Homeಮುಖಪುಟಯುದ್ಧದಾಹಿ ಮೀಡಿಯಾಗಳನ್ನು ಸುಳ್ಳುಗಾರರನ್ನಾಗಿಸಿದ ಮೋದಿ ಚುನಾವಣಾ ಪ್ರಚಾರದಲ್ಲಿ!

ಯುದ್ಧದಾಹಿ ಮೀಡಿಯಾಗಳನ್ನು ಸುಳ್ಳುಗಾರರನ್ನಾಗಿಸಿದ ಮೋದಿ ಚುನಾವಣಾ ಪ್ರಚಾರದಲ್ಲಿ!

- Advertisement -
- Advertisement -

`ಯುದ್ಧ ಫಿಕ್ಸ್’, `ಪಾಪಿ ಪಾಕ್.ಗೆ ಯುದ್ಧವೊಂದೇ ಉತ್ತರ’ `ಯುದ್ಧ ಸನ್ನದ್ಧ’…. ಇವು ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ದಿನದ ಇಪ್ಪತ್ನಾಲ್ಕು ಗಂಟೆಯೂ ಮೀಡಿಯಾಗಳ ಪರದೆಗಳನ್ನು ಆವರಿಸುತ್ತಿರುವ ರಣೋತ್ಸಾಹದ ಟೈಟಲ್ಲುಗಳು. ಅದರಲ್ಲೂ ಬಾಲಕೋಟ್ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದ ನಂತರವಂತೂ ಟೀವಿ ಆಂಕರುಗಳು ಕುರ್ಚಿ ಮೇಲೆ ಕೂರಲಾಗದಷ್ಟು ತುದಿಗಾಲಲ್ಲಿ ನಿಂತು ಪಾಕಿಸ್ತಾನದ ಮೇಲೆ ನಿರಂತರ ಯುದ್ಧ ನಡೆಸುತ್ತಿದ್ದಾರೆ! ಅವರ ಪ್ರಕಾರ ದೇಶಕ್ಕೆ ದೇಶವೇ ಯುದ್ಧಕ್ಕೆ ಸಜ್ಜಾಗಿ ಹೈಟೆನ್ಷನ್.ನಲ್ಲಿ ಕಾಯುತ್ತಿದೆ! ಅಂದರೆ ಈ ದೇಶದ ಪ್ರಧಾನಿಗೂ ಅದೇ ಟೆನ್ಷನ್ ಇರಬೇಕಲ್ಲವೇ?

ಆದರೆ, ಮೀಡಿಯಾದವರು ಯುದ್ಧ ಟೆನ್ಷನ್ನಿಂದ ಜನರನ್ನು ಬೆದರಿಸುತ್ತಿರುವ ಸಮಯದಲ್ಲೇ ಪ್ರಧಾನಿ ಮೋದಿಯವರು ಅಂತಹ ಯಾವ ಟೆನ್ಷನ್ನೂ ಇಲ್ಲದೆ ಮುಂಬರುವ ಎಲೆಕ್ಷನ್ನಿನ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ, ಅದೂ ತಮ್ಮ ಮೋದಿ ಆಪ್ ಮೂಲಕ! ಈ ವಿದ್ಯಮಾನ ಎರಡು ಸಾಧ್ಯತೆಗಳನ್ನ ನಮ್ಮ ಮುಂದೆ ತೆರದಿಡುತ್ತೆ. ಒಂದೋ, ಪ್ರಧಾನಿ ಮೋದಿಯವರಿಗೆ ದೇಶದ ಭದ್ರತೆ, ಸುರಕ್ಷತೆಗಿಂತ ಹೆಚ್ಚಾಗಿ ರಾಜಕೀಯವೇ ಮುಖ್ಯವಾಗಿರಬೇಕು. ಅಥವಾ ಅಂಥಾ ಪ್ರಧಾನಿ ಹುದ್ದೆಯಲ್ಲಿ ಕೂತಿರುವ ವ್ಯಕ್ತಿಯೇ ನಿರುಮ್ಮಳರಾಗಿದ್ದಾರೆಂದರೆ `ಯುದ್ಧ ಸನ್ನದ್ದ ಟೆನ್ಷನ್’ ಇದೆಯೆಂದು ಬೊಬ್ಬಿರಿಯುತ್ತಿರುವ ಈ ಮೀಡಿಯಾಗಳೇ ಬೊಗಳೆ ಬಿಡುತ್ತಿರಬೇಕು! ಹಾಗಾದರೆ, ಇವರೆಲ್ಲ ಕಡ್ಡಿಯನ್ನೇ ಗುಡ್ಡ ಮಾಡಿ ತೋರಿಸುತ್ತಿದ್ದಾರೆಯೇ?

ಸೈನಿಕರ ಬಲಿದಾನವನ್ನು ರಾಜಕೀಯಗೊಳಿಸಬಾರದು ಎನ್ನುವುದು ಯಾವುದೇ ದೇಶದಲ್ಲಿ ಪಾಲಿಸಬೇಕಾದ ಕನಿಷ್ಠ ನೈತಿಕ ನಿಯಮ. ಪುಲ್ವಾನಾ ದಾಳಿಯ ನಂತರ ಹಲವಾರು ರಾಜಕೀಯ ಪಕ್ಷಗಳವರು ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಸೈನಿಕರ ಹೆಸರಿನಲ್ಲಿ ಮತ್ತವರ ಸಾವಿನಲ್ಲಿ ಅತಿ ಹೆಚ್ಚು ರಾಜಕೀಯ ಮಾಡಿದವರು ಬಿಜೆಪಿಯವರೇ ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ. 2014ಕ್ಕೂ ಮೊದಲೂ ಸೈನಿಕರ ಬಲಿದಾನದ ಸಂದರ್ಭವನ್ನು ರಾಜಕೀಯಕ್ಕೆ ಬಳಸಿಕೊಂಡ ಮೋದಿಯವರ ಸಾಕಷ್ಟು ಭಾಷಣದ ವಿಡಿಯೋಗಳು ಇಂದಿಗೂ ಲಭ್ಯವಿದೆ. ಇನ್ನು ಪುಲ್ವಾಮ ದಾಳಿಯ ನಂತರದ ಬಿಜೆಪಿಯ ಪ್ರಚಾರ ನಾಚಿಕೆಯಿಲ್ಲದೆ ನಡೆಯುತ್ತಿದೆ.

ಇಂದು (ಫೆಬ್ರವರಿ 28) ಮೋದಿಯವರು ತಮ್ಮ ಮೋದಿ ಆಪ್ ಮೂಲಕ ದೇಶದ ಕೋಟ್ಯಾಂತರ ಜನರನ್ನು (ಸುಮಾರು 15 ಸಾವಿರ ಬೇರೆ ಬೇರೆ ಸ್ಥಳಗಳಲ್ಲಿ ಎಂದು ಬಿಜೆಪಿ ಪ್ರಚಾರದ ವೇಳೆ ಹೇಳಿಕೊಂಡಿದೆ) ಮುಂಬರುವ 2019ರ ಲೋಕಸಭಾ ಚುನಾವಣೆಗೆ ಆಡಳಿತಾರೂಢ ಪಕ್ಷದ ಪ್ರಚಾರಕ್ಕಾಗಿ ಜಗತ್ತಿನ ಅತ್ಯಂತ ದೊಡ್ಡ ವಿಡಿಯೋ ಕಾನ್ಫರೆನ್ಸ್ ಅನ್ನು ಬಿಜೆಪಿ ಪಕ್ಷದ ಕಾರ್ಯಕರ್ತರ ಜೊತೆ ನಡೆಸಿದ್ದಾರೆ. ಭಾರತದ ಗಡಿಯಲ್ಲಿ ಆತಂಕದ ವಾತಾವರಣವಿದ್ದು ಹಾಗೂ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತದ ಏರ್ ವಿಂಗ್ ಕಮಾಂಡರ್ ಅಭಿನಂದನ್ ಇನ್ನೂ ಬಿಡುಗಡೆಯಾಗಿ ಭಾರತಕ್ಕೆ ವಾಪಾಸ್ ಆಗದೇ ಇರುವ ಪರಿಸ್ಥಿತಿಯಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡುವ ಅವಶ್ಯಕತೆಯಿದೆಯೇ ಎಂದು ಟಿವಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಾಕ್ರೋಶ ವ್ಯಕ್ತವಾಗಿದೆ.

ಮೋದಿಗೆ ಭಾರತ ಮೊದಲಾ, ಇಲ್ಲವೇ ತನ್ನ ಪಕ್ಷದ ಸಂಕುಚಿತ ಹಿತಾಸಕ್ತಿಯೇ ಮೊದಲಾ? ಇದೊಂದು ಲಜ್ಜೆಗೆಟ್ಟ ಕೆಲಸ, ಸೂಕ್ಷ್ಮತೆ ಇಲ್ಲದವರು ಮಾಡುವ ಕೆಲಸ ಇನ್ನಿತ್ಯಾದಿ ಪದಗಳಿಂದ ವೆರಿಫೈಡ್ ಟ್ವಿಟ್ಟರ್ ಖಾತೆಗಳನ್ನೂ ಒಳಗೊಂಡಂತೆ ಸಹಸ್ರಾರು ಜನ ಟೀಕೆ ಮಾಡುತ್ತಿದ್ದಾರೆ. ಅಲ್ಲದೆ ಇದೇ ಫೆಬ್ರವರಿ 27ರಂದು ಖೇಲೋ ಇಂಡಿಯಾ (ಆಟವಾಡಿ ಭಾರತ) ಎನ್ನುವ ಮೊಬೈಲ್ ಆಪ್‌ಅನ್ನು ಉದ್ಘಾಟನೆ ಮಾಡಿದ್ದು, ಅದರಿಂದ ಸಹಾ ಮೋದಿ ಜನರ ಟೀಕೆಗೆ ಗುರಿಯಾಗಿದ್ದಾರೆ. ಈವರೆಗೂ ಒಂದೂ ಪತ್ರಿಕಾಗೋಷ್ಠಿ ನಡೆಸದ ಮೋದಿ ಅವರಿಗೆ ತಮ್ಮದೇ ಪಕ್ಷದ ಕಾರ್ಯಕರ್ತರೊಂದಿಗೆ ಜಗತ್ತಿನ ಅತ್ಯಂತ ಉದ್ದನೆಯ ವಿಡಿಯೋ ಸಂಭಾಷಣೆ ನಡೆಸಲು ಸಮಯ ಹೇಗೆ ಸಿಗುತ್ತದೆ ಎನ್ನುವುದು ಜನರ ಪ್ರಶ್ನೆಯಾಗಿದೆ. ಇದೆಲ್ಲದರ ಜೊತೆಜೊತೆಗೆ ಪುಲ್ವಾಮ ದಾಳಿ ನಂತರದಲ್ಲಿಯೂ ಹಲವು ಚುನಾವಣಾ ಪ್ರಚಾರದಲ್ಲಿ ಪಕ್ಷದ ಪರ ಮತ ಯಾಚನೆ ಮಾಡುವ ಕೆಲಸಗಳಲ್ಲಿ ಮೋದಿ ತೊಡಗಿಸಿಕೊಂಡಿದ್ದಾರೆ. ಇಂಡೋ-ಪಾಕ್ ವಿವಾದದ ಕುರಿತು ಮುಂದಿನ ಹೆಜ್ಜೆಗಳನ್ನು ಚರ್ಚಿಸಲು ಕರೆದಿದ್ದ ಸರ್ವಪಕ್ಷಗಳ ಎರಡೂ ಸಭೆಗೂ ಮೋದಿ ಗೈರು ಹಾಜರಾಗಿದ್ದು ಗಮನಾರ್ಹ! ಮೊದಲನೆಯದ್ದು ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದರೆ, ಮತ್ತೊಂದು ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ನಡೆದಿದೆ. ದೇಶದ ಭದ್ರತೆಗೆ ಎದುರಾಗಿರುವ ಆತಂಕದ ಬಗ್ಗೆ ಚರ್ಚಿಸಲು ಕರೆಯಲಾದ ಸಭೆಯಲ್ಲಿ ಭಾಗವಹಿಸಲು ಸಮಯವಿಲ್ಲದ ಮೋದಿಯವರಿಗೆ ಚುನಾವಣಾ ಪ್ರಚಾರದ ವೀಡಿಯೊ ಕಾನ್ಫರೆನ್ಸ್ ಮಾಡಲು, ಆಪ್ ಬಿಡುಗಡೆ ಮಾಡಲು ಹೇಗೆ ಸಮಯ ಸಿಕ್ಕಿತು? ಇದು ಜನ ಕೇಳುತ್ತಿರುವ ಪ್ರಶ್ನೆ.

ಇನ್ನು ದಾಳಿಯಾದ ದಿನದಿಂದ ಇವತ್ತಿನವರೆಗೂ ಅಮಿತ್ ಶಾ ಸೈನಿಕರ ದಾಳಿಯನ್ನ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಲೇ ಇದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ದಾಳಿಯಿಂದ ನಮಗೆ ಕರ್ನಾಟಕದಲ್ಲಿ 22 ಸೀಟು ಗೆಲ್ಲುವುದಕ್ಕೆ ಅನೂಕಲವಾಗಲಿದೆ ಎಂದು ಹೇಳಿ ರಾಷ್ಟ್ರ ಮಟ್ಟದಲ್ಲಿ ಟೀಕೆಗೆ ಒಳಗಾಗಿದ್ದಾರೆ. ಒಟ್ಟಾರೆ ಸೈನಿಕರ ಬಲಿದಾನ ದೇಶದ ರಕ್ಷಣೆಯ ವಿಚಾರವಾಗಿ ಕೇವಲ ಖಾಲಿ ಮಾತುಗಳನ್ನು ಇವರೆಲ್ಲಾ ಆಡುತ್ತಿದ್ದಾರೆಯೇ ಹೊರತು ದೇಶಕ್ಕಿಂತ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದೇ ಮೊದಲ ಆದ್ಯತೆ ನೀಡುತ್ತಿರುವುದು ವಾಸ್ತವ ಎಂಬುದು ಕೇವಲ ಆರೋಪವಲ್ಲ.

ಈ ಆಟದಲ್ಲಿ ಪ್ರಧಾನಿಯವರನ್ನೂ ಒಳಗೊಂಡಂತೆ ಸಮಸ್ತ ಬಿಜೆಪಿ ಮೀಡಿಯಾಗಳನ್ನು ಸುಳ್ಳುಗಾರರನ್ನಾಗಿ ಮಾಡುತ್ತಿರೋದು ವಿಪರ್ಯಾಸ. ದುರಂತವೆಂದರೆ ಇದು ಹೀಗೇ ಮುಂದುವರೆದರೆ ಜನರ ನಡುವೆ ತಮ್ಮ ಮೂಲಕ ಇಡಿಯಾಗಿ ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಎಷ್ಟು ಪಾತಾಳಕ್ಕೆ ಕುಸಿಯಲಿದೆ ಎಂಬ ಅಂದಾಜೂ ಇಲ್ಲದ ಮೀಡಿಯಾಗಳು ತಮ್ಮ ಕಾಲ ಮೇಲೆ ತಾವೇ ಕಲ್ಲು ಎತ್ತಿ ಹಾಕಿಕೊಳ್ಳುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...