Homeಕರ್ನಾಟಕಪತ್ರಿಕೆಯ ಮೂಲಕ ಜನಪರ ಹೋರಾಟಕ್ಕೆ ಆಖಾಡ ಸಿದ್ಧ!...

ಪತ್ರಿಕೆಯ ಮೂಲಕ ಜನಪರ ಹೋರಾಟಕ್ಕೆ ಆಖಾಡ ಸಿದ್ಧ!…

- Advertisement -
- Advertisement -

ಜನವಾಹಿನಿಯ ನೆನಪುಗಳು: ಅಂಕಣ-7
ನಿಖಿಲ್ ಕೋಲ್ಪೆ

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಮೊದಲೇ ಹೇಳಿದಂತೆ ಕಂಪ್ಯೂಟರ್ ಇತ್ಯಾದಿ ಬಂದಿದ್ದರೂ, ಆಗ ಆನ್ಲೈನ್ ಎಡಿಟಿಂಗ್ ಹೊಸ ವಿಷಯವಾಗಿದ್ದುದರಿಂದ ಅದಕ್ಕಾಗಿಯೇ ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಪೂರೈಸಿದ ಕಂಪೆನಿಯವರು ವಿಶೇಷ ತರಬೇತಿ ಏರ್ಪಡಿಸಿದ್ದರು.

ನಮ್ಮಲ್ಲಿ ಕೆಲವರು ಪೇಜ್‍ಮೇಕರ್ ಇತ್ಯಾದಿಗಳಲ್ಲಿ ನಿಷ್ಣಾತರಾಗಿದ್ದರೂ, ನನ್ನನ್ನೂ ಸೇರಿದಂತೆ ಕೆಲವರಿಗೆ ಕನ್ನಡ ಟೈಪಿಂಗ್ ಕೂಡಾ ಬರುತ್ತಿರಲಿಲ್ಲ! ವಿಭಾಗ ಮುಖ್ಯಸ್ಥರು ಸುದ್ದಿಗಳನ್ನು ಆಯ್ಕೆ ಮಾಡಿ, ಉಪಸಂಪಾದಕರಿಗೆ ಹಂಚಬೇಕು. ಉಪಸಂಪಾದಕರು ಟೈಪ್ ಮಾಡಿದ್ದನ್ನು ಮತ್ತೊಮ್ಮೆ ಓದಿ ವಿಭಾಗ ಮುಖ್ಯಸ್ಥರಿಗೆ ಆಂತರಿಕ ನೆಟ್ವರ್ಕ್ ಮೂಲಕ ಕಳಿಸಬೇಕು. ಅದನ್ನವರು ಪರಿಶೀಲಿಸಿ, ಹೆಡ್ಡಿಂಗ್ ಇತ್ಯಾದಿ ಸರಿಪಡಿಸಿ ಮರಳಿ ಪೇಜ್ ಮಾಡಲು ಕಳಿಸಬೇಕು. ಪೇಜ್ ಮಾಡಿದ ಬಳಿಕ ಅದರ ಪ್ರಿಂಟ್ ತೆಗೆದು ಮತ್ತೆ ಮುಖ್ಯಸ್ಥರಿಗೆ ತೋರಿಸಿ, ಅವರು ಅಂಗೀಕರಿಸಿದ ಬಳಿಕ ಎ3 ಪ್ರಿಂಟರಲ್ಲಿ ಬಟರ್‍ಶೀಟ್‍ನಲ್ಲಿ, ಬಣ್ಣದ ಪುಟವಾಗಿದ್ದರೆ ಫಿಲ್ಮ್ ಶೀಟ್‌ನಲ್ಲಿ ಪ್ರಿಂಟ್ ತೆಗೆದು ಪ್ರೀಪ್ರೆಸ್‍ಗೆ ಕಳುಹಿಸಬೇಕು. ಅಲ್ಲಿ ಪ್ಲೇಟ್ ತಯಾರಿಸಿ ಮುದ್ರಣ ವಿಭಾಗಕ್ಕೆ ಕಳಿಸುತ್ತಾರೆ. ಇದಕ್ಕಾಗಿ ಎಲ್ಲಾ ಕಂಪ್ಯೂಟರ್‌ಗಳಿಗೆ ಸಿರಿಯಲ್ ನಂಬರ್ ನೀಡಲಾಯಿತು. (ನಂತರ ಬಣ್ಣದ ಪುಟಗಳಿಗೆ ದುಬಾರಿ ಬೆಲೆಯ ಆ ಕಾಲದಲ್ಲಿ ಅತ್ಯಾಧುನಿಕ ಎನಿಸಿದ ಇಮೇಜ್ ಸೆಟ್ಟರ್ ಬಂತು. ಅದು ಕಲರ್ ಸೆಪರೇಶನ್ ಮಾಡಿ ಇಡೀ ಪುಟದ ಫಿಲ್ಮ್ ಹೊರತೆಗೆಯುತ್ತಿತ್ತು.)

ಆಗ ಈಗಿನಂತೆ ಎಲ್ಲವೂ ಡಿಜಿಟಲ್ ಫೋಟೋಗಳಾಗಿರಲಿಲ್ಲ. ಪ್ರಿಂಟ್‍ಗಳೂ ಇರುತ್ತಿದ್ದವು. ಅವುಗಳನ್ನು ತಾಂತ್ರಿಕ ವಿಭಾಗಕ್ಕೆ ಕಳುಹಿಸಿದರೆ, ಅಲ್ಲಿ ಸ್ಕ್ಯಾನ್ ಮಾಡಿ ಆಯಾ ಫೋಲ್ಡರ್‌ಗಳಿಗೆ ಹಾಕುತ್ತಿದ್ದರು. ದೇಶ, ವಿದೇಶಗಳ ಫೋಟೋಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಅವು ಸಂಜೆಯ ಹೊತ್ತಿಗೆ ಇಂಟರ್‌ನೆಟ್ ಮೂಲಕ ಬರುತ್ತಿದ್ದವು. ನೆಟ್‍ಗಾಗಿಯೇ ಡೆಡಿಕೇಟೆಡ್ ಕೇಬಲ್ ಅಳವಡಿಸಲಾಗಿತ್ತು. ಆದರೂ, ಆಗಿನ ಸ್ಪೀಡ್ ನೆನೆಸಿಕೊಂಡರೆ ನಗು ಬರುತ್ತದೆ! ಒಂದು ಫೋಟೋ ಬರಲು ಹೆಂಡತಿಯ ಹೆರಿಗೆಗಾಗಿ ಆಸ್ಪತ್ರೆಯಲ್ಲಿ ಕಾಯುವ ಗಂಡನ ಸ್ಥಿತಿ!

ಇವೆಲ್ಲವೂ ಈಗ ನೆನಸುವಷ್ಟು ಸುಲಭವಾಗಿ ಇರಲಿಲ್ಲ! ಇದಕ್ಕೆ ಹೊಂದಿಕೊಳ್ಳಲು ಕೆಲವು ದಿನಗಳೇ ಹಿಡಿದವು! ಅದಕ್ಕಾಗಿಯೇ ತರಬೇತಿ. ಕಂಪೆನಿಯಿಂದ ಸೌರಭ್ ಎಂಬ ಯುವಕ ಬಂದಿದ್ದರು. ಆತ ಒಳ್ಳೆಯ ಶಿಕ್ಷಕ. ನಡುವೆ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ಹೇಳಿದವರಿಗೆ ಒಂದು ಚಾಕಲೇಟ್ ಬಹುಮಾನ! ಕಂಪ್ಯೂಟರ್ ಅಜ್ಞಾನಿಯಾಗಿದ್ದ ನನಗೆ ಮೂರು ಚಾಕಲೇಟ್ ಸಿಕ್ಕಿದ್ದು ಇವತ್ತೂ ನೆನಪಿದೆ. ನಾವೆಲ್ಲ ಬಿಡುವಿನ ಸಂದರ್ಭದಲ್ಲಿ ಕನ್ನಡ ಟೈಪಿಂಗ್ ಕಲಿತೆವು. ಮೊದಲೇ ಹೇಳಿದಂತೆ DOS ಆಧರಿತ ‘ಪ್ರಕಾಶಕ್’ ಎಂಬ ಸಾಫ್ಟ್‌ವೇರ್. ಕಲಿಯಲು ಕಷ್ಟ. ಯಾಕೆಂದರೆ ಕೀ ಬೋರ್ಡ್ ಅಸಂಬದ್ಧ ಎಂಬಂತೆ ಕಾಣುತ್ತಿತ್ತು. ಇಂಗ್ಲೀಷ್ ಅಕ್ಷರಗಳಿಗೂ ಅದಕ್ಕೂ ಸಂಬಂಧವೇ ಇಲ್ಲ! ಒಮ್ಮೆ ಕಲಿತರೆ ಅತ್ಯಂತ ಸರಳ ಮತ್ತು ಅನುಕೂಲಕರ. ನಾನಂತೂ ಸ್ವಲ್ಪ ಸಮಯದಲ್ಲೇ ಹೆಚ್ಚುಕಡಿಮೆ ಮಾತಿನ ವೇಗದಲ್ಲಿ ಟೈಪ್ ಮಾಡಲು ಕಲಿತೆ! ಆಗ ಕಲಿತ ಒಂದು ಪಾಠವೆಂದರೆ, ಏನನ್ನಾದರೂ ಕಲಿಯಲು ಇರುವ ಅಡ್ಡಿಯೆಂದರೆ ಮಾನಸಿಕ ಹಿಂಜರಿಕೆ (mental block). ಇದನ್ನು ನಿವಾರಿಸಿದ್ದಕ್ಕಾಗಿ ಸೌರಭ್‌ರನ್ನು ನೆನಪಿಸಿಕೊಳ್ಳುತ್ತೇನೆ.

ಮೊದಲೇ ದುಬಾರಿ ಕಂಪ್ಯೂಟರ್! ಏನು ಮಾಡಿದರೆ ಏನು ಹಾಳಾಗುತ್ತದೋ ಎಂಬ ಭಯ ಬೇರೆ! “ನೀವು ಇದನ್ನು ಎತ್ತಿ ಹಾಕದ ಹೊರತು ಏನೂ ಆಗುವುದಿಲ್ಲ. ಪ್ರೋಗ್ರಾಂ ಫೈಲ್ಸ್ ಮುಟ್ಟಬೇಡಿ. ಮುಟ್ಟಿದರೂ ಅದು ಕನ್ಫರ್ಮೇಶನ್ ಕೇಳುತ್ತದೆ. ಡಿಲೀಟ್ ಮಾಡಬೇಡಿ. ಉಳಿದಂತೆ ನೀವು ಕಂಪ್ಯೂಟರ್ ಹಾಳು ಮಾಡಿ ತೋರಿಸಿ. ನಾನು ಬೇರೆ ಕಂಪ್ಯೂಟರ್ ಕೊಡುತ್ತೇನೆ” ಎಂದು ಅವರು ಧೈರ್ಯ ತುಂಬಿದ್ದರು! ಇದರಿಂದ ಮುಂದೆ ನಾವಾಗಿಯೇ ಒಂದೊಂದನ್ನೇ ಧೈರ್ಯವಾಗಿ ಕಲಿಯಲು ಸಾಧ್ಯವಾಯಿತು.

ಎಷ್ಟರ ಮಟ್ಟಿಗೆ ಎಂದರೆ, ಅವರು ಫೈಲ್ ಶೇರಿಂಗ್ ಮಾಡಲು ಇ-ಮೈಲ್‍ನಂತಹ ಸಾಫ್ಟ್‌ವೇರ್ ಕೊಟ್ಟಿದ್ದರು. ಅದು ಕಿರಿಕಿರಿ ಉಂಟು ಮಾಡುತ್ತಿತ್ತು! ಮುಂದೆ ನಾವೇ explorer ಮೂಲಕ ಕಾಪಿ ಪೇಸ್ಟ್ ಮಾಡುವ ಸರಳ ಉಪಾಯ ಕಂಡು ಹಿಡಿದೆವು!

ನಾವು ಸೀನಿಯರ್‌ಗಳಿಗೆ ಈ ತರಬೇತಿಗಳಲ್ಲಿ ನಿರಂತರ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದೆ. ಕಾರಣ ನಾವು ಪತ್ರಿಕೆಯಲ್ಲಿ ಇರಬೇಕಾದ ಸ್ಥಿರ ಶೀರ್ಷಿಕೆ, ವಿಭಾಗಗಳು ಇತ್ಯಾದಿಗಳ ಬಗ್ಗೆ ತಲೆಕೆರೆದುಕೊಳ್ಳುತ್ತಿದ್ದೆವು. ಪಟ್ಟಣಗಳ ಸುದ್ದಿ ಪುಟಗಳಿಗೆ ‘ಪೇಟೆ-ಪಟ್ಟಣ’, ಗ್ರಾಮೀಣ ಸುದ್ದಿಗಳ ಪುಟಗಳಿಗೆ ’ಊರು-ಕೇರಿ’, ಕ್ರೀಡಾಪುಟಗಳಿಗೆ ‘ಆಟ-ಕೂಟ’ ಹೀಗೆ ಹೆಸರುಗಳನ್ನು ಪಟ್ಟಿ ಮಾಡಿ ಅಂತಿಮಗೊಳಿಸುವುದೂ ದೊಡ್ಡ ಕೆಲಸವಾಗಿತ್ತು.

ಇನ್ನೊಂದು ದೊಡ್ಡ ಕೆಲಸವೆಂದರೆ ಬೇರೆ ಬೇರೆ ಆವೃತ್ತಿಗಳನ್ನು ಯೋಜಿಸುವುದು! ಆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಉಡುಪಿಗೆ ಒಂದು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯಕ್ಕೆ ಒಂದು, ಮಂಗಳೂರಿಗೆ ಒಂದು ಮತ್ತು ಅಂತಿಮವಾಗಿ ಲೇಟ್ ಸಿಟಿ ಎಡಿಷನ್! ಜೊತೆಗೆ ಉತ್ತರ ಕನ್ನಡ, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಿಗೆ ಪ್ರತ್ಯೇಕ- ಹೀಗೆ ಹಲವು ಆವೃತ್ತಿಗಳು! ಇವುಗಳು ಎಷ್ಟು ದೂರ ಇವೆ, ಎಷ್ಟು ಗಂಟೆಗೆ ತಲುಪಬೇಕು, ಪುಟ ಎಷ್ಟು ಗಂಟೆಗೆ ಮುಗಿಯಬೇಕು, ಅದಕ್ಕೆ ತಕ್ಕಂತೆ ಸಿಬ್ಬಂದಿಗಳಿಗೆ ಶಿಫ್ಟ್ ಮತ್ತು ಕೆಲಸಕ್ಕೆ ಹಾಜರಾಗುವ ಸಮಯ ನಿಗದಿ ಪಡಿಸುವುದು ಇತ್ಯಾದಿಯಾಗಿ ಹಲವಾರು ತಲೆನೋವಿನ ಕೆಲಸಗಳು ನಮಗಿದ್ದವು!

ಇವೆಲ್ಲವನ್ನು ಅನುಷ್ಠಾನಕ್ಕೆ ತರಲು ಬೇರೆಬೇರೆ ವಿಭಾಗಗಳನ್ನು ರಚಿಸಲಾಯಿತು. ಆ ಕುರಿತು ಮತ್ತು ಅವುಗಳಲ್ಲಿ ನನಗೆ ನೆನಪಿರುವಂತೆ ಇದ್ದವರು ಯಾರು ಇತ್ಯಾದಿಗಳ ಕುರಿತು ಮುಂದೆ ಬರೆಯುತ್ತೇನೆ.
***

ಕಚೇರಿಯೇ ಮನೆಯಾಯಿತು!

ಪತ್ರಿಕೆಗಾಗಿ ಯೋಜನೆ, ತರಬೇತಿ ನಡೆಯುತ್ತಿದ್ದಾಗ ಮತ್ತು ನಂತರ ಪತ್ರಿಕೆ ಆರಂಭಗೊಂಡ ಬಳಿಕವೂ ನಾವು ಕೆಲವರು ಕಚೇರಿಯಲ್ಲಿಯೇ ಮಲಗುತ್ತಿದ್ದೆವು. ಕೆಲಸ ಅಷ್ಟಿತ್ತು! ಮುಖಪುಟ ನೋಡಿಕೊಳ್ಳಬೇಕಾಗಿದ್ದ ನನಗಂತೂ ನಿತ್ಯ ರಾತ್ರಿ ಪಾಳಿ ಖಾಯಂ! ರಾತ್ರಿ ಎಡಿಷನ್ ಮುಗಿಸಿ ಪತ್ರಿಕೆ ಪ್ರಕಟವಾಗಿ ಬಂಟ್ವಾಳ ಎಡಿಷನ್ ಸಾಗಿಸುವ ಕಾರಿನಲ್ಲಿ ಹೋಗಿ ಪಾಣೆಮಂಗಳೂರಿನಲ್ಲಿ ಇಳಿದು ಎರಡು ಕಿ.ಮೀ. ನಿಶಾಚರ ಪಿಶಾಚಿಯಂತೆ ನಡೆದು ಮನೆ ಸೇರಬೇಕು. ಮತ್ತೆ ನಿದ್ದೆಯ ಶಾಸ್ತ್ರ ಮಾಡಿ ಮರುದಿನ ಹಾಜರಾಗಬೇಕು. ಪ್ರಯಾಣದ ಸಮಯವೂ ವ್ಯರ್ಥ! ವಿಲ್ಫ್ರೆಡ್ ಡಿ’ಸೋಜಾ ಅವರಿಗೆ ಇನ್ನೂ ದೂರ- ಉಪ್ಪಿನಂಗಡಿ ದಾಟಿ ಹೋಗಬೇಕು. ಅಲ್ಲದೆ ಉಳಿದವರೂ ಬೈಕಂಪಾಡಿಯಿಂದ ರಾತ್ರಿ ಹೊತ್ತು ಸ್ವಂತ ವಾಹನವಿಲ್ಲದೇ ಹೊರಡುವುದು ಕಷ್ಟ. ನಗರದೊಳಗಿನ ಸಿಬ್ಬಂದಿಗೆ ವಾಹನ ವ್ಯವಸ್ಥೆ ಇತ್ತು.

ಒಂದು ದಿನ ಬೆಳ್ಳಂಬೆಳಗೆ ಆಡಳಿತ ನಿರ್ದೇಶಕ ಸ್ಯಾಮುಯೆಲ್ ಸಿಕ್ವೇರಾ ಕಚೇರಿಗೆ ಬಂದವರೇ ದಂಗು ಬಡಿದುಹೋದರು! ನಾವು ಕೆಲವರು ಕಚೇರಿಯಲ್ಲಿಯೇ ಸಿಕ್ಕಸಿಕ್ಕಲ್ಲಿ ಪೇಪರ್ ಹಾಸಿ ಮಲಗಿದ್ದೆವು. “ಹಾಂ! ನೀವು ಇಲ್ಲಿಯೇ ಮಲಗುತ್ತಿದ್ದೀರಾ!?” ಎಂದವರೇ, ಆಗ ಅವರ ಬಳಿ ಮಾತ್ರವಿದ್ದ ವಾಕಿಟಾಕಿ ಗಾತ್ರದ ಮೊಬೈಲ್ ಫೋನಿನಲ್ಲಿ ಮಾತನಾಡಲಾರಂಭಿಸಿದರು.

ಮಧ್ಯಾಹ್ನದ ಹೊತ್ತಿಗೆ ನಮ್ಮ ದೊಡ್ಡ ಹಾಲ್‍ನಲ್ಲಿ ಪಾರ್ಟಿಷನ್ ಆಯಿತು. ಫ್ಯಾನ್‍ಗಳು ಫಿಕ್ಸ್ ಆದವು. ಐದು ಮಂಚಗಳು, ಹಾಸಿಗೆ, ದಿಂಬು, ಹೊದಿಕೆ, ಬಟ್ಟೆಬರೆ ಇಡಲು ಲಾಕರ್ ಎಲ್ಲವೂ ಬಂದವು. ಅದೇ ರಾತ್ರಿಯಿಂದ ನಮ್ಮ ಪೇಪರ್ ಹಾಸಿಗೆಗೆ ವಿದಾಯ ಹೇಳಿದೆವು. ಇದಕ್ಕಾಗಿಯೇ ನಾನವರನ್ನು ಇಂದೂ ನೆನಪಿಸಿಕೊಳ್ಳುತ್ತೇನೆ. ನಾವೂ ಕೂಡಾ ಇಮ್ಮಡಿ ಪ್ರೀತಿಯಿಂದ ದುಡಿಯಲಾರಂಭಿಸಿದೆವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Thanks for this great write up on Janawahini by Nikhil Kolpe sir.. it manifests their struggle to get the newspaper published in time with perfection must be applauded.. Waiting for further episodes.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...