Homeಅಂಕಣಗಳುಚರಿತ್ರೆಯ ಮಾರುವೇಷ

ಚರಿತ್ರೆಯ ಮಾರುವೇಷ

- Advertisement -
- Advertisement -

ರಹಮತ್ ತರೀಕೆರೆ |

ಕನ್ನಡದ ಮೊದಲಘಟ್ಟದ ಕಾದಂಬರಿಗಳಲ್ಲಿ ಒಂದಾದ ಪುಟ್ಟಣ್ಣನವರ `ಮಾಡಿದ್ದುಣ್ಣೋ ಮಹಾರಾಯ’ದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್, ಆಸ್ಥಾನ ಪಂಡಿತರೊಬ್ಬರ ಮಗಳ ಮದುವೆಯಲ್ಲಿ ಭಾಗವಹಿಸುವ ಸನ್ನಿವೇಶವಿದೆ. ದೊರೆ, ದೊರೆತನದ ಹಮ್ಮಿಲ್ಲದೆ ಜನರೊಂದಿಗೆ ಬೆರೆಯುವುದನ್ನು ಚಿತ್ರಿಸುವ ಕಾದಂಬರಿ, ಭಾರತ ಮತ್ತು ಯೂರೋಪಿನ ದೊರೆಗಳ ಚರಿತ್ರೆಗೆ ಹೊರಳಿಕೊಳ್ಳುತ್ತದೆ. ಆ ಲೋಕಚರಿತ್ರೆಯ ಭಿತ್ತಿಯಲ್ಲಿ ಮೈಸೂರು ದೊರೆಯ ಚಿತ್ರವನ್ನಿಟ್ಟು ಬೆಲೆಕಟ್ಟುತ್ತದೆ:
“ಯುಗಾಂತರದಲ್ಲಿ ಪುರಾಣ ಪ್ರಸಿದ್ಧರಾದ ನಳ ಮಾಂಧಾತ ಶ್ರೀರಾಮ ಮೊದಲಾದ ಚಕ್ರವರ್ತಿಗಳೂ ಮತ್ತು ಈಚೆಗೆ ಇದ್ದ ಅನೇಕ ರಾಜರೂ ಪ್ರಜೆಗಳೇ ತಮ್ಮ ದೈವವೆಂದು ತಿಳಿದು ರಾಜಸದ ಅಟ್ಟಹಾಸವನ್ನು ಬಿಟ್ಟು ಎಲ್ಲರಲ್ಲಿಯೂ ಲಲಿತವಾಗಿ ಇರುತ್ತಾ ಅವರ ಕಷ್ಟಸುಖಗಳನ್ನು ಅರಿತು ಲೋಕೋಪಕಾರವನ್ನು ಮಾಡುತಿದ್ದರು.. ಪ್ರತಿಷ್ಠೆಯೂ ಡಂಭವೂ ನಮ್ಮ ಸೀಮೆಯ ರಾಜರುಗಳಲ್ಲಿ ಹೆಚ್ಚಿದ್ದರೂ, ಸಮಯ ಬಂದಾಗ ತಮ್ಮ ಪದವಿ ಎಂಬ ಪ್ರತಾಪದ ಗಂಟನ್ನು ಅತ್ತ ಇರಿಸಿ, ಬಡವರಾಗಿಯೂ ಪ್ರಜೆಗಳಲ್ಲಿ ಪ್ರಜೆಯಾಗಿಯೂ ವಿಶೇಷವಾದ ಸೌಲಭ್ಯದಿಂದ ನಡೆದುಕೊಂಡು, ಪ್ರಜೆಗಳನ್ನು ಕೇವಲ ಆದರದಿಂದ ಕಾಣುವ ಸಹಜವಾದ ಗುಣವು ನಮ್ಮ ಹಲವು ರಾಜರಲ್ಲಿರುವುದರಿಂದ, ಎಂಥಾ ತುಂಟನಾದರೂ ರಾಜನ ಒಳ್ಳೇತನದಿಂದ ಜಿತನಾಗುವನು. ಈ ಗುಣವು ನಮ್ಮ ಅರಸರಲ್ಲಿರುವುದರಿದಲೇ ಪಾಶ್ಚಾತ್ಯ ರಾಜರಿಗೆ ಉಂಟಾದ ಅನೇಕ ಬಾಧಕಗಳು ನಮ್ಮ ದೇಶಗಳಲ್ಲಿ ಹುಟ್ಟಿಲ್ಲ. ಈಚೆಗೆ ಯೂರೋಪಿನ ರಾಜರ ಹಾಗೆ ನಮ್ಮ ದೊರೆಗಳೂ ಪ್ರಜೆಗಳ ವಿಷಯದಲ್ಲಿ ಬಿರ್ರನೆ ಬೀರಿಕೊಂಡು ಅಸಹ್ಯವಾದ ಮುರುಕನ್ನು ತೋರಿಸುತಾ ಇರುವುದು, ತನ್ನ ಸರಣಿಯಲ್ಲಿ ಅದರ ಫಲವನ್ನು ತೋರಿಸದೇ ಇರದು. ಇಂಥಾ ದುರ್ಗುಣಗಳು ಸಮೀಪ ವೃತ್ತಿಯಲ್ಲಿರತಕ್ಕವರ ದುರ್ಗುಣದ ಪ್ರತಿಬಿಂಬವಾಗಿದೆ. ಈ ಅಂಶವನ್ನು ಬಿಟ್ಟು ಯೋಚಿಸಿದರೆ, ಮುಮ್ಮಡಿ ಕೃಷ್ಣರಾಜ ಒಡೆಯರ ಸೌಲಭ್ಯವೂ ಧಾರಾಳವೂ ಎಂಥಾ ಶತ್ರುಗಳನ್ನಾದರೂ ಮಿತ್ರಸ್ಥಾನಕ್ಕೆ ತರುತ್ತಾ ಇದ್ದವು. ಪ್ರಜೆಗಳು ಎಂದರೆ ತನ್ನ ಮಕ್ಕಳು ಎಂದು ಭಾವಿಸಿಕೊಂಡಿದ್ದ ಈ ಮಹಾರಾಯನ ವಿವೇಕದಿಂದಲೇ ಮೈಸೂರ ರಾಜ್ಯವು ಇದುವರೆಗೆ ಇಷ್ಟರಮಟ್ಟಿಗೆ ಉಳಿದಿದೆ.’’
ಇಲ್ಲಿ ಆದರ್ಶ ಮತ್ತು ಕೆಟ್ಟ ದೊರೆತನದ ವ್ಯಾಖ್ಯಾನವಿದೆ. ಆದರ್ಶ ದೊರೆಯ ಗುಣಗಳೆಂದರೆ-ಪ್ರಜೆಗಳಿಗೆ ಸುಲಭವಾಗಿ ಲಭ್ಯವಾಗುವುದು; ಆಡಂಬರವಿಲ್ಲದೆ ಸಾಮಾನ್ಯನಂತೆ ಬದುಕುವುದು. ಪ್ರಜೆಗಳ ಪ್ರೀತಿವಿಶ್ವಾಸ ಗಳಿಸುವುದು; ಕೆಟ್ಟದೊರೆಯ ಚಹರೆಯೆಂದರೆ- ಪ್ರಜಾನುರಾಗ ಕಳೆದುಕೊಳ್ಳುವುದು, ಪ್ರಜಾಪೀಡಕ ಅಧಿಕಾರಿಗಳಿಗೆ ಆಡಳಿತ ಬಿಟ್ಟುಕೊಟ್ಟು ಅನಾಯಕತ್ವ ಸೃಷ್ಟಿಸುವುದು. ದೊರೆಗಳ ಗುಣಾವಗುಣಗಳ ಜಿಜ್ಞಾಸೆಗೆ ಪ್ರಜೆಗಳ ಪ್ರತಿರೋಧ ಎದುರಿಸಬೇಕಾದ ಪಾಶ್ಚಾತ್ಯ ದೊರೆಗಳ ಚರಿತ್ರೆ ಇಲ್ಲಿ ನೆಪವಾಗಿದೆ. ರಾಜನ ದಕ್ಷತೆಯನ್ನು ಪ್ರಜೆಗಳ ಅಭಿಪ್ರಾಯದ ಮೂಲಕ ನಿರ್ಧರಿಸಬೇಕು ಎಂಬ ನಿಲುವು ಇಲ್ಲಿ ವ್ಯಕ್ತವಾಗುತ್ತಿದೆ. ಕೆಟ್ಟದೊರೆತನವನ್ನು ಜನ ಮೂಕವಾಗಿ ಸಹಿಸದೆ ಪರ್ಯಾಯ ರಾಜಕೀಯ ವ್ಯವಸ್ಥೆ ಹುಟ್ಟಿಸಿಕೊಳ್ಳಬಲ್ಲರು ಎಂಬ ರಾಜಕೀಯ ಸತ್ಯವನ್ನು ಕಾಣಿಸಲಾಗುತ್ತಿದೆ. ದೊರೆಯ ಕೆಡುವಿಕೆಯಲ್ಲಿ ವೈಯಕ್ತಿಕ ಸಹವಾಸ ದೋಷವನ್ನು ಪ್ರಧಾನ ಸಂಗತಿಯಾಗಿ ಗುರುತಿಸಲಾಗುತ್ತಿದೆ. ದೊರೆ ಎಷ್ಟೇ ಸಜ್ಜನನಾಗಿದ್ದರೂ ಆಳ್ವಿಕೆಯಲ್ಲಿ ಬಿಗಿ ಕಳೆದುಕೊಂಡರೆ, ಪರಿವಾರ ಹದ್ದಿನನೆರವಿಯಾಗುತ್ತದೆ; ರಾಜ್ಯ ಪತನಗೊಳ್ಳುತ್ತದೆ ಎಂದು ಸೂಚಿಸಸಲು ಕಾದಂಬರಿ ಈ ಸುದೀರ್ಘ ಪೀಠಿಕೆಯನ್ನು ಹಾಕುತ್ತಿದೆ. ಚಾರಿತ್ರಿಕವಾಗಿ ರಾಜಕೀಯ ಜಿಜ್ಞಾಸೆ ಮಾಡುತ್ತ ರಾಜಧರ್ಮದ ಪರಿಕಲ್ಪನೆಯನ್ನು ಮುಂದಿಡುತ್ತಿದೆ.
ಇಲ್ಲಿ ಕಾದಂಬರಿ ರಾಜಕೀಯ ಪಠ್ಯವಾಗಿ ರೂಪಾಂತರಗೊಳ್ಳುತ್ತಿದೆ; ಇದಕ್ಕೆ ಪ್ರತಿಯಾಗಿ ಕೆಲವು ಚರಿತ್ರೆಯ ಕೃತಿಗಳು ಕಾದಂಬರಿಗಳಂತೆ ಕಥನ ಮಾಡುತ್ತವೆ. ಮೈಸೂರು ಆಸ್ಥಾನದ ಚರಿತ್ರಕಾರ ಶಿಂಗ್ರಯ್ಯನವರು ರಚಿಸಿದ `ಚಾಮರಾಜೇಂದ್ರ ಒಡೆಯರವರ ಚರಿತ್ರೆ’ ಇದಕ್ಕೆ ನಿದರ್ಶನ. ಗಂಡುಸಂತಾನವಿಲ್ಲದ ಮುಮ್ಮಡಿಯವರು, ದತ್ತುಸ್ವೀಕಾರ ಮಾಡಲು ಬ್ರಿಟಿಶ್ ಸರ್ಕಾರವು ಒಪ್ಪದಿದ್ದಾಗ, ಕೃತಿ ಆಕ್ರೋಶ ಪ್ರಕಟಿಸುವ ಪರಿಯನ್ನು ಗಮನಿಸಬೇಕು: “ವಾಚಕ ಮಹಾಶಯರೇ! ಕಾಲವು ವಿಪರ್ಯಾಸವನ್ನು ಪಡೆದು ಎಷ್ಟು ವಿಚಿತ್ರಗತಿಗೊಳಗಾಯ್ತು ನೋಡಿದಿರಾ? ಮೈಸೂರು ಸಂಸ್ಥಾನಾಧಿಪತಿಯು ಔರಸಪುತ್ರಾಭಾವದಿಂದ ಕೊರಗುತ್ತಾ ಸ್ವವಂಶಾಭಿವೃದ್ಧ್ಯರ್ಥವಾಗಿ ಒಬ್ಬ ಪುತ್ರನನ್ನು ಸ್ವೀಕಾರ ಮಾಡಿಕೊಳ್ಳಬೇಕಾದರೂ ಅನ್ಯದೇಶಿಯರ ಅಪ್ಪಣೆಯನ್ನು ಪಡೆಯಬೇಕಾಯಿತು. ಯಾವಯಾವ ಕಾಲದಲ್ಲಿ ಏನೇನು ಸಂಭವಿಸುವುದೋ ಅರಿತವರಾರು? ಇದನ್ನು ನೋಡಿದರೆ `ಭವಿತವ್ಯಂ ಭವತ್ಯೇವ ಕರ್ಮಣಾಮೀದೃಶೀಗತಿಃ ಎಂಬ ವಿಚಾರಿಗಳ ವಾಕ್ಯವು ನೆನಪಿಗೆ ಬರುವುದಲ್ಲವೇ?’.
ಕೃತಿಯ ನಿರೂಪಣೆ ವಾಚಕರನ್ನು ಸಂಬೋಧಿಸುತ್ತ, ಅವರನ್ನು ತನ್ನ ಭಾವಾವೇಶದಲ್ಲಿ ಒಳಗು ಮಾಡುತ್ತಿದೆ. ಕಾದಂಬರಿ ಮತ್ತು ಚರಿತ್ರೆಗಳ ಈ ಪಾತ್ರ ಬದಲಾವಣೆಯು, ಚರಿತ್ರಲೇಖನ ಮತ್ತು ಕಥನಗಳು ಮಾಡಿದ ಕೂಡು ಪ್ರಯೋಗಶೀಲತೆಯ ಫಲವಾಗಿವೆ. ಇಂತಹುದೇ ಪ್ರಯೋಗಶೀಲತೆ ವಸಾಹತುಶಾಹಿ ಕಾಲಘಟ್ಟದ ಮುಖ್ಯ ರಾಜಕೀಯ ಚಿಂತಕರಾದ ಡಿವಿಜಿಯವರಲ್ಲೂ ಕಾಣಬಹುದು. ತಮ್ಮ `ದಿವಾನ್ ರಂಗಾಚಾರ್ಲು’ನಲ್ಲಿ ಪ್ರಪಂಚದ ದೇಶಗಳಲ್ಲಿ ರಾಜಪ್ರಭುತ್ವದ ವಿರುದ್ಧ ನಡೆದ ದಂಗೆಗಳನ್ನು ಉಲ್ಲೇಖಿಸುತ್ತ ಅವರು ಹೀಗೆನ್ನುತ್ತಾರೆ: “ಯುದ್ಧದಿಂದ ಅಪಾಯ ಹೊಂದದೆ ಮತ್ತಷ್ಟು ಮಹೋನ್ನತವಾಗಿರುವ ಸಿಂಹಾಸನವು ಯೂರೋಪು ಖಂಡದಲ್ಲೆಲ್ಲಾ ಇಂಗ್ಲೆಂಡ್ ಒಂದರದೇ. ಅದಕ್ಕೆ ಅಲ್ಲಿಯ ರಾಜರು, ಇತರ ರಾಜರಂತೆ ಉಚ್ಚøಂಖಲರಾಗಿರದೆ ಪ್ರಜಾಭಿಪ್ರಾಯಕ್ಕೆ ಅನುಸಾರವಾಗಿ ನಡೆಯುತ್ತಿರುವುದೇ ಕಾರಣವೆಂದು ರಾಜಧರ್ಮವಿದರೆಲ್ಲರೂ ಘೋಷಿಸುತ್ತಿರುವರು… ಈ ರೀತಿಯಾಗಿ ಈಗ ನಾಗರಿಕತೆಗೆ ಬಂದಿರುವ ಭೂಭಾಗಗಳಲ್ಲೆಲ್ಲಾ ಪ್ರಜಾರಾಜ್ಯವೇ ಸ್ಥಿರವಾಗುತ್ತಿದೆ. ಇದೆಲ್ಲವನ್ನೂ ವಿಚಾರಿಸಿ ನೋಡಿದರೆ ತೋರಿಬರುವ ನೀತಿಯು ನಮ್ಮ ವ್ಯಾಸ ಕಾಳಿದಾಸಾದಿಗಳು ಹೇಳಿದ “ರಾಜಾ ಪ್ರಕೃತಿ ರಂಜನಾತ್’’ ಎಂಬ ವಾಕ್ಯದ ಅನುವಾದದಂತೆ ಕಾಣುತ್ತದೆ.’’ ಸ್ಥಳೀಯ ದಿವಾನರ ಚರಿತ್ರೆಯನ್ನು ಹೇಳಲು ಹೊರಟಿರುವ ಕೃತಿಯು, ಪಾಶ್ಚಾತ್ಯ ಜಗತ್ತಿನ ರಾಜಕೀಯ ಬೆಳವಣಿಗೆ ಮತ್ತು ಚಿಂತನೆಗಳನ್ನು, ಭಾರತದ ಸಾಂಪ್ರದಾಯಿಕ ಪ್ರಭುತ್ವದ ಪರಿಕಲ್ಪನೆಯ ಜತೆಗಿಟ್ಟು ನೋಡುತ್ತಿದೆ. ಇಲ್ಲಿ ಎಂ.ಎಸ್. ಪುಟ್ಟಣ್ಣ, ಶಿಂಗ್ರಯ್ಯ, ಡಿವಿಜಿಯವರು ಪ್ರಭು ಮತ್ತು ಪ್ರಭುತ್ವಗಳಿಗೆ ಹೊಸವ್ಯಾಖ್ಯೆಯನ್ನು ಕೊಡುತ್ತ ಪರೋಕ್ಷವಾಗಿ ತಮ್ಮ ಕಾಲಕ್ಕೆ ಬೇಕಾದ ರಾಜಧರ್ಮದ ಪರಿಕಲಕ್ಪನೆಯನ್ನು ರೂಪಿಸುತ್ತಿರುವುದು ಸ್ಪಷ್ಟವಾಗಿದೆ.
ವಸಾಹತುಶಾಹಿ ಕಾಲಘಟ್ಟದ ರಾಜಕೀಯ ಪಠ್ಯಗಳಿಗೆ ಗತಕಾಲದ ರಾಜಕೀಯ ಚರಿತ್ರೆಯನ್ನು ಕಟ್ಟುವುದಕ್ಕಿಂತ, ಸಮಕಾಲೀನ ರಾಜಕಾರಣದ ಬಗ್ಗೆ ಟೀಕೆಟಿಪ್ಪಣಿ ಮಾಡುವ ತುಡಿತವೇ ಮುಖ್ಯವಾಗಿದೆ. `ಮಹಾರಾಯ’ವು ಸಹವಾಸ ದೋಷದಿಂದ ದೊರೆ ಕೆಡುವ ವಿಷಯದಲ್ಲಿ `ನಮ್ಮ ದೊರೆಗಳು’ ಎನ್ನುವಾಗ, ಆಗ ಅಧಿಕಾರದಲ್ಲಿದ್ದ ನಾಲ್ವಡಿಯವರತ್ತ ಬೆರಳು ಮಾಡುತ್ತಿರುವಂತೆ ಕಾಣುತ್ತಿದೆ. ತಾನು ಆದರ್ಶವೆಂದು ಹೊಗಳುತ್ತಿರುವ ಮುಮ್ಮಡಿಯವರೂ ಒಂದು ಕಾಲಕ್ಕೆ ಈ `ದೋಷ’ಕ್ಕೆ ಪಕ್ಕಾಗಿದ್ದರು ಎಂಬುದನ್ನು `ಈ ಅಂಶವನ್ನು ಬಿಟ್ಟು ಯೋಚಿಸಿದರೆ’ ಎಂಬ ಒಕ್ಕಣೆಯಲ್ಲಿ ಸ್ಪಷ್ಟವಾಗಿದೆ. `ಮಹಾರಾಯ’ ಶಬ್ದಕ್ಕಿರುವ ಪ್ರಭು ಎಂಬರ್ಥವನ್ನು ಗಮನಿಸಿದರೆ, ಮಾಡಿದ್ದನ್ನು ಉಣ್ಣಬೇಕಾದುದು ತಪ್ಪಿತಸ್ಥ ಅಧಿಕಾರಿಗಳು ಮಾತ್ರವಲ್ಲ, ಆಳುವದೊರೆ ಕೂಡ. ಕಾದಂಬರಿ-ಜೀವನಚರಿತ್ರೆಗಳು ನಡುವೆ ಅವಕಾಶ ಸೃಷ್ಟಿಸಿಕೊಂಡು ಸಾಮಾಜಿಕ ರಾಜಕೀಯ ಚರಿತ್ರೆಯನ್ನು ಹೇಳುತ್ತವೆ. ವಿಜಯನಗರ ಚರಿತ್ರೆ ಕುರಿತ ಗಳಗನಾಥರ `ಕರುಣಾವಿಲಾಸ’ವಂತೂ ಚರಿತ್ರೆಯನ್ನು ಹೇಳುವ ನೆಪದಲ್ಲಿ ಸುದೀರ್ಘ ಧಾರ್ಮಿಕ ಉಪದೇಶ ಮಾಡÀುತ್ತದೆ. ಗಳಗನಾಥ ಪುಟ್ಟಣ್ಣ ಇಬ್ಬರಿಗೂ ಕಾದಂಬರಿ-ಚರಿತ್ರೆ ಪ್ರಕಾರಗಳಲ್ಲಿ ವ್ಯತ್ಯಾಸವಿಲ್ಲ. ಇಬ್ಬರೂ ಕಾದಂಬರಿಗಳ ಜತೆ ಬೇರೆಬೇರೆ ದೊರೆ ಮತ್ತು ಸಂತರ ಮೇಲೆ ಚರಿತ್ರೆಯನ್ನೂ ರಚಿಸಿದವರು. ತಮ್ಮ ಕೃತಿಗಳಲ್ಲಿ ರಾಜಕಾರಣ ಮತ್ತು ಧರ್ಮದ ತಾತ್ವಿಕತೆಗಳನ್ನು ಏಕೀಭವಿಸಿದವರು. `ಮಹಾರಾಯ’ವು ಕುಟುಂಬದ ಕಥೆಯನ್ನು ಹೇಳಹೊರಟು ನಾಡಿನ ಕಥೆಯನ್ನು ನಿರೂಪಿಸುತ್ತದೆ. ಈ ವಿಷಯದಲ್ಲಿ ಅದು ಟಾಲ್‍ಸ್ಟಾಯನ `ವಾರ್ ಅಂಡ್ ಪೀಸ’ನ್ನು ನೆನಪಿಸುತ್ತದೆ. ಪುಟ್ಟಣ್ಣನವರ `ಕುಣಿಗಲ್ ರಾಮಶಾಸ್ತ್ರಿಯ ಚರಿತ್ರೆ’ಯಾದರೂ, ವ್ಯಕ್ತಿಕಥೆಯನ್ನು ಹೇಳುತ್ತಲೇ ಅದನ್ನು ದೊರೆಯ ಚರಿತ್ರೆಯ ಜತೆಗೆ ಅಭೇದಗೊಳಿಸುತ್ತದೆ. `ಕವಿರಾಜಮಾರ್ಗ’ದಲ್ಲಿ ದೊರೆ-ಕವಿಯ ಸಂಗಮವಿದ್ದರೆ, ಇಲ್ಲಿ ದೊರೆ-ಪಂಡಿತನದು. “ಕುಣಿಗಲ ರಾಮಶಾಸ್ತ್ರಿಗಳು ಮೈಸೂರ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್ ಪ್ರಭುಗಳ ಆಸ್ಥಾನದಲ್ಲಿ ಮುಖ್ಯ ವಿದ್ವಾಂಸÀರಾಗಿದ್ದ ಕಾರಣ, ಈ ಚರಿತ್ರೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ದರಬಾರಿನ ರೀತಿ, ರಾಜಸಭೆಯ ಸ್ಥಿತಿ, ಆಗಿದ್ದ ಮುಖಂಡರಾದ ವೈದಿಕ ಲೌಖಿಕರ ಯೋಗ್ಯತೆ ಮತ್ತು ಸದ್ಗುಣಗಳು, ಆಗಿನ ಗ್ರಂಥವ್ಯಾಸಂಗ ಕ್ರಮ, ಸಮಕಾಲಿಕರಾದ ಪ್ರಂಡಿತರ ಯೋಗ್ಯತೆ, ಇವೆಲ್ಲಕ್ಕೂ ಮುಖ್ಯ ಆಧಾರಭೂತರಾಗಿದ್ದ ಕೃಷ್ಣರಾಜಪ್ರಭುಗಳ ಅಮೋಘವಾದ ಗುಣಾತಿಶಯಗಳು, ಇವೇ ಮೊದಲಾದ ವಿಷಯಗಳನ್ನು ಸಂಗತವಾದ ಕಡೆ ವರ್ಣಿಸಿದೆ’’ ಎಂಬ ಕೃತಿಯ ಸಮಜಾಯಿಶಿ ಗಮನಾರ್ಹ.
ಕನ್ನಡದಲ್ಲಿ ಬಹುತೇಕ ಚಾರಿತ್ರಿಕ ಕಾದಂಬರಿಗಳು ರಾಜಕೀಯ ಕಾದಂಬರಿಗಳಾಗಿ, ತಮ್ಮದೇ ಆದ ರಾಜಕೀಯ ಮೀಮಾಂಸೆ ಮಂಡಿಸುತ್ತವೆ. ಕನ್ನಡದ ಮಟ್ಟಿಗೆ ರಾಜಕೀಯ ಚರ್ಚೆಗೆ ಬಳಕೆಯಾದ ಜ್ಞಾನಶಿಸ್ತುಗಳಲ್ಲಿ ಮುಖ್ಯವಾದುದು ಚರಿತ್ರೆಶಾಸ್ತ್ರ. ಚರಿತ್ರೆಯನ್ನು ಮರುಕಟ್ಟುವ ನೆಪದಲ್ಲಿ ರಾಜಕೀಯ ತತ್ವಶಾಸ್ತ್ರವನ್ನು ಅಭಿವ್ಯಕ್ತಿಸುವ ಕಾದಂಬರಿಗಳಿಗೆ ವರ್ತಮಾನದ ಓದುಗರಲ್ಲಿ ಹೊಸ ರಾಜಕೀಯ ತಿಳುವಳಿಕೆಯನ್ನು ಮೂಡಿಸುವ ಆಶಯವೂ ಇದೆ. ಈ ದೃಷ್ಟಿಯಿಂದ 19ನೇ ಶತಮಾನದ `ಮಂಜೂಷ’ಕ್ಕಿಂತ 20ನೇ ಶತಮಾನದ `ಮಹಾರಾಯ’ `ಕರುಣಾವಿಲಾಸ’ಗಳು, ತೀವ್ರವಾದ ರಾಜಕೀಯ-ಚಾರಿತ್ರಿಕ ಪಠ್ಯಗಳು. ಇಲ್ಲೇ ಇಂಥ ರಾಜಕೀಯ-ಚಾರಿತ್ರಿಕ ಕಾದಂಬರಿಗಳನ್ನು ಉದ್ಘಾಟಿಸಿದ `ಮುದ್ರಾಮಂಜೂಷ’ವನ್ನು ಸ್ಮರಿಸಬೇಕು. ಕುರ್ತಕೋಟಿಯವರು “ಕೆಂಪುನಾರಾಯಣನದು ಕಾದಂಬರಿ ರೂಪವಿನ್ಯಾಸವನ್ನು ಸಂಸ್ಕøತದ ಕಥಾರೂಪದೊಂದಿಗೆ ಜೋಡಿಸುವ ಪ್ರಯತ್ನವಾಗಿದೆ. ಇತಿಹಾಸವನ್ನು ವಸ್ತುವಾಗಿಟ್ಟುಕೊಂಡು ಬರೆಯುವುದು ಕೂಡ ಆಗಿನ ಕಾಲಕ್ಕೆ ಹೊಸ ಮಾತಾಗಿತ್ತು… ಮೊಟ್ಟಮೊದಲಿಗೆ ಅವನು ಆಧುನಿಕ ಜನತೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಬರೆದಿದ್ದಾನೆ’’ ಎಂದು ವ್ಯಾಖ್ಯಾನಿಸುವರು. ಮಂಜೂಷಕಾರನ ಲಕ್ಷ್ಯದಲ್ಲಿ ಜನರಿದ್ದರೊ ಇಲ್ಲವೊ, ಪ್ರಭುತ್ವವಂತೂ ಇತ್ತು. ಏಕಕಾಲಕ್ಕೆ ಪ್ರಭುತ್ವಕ್ಕೂ ಪ್ರಜೆಗಳಿಗೂ ಉದ್ದೇಶಿಸಿ ಹುಟ್ಟಿದ ಚಾರಿತ್ರಿಕ ಸಾಮಾಜಿಕ ರಾಜಕೀಯ ಕಾದಂಬರಿಯಿದು. ವಸಾಹತುಶಾಹಿ ಕಾಲದಲ್ಲಿ ಇಂಥ ರಾಜಕೀಯ ಪಠ್ಯಗಳನ್ನು ರಚಿಸಿದ ಬಹುತೇಕರು ಸ್ವತಃ ದೊರೆಗಳು, ರಾಜಾಶ್ರಿತ ಅಧಿಕಾರಿಗಳು, ಆಸ್ಥಾನಕವಿಗಳು ಹಾಗೂ ಸ್ವತಂತ್ರ ರಾಜಕೀಯ ಚಿಂತಕರು ಆಗಿದ್ದರು. ಕುಟುಂಬದ ದೊರೆಯ ಹಾಗೂ ನಾಡಿನ ಕಥೆಗಳು ಒಂದರೊಳಗೊಂದು ಹೊಕ್ಕಾಡುವ ವಿನ್ಯಾಸವುಳ್ಳ ಇವರ ಕೃತಿಗಳು ಅಂತಿಮವಾಗಿ ನಿರ್ವಚಿಸುವುದು ತಮ್ಮ ಕಾಲಕ್ಕೆ ಬೇಕಾದ ರಾಜನೀತಿಯನ್ನು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...