Homeಮುಖಪುಟಫ್ರಾನ್ಸ್ ಅಧ್ಯಕ್ಷರನ್ನು ಅಲುಗಾಡಿಸುತ್ತಿರುವ ಹಳದಿ ಅಂಗಿಗಳು

ಫ್ರಾನ್ಸ್ ಅಧ್ಯಕ್ಷರನ್ನು ಅಲುಗಾಡಿಸುತ್ತಿರುವ ಹಳದಿ ಅಂಗಿಗಳು

- Advertisement -
- Advertisement -

 ಭರತ್ ಹೆಬ್ಬಾಳ್ |

ಕಳೆದ ಒಂದೆರಡು ತಿಂಗಳಿಂದ ಎರಡು ರಾಷ್ಟ್ರಗಳಲ್ಲಿ ಐತಿಹಾಸಿಕ ಪ್ರತಿಭಟನೆಗಳು ಜರುಗುತ್ತಿವೆ. ಅದರ ಪರಿಣಾಮದಿಂದಾಗಿ ವಿಶ್ವದ ಎರಡು ನಾಯಕರು ತಮ್ಮ ಅಧಿಕಾರ ಮುಂದುವರೆಯುವುದರ ಬಗ್ಗೆ ಚಿಂತಿತರಾದರು. ಒಂದು ಕಡೆ ರಾಜಕೀಯ ಹಿನ್ನೆಲೆ ಇಲ್ಲದೆ, ಬ್ಯಾಂಕಿಂಗ್ ಹಿನ್ನೆಲೆಯಿಂದ ಬಂದ ಫ್ರಾನ್ಸ್‍ನ ಅಧ್ಯಕ್ಷ ಎಮ್ಯಾನುಯೆಲ್ ಮಾಕ್ರೋನ್. ಮತ್ತೊಂದು ಕಡೆ ಇನ್ನೈವತ್ತು ವರ್ಷಗಳವರೆಗೂ ಅಧಿಕಾರ ನಮ್ಮದೇ ಎಂದು ಬೀಗುವ ನರೇಂದ್ರ ಮೋದಿ. ಇಬ್ಬರ ರಾಜಕೀಯ ಜೀವನ ಹಿನ್ನೆಲೆ ಬೇರೆ ಬೇರೆಯಾದರೂ ಅವರು ಹೇರಿದ್ದ ತಲೆ ಬುಡವಿಲ್ಲದ ಬಲಪಂಥೀಯ ನವಉದಾರೀಕರಣದ ರಾಜಕೀಯ ಮತ್ತು ಆರ್ಥಿಕ ನೀತಿಗಳು ಎಲ್ಲಾ ವರ್ಗದ ಜನರನ್ನು ಅವರ ವಿರುದ್ಧ ಪ್ರತಿಭಟನೆಗಳಿಗೆ ತಂದು ನಿಲ್ಲಿಸಿದೆ. ಜಾಗತೀಕರಣ, ಖಾಸಗೀಕರಣ ಮತ್ತು ನವಉದಾರೀಕರಣದ ರಾಜಕೀಯ ಪ್ರಪಂಚಾದ್ಯಂತ ಒಂದು ಹೊಸ ರೀತಿಯ ಭ್ರಮೆಯ ಘೋಷಣಾ ವಾಕ್ಯವನ್ನು ನೀಡಿದೆ. ಜನಕ್ಕೆ ಅದು ಅಭಿವೃದ್ಧಿಯ ಮತ್ತು ಬದಲಾವಣೆಯ ತೋರಿಕೆಯ ಆಸೆ ಹುಟ್ಟಿಸಿ, ನಿರಂತರವಾಗಿ ಯಥಾಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗಿದೆ. ನಿಜಕ್ಕೂ ಬದಲಾವಣೆ ಆಗಿದ್ದೇನೆಂದರೆ ಶ್ರೀಮಂತರ ಶಕ್ತಿ ಮತ್ತು ಆದಾಯದಲ್ಲಿ ಹೆಚ್ಚಳ, ಬಹುಸಂಖ್ಯಾತ ಜನರ ಬವಣೆಗಳ ನಿರಂತರತೆ.
ಕಳೆದ ಕೆಲ ಕಾಲದಿಂದ ಫ್ರೆಂಚ್ ಜನರು ಈ ವ್ಯವಸ್ಥಿತ ಕೊಳ್ಳೆಯ ವಿರುದ್ಧ ಮತ್ತು ತಮ್ಮ ಸಾಮಾಜಿಕ ಸವಲತ್ತುಗಳನ್ನು ಕಳೆದುಕೊಳ್ಳುವ ನಿರಾಶೆ ಮತ್ತು ಆಕ್ರೋಶದೊಂದಿಗೆ ಬೀದಿಗಿಳಿದು ‘ಹಳದಿ ಬಣ್ಣದ ಅಂಗಿ’ ಪ್ರತಿಭಟನೆಗಳನ್ನು ಹುಟ್ಟುಹಾಕಿದ್ದಾರೆ. ಮಾಧ್ಯಮಗಳು ಜನರ ಪರವಾಗಿ ನಿಂತು ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದನ್ನು ಮರೆತಿವೆ. ಪ್ರತಿಭಟನೆಗಳಿಗೆ ಕಾರಣವನ್ನು ರಶಿಯ ಗೂಢಾಚಾರಿಗಳು ಸಾಮಾಜಿಕ ಜಾಲತಾಣಗಳತ್ತ ಬೊಟ್ಟು ಮಾಡುತ್ತಿವೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ತಮ್ಮ ಕರ್ತವ್ಯವನ್ನು ಮರೆತು ಆಳುವ ವರ್ಗದ ಧಣಿಗಳ ರಕ್ಷಣೆಗೆ ನಿಂತಿವೆ. ಫ್ರಾನ್ಸ್ ದೇಶದ “ಹಳದಿ ಬಣ್ಣದ ಅಂಗಿ ಪ್ರತಿಭಟನೆಗಳು” ಸಮಸ್ಯೆ ಮತ್ತು ಸ್ವರೂಪದಲ್ಲಿ 50 ವರ್ಷಗಳ ಹಿಂದೆ ನಡೆದಿದ್ದ ಐತಿಹಾಸಿಕ 1968ರ ಪ್ರತಿಭಟನೆಗಳ ನೆನಪಿಸುವ ಹಾಗೆ ಅನಾವರಣಗೊಳ್ಳುತ್ತಿವೆ.
2017ರ ಚುನಾವಣೆ ಮತ್ತು ಫ್ರಾನ್ಸ್‍ನ ಹಿನ್ನೆಲೆ
ವಿಶ್ವದ ಮೊದಲ ಸಂಘಟಿತ ಪ್ರಜಾಕ್ರಾಂತಿ ಕಂಡ ಫ್ರಾನ್ಸ್ ಇತಿಹಾಸದುದ್ದಕ್ಕೂ ಎಡಪಂಥೀಯ ವಿಚಾರಧಾರೆಗಳನ್ನು ಪ್ರಪಂಚಕ್ಕೆ ಕೊಡುತ್ತಾ ಬಂದಿದೆ. ಇದರ ಫಲವಾಗಿ ಎರಡನೇ ಮಹಾಯುದ್ಧದ ನಂತರ ತೀರಾ ಎಡವು ಅಲ್ಲದ, ಬಲವೂ ಅಲ್ಲದ ರಾಜಕೀಯವು ಫ್ರಾನ್ಸ್‍ನಲ್ಲಿ ನೆಲೆಯೂರಿತ್ತು. ಕ್ರಮೇಣ ಅದು ತದ್ವಿರುದ್ಧ ವೈರುಧ್ಯದ ಶಕ್ತಿಶಾಲಿ ವಸಾಹತುಶಾಹಿ ಪ್ರಜಾಕಲ್ಯಾಣರಾಜ್ಯವಾಗಿ ರೂಪುಗೊಂಡಿತ್ತು. ಆದರೆ, ಕ್ರಮೇಣ ಆದ ಬದಲಾವಣೆಗಳಿಂದ ಏರುತ್ತಿರುವ ಬೆಲೆಗಳು, ದಶಕಗಳಿಂದ ಸ್ಥಿರವಾಗಿ ನಿಂತಿರುವ ವೇತನಗಳು, ನಿರುದ್ಯೋಗ, ವಲಸೆ, ಉತ್ತರ ಆಫ್ರಿಕಾ, ಮದ್ಯಪ್ರಾಚ್ಯ ಯುದ್ದಗಳು ಇವೆಲ್ಲವೂ ಈಗ ಫ್ರಾನ್ಸ್ ಎದುರಿಸುತ್ತಿರುವ ನಿತ್ಯ ಸಮಸ್ಯೆಗಳಾಗಿವೆ.
ಭಾರತದಲ್ಲಿ ಐಎಎಸ್, ಐಪಿಎಸ್ ನಾಗರಿಕ ಸೇವಾ ಸಿಬ್ಬಂದಿಯನ್ನು ಯುಪಿಎಸ್ಸಿ ಹೇಗೆ ರೂಪಿಸುತ್ತದೆಯೋ ಹಾಗೆಯೇ ಫ್ರಾನ್ಸ್‍ನಲ್ಲಿ “ಎಕೋಲ್ ನ್ಯಾಶನಲ್ ಆಡ್ಮಿನಿಸ್ಟ್ರೇಶನ್” ಸಂಸ್ಥೆಯು ಉನ್ನತ ಅಧಿಕಾರಿಗಳನ್ನು ಆಯ್ಕೆ ಮಾಡುತ್ತದೆ. ಅಲ್ಲಿ ಉತ್ತೀರ್ಣರಾದ ಮಾಕ್ರೋನ್ ಫ್ರಾನ್ಸ್ ಆರ್ಥಿಕ ಸಚಿವಾಲಯದಲ್ಲಿ 2004ರಿಂದ 2008ರವರೆಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿದರು ಮತ್ತು 2010ರಿಂದ 2016ರರವರೆಗೂ ಹಿಂದಿನ ರಾಷ್ಟ್ರಪತಿ ಫ್ರಾಂಕೋಯಿಸ್ ಹೊಲಾಂಡ್ನ ಸರ್ಕಾರದ ಅಡಿಯಲ್ಲಿ ಹಲವು ಶ್ರೀಮಂತ ಸ್ನೇಹಿ ಆರ್ಥಿಕ ನೀತಿಗಳನ್ನು ಉಳ್ಳವರ ಪರ ತಂದು ಆಡಳಿತ ಮತ್ತು ರಾಜಕೀಯ ವಲಯಗಳಲ್ಲಿ ಆಳುವ ವರ್ಗದ ಪ್ರಶಂಸೆಗೂ ಒಳಗಾಗುತ್ತಾರೆ. ಮುಖ್ಯವಾಗಿ ಜಾಗತೀಕರಣವಾದಿಯಾದ ಯುರೋಪಿಯನ್ ಯೂನಿಯನ್‍ನ ಪರ ಹಾಗೂ ವಿರುದ್ಧ ವಿಷಯವೇ ಪ್ರಧಾನವಾಗಿದ್ದ 2017ರ ಫ್ರಾನ್ಸ್ ಚುನಾವಣೆಯಲ್ಲಿ ಕಟ್ಟಾ ಯುರೋಪಿಯನ್ ಯೂನಿಯನ್ ಪರವಾಗಿದ್ದ ಮಾಕ್ರೋನ್ ಅನಿರೀಕ್ಷಿತ ಬಹುಮತಗಳೊಂದಿಗೆ ಬಲಪಂಥೀಯ ಮೇರಿ ಲೆ ಪೆನ್ ವಿರುದ್ಧ ಗೆಲುವನ್ನು ಸಾಧಿಸುತ್ತಾರೆ ಮತ್ತು ತಮ್ಮ 39ನೇ ವಯಸ್ಸಿನಲ್ಲಿಯೇ, ನೆಪೋಲಿಯನ್ ನಂತರ ಫ್ರಾನ್ಸ್ ದೇಶವನ್ನಾಳಿದ ಅತ್ಯಂತ ಕಿರಿಯ ವಯಸ್ಸಿನ ನಾಯಕರಾಗುತ್ತಾರೆ. ಚುನಾವಣೆಗೂ ಮೊದಲೇ ಗೆಲುವು ಮಾಕ್ರೋನ್‍ದು ಎಂದಾಗಿದ್ದರು ಶೇ.66 ಮತಗಳನ್ನು ಪಡೆಯುತ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ. ಈ ಗೆಲುವಿನ ಹಿಂದೆ ತನ್ನನ್ನು ತಾನೇ ನಡುಪಂಥೀಯರಲ್ಲಿ ಗುರುತಿಸಿಕೊಂಡು, ಉದಾರವಾದಿ ಮೌಲ್ಯಗಳ ಬಗ್ಗೆ ಮಾತನಾಡುತ್ತಾ ಎಡಪಂಥೀಯ ಮತ್ತು ಬಲಪಂಥೀಯ ಮತಗಳೆರಡನ್ನೂ ಆಕರ್ಷಿಸಿದರು. ಶಕ್ತಿಶಾಲಿ ಆರ್ಥಿಕ ಸಂಸ್ಥೆಗಳು, ದೊಡ್ಡ ಬ್ಯಾಂಕಿಂಗ್ ಸಂಸ್ಥೆಗಳು, ಆಳುವ ವರ್ಗದ ಎಲ್ಲ ತಂತ್ರೋಪಾಯದ ನೀತಿಗಳು, ಮತ್ತು ಬಹುಮುಖ್ಯವಾಗಿ ಮಾಧ್ಯಮಗಳು ಇವರ ಪರವಾಗಿದ್ದವು.
ಪ್ರತಿಭಟನೆಗೆ ಕಾರಣವಾದ
ಮ್ಯಾಕ್ರೋನ್ ನೀತಿಗಳು
2008ರಿಂದ 2010ರವರೆಗೂ ರೋತ್ಸ್‍ಚೈಲ್ಡ್ ಬ್ಯಾಂಕಿನ ಇನ್‍ವೆಸ್ಟ್‍ಮೆಂಟ್ ಬ್ಯಾಂಕರ್ ಆಗಿದ್ದ ಮಾಕ್ರೋನ್ ದೊಡ್ಡ ಬಂಡವಾಳಿಗರ ಪರವಾದ “ಸಮಾನತೆಯ ಅವಕಾಶಗಳು” ಎಂಬ ಹೆಸರಿನ ನವಉದಾರೀಕರಣದ ಹಲವಾರು ಮಾರುಕಟ್ಟೆ ಸುಧಾರಣೆಗಳನ್ನು ಜಾರಿಗೆ ತಂದರು. ಎಲ್ಲರಿಗೂ ಉದ್ಯೋಗ ಮತ್ತು ಆರ್ಥಿಕ ಪುನಶ್ಚೇತನ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಮಾಕ್ರೋನ್ ತನ್ನ ನೈಜ ಬಣ್ಣವನ್ನು ತಕ್ಷಣವೇ ತೋರಿಸ ತೊಡಗಿದರು. “ISಈ” ಎಂದು ಕರೆಯಲ್ಪಡುವ ಸಂಪತ್ತು ತೆರಿಗೆಯನ್ನು ತಿದ್ದುಪಡಿ ಮಾಡಲು ಅವರು ನಿರ್ಧರಿಸಿದರು. 1981ರಲ್ಲಿ ‘ಸಮಾಜವಾದದ ಒಲವುಳ್ಳ’ ಸರ್ಕಾರ ತಂದಿದ್ದ 1.3 ಮಿಲಿಯನ್ ಯುರೋ ಮೇಲ್ಪಟ್ಟ ಮೌಲ್ಯದ ಆಸ್ತಿಯ ಮೇಲಿನ ನೇರ ಸಂಪತ್ತು ತೆರಿಗೆ ಕಾನೂನನ್ನು ದುರ್ಬಲಗೊಳಿಸಿ ಅದನ್ನು ರಿಯಲ್ ಎಸ್ಟೇಟ್ ಮೌಲ್ಯದ ಮೇಲೆ ಮಾತ್ರ ಎಂಬ ತಿದ್ದುಪಡಿ ತಂದರು. ಇದರಿಂದ “ಶ್ರೀಮಂತರ ಅಧ್ಯಕ್ಷರು” ಎಂಬ ಹಣೆ ಪಟ್ಟಿ ಪಡೆದರು. ತನ್ನ ನಾಜೂಕು ನಡೆ ಮತ್ತು ಭಾಷೆಯಿಂದ ಎಲ್ಲರ ಗಮನ ಸೆಳೆದು ಫ್ರಾನ್ಸ್ ಅಧ್ಯಕ್ಷರಾದ ಮಾಕ್ರೋನ್ ಒಂದೊಂದಾಗಿ ಶಿಕ್ಷಣ, ಆರೋಗ್ಯದ ವಿಚಾರದಲ್ಲೂ ಜನವಿರೋಧಿಯಾದ ಮತ್ತು ಕಾರ್ಮಿಕರ ವಿರೋದಿಯಾದ ನೀತಿಗಳನ್ನು ತಂದರು. ಇದೆ ವರ್ಷದ ಮೇ ತಿಂಗಳಲ್ಲಿ ನಡೆದ ಮೊದಲ

ಹಂತದ ಪ್ರತಿಭಟನೆಗಳಲ್ಲಿ ಮಾಕ್ರೋನ್ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದನ್ನೇ ಮುಂದುವರೆಸಿಕೊಂಡು ಹೋದ ಮಾಕ್ರೋನ್ ಇದೆ ವರ್ಷದ ಜನವರಿ ಕೊನೆಯಲ್ಲಿ ಜಾಗತೀಕ ತಾಪಮಾನವನ್ನು ತಗ್ಗಿಸುವ ಸಲುವಾಗಿ ನೈಸರ್ಗಿಕ ತೆರಿಗೆ ಹಾಕಿದರು. ಇದರ ವಿರುದ್ದ ಮೊದಲು ಪ್ರತಿಭಟನೆ ಶುರು ಮಾಡಿದ್ದೆ ಫ್ರೆಂಚ್ ಟ್ರಕ್ ಚಾಲಕರು. ಫ್ರಾನ್ಸ್ ಮತ್ತು ಇನ್ನಷ್ಟು ಯುರೋಪಿಯನ್ ದೇಶಗಳಲ್ಲಿ ಚಾಲಕರು ಸುರಕ್ಷತೆಗೆ ಕಡ್ಡಾಯವಾಗಿ ಗಿಲೆಟ್ ಜೌನೆಸ್(ಹಳದಿ ಅಂಗಿಗಳು) ಇಡಬೇಕಾಗುತ್ತದೆ. ಇದೆ ಹಳದಿ ಅಂಗಿಗಳು ಇಷ್ಟು ದೊಡ್ಡ ಪ್ರತಿಭಟನೆಯ ಸ್ವರೂಪ ಪಡೆಯುತ್ತದೆಯಂದು ಯಾರು ಬಹುಶಃ ಉಹಿಸಿರಲಿಲ್ಲ. ಪ್ರಜೆಗಳ ಸುರಕ್ಷಣೆಗೆ ಇದ್ದ ಆರ್ಥಿಕ ನೀತಿಗಳನ್ನು ಮಾಕ್ರೋನ್ ತೆಗೆದುಹಾಕುತ್ತಿದ್ದರೆಂದು ಸಾಂಕೇತಿಕ ಪ್ರತಿಭಟನೆಯಾಯಿತು ಈ ಗಿಲೆಟ್ ಜೌನೆಸ್ (ಹಳದಿ ಅಂಗಿಗಳು).
ವೀಕೆಂಡ್ (ವಾರಾಂತ್ಯ) ಪ್ರೊಟೆಸ್ಟ್
ಸಾಂಪ್ರದಾಯಿಕವಾಗಿ ಫ್ರಾನ್ಸ್, ವಿಶಿಷ್ಟವಾದ ಬೀದಿ ಪ್ರತಿಭಟನೆಗಳ ದೊಡ್ಡ ಸಂಸ್ಕøತಿಯನ್ನೇ ಹೊಂದಿದೆ. ನವೆಂಬರ್ 15ರಂದು ಹಳದಿ ಅಂಗಿಗಳ ಪ್ರತಿಭಟನೆ ಶುರುವಿನಲ್ಲಿ ನಗರಗಳಿಂದ ದೂರವಿದ್ದ ಗ್ರಾಮಾಂತರ ಜನರಿಂದ ಆರಂಭವಾಯಿತು. ಅವರು ತೈಲ ಬೆಲೆ ಏರಿಕೆಯ ವಿರುದ್ದ ಪ್ರತಿಭಟನೆಗಳನ್ನು ನಡೆಸಿದರು. ನಂತರ ವಿವಿಧ ಪ್ರಮುಖ ನಗರ ಪಟ್ಟಣಗಳಿಗೂ ಹಬ್ಬಿತು. ದಶಕಗಳಿಂದ ಒಂದೊಂದಾಗಿ ಕಲ್ಯಾಣರಾಜ್ಯದ ಸವಲತ್ತುಗಳು ಕ್ಷೀಣಿಸುತ್ತಿರುವ ಬಗ್ಗೆ ರೋಸಿಹೋಗಿದ್ದ ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದವರೇ ಪ್ರತಿಭಟನೆಗಳಲ್ಲಿ ಹೆಚ್ಚಾಗಿ ಭಾಗವಹಿಸಿದ್ದರು. ಮೊದಲ ವಾರದಲ್ಲಿ ಈ ವಿಕೇಂದ್ರೀಕೃತ ಪ್ರತಿಭಟನೆಗಳನ್ನು ಕುಹಕ ಮಾಡಿ ಮಾತನಾಡಿದ್ದ ಮಾಕ್ರೋನ್, ವಾರಾಂತ್ಯದಿಂದ ವಾರಾಂತ್ಯಕ್ಕೆ ನಡೆಯುತ್ತಿದ್ದ ಪ್ರತಿಭಟನೆಗಳಿಗೆ ಹೊಸದಾಗಿ ವಿದ್ಯಾರ್ಥಿಗಳು, ಕಾರ್ಮಿಕ ಸಂಘಗಳು, ಬೇರೆ ಬೇರೆ ಸಂಘಸಂಸ್ಥೆಗಳು ಸೇರಿ ಜನಸಮೂಹದ ಕೂಗು ನಾಲ್ಕನೇ ವಾರಕ್ಕೆ ಮಾಕ್ರೊನನ್ನು ಮೆತ್ತಗಾಗಿಸಿ ಕ್ಷಮೆ ಕೋರುವಂತಾಯಿತು.. ದಕ್ಷಿಣದ ಪಟ್ಟಣದ ತೌಹೌಸೆನಲ್ಲಿ ಶಾಲಾ ಮಕ್ಕಳ ಮೇಲೆ ಪೊಲೀಸರು ನಡೆಸಿದ ಕ್ರೌಯದ ವಿರುದ್ಧ ಫ್ರಾನ್ಸ್‍ನ ಎಲ್ಲ ವಿದ್ಯಾರ್ಥಿಗಳು ಮತ್ತು ದುಡಿಯುವ ಜನ ಬೀದಿಗಿಳಿದರು.
ಯುರೋಪಿಯನ್ ಯೂನಿಯನ್‍ನ ಗಲಭೆ ಚದುರಿಸುವ ವಾಹನಗಳನ್ನು ಪ್ಯಾರಿಸ್‍ನ ಬೀದಿಗಳಲ್ಲಿ ನಿಯೋಜಿಸಿದರು. “ಮಾಕ್ರೋನ್ ತೊಲಗು”, “ಉಳ್ಳವರ ರಾಜ ತೊಲಗು”, “ಗೆಲುವು ಹಳದಿ ಅಂಗಿಗಳದ್ದೆ” “ಉಳ್ಳವರಿಗೆ ಈ ವರ್ಷ ಕ್ರಿಸ್ಮಸ್ ಇಲ್ಲ” “ಉಳ್ಳವರ ಕಾವಿಯರ್ ಬದಲು ಬಡವರ ಕಬಾಬ್” ಘೋಷಣೆಗಳೊಂದಿಗೆ ಜನರೂ ಬೀದಿಯಲ್ಲಿ ಜಮಾಯಿಸಿದರು. ಫ್ರೆಂಚ್ ಕ್ರಾಂತಿಯಲ್ಲಿ ಶ್ರೀಮಂತರ ಕತ್ತು ಕಡಿಯುವ “ಗಿಲಟಿನ್” ಪ್ಯಾರಿಸ್ ಬೀದಿಗಳಲ್ಲಿ ಕಾಣಿಸಿಕೊಂಡದ್ದೆ ತಡ ತೈಲ ಬೆಲೆ ಏರಿಕೆಯ ಕಾರಣಕ್ಕೆ ಹೊರಡಿಸಿದ್ದ ಫರ್ಮಾನನ್ನು ಹಿಂಪಡೆದು, ಬರುವ ವರ್ಷದಿಂದ ಎಲ್ಲರಿಗೂ 100 ಯೂರೋ ಹೆಚ್ಚು ಆದಾಯ ಬರುವ ಹಾಗೆ ಮಾಡುತ್ತೇನೆ ಮತ್ತು ಓವರ್‍ಟೈಮ್ ದುಡಿತದ ಮೇಲೆ ಇದ್ದ ತೆರಿಗೆಯನ್ನು ತೆಗೆದುಹಾಕಬೇಕಾಯಿತು. ಇದಕ್ಕಾಗಿ ಡಿಸೆಂಬರ್ 10ರಂದು ತಾನೇ ಫ್ರಾನ್ಸ್ ಜನತೆಯನ್ನುದ್ದೇಶಿಸಿ ದೂರದರ್ಶನದ ಮೂಲಕ ಭಾಷಣ ಮಾಡಬೇಕಾಯಿತು. ಇದಾದ ಮೇಲೂ ಪ್ರತಿಭಟನೆ ನಿಂತಿಲ್ಲ. ಪ್ರತಿಭಟನೆಗಳು ಫ್ರಾನ್ಸ್‍ನಾದ್ಯಂತ 5ನೇ ವಾರಕ್ಕೆ ಕಾಲಿಟ್ಟಿದೆ. 5ನೇ ವಾರಾಂತ್ಯದಲ್ಲಿ ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗಿದ್ದರೂ ಜನರು ಬೀದಿಗಳಲ್ಲಿದ್ದಾರೆ. ಇಲ್ಲಿ ಗಮನಿಸಬೇಕಿರುವ ವಿಷಯ ಈ ಬಿಕ್ಕಟ್ಟು ಮಾಕ್ರೋನ್ ಅಧ್ಯಕ್ಷಗಿರಿಯಲ್ಲಿ ಉಂಟಾದ ಬಿಕ್ಕಟ್ಟಲ್ಲ ಮತ್ತು ಅವರ ಮೇಲೆ ಜನರ ಆಕ್ರೋಶ ಬರಿ ಒಂದೂವರೆ ವರ್ಷದ ಸರ್ಕಾರದ ಮಾಪನದಿಂದಲ್ಲ. ಇದು ಅವರು ನಿರಂತರವಾಗಿ ಸುಮಾರು 8 ವರ್ಷಗಳಿಂದ ಜಾರಿಗೆ ತಂದ ಮ್ಯಾಕ್ರೊನಿಸಮ್ ಆರ್ಥಿಕ ನೀತಿಗಳಿಂದ ಬಳಲಿರುವ ಜನರು ಮಾಡುತ್ತಿರುವ ಪ್ರತಿಭಟನೆ. ನರೇಂದ್ರ ಮೋದಿ ಹೇಗೆ ಅಂಬಾನಿ ಮತ್ತು ಅದಾನಿಗಳಿಗೋಸ್ಕರ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೋ ಹಾಗೆಯೇ ಮಾಕ್ರೋನ್ ಕೂಡ ಅಧಿಕಾರಕ್ಕೆ ಬಂದ ಕ್ಷಣದಿಂದ ಉಳ್ಳವರ ಪರವಾಗಿ ಕೆಲಸ ಮಾಡುವ, ಬಡವರನ್ನು ನಿರ್ದಾಕ್ಷಿಣ್ಯದಿಂದ ಕಾಣುವ, ಸವಲತ್ತು ಮತ್ತು ಸೊಕ್ಕುಳ್ಳ ರಾಜಕಾರಣಿ ಎಂದು ಫ್ರೆಂಚ್ ಜನರಿಗೆ ಮನವರಿಕೆಯಾಗಿದೆ.
ಗಿಲೆಟ್ ಜೌನೆಸ್(ಹಳದಿ ಅಂಗಿಗಳು) ಮತ್ತು ಭಾರತದ ರೈತರ ಪ್ರತಿಭಟನೆ, ಪ್ರಜಾತಂತ್ರದಲ್ಲಿ ಪ್ರತಿಭಟನೆಗಳು ಮಹತ್ವವನ್ನು ಮತ್ತೆ ತೋರಿಸಿದ್ದಾರೆ. ಗಿಲೆಟ್ ಜೌನೆಸ್(ಹಳದಿ ಅಂಗಿಗಳು) ಈಗ ಇಸ್ರೇಲ್, ಹಂಗರಿ, ಸ್ವೀಡನ್, ಇಂಗ್ಲೆಂಡ್, ಸ್ಪೇನ್, ಇಟಲೀ, ಬೆಲ್ಜಿಯಮ್, ನಾರ್ವೆ, ಗ್ರೀಸ್, ತುನೀಸಿಯ, ಚೆಕ್ ರಿಪಬ್ಲಿಕ್ ದೇಶಗಳಲ್ಲಿ ಪಸರಿಸತೊಡಗಿದೆ. ಏಕೆಂದರೆ ಈ ಎಲ್ಲ ದೇಶಗಳು ಸೇರಿ ಜಾರಿಗೆ ತಂದಿರುವ ಪ್ರಪಂಚವನ್ನು ತನ್ನ ಕಬ್ಬಿಣದ ಮುಷ್ಟಿಯಿಂದ ಆಳುತ್ತಿರುವ, ಉಳ್ಳವರ ಕೊಳ್ಳೆಯ ಆರ್ಥಿಕ ನೀತಿಯೇ ಈ “ನವ ಉದಾರೀಕರಣ”. ಈವರೆಗೂ 7 ಪ್ರತಿಭಟನಾಕಾರರು ಸತ್ತಿದ್ದಾರೆ, ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ, 4700ಕ್ಕೂ ಹೆಚ್ಚು ಜನರ ಬಂಧನವಾಗಿದೆ. ಅಪಾರ ಪ್ರಮಾಣದ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿದೆ. ಬಹುತೇಕ ಎಲ್ಲ ದೊಡ್ಡ ಪಟ್ಟಣ, ನಗರಗಳು ಇನ್ನೂ ಕಣ್ಣೀರ ಹೊಗೆ ಸಿಡಿಮದ್ದುಗಳಿಂದ, ಅಪಾರ ಪ್ರಮಾಣದ ಪೊಲೀಸ್ ಪಡೆಗಳೊಂದಿಗೆ, ಬ್ಯಾರಿಕೇಡ್‍ಗಳಿಂದ ತುಂಬಿದೆ. ನಾಲ್ಕನೇ ವಾರಾಂತ್ಯದ ಪ್ರತಿಭಟನೆಯನ್ನು ನಿಯಂತ್ರಿಸಲು 89000 ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಹೋರಾಟ ಮುಂದೆ ಹೋಗಿ ಹೊಸ ರೂಪ ಪಡೆದುಕೊಳ್ಳಬಹುದು ಅಥವಾ ಸ್ವಲ್ಪದರಲ್ಲೇ ದಮನಗೊಳ್ಳಬಹುದು; ಮಾಕ್ರೋನ್ ಅಧಿಕಾರದಲ್ಲಿ ಉಳಿದುಕೊಳ್ಳಲೂಬಹುದು. ಆದರೆ ಅಧಿಕಾರಸ್ಥರು ಗಾಬರಿಗೊಳ್ಳುವ ಮಟ್ಟಿಗೆ ಫ್ರಾನ್ಸ್‍ನ ಜನರು ಬೀದಿಗಿಳಿದಿರುವುದಂತೂ ನಿಜ.
ಆದರೆ, ಭಾರತದ ರಾಜಧಾನಿಯಲ್ಲಿ ನಡೆದದ್ದು 2 ದಿನಗಳ ರೈತರ ಪ್ರತಿಭಟನೆ. ಇದರ ಹಿಂದೆ, ಒಂದೂವರೆ ವರ್ಷಗಳ ಕಾಲದಲ್ಲಿ ಆಗಿಂದಾಗ್ಗೆ ದೊಡ್ಡ ಪ್ರತಿಭಟನೆಗಳು ನಡೆಯುತ್ತಿವೆಯಾದರೂ, ಅದು ಮೋದಿಯ ನೀತಿಗಳ ವಿರುದ್ಧ ಜನರು ಅಥವಾ ರೈತರು ತಿರುಗಿಬಿದ್ದಿದ್ದಾರೆ ಎಂಬ ಸಂದೇಶವನ್ನೇನೂ ಕೊಟ್ಟಿರಲಿಲ್ಲ. ದೆಹಲಿಯಲ್ಲಿ ನಡೆದ ಪ್ರತಿಭಟನೆ ಮತ್ತು ನಂತರದ ಚುನಾವಣಾ ಫಲಿತಾಂಶಗಳು ಅಂತಹ ಸಂದೇಶವನ್ನು ಕೊಟ್ಟಿವೆ. ಆದರೆ, ಅಧಿಕಾರಸ್ಥರು ಅದರಿಂದ ಅಷ್ಟು ಗಾಬರಿಯನ್ನೇನೂ ಪಟ್ಟಂತೆ ತೋರುವುದಿಲ್ಲ. ಜೊತೆಗೆ ಈ ಪ್ರತಿಭಟನೆಗಳು ನಿರಂತರವಾಗಿ ನಡೆಯದೇ, ಆಗಿಂದಾಗ್ಗೆ ನಡೆಯುವ ‘ಈವೆಂಟ್’ಗಳಾಗಿ ಮುಗಿದು ಹೋಗುತ್ತಿವೆ. ಭಾರತ ಮತ್ತು ಫ್ರಾನ್ಸ್‍ನ ಸಮಾಜದಲ್ಲಿನ ಈ ವ್ಯತ್ಯಾಸವೂ ಅಧ್ಯಯನಯೋಗ್ಯ ಸಂಗತಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...