- ಡಾ. ವಿನಯಾ ಒಕ್ಕುಂದ |
ನಾವೆಲ್ಲ ನೋಡುತ್ತಿರುವ ಬಿಜೆಪಿ ಪಕ್ಷದ ಚುನಾವಣಾ ಜಾಹೀರಾತೊಂದು ಹೀಗಿದೆ.- ಬಡ ರೈತನ ಮನೆ, ಕರೆಂಟ್ ಹೋಗಿದೆ. ದೀಪ ಹಚ್ಚುವ ಗೃಹಿಣಿ ಮೂಲೆಯಲ್ಲಿ ಕುಳಿತ ಮುದುಕಿ, ಅದೇ ಆಗ ಸಿಡಿಮಿಡಿಯಿಂದಲೇ ಒಳಗೆ ಬಂದ ಅಪ್ಪ, ಎಲ್ಲರಿಗೂ ಅಸಮಾಧಾನವಿದೆ. ಓದುತ್ತಿರುವ ಹರೆಯದ ಹುಡುಗಿ ಮೋದಿಗೆ ಮತ ಹಾಕುವುದರಿಂದ ಸಮಸ್ಯೆಗಳಿಗೆ ಪರಿಹಾರ ಒದಗುತ್ತದೆಂದು ಸೂಚಿಸುತ್ತಾಳೆ. ಹಿರಿಯರೆಲ್ಲರೂ ಸಂತಸದಿಂದ ಸಮ್ಮತಿಸುತ್ತಾರೆ. ಇಂತಹದೊಂದು ಜಾಹೀರಾತು ನಿರ್ಮಾಣ ಸುಮ್ಮನೆ ಅಲ್ಲ. ದೊಡ್ಡ ಸಂಖ್ಯೆಯಲ್ಲಿ ಹೊಸ ಮತದಾರರಾಗಿ ಸೇರ್ಪಡೆಗೊಳ್ಳುತ್ತಿರುವ ಯುವ ಸಮುದಾಯದ ನಿರ್ಣಯಾತ್ಮಕ ಶಕ್ತಿಯನ್ನು ತಮ್ಮೆಡೆಗೆ ಹೊರಳಿಸಿಕೊಳ್ಳುವ ಯೋಜನೆಯನ್ನು ಇದು ಹೊಂದಿದೆ. ಈ ಹೊಸ ಮತದಾರರ ಸಂಖ್ಯೆ ಭಾರತದ ಪ್ರಜಾಸತ್ತೀಯ ಬದುಕಿನಲ್ಲಿ ಯಾವತ್ತಿಗಿಂತ ಹೆಚ್ಚಿದೆ. ಕರ್ನಾಟಕದಲ್ಲಿ 2013 ರಲ್ಲಿ 7,18,000 ಇದ್ದ 18 ರಿಂದ 20 ವರ್ಷದೊಳಗಿನ ಮತದಾರರ ಸಂಖ್ಯೆ 2018 ರಲ್ಲಿ 15,42,000 ಆಗಿದೆ. ಈ ಮತದಾರರು ಈಗಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಬಲ್ಲವರು ಮಾತ್ರವಲ್ಲ ಮುಂದಿನ ಅರ್ಧ ಶತಮಾನಕ್ಕೂ ಹೆಚ್ಚುಕಾಲ ಭಾರತದ ಪ್ರಜಾತಾಂತ್ರಿಕತೆಯನ್ನು ಸಂಗೋಪನೆ ಮಾಡುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡವರು. ಅವರ ಮನಸ್ಸಿನಲ್ಲಿ ಬೀಜಾರೋಪಣಗೊಳ್ಳುವ ವಿಚಾರಗಳು ಉಳಿದು ಬೆಳೆಯುತ್ತವೆಯೇ ವಿನಃ ದಿಢೀರನೆ ಬದಲಾಗುವುದಿಲ್ಲ.
ಈ ಬಾರಿಯ ವಿಧಾನಸಭೆಯನ್ನು ಆಯ್ಕೆ ಮಾಡುವ ಉಮೇದಿಯಲ್ಲಿರುವ ಹೊಸ ಮತದಾರರಲ್ಲಿ ಮತದಾನ ಜಾಗೃತಿಯಿದೆ. ರ್ಯಾಲಿ ಪ್ರಮಾಣವಚನ ಜಾಹೀರಾತು ವಿಚಾರಗೋಷ್ಠಿಗಳನ್ನು ನಡೆಸಿ ಜಾಗೃತಿಯನ್ನು ಮೂಡಿಸುವಲ್ಲಿ ಆಡಳಿತ ವ್ಯವಸ್ಥೆ ಯಶಸ್ವಿಯಾಗಿದೆ. ಆದರೆ ಮತವನ್ನು ಯಾರಿಗೆ ಮತ್ತು ಯಾಕೆ ಚಲಾಯಿಸಬೇಕು? ಎಂಬ ವಿವೇಚನೆ ಯುವಸಮುದಾಯಕ್ಕಿದೆಯೇ? ಎಂಬುದು ಪ್ರಶ್ನೆ. ಈ ತಲೆಮಾರು ದೊಡ್ಡ ಸಂಖ್ಯೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪಡೆದವರು. ಮನೆ ಮಾತಿನ, ಪರಿಸರದ ಮಾತಿನ ವಿವೇಕದಿಂದ ವಂಚಿತರಾದವರು. ಬಾಯಿಪಾಠ ಮಾಡುವ, ಪಾಠವನ್ನು ಕೇಳುವ, ಕೇಳಿದ್ದನ್ನು ಅಪ್ರಶ್ನಾರ್ಹವಾಗಿ ನಂಬುವ ವರ್ಗವಾಗಿ ಬೆಳೆದವರು. ಓದುತ್ತಿರುವ ಪಠ್ಯಕ್ಕೂ ವರ್ತಮಾನಕ್ಕೂ ಇರುವ ಸಂಬಂಧದ ಬಗ್ಗೆ ಯೋಚಿಸದವರು. ದೇಶದ ಸ್ವಾತಂತ್ರ್ಯ ಚಳುವಳಿಯ ಜನಚರಿತ್ರೆಯನ್ನು ಪಠ್ಯವಾಗಿ ಓದದವರು. ಜನರ ಕಥನವಾಗಿ ತಿಳಿಯುವ ಅವಕಾಶವನ್ನು ಮನರಂಜನಾ ಮಾಧ್ಯಮಗಳ ಗದ್ದಲದಿಂದ ಕಳೆದುಕೊಂಡವರು. ಚರಿತ್ರೆಯ ಸ್ಮøತಿಕೋಶದಿಂದ ವಂಚಿತವಾಗುವುದೆಂದರೆ ಬದುಕಿನೊಂದಿಗಿನ ಸಾವಯವ ಸಂಬಂಧವನ್ನೇ ಕಳಚಿಕೊಳ್ಳುವುದು. ನಿಜ, ಪರಂಪರೆಯಲ್ಲಿದ್ದುದೆಲ್ಲ ಚಿನ್ನದದಿರುಗಳಲ್ಲ. ತಂತ್ರಜ್ಞಾನ ಮನರಂಜನೆಯನ್ನು ಬಹುಲಾಭದ ಉದ್ಯಮವಾಗಿಸಿತು. ನಗುವ ನಗಿಸುವ ಸರಂಜಾಮುಗಳನ್ನು ಉತ್ಪಾದಿಸಲಾಯಿತು. ಹಾಸ್ಯವು ಚಿತ್ತಶುಧ್ಧಿಯ ಆಯಾಮವೆಂಬ ತಿಳಿವು ಮರೆಯಾಯಿತು. ಪ್ಲೇಟೋ ಗ್ರೀಕ್ ಅವನತಿಯ ಬಗ್ಗೆ ಹೇಳುತ್ತ, ರುದ್ರನಾಟಕಗಳು ಹುಟ್ಟಬೇಕಿದ್ದ ಸಮಾಜದಲ್ಲಿ ಅದರ ಜಾಳಾದ ಅನುಕರಣೆ ಮತ್ತು ಹಾಸ್ಯನಾಟಕಗಳು ಹುಟ್ಟತೊಡಗಿದವು ಎನ್ನುತ್ತಾನೆ. ಅದಕ್ಕಿಂತಲೂ ಕಷ್ಟದ ಮತ್ತು ಕೆಟ್ಟದಾದ ಕಾಲ ಇದು.

ಬಂಡವಾಳೋದ್ಯಮದ ಆಕ್ರಮಣ ಮಕ್ಕಳನ್ನು ಸಂವೇದನಾಶೂನ್ಯರನ್ನಾಗಿಸಿದೆ. ತುಂಬಾ ಸಹಜವಾಗಿ ಪಡೆಯಬೇಕಿದ್ದ ವ್ಯಕ್ತಿತ್ವಕ್ಕೀಗ ಪ್ರತ್ಯೇಕ ಜಿಮ್‍ಗಳು ಕೋರ್ಸ್‍ಗಳು ಫೀಗಳು ಬಂದು ಎಲ್ಲವೂ ಕಲಿಕೆ ಎಂಬ ಬೇಸೂರುತನ ಪ್ರಾರಂಭವಾಗಿದೆ. ಸೃಜನಶೀಲತೆಯ ಸಾತತ್ಯವನ್ನು ಕಳೆದುಕೊಂಡಿದ್ದರಿಂದ ಸ್ವತಂತ್ರ ವಿಚಾರಶಕ್ತಿಯಿಲ್ಲದೇ ಮಕ್ಕಳು ಅನಿಮಿಕ್ ಆಗುವಂತಾಗಿದೆ. ಎನಿತು ಓದಿದಡೇನೋ ಗಿಳಿಯೋದಿದಂತೆ – ಎಂಬ ಬಸವಣ್ಣನ ಮಾತು ಉಸಿರುಸಿರಿಗು ನೆನಪಾಗುವಂತಾಗಿದೆ. ನೋಡುತ್ತಿದ್ದೇವೆ, ಮಕ್ಕಳು ಯಂತ್ರಮಾನವರಂತಾಡುತ್ತಾರೆ. ಸರಿ ತಪ್ಪುಗಳ ಗೊಡವೆಗೇ ಹೋಗದ ದುಡುಕರಾಗುತ್ತಿದ್ದಾರೆ. ಆಕ್ರಮಿತ ಮಾತು ನಡೆಗಳನ್ನೇ ಆಕರ್ಷಣೆಯೆಂದು ಆರಾಧಿಸುತ್ತಿದ್ದಾರೆ. ಸಿನಿಮಾದ ನಾಯಕನ ನಟನೆಯನ್ನು ಆರಾಧಿಸುವಾಗ ನಿಜದ ಬದುಕು ಮುಖ್ಯವಾಗಲಿಲ್ಲ. ಅದೇ ಪ್ರವೃತ್ತಿ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿಕೊಳ್ಳುತ್ತಿದೆಯೇ? ರಾಜಕಾರಣಿಗಳ ಈಷ್ರ್ಯೆಯ ದ್ವೇಷದ ವ್ಯಂಗ್ಯಮಾತುಗಳನ್ನು ಸುಮ್ಮನೇ ಕೇಳಿಸಿಕೊಳ್ಳಲಾಗುತ್ತಿದೆ. ನಾಡುನುಡಿಯ ಬಗ್ಗೆ, ದೇಶದ ಅಭಿವೃದ್ಧಿಯ ಬಗ್ಗೆ ಬಲುಸುಂದರವಾದ ವ್ಯಾಖ್ಯಾನಗಳನ್ನು ಉರುಳಿಸುತಿದ್ದರೆ …… ಮಾತಿಗೂ ಕೃತಿಗೂ ಸಂಬಂಧವೇ ಬೇಡದವರಂತೆ ಬೆಳ್ಳಿಪರದೆಯ ಮೇಲಿನ ಡೈಲಾಗ್ ಕೇಳಿದವರಂತೆ ಜೋಷ್‍ನಲ್ಲಿ ಶಿಳ್ಳೆ ಹಾಕಲಾಗುತ್ತಿದೆ. ತಮ್ಮ ಬೇಜವಾಬ್ದಾರಿತನ ಅಕಾರಣ ಹಿಂಸೆಯನ್ನು ಬೆಳೆಯಿಸುತ್ತದೆಂಬ ಅರಿವಿಲ್ಲವಾಗಿದೆ. ನಾನಿದನ್ನು ಆರೋಪದ ಧಾಟಿಯಲ್ಲಿ ಹೇಳುತ್ತಿಲ್ಲ. ದಿನಬೆಳಗಾದರೆ ಎಳೆಯ ತಲೆಮಾರಿನೊಂದಿಗೆ ಒಡನಾಡುವ ನನಗೆ, ನಮ್ಮ ಮಕ್ಕಳೇಕೆ ಲೋಕದ ಹಂಗು ಹರಿದುಕೊಂಡವರಂತೆ ಇದ್ದಾರೆ? ಎಂಬ ಆತಂಕ ಕಾಡಿದೆ. ಕುವೆಂಪು, ಮಕ್ಕಳಿಗೆ ವೈಚಾರಿಕ ಪ್ರಜ್ಞೆಯನ್ನು ಕಲಿಸದಿದ್ದರೆ ಅವರು ಪುರಾಣಗಳ ಹುಸಿ ಆರಾಧಕರಾಗಿ ದ್ವೇಷ ಮನಸ್ಥಿತಿಯನ್ನು ಬೆಳೆಸಿಕೊಳ್ಳುವವರಾಗುತ್ತಾರೆ ಎಂಬ ಬಗ್ಗೆ ಹೇಳುತಿದ್ದರು.
ಈ ನಾಡಿನಲ್ಲಿ ಚಿಂತಕರ ಹತ್ಯೆಯಾದಾಗ ಹತ್ಯೆ ಮಾಡಿದವರು ಸಂಭ್ರಮಿಸಿದಾಗ ದೇಶದಾದ್ಯಂತ ಅತ್ಯಾಚಾರಗಳು ನಡೆದಾಗ, ಅತ್ಯಾಚಾರಿಗಳು ತಮ್ಮದೇ ವಯಸ್ಸಿನವರೆಂದು ತಿಳಿದಾಗ, ದಿನದಿಂದ ದಿನಕ್ಕೆ ಅಸಮಾನತೆ ಹೆಚ್ಚುತ್ತಿರುವಾಗ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ – ಇವುಗಳ ಕಾರಣವನ್ನು ಶೋಧಿಸಿಕೊಳ್ಳುವ ಎಚ್ಚರ ಯುವಜನಾಂಗಕ್ಕೆ ಕಂಡುಬರಲಿಲ್ಲವೇ? ಸಂವಿಧಾನವನ್ನು ಪ್ರಮಾಣೀಕರಿಸಿ ಸಂಸದರಾದವರು, ಸಂವಿಧಾನ ವಿರೋಧಿಯಾದ ಅಸಹ್ಯ ಮಾತುಗಳನ್ನಾಡುವಾಗ, ಒಂದು ಧರ್ಮದವರನ್ನು ‘ ನೀವು ನನಗೆ ಓಟು ಮಾಡಬೇಡಿ. ನನಗದರ ಅಗತ್ಯವಿಲ್ಲ.’ ಎಂದು ಆರ್ಭಟಿಸುವಾಗ, ದಲಿತರನ್ನು ಹಂದಿನಾಯಿಗಳಿಗೆ ಹೋಲಿಸುವಾಗ, ದೇಶದ ಕೌಶಲ್ಯಾಭಿವೃದ್ಧಿಯ ಬಗ್ಗೆ ಮಾತನಾಡುತ್ತ, ‘ಮುಸ್ಲಿಮರಿಗೆ ವಿವಾಹ ನಂತರದ ಕೌಶಲ್ಯ ಮಾತ್ರ ಇರುವುದು’ ಎಂದು ಅಶ್ಲೀಲವಾಗಿ ಹೇಳುವಾಗ ಸಂವಿಧಾನವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ಇದು ತಪ್ಪು ಅನ್ನಿಸಲಿಲ್ಲವೇ? ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ತಮಗೆ ಸ್ನೇಹ-ಪ್ರೀತಿಯ ಹಕ್ಕುಗಳಿಲ್ಲವೇ? ಸಂಸ್ಕøತಿ ಮೌಲ್ಯಗಳ ಹೆಸರಿನಲ್ಲಿ ಮರ್ಯಾದಾ ಹತ್ಯೆಗಳು ನಡೆಯುವಾಗ, ನೈತಿಕ ಪೊಲೀಸ್‍ಗಿರಿ ಮೆರೆಯುವಾಗ ಬದುಕಿನ ಹಕ್ಕು ಕಳೆದುಕೊಳ್ಳುತ್ತಿದ್ದೇವೆಂಬ ವಿಷಾದ ಕಾಡಲಿಲ್ಲವೇ? ಇಂತಹ ದುರಂತಗಳಿಗೆ ನಿಜವಾದ ಕಾರಣಕರ್ತರು ಯಾರೆಂಬುದನ್ನು ತಿಳಿದುಕೊಳ್ಳುವ ಕುತೂಹಲವೂ ಹುಟ್ಟಲಿಲ್ಲವೇ? ಈ ಸಲದ ಕರ್ನಾಟಕದ ಚುನಾವಣೆ ಉದ್ರಿಕ್ತ ಹಂತವನ್ನು ತಲುಪಿದೆ. ಮಾತು ಗೌರವವನ್ನು ಕಳೆದುಕೊಂಡಿದೆ. ಸುಳ್ಳು ವಿಜೃಂಭಿಸುತ್ತಿದೆ. ಭಯ ಹುಟ್ಟಿಸುತ್ತಿದೆ. ಆರೋಪ ಸಾಬೀತಾಗದಿದ್ದರೂ ಮುಲಾಜಿಲ್ಲದೇ ಪ್ರಚಾರ ಮಾಡಲಾಗುತ್ತಿದೆ. ಮಾಧ್ಯಮಗಳು ತಮಗೊಂದು ವೃತ್ತಿಧರ್ಮವಿದೆ ಎಂಬುದನ್ನೇ ಮರೆತಿವೆ. ಬಂಡವಾಳವಾದಿಗಳ ಕೈವಸ್ತ್ರವಾಗಿರುವ ಮಾಧ್ಯಮಗಳ ನೈತಿಕ ಲಜ್ಜೆಯನ್ನು ಪ್ರಶ್ನಿಸುವುದೂ ಸಾಧ್ಯವಿಲ್ಲವಾಗಿದೆ. ಈ ವಿಷದ ಹಲ್ಲುಗಳು ಊರಿದ ಪರಿಣಾಮ ಭಾರತೀಯ ಸಮಾಜದ ಸೌಹಾರ್ದ ಪರಂಪರೆ ಘಾಸಿಗೊಂಡಿದೆ.
ಜಾಹೀರಾತಿನ ಹುಡುಗಿಯನ್ನು ಒಂದು ರೂಪಕವಾಗಿಸಿಕೊಂಡರೆ- ನಾವೀಗ ಮತ ಚಲಾಯಿಸಬೇಕಿರುವುದು ರಾಜಕೀಯ ಪಕ್ಷಕ್ಕೋ ಯಾವುದೋ ಒಬ್ಬ ನಾಯಕನಿಗೋ ಎಂಬುದೇ ತಿಳಿದಿಲ್ಲ. ವ್ಯಕ್ತಿಯನ್ನು ಆರಾಧಿಸುವ ಅತಿರೇಕದ ಪರಿಣಾಮವಾಗಿ ಏನೆಲ್ಲ ದುರಂತಗಳು ನಡೆದಿವೆ ಎಂಬ ಚರಿತ್ರೆಯ ನೆನಪುಗಳಿಲ್ಲ. ಇಷ್ಟಕ್ಕೂ ಆರಾಧಿಸುತ್ತಿರುವ ವ್ಯಕ್ತಿಗೆ ನಿಜಕ್ಕೂ ಅಂತಹ ವ್ಯಕ್ತಿತ್ವದ ಯೋಗ್ಯತೆಯಿದೆಯೇ ಎಂದು ಶೋಧಿಸಿಕೊಳ್ಳುತ್ತಿಲ್ಲ. ಅಭಿವೃದ್ಧಿಯ ಮಾತನ್ನು ಸಾರಾಸಗಟಾಗಿ ಬಳಸಲಾಗುತ್ತಿದೆ. ಹಾಗಾದರೆ ಅಭಿವೃದ್ಧಿ ಎಂದರೇನು? ಎಂಬ ಪ್ರಶ್ನೆಯನ್ನು ವ್ಯವಧಾನದಿಂದ ಕೇಳಿಕೊಳ್ಳಲಾಗಿದೆಯೇ? ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ದೇಶಕ್ಕೆ ಕೊಟ್ಟ ಅಭಿವೃದ್ಧಿಯ ಯೋಜನೆಗಳು ಯಾವವು? ಅವುಗಳಿಂದ ಜನರಿಗಾದ ಲಾಭಗಳೇನು? ಬಡವ-ಶ್ರೀಮಂತರ ಮಧ್ಯೆ ಅಮಾನವೀಯ ವ್ಯತ್ಯಾಸದ ಕಾಲದಲ್ಲಿ ಜನಪರ ಯೋಜನೆಗಳು ಎಂದರೇನು? ನೋಟ್‍ಬ್ಯಾನ್‍ನಿಂದ ಕಪ್ಪುಹಣ ತಡೆ ಸಾಧ್ಯವಾಗಿದ್ದರೆ, ಬಂಡವಾಳಶಾಹಿಗಳಿಗೆ ಹೊಡೆತ ಬಿದ್ದಿದ್ದರೆ – ಮತ್ತೂ ಕೆಲವೇ ಕೆಲವರು ಶ್ರೀಮಂತಿಕೆಯ ದರದಲ್ಲಿ ಮೇಲಕ್ಕೇರುತ್ತಲೇ ಇರಲು ಹೇಗೆ ಸಾಧ್ಯವಾಯಿತು? ಪ್ರಧಾನಿಯವರಿಗೆ ಆತ್ಮೀಯರಾದವರು ಇಂತಹ ಶ್ರೀಮಂತಿಕೆಯ ಪಟ್ಟಿಯಲ್ಲಿ ಹೊಸ ಸೇರ್ಪಡೆಗಳು ಹೇಗಾದರು? ಇಂತಹ ಪ್ರಶ್ನೆಗಳು ನಮ್ಮ ಮಕ್ಕಳ ಪಠ್ಯಪುಸ್ತಕಗಳಲ್ಲಿರುವುದಿಲ್ಲ. ಮಾರಿಕೊಂಡ ಮಾಧ್ಯಮಗಳಿಗೆ ಬೇಕಿರುವುದಿಲ್ಲ. ಸಾರಾಸಾರಾ ವಿವೇಚಿಸಬಲ್ಲ ಜನರ ಪ್ರಜ್ಞೆಯನ್ನು ಮುರುಟಿಸಿ ಅದಕ್ಕೆ ಧರ್ಮದ್ವೇಷದ ಬಿಸಿ ಡಾಂಬರನ್ನು ಹಾಕಿ ದಫನು ಮಾಡಲಾಗಿದೆ. ಆಕ್ರಮಣ ಆಕರ್ಷಕ ವ್ಯಕ್ತಿತ್ವವಾಗಿ ಕಾಣತೊಡಗುತ್ತಿದೆ. ಇದೇ ಈಗ ರಾಜಕೀಯಪ್ರಜ್ಞೆಯ ಹೊಸ್ತಿಲಲ್ಲಿರುವ ಎಳೆಯರನ್ನು ಮಾತ್ರ ಅಪರಾಧಿಗಳು ಎನ್ನಲಾದೀತೇ?


