ನಮ್ಮ ಪ್ರಧಾನ ಸೇವಕ ನರೇಂದ್ರ ಮೋದಿ ಸೇರಿದಂತೆ ಸಿನಿಮಾ ಸ್ಟಾರ್‍ಗಳು, ಆಟಗಾರರು ಫಿಟ್ನೆಸ್ ಚಾಲೆಂಜ್ ಮಾಡ್ಕಂಡು ಒಂದಷ್ಟು ದಿನ ಆಟ ಆಡಿದ್ರು, ಅಲ್ಲದೆ ಒಂದು ವಾರದಿಂದ ಕಿಕಿ ಚಾಲೆಂಜ್ ಅಂತ ಹೊಸದೊಂದು ಚಾಲೆಂಜ್ ಟ್ರೆಂಡ್ ಶುರು ಮಾಡ್ಕೊಂಡು ಜನ ಬಿಸಿಯಾಗಿದ್ದಾರೆ. ಇದನ್ನ ನೋಡಿ ಸುಮ್ಮನಿರಲಾರದ ಟ್ರಾಯ್ ಅಧ್ಯಕ್ಷ ಕಂ ಯುಐಡಿಎಐ(ವಿಶಿಷ್ಟ ಗುರುತು ಪ್ರಾಧಿಕಾರ)ನ ಮಾಜಿ ಸಿಇಓ ಆರ್.ಎಸ್.ಶರ್ಮ ಇರಲಾರದೋರು ಇರುವೆ ಬಿಡ್ಕಂಡ್ರು ಅನ್ನೋ ಹಾಗೆ ಹೊಸ ಚಾಲೆಂಜ್ ಶುರು ಮಾಡೋಕೋಗಿ ನಮ್ ಜನರ ಮುಂದೆ ಕಾಮೆಡಿ ಪೀಸಾಗಿದ್ದಾರೆ.
ಅಂತದ್ದೇನಪ್ಪಾ ಮಾಡಿದ್ರು ನಮ್ ಟ್ರಾಯ್ ಅಧ್ಯಕ್ಷರು ಅಂದ್ರೆ, ಆಧಾರ್ ಸಂಖ್ಯೆ ಸೇಫಾಗಿಲ್ಲ ಅನ್ನೋರಿಗೆ ಅಧಾರ್ ಎಷ್ಟು ಸೇಫ್ ಅಂತ ತೋರಿಸ್ತೀನಿ ಅಂತ ಕೆಲವು ದಿನಗಳ ಹಿಂದೆ ತಮ್ಮ ಆಧಾರ್ ನಂಬರ್‍ನ ಟ್ವಿಟರ್‍ನಲ್ಲಿ ಹಂಚಿಕೊಂಡ ಶರ್ಮಾ ಯಾರಿಗಾದ್ರು ಸಾಧ್ಯವಾದ್ರೆ ನನ್ನ ಆಧಾರ್ ನಂಬರ್‍ನ ಬಳಸಿಕೊಂಡು ಹ್ಯಾಕ್ ಮಾಡಿ ಅಂತ ಸವಾಲ್ ಹಾಕಿದ್ರು. ಇದನ್ನ ನೋಡಿದ ಹ್ಯಾಕಿಂಗ್ ಪ್ರವೀಣರು ಸಂಪತ್ತಿಗೆ ಸವಾಲ್ ಅನ್ನೋ ಹಾಗೆ ಮಾಜಿ ಸಿಇಓ ಶರ್ಮಾರವರ ಆಧಾರಗಳನ್ನೆಲ್ಲ ಹೊರತೆಗೆದೇ ಬಿಟ್ಟಿದ್ದಾರೆ. ಶರ್ಮಾರ ಡೀಟೇಲ್ಸ್‍ಗಳನ್ನ ಕದ್ದಿರುವ ಹ್ಯಾಕ್ ಪ್ರವೀಣರು ಅವರ ಪರ್ಸನಲ್ ಡೀಟೆಲ್‍ಗಳನ್ನ ಒಂದೊಂದಾಗಿ ಕಳಿಸಿದ್ದಾರೆ, ಇದು ಆಧಾರ್‍ಸಂಖ್ಯೆ ಗಟ್ಟಿ ಆಧಾರವನ್ನು ಹೊಂದಿಲ್ಲ ಅನ್ನೋದನ್ನ ಖಾತ್ರಿ ಮಾಡಿದೆ.
ಇಷ್ಟಕ್ಕ ಸುಮ್ಮನಾಗದ ಹ್ಯಾಕರ್ಸ್ ಟ್ರಾಯ್ ಅಧ್ಯಕ್ಷರ ಫೋನ್ ನಂಬರ್, ಇ-ಮೇಲ್ ಅಡ್ರೆಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ನಂಬರ್, ಹುಟ್ಟಿದ ದಿನಾಂಕ ಎಲ್ಲವನ್ನೂ ಪಡೆದುಕೊಂಢು ಒಂದೊಂದಾಗಿ ಶರ್ಮಾರಿಗೆ ಕಳಿಸಿದ್ದಾರೆ. ಇಷ್ಟಾದರೂ ಎಚ್ಚೆತ್ತುಕೊಂಡು ಸುಮ್ಮನಿರದ ಶರ್ಮಾ ಸಾಹೇಬರು ನಾನು ಹೇಳಿದ್ದು ನನಗೆ ತೊಂದರೆ ಆಗುವಂತದ್ದನ್ನ ಮಾಡಿ ಎಂದು, ಡೀಟೆಲ್ಸ್ ಕೊಡಿ ಎಂದಲ್ಲ ಎಂದು ಮತ್ತೊಂದು ಟ್ವಿಟ್ ಮಾಡಿದ್ದಾರೆ. ಇದನ್ನ ನೋಡಿ ರೊಚ್ಚಿಗೆದ್ದ ಹ್ಯಾಕರ್ಸ್ ಅವರ ಖಾತೆಯಿಂದ ಹಣ ಪಡೆದರೆ ಅದನ್ನ ಮತ್ತೆ ಪಾಪಸ್ ಪಡೆಯಬಹುದು ಎಂದು ತಿಳಿದಿದ್ದವರು ಹಣ ತೆಗೆದುಕೊಳ್ಳದೆ ಶರ್ಮಾರ ಪಿಎನ್‍ಬಿ ಅಕೌಂಟಿಗೆ ಒಂದು ರೂಪಾಯಿ ಜಮಾ ಮಾಡಿ ಶರ್ಮಾರನ್ನು ಕೀಟಲೆ ಮಾಡಿದ್ದಾರೆ.
ಶರ್ಮಾರ ಇ-ಮೇಲ್ ಖಾತೆಯಿಂದಲೇ ಅವರ ಪುತ್ರಿಗೆ ಮೇಲ್ ಮಾಡಿರುವ ಖತರ್ನಾಕ್ ಪ್ರವೀಣರು ಸಾಮಾಜಿಕ ಮಾಧ್ಯಮದಲ್ಲಿ ಸವಾಲೆಸೆದು ದೇಶಕ್ಕೆ ಮುಜುಗರ ಉಂಟುಮಾಡಿರುವ ನಿಮ್ಮ ತಂದೆ ಹ್ಯಾಕರ್‍ಗಳಿಗೆ ಭರ್ಜರಿ ಬಹುಮಾನ ನೀಡಿದ್ದಾರೆಂದು ಸಂದೇಶ ಕಳಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ಬ್ಯಾಂಕ್ ಖಾತೆಯು ಶೀಘ್ರದಲ್ಲೇ ಹ್ಯಾಕ್ ಆಗಲಿದೆ, ಒಂದು ವೇಳೆ ಅವರು ತನ್ನ ಖಾತೆಯನ್ನು ಅಳಿಸಿ ಹಾಕದಿದ್ದರೆ ಸೂಕ್ಷ್ಮ ದಾಖಲೆಗಳನ್ನೂ ಬಹಿರಂಗ ಪಡಿಸಲಾಗುವುದು ಎಂದೂ, ಈ ಸೂಚನೆಯನ್ನು ಪಾಲಿಸದಿದ್ದರೆ ಮಾಲ್‍ವೇರ್(ಮಾಹಿತಿ ಕದಿಯುವ ಸಾಫ್ಟ್‍ವೇರ್)ಅನ್ನು ಶರ್ಮಾರ ಮೊಬೈಲ್‍ಗೆ ಇನ್‍ಸ್ಟಾಲ್ ಮಾಡಿ ಅವರ ಸಂವಾದವನ್ನು ಕದಿಯಲಾಗುವುದೆಂದು ಎಚ್ಚರಿಕೆ ಸಂದೇಶವನ್ನೂ ಟ್ರಾಯ್ ಅಧ್ಯಕ್ಷರ ಪುತ್ರಿಗೆ ಕಳಿಸಿದ್ದಾರೆ.
ಇಷ್ಟಾದರೂ ಬುದ್ದಿಕಲಿಯದ ಶರ್ಮಾ ಸಾಹೇಬರು ಡಿಜಿಜಲ್ ಯುಗದಲ್ಲಿ ಖಾಸಗೀ ಡಾಟಾವನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾದ ವಿಚಾರ, ಅಂತಹ ಡಾಟಾಗಳನ್ನು ಆಧಾರ್ ಲೀಕ್ ಮಾಡಲಾರದು, ನಾನು ಅದರ ಜತೆಗಿದ್ದೇನೆ ಎಂದು ಮತ್ತೆ ಟ್ವಿಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಆಧಾರ್‍ಗೆ ಯಾವ ಆಧಾರವೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಧಾನ ಸೇವಕ ಮೋದಿ ಸರ್ಕಾರದ ಗೊಡ್ಡು ಆಶ್ವಾಸನೆಗಳಿಂದ ಎಲ್ಲಾ ಖಾಸಗೀ ಡೇಟಾಗಳಿಗೂ ಆಧಾರ್ ಲಿಂಕ್ ಕೊಟ್ಟಿರುವ ಜನರು ತಮ್ಮ ಡೇಟಾಗಳನ್ನು ರಕ್ಷಿಸಿಕೊಳ್ಳಲು ಪೇಚಾಡಬೇಕಾದ ಪರಿಸ್ಥಿತಿಯನ್ನು ಚಾಲೆಂಜಿಂಗ್ ಸ್ಟಾರ್ ಶರ್ಮಾರ ಅವಾಂತರ ಎದುರುಗೊಳಿಸಿದೆ.
– ಸೋಮಶೇಖರ್ ಚಲ್ಯ


