ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದಾಗ ಹೆದ್ದಾರಿ ಕಾಮಗಾರಿಯಲ್ಲಿನ ಭಾರೀ ಭ್ರಷ್ಟಾಚಾರದ ಕುರಿತು ಪ್ರಧಾನಿ ಕಚೇರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಕ್ಕಾಗಿ ಪ್ರಾಮಾಣಿಕ ಸರಕಾರಿ ಇಂಜಿನಿಯರ್ ಸತ್ಯೇಂದ್ರ ದುಬೆ ಅವರ ಕೊಲೆ ನಡೆದಿದ್ದರೆ, ಇದೀಗ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿರುವಾಗ ಮಾಹಿತಿ ಹಕ್ಕು ಕಾಯಿದೆಗೇ ತಿದ್ದುಪಡಿ ತಂದು ಅದರ ಹಲ್ಲುಗಳನ್ನು ಕೀಳುವುದರ ಮೂಲಕ ಅರೆಜೀವಗೊಳಿಸಲಾಗಿದೆ.

ಸರಕಾರವು ಏಕೀಕೃತ ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೂ, ಮಾಹಿತಿ ಹಕ್ಕು (ತಿದ್ದುಪಡಿ) ಮಸೂದೆ 2019ನ್ನು ಲೋಕಸಭೆಯಲ್ಲಿ ಅಂಗೀಕಾರ ಮಾಡಿಸುವಲ್ಲಿ ಸಫಲವಾಗಿದೆ. ಈ ಮಸೂದೆಯು ಮುಂದಿನ ವಾರ ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಸರಕಾರದ ಈ ಕ್ರಮದಿಂದ ಕೇಂದ್ರ ಮತ್ತು ರಾಜ್ಯಗಳ ಮಾಹಿತಿ ಆಯೋಗವು ದುರ್ಬಲವಾಗಿ, ಸ್ವಾತಂತ್ರ್ಯ ಕಳೆದುಕೊಂಡು, ಹೆಚ್ಚು ಕಡಿಮೆ ಸರಕಾರದ ಅಡಿಯಾಳಾಗಿ ಕೆಲಸ ಮಾಡಬೇಕಾಗುತ್ತದೆ ಎಂಬುದು ಪ್ರತಿಪಕ್ಷಗಳ ಮತ್ತು ಮಾಹಿತಿ ಹಕ್ಕು ಸಂಘಟನೆಗಳು ಮತ್ತು ಕಾರ್ಯಕರ್ತರ ವಾದ. ಹಲವಾರು ಹಿರಿಯ ಮಾಜಿ ಅಧಿಕಾರಿಗಳು ಕೂಡಾ ಇಂತದ್ದೇ ಭಯವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆಯ ಕುರಿತು ಮೋದಿ ಸರಕಾರದ ಅಸಡ್ಡೆ ಬಯಲಾಗಿದೆ.

ಸತ್ಯೇಂದ್ರ ದುಬೆ ಅವರ ಪ್ರಕರಣದಲ್ಲಿ ಏನಾಗಿತ್ತು ಅಂದರೆ, ಅವರು ಭಾರತೀಯ ಇಂಜಿನಿಯರಿಂಗ್ ಸೇವೆ (ಐಇಎಸ್)ಯ ಅಧಿಕಾರಿ. ಅವರು ವಾಜಪೇಯಯವರ ಕನಸಿನ ಯೋಜನೆಯಾದ ಮಹಾ ಹೆದ್ದಾರಿಯ ಗಯಾ ವಿಭಾಗದಲ್ಲಿ ಯೋಜನಾ ನಿರ್ದೇಶಕರಾಗಿದ್ದರು. ನ್ಯಾಷನಲ್ ಹೈವೇ ಅಥಾರಿಟಿ (NHA) ಅಧಿಕಾರಿ.. ಅವರಿಗೆ ವಾಜಪೇಯಿಯವರ ಪ್ರಾಮಾಣಿಕತೆ ಬಗ್ಗೆ ಅತೀವ ವಿಶ್ವಾಸ ಇತ್ತು. ಆದರೆ ಅವರು ಮುಗ್ಧರಾಗಿದ್ದರು. ಐದು ಕಿ.ಮೀ. ಹೆದ್ದಾರಿ ಪುನರ್ರಚಿಸುವಂತೆ ಆದೇಶಿಸಿದ್ದರು. ಅವರು ಭ್ರಷ್ಟಾಚಾರದ ಎಲ್ಲಾ ವಿವರಗಳನ್ನೂ ಅಂಕಿಅಂಶ ಸಹಿತ ಪ್ರಧಾನಿ ಕಚೇರಿಗೆ ಕಳಿಸಿದ್ದರು. ಆದರೆ ಮಾಹಿತಿ ಪ್ರಧಾನಿಯಂತಹ ಉನ್ನತ ಕಚೇರಿಯಿಂದಲೇ ಸೋರಿಕೆಯಾಯಿತು. ಬೆಳಗ್ಗೆ ಚಹಾ ಕುಡಿಯಲು ಹೋದ ಗೂಡಂಗಡಿಯಲ್ಲೇ ಅವರನ್ನು ಅಟಕಾಯಿಸಿ ಕೊಲ್ಲಲಾಯಿತು. ಪ್ರಾಮಾಣಿಕ ಪ್ರಧಾನಿ ಕಚೇರಿಗೂ ಲೋಕಲ್ ಗೂಂಡಾಗಳಿಗೂ ಸಂಬಂಧ ಇರುವಾಗ ಈಗಿನ ಪ್ರಧಾನಿಯ ಕಾಲದಲ್ಲಿ ಏನು ನಡೆಯಬಹುದು; ಊಹಿಸಿ!
ನಮ್ಮದೇ ಕರಾವಳಿಯಲ್ಲಿ ಅರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗರ ಕೊಲೆಯಾಯಿತು. ಬಿಜೆಪಿ ಕಾರ್ಯಕರ್ತರೂ, ಪ್ರಸಿದ್ಧ ದೇವಸ್ಥಾನ ಒಂದರ, ಪ್ರತಿನಿತ್ಯ ಭೇಟಿ ನೀಡುತ್ತಿದ್ದ ಭಕ್ತರನ್ನೇ ಸುಪಾರಿ ಕೊಟ್ಟು ಕೊಲ್ಲಿಸಿ ಜೈಲಿಗೆ ಹೋಗಿ ಬಂದವರನ್ನು ಸೂಲಿಬೆಲೆಯಂತಹಾ ಬಾಯಿಬಡುಕರು ಜೈಲಿನಿಂದ ಹೊರಬಂದಾಗ ಹಾರಹಾಕಿ ಸ್ವಾಗತಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಇದ್ದ್ದವರು ಇಂದು ಶಾಸಕರು. ಬಾಳಿಗ ಮಾಡಿದ ಒಂದೇ ತಪ್ಪು ಈ ದೇವಸ್ಥಾನದ ಅಕ್ರಮಗಳ ಬಗ್ಗೆ ಆರ್‌ಟಿಐ ಕಾಯಿದೆಯಡಿ ಮಾಹಿತಿ ಕೇಳಿದ್ದು.
ಈ ಹಿನ್ನೆಲೆಯಲ್ಲಿಯೇ ಮಾಹಿತಿ ಹಕ್ಕು ಕಾರ್ಯಕರ್ತರನ್ನು ರಕ್ಷಿಸಲು ‘ವಿಸಿಲ್ ಬ್ಲೋವರ್ಸ್ (ಪ್ರೊಡಕ್ಷನ್) ಆಕ್ಟ್ ಬಂದಿತ್ತು. ಅದನ್ನೂ ಮೋದಿ ಸರಕಾರ ಕೊಂದಿದೆ. ಮೋದಿಯ ಉದ್ದೇಶ ಸ್ಪಷ್ಟ. ಈಗ ತಿದ್ದುಪಡಿ!

ಲೋಕಸಭೆಯಲ್ಲಿ ಯಾವುದೇ ಮಸೂದೆ ಅಂಗೀಕಾರ ಮಾಡಿಸುವಷ್ಟು ಬಲ ಸರಕಾರಕ್ಕೆ ಇದೆ ಮತ್ತು ಪ್ರತಿಪಕ್ಷಗಳು ಈ ವಿಷಯದಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿದವು ಎಂಬುದು ನಿಜವಾದರೂ ಈ ಕುರಿತು ಸಾಕಷ್ಟು ಗಂಭೀರವಾಗಿಲ್ಲ ಎಂಬುದನ್ನು ಮಸೂದೆಯ ಪರ ಮತ್ತು ವಿರೋಧವಾಗಿ ಬಿದ್ದ ಮತಗಳ ಸಂಖ್ಯೆಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುವುದರ ಮೂಲಕ ಸಾಂವಿಧಾನಿಕ ರೀತಿಯಲ್ಲಿಯೇ ಅರಿವಿಗೆ ಬರದಂತೆ, ಅಧಿಕಾರದ ಕೇಂದ್ರೀಕರಣ ಮತ್ತು ಸರ್ವಾಧಿಕಾರಿ ಆಡಳಿತದ ಕಡೆಗೆ ಸಾಗುವ ಆರೆಸ್ಸೆಸ್, ಬಿಜೆಪಿ ಮತ್ತು ಮೋದಿ ಸರಕಾದ ಹುನ್ನಾರಗಳ ದಾರಿಯಲ್ಲಿ ಈ ತಿದ್ದುಪಡಿ ಒಂದು ಪ್ರಮುಖ ಹೆಜ್ಜೆ ಎಂಬುದು ಪ್ರತಿಪಕ್ಷಗಳಿಗೆ ಅರಿವಾದಂತಿಲ್ಲ. ಮಸೂದೆಯ ಪರವಾಗಿ 178 ಮತಗಳು ಬಿದ್ದರೆ, ವಿರೋಧವಾಗಿ ಬಿದ್ದದ್ದು ಕೇವಲ 79 ಮತಗಳು. ಉಳಿದ ಸಂಸದರು ಎಲ್ಲಿದ್ದರು?
ಈ ತಿದ್ದುಪಡಿ ಮಸೂದೆಯು ಮಾಹಿತಿ ಆಯುಕ್ತರ ಅಧಿಕಾರಾವಧಿ ಮತ್ತು ಸಂಭಾವನೆಯ ಮೇಲೆ ಸರಕಾರಕ್ಕೆ ಹೆಚ್ಚಿನ ಅಧಿಕಾರ ನೀಡುತ್ತದೆ. ಆಡಳಿತದಲ್ಲಿ ಪಾರದರ್ಶಕತೆ ಇರಬೇಕೆಂಬ ಬಹುಕಾಲದ ಮತ್ತು ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿರುವ ಬೇಡಿಕೆಗಳಿಗೆ ಅನುಗುಣವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2005ರಲ್ಲಿ ಮಾಹಿತಿ ಹಕ್ಕು ಕಾಯಿದೆಯನ್ನು ಜಾರಿಗೆ ತಂದಿತ್ತು. ಈ ಕಾಯಿದೆಯ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಬೇರೆಬೇರೆ ರಾಜ್ಯಗಳು ತಮ್ಮದೇ ಮಾಹಿತಿ ಹಕ್ಕು ಕಾಯಿದೆಗಳನ್ನು ತಂದಿದ್ದವು. ಕರ್ನಾಟಕ ಮಾಹಿತಿ ಹಕ್ಕು ಕಾಯಿದೆಯು ಈ ನಿಟ್ಟಿನಲ್ಲಿ ರೂಪಿಸಲಾದ ಅತ್ಯುತ್ತಮ ಕಾಯದೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಮೂಲ ಮಾಹಿತಿ ಹಕ್ಕು ಕಾನೂನಿನಲ್ಲಿ ಕೇಂದ್ರ ಮಾಹಿತಿ ಆಯೋಗಕ್ಕೆ ಕೇಂದ್ರ ಚುನಾವಣಾ ಆಯೋಗದ ಸ್ಥಾನಮಾನ ನೀಡುತ್ತದೆ. ಅಂದರೆ, ಎರಡೂ ಸ್ವಾಯತ್ತ ಸಂಸ್ಥೆಗಳು. ಸರಕಾರ ಅವುಗಳ ವ್ಯವಹಾರಗಳಲ್ಲಿ ತಲೆಹಾಕುವಂತಿಲ್ಲ. ಚುನಾವಣಾ ಆಯೋಗಕ್ಕೆ ವಿಧಾನಿಕ ಮಾನ್ಯತೆ ಇದ್ದರೆ, ಮಾಹಿತಿ ಆಯೋಗಕ್ಕೆ ಕಾನೂನಿನ ಮಾನ್ಯತೆ ಇದೆ. ಇದನ್ನೇ ಮೋದಿ ಸರಕಾರವು ಬಳಸಿಕೊಳ್ಳುತ್ತಿದೆ. ಸಾಂವಿಧಾನಿಕ ತಿದ್ದುಪಡಿ ಮಾಡುವುದು ಸದ್ಯಕ್ಕೆ ಕಷ್ಟವಿದೆ. ಕಾರಣ-ರಾಜ್ಯಸಭೆಯಲ್ಲಿ ಆಳುವ ಕೂಟಕ್ಕೆ ಮೂರನೇ ಎರಡು ಬಹುಮತವಿಲ್ಲ. ಆದರೆ, ಕಾಯಿದೆಯನ್ನು ಬದಲಾಯಿಸುವ ಅವಕಾಶ ನಿಸ್ಸಂಶಯವಾಗಿ ಇದೆ.
ಅದಕ್ಕಾಗಿಯೇ ಎರಡು ಆಯೋಗಗಳ ಪೈಕಿ ಮಾಹಿತಿ ಹಕ್ಕು ಆಯೋಗವನ್ನೇ ಮೊದಲ ದಾಳಿಗಾಗಿ ಸರಕಾರ ಆಯ್ಕೆ ಮಾಡಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ‘ಅಕ್ರಮವನ್ನು ನೋಡಲಾರೆ ಕೇಳಲಾರೆ, ಆ ಕುರಿತು ಮಾತನಾಡಲಾರೆ’ ಎಂದು ಗಾಂಧೀಜಿಯವರ ಮೂರು ಮಂಗಗಳನ್ನೇ ವಿಡಂಬಿಸಿದ ಕೇಂದ್ರ ಚುನಾವಣಾ ಆಯೋಗವನ್ನು ತಮ್ಮ ಕಿರುಬೆರಳಲ್ಲಿ ಕುಣಿಸಿದವರಿಂದ ಇದಕ್ಕಿಂತ ಹೆಚ್ಚನ್ನು ನಿರೀಕ್ಷಿಸುವುದು ಪ್ರತಿಪಕ್ಷಗಳ, ಅದಕ್ಕಿಂತ ಹೆಚ್ಚಾಗಿ ಪ್ರಜ್ಞಾವಂತ ಜನತೆಯ ಮೂರ್ಖತನವಾದೀತು.
ಈ ತಿದ್ದುಪಡಿಯಲ್ಲಿ ಇರುವ ಮುಖ್ಯಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಾಹಿತಿ ಆಯೋಗವನ್ನು ನಿಯಂತ್ರಿಸುವ ಸರಕಾರದ ಉದ್ದೇಶ ಸ್ಪಷ್ಟವಾಗಿ ಕಾಣುತ್ತದೆ. ಮೊದಲನೆಯದಾಗಿ ಈಗಿರುವ ಕಾನೂನಿನ ಪ್ರಕಾರ ಕೇಂದ್ರ ಮುಖ್ಯ ಆಯುಕ್ತರು ಮತ್ತು ಇತರ ಆಯುಕ್ತರು ಐದು ವರ್ಷಗಳ ಅವಧಿ ಅಥವಾ 65 ವರ್ಷಗಳ ವಯಸ್ಸು ಹೊಂದುವ ವರೆಗೆ ಇರುತ್ತದೆ. ಈಗಿನ ತಿದ್ದುಪಡಿಯಲ್ಲಿ ಅವರ ಭವಿಷ್ಯ ಸರಕಾರದ ಕೈಯಲ್ಲಿ ಇರುತ್ತದೆ. ಇನ್ನೊಂದು ಕೈಗೊಂಬೆ!
ನನ್ನ ಮಾತು ಕೇಳದಿದ್ದರೆ ಯಾವಾಗಲೂ ನಿಮಗೆ ಪಿಂಕ್ ಸ್ಲಿಪ್ ಕಳುಹಿಸಬಹುದು ಎಂಬ ಕಾರ್ಪೊರೇಟ್ ವಿಧಾನವನ್ನು ದೇಶದ ಅತ್ಯುನ್ನತ ಸ್ವಾಯತ್ತ ಸಂಸ್ಥೆಯೊಂದಕ್ಕೆ ಕಾನೂನು ಪ್ರಕಾರ ಅನ್ವಯಿಸಲಾಗುತ್ತಿದೆ. ಈ ‘ಪಿಂಕ್ ಸ್ಲಿಪ್’ ಎಂಬುದು ಬಹುರಾಷ್ಟ್ರೀಯ ಕಂಪೆನಿಗಳು ನಿಮ್ಮನ್ನು ಮರ್ಯಾದೆಯಾಗಿ ತೊಲಗು ಎಂದು ಹೇಳುವ ಸೂಕ್ಷ್ಮ ವಿಧಾನ ಬಂಡವಾಳಶಾಹಿ ವಿಧಾನ ಎಂಬುದು ಕನಿಷ್ಟ ಐಟಿ, ಬಿಟಿಗರಿಗೆ ಗೊತ್ತು. ಇನ್ನು ಸರಕಾರ ಇವರ ಭವಿಷ್ಯ ನಿಯಂತ್ರಿಸುತ್ತದೆ- ‘ಮಗನೇ ಮಾತು ಕೇಳು! ಇಲ್ಲ, ನಿನ್ನ ಬಾಲ ನನ್ನ ಕೈಯಲ್ಲಿದೆ. ಕಟ್ ಮಾಡುತ್ತೇನೆ’ ಎಂಬ ತಿದ್ದುಪಡಿ ಇದು. ಏಕೆಂದರೆ, ಈ ತಿದ್ದುಪಡಿ ಕೇಂದ ಮಾಹಿತಿ ಆಯುಕ್ತರ ಸಹಿತ ಎಲ್ಲಾ ಮಾಹಿತಿ ಆಯುಕ್ತರ ಸೇವಾವಧಿಯನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಇದು ಬಂಡವಾಳಶಾಹಿ ಟ್ರಂಪ್ ಆಡಳಿತದ ಮೋದಿ ಕಾಪಿ. ಅದಾನಿ, ಅಂಬಾನಿ ಅಜೆಂಡಾ
ಇನ್ನೊಂದು ವಿಷಯ ಎಂದರೆ, ಮೂಲ ಕಾಯಿದೆಯಲ್ಲಿ ಚುನಾವಣಾ ಆಯುಕ್ತರಿಗೆ ಇರುವ ಸಂಭಾವನೆಯೇ ಮಾಹಿತಿ ಆಯುಕ್ತರಿಗೆ ಇರುತ್ತದೆ. ತಿದ್ದುಪಡಿ ಇದಕ್ಕೂ ಕತ್ತರಿ ಹಾಕುತ್ತದೆ. ಇವೆಲ್ಲವೂ ಕೇಂದ್ರ ಸರಕಾರದ ‘ವಿವೇಚನೆ’ಗೆ ಒಳಪಟ್ಟ ವಿಷಯ ಎಂದು ಹೇಳುತ್ತದೆ ಈ ತಿದ್ದುಪಡಿ. ಅಂದರೆ, ನಾನು ಹೇಳಿದ್ದೇ ಕಾನೂನು ಎನ್ನುವ ಧೋರಣೆ ಇದು.
ಮತ್ತೊಂದು ವಿಷಯವಿದೆ. ನಿವೃತ್ತ ಅಧಿಕಾರಿಯಾಗಿ- ನಿವೃತ್ತ ನ್ಯಾಯಾಧೀಶರೂ ಆಗಿದ್ದರೂ, ಒಂದು ವೇಳೆ ಮಾಹಿತಿ ಆಯುಕ್ತರಾದರೆ, ನಿವೃತ್ತಿ ವೇತನದ ಭಾಗವನ್ನು ಸಂಭಾವನೆಯಿಂದ ಕಡಿತಗೊಳಿಸಲಾಗುತ್ತದೆ. ಇದು ಧಣಿ-ಕೂಲಿಯಳಿನ ಸಂಬಂಧವನ್ನು ನೆನಪಿಸುವ ತಿದ್ದುಪಡಿ. ಅದು ಸರಕಾರವು ಮಾಹಿತಿ ಆಯೋಗಕ್ಕೆ ಮತ್ತು ಆಯುಕ್ತರಿಗೆ, ‘ಸಂಬಳ ನೀಡುವವರು ನಾವು, ಆದುದರಿಂದ ಎಚ್ಚರ’ ಎಂದು ಹೇಳುವ ರೀತಿಯಿದು.
ಈ ತಿದ್ದುಪಡಿ ವಿರುದ್ದ ಪ್ರತಿಪಕ್ಷಗಳು ಮಾತಾಡಿವೆ ನಿಜ. ಇದರ ವಿರುದ್ಧ ಹೋರಾಟ ಮಾಡಲೂ ಹಲವಾರು ಸಂಘಟನೆಗಳು ಸಿದ್ಧವಾಗಿವೆ ನಿಜ; ಹೋರಾಟದ ಸ್ವರೂಪ ಹೇಗೆ? ನಾವು ಇನ್ನಿಲ್ಲದಂತೆ ಈ ಕಾಯಿದೆ ಬಳಸಿ ಸುಳ್ಳಿನ ಮೇಲಿನ ಮಾನ ಕಾಪಾಡುತ್ತಿರುವ ಹುಸಿಹಸಿ ಸತ್ಯದ ಚಡ್ಡಿ ಜಾರಿಸಬೇಕು.


