Homeಅಂಕಣಗಳುಸಂಪಾದಕೀಯ : ಕನಗನಮರಡಿಯ ಸಾವುಗಳಿಗೆ ನ್ಯಾಯ ಸಿಗಬೇಕು

ಸಂಪಾದಕೀಯ : ಕನಗನಮರಡಿಯ ಸಾವುಗಳಿಗೆ ನ್ಯಾಯ ಸಿಗಬೇಕು

- Advertisement -
- Advertisement -

ಈ ವಾರ ಮೂರು ‘ದೊಡ್ಡ ಸಾವು’ಗಳು ಕರ್ನಾಟಕವನ್ನು ಕಲಕಿವೆ. ಇಬ್ಬರು ದೊಡ್ಡ ಮನುಷ್ಯರ ಸಾವುಗಳು ಮತ್ತು ‘ಸಾಮಾನ್ಯ ಜನರ’ ದೊಡ್ಡ ಸಂಖ್ಯೆಯ ಸಾವು. ಈ ದುರಂತಗಳಿಗೆ ಮಾಧ್ಯಮಗಳು, ಅದರಲ್ಲೂ ಟಿವಿ ವಾಹಿನಿಗಳು ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಟಿವಿ ಚಾನೆಲ್‍ಗಳ ಮನೋಭಾವದ ಕುರಿತು ರವೀಶ್ ಕುಮಾರ್ ಅವರು ಒಮ್ಮೆ ವೀಕ್ಷಕರಿಗೆ ಕೇಳಿದ ಪ್ರಶ್ನೆ ಇಲ್ಲಿ ಉಲ್ಲೇಖಾರ್ಹವಾಗಿದೆ. ‘ನಮ್ಮೆಲ್ಲರ (ಟಿವಿ ವಾಹಿನಿಗಳ) ಗುರಿ ಟಿಆರ್‍ಪಿಯಾಗಿದೆ. ಆದರೆ, ನಿಮ್ಮ (ವೀಕ್ಷಕರ) ಗುರಿಯೂ ಟಿಆರ್‍ಪಿಯಾಗಿದೆಯೇ?. ನೀವು ಏನು ನೋಡುತ್ತೀರೋ ಅದನ್ನು ನಾವು ತೋರಿಸುತ್ತೇವೆಂದು ಟಿವಿ ವಾಹಿನಿಗಳು ಹೇಳುತ್ತವೆ; ಆದರೆ ಟಿವಿ ವಾಹಿನಿಗಳು ಏನು ತೋರಿಸುತ್ತಾರೋ ಅದನ್ನು ನಾವು ನೋಡುತ್ತೇವೆಂದು ನೀವು ಹೇಳುತ್ತೀರಿ. ಒಟ್ಟಿನಲ್ಲಿ ಈ ಅಸಹ್ಯಕ್ಕೆ ಯಾರು ಕಾರಣವೆಂದು ಸ್ಪಷ್ಟವಾಗುತ್ತಿಲ್ಲ.’ ಹೀಗೆ ಹೇಳುತ್ತಿದ್ದ ರವೀಶ್ ಕುಮಾರ್ ಅವರು ವಾಸ್ತವದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಮಾಧ್ಯಮಗಳೇ ಕಾರಣವೆಂದು ಸ್ಪಷ್ಟಪಡಿಸುತ್ತಿದ್ದರು.

ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಮಾಧ್ಯಮಗಳು ನೆಗೆಟಿವ್ ಸ್ಟೋರಿಗಳ ಹುಡುಕಾಟದಲ್ಲಿ, ಇಲ್ಲವೇ ಸೆಲೆಬ್ರಿಟಿಗಳ ಬದುಕಿನ ಹಿಂದೆ ಬಿದ್ದಿವೆ. ಅದಕ್ಕೆ ಅವರು ಕೊಡುವ ಕಾರಣ ಟಿಆರ್‍ಪಿ ಮತ್ತು ಇತರರಿಗಿಂತ ನಾವೇ ಮುಂದೆ ಎನ್ನುವ ಸ್ಪರ್ಧೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ವಿ.ಸಿ.ನಾಲೆಗೆ ಬಸ್ ಬಿದ್ದು 30 ಜನ ತೀರಿಕೊಂಡಾಗ ಎಲ್ಲಾ ಮಾಧ್ಯಮಗಳೂ ಮುಗಿಬಿದ್ದಿದ್ದವು. ನಿಜಕ್ಕೂ ಬಹಳ ಕರುಳು ಕಲಕುವ ಘಟನೆ. ದೂರದಿಂದ ಕೇಳಿದರೇ ಭೀಕರವೆನ್ನಿಸುವ, ಮನಸ್ಸು ವ್ಯಾಕುಲಗೊಳ್ಳುವ ದುರಂತ ಅದು. ಆದರೆ, ಯಾವ ಮುನ್ಸೂಚನೆಯೂ ಇಲ್ಲದೇ ಮನೆಯವರನ್ನು ಕಳೆದುಕೊಂಡ ಬಂಧುಗಳ ಬಾಯಿಗೆ ಮೈಕ್ ಹಿಡಿದು ಅವರ ಅನಿಸಿಕೆ ಕೇಳುವ ಮಾಧ್ಯಮಗಳಿಗೆ ಅಂತಹ ವ್ಯಾಕುಲತೆ ಇದ್ದಂತೆ ಕಾಣುತ್ತಿರಲಿಲ್ಲ. ಜರ್ರನೇ ಏರುವ ಟಿಆರ್‍ಪಿಯ ಸಂಭ್ರಮ ಅವರಲ್ಲಿದ್ದಂತೆ ಕಾಣುತ್ತಿತ್ತು.

ನಿಜಕ್ಕೂ ನಮ್ಮನ್ನು ಕಾಡಬೇಕಾದ ಹಲವು ಆಯಾಮಗಳು ಆ ಘಟನೆಗೆ ಇವೆ. ಅವನ್ನೇ ಇಲ್ಲಿ ಚರ್ಚಿಸಬೇಕೆಂದು ಬಯಸಿದ್ದೇವೆ. ಆದರೆ, ಅಂತಹ ಆಯಾಮಗಳ ಚರ್ಚೆಯು ಮಾಧ್ಯಮಗಳಲ್ಲಿ ಮುಂದುವರೆಯಲಿಲ್ಲ. ಏಕೆಂದರೆ, ಜನಪ್ರಿಯ ಚಿತ್ರನಟ ಅಂಬರೀಷ್ ತೀರಿಕೊಂಡಿದ್ದು ಇನ್ನೂ ಹೆಚ್ಚಿನ ಟಿಆರ್‍ಪಿ ತಂದುಕೊಡುವ ಸುದ್ದಿಯಾಗಿ ಕಂಡಿತು. ಸಾಯುವ ವಯಸ್ಸಾಗಿರದಿದ್ದ, ಮನುಷ್ಯನಾಗಿ ಹಲವು ಒಳ್ಳೆಯ ಗುಣಗಳನ್ನು ಹೊಂದಿದ್ದ ವರ್ಣರಂಜಿತ ವ್ಯಕ್ತಿ ಅಂಬರೀಷ್. ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಿರಲೇಬೇಕಿದ್ದ ಕೆಲವು ಪ್ರಮುಖ ಗುಣಗಳನ್ನು ಹೊಂದಿರದಿದ್ದರೂ, ಸಣ್ಣತನವಿಲ್ಲದ, ಯಾರನ್ನೂ ದ್ವೇಷಿಸದ, ಸಾಧ್ಯವಾದರೆ ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕೆನ್ನುವ ವ್ಯಕ್ತಿತ್ವವುಳ್ಳವರು. ಅವರ ಕುರಿತಂತೆ ಎರಡು ಲೇಖನಗಳು ಈ ಸಂಚಿಕೆಯಲ್ಲಿ ಪ್ರಕಟವಾಗಿರುವುದರಿಂದ ಇಲ್ಲಿ ವಿಸ್ತರಿಸಲು ಹೋಗುವುದಿಲ್ಲ.

ನಟನೂ, ರಾಜಕಾರಣಿಯೂ ಆಗಿದ್ದ ಅವರ ಸಾವಿನ ಸಂದರ್ಭದಲ್ಲಿ ಕನ್ನಡನಾಡು ದುಃಖವನ್ನೂ, ವಿಷಾದವನ್ನೂ, ಸ್ವಲ್ಪಮಟ್ಟಿಗಿನ ಕುತೂಹಲವನ್ನೂ ಹೊಂದುವುದು ಸಹಜ. ಆದರೆ, ಅದನ್ನು ನಮ್ಮ ಮಾಧ್ಯಮಗಳು ಯಾವ ಪರಿ ಹಿಗ್ಗಿಸುತ್ತವೆಂದರೆ, ಹಿಂದಿನ ದಿನವಷ್ಟೇ ಜರುಗಿದ 30 ಜನರ ದುರ್ಮರಣವು ಮರೆತೇ ಹೋಯಿತು ಮತ್ತು ಮರುದಿನದ ಕನ್ನಡ ನಾಡಿನ ಒಬ್ಬ ಧೀಮಂತ ರಾಜಕಾರಣಿಯಾಗಿದ್ದ ಜಾಫರ್‍ಷರೀಫರ ಸಾವಿನ ಸಂದರ್ಭ ಸಂತಾಪಕ್ಕೆ ಮತ್ತು ವ್ಯಕ್ತಿತ್ವ ವಿಶ್ಲೇಷಣೆಗೆ ಅರ್ಹ ಎಂದು ಅನಿಸಲಿಲ್ಲ. ಕೆಲವು ಆಯಾಮಗಳಲ್ಲಿ ಜಾಫರ್‍ಷರೀಫ್‍ರದ್ದು ಅಂಬರೀಷರಿಗಿಂತ ಮಿಗಿಲಾದ ವ್ಯಕ್ತಿತ್ವ. ಅವರಿಗೆ ಸಲ್ಲಬೇಕಾದಷ್ಟು ಗೌರವ ಸಲ್ಲಲಿಲ್ಲ. ಅದಕ್ಕೆ ಅವರ ಸಾಮಾಜಿಕ ಹಿನ್ನೆಲೆಯೂ ಕಾರಣವಾಗಿರಬಹುದು ಎಂಬ ಅನಿಸಿಕೆಯೂ ಸುಳ್ಳಲ್ಲ. ಮೂರು ದಿನಗಳ ಅಂತರದಲ್ಲಿ ಸಂಭವಿಸಿದ ಸಾವುಗಳು, ದುಃಖದ ಜೊತೆಗೆ ಮಾಧ್ಯಮಗಳ ಮತಿಹೀನ ನಡವಳಿಕೆಯ ಕುರಿತ ಜಿಜ್ಞಾಸೆಗೂ ಎಡೆ ಮಾಡಿಕೊಟ್ಟಿತು.

ಸಾವಿನ ಸಂದರ್ಭದಲ್ಲಿ ಸಂತಾಪ ವ್ಯಕ್ತಪಡಿಸುವುದು ಮತ್ತು ದುಃಖ ತೋರುವುದರ ಆಚೆ ಬೇರೆ ರೀತಿಯ ಚರ್ಚೆ ಮಾಡುವ ಅಗತ್ಯವಿದೆಯೇ? ಖಂಡಿತಾ ಇದೆ. ಏಕೆಂದರೆ ಮನುಷ್ಯರ ಹುಟ್ಟಿಗೆ (ಆ ಕಾರಣಕ್ಕೆ ಅವರ ಜಯಂತಿಗಳಿಗೂ) ಹೆಚ್ಚಿನ ಅರ್ಥವಿರಬೇಕಿಲ್ಲ. ಹುಟ್ಟಿನಲ್ಲಿ ವಿಶೇಷವೇನಿರುವುದಿಲ್ಲ. ಸಾವಿಗೆ ಅರ್ಥ ಬರುವುದು ಸಾವಿನ ರೀತಿಗೆ ಮಾತ್ರವಲ್ಲಾ, ಆ ವ್ಯಕ್ತಿ ಅದುವರೆಗೆ ಬದುಕಿದ ರೀತಿಯ ಕಾರಣಕ್ಕೆ. ಸತ್ತ ವ್ಯಕ್ತಿಯನ್ನು ಹೀಗಳೆಯುವುದು ಮತ್ತು ಸಂಭ್ರಮಿಸುವುದು ವಿಕೃತಿಯಲ್ಲದೇ ಬೇರೇನೂ ಅಲ್ಲ. ಹಾಗೆಂದು, ಇಲ್ಲದ ಗುಣಗಳನ್ನು ಆರೋಪಿಸಿ ಹೊಗಳುವುದೂ ಥರವಲ್ಲ. ಅಂತಹದ್ದು ಪದೇ ಪದೇ ನಡೆಯುತ್ತಿದೆ.

ಕನಗನಮರಡಿಯಲ್ಲಿ ಆದ ಸಾವುಗಳಿಗೆ ಇದಕ್ಕಿಂತ ಮಹತ್ವವಿದೆ. ಅದೊಂದು ಸಾರ್ವಜನಿಕ ದುರಂತ. ತಪ್ಪಿಸಬೇಕಿದ್ದ, ತಪ್ಪಿಸಬಹುದಾಗಿದ್ದ ದುರಂತವದು. ವಾಹನ ಓಡಿಸುತ್ತಿದ್ದ ಡ್ರೈವರ್ ತಪ್ಪಿಸಬಹುದಾಗಿದ್ದ ದುರಂತ ಮಾತ್ರವಲ್ಲಾ, ‘ನಾಗರಿಕ ಬದುಕನ್ನು ನಿರ್ವಹಿಸುತ್ತಿರುವ ವ್ಯವಸ್ಥೆ’ಯು ತಪ್ಪಿಸಬಹುದಾಗಿದ್ದ ಅಪಘಾತ. ಹೇಗೆ ಎಂಬುದನ್ನು ಚರ್ಚಿಸುವ ಮುನ್ನ ಇತ್ತೀಚೆಗೆ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರು ಆಡಿದ ಮಾತನ್ನು ನೆನೆಯಬೇಕು. ಮಠಕ್ಕೆ ಭೇಟಿ ನೀಡುವವರಿದ್ದ ಉಪಮುಖ್ಯಮಂತ್ರಿ ಅಲ್ಲಿ ಸೇವಿಸಬಹುದಾಗಿದ್ದ ಆಹಾರವನ್ನು ಪರೀಕ್ಷಿಸಿದ ಸರ್ಕಾರೀ ಅಧಿಕಾರಿಗಳು, ಸಾವಿರಾರು ಜನರು ಸಾಮೂಹಿಕವಾಗಿ ಸೇವಿಸಲು ತಯಾರಾದ ಆಹಾರವನ್ನೇಕೆ ಪರೀಕ್ಷಿಸುವುದಿಲ್ಲ? ಒಬ್ಬರ ಜೀವವು ನೂರಾರು ಜನರ ಜೀವಕ್ಕಿಂತ ಅಮೂಲ್ಯವೇ ಎಂದು ಅವರು ಕೇಳಿದ್ದರು. ಈ ಮಾತನ್ನಿಟ್ಟುಕೊಂಡು ಕೆಲವರು ಅವರ ಟೀಕೆಯನ್ನೂ ಮಾಡಿದರು. ಅವರ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮತ್ತು ನಮ್ಮ ಆದ್ಯತೆಗಳನ್ನು ಸರಿಪಡಿಸಿಕೊಂಡರೆ ಮಾತ್ರ, ಕನಗನಮರಡಿಯಲ್ಲಿ ಸಂಭವಿಸಿದಂತಹ ದುರಂತಗಳನ್ನು ತಪ್ಪಿಸಬಹುದು.

ದೇಶದ ಪ್ರಧಾನಮಂತ್ರಿಯವರು (ಮೋದಿ ಮಾತ್ರವಲ್ಲಾ, ಯಾರೇ ಆ ಸ್ಥಾನದಲ್ಲಿದ್ದರೂ) ಒಂದು ವಿಮಾನ ನಿಲ್ದಾಣದಲ್ಲಿಳಿದು, ಅಲ್ಲಿಂದ 50 ಕಿ.ಮೀ. ದೂರದ ಸ್ಥಳವೊಂದರಲ್ಲಿ ಅವರ ಪಕ್ಷದ ಪರವಾಗಿ ಪ್ರಚಾರ ಮಾಡಲು ಹೋಗುತ್ತಾರೆಂದಿಟ್ಟುಕೊಳ್ಳಿ, ಅದಕ್ಕಾಗಿ ನಡೆಯುವ ತಯಾರಿಯ ವಿವರ ಕೇಳಿದರೆ ಆಶ್ಚರ್ಯ ಮಾತ್ರವಲ್ಲಾ, ಆಘಾತವಾಗುತ್ತದೆ. ಅವರು ಇಳಿದ ನಂತರ ಅಕಸ್ಮಾತ್ 10 ನಿಮಿಷ ಎಲ್ಲಿಯಾದರೂ ಕೂರಬೇಕೆಂದರೆ ಅದಕ್ಕೆ ವ್ಯವಸ್ಥೆ ಇರುತ್ತದೆ. ಯಾವುದೇ ರೀತಿಯ ಆರೋಗ್ಯದ ಏರುಪೇರು ಆದರೆ, ಜೊತೆಯಲ್ಲೇ ಇರುವ ವೈದ್ಯರು ಮತ್ತು ವೈದ್ಯಕೀಯ ಏರ್ಪಾಡಲ್ಲದೇ, ಹತ್ತಿರದ ಯಾವ ಆಸ್ಪತ್ರೆಗೆ ಒಯ್ಯಬೇಕೋ ಅಲ್ಲಿ ಏರ್ಪಾಡು ಆಗಿರುತ್ತದೆ. ಆ ಎಲ್ಲಾ ರಸ್ತೆಗಳಲ್ಲೂ ಜೀರೋ ಟ್ರಾಫಿಕ್ ಮಾಡಲು ವ್ಯವಸ್ಥೆಯಿರುತ್ತದೆ. ಏನೇ ಅವಘಡ ಉಂಟಾದರೂ, ಆ ಮಾರ್ಗದಲ್ಲಿ ಯಾವ್ಯಾವ ಸುರಕ್ಷಿತ ಸ್ಥಳದಲ್ಲಿ ಇರಿಸಬೇಕೆನ್ನುವ ಕುರಿತು ಕಟ್ಟುನಿಟ್ಟಿನ ಏರ್ಪಾಡು ಆಗಿರುತ್ತದೆ. ಅವರು ಯಾವ ದಾರಿಯಲ್ಲಿ ಹೋಗಬೇಕೆಂದು ನಿಗದಿಯಾಗಿರುತ್ತದೋ, ಆ ದಾರಿಯಲ್ಲಷ್ಟೇ ಅಲ್ಲದೇ, ಅಕಸ್ಮಾತ್ತಾಗಿ ಬದಲಿಸಬೇಕಾಗಿ ಬರಬಹುದೆಂದು ಬದಲಿ ಮಾರ್ಗದಲ್ಲೂ ಸುರಕ್ಷತಾ ಏರ್ಪಾಡು ಆಗಿರುತ್ತದೆ. ಇವೆಲ್ಲಕ್ಕೂ ಸಾಕಷ್ಟು ದಿನಗಳ ಮೊದಲೇ ಎಲ್ಲಾ ಸಿದ್ಧತೆಗಳು ಆಗಿರುತ್ತವೆ. ಸಾವಿರಗಟ್ಟಲೇ ಸಿಬ್ಬಂದಿ ಇದಕ್ಕಾಗಿ ನಿಯೋಜಿತರಾಗಿರುತ್ತಾರೆ. ಭಾರೀ ಸೈಜಿನ ಫೈಲುಗಳು ಓಡಾಡಿರುತ್ತವೆ. ಸ್ಥಳೀಯ ಪೊಲೀಸರು ಮಾತ್ರವಲ್ಲದೇ ಬೇರೆ ಬೇರೆ ಹಂತದಲ್ಲಿ ನಿಗಾ ವಹಿಸಲಾಗಿರುತ್ತದೆ. ದೇಶದ ಪ್ರಧಾನಮಂತ್ರಿಯೊಬ್ಬರ ಭದ್ರತೆ ಬಹಳ ಮುಖ್ಯವೇ. ದೇಶದ ಹಿತಾಸಕ್ತಿಯಿಂದ ಹಲವು ರಿಸ್ಕಿನ ಕ್ರಮಗಳನ್ನು ಕೈಗೊಳ್ಳಬೇಕಾಗುವ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರ ಸುರಕ್ಷತೆಯ ಕುರಿತು ಉಡಾಫೆಯಿಂದಿರಬಾರದು. ಆದರೆ, ಸಾಮಾನ್ಯರ ಬದುಕಿಗೂ ಅದಕ್ಕೆ ತಕ್ಕುನಾದ ಗಮನ ಹಾಗೂ ಕ್ರಮಗಳು ಬೇಕಲ್ಲವೇ ಎಂಬುದಷ್ಟೇ ಪ್ರಶ್ನೆ.

ಆ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ವರ್ಷದುದ್ದಕ್ಕೂ. ರಸ್ತೆಯ ಪಕ್ಕದಲ್ಲೇ ನಾಲೆಯೋ, ಕೆರೆಯೋ, ನದಿಯೋ ಅಥವಾ ಕಲ್ಯಾಣಿಯೋ ಇದೆ. ರಸ್ತೆಯಲ್ಲಿ ತಿರುವುಗಳಿವೆ. ಅಲ್ಲಲ್ಲಿ ಮರಳೂ ಚೆಲ್ಲಿರುತ್ತದೆ. ಮನುಷ್ಯ ಸಹಜವಾದ ಮಿತಿಗಳು, ದೌರ್ಬಲ್ಯಗಳನ್ನು ಹೊಂದಿರುವವರು ವಾಹನಗಳನ್ನು ಚಾಲನೆ ಮಾಡುತ್ತಾರೆ. ಹಾಗೆ ಚಾಲನೆ ಮಾಡುವಾಗ, ತಮ್ಮದೇ ಆದ ವಾಹನಗಳನ್ನು ಹೊಂದುವ ಸಾಮಥ್ರ್ಯವಿರದ ಕಾರಣಕ್ಕೆ ಸಾರ್ವಜನಿಕ ಸಾರಿಗೆ ಬಳಸುತ್ತಿರುವವರನ್ನೂ ಅವರು ತಮ್ಮ ವಾಹನದಲ್ಲಿ ಒಯ್ಯುತ್ತಿರುತ್ತಾರೆ. ಚಾಲಕರು ತಮ್ಮ ಹಿಡಿತಕ್ಕೆ ಮೀರಿದ ಕಾರಣಗಳಿಂದ ನಿದ್ದೆಗೆಟ್ಟಿರುವ, ಸುಸ್ತಾಗಿರುವ ಸಾಧ್ಯತೆಗಳಿರುತ್ತವೆ. ಇಂತಹ ಯಾವುದೋ ಒಂದು ಕಾರಣದಿಂದ ಅಲ್ಲಿ ಎಡವಟ್ಟಾದರೆ ದುರಂತ ಸಂಭವಿಸುವ ಸಾಧ್ಯತೆ ಆ ರಸ್ತೆ ನಿರ್ಮಿಸಲಾದ ದಿನದಂದೇ ಹುಟ್ಟಿಕೊಂಡಿರುತ್ತದೆ.

ಸಾರ್ವಜನಿಕರನ್ನು ಸಾಗಿಸುವ ವಾಹನವು ಸುಭದ್ರ ಸ್ಥಿತಿಯಲ್ಲಿರದೇ ಇರಲೂ ಹಲವು ಕಾರಣಗಳಿರುತ್ತವೆ. ಬೇರ್ಯಾವ ಉದ್ಯೋಗವೂ ಇಲ್ಲದ ಅಥವಾ ಇದ್ದರೂ ಲಾಭದ ಆಸೆಯಿಂದ ಮಾಲೀಕನೊಬ್ಬನು ತಗಡು ಗಾಡಿಯೊಂದನ್ನು ಅಲ್ಲಿ ಚಾಲನೆಗೆ ಬಿಟ್ಟಿರಬಹುದು. ಚಾಲಕ ಎಲ್ಲಾ ರೀತಿಯಲ್ಲೂ ಸಮಸ್ಥಿತಿಯಲ್ಲಿದ್ದು, ವಾಹನವೂ ಸುಸ್ಥಿತಿಯಲ್ಲಿದ್ದರೂ, ಆಕಸ್ಮಿಕವಾಗಿ ಚುಚ್ಚಿಕೊಳ್ಳುವ ಮೊಳೆಯು ಪಂಕ್ಚರ್ ಮಾಡಿ ತುಂಬಿದ ಬಸ್ಸನ್ನು ಪಕ್ಕಕ್ಕೆ ಎಳೆಯಬಹುದು. ಇಂಥ ಯಾವುದೋ ಕಾರಣಕ್ಕೆ ಬಸ್ಸು ನೀರೊಳಗೆ ಮುಳುಗುವ ಸಾಧ್ಯತೆ ಇರುತ್ತದೆ.

ಇಂತಹ ಅವಘಡಕ್ಕೆ ಆ ಭಾಗದ ನಿರ್ದಿಷ್ಟ ಅಧಿಕಾರಿಯನ್ನಷ್ಟೇ ಹೊಣೆ ಮಾಡುವುದರಿಂದ ಪ್ರಯೋಜನವಿಲ್ಲ. ಏಕೆಂದರೆ, ವಿ.ಸಿ.ನಾಲೆಯಲ್ಲಿ ಬಸ್ಸು ಬಿದ್ದ ರೀತಿಯ ದುರ್ಘಟನೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಸಂಭವಿಸಿದೆ. ಜನಸಾಮಾನ್ಯರ ಬದುಕೂ, ಅವರ ಪ್ರಯಾಣಗಳೂ ಅಷ್ಟು ಮುಖ್ಯವೆಂದು ಈ ವ್ಯವಸ್ಥೆಯು ಭಾವಿಸಿಲ್ಲವೆಂಬ ಕಾರಣದಿಂದಲೇ ಮಂಡ್ಯ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಹೇಳಲು ಹೆಚ್ಚಿನ ತನಿಖೆಯ ಅಗತ್ಯವಿಲ್ಲ.

ಮರುದಿನ ಇನ್ನೊಂದು ಟಿಆರ್‍ಪಿ ಸುದ್ದಿ ಸಿಕ್ಕಿತೆಂದು ಈ ದಿನದ ಭೀಕರ ರಸ್ತೆ ದುರಂತವನ್ನು ರಸ್ತೆಯಲ್ಲೇ ಮರೆತುಬಿಡುವ ಮಾಧ್ಯಮಗಳಿರುವ ನಾಡಿನಲ್ಲಿ, ಸರ್ಕಾರಗಳು ಎಚ್ಚೆತ್ತುಕೊಂಡು ರಸ್ತೆ ಸುರಕ್ಷತೆಯ ಬಗ್ಗೆ ಗಮನಹರಿಸುವುದು ಸಾಧ್ಯವಿಲ್ಲ. ಆ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸಾಣೇಹಳ್ಳಿ ಸ್ವಾಮೀಜಿಯವರು ಆರಂಭಿಸಿರುವ ಚರ್ಚೆಯನ್ನು ನಾವೆಲ್ಲರೂ ಮುಂದುವರೆಸಬೇಕು. ಆಗ ಮಾತ್ರ ಕನಗನಮರಡಿಯ ಸಾವುಗಳಿಗೆ ನ್ಯಾಯ ದೊರಕೀತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...