ದಿನೇಶ್ ಅಮಿನ್ ಮಟ್ಟು

ದೇಶದ ಮತದಾರರು ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಒಂದು ತಲೆ ಮತ್ತು ಎರಡು ತಲೆಯ ಹಾವುಗಳ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಜನರಿಗೆ ಆಯ್ಕೆಯೇ ಇಲ್ಲದಂತಾಗಿದೆ’ ಎಂದು ಸ್ವರಾಜ್ ಇಂಡಿಯಾದ ಸಂಸ್ಥಾಪಕ ಯೋಗೇಂದ್ರ ಯಾದವ್ ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಉಪಮೆಯ ಮೂಲಕ ಯಾದವ್ ಹೇಳಿದ್ದನ್ನು ಕಾಂಗ್ರೆಸ್ ಮತ್ತು ಬಿಜೆಪಿಯೇತರ ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಚುನಾವಣೆ ಸಂದರ್ಭಗಳಲ್ಲಿ ನೇರವಾಗಿ ಹೇಳುವುದುಂಟು. ಈ ಎರಡೂ ರಾಜಕೀಯ ಪಕ್ಷಗಳು ಸಮಾನ ಶತ್ರುಗಳಾಗಿರುವುದರಿಂದ ಸಮಾನ ದೂರದಲ್ಲಿಡಬೇಕೆಂದು ಅವರ ಅಭಿಮತವಾಗಿದೆ. ಯಾವುದೇ ರಾಜಕೀಯ ಪಕ್ಷ ಅಂಕೆ ಮೀರಿ ಬೆಳೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎನ್ನುವ ಕಾಳಜಿ ಈ ಅಭಿಪ್ರಾಯದಲ್ಲಿರುವುದು ನಿಜ. ಕಾಂಗ್ರೆಸ್ ಪಕ್ಷ ಸರ್ವಾಧಿಕಾರಿಯಾಗಿ ಬೆಳೆದು ಮಾಡಿದ ಹಾನಿ ಮತ್ತು ಅಧಿಕಾರದಲ್ಲಿದ್ದಾಗ ಪಕ್ಷದ ನಡವಳಿಕೆಗಳ ನೆನಪುಗಳು ಈ ರೀತಿಯ ಆತಂಕಗಳಿಗೆ ಕಾರಣ.
ಆದರೆ ಇವತ್ತಿನ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಕ್ಕಪಕ್ಕಕ್ಕಿಟ್ಟು ಸಮಾನ ಶಕ್ತಿ ಇಲ್ಲವೇ ಸಮಾನ ಶತ್ರುಗಳೆಂಬ ತೀರ್ಮಾನಕ್ಕೆ ಬರಬಹುದೇ ಎನ್ನುವುದಷ್ಟೇ ಪ್ರಶ್ನೆ. ಬದಲಾಗಿರುವ ದೇಶ-ಕಾಲವನ್ನು ಗಣನೆಗೆ ತೆಗೆದುಕೊಳ್ಳುವುದು ಬೇಡವೇ? ಕಳೆದ ಲೋಕಸಭಾ ಚುನಾವಣೆಯಲ್ಲಿ 282 ಸ್ಥಾನಗಳ ದೈತ್ಯಬಹುಮತದೊಂದಿಗೆ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಮಿತ್ರಪಕ್ಷಗಳ ಬೆಂಬಲದ ಲೆಕ್ಕ ಹಾಕಿದರೆ 524 ಸ್ಥಾನಗಳ ಲೋಕಸಭೆಯಲ್ಲಿ 337 ಸದಸ್ಯರು ಆಡಳಿತ ಪಕ್ಷದವರಾಗಿದ್ದಾರೆ. ಇತ್ತೀಚಿನ ಉಪಚುನಾವಣೆಗಳಲ್ಲಿ ಬೆರಳೆಣಿಕೆಯ ಸ್ಥಾನಗಳನ್ನು ಕಳೆದುಕೊಂಡರೂ ಬಿಜೆಪಿಯ ಆಧಿಪತ್ಯ ಮುಂದುವರಿದಿದೆ.
ದೇಶದ 15 ರಾಜ್ಯಗಳಲ್ಲಿ ಬಿಜೆಪಿ ನೇರವಾಗಿ ಅಧಿಕಾರದಲ್ಲಿದೆ, ಅದೇ ಪಕ್ಷದವರು ಮುಖ್ಯಮಂತ್ರಿಗಳಿದ್ದಾರೆ. ಐದು ರಾಜ್ಯಗಳಲ್ಲಿ ಬಿಜೆಪಿ ಜತೆ ಮೈತ್ರಿಮಾಡಿಕೊಂಡ ಪಕ್ಷಗಳು ಅಧಿಕಾರದಲ್ಲಿವೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಡೆದ 21 ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಹತ್ತು ರಾಜ್ಯಗಳಲ್ಲಿ ಗೆದ್ದಿದೆ, ಅದರ ಮಿತ್ರಪಕ್ಷಗಳು ಐದು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ.
ಸಮಾನ ಶಕ್ತಿ/ಶತ್ರು ಎಂದು ಪರಿಗಣಿಸಲ್ಪಟ್ಟಿರುವ ಕಾಂಗ್ರೆಸ್ ಪಕ್ಷದ ಸಂಪೂರ್ಣವಾಗಿ ಜಾರುದಾರಿಯಲ್ಲಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕೇವಲ 48 ಸದಸ್ಯರಿದ್ದಾರೆ, ಕರ್ನಾಟಕ, ಪಂಜಾಬ್, ಪುದುಚೇರಿ ಮತ್ತು ಮಿಜೊರಾಂ ರಾಜ್ಯಗಳಲ್ಲಿ ಮಾತ್ರ ಪಕ್ಷ ಅಧಿಕಾರದಲ್ಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಗಳಲ್ಲಿ ಆರು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿದೆ, ಪಂಜಾಬ್‍ನಲ್ಲಿ ಮಾತ್ರ ಗೆದ್ದಿದೆ.
31 ರಲ್ಲಿ 20 ರಾಜ್ಯಗಳಲ್ಲಿ ಅಧಿಕಾರ, 524 ಲೋಕಸಭಾ ಸ್ಥಾನಗಳಲ್ಲಿ 337 ಸ್ಥಾನಗಳನ್ನು ಹೊಂದಿರುವ ಭಾರತೀಯ ಜನತಾ ಪಕ್ಷದ ಜೊತೆಯಲ್ಲಿ, ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಮತ್ತು 48 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ನಿಲ್ಲಿಸಿ ಸಮಾನ ಶಕ್ತಿ/ಶತ್ರುಗಳೆಂದು ತೀರ್ಮಾನಿಸಿಬಿಡಬಹುದೇ? ಬಹುಶತ್ರುಗಳನ್ನು ಎದುರಿಟ್ಟುಕೊಂಡು ಯುದ್ಧಕ್ಕೆ ಹೊರಡುವವರು ಅವರಲ್ಲಿ ಬಲಶಾಲಿ ಶತ್ರು ಯಾರೆಂದು ಗುರುತಿಸದೆ ಹೋದರೆ ಯುದ್ಧದ ಗುರಿತಪ್ಪಿ ಅದೊಂದು ವಿಫಲ ರಣತಂತ್ರವಾಗುವ ಸಾಧ್ಯತೆ ಇಲ್ಲವೇ?
 ಇತಿಹಾಸದ ವಿದ್ಯಾರ್ಥಿಯಾಗಿರುವ ಯೋಗೇಂದ್ರ ಯಾದವ್ ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ನೆನಪು ಮಾಡಿಕೊಂಡೇ ಆ ಪಕ್ಷ ಕೂಡಾ ಬಿಜೆಪಿಯಂತೆ ಇನ್ನೊಂದು ಹಾವು ಎಂದು ಹೇಳಿದ್ದಾರೆ. ಇತಿಹಾಸದ ಅಧ್ಯಯನ ಅಲ್ಲಿಗೆ ನಿಲ್ಲದೆ ಸ್ವಲ್ಪ ಮುಂದುವರಿಸುವ ಹೋಗುವ ಅಗತ್ಯ ಇದೆ. ದೈತ್ಯಪಕ್ಷವಾದ ಕಾಂಗ್ರೆಸ್ ಸರ್ವಾಧಿಕಾರಿಯಾಗಿ ಪರಿವರ್ತನೆಗೊಂಡಾಗ ಅದನ್ನು ಇತರ ರಾಜಕೀಯ ಪಕ್ಷಗಳು ಎದುರಿಸಿದ್ದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದನ್ನು ಕೂಡಾ ಇತಿಹಾಸದ ಪುಟಗಳಿಂದಲೇ ತಿಳಿದುಕೊಳ್ಳುವುದು ಬೇಡವೇ?
1977ರ ಲೋಕಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಜನಾಕ್ರೋಶವನ್ನು ಎದುರಿಸುತ್ತಿದ್ದರೂ, ಆ ಪಕ್ಷ  350 ಸದಸ್ಯ ಬಲದಿಂದ 150ಕ್ಕೆ ಇಳಿದದ್ದು ವಿರೋಧ ಪಕ್ಷಗಳ ಸಂಘಟಿತ ಪ್ರಯತ್ನದಿಂದ. ವಿರೋಧಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಕಾಂಗ್ರೆಸ್ ವಿರುದ್ಧದ ಜನಾಕ್ರೋಶಕ್ಕೆ ಸರಿಯಾದ ಅಭಿವ್ಯಕ್ತಿ ನೀಡುವ ಮೂಲಕ ತಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡಿದ್ದರು.
 ಕಾಂಗ್ರೆಸ್ ಪಕ್ಷದಿಂದ ಸಿಡಿದುಬಂದಿದ್ದ ಜಗಜೀವನ್ ರಾಮ್ ನೇತೃತ್ವದ ಕಾಂಗ್ರೆಸ್ ಫಾರ್ ಡೆಮಾಕ್ರಸಿ, ಭಾರತೀಯ ಲೋಕದಳ, ಸ್ವತಂತ್ರ ಪಕ್ಷ, ಕಾಂಗ್ರೆಸ್ (ಒ) ಮಾತ್ರವಲ್ಲ ಬಿಜೆಪಿಯ ಹಳೆಯ ರೂಪವಾದ ಭಾರತೀಯ ಜನಸಂಘ ಸೇರಿ ರಚನೆಗೊಂಡ ಜನತಾ ಪಕ್ಷ ರಚಿಸಿಕೊಂಡು ಚುನಾವಣೆಯನ್ನು ಎದುರಿಸದೆ ಇದ್ದಿದ್ದರೆ ಆ ಗೆಲುವು ಕಷ್ಟವಾಗುತ್ತಿತ್ತು. ಹೌದು, ವಿರೋಧ ಪಕ್ಷಗಳ ಏಕತೆಯ ರೂವಾರಿಯಾಗಿದ್ದ ಜಯಪ್ರಕಾಶ್ ನಾರಾಯಣ್ ಅಂತಹ ನಾಯಕರು ಈಗ ನಮ್ಮ ನಡುವೆ ಇಲ್ಲ. ಇದು ಸಾಮೂಹಿಕ ನಾಯಕತ್ವದ ಕಾಲ.
ಇಂದು ದೇಶದಲ್ಲಿ ಅಂತಹದ್ದೇ ಸ್ಥಿತಿ ಇರುವುದನ್ನು ಕಾಣದೆ ಹೋದರೆ ಇತಿಹಾಸ ನಮ್ಮನ್ನು ಕ್ಷಮಿಸಲಾರದು. ಈ ಕಾಂಗ್ರೆಸ್ ಪಕ್ಷವನ್ನು ನಂಬಬಹುದೇ ಎಂಬ ಪ್ರಶ್ನೆ ಹೆಚ್ಚು ವಾಸ್ತವಿಕವಾದುದು. ಈ ಪಕ್ಷ ನಂಬಿಕೆಗೆ ಸಂಪೂರ್ಣ ಅರ್ಹ ಎಂದು ಇತಿಹಾಸ ಹೇಳುವುದಿಲ್ಲ ನಿಜ. ಆದರೆ ವರ್ತಮಾನದ ದಿನಗಳಲ್ಲಿ ಆ ಪಕ್ಷ ಕೆಲವೊಂದು ಬದಲಾವಣೆಗೆ ಮುಕ್ತವಾಗಿ ತೆರೆದುಕೊಳ್ಳುತ್ತಿರುವುದನ್ನು ಗಮನಕ್ಕೆ ತೆಗೆದುಕೊಳ್ಳಲೇಬೇಕಾಗುತ್ತದೆ.
ಬಹುಮುಖ್ಯವಾಗಿ ಇಂದು ಕಾಂಗ್ರೆಸ್ ಪಕ್ಷದಲ್ಲಿ ನೆಹರೂ, ಇಂದಿರಾಗಾಂಧಿಯವರಂತಹ ಬಲಿಷ್ಠ ನಾಯಕ-ನಾಯಕಿಯರಿಲ್ಲ. ಸೋನಿಯಾಗಾಂಧಿ ಅಧ್ಯಕ್ಷರಾಗಿ 20 ವರ್ಷಗಳ ಕಾಲ ಆ ಪಕ್ಷವನ್ನು ಕಾಯ್ದುಕೊಂಡು ಬಂದಿದ್ದು ತನ್ನ ಬಲಿಷ್ಠ ನಾಯಕತ್ವದಿಂದಲ್ಲ, ಅದು ಹಿಂದಿನ ಕಾಂಗ್ರೆಸ್ ನಾಯಕರಲ್ಲಿ ಅಪರೂಪವಾಗಿದ್ದ ಹೊಂದಾಣಿಕೆಯ ಸರಳ ಗುಣ ಮತ್ತು ರಾಜಕೀಯದಲ್ಲಿ ಅಪರೂಪವಾಗಿರುವ ಅಧಿಕಾರ ತ್ಯಾಗದ ನಿರ್ಧಾರದಿಂದ. ಇಂತಹ ಗುಣವಿಶೇಷಗಳು ಸೋನಿಯಾಗಾಂಧಿಯವರಲ್ಲಿ ಇಲ್ಲದೆಹೋಗಿದ್ದರೆ ತನ್ನನ್ನು ವಿದೇಶಿ ಎಂದು ನಿಂದಿಸಿ ಪಕ್ಷ ಬಿಟ್ಟುಹೋದ ಶರದ್ ಪವಾರ್, ತಮ್ಮ ಗಂಡನ ಹತ್ಯೆಯ ಆರೋಪದ ನೆರಳಲ್ಲಿದ್ದ ಡಿಎಂಕೆಯ ಕರುಣಾನಿಧಿ ಯುಪಿಎ ಸೇರಲು ಸಾಧ್ಯವಾಗುತ್ತಿರಲಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ 20 ವರ್ಷಗಳ ಅವಧಿಯಲ್ಲಿ ಸೋನಿಯಾಗಾಂಧಿ ಎಂದೂ ಕೂಡಾ ಸೇಡಿನ ರಾಜಕಾರಣಕ್ಕೆ ಕೈಹಾಕಿಲ್ಲ, ಮಿತ್ರಪಕ್ಷವನ್ನು ದಮನಿಸುವ ದುಸ್ಸಾಹಸಕ್ಕೂ ಇಳಿದಿಲ್ಲ ಎನ್ನುವುದನ್ನು ಕೂಡಾ ಗಮನಿಸಬೇಕಾಗುತ್ತದೆ. ಈ ಗುಣಗಳಿಂದಾಗಿಯೇ ಸೋನಿಯಾ ಗಾಂಧಿ ಇಂದು ಸಂಜೆ ಊಟಕ್ಕೆ ಕರೆದರೂ ಬಿಜೆಪಿಯೇತರ ಬಹುತೇಕ ಪಕ್ಷಗಳ ನಾಯಕರು ಹಾಜರಿರುತ್ತಾರೆ.
ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾದ ರಾಹುಲ್ ಗಾಂಧಿ ಭವಿಷ್ಯದ ನಡೆಯನ್ನು ಈಗಲೇ ವಿಶ್ಲೇಷಿಸುವುದು ಅವಸರದ ತೀರ್ಮಾನವಾದರೂ, ಈ ಯುವನಾಯಕನಲ್ಲಿ ತಪ್ಪನ್ನು ತಿದ್ದಿಕೊಳ್ಳುವ, ಅನುಭವದಿಂದ ಕಲಿಯುವ ತೆರೆದ ಮನಸ್ಸಿದೆ, ಹೊಸಹಾದಿ ತುಳಿಯಬೇಕೆಂಬ ತುಡಿತವನ್ನು ಅವರ ಇತ್ತೀಚಿನ ನಿರ್ಧಾರಗಳಲ್ಲಿ ಕಾಣಬಹುದು.
ಕಾಂಗ್ರೆಸ್ ಪಕ್ಷದ ತಲೆಮೇಲಿನ ದೊಡ್ಡಭಾರವೆಂದರೆ ರಾಷ್ಟ್ರೀಯ ಪಕ್ಷ ಎಂಬ ಕಿರೀಟ,  ಈ ಕಿರೀಟವನ್ನು  ಕೆಳಗಿಳಿಸುವುದು ಅದಕ್ಕೂ ಕಷ್ಟ. ಕಾಂಗ್ರೆಸ್ ಪಕ್ಷದ ಇತ್ತೀಚಿನ ಸೋಲುಗಳ ಸರಣಿಯನ್ನು ಗಮನಿಸಿದರೆ ಸ್ವಯಂವೇದ್ಯವಾಗುತ್ತದೆ. 
ಕಾಂಗ್ರೆಸ್ ಪಕ್ಷದ ಮೇಲಿನ ಇನ್ನೊಂದು ಆರೋಪ ಹೈಕಮಾಂಡ್ ಸಂಸ್ಕೃತಿ. ಇದನ್ನು ಬದಲಾಯಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿರುವುದು ಭರವಸೆಯ ಬೆಳವಣಿಗೆ. ವಿಧಾನಸಭಾ ಚುನಾವಣೆಯ ನಂತರ ಶಾಸಕಾಂಗ ಪಕ್ಷದ ನಾಯಕನನ್ನು ಹೈಕಮಾಂಡ್ ನಿರ್ಧರಿಸುವ ಅಲಿಖಿತ ನಿಯಮವನ್ನು ಕಳೆದ ಬಾರಿ ಕರ್ನಾಟಕದಲ್ಲಿಯೇ ಮುರಿಯಲಾಯಿತು. ಇಲ್ಲಿಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲಾಯಿತು. 
ಪ್ರಾದೇಶಿಕ ನಾಯಕರನ್ನು ಬೆಳೆಯಲು ಕಾಂಗ್ರೆಸ್ ಬಿಡುವುದಿಲ್ಲ ಎಂಬ ಇನ್ನೊಂದು ಆರೋಪವನ್ನು ಕೂಡಾ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲುವ ಮೂಲಕ ಹುಸಿಗೊಳಿಸಿದ್ದಾರೆ. ಅಮರೀಂದರ್ ಸಿಂಗ್ ಅವರಿಗೆ ನೀಡಿದ್ದ ಮುಕ್ತಹಸ್ತದ ಕಾರಣದಿಂದಾಗಿಯೇ ಪಂಜಾಬ್ ರಾಜ್ಯವನ್ನು ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿದ್ದು.
ಇವೆಲ್ಲಕ್ಕಿಂತಲೂ ಮುಖ್ಯವಾಗಿ ಭಾರತದಂತಹ ಒಕ್ಕೂಟ ವ್ಯವಸ್ಥೆಯ  ಮತ್ತು ಬಹುಜಾತಿ, ಧರ್ಮ, ಸಂಸ್ಕೃತಿಯ ಪ್ರಜಾಪ್ರಭುತ್ವ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳು ಹೆಚ್ಚು ಪ್ರಾದೇಶಿಕವಾಗಬೇಕು ಮತ್ತು ಪ್ರಾದೇಶಿಕ ಪಕ್ಷಗಳು ಹೆಚ್ಚು ರಾಷ್ಟ್ರೀಯವಾಗಬೇಕಾಗುತ್ತದೆ. ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಆ ಹಾದಿಯಲ್ಲಿರುವ ಹಾಗೆ ಕಾಣುತ್ತಿದೆ.
ಹಿಂದಿ ಹೇರಿಕೆ, ಕನ್ನಡದ ಧ್ವಜ ಮತ್ತು ಕೇಂದ್ರ ಹಣಕಾಸು ಆಯೋಗದಿಂದಾಗುತ್ತಿರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಲುವಿಗೆ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ ಬೆಂಬಲವಾಗಿ ನಿಂತದ್ದು ಸಣ್ಣ ಬದಲಾವಣೆಯೇನಲ್ಲ. ಇಂತಹದ್ದೊಂದು ದಿಟ್ಟ ನಿಲುವನ್ನು ಸಿದ್ದರಾಮಯ್ಯನವರು ಕೈಗೊಂಡಾಗ ದೆಹಲಿ ಮೂಲದ ನಾಯಕರು ಪ್ರಾರಂಭಿಕ ಹಂತದಲ್ಲಿ ವ್ಯಕ್ತಪಡಿಸಿದ್ದ ವಿರೋಧ, ನಂತರದ ದಿನಗಳಲ್ಲಿ ಬದಲಾದ ಹಿನ್ನೆಲೆಯನ್ನು ನಾನೂ ಸ್ವಲ್ಪ ಬಲ್ಲೆ.
ಯುದ್ಧ ಕಾಲದಲ್ಲಿ ಕೆಲವು ರಾಜಿಗಳನ್ನು ಮಾಡಬೇಕಾಗುತ್ತದೆ, ಅಂತಹ ರಾಜಿ ಒಮ್ಮೊಮ್ಮೆ ಭವಿಷ್ಯದಲ್ಲಿ ಅಪಾಯಕಾರಿಯಾಗಿ ಬಿಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. 1977ರ ರಾಜಕೀಯ ಪ್ರಯೋಗದಿಂದಲೂ ಅಂತಹದ್ದೊಂದು ಅನಾಹುತ ನಡೆದುಹೋಯಿತು. ಮಹಾತ್ಮಗಾಂಧೀಜಿ ಹತ್ಯೆಯ ನಂತರ ಸುಮಾರು 30 ವರ್ಷಗಳ ಕಾಲ ರಾಜಕೀಯವಾಗಿ ತಲೆಎತ್ತಲಾಗದೆ ಇದ್ದ ಜನಸಂಘಕ್ಕೆ ರಾಜಕಾರಣದ ಮುಖ್ಯವಾಹಿನಿ ಪ್ರವೇಶಿಸಲು ಜನತಾ ಪ್ರಯೋಗ ಅವಕಾಶ ನೀಡಿತು. ಇಂತಹದ್ದೊಂದು ಸಣ್ಣ ಅವಕಾಶವನ್ನು ಬಳಸಿಕೊಂಡ ಪಕ್ಷ ಇಂದು ದೇಶದ ಜಾತ್ಯತೀತ ಸ್ವರೂಪವನ್ನೇ ನಾಶ ಮಾಡುವಂತಹ ಕೋಮುಶಕ್ತಿಯಾಗಿ ಬೆಳೆದು ನಿಂತು ನಮ್ಮನ್ನು ಅಣಕಿಸುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ದೇಶದಲ್ಲಿ ರಾಜಕೀಯ ಪಕ್ಷಗಳನ್ನು ರಾಜಕೀಯ ಬಲಾಬಲದ ಜತೆ ಸಿದ್ಧಾಂತದ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಮಾನ ಶತ್ರುಗಳೆಂದು ತೀರ್ಮಾನಿಸುವ ಮೊದಲು ಈ ಪಕ್ಷಗಳ ಮೂಲಸಿದ್ಧಾಂತದ ಕಡೆ ಕಣ್ಣುಹಾಯಿಸಬೇಕಾಗುತ್ತದೆ. ಸೈದ್ಧಾಂತಿಕವಾಗಿ ಇಂದಿಗೂ ಬಿಜೆಪಿಯೇತರ ರಾಜಕೀಯ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷದ ಸಾಮಾಜಿಕ, ಸಾಂಸ್ಕೃತಿಕ ನೀತಿ ನಿರ್ಧಾರಗಳ ಬಗ್ಗೆ  ಹೆಚ್ಚು ತಕರಾರಿಲ್ಲ. ಜಾತ್ಯತೀತತೆಯೂ ಸೇರಿದಂತೆ ಸಂವಿಧಾನದ ಮೂಲ ಆಶಯಗಳಿಗೆ ಕಾಂಗ್ರೆಸ್ ಬದ್ಧವಾಗಿದೆ. ವಿರೋಧ ಇರುವುದು ಮುಖ್ಯವಾಗಿ ಅದರ ಆರ್ಥಿಕ ನೀತಿಯ ಬಗ್ಗೆ.
ಈ ಸಮಸ್ಯೆಯಲ್ಲಿಯೇ ಪರಿಹಾರ ಇದೆ. ಸ್ವಂತ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಂಗ್ರೆಸ್ ಪಕ್ಷದಲ್ಲಿಯೂ ಇಲ್ಲ, ಉಳಿದಿರುವುದು ಮೈತ್ರಿಕೂಟದ ಆಯ್ಕೆ. ಈ ಮೈತ್ರಿಕೂಟದ ಒತ್ತಡ ಕೂಡಾ ಸರ್ಕಾರ ಹಾದಿ ಬದಲಿಸಿದಂತೆ ನೋಡಬಹುದು. ಯುಪಿಎ-1 ರಲ್ಲಿ ಎಡಪಕ್ಷಗಳ ಹಾಜರಿ ಇಲ್ಲದೆ ಹೋಗಿದ್ದರೆ ಬ್ಯಾಂಕು ಮತ್ತು ವಿಮಾ ಕ್ಷೇತ್ರ ಖಾಸಗೀಕರಣಕಗೊಂಡು ದಶಕ ಕಳೆದುಹೋಗುತ್ತಿತ್ತೋ ಏನೋ? ಇದು ಒಂದು ಉದಾಹರಣೆ ಅಷ್ಟೇ. 
ಈ ರೀತಿ ಕಾಂಗ್ರೆಸ್ ಪಕ್ಷದಲ್ಲಿ ಸೈದ್ಧಾಂತಿಕ, ರಾಜಕೀಯ ಮತ್ತು ವೈಯಕ್ತಿಕವಾದ ನಡವಳಿಕೆಗಳ ಸಮಸ್ಯೆ ಇರುವುದು ನಿಜ. ಇದನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲದೆ ಹೋದರೂ ನಿಯಂತ್ರಿಸಲು ಸಾಧ್ಯ. 
ಇಂದು ದೇಶ ಎದುರಿಸುತ್ತಿರುವ ಬಿಕ್ಕಟ್ಟು ಕೇವಲ ರಾಜಕೀಯವಾದುದಲ್ಲ, ಕೋಮುವಾದದ ಅಟ್ಟಹಾಸದಿಂದಾಗಿ ಈ ನೆಲದ,ಸಾಮಾಜಿಕ,ಸಾಂಸ್ಕೃತಿಕ ಪರಂಪರೆ ಅಪಾಯ ಎದುರಿಸುತ್ತಿದೆ, ಈ ದೇಶದ ದಲಿತರು, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರು ರಕ್ಷಣೆಯಿಲ್ಲದೆ ಭಯಭೀತರಾಗಿದ್ದಾರೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಹಿರಂಗವಾಗಿ ಸವಾಲು ಹಾಕುತ್ತಾ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಭಾರತೀಯ ಜನತಾ ಪಕ್ಷದ ಸೋಲು ಸಾಮಾಜಿಕ, ರಾಜಕೀಯ ಮಾತ್ರವಲ್ಲ ಸಾಂವಿಧಾನಿಕ ಜವಾಬ್ದಾರಿ ಕೂಡಾ ಹೌದು. ಇದು ಚುನಾವಣಾ ರಂಗದಲ್ಲಿ ನಿಜವಾದ ಶತ್ರುವನ್ನು ಗುರುತಿಸುವ ಕಾಲ, ಇಲ್ಲಿ ಎಡವಿದರೆ ಇತಿಹಾಸ ಕ್ಷಮಿಸಲಾರದು.
 ನಟ ಪ್ರಕಾಶ್ ರೈ ಹೇಳಿದಂತೆ ಮಾರಣಾಂತಿಕವಾದ ಕ್ಯಾನ್ಸರ್‍ಗೆ ಮೊದಲು ಚಿಕಿತ್ಸೆ ನೀಡಬೇಕು, ನಂತರ ಕೆಮ್ಮು-ಜ್ವರ ನಿಭಾಯಿಸಿಕೊಳ್ಳಬಹುದು.
 
– ದಿನೇಶ್ ಅಮೀನ್‍ಮಟ್ಟು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here