ್ರಮಗಳಿಂದ ಅದನ್ನು ಸಾಧಿಸಿದ್ದರು’ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುತ್ತಿದ್ದ ಯೋಜನಾ ಆಯೋಗವನ್ನು ಮೋದಿ ಸರ್ಕಾರ 2014ರಲ್ಲಿ ಬಂದ ಕೆಲಕಾಲದಲ್ಲೇ ರದ್ದುಗೊಳಿಸಲಾಯಿತು. ಅದರ ಬದಲಿಗೆ ಸರ್ಕಾರೀ ಚಿಂತನಾಕೂಟವಾದ ನೀತಿ ಆಯೋಗವನ್ನು ಸ್ಥಾಪಿಸಲಾಯಿತು.

‘50-55 ವರ್ಷಗಳ ಕಾಂಗ್ರೆಸ್ ಆಡಳಿತವನ್ನು ದೂಷಿಸುವವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪರಿಸ್ಥಿತಿ ಏನಿತ್ತು, ಅದು ಅಧಿಕಾರ ಕಳೆದುಕೊಂಡಾಗ ಎಂತಹ ಆರ್ಥಿಕತೆಯನ್ನು ಕಟ್ಟಿದ್ದರು ಎಂಬುದನ್ನು ಮರೆಯಬಾರದು. ಇಂದು 5 ಟ್ರಿಲಿಯನ್ ಡಾಲರ್‍ಗಳ ಆರ್ಥಿಕತೆ ಕಡೆಗೆ ನಾವು ಹೋಗುತ್ತಿದ್ದೇವೆ ಎಂದರೆ, ಶೂನ್ಯದಿಂದ 1.8 ಟ್ರಿಲಿಯನ್ ಡಾಲರ್‍ಗಳವರೆಗೆ ಬಂದಿದ್ದೇ ಅದಕ್ಕೆ ಅಡಿಪಾಯವಾಗಿದೆ’ ಎಂದು ಅವರು ಹೇಳಿದ್ದಾರೆ.

2012ರಲ್ಲಿ ರಾಷ್ಟ್ರಪತಿಯಾಗುವ ಮುಂಚೆ ಮುಖರ್ಜಿಯವರು ಹಲವು ಸಾರಿ ಹಣಕಾಸು ಸಚಿವರಾಗಿದ್ದರು. ಅವರ ಪ್ರಕಾರ ಮುಂದೊಂದು ದಿನ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಬೇಕಾದ ತಳಹದಿ ರೂಪಿಸಿದ್ದು ಜವಹರಲಾಲ್ ನೆಹರೂ, ಮನಮೋಹನ್‍ಸಿಂಗ್ ಮತ್ತು ನರಸಿಂಹರಾವ್ ಸರ್ಕಾರ ಸೇರಿದಂತೆ ಹಿಂದಿನ ಎಲ್ಲಾ ಸರ್ಕಾರಗಳು.

ಭಾರತವು ನೆಗೆತಗಳಲ್ಲಿ ಅಭಿವೃದ್ಧಿ ಸಾಧಿಸಿದೆ ಎಂದರೆ ಅದಕ್ಕೆ ನೆಹರೂ ಮತ್ತಿತರರು ಸ್ಥಾಪಿಸಿದ ಐಐಟಿಗಳು, ಇಸ್ರೋ, ಐಐಎಂಗಳು, ಬ್ಯಾಂಕ್ ಜಾಲ ಇತ್ಯಾದಿಗಳು ಕಾರಣ. ಇದರ ಆಧಾರದ ಮೇಲೆ ಡಾ.ಮನಮೋಹನ್‍ಸಿಂಗ್ ಮತ್ತು ನರಸಿಂಹರಾವ್ ಅವರು ಆರ್ಥಿಕ ಉದಾರೀಕರಣವನ್ನು ಜಾರಿಗೊಳಿಸಿದರು. ಅದು ಭಾರತದ ಆರ್ಥಿಕ ಸಾಮಥ್ರ್ಯವನ್ನು ಅನಾವರಣಗೊಳಿಸಿತು. ಅದರ ಆಧಾರದ ಮೇಲೆ ಇಂದಿನ ಹಣಕಾಸು ಸಚಿವರು ಭಾರತವು 5 ಟ್ರಿಲಿಯನ್ ಡಾಲರ್‍ಗಳ ಆರ್ಥಿಕತೆಯಾಗಲಿದೆ ಎಂದು ಹೇಳಿಕೊಳ್ಳಬಹುದು’ ಎಂಬುದು ಮುಖರ್ಜಿಯವರ ಸ್ಪಷ್ಟ ನುಡಿಗಳಾಗಿತ್ತು.

ಇದರ ಜೊತೆಗೆ ಅವರು ಸಾರ್ವಜನಿಕ ವಲಯದಲ್ಲಿ ಬೆಳೆಯುತ್ತಿರುವ ಹಿಂಸೆಯ ಮತ್ತು ಸಾಮಾಜಿಕ ಹಾಗೂ ರಾಜಕೀಯ ವಿಕೃತಿಗಳ ಬಗ್ಗೆ ಎಚ್ಚರಿಸಿದರು. ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಕುರಿತೂ ಮಾತಾಡಿದ್ದಾರೆ.

ಸಾಮಾನ್ಯವಾಗಿ ತನ್ನ ಅಭಿಪ್ರಾಯಗಳನ್ನು ಈ ರೀತಿ ವ್ಯಕ್ತಪಡಿಸದ ಪ್ರಣಬ್ ಮುಖರ್ಜಿಯವರಿಗೆ ಮೋದಿ ಸರ್ಕಾರವು ಕೆಲವು ವಿಚಾರಗಳ ಬಗ್ಗೆ ತನ್ನದೇ ಸಾಧನೆ ಎಂದು ಕೊಚ್ಚಿಕೊಳ್ಳುತ್ತಿರುವುದನ್ನು ನೋಡಿ ಸಿಟ್ಟು ಬಂದಂತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ‘ಪರಿಶಿಷ್ಟ ಜಾತಿ’ಗೆ ಸೇರಿದವರಲ್ಲ: ಪ್ರಕರಣದ ಫೈಲ್ ಕ್ಲೋಸ್ ಮಾಡಿದ ಪೊಲೀಸರು

0
ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. 2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ...