ಅಕ್ರಮಣಕಾರಿ ಆಟದಿಂದ ಹೆಸರಾಗಿರುವ ಸ್ಟ್ರಾಂಗ್ ಕ್ರಿಕೆಟರ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಬಿಸಿಸಿಐನ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಂಗಾಳದ ಕ್ರಿಕೆಟರ್ ಸೌರವ್ ಗಂಗೂಲಿ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಬಿಸಿಸಿಐನ ಪೂರ್ಣಾವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ನಲ್ಲಿ ಬಿಸಿಸಿಐನ ಅಧ್ಯಕ್ಷ ಸ್ಥಾನ ಅಲಂಕರಿಸಿದ ಎರಡನೇ ಭಾರತೀಯ ಕ್ರಿಕೆಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಸೌರವ್ ಗಂಗೂಲಿ ಅಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ನೂತನ ಶೈಲಿಗೆ ನಾಂದಿ ಹಾಡಿದ್ದರು. ಬಿಸಿಸಿಐನ ಅಧ್ಯಕ್ಷ ಗಾದಿ ರೇಸ್ ನಲ್ಲಿ ಭಾರತದ ಮಾಜಿ ಕ್ರಿಕೆಟಿಗ, ಕರ್ನಾಟಕದ ಬ್ರಿಜೇಶ್ ಪಟೇಲ್ ಕೂಡ ಇದ್ದರು. ಆದರೆ ಅಂತಿಮವಾಗಿ ಸೌರವ್ ಗಂಗೂಲಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಬಿಸಿಸಿಐನ ಅಧ್ಯಕ್ಷರಾಗಿ ಅವಿರೋಧವಾಗಿ ಕ್ರಿಕೆಟ್ ದಾದಾ ಸೌರವ್ ಗಂಗೂಲಿ ಆಯ್ಕೆಯಾದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಬಿಸಿಸಿಐನ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದರ ಜತೆಗೆ ನೂತನ ಖಜಾಂಚಿಯಾಗಿ ಅರುಣ್ ಧುಮಲ್ ನೇಮಕಗೊಂಡಿದ್ದಾರೆ.
ಬಿಸಿಸಿಐ ವಿವಿಧ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿತ್ತು. ಆದರೆ ಬಿಸಿಸಿಐ ಸ್ಥಾನಕ್ಕಾಗಿ ಸಾಕಷ್ಟು ಲಾಬಿ ನಡೆದ ಹಿನ್ನೆಲೆ ಚುನಾವಣೆ ನಡೆಯದೆಯೇ, ಅವಿರೋಧವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಬ್ರಿಜೇಶ್ ಕೂಡ ಪೈಪೋಟಿ ನಡೆಸಿದ್ದರು. ಈ ಮಧ್ಯೆ 2021ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಪರ ಪ್ರಚಾರ ನಡೆಸುವ ವಿಚಾರವಾಗಿ ಸೌರವ್ ಗಂಗೂಲಿ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ಬೇರೆ ಅಭ್ಯರ್ಥಿ ಹುಡುಕಾಟ ನಡೆದಿತ್ತು. ಆದರೆ ಬೇರೆ ಭಾಗಗಳಿಂದ ಕೇಳಿ ಬಂದ ವಿರೋಧದಿಂದ ಹೈಡ್ರಾಮಾ ನಡೆದಿತ್ತು. ಇದೆಲ್ಲದರ ನಂತರ ಈಗ ಸೌರವ್ ಗಂಗೂಲಿ ಬಿಸಿಸಿಐನ ನೂರನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಿಸಿಸಿಐ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ವಿಚಾರಕ್ಕೆ ಸೌರವ್ ಗಂಗೂಲಿ ಸಂತಸ ವ್ಯಕ್ತಪಡಿಸಿದರು. ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಖುಷಿಯಾಗಿದೆ. ಯಾವುದೋ ವಿಶೇಷ ಮತ್ತು ಉತ್ತಮ ಕೆಲಸ ಮಾಡಲು ಬಿಸಿಸಿಐ ಅವಕಾಶ ಕಲ್ಪಿಸಿದೆ. ನನಗೆ ಬಿಸಿಸಿಐ ಬೃಹತ್ ಜವಾಬ್ದಾರಿ ನೀಡಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನ ನಿಭಾಯಿಸುವುದು ಒಂದು ಸವಾಲಿನ ಕೆಲಸ ಎಂದು ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಬಿಸಿಸಿಐನ ಪೂರ್ಣಾವಧಿಗೆ ಅಧ್ಯಕ್ಷರಾಗಿ ಭಾರತ ತಂಡದ ಕ್ಯಾಪ್ಟನ್ ಮಹಾರಾಜಕುಮಾರ್ ವಿಜಿಯಾನಗ್ರಾಮ್ ಅಥವಾ ವಿಜ್ಜಿ 1954ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ನೇಮಕೊಂಡಿದ್ದರು. ಅವರ ನಂತರ ಬಿಸಿಸಿಐ ಅಧ್ಯಕ್ಷರಾಗಿ ಭಾರತೀಯ ಕ್ರಿಕೆಟಿಗರು ಆಯ್ಕೆಯಾಗಿರಲಿಲ್ಲ. ಭಾರತೀಯ ಲೆಜೆಂಡ್ ಕ್ರಿಕೆಟಿಗ ಸುನೀಲ್ ಗವಾಸ್ಕರ್ 2014ರಲ್ಲಿ ಮಧ್ಯಂತರ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಅವರನ್ನು ಬಿಸಿಸಿಐ ಪೂರ್ಣಾವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿಲ್ಲ.
ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಸಂಸ್ಕೃತಿ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತದ ಹೊರಗೆ ಟೆಸ್ಟ್ ಕ್ರಿಕೆಟ್ ಆಡಿದ ರೀತಿಯ ಬದಲಾವಣೆಗೆ ಕಾರಣರಾಗಿದ್ದರು. 2003ರಲ್ಲಿ ಐಸಿಸಿ ವರ್ಲ್ಡ್ ಕಪ್ ಫೈನಲ್ ತಲುಪಲು ಭಾರತದ ತಂಡಕ್ಕೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದರು. ಯುವರಾಜ್ ಸಿಂಗ್, ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್, ಎಂ.ಎಸ್.ಧೋನಿ ಸೇರಿದಂತೆ ಅನೇಕ ಯುವ ಆಟಗಾರರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದ್ದರು. ಗಂಗೂಲಿ 2015ರಿಂದ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೌರವ್ ಗಂಗೂಲಿಯವರಿಗೆ ಗಣ್ಯರು ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
ಇಲ್ಲಿಯವರೆಗೆ ಆಯ್ಕೆಯಾದ ಬಿಸಿಸಿಐ ಅಧ್ಯಕ್ಷರ ಪಟ್ಟಿ ಈ ಕೆಳಗಿನಂತಿದೆ.



