ಡಾ. ಕಫೀಲ್ ಖಾನ್
ತಿಂಗಳುಗಟ್ಟಲೇ ಆಕ್ಸಿಜನ್ ಸರಬರಾಜು ಇಲ್ಲದೇ ಗೋರಖ್‍ಪುರದ ಬಿಆರ್‍ಡಿ ಮೆಡಿಕಲ್ ಕಾಲೇಜಿನಲ್ಲಿ ಮೆದುಳುಜ್ವರದಿಂದ ದೊಡ್ಡ ಸಂಖ್ಯೆಯಲ್ಲಿ ಮಕ್ಕಳ ಸಾವುಗಳು ಸಂಭವಿಸಿದವು. ದೇಶಾದ್ಯಂತ ಯೋಗಿ ಆದಿತ್ಯನಾಥ್ ಸರ್ಕಾರದ ಕುರಿತು ಟೀಕೆಗಳು ಸಂಭವಿಸಿದಾಗ ಸರ್ಕಾರ ಬಲಿಪಶು ಮಾಡಿದ್ದು ಅಲ್ಲಿನ ಮಕ್ಕಳ ತಜ್ಞ ಡಾ.ಕಫೀಲ್ ಖಾನರನ್ನು. ವಾಸ್ತವದಲ್ಲಿ ಅವರು ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ಸಿಲಿಂಡರ್‍ಗಳನ್ನು ತರಿಸಿ ಮಕ್ಕಳನ್ನು ಉಳಿಸಲು ಪ್ರಯತ್ನಿಸಿದ್ದರು. 9 ತಿಂಗಳು ಅವರನ್ನು ಸರ್ಕಾರ ಜೈಲಿಗೆ ದೂಡಿತ್ತು. ಅವರ ವಿರುದ್ಧ ಯಾವುದೇ ಪುರಾವೆಗಳಲ್ಲಿದ್ದರಿಂದ ಕೋರ್ಟು ಬಿಡುಗಡೆ ಮಾಡಿತ್ತು.
ಅನುವಾದ: ನಿಖಿಲ್ ಕೋಲ್ಪೆ
ಗೋರಖ್‍ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಕ್ಸಿಜನ್ ದುರಂತಕ್ಕೆ ಮೊದಲು ಜಾತಿ/ಧರ್ಮ/ಸಾಮಾಜಿಕ-ಆರ್ಥಿಕ ಸ್ಥಾನಮಾನ/ಪ್ರಾದೇಶಿಕತೆ/ಲಿಂಗ/ವೈಕಲ್ಯ ಇತ್ಯಾದಿಗಳ ಹೆಸರಿನಲ್ಲಿ ಸಮಾಜದಲ್ಲಿ ಇಷ್ಟೊಂದು ದ್ವೇಷ ತುಂಬಿದೆ ಎಂದು ನನಗೆ ಗೊತ್ತಾಗಿಯೇ ಇರಲಿಲ್ಲ. ಅಖ್ಲಾಕ್, ಜುನೈದ್, ಪೆಹ್ಲೂಖಾನ್ ಯಾರು, ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡದ್ದು ಏಕೆ, ಉನಾ ದುರಂತ ಏನು, ಗೌರಿ ಲಂಕೇಶ್ ಹತ್ಯೆಯಾದದ್ದು ಏಕೆ ಎಂದೆಲ್ಲಾ ನನಗೆ ಗೊತ್ತೇ ಇರಲಿಲ್ಲ. ನಾನು ಮಕ್ಕಳ ಜೊತೆಗೆ ಇರಬಯಸುವ ಒಬ್ಬ ಸಾಮಾನ್ಯ ವೈದ್ಯನಾಗಿದ್ದೆ.
ಬಿಆರ್‍ಡಿ ಆಕ್ಸಿಜನ್ ದುರಂತವು 2017ರ ಆಗಸ್ಟ್ 10ರಂದು ನಡೆದು ಹಲವು ಮಕ್ಕಳ ಪ್ರಾಣ ಕಸಿಯಿತು. ಇದಕ್ಕೆ ಕಾರಣವೆಂದರೆ ಆಮ್ಲಜನಕ ಪೂರೈಕೆದಾರರಿಗೆ ನೀಡಬೇಕಾದ ಬಾಕಿಯನ್ನು ನೀಡದೇ ಇದ್ದುದರಿಂದ ಅವರು ಪೂರೈಕೆಯನ್ನೇ ನಿಲ್ಲಿಸಿದ್ದು. ಸರಕಾರದ ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಹಾಕಲು ನನ್ನನ್ನು ಹರಕೆಯ ಕುರಿ ಮಾಡಿ, ಒಂಭತ್ತು ತಿಂಗಳುಗಳ ಕಾಲ ಜೈಲಿನಲ್ಲಿಡಲಾಯಿತು. ಆದರೆ, ನಾನು ಆ ದಿನ ಮಕ್ಕಳ ಜೀವ ಉಳಿಸಲು ಯಾವುದೇ ಒಂದು ಪ್ರಯತ್ನವನ್ನು ಮಾಡದೇ ಬಾಕಿ ಇಟ್ಟಿರಲಿಲ್ಲ. ಒಂಭತ್ತು ತಿಂಗಳುಗಳ ಕಠಿಣ ಸಮಯ ಕಳೆದು, ಭಾವನಾತ್ಮಕ ಮತ್ತು ದೈಹಿಕ ಕ್ಷೋಭೆಯ ಬಳಿಕ ನಾನು ಮತ್ತೆ ಶೂನ್ಯದಿಂದ ಜೀವನ ಕಟ್ಟುವ ಪ್ರಯತ್ನದಲ್ಲಿದ್ದಾಗ ಅವರು ನನ್ನ ಸಹೋದರನನ್ನು ಕೊಲೆ ಮಾಡಲು ಯತ್ನಿಸಿದರು. ನಂತರ ನಡೆದದ್ದು ಭಯಾನಕ ಮತ್ತು ಅಸ್ವೀಕಾರಾರ್ಹವಾಗಿದ್ದು, ಉತ್ತರ ಪ್ರದೇಶ ಪೊಲೀಸರ ಅಸೂಕ್ಷ್ಮ ಮನೋಭಾವವನ್ನು ತೋರಿಸುತ್ತದೆ. ಅವರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಆತನ ದೇಹದಲ್ಲಿದ್ದ ಗುಂಡುಗಳನ್ನು ತೆಗೆಯುವುದನ್ನು ವಿಳಂಬಗೊಳಿಸಲು ತಮಗೆ ಸಾಧ್ಯವಿರುವಷ್ಟು ಪ್ರಯತ್ನ ನಡೆಸಿದರು- ಇದು ಉತ್ತರ ಪ್ರದೇಶ ಪೊಲೀಸರು ನಡೆಸಿದ ಎರಡನೇ ಕೊಲೆಯತ್ನ.
ನನ್ನ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ಯಾವುದೇ ಸಾಕ್ಷ್ಯಾಧಾರಗಳು ಇಲ್ಲವೆಂದು ಗೌರವಾನ್ವಿತ ಅಲಹಾಬಾದ್ ಹೈಕೋರ್ಟ್ ಖಡಾಖಂಡಿತವಾಗಿ ಹೇಳಿದ್ದರೂ, ನನ್ನನ್ನು ಕಳೆದೆರಡು ವರ್ಷಗಳಿಂದ ಅಮಾನತಿನಲ್ಲಿಡಲಾಗಿದ್ದು, ಸರಕಾರಿ ಪ್ರಾಯೋಜಿತ ಕಿರುಕುಳ ಮುಂದುವರಿದಿದೆ.
ನಾನು ಈ ದಿನಗಳನ್ನು ಭಾರತವಿಡೀ ತಿರುಗಾಡಿ ಜನರನ್ನು ಭೇಟಿ ಮಾಡಲು ಬಳಸಿದೆ. ನಾನವರಲ್ಲಿ ಒಂದೇ ಪ್ರಶ್ನೆಯನ್ನು ಕೇಳಿದೆ. ಅದೆಂದರೆ, ನಿಮ್ಮ ಸರಕಾರದಿಂದ ನಿಮ್ಮ ನಿರೀಕ್ಷೆ ಏನು ಎಂಬುದು. ಹೆಚ್ಚಿನವರ ಉತ್ತರ ಉತ್ತಮ ಆರೋಗ್ಯ ಸೌಲಭ್ಯಗಳು, ಉತ್ತಮ ಶಾಲೆಗಳು ಮತ್ತು ಉದ್ಯೋಗ ಎಂಬುದಾಗಿತ್ತು. ಆದರೆ, ಇಂದಿನ ದಿನಗಳಲ್ಲಿ ಸರಕಾರವು ಪಾಕಿಸ್ತಾನ, ವಲಸಿಗರು, ಕಾಶ್ಮೀರ, ತ್ರಿವಳಿ ತಲಾಖ್ ಕುರಿತು ಮಾತನಾಡುತ್ತಿದೆ. ಹುಸಿ ರಾಷ್ಟ್ರೀಯತೆ ಮತ್ತು ಹುಸಿ ಹಿಂದೂತ್ವದ ಈ ಓವರ್‍ಡೋಸ್ ಯುವಪೀಳಿಗೆಯ ಮನಸ್ಸುಗಳಿಗೆ ಎಷ್ಟು ವಿಷ ತುಂಬಿದೆ ಎಂದರೆ, ಅವರು ವಾಸ್ತವವನ್ನು ತಿಳಿಯಲು ವಿಫಲರಾಗುತ್ತಿದ್ದಾರೆ ಮತ್ತು ಭವ್ಯತೆಯ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಮಾಧ್ಯಮವು ಸರಕಾರದ ಕೈಗೊಂಬೆಯಾಗಿದ್ದು, ನಿರ್ದಿಷ್ಟ ಸಮುದಾಯವನ್ನು ಮತಾಂಧವೆಂದು ಬಿಂಬಿಸುತ್ತಿದೆ. ಇಂದು ದೇಶವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಈ ಸಮುದಾಯವನ್ನು ಹೊಣೆ ಮಾಡುತ್ತಿದೆ ಮತ್ತು ಆ ಮೂಲಕ ನಿರ್ದಿಷ್ಟ ಜನವರ್ಗದ ವಿರುದ್ಧ ಭಾವನೆಗಳನ್ನು ಉದ್ರೇಕಿಸುತ್ತಿದೆ. ಪ್ರತಿಪಕ್ಷಗಳು ತಳಮಟ್ಟದಲ್ಲಿ ಇದನ್ನು ಪ್ರತಿಭಟಿಸುವ ಬದಲು ಮೃದು ಹಿಂದೂತ್ವದ ಹಿಂದೆ ಅಡಗಲು ಯತ್ನಿಸುತ್ತಿವೆ. ಅತ್ಯಂತ ಅಪಾಯಕಾರಿ ಎಂದರೆ, ಕೇಸರಿ ಪಡೆಯ ಅಭಿಪ್ರಾಯವನ್ನು ಒಪ್ಪದ ಯಾವುದೇ ಧ್ವನಿಯನ್ನು- ಅದು ಎಡಪಂಥೀಯರಾಗಿರಲಿ, ಜಾತ್ಯತೀತರಾಗಿರಲಿ, ಲೇಖಕರು, ಚಿತ್ರರಂಗದವರು ಅಥವಾ ಇತಿಹಾಸಜ್ಞರೇ ಆಗಿರಲಿ- ಅವರನ್ನು ಹಿಂದೂ ವಿರೋಧಿ, ರಾಷ್ಟ್ರ ವಿರೋಧಿಗಳು ಎಂದು ಆರೋಪಿಸುತ್ತಿರುವುದು.
ಗುಂಪುಹತ್ಯೆಗಳು ಮಾಮೂಲಿಯಾಗುತ್ತಿದ್ದು, ಸಂಘಟಿತ ಅಪರಾಧಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಕೊಲೆಗಡುಕನೇ ವಿಡಿಯೋ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ, ಒಂದು ಸಮುದಾಯದಲ್ಲಿ ಭಯದ ವಾತಾವರಣವನ್ನೂ, ಇನ್ನೊಂದು ಸಮುದಾಯದಲ್ಲಿ ಹುಸಿ ವಿಜಯೋನ್ಮಾದವನ್ನೂ ಉಂಟುಮಾಡಲಾಗುತ್ತದೆ.
ದಿವಂಗತ ಗೌರಿ ಲಂಕೇಶ್ ಅವರು ತನ್ನ ಕೊನೆಯ ವಾರದ ಅಂಕಣದಲ್ಲಿ ಗೋರಖ್‍ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸಾವಿನ ಬಗ್ಗೆ ಬರೆದು, ನನ್ನನ್ನು ವಜಾಗೊಳಿಸಿದುದನ್ನು ಟೀಕಿಸಿದ್ದರು. ಇವತ್ತು ನಾನು ಅವರ ಸಾವಿನ ಎರಡನೇ ವಾರ್ಷಿಕ ದಿನದಂದು ಈ ಲೇಖನ ಬರೆಯುತ್ತಿದ್ದೇನೆ. ನಾನು ಆರೆಸ್ಸೆಸ್ ಸೃಷ್ಟಿಸಿರುವ ವಿಭಜನಕಾರಿ ತತ್ವಗಳನ್ನು ಎದುರಿಸಲು ಹೆಚ್ಚು ಧನಾತ್ಮಕ, ಹೆಚ್ಚು ದಾರ್ಶನಿಕ ಮತ್ತು ಹೆಚ್ಚು ಭಾರತೀಯನಾಗಲು ಬಯಸುತ್ತೇನೆ. ಎಷ್ಟೊಂದು ಋಣಾತ್ಮಕತೆಯನ್ನು ಹರಡಲಾಗಿದೆಯೆಂದರೆ, ಅದನ್ನು ಎದುರಿಸಲು ನಾವು ಧನಾತ್ಮಕ ವಿಷಯಗಳ ಬಗ್ಗೆ ಮಾತನಾಡಬೇಕಾಗಿದೆ- ನಾನು ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುವ ಮೂಲಕ, ನನ್ನ ಪುಸ್ತಕ ಬಿಡುಗಡೆಯ ಮೂಲಕ, ಎಲ್ಲವೂ ಇನ್ನೂ ಮುಗಿದಿಲ್ಲ ಎಂದು ಜನರಿಗೆ ಹೇಳುವ ಮೂಲಕ ಮಾಡಲು ಯತ್ನಿಸುತ್ತಿರುವಂತೆ.
ಆರೋಗ್ಯ/ ಶಿಕ್ಷಣ/ ಉದ್ಯೋಗ ಇನ್ನೂ ಪ್ರಮುಖ ವಿಷಯಗಳು. ಆದರೆ, ಇವುಗಳನ್ನು ಧಾರ್ಮಿಕ ಅಥವಾ ರಾಷ್ಟ್ರೀಯತೆಯ ಹೆಸರಿನಲ್ಲಿ ಹುಗಿದುಹಾಕಲಾಗಿದೆ. ನಾವು ಬೇಡಿಕೆಯನ್ನು ಸೃಷ್ಟಿಸಬೇಕಾಗಿದೆ- ಜನರಿಗೆ ತಿಳಿಸಿ, ಮನವರಿಕೆ ಮಾಡಬೇಕಾಗಿದೆ. “ನೀವು ಮೋದೀಜಿ ಮತ್ತು ಯೋಗೀಜಿಯವರನ್ನು ಯಾಕೆ ಅಷ್ಟೊಂದು ವಿರೋಧಿಸುತ್ತೀರಿ?” ಎಂದು ನನ್ನಲ್ಲಿ ಕೇಳಲಾದಾಗಲೆಲ್ಲ ನಾನು ಪ್ರತೀ ಸಲವೂ ಅದೇ ಉತ್ಸಾಹದಿಂದ “ನಾನು ವಿರೋಧಿಸುತ್ತಿರುವುದು ಮೋದೀಜಿ ಅಥವಾ ಯೋಗೀಜಿಯವರನ್ನು ಅಲ್ಲ” ಎಂದು ಉತ್ತರಿಸಿದ್ದೇನೆ. ದ್ವೇಷ ಮತ್ತು ಹಿಂಸೆಯನ್ನು ಆಧರಿಸಿದ ಅವರ ಸಿದ್ಧಾಂತವನ್ನು ನಾನು ವಿರೋಧಿಸುತ್ತೇನೆ. ತನ್ನ ಸ್ಥಾಪನೆಯಾದಂದಿನಿಂದಲೂ (1925) ಜಾತಿ ಮತ್ತು ಧರ್ಮದ ಆಧಾರದಲ್ಲಿ ಜನರನ್ನು ಒಡೆಯಲು ಯತ್ನಿಸುತ್ತಿರುವ ಆರೆಸ್ಸೆಸ್‍ನ ವಿಭಜನಕಾರಿ ನೀತಿಯನ್ನು ನಾನು ವಿರೋಧಿಸುತ್ತೇನೆ. ಭಾರತವು ಬಹುತ್ವ, ವಿವಿಧತೆ, ಮಾನವೀಯತೆ, ಕೋಮುಸಾಮರಸ್ಯ ಮತ್ತು ಸಮಾನತೆಯ ತಳಹದಿಯ ಮೇಲೆ ನಿಂತಿದೆ. ಆದುದರಿಂದ ನಾವು ಪ್ರೀತಿ ಮತ್ತು ಶಾಂತಿಯನ್ನು ಹರಡೋಣ.
ಕೊನೆಯದಾಗಿ ನಾನು ನನಗೆ ಮತ್ತು ನನಗಾಗಿ ಪ್ರಾರ್ಥಿಸುವವರಿಗೆ ಈ ಭರವಸೆ ನೀಡುತ್ತೇನೆ- ಈ ಆಡಳಿತವು ಒಡ್ಡುತ್ತಿರುವ ಅಡಚಣೆಗಳ ಹೊರತಾಗಿಯೂ ನನ್ನ ದೇಶದ ಜನರಿಗೆ ಸೇವೆ ಸಲ್ಲಿಸುವಲ್ಲಿನ ಪಾವಿತ್ರ್ಯ, ನಿಷ್ಠೆ ಮತ್ತು ದೃಢ ಸಂಕಲ್ಪ ಮುಂದುವರಿಯಲಿದೆ. ನನ್ನನ್ನು ಬಲಿಪಶು ಮಾಡುವ ಸರಕಾರಿ ಪ್ರಾಯೋಜಿತ ಪ್ರಯತ್ನವು ನನ್ನ ಸಂಕಲ್ಪ, ಉತ್ಸಾಹ ಮತ್ತು ಸಮಾಜದ ಕುರಿತ ನನ್ನ ನಿಷ್ಠೆಯನ್ನು ಮುರಿಯದು. ಈ ಸಂಕಷ್ಟಗಳು ನನ್ನ ಗುರಿಗಳನ್ನು ಸಾಧಿಸುವ ಮತ್ತು ಎಲ್ಲಾ ಅಡೆತಡೆಗಳು ವಿರುದ್ಧ ಜಯಿಸುವ ನನ್ನ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಜೈ ಹಿಂದ್ ಜೈ ಭಾರತ


