Homeಸಾಮಾಜಿಕಅಂಬಿ ಎಂಬ ಚೌಕಟ್ಟಿನಾಚೆಯ ವ್ಯಕ್ತಿತ್ವ

ಅಂಬಿ ಎಂಬ ಚೌಕಟ್ಟಿನಾಚೆಯ ವ್ಯಕ್ತಿತ್ವ

- Advertisement -
- Advertisement -

ಡಿ.ಪಿ.ಗೌತಮ್ |

‘ಅಂಬಿ’, ‘ಅಂಬರೀಶ್’ ಎಂದು ಕರೆಯಲಾಗುತ್ತಿದ್ದ ರಾಜಕಾರಣಿಯಾಗಿ ಬದಲಾದ ನಟ ಅಮರನಾಥ್ ಬದುಕು ಚೌಕಟ್ಟಿನಾಚೆಯದು. ಯಾವುದೇ ಸೈಜಿನ ಕ್ಯಾನ್ವಾಸ್ ತೆಗೆದುಕೊಂಡರೂ ಅದರೊಳಗೆ ಸಮಂಜಸ ರೀತಿಯಲ್ಲಿ ಫಿಟ್ ಆಗದ ವ್ಯಕ್ತಿತ್ವ. ಕ್ಯಾನ್ವಾಸಿನಾಚೆಗೆ ಬೆಳೆದು ಬಿಡುತ್ತದೆ. ಅಥವಾ ಮಧ್ಯದಲ್ಲಿ ಅಥವಾ ಯಾವುದೋ ಒಂದು ಮೂಲೆಗೆ ಮಾತ್ರ ಸೀಮಿತವಾಗಿ ಬಿಡುತ್ತದೆ.

ವ್ಯಕ್ತಿಯೊಬ್ಬ ಮೃತನಾದಾಗ ಅವನ ಬಗೆಗಿನ ಎಲ್ಲ ಅಸಮಾಧಾನಗಳನ್ನು ಮರೆತು ಬಿಡುವುದು ಹಾಗೂ ಮೆಚ್ಚಿಗೆ-ಹೊಗಳಿಕೆ ಮಾತ್ರ ಉಳಿಸಿಕೊಳ್ಳುವ ಸತ್ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಬಹುತೇಕ ಅದು ಸರಿಯಾದ ಕ್ರಮ ಕೂಡ. ಆದರೆ, ವ್ಯಕ್ತಿಯೊಬ್ಬನ ಬದುಕು ಮುಗಿದಾಗ ‘ಮಾಡಬಹುದು’ ಎಂಬ ನಿರೀಕ್ಷೆಗಳೂ ಮುಗಿದು ಹೋಗುವುದರಿಂದ ಬರೀ ಧನಾತ್ಮಕ ಅಂಶಗಳಿಗೆ ಮಾತ್ರ ಸೀಮಿತ ಮಾಡಬೇಕಿಲ್ಲ. ಹಾಗಂತ ಇಡೀ ಬದುಕನ್ನು ಕಪ್ಪು-ಬಿಳುಪಿನ ದ್ವಿವರ್ಣದ ಛಾಯೆಯಲ್ಲಿ ವಿಭಾಗಿಸಿ ನೋಡುವುದು ಕೂಡ ಸರಿಯಲ್ಲ. ಬದುಕು ಬಹುತೇಕ ‘ಗ್ರೇ’ ಏರಿಯಾದಲ್ಲಿಯೇ ನಡೆಯುತ್ತದೆ. ಅರೆಬೆಳಕು-ಕತ್ತಲೆ, ಬೆಳಕು ಬೀಳದ- ಅರಿವಿಗೆ ಬಾರದ, ಹಾಗಂತ ಮುಚ್ಚಿ ಹೋಗುವಷ್ಟು ಕತ್ತಲೆಯೂ ಇಲ್ಲದ ಪ್ರದೇಶ. ಟೀಕೆ-ಹೊಗಳಿಕೆಗಳಿಗೆ ಮಾತ್ರ ಸೀಮಿತವಾಗದೇ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು. ಇದು ಅಂಬರೀಶ್ ಅವರ ವ್ಯಕ್ತಿತ್ವಕ್ಕೂ ಅನ್ವಯ ಆಗುತ್ತದೆ.

ಅಂಬರೀಶ್ ಅವರು ತಮ್ಮ 66ನೇ ವಯಸ್ಸಿನಲ್ಲಿ ತಮ್ಮ ಜೀವನದ ‘ಆಟ’ ಮುಗಿಸಿದ್ದಾರೆ. ಹೌದು 66 ಸಾಯುವ ವಯಸ್ಸೇನಲ್ಲ. ಹಾಗೆ ನೋಡಿದರೆ ಸಾವಿಗೂ ವಯಸ್ಸಿಗೂ ಯಾವುದೇ ರೀತಿಯ ನೇರ ಸಂಬಂಧ ಇಲ್ಲ. ಬದುಕು ನೀಡಿದ ‘ಅವಕಾಶ’ ಮುಗಿವ ಕ್ಷಣ ಯಾವಾಗಬೇಕಾದರೂ ಬರಬಹುದು. ಅವರ ‘ಆಪ್ತಮಿತ್ರ’ನಿಗೆ ಇವರಿಗಿಂತ ಬೇಗ ಬಂದಿತ್ತು. ನಾಲ್ಕುವರೆ ವರ್ಷಗಳ ಹಿಂದೆ ಸ್ವತಃ ಅಂಬರೀಶ್ ಅವರೇ ಸಾವಿಗೆ ಮುಖಾಮುಖಿ ಆಗಿ ಬಂದಿದ್ದರು. ಹೀಗೆ ಮರುಹುಟ್ಟು ಪಡೆದ ನಂತರವೂ ‘ಅಂಬಿ’ ಬದಲಾಗಲಿಲ್ಲ. ಹಲವರಿಗೆ ಬಹುತೇಕ ಅಸಾಧ್ಯವಾಗಿರುವ ಬದುಕು ನೀಡಿದ ಎರಡನೆ ಬೋನಸ್ ‘ಅವಕಾಶ’ವನ್ನು ಬಳಸಿಕೊಳ್ಳಬೇಕಾದ ರೀತಿಯಲ್ಲಿ ಬಳಸಲಿಲ್ಲ ಎಂಬುದು ಪ್ರೀತಿ ತುಂಬಿದ ಆಕ್ಷೇಪ. ಆರೂವರೆ ದಶಕಗಳ ಬದುಕಿನತ್ತ ಹಿಂತಿರುಗಿ ನೋಡಿದಾಗ ಕಾಣಿಸುವುದೇನು?

ಪಿಟೀಲು ಚೌಡಯ್ಯ ಅವರಂತಹ ದಿಗ್ಗಜ ಸಂಗೀತಗಾರರ ಕಲಾಪರಂಪರೆಯಿಂದ ಬಂದ ‘ಕಲಾವಿದ’ ಅಂಬರೀಶ್ ಕಟ್ಟಿಕೊಂಡದ್ದೇನು? ಗುರು- ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದ ಪುಟ್ಟ ಜಲೀಲನ ಪಾತ್ರಕ್ಕಾಗಿ ಬಣ್ಣ ಹಚ್ಚಿದ ‘ಅಂಬರೀಶ್’ ವೃತ್ತಿ ಬದುಕಿನ ಗ್ರಾಫ್ ಹಠಾತ್ ಆಗಿ ಮೇಲೇರಲಿಲ್ಲ. ಯಶಸ್ಸಿನ ಮುಖ ನೋಡುವುದಕ್ಕಾಗಿ ತುಂಬಾ ಹಾದಿ ಸವೆಸಬೇಕಾಯಿತು. ಪುಟ್ಟಣ್ಣ ನಿರ್ದೇಶನದ ‘ಪಡುವಾರಳ್ಳಿ ಪಾಂಡವರು’ ಮತ್ತು ‘ರಂಗನಾಯಕಿ’ ಚಿತ್ರಗಳಲ್ಲಿ ಅಂಬರೀಶ್‍ಗೆ ದೊರೆತ ಪಾತ್ರಗಳು ಅದನ್ನು ನಿಭಾಯಿಸಿದ ರೀತಿಯನ್ನು ಗಮನಿಸಬೇಕು. ಆದರೆ, ಕಾಲ ಯಾವಾಗಲೂ ಒಂದೇ ರೀತಿ ಇರುವುದಿಲ್ಲ.

ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ‘ಅಂತ’ ನೀಡಿದ ಯಶಸ್ಸು ಕೇವಲ ಕಲಾವಿದ ಅಂಬರೀಶ್‍ಗೆ ಮಾತ್ರವಲ್ಲ ಇಡೀ ಕನ್ನಡ ಚಿತ್ರರಂಗದ ಚಲನೆಯ ಸ್ವರೂಪ ಮತ್ತೊಂದು ದಿಕ್ಕಿನೆಡೆಗೆ ಚಲಿಸಲು ಕಾರಣವಾಯಿತು. ಪುರಾಣ-ಇತಿಹಾಸ ಕಥೆಗಳನ್ನು ಆಧರಿಸಿ ನಿರ್ಮಾಣವಾಗಲು ಆರಂಭಿಸಿದ ಕನ್ನಡ ಚಿತ್ರಗಳು (ಭಾರತೀಯ ಕೂಡ) ನಂತರ ಸಾಹಿತ್ಯ ಕೃತಿ ಆಧಾರಿತ ಸಾಮಾಜಿಕ ನೆಲೆಗಟ್ಟಿನತ್ತ ಹೊರಳಿದ್ದವು. ಕೌಟುಂಬಿಕ-ಭಾವನಾತ್ಮಕ ಚಿತ್ರಗಳು ಮುಂಚೂಣಿಯಲ್ಲಿದ್ದ ದಿನಗಳಲ್ಲಿ `ರಾಜಕೀಯ’ ಕಥೆಯ ಕೇಂದ್ರವಾಗಿದ್ದು ವಿಶೇಷವಾಗಿತ್ತು. ‘ಅಂಬಿ’ಯ ನಟನಾ ಬದುಕು ಅರಳಲು ಈ ರಾಜಕೀಯ ‘ಸರಣಿ’ ಚಿತ್ರಗಳು ಕಾರಣವಾದವು. ‘ಚಕ್ರವ್ಯೂಹ’, `ಗಜೇಂದ್ರ’ ಸೇರಿದಂತೆ ಆ ಕಾಲದಲ್ಲಿ ಬಂದ ಚಿತ್ರಗಳು ಅಂಬರೀಶ್‍ರಿಗೆ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪಾತ್ರ ನಿರ್ವಹಿಸುವುದಕ್ಕೆ ಅನುವು ಮಾಡಿಕೊಟ್ಟವು.

ರಾಜಕೀಯ ಅಂಬರೀಶರ ಕೈ ಹಿಡಿದಿತ್ತು. ಯಶಸ್ಸು ಬಂದ ಮೇಲೆ ಸಹಜವಾಗಿಯೇ ಬದುಕು ಬದಲಾಗುತ್ತದೆ- ಆಯ್ಕೆಗಳು ಕೂಡ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡದ್ದು ಕೂಡ ರಾಜಕೀಯ ಚಿತ್ರಗಳ ಕಥಾನಕದ ಮುಂದುವರೆದ ಭಾಗವೇ ಆಗಿತ್ತು. ‘ಅಂಬಿ-ಅಂಬಿ’ (ಅಂಬರೀಶ್-ಅಂಬಿಕಾ) ಜೋಡಿ ಚಿತ್ರರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹೆಜ್ಜೆಜಾಡಿಗಿಂತ ಭಿನ್ನವಾದ ‘ಒಲವಿನ ಉಡುಗೊರೆ, ಮಣ್ಣಿನದೋಣಿ, ಸಪ್ತಪದಿ, ಹೃದಯ ಹಾಡಿತು’ ಮೊದಲಾದ ಚಿತ್ರಗಳು ಅಂಬರೀಶ್ ‘ಕಲಾವಿದ’ ಎಂದು ಒಪ್ಪಿಸುವಲ್ಲಿ ಯಶಸ್ವಿಯಾದವು. ರಾಜ್ ಮತ್ತು ವಿಷ್ಣುವರ್ಧನ ಜೊತೆಗೆ ನಟಿಸುವ ಮಲ್ಟಿಸ್ಟಾರ್ ಚಿತ್ರಗಳಲ್ಲಿ ನಟಿಸುವ ವೇಳೆಗಾಗಲೇ ಅಂಬರೀಶ್ ಅವರ ಇಮೇಜ್ ಬೆಳೆದುಬಿಟ್ಟಿತ್ತು.

ತೆರೆಯ ಮೇಲೆ ಯಶಸ್ಸಿನ ಕೊಂಡಿಯಾಗಿದ್ದ ರಾಜಕೀಯ, ಬದುಕಿಗೂ ತಿರುವು ನೀಡುವುದಕ್ಕೆ ಕಾಯುತ್ತಿತ್ತು. ಅದಕ್ಕೆ ಅಂಬರೀಶ್ ಸಿದ್ಧವಾಗಿದ್ದರಾ? ಹೌದು ಸಿದ್ಧವಾಗಿದ್ದರು. ಆದರೆ, ಆ ಸಿದ್ಧತೆಯ ಸ್ವರೂಪ ಎಂತಹುದಾಗಿತ್ತು? ಬಣ್ಣದ ಬದುಕು ತಂದಿತ್ತ ಜನಪ್ರಿಯತೆ ಮತ್ತು ಅವರ ಸ್ವಂತ ಆಯ್ಕೆಯಾಗಿರದಿದ್ದರೂ, ಹುಟ್ಟಿದ ಜಾತಿ ಮತ್ತು ಪ್ರದೇಶದ ಜನರ ಅಪಾರ ಪ್ರಮಾಣದ ಬೆಂಬಲ ನೀಡಿದರು. ಹಾಗೆ ದೊರೆತ ಬೆಂಬಲವನ್ನು ಅಂಬರೀಶ್ ಹೇಗೆ ಬಳಸಿದರು- ಬಳಸಿಕೊಂಡರು? ಎಂದು ನೋಡಿದರೆ ‘ರಾಜಕಾರಣಿ’ಯಾಗಿ ಅವರ ಸಾಧನೆ ಅರಿವಿಗೆ ಬರುತ್ತದೆ.

ಸರಿಸುಮಾರು ಎರಡೂವರೆ ದಶಕಗಳ ರಾಜಕೀಯ ಜೀವನದಲ್ಲಿ ಅಂಬರೀಶ್ ಅವರಿಗೆ ದೊರೆತ ಅವಕಾಶಗಳು ನಿಜಕ್ಕೂ ಅಚ್ಚರಿ ಹುಟ್ಟಿಸುವಂತಹವು. ಅವರಷ್ಟು ಸುದೈವಿ ರಾಜಕಾರಣಿ ಮತ್ತೊಬ್ಬರು ಇರಲಾರರು. ಅವರ ರಾಜಕಾರಣ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಷ್ಟ್ರ ರಾಜಕಾರಣದಲ್ಲಿಯೂ ಅವರಿಗೆ `ಸೇವೆ’ ಸಲ್ಲಿಸುವ `ಅವಕಾಶ’ವನ್ನು ಮಂಡ್ಯದ ಜನ ಒದಗಿಸಿದ್ದರು. ಅದಕ್ಕೆ ಮಂಡ್ಯದ ಬ್ರ್ಯಾಂಡ್ ಗೆ ಸಾಂಸ್ಕೃತಿಕ ಮನ್ನಣೆ ದೊರಕಿಸಿಕೊಟ್ಟದ್ದೂ ಒಂದು ಕಾರಣವಾಗಿತ್ತು. ಜನ ತೋರಿದ ಪ್ರೀತಿ- ವಿಶ್ವಾಸವನ್ನು ಅಂಬರೀಶ್ ಅವರು ಉಳಿಸಿಕೊಂಡರಾ? ಚಿತ್ರನಟನಾಗಿ ಅಂಬರೀಶ್‍ರ ವೃತ್ತಿ ಬದುಕು ಏರುಮುಖಿಯಾಗಿತ್ತು. ಮಾರುಕಟ್ಟೆಯ ಸೋಲು-ಗೆಲುವಿನ ಲೆಕ್ಕಾಚಾರಗಳಲ್ಲಿ ಹಿನ್ನಡೆಗಳಿದ್ದರೂ ಅದು ನೇರವಾಗಿ ಅಂಬರೀಶ್ ಅವರ ನಟನಾ ಬದುಕಿನ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಇರಲಿಲ್ಲ. ಆದರೆ, ರಾಜಕೀಯ ಕ್ಷೇತ್ರ ಹಾಗಲ್ಲ. ಇಲ್ಲಿನ ನಿರೀಕ್ಷೆಗಳೇ ಬೇರೆ. ಅಂಬರೀಶ್ ಅವರಿಗೆ ‘ಸೋಲು’ ದಯಪಾಲಿಸುವ ಮೂಲಕ ಮಂಡ್ಯದ ಜನ ಯಾವ ಸಂದೇಶವನ್ನು ನೀಡಿದ್ದರು? ಆ ಸಂದೇಶವನ್ನು ಅಂಬರೀಶ್ ಓದಿಕೊಂಡ ರೀತಿ ಯಾವ ರೀತಿಯದಾಗಿತ್ತು? ಇವು ಕೇವಲ ಪ್ರಶ್ನೆಗಳಲ್ಲ. ಈ ಪ್ರಶ್ನೆಗಳ ಒಳಗೇ ಉತ್ತರಗಳೂ ಅಡಗಿವೆ.

ಅಂಬರೀಶ್ ಅವರು ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆಯಂತಹ ಪ್ರಮುಖ ಮತ್ತು ಜನಪ್ರಿಯ ಇಲಾಖೆಯ ಸಚಿವರಾಗಿದ್ದರು. ಬಹುಶಃ ವ್ಯಕ್ತಿಯೊಬ್ಬನ ಬದುಕಿನಲ್ಲಿ ಹೆಜ್ಜೆಗುರುತು ದಾಖಲಿಸುವುದಕ್ಕೆ ಅದಕ್ಕಿಂತ ದೊಡ್ಡ ಅವಕಾಶ ದೊರೆಯಲಾರದು. ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ರಾಜೀನಾಮೆ ಬಿಸಾಕಿ ಬಂದ ಅಂಬರೀಶ್ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರರಾದರು. ಅಧಿಕಾರ ತೊರೆಯುವ ಮೂಲಕ ಒತ್ತಡ ಹೇರುವ ತಂತ್ರ ಅಷ್ಟೊತ್ತಿಗಾಗಲೇ ತನ್ನ ಮಹತ್ವ ಕಳೆದುಕೊಂಡಿತ್ತು. ಅಧಿಕಾರದಲ್ಲಿದ್ದೂ ಅದನ್ನು ಚಲಾಯಿಸುತ್ತ ಸಂಬಂಧಿಸಿದವರ ಮೇಲೆ ಒತ್ತಡ ಹಾಕಬೇಕಿತ್ತು. ಬದಲಾದ ಕಾಲ ಮತ್ತು ಸ್ವರೂಪವನ್ನು ಅಂಬರೀಶ್ ಸರಿಯಾಗಿ ಓದಲಿಲ್ಲ. ಅಥವಾ ಓದಲು ಅವರು ಸಿದ್ಧರಿರಲಿಲ್ಲ. ಜನ ಪಾಠ ಕಲಿಸಿದರು. ಆದರೆ, ಕಲಿಯಲು ಅಂಬರೀಶ್ ಸಿದ್ಧರಿರಲಿಲ್ಲ. ಕಲಿಯದಿದ್ದರೂ ಮಂಡ್ಯದ ಜನ ಅಂಬರೀಶ್ ಅವರ ಕೈ ಬಿಡಲಿಲ್ಲ. ಕ್ಷಮಿಸಿ ಮತ್ತೊಮ್ಮೆ ವಿಧಾನಸಭೆಗೆ ಆರಿಸಿ ಕಳಿಸಿದರು.

ಸಿದ್ಧರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಸಚಿವರಾದ ಅಂಬರೀಶ್ ಕಾರ್ಯವೈಖರಿ ಬದಲಾಗಲಿಲ್ಲ. ಅವರ ಜೀವನ ವಿಧಾನವೇ ಅವರಿಗೆ ‘ವೈರಿ’ಯಾಗಿತ್ತು. ಜನ ಕಲಿಸಿದ ಪಾಠದಿಂದ ಕಲಿಯದಿದ್ದರೇನಾಯಿತು? ನಾ ಕಲಿಸುವೆ ಎಂದು ಆರೋಗ್ಯವೂ ಅವರಿಗೆ ಪಾಠ ಕಲಿಸಲು ಮುಂದಾಯಿತು. ಅದರಿಂದಲೂ ಅವರು ಕಲಿಯಲಿಲ್ಲ. ಅಂಬರೀಶ್ ಅವರು ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ಅನನ್ಯವಾದುದಾಗಿತ್ತು. ಆದರೆ, ಅಂಬರೀಶ್ ತಾವು ಕುಳಿತ ಕುರ್ಚಿಯ ಮಹತ್ವ ಅರಿಯಲಿಲ್ಲ. ಜನ ನೀಡಿದ `ಆಶೀರ್ವಾದ’ಕ್ಕೆ ಪ್ರತಿಯಾಗಿ ಜನರಿಗೆ ನೀಡಬೇಕಾದ `ನೀತಿ ರೂಪಿಸುವ’ ಮತ್ತು ಸಾಮಾನ್ಯರ ಬದುಕು ಬದಲಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ರಾಜಕೀಯವನ್ನು ಕೂಡ ಅವರು ನಟನೆಯ ಭಾಗವಾಗಿಸಿ ಕೊಂಡರು. ಸಚಿವ ಸಂಪುಟದಿಂದ `ಹೊರ ದಬ್ಬಿಸಿ ಕೊಳ್ಳುವುದಕ್ಕೆ’ ರಾಜಕೀಯ ಕಾರಣಗಳಿಗಿಂತ ಹೆಚ್ಚಾಗಿ ನಿಷ್ಕ್ರಿಯತೆಯೇ ಕಾರಣವಾಗಿತ್ತು.

ಅಂಬರೀಶ್ ಅವರು ಹತ್ತಿರದಿಂದ ಬಲ್ಲವರೂ ಸೇರಿದಂತೆ ಎಲ್ಲರಿಗೂ ಬೇಕಾದವರಾಗಿದ್ದರು. ವ್ಯಕ್ತಿಗತ ಪ್ರೀತಿ-ಕಾಳಜಿ ಅಂಬರೀಶ್ ಅವರ ವ್ಯಕ್ತಿತ್ವದ ಭಾಗವೇ ಆಗಿತ್ತು. ‘ಕರ್ಣ’ ಎಂದು ಕರುನಾಡಿನ ಜನ ಅವರನ್ನು ಕರೆದದ್ದು ಅತಿಶಯೋಕ್ತಿಯೇನಲ್ಲ. ವ್ಯಕ್ತಿಗತ ನೆಲೆಯಲ್ಲಿ ನೆರವು ನೀಡಲು- ಸಹಾಯ ಹಸ್ತ ಚಾಚಲು ಸದಾ ಸನ್ನದ್ಧರಾಗಿರುತ್ತಿದ್ದ ಅಂಬರೀಶ್ ಅವರ ಹೃದಯ ವೈಶಾಲ್ಯವು ಕೇವಲ ಅಷ್ಟಕ್ಕೆ ಮಾತ್ರ ಸೀಮಿತವಾಗಿತ್ತು.

ರಾಜಕುಮಾರ್ ನಿಧನದ ನಂತರ ಖಾಲಿಯಾದ ಕನ್ನಡ ಚಿತ್ರರಂಗದ ‘ನಾಯಕ’ನ ಸ್ಥಾನ ತುಂಬಲು ವಿಷ್ಣುವರ್ಧನ ಸಿದ್ಧರಾಗಿರಲಿಲ್ಲ- ಅಂತಹ ಮನಸ್ಥಿತಿಯನ್ನೂ ಅವರು ಕಳೆದುಕೊಂಡಿದ್ದರು. ಅದನ್ನು ತುಂಬಿದವರು ಅಂಬರೀಶ್ ಎಂಬುದರಲ್ಲಿ ಎರಡು ಮಾತಿಲ್ಲ. ಬಿಕ್ಕಟ್ಟು ಸಂಭವಿಸಿದಾಗ ಚಿತ್ರರಂಗದ ಜನ ಅಂಬರೀಶ್ ಕಡೆಗೆ ಮುಖ ಮಾಡುತ್ತಿದ್ದರು. ನಟರ ಬದುಕಿನ ವೈಯಕ್ತಿಕ ಸಮಸ್ಯೆಗಳನ್ನು ಬಗೆ ಹರಿಸುವ, ಬುದ್ಧಿ ಹೇಳುವ ಹಿರಿಯಣ್ಣನ ತರಹ ಅಂಬರೀಶ್ ಇದ್ದರು. ಕೊನೆಯ ದಿನಗಳಲ್ಲಿ ಬಣ್ಣ ಹಚ್ಚಿ ‘ಅಂಬಿ ನಿನ್ಗೆ ವಯಸ್ಸಾಯ್ತು ಕಣೊ’ ಎಂದದ್ದು ರಾಜಕೀಯ-ಸಾರ್ವಜನಿಕ ಬದುಕಿಗೆ ಅವರೇ ನೀಡಿದ ವ್ಯಾಖ್ಯಾನ ಇರಬಹುದೇ?

ನಟನಾಗಿ ಜನಮನವನ್ನು ಅಂಬರೀಶ್ ಗೆದ್ದಿದ್ದರು. ಆದರೆ ರಾಜಕೀಯದಲ್ಲಿಯೂ ಹಾಗೆ ಗೆಲುವು ಅವರದಾಗಬೇಕಿತ್ತು ಎಂದು ನಿರೀಕ್ಷಿಸುವುದು ತಪ್ಪಲ್ಲ. ನಟ ಮತ್ತು ಕಲಾವಿದ ಜನರನ್ನು ಮನಸ್ಸನ್ನ ತಣಿಸುವ ಕೆಲಸ ಮಾಡುತ್ತಾನೆ. ಅದು ಕಡಿಮೆಯದೇನೂ ಅಲ್ಲ. ಆದರೆ, ಜನಪ್ರತಿನಿಧಿಯಾದವನಿಗೆ ಜನರ ನಿತ್ಯದ ಬದುಕನ್ನೇ ಬದಲಾಯಿಸುವ ಅವಕಾಶ ಇರುತ್ತದೆ. ನಟನಾಗಿ ಮುದ ನೀಡುವ `ಅಂಬಿ’ ವ್ಯಕ್ತಿಯಾಗಿಯೂ ಪ್ರೀತಿ ಪಾತ್ರರಾಗುತ್ತಾರೆ. ಆದರೆ, ಇದೇ ಮಾತನ್ನು ರಾಜಕಾರಣಿ ಅಂಬಿಗೆ ಅನ್ವಯಿಸಲು ಆಗುವುದಿಲ್ಲ ಎಂಬುದೇ ವಿಷಾದದ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...