Homeರಂಜನೆವಿಷ್ಣು ಸ್ಮಾರಕಕ್ಕೆ ಮೀನಾಮೇಷ ಏಕೆ?

ವಿಷ್ಣು ಸ್ಮಾರಕಕ್ಕೆ ಮೀನಾಮೇಷ ಏಕೆ?

- Advertisement -

ಸೋಮಶೇಖರ್ ಚಲ್ಯ |

ಕರ್ನಾಟಕ ಕಂಡ ಸ್ಟಾರ್ ನಟ ಅಂಬರೀಶ್, ಸಾವನ್ನಪ್ಪಿ ವಾರವೇ ಕಳೆದು ಹೋಗಿದೆ. ಇನ್ನು ಅಭಿಮಾನಿಗಳ ಮನದಲ್ಲಿ ಅಂಬರೀಶ್ ನಿಧನ ಕಹಿ ಘಟನೆ ಹಸಿರಾಗಿರುವಾಗಲೇ, ಮತ್ತೊಂದು ವಿವಾದ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡ್ತಾ ಇದೆ. ಅದುವೇ ವಿಷ್ಣು ಸ್ಮಾರಕ ವಿವಾದ..

ಕುಚುಕು ಗೆಳೆಯರಂತಿದ್ದ ಅಂಬರೀಶ್ ಹಾಗೂ ವಿಷ್ಣುವರ್ಧನ್, ಇಬ್ಬರೂ ಈಗ ನೆನಪು ಮಾತ್ರ. ಅಂಬರೀಶ್ ಅವರಿಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಅಲ್ಲದೆ ೧.೫ ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಈ ಬೆನ್ನಲ್ಲೆ ವಿಷ್ಣು ಅಭಿಮಾನಿಗಳು ಹಾಗೂ ವಿಷ್ಣು ಕುಟುಂಬಸ್ಥರು ಸ್ಮಾರಕ ನಿರ್ಮಾಣದ ಧ್ವನಿ ಎತ್ತಿದ್ದಾರೆ.

ಸುಮಾರು ವರ್ಷದಿಂದ ನಟ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರಕ್ಕೆ ಹೋರಾಟ ನಡೆಸಲಾಗುತ್ತಿದೆ. ಆದ್ರೆ ಇನ್ನು ವಿಷ್ಣು ಸ್ಮಾರಕ ವಿಚಾರ ಕಗ್ಗಂಟಾಗಿಯೇ ಉಳಿದಿದೆ. ಇನ್ನು ಡಾ.ರಾಜಕುಮಾರ್ ಹೆಸರಲ್ಲಿ ಫಿಲ್ಮ್ ಯುನಿವರ್ಟಿಸಿ, ಅಂಬಿ ಹೆಸರಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವಿಷ್ಣು ಅಳಿಯ ಅನಿರುದ್ಧ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ವಿಷ್ಣು ನಿಧನರಾಗಿ 9 ವರ್ಷ ಕಳೆಯುತ್ತಾ ಬಂದಿದೆ. ಎಲ್ಲಾ ಸರ್ಕಾರಗಳಿಗೂ ಮನವಿ ಸಲ್ಲಿಸಿದ್ದೇವೆ. ಅದ್ರೆ, ವಿಷ್ಣು ಸ್ಮಾರಕ ವಿಚಾರವನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಅನ್ನೋದು ವಿಷ್ಣು ಅಳಿಯ ಅನಿರುದ್ಧ ಅವರ ಆರೋಪ.

ವಿಷ್ಣು ಅಭಿಮಾನಿಗಳನ್ನು ಅಗಲಿದ ಮೇಲೆ ಇದುವರೆಗೂ ಐದು ಜನ ಮುಖ್ಯಮಂತ್ರಿಗಳು ರಾಜ್ಯವನ್ನಾಳಿದ್ದಾರೆ. ಆದರೆ ಯಾರಿಂದಲೂ ವಿಷ್ಣುಗೆ ಸ್ಮಾರಕ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಇದು ವಿಷ್ಣು ಅಭಿಮಾನಿಗಳು ಮತ್ತು ಕುಟುಂಬಕ್ಕೆ ಭಾವನಾತ್ಮಕ ವಿಚಾರವಾಗುತ್ತಾ ಬೇರೂರುತ್ತಿದೆ. 2009ರಲ್ಲಿ ವಿಷ್ಣುರ ಅಂತ್ಯಸಂಸ್ಕಾರವನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲಾಗಿತ್ತು. ಹಿರಿಯ ನಟ ಬಾಲಕೃಷ್ಣ ಅವರಿಗೆ ಸರ್ಕಾರವೇ ಅಭಿಮಾನ್ ಸ್ಟುಡಿಯೋ ನಿರ್ಮಾಣ ಮಾಡಲು ಈ ಜಾಗ ನೀಡಿತ್ತು. ಆದರೆ ಬಾಲಕೃಷ್ಣ ನಿಧನದ ನಂತರ ಅವರ ಮಗ 10 ಎಕರೆ ಜಾಗವನ್ನು ಮಾರಾಟ ಮಾಡಲು ಮುಂದಾಗಿದ್ದರು. ಹಾಗಾಗಿ ಅದು ಕುಟುಂಬ ವ್ಯಾಜ್ಯವಾಗಿ ಮಾರ್ಪಟ್ಟಿತ್ತು. ವಿವಾದ ಇತ್ಯರ್ಥವಾಗುವ ಮುನ್ನವೇ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಕಟ್ಟಲು ಮುಂದಾದ ಸರ್ಕಾರಕ್ಕೆ ಹೈಕೋರ್ಟ್ ತಡೆನೀಡಿದ್ದರಿಂದ ಸ್ಮಾರಕ ನಿರ್ಮಾಣ ಕಗ್ಗಂಟಾಗಿ ಉಳಿಯಿತು.

ತದನಂತರ 2012ರ ಮುಖ್ಯಮಂತ್ರಿ ಸದಾನಂದಗೌಡರು ಅಭಿಮಾನ್ ಸ್ಟುಡಿಯೊದಲ್ಲಿ ಸ್ಮಾರಕ ನಿರ್ಮಾಣ ಸಾಧ್ಯವಿಲ್ಲ ಬೇರೆಡೆ ಜಾಗ ಕೊಡುತ್ತೇವೆ ಎಂದಿದ್ದರು. ಆಗಲೇ ವಿಷ್ಣು ಕುಟುಂಬ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವ ಇಂಗಿತ ಹೊರಹಾಕಿದ್ದು. ಇದು ಅಭಿಮಾನಿ ಸಂಘದ ಲೀಡರುಗಳಿಗೆ ಇಷ್ಟವಾಗಲಿಲ್ಲ. ಈ ನಡುವೆ ಸಿಎಂ ಗಾದಿಯೇರಿದ ಸಿದ್ದರಾಮಯ್ಯನವರು ಮೈಸೂರಿನಲ್ಲೇ ಸ್ಮಾರಕ ನಿರ್ಮಾಣಕ್ಕೆ ಐದು ಎಕರೆ ಜಾಗ ಮಂಜೂರು ಮಾಡಿ 2016ರಲ್ಲಿ ಭೂಮಿ ಪೂಜೆಗೂ ಮುಂದಾಗಿದ್ದರು. ಆದರೆ ಕೃಷಿ ಭೂಮಿ ನೀಡಲು ನಿರಾಕರಿಸಿದ ರೈತರು ಪ್ರತಿಭಟನೆಯಿಂದಾಗಿ ಅದೂ ಈಡೇರಲಿಲ್ಲ.

ಈ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿದ್ದ ವಿಷ್ಣು ಸ್ಮಾರಕ ವಿವಾದಕ್ಕೆ ಕುಮಾರಸ್ವಾಮಿಯವರ ಅವಧಿಯಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ರಾಜ್, ಅಂಬಿ ಸ್ಮಾರಕಗಳ ಜೊತೆ ವಿಷ್ಣು ಸ್ಮಾರಕವನ್ನೂ ಕಂಠೀರವದಲ್ಲೇ ನಿರ್ಮಾಣ ಮಾಡ್ತೀವಿ ಅಂದಿದ್ದು ವಿಷ್ಣು ಕುಟುಂಬ ಮತ್ತು ಅಭಿಮಾನಿಗಳನ್ನು ಸಹಜವಾಗಿಯೇ ಅಸಮಾಧಾನ ಮೂಡಿಸಿದೆ. ಕುಟುಂಬದ ಜೊತೆ ಒಂದು ಸಣ್ಣ ಚರ್ಚೆಯನ್ನೂ ಮಾಡದೆ, ಅಭಿಪ್ರಾಯ ಸಂಗ್ರಹಿಸದೆ ಏಕಾಏಕಿ ನಿರ್ಧಾರ ಪ್ರಕಟಿಸಿರೋದು ಎಷ್ಟು ಸರಿ ಅನ್ನೋದು ಕುಟುಂಬ ಮತ್ತು ಅಭಿಮಾನಿಗಳ ವಾದ.

ವಿಷ್ಣು ನಿಧನರಾದಾಗ ನಮ್ಮ ಕ್ಯಾಪ್ಟನ್ ಗೌರಿ ಲಂಕೇಶ್‌ರವರು ತಮ್ಮ ಸಂಪಾದಕೀಯದಲ್ಲಿ ‘ವಿಷ್ಣು ಬಗ್ಗೆ ಜಗತ್ತು ಇನ್ನಷ್ಟು ಔದಾರ್ಯ ತೋರಬೇಕಿತ್ತು’ ಎಂಬ ಮಾತು ಬರೆದಿದ್ದರು. ಅದ್ಯಾಕೊ ಆ ಮಾತು ಅವರ ಸ್ಮಾರಕಕ್ಕೂ ಅನ್ವಯಿಸುತ್ತಿರುವಂತೆ ಕಾಣುತ್ತೆ.

ಇಲ್ಲಿ ಇಡೀ ಸಮಸ್ಯೆಯನ್ನು ಏಕಾಏಕಿ ಯಾರೋ ಒಬ್ಬರ ಮೇಲೆ ಎತ್ತಿ ಬಿಸಾಡಲಾಗುವುದಿಲ್ಲ. ಯಾವಾಗ ಒಂದು ಕಾರ್ಯಕ್ಕೆ ಒಮ್ಮತ ಮತ್ತು ತಾಳ್ಮೆ ಇಲ್ಲವಾಗುತ್ತೊ ಆಗ ಸಹಜವಾಗಿಯೇ ಗೊಂದಲಕ್ಕೆ ತುತ್ತಾಗುತ್ತಾ ಸಾಗುತ್ತೆ. ಸರ್ಕಾರ ಸ್ಮಾರಕ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವಂತೆ ಕಂಡುಬಂದರು ಅದು ವಿಷ್ಣು ಸ್ಮಾರಕಕ್ಕೆ ಮಾತ್ರ ಸೀಮಿತವಾದುದಲ್ಲ, ರಾಜ್ ಸ್ಮಾರಕಕ್ಕೂ ಸರ್ಕಾರಗಳು ಇಂಥದ್ದೇ ಮೀನಾಮೇಷ ಎಣಿಸುತ್ತಾ ಬಂದಿದ್ದವು. ರಾಜ್ ನಮ್ಮನ್ನಗಲಿದ್ದು 2006ರಲ್ಲಾದರು ಎಂಟು ವರ್ಷಗಳ ನಂತರವೇ ೨೦೧೪ರಲ್ಲಿ ಸ್ಮಾರಕಕ್ಕೆ ಮುಕ್ತಿ ಸಿಕ್ಕಿದ್ದು. ಯಾವ ವಿವಾದವೂ ಇರದಿದ್ದ ಸರ್ಕಾರದ ಜಾಗದಲ್ಲೇ ಸ್ಮಾರಕ ನಿರ್ಮಾಣ ವಿಳಂಬವಾಗುತ್ತಿರುವುದರ ಬಗ್ಗೆ ರಾಜ್ ಕುಟುಂಬ ಹಲವು ಸಂದರ್ಭಗಳಲ್ಲಿ ಬೇಸರ ಹೊರಹಾಕಿದ್ದಿದೆ. ನಮ್ಮ ಸರ್ಕಾರಗಳ ಕಾರ್ಯವೈಖರಿಯೇ ಹಾಗಿರುತ್ತೆ.

ಅಂತದ್ದರಲ್ಲಿ ಲಿಟಿಗೇಷನ್ ಇರೋ ಜಾಗ ಹಾಗೂ ಸ್ಮಾರಕ ನಿರ್ಮಾಣ ಕುರಿತು ಕುಟುಂಬ, ಅಭಿಮಾನಿ ಬ್ಯಾನರ್ ಸಂಘಗಳ ನಡುವೆಯೇ ಬಿರುಕು ಇರುವಾಗ ಸರ್ಕಾರ ಮುತುವರ್ಜಿ ವಹಿಸೀತೆ? ಈ ಸತ್ಯವನ್ನು ಮೊದಲು ವಿಷ್ಣು ಕುಟುಂಬಸ್ಥರು ಹಾಗೂ ಅಭಿಮಾನಿ ಬ್ಯಾನರ್ ಸಂಘದವರು ಅರ್ಥ ಮಾಡಿಕೊಳ್ಳಬೇಕಿದೆ.

ವಿಷ್ಣುವನ್ನು ಕಳೆದುಕೊಂಡದ್ದು ಅವರ ಕುಟುಂಬಕ್ಕೆ ಹಾಗೂ ಯಾವ ಸಂಘದ ಬ್ಯಾನರೂ ಇಲ್ಲದೆ ಅವರನ್ನು ಆರಾಧಿಸುತ್ತಿದ್ದ ನಿಜ ಅಭಿಮಾನಿಗಳಿಗೆ ಮತ್ತು ಅಭಿಮಾನಿ ಬ್ಯಾನರ್ ಸಂಘಗಳಿಗೆ ಬಹುದೊಡ್ಡ ಎಮೋಷನಲ್ ಸಂಗತಿಯೇ ಆದರು, ಸ್ಮಾರಕ ವಿವಾದವನ್ನೂ ಅದೇ ಎಮೋಷನಲ್ ಆವೇಗದಲ್ಲಿ ಸರಿಪಡಿಸಲು ಮುಂದಾದರೆ ವಿಷಯ ಮತ್ತಷ್ಟು ಕಗ್ಗಂಟಾಗುವುದರಲ್ಲಿ ಅನುಮಾನವೇ ಇಲ್ಲ. ಅನಿರುದ್ಧ್ ಆಕ್ರೋಶದ ಮಾತುಗಳಿಗೆ ಸಿಎಂ ಕುಮಾರಸ್ವಾಮಿ ಗರಮ್ಮಾಗಿ ಉತ್ತರ ಕೊಟ್ಟದ್ದು ಇದೇ ಕಗ್ಗಂಟಿನ ಸೂಚನೆ ನೀಡುತ್ತಿವೆ.

ಜನರ ಆಕ್ರೋಶ, ಆವೇಶಗಳಿಗೆ ಸ್ಪಂದಿಸುವ ಸಂವೇದನೆಯನ್ನು ನಮ್ಮ ಸರ್ಕಾರಗಳು ಕಳೆದುಕೊಂಡು ಅದ್ಯಾವ ಕಾಲವೇ ಆಗಿಹೋಗಿದೆ. ಬಹುದೊಡ್ಡ ಸಮೂಹಗಳಾದ ರೈತರು, ಕಾರ್ಮಿಕರು ಬೀದಿಗಿಳಿದ ಪ್ರತಿಭಟಿಸಿದರೂ ಕ್ಯಾರೇ ಅನ್ನದ ಮನಸ್ಥಿತಿಗೆ ಸರ್ಕಾರದ ನರತಂತುಗಳು ಬಂದು ತಲುಪಿರುವ ಸಾಮಾಜಿಕ ವಾಸ್ತವವನ್ನು ವಿಷ್ಣು ಕುಟುಂಬ ಮತ್ತು ಅಭಿಮಾನಿ ಬ್ಯಾನರ್ ಸಂಘಗಳು ಅರ್ಥ ಮಾಡಿಕೊಳ್ಳಬೇಕಿದೆ. ಸ್ಮಾರಕದ ಆಗ್ರಹಕ್ಕೆ ಒಂದು ಕಾರ್ಯಯೋಜನೆಯನ್ನು ಸಿದ್ಧ ಮಾಡಿಕೊಳ್ಳದಿದ್ದರೆ ಹತಾಶೆಯ ನಡುವೆಯೇ ಸ್ಮಾರಕದ ಆಸೆಯನ್ನು ಕೈಚೆಲ್ಲುವ ಕಾಲಬಂದರೂ ಅಚ್ಚರಿಯಿಲ್ಲ. ಈಗಾಗಲೇ ಭಾರತಿಯವರು ‘ಅಭಿಮಾನಿಗಳು ತಮ್ಮ ಹೃದಯದಲ್ಲೇ ವಿಷ್ಣುಗೆ ಕೋಟೆ ಕಟ್ಟಿ ಸ್ಮಾರಕ ನಿರ್ಮಿಸಿದ್ದಾರೆ. ಇನ್ನು ಇಟ್ಟಿಗೆಗಳ ಸ್ಮಾರಕವನ್ನು ಸರ್ಕಾರ ಕಟ್ಟದಿದ್ದರೆ ಏನಂತೆ ಬಿಡಿ’ ಎಂದು ಹತಾಶೆಯಿಂದ ಹೇಳಿದ ಮಾತುಗಳೇ ಅಭಿಮಾನಿಗಳ ಪಾಲಿಗೆ ನಿಜವಾಗಿಬಿಡಲಿವೆ.

ಸರ್ಕಾರದ ಮೇಲೆ ಒತ್ತಡ ಹಾಕುವ ಮುನ್ನ ತಮ್ಮ ನಡುವೆ (ಕುಟುಂಬ ಮತ್ತು ಅಭಿಮಾನಿ ಬ್ಯಾನರ್ ಸಂಘಗಳು) ಬಂದಿರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳದೆ ಹೋದರೆ ಸರ್ಕಾರಗಳು ಎಷ್ಟೇ ಬದಲಾದರು ಅದೊಂದು ನೆಪದ ಮೇಲೆ ದಿನದೂಡಿಬಿಡುತ್ತವೆ.

ಹಾಗೆ ನೋಡಿದರೆ ಕನ್ನಡ ಇಂಡಸ್ಟ್ರಿಗೆ ಹೊಸ ಮೆರಗು ಕೊಟ್ಟ ಶಂಕರ್‌ನಾಗ್‌ರವರಿಗೆ ಸ್ಮಾರಕ ಕಟ್ಟಬೇಕೆಂಬ ಮಾತು ಯಾವ ಸರ್ಕಾರದಿಂದಲೂ ಬಂದಿಲ್ಲ. ಆದರೆ ವಿಷ್ಣು ಬಗ್ಗೆ ಸರ್ಕಾರದಿಂದಲೇ ಅಂತಹ ಪ್ರಯತ್ನಕ್ಕೆ ಚಾಲನೆ ಸಿಕ್ಕಿರೋದ್ರಿಂದ ಬಲು ನಾಜೂಕಾಗಿ, ಅಷ್ಟೇ ವ್ಯವಸ್ಥಿತವಾಗಿ ಸರ್ಕಾರದಿಂದ ಕೆಲಸ ಮಾಡಿಸಬೇಕಿದೆ. ಆದಷ್ಟೂ ಬೇಗ ಆ ಕೆಲಸವಾಗಲಿ ಅನ್ನೋದು ಪತ್ರಿಕೆಯ ಆಶಯ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಂಜಾಬ್‌: ಸಿಎಂ ಅಭ್ಯರ್ಥಿ ಆಯ್ಕೆಗಾಗಿ ಫೋನ್‌ ಕರೆ: ತಾನೇ ತೋಡಿದ ಖೆಡ್ಡಾದೊಳಗೆ ಬೀಳುತ್ತಿದೆಯೇ ಎಎಪಿ?

0
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಂಗ್ರೂರ್ ಸಂಸದ ಭಗವಂತ್ ಮಾನ್ ಅವರನ್ನು ಘೋಷಿಸಿದ್ದಾರೆ. ಮಾನ್‌ ಆಯ್ಕೆಗೆ...
Wordpress Social Share Plugin powered by Ultimatelysocial
Shares