| ಮುತ್ತುರಾಜ್ |
ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನ ಪಬ್ಲಿಕ್ ಟಿವಿಯ ವರದಿಗಾರನೊಬ್ಬ ವೈದ್ಯರೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ರೋಲ್ ಕಾಲ್ ಹಣ ಪಡೆಯಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಕರಣ ಮಾಸುವ ಮುನ್ನವೇ ಅದೇ ಚಾನೆಲ್ ನ ಮತ್ತೊಬ್ಬ ವರದಿಗಾರ ಬಳ್ಳಾರಿ ವಿ.ವಿ ಅಪರಾತಪರಾದಲ್ಲಿ ತಗುಲಿಕೊಂಡಿದ್ದಾನೆ. ಮೊನ್ನೆ ವಿ.ಭಟ್ಟ ನಡೆಸಿದ್ದ ‘ಎಮರ್ಜೆನ್ಸಿ ಇನ್ ಕರ್ನಾಟಕ’ ಭರ್ತಿ ಬೇಧಿಯಿಂದ ಪ್ರೇರಿತಗೊಂಡ ರಂಗಣ್ಣ ತನ್ನ ವರದಿಗಾರನ ಅರೆಸ್ಟ್ ವರಾತವನ್ನೂ ಸಿಎಂ ಕುಮಾರಸ್ವಾಮಿ ಮುಖಕ್ಕೆ ಬಳಿಯಲು ಹೋಗಿ ಸರಿಯಾಗಿ ಉಗಿಸಿಕೊಂಡಿದ್ದಾನೆ. ಇದು ಕುಮಾರಸ್ವಾಮಿಯನಷ್ಟೇ ಅಲ್ಲ ಅವರ ಸಮಸ್ತ ಅಭಿಮಾನಿಗಳನ್ನೂ ರಂಗಣ್ಣ ಟೀವಿ ವಿರುದ್ಧ ಕೆರಳಿಸಿರೊದಕ್ಕೆ ಕಳೆಡೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಟ್ರೋಲ್ ಗಳೇ ಸಾಕ್ಷಿ..
ದೇಶದಲ್ಲಿ ನಿಜವಾಗಿಯೂ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಯುತ್ತಿದೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದಲ್ಲಿ ಕಳೆದೊಂದು ವಾರದಲ್ಲೇ 5 ಜನ ಪತ್ರಕರ್ತರನ್ನು ಬಂಧಿಸಲಾಗಿದೆ. ಅವರೆಲ್ಲರೂ ಯೋಗಿ ಆದಿತ್ಯನಾಥ್‍ರ ಲೋಪಗಳನ್ನು ಎತ್ತಿ ತೋರಿಸಿದ್ದಕ್ಕೆ ಜೈಲು ಸೇರಬೇಕಾದ ಪರಿಸ್ಥಿತಿ ಬಂದಿದೆ. ಇದರ ವಿರುದ್ಧ ದೇಶದ ನಿಷ್ಠಾವಂತ ಪತ್ರಕರ್ತರೆಲ್ಲರೂ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಆದರೆ ವಿಚಿತ್ರವೆಂದರೆ ಕನ್ನಡ ಯಾವೊಂದು ಮಾಧ್ಯಮವೂ ಇದರ ವಿರುದ್ಧ ದನಿ ಎತ್ತಿಲ್ಲ ಮಾತ್ರವಲ್ಲ, ಕನಿಷ್ಟ ಒಂದು ಸುದ್ದಿಯನ್ನು ಸಹ ಮಾಡಿಲ್ಲ. ಬದಲಿಗೆ ತಮ್ಮ ವಿರುದ್ಧ ಒಂದು ಎಫ್‍ಐಆರ್ ದಾಖಲಿಸಿದ ಕಾರಣಕ್ಕೆ ‘ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಇದೆ, ಪ್ರಧಾನಿ ಕಛೇರಿ ಕಳವಳ ವ್ಯಕ್ತಪಡಿಸಿದೆ ಎಂದು ಒಬ್ಬ ಬ್ರಾಹ್ಮಣ ಸಂಪಾದಕ ತನ್ನ ಪೇಪರ್‍ನಲ್ಲಿ ಪುಟಗಟ್ಟಲೇ ಗೀಚುತ್ತಾರೆ. ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದರು ಎಂಬ ಕಾರಣ ಇಟ್ಟುಕೊಂಡು ಇನ್ನೊಬ್ಬ ಬ್ರಾಹ್ಮಣ ಸಂಪಾದಕ ತಮ್ಮ ಟಿವಿಗೆ ಧಮ್ಕಿ ಹಾಕಿದ್ದಾರೆ ಎಂದು ಪ್ರೈಮ್ ಟೈಮ್‍ನಲ್ಲಿ ಕಿರುಚಾಡಿದ್ದಾರೆ. ಇದು ಕನ್ನಡ ಪತ್ರಿಕೋದ್ಯಮದ ಘನತೆಯನ್ನು ಇನ್ನಷ್ಟು ಕೆಳಗೆ ಇಳಿಸುತ್ತಿರುವುದರ ದ್ಯೋತಕವಾಗಿದ್ದು, ಉಳಿದ ಮಾಧ್ಯಮಗಳು ಮೌನ ಮುರಿಯಬೇಕಾದ ಕಾಲ ಬಂದಿದೆ.
ರೌಡಿ ಶೀಟರ್ ಇಟ್ಟುಕೊಂಡು ಟಿವಿ ನಡೆಸುತ್ತಿದ್ದೀರಾ?
ಮಾರ್ಚ್ 23ಕ್ಕೆ ಸರ್ಕಾರ ಬೀಳಬೇಕಿತ್ತು. ಆದರೆ ಬೀಳಲಿಲ್ಲ ಎಂಬುದು ಎಲ್ಲರಿಗಿಂತ ಹೆಚ್ಚು ನಿರಾಶೆ ಮತ್ತು ನೋವು ಉಂಟು ಮಾಡಿದ್ದು ಬ್ರಾಹ್ಮಣರ ಹಿಡಿತದಲ್ಲಿರುವ ಮಾಧ್ಯಮಗಳಿಗೆ. ಅವರಲ್ಲಿನ ಜಾತಿ ಭೂತ ಬೃಹದಾಕಾರವಾಗಿ ಬೆಳೆದು ನಿಂತಿರುವುದಕ್ಕೆ ಹಲವು ಕಾರಣಗಳಿವೆ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಟ್ಟು ಶೂದ್ರನೊಬ್ಬ ಮುಖ್ಯಮಂತ್ರಿಯಾಗಿರುವುದು ಅವರ ಹೊಟ್ಟೆ ತೊಳೆಸಿದಂತೆ ಆಗಿದೆ. ಹಾಗಾಗಿ ದಿನನಿತ್ಯ ವಿಷಕಕ್ಕುತ್ತಾ ಕೂತಿದ್ದಾರೆ.
ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಬೋಧಕೇತರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿತ್ತು. ಅರ್ಜಿ ಸಲ್ಲಿಸಿದವರು ನೆಟ್‍ನಲ್ಲಿ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಂಡು ತಮ್ಮ ಭಾವಚಿತ್ರವನ್ನು ಅಂಟಿಸಿ ಪರೀಕ್ಷೆ ಬರೆಯಬೇಕಾಗಿತ್ತು. ಈ ಸಂದರ್ಭ ಬಳಸಿಕೊಂಡು ಬಳ್ಳಾರಿಯ ಪಬ್ಲಿಕ್ ಟಿವಿ ವರದಿಗಾರ ವೀರೇಶ್ ದಾನಿ ಎಂಬ ಮಹಾನುಭಾವ ಅಲ್ಲಿನ ಮಂಜುನಾಥಯ್ಯ ಎಂಬ ಪುಡಿರೌಡಿಯೊಂದಿಗೆ ಸೇರಿಕೊಂಡು ನಕಲಿ ಪ್ರವೇಶ ಪತ್ರವನ್ನು ಸೃಷ್ಟಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಅದಕ್ಕೆ ರಾಜ್ಯಪಾಲ ವಜುಭಾಯಿವಾಲ ಮತ್ತು ಸಿಎಂ ಕುಮಾರಸ್ವಾಮಿಯವರ ಭಾವಚಿತ್ರವನ್ನು ಅಂಟಿಸಿದ್ದಾರೆ. ನಂತರ ನೋಡಿ ರಾಜ್ಯಪಾಲರು ಮತ್ತು ಸಿಎಂ ಕೂಡ ಪರೀಕ್ಷೆ ಬರೆಯುತ್ತಿದ್ದಾರೆ, ಇಲ್ಲಿ ಯಾರೂ ಬೇಕಾದರೂ ಪರೀಕ್ಷೆ ಬರೆಯಬಹುದಾಗಿದೆ, ರಾಜ್ಯದಲ್ಲಿ ಆಡಳಿತ ಯಂತ್ರಾಂಗ ಕುಸಿದಿದೆ, ಎಲ್ಲಡೆ ಅರಾಜಕತೆ ತಾಂಡವವಾಡುತ್ತಿದೆ ಎಂದೆಲ್ಲಾ ಬೇಕಾಬಿಟ್ಟಿ ಸುದ್ದಿ ಮಾಡಿದ್ದಾರೆ.
ಇದರ ಹಿಂದೆ ಅಲ್ಲಿನ ಉಪಕುಲಪತಿಯಿಂದ ಹಣ ಪೀಕುವುದೇ ಆಗಿತ್ತು. ಆದರೆ ಅಲ್ಲಿನ ವಿಸಿ ಇದಕ್ಕೆ ಸೊಪ್ಪು ಹಾಕಿಲ್ಲ. ವಿಸಿಯವರು ದಲಿತರಾದ ಕಾರಣದಿಂದಲೂ ಸಹ ಹಲವು ಮಾಧ್ಯಮಗಳು ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಇದರಿಂದ ನೊಂದ ಕುಲಪತಿಗಳು ನೇರವಾಗಿ ದಾಖಲೆ ಸಮೇತ ಪೋಲೀಸರಿಗೆ ದೂರು ನೀಡಿದ ಪರಿಣಾಮ ಮೇಲ್ನೋಟಕ್ಕೆ ದುರುದ್ದೇಶಪೂರಿತ ತಿರುಚುವಿಕೆ ಕಂಡ ಕಾರಣ ಪಬ್ಲಿಕ್ ಟಿವಿ ವರದಿಗಾರ ವೀರೇಶ್ ದಾನಿ ಸೇರಿದಂತೆ ನಾಲ್ಕು ಜನರನ್ನು ಪೊಲೀಸರು 120ಸಿ ಸೆಕ್ಷನ್ ಕ್ರಿಮಿನಲ್ ಸಂಚು ಅಡಿ ಬಂಧಿಸಿ ಜೈಲಿಗಟ್ಟಿದ್ದಾರೆ. ಇಡೀ ಪ್ರಕರಣದ ಕಿಂಗ್ ಪಿನ್ ಇದೇ ವೀರೇಶ್ ದಾನಿ ಎಂದು ಹೇಳಲಾಗುತ್ತಿದ್ದು ಪಿತೂರಿ ಮಾಡಿ ವರದಿ ಮಾಡಿದ ಆತ ಬಂಧನವಾಗುತ್ತಲೇ ತನಗೆ ಸ್ಟ್ರೋಕ್ ಹೊಡೆದಿದೆ ಎಂದು ನಾಟಕವಾಡುತ್ತಾ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿದ್ದಾನೆ.
ಇನ್ನು ಇದರಿಂದ ಇಡೀ ಆಕಾಶವೇ ತಲೆಮೇಲೆ ಬಿದ್ದಂತೆ ಒದ್ದಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಕುಮಾರಸ್ವಾಮಿಯನ್ನು ಭಸ್ಮಾಸುರರು ಎಂದು ಕರೆದಿದ್ದಾರೆ. ಈ ಬೆಂಕಿ ನಿಮ್ಮನ್ನೇ ಸುಡುತ್ತದೆ ಅಂದಿದ್ದಾರೆ. 20 ತಿಂಗಳ ಅಧಿಕಾರ ಅನುಭವಿಸಿ, 11 ತಿಂಗಳ ವನವಾಸ ಅನುಭವಿಸಿದವರಿಗೆ ಅಧಿಕಾರ ಎಷ್ಟು ಕ್ಷಣಿಕ ಎಂಬುದು ಗೊತ್ತಿರಬೇಕು. ಮುಖ್ಯಮಂತ್ರಿಯವರ ಮಗ ಮತ್ತು ಅವರ ತಂದೆ ಈ ಚುನಾವಣೆಯಲ್ಲಿ ಸೋತ ಬೇಜಾರಿಗೆ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಕೂಗಾಡಿದ್ದಲ್ಲದೇ ನಾವು ಇದಕ್ಕೆ ಬಗ್ಗುವುದಿಲ್ಲ ಎಂದು ಜೋರಾಗಿ ಹೇಳಿದ್ದಾರೆ.
ಸ್ಟುಡಿಯೋದಲ್ಲಿ ಕೂತು ತನಗಾಗದವರಿಗೆ ಬಾಯಿಗೆ ಬಂದ ಹಾಗೆ ಬೈಯ್ಯುವ ರಂಗನಾಥ್ ಪತ್ರಿಕೋದ್ಯಮದ ಪಾಠ ಹೇಳ್ತೀನಿ ಎಂದೆ ಬಡಬಡಿಸಿದ್ದಾರೆ. ದೇಶದಲ್ಲಿ ಪತ್ರಕರ್ತರ ಮೇಲೆ ಹಲ್ಲೆಗಳಾದಾಗ, ಕರ್ನಾಟಕದಲ್ಲಿ ಗೌರಿ ಲಂಕೇಶ್‍ರಂತಹ ಪತ್ರಕರ್ತರು ಕೊಲೆಯಾದಾಗ ಅದನ್ನೊಂದು ದೊಡ್ಡ ವಿಷಯವಾಗಿಸದ ರಂಗನಾಥ್, ಇಂದು ಹಲ್ಕಾ ಕೆಲಸ ಮಾಡಿದ್ದಕ್ಕಾಗಿ ತನ್ನ ಟಿವಿಯ ವರದಿಗಾರನನ್ನು ಒದ್ದು ಒಳಗೆ ಹಾಕಿದರೆ ಪ್ರಳಯ ಆದ ರೀತಿ ಕೂಗಾಡುತ್ತಿದ್ದಾರೆ.
ಇನ್ನು ಮೈತ್ರಿ ಸರ್ಕಾರದ ಮೇಲೆ ಸತತ ಆರೋಪ ಮಾಡುತ್ತಿರುವ ಟಿವಿ ಮಾಧ್ಯಮಗಳ ಮೇಲೆ ಮುನಿಸಿಕೊಂಡಿರುವ ಸಿಎಂ ಕುಮಾರಸ್ವಾಮಿಯವರು ಅದನ್ನು ತೆಗೆದುಕೊಳ್ಳುವ ರೀತಿಯೆ ಬೇರೆ. ‘ಯಾರೂ ಸಾಚಾ ಇಲ್ಲ. ಹಾಗಾಗಿ ಯಾರೂ ಸರ್ಕಾರವನ್ನು ಟೀಕಿಸಬಾರದು’ ಎಂಬುದು ಅವರ ಅಪಾಯಕಾರಿ ನಿಲುವು. ತಮ್ಮ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮತ್ತು ಮುಖ್ಯಸ್ಥ ರಂಗನಾಥ್ ಮೇಲೆ ಚಾರ್ಜ್ ಮಾಡಿದ್ದಾರೆ. ರಚನಾತ್ಮಕ ಟೀಕೆ ಮಾಡಿ ತೆಗದುಕೊಳ್ಳುತ್ತೇನೆ, ಹೀಗೆಲ್ಲಾ ಸುಳ್ಳು ಸುದ್ದಿ ಪ್ರಕಟಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ‘ಒಂದು ಕಾಲದಲ್ಲಿ ನನ್ನ ಸ್ನೇಹಿತರಾಗಿದ್ದ’ ರಂಗನಾಥ್ ಈಗ ವಿನಾಕಾರಣ ಗ್ರಾಮ ವಾಸ್ತವ್ಯದ ವಿರುದ್ಧ ಪದೇ ಪದೇ ವಿಡಂಬನೆ ಮಾಡುತ್ತಿರುವುದರಿಂದ ವಾರ್ ನಡೆಯುವುದಾದರೆ ನಾನು ಸಿದ್ಧ ಎಂದು ಘೋಷಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನ ಪಬ್ಲಿಕ್ ಟಿವಿಯ ವರದಿಗಾರನೊಬ್ಬ ವೈದ್ಯರೊಬ್ಬರಿಗೆ ಬ್ಲಾಕ್‍ಮೇಲ್ ಮಾಡಿ ರೋಲ್ ಕಾಲ್ ಹಣ ಪಡೆಯಲು ಹೋಗಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಆಗ ರಂಗನಾಥ್ ತನ್ನ ಟಿವಿಯಲ್ಲಿ ಅದರ ಸುದ್ದಿ ಪ್ರಕಟಿಸಲೇ ಇಲ್ಲ. ನೆಪಮಾತ್ರಕ್ಕೆ ತನ್ನ ಯೂಟ್ಯೂಬ್ ಚಾನಲ್‍ನಲ್ಲಿ ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಉಸುರಿದ್ದರು. ಈಗ ಮತ್ತೆ ತನ್ನ ಬಳ್ಳಾರಿ ವರದಿಗಾರನ ಬಂಧನವಾದಾಗ ಮತ್ತೆ ಬಿಜೆಪಿಯ ಸುರೇಶ್ ಕುಮಾರ್, ಸದಾನಂದ ಗೌಡರಿಂದ ಪ್ರತಿಕ್ರಿಯೆ ಪಡೆದು ಪ್ರಕಟಿಸಿದ್ದಾರೆ. ತಾನು ಯಾವ ಪಕ್ಷದ ಪರವಾಗಿಯೂ ಇಲ್ಲ ಎಂದು ಹೇಳುತ್ತಲೇ ಮೋದಿಯನ್ನು ತಲೆ ಮೇಲೆ ಹೊತ್ತು ಮೆರೆಸುವುದನ್ನು ಸದಾ ಮಾಡುತ್ತಿರುತ್ತಾರೆ. ಅದರಲ್ಲೂ 2000 ರೂ. ನೋಟಿನಲ್ಲಿ ಚಿಪ್ಪಿದೆ ಎಂದು ಹೇಳಿ ಬಹಳ ಲೇವಡಿಗೂ ಗುರಿಯಾಗಿದ್ದರು.
ಮತ್ತೆ ಬಂದ ಎಸ್.ಎಂ ಕೃಷ್ಣ
ಇದೆಲ್ಲಾ ನಡೆಯಬೇಕಾದರೆ ಸುಮ್ಮನಿದ್ದ ಎಸ್ಸೆಂ ಕೃಷ್ಣರವರು ಈ ವಿಚಾರದಲ್ಲಿ ಇದ್ದಕ್ಕಿದ್ದಂತೆ ಮೈಕೊಡವಿಕೊಂಡು ಎದ್ದುಬಿಟ್ಟಿದ್ದಾರೆ. ದೇಶದ ನೂರೆಂಟು ವಿದ್ಯಮಾನಗಳು, ಘೋರ ಘಟನೆಗಳು ನಡೆದಾಗಲೂ ಪ್ರತಿಕ್ರಿಯೆ ನೀಡದಿದ್ದ ಎಸ್ಸೆಂ ಕೃಷ್ಣ ಈಗ ಪಬ್ಲಿಕ್ ಟಿವಿ ಮೇಲೆ ಕುಮಾರಸ್ವಾಮಿ ಮಾತಾಡಿದ್ದನ್ನು ವಿರೋಧಿಸಿ ಪತ್ರವನ್ನೇ ಬರೆದುಬಿಟ್ಟರು.
ಅಂದರೆ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಪರ ಇನ್ನಿಲ್ಲದಂತೆ ಕೆಲಸ ಮಾಡಿದ ಟಿ.ವಿ ಚಾನೆಲ್‍ಗಳಿಗೆ ಬಿಜೆಪಿಯ ನಾಯಕರು ಋಣಸಂದಾಯ ಮಾಡಲು ಮುಂದಾದಂತೆ ಇಡೀ ಸನ್ನಿವೇಶ ಕಾಣುತ್ತಿದೆ. ಶೂದ್ರನ ವಿರುದ್ಧ ಇನ್ನೊಬ್ಬ ಶೂದ್ರನನ್ನು ಎತ್ತಿಕಟ್ಟಿ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳುವ ಬ್ರಾಹ್ಯಣ್ಯವಾದಿಗಳ ಕಪಿಮುಷ್ಟಿಯಲ್ಲಿ ಸಿಲುಕಿರುವ ಕೃಷ್ಣರವರು ಸುಳ್ಳು ಸುದ್ದಿ ಪ್ರಕಟಿಸಿ ಸಿಕ್ಕಿಬಿದ್ದು ಎಫ್.ಐ.ಆರ್ ಹಾಕಿಸಿಕೊಂಡಿದ್ದ ವಿಶ್ವವಾಣಿಯ ವಿಶ್ವೇಶ್ವರ್ ಭಟ್ ಮೇಲಿನ ಕೇಸನ್ನು ಹಿಂಪಡೆಯಬೇಕೆಂದೂ ವಕಾಲತ್ತು ವಹಿಸಿದ್ದರು. ಈಗ ಮತ್ತೆ ಪಬ್ಲಿಕ್ ಟಿವಿ ವಿಚಾರದಲ್ಲಿಯೂ ಕುಮಾರಸ್ವಾಮಿಯವರಿಗೆ ನೀತಿಸಂಹಿತೆಯ ಪಾಠ ಮಾಡಲು ಬಂದರು. ಇದರಿಂದ ಸಿಟ್ಟಿಗೆದ್ದ ಕುಮಾರಸ್ವಾಮಿಯವರು ‘ಬುದ್ಧಿ ಹೇಳಬೇಕಾಗಿರುವುದು ಈ ಮಾಧ್ಯಮಗಳಿಗೆ, ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ನೋಡಿಕೊಳ್ಳಲಿ. ನಮ್ಮ ತಟ್ಟೆಯ ಕುರಿತು ಮಾತನಾಡಬೇಡಿ’ ಎಂದು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಇದೆಲ್ಲವೂ ‘ಒಕ್ಕಲಿಗ ಕುಮಾರಸ್ವಾಮಿ’ಯವರ ಜೊತೆಗಿನ ಸಮರವಾದ್ದರಿಂದ, ಒಕ್ಕಲಿಗರನ್ನೇ ಮುಂದೆ ಮಾಡಬೇಕೆಂದು ತೀರ್ಮಾನ ಮಾಡಿಕೊಂಡಂತಿದೆ. ಹಾಗಾಗಿಯೇ ಸದಾನಂದಗೌಡರು ಸಹ ಪಬ್ಲಿಕ್ ಟಿವಿಯ ಪರವಾಗಿಯೂ, ಕುಮಾರಸ್ವಾಮಿಯ ವಿರುದ್ಧವಾಗಿಯೂ ಮಾತಾಡಿದ್ದಾರೆ.
ರಾಜ್ಯ ಸರ್ಕಾರವೇನೂ ಸಾಚಾ ಅಲ್ಲ. ಜಿಂದಾಲ್ ಭೂಮಿ ಕೊಟ್ಟು ಕೊಬ್ಬಿಸುತ್ತಿರುವುದು, ಮೋಡ ಬಿತ್ತನೆಯ ಹೆಸರಿನಲ್ಲಿ ಹಣ ನುಂಗುತ್ತಿರುವುದು ಸೇರಿ ಹಲವು ಅವ್ಯವಹಾರಗಳಲ್ಲಿ ಸರ್ಕಾರ ಭಾಗಿಯಾಗಿದೆ. ತಾವೇ ವಿರೋಧಿಸಿದ್ದ ಭೂಸ್ವಾಧೀನ ಕಾಯ್ದೆಯ ತಿದ್ದುಪಡಿಯನ್ನು ತಾವೇ ಕಾಯ್ದೆ ಮಾಡುತ್ತಿದ್ದಾರೆ. ಅತ್ತ ದೆಹಲಿಯಲ್ಲಿ ಸರ್ಕಾರಿ ಶಾಲೆಗಳು ಪ್ರಪಂಚ ಮಟ್ಟದಲ್ಲಿ ಹೆಸರು ಮಾಡುತ್ತಿದ್ದರೆ ನಮ್ಮಲ್ಲಿ ಶಿಕ್ಷಣ ಮಂತ್ರಿಗಳೇ ಇಲ್ಲ. ಸದಾ ಸಚಿವ ಸ್ಥಾನಕ್ಕಾಗಿ ಕಚ್ಚಾಟ ನಡೆಯುತ್ತಲೇ ಇದೆ. ಈ ವಿಚಾರಗಳ ಕುರಿತು ಪ್ರೈಮ್ ಟೈಮ್‍ನಲ್ಲಿ ಗಂಭೀರವಾದ ಚರ್ಚೆ ನಡೆಸಬೇಕಾದ ಮಾಧ್ಯಮಗಳು ಅದನ್ನು ಮಾಡುತ್ತಿಲ್ಲ. ಬದಲಿಗೆ ವೈಯಕ್ತಿಕವಾಗಿ ಹಳಿಯುವುದು, ತೇಜೋವಧೆ ಮಾಡುವುದು, ಒಂದು ಪಕ್ಷದ ವಕ್ತಾರಿಕೆ ಮಾಡುವುದನ್ನು ಮಾಡುತ್ತಿದ್ದಾರೆ. ಶಾಸಕರು ಪಕ್ಷಾಂತರ ಮಾಡುತ್ತಿದ್ದರೆ, ಮಾರಾಟವಾಗುತ್ತಿದ್ದರೆ ಅದನ್ನು ಸಂಭ್ರಮಿಸುತ್ತಿದ್ದಾರೆ. ಜಾತಿಶ್ರೇಷ್ಠತೆಯ ವ್ಯಸನಕ್ಕೆ ಬಿದ್ದು ನರಳುವುದು ಮತ್ತು ಬಿಜೆಪಿಗೆ ಅಧಿಕಾರ ತಂದುಕೊಡಬೇಕೆಂಬ ಹಪಾಹಪಿಯಲ್ಲಿ ಮಾಧ್ಯಮಗಳು ಕೊಳೆತು ಗಬ್ಬೇರುತ್ತಿವೆ.
ಕಾಸಿಗಾಗಿ ಸುದ್ದಿಯಿಂದ ಹಿಡಿದು ಸ್ವಜಾತಿಯ ಮಠದ ಹೋರಿಯೊಬ್ಬ ಮಾಡುವ ಅನಾಚಾರಗಳನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ. ತಮ್ಮ ಇಚ್ಛೆಯಂತೆ ಕರ್ನಾಟಕದಲ್ಲಿ 25+1 ಸೀಟು ಗೆದ್ದರೂ ಸಹ ರಾಜ್ಯ ಸರ್ಕಾರ ಕೆಡವಲು ಆಗುತ್ತಿಲ್ಲವಲ್ಲ ಎಂಬ ಹತಾಶೆ ಮುಗಿಲುಮುಟ್ಟಿದೆ. ಆ ಕಾರಣದಿಂದಲೇ ರಾಜ್ಯ ಸರ್ಕಾರದ ಬಗ್ಗೆ ಊಹಾಪೋಹಗಳನ್ನು ಪ್ರಸಾರ ಮಾಡಿ ಸರ್ಕಾರದ ವಿರುದ್ಧ ಅಭಿಪ್ರಾಯ ಉತ್ಪಾದಿಸುವ ಪ್ರಜ್ಞಾಪೂರ್ವಕ ಕೆಲಸಕ್ಕಿಳಿದಿದ್ದಾರೆ. ಇವೆಲ್ಲವನ್ನೂ ಜರ್ನಲಿಸಂ ಎಂದು ಕರೆಯುವುದೇ ಸಾಧ್ಯವಿಲ್ಲ.
ಮೊಟ್ಟಮೊದಲಿಗೆ ಆರೆಸ್ಸೆಸ್‍ನ ಪರಿವಾರ ಮತ್ತು ಮಾಧ್ಯಮಗಳು ಸೇರಿಕೊಂಡು ನಾಡಿನ ಪ್ರಜ್ಞಾವಂತಿಕೆಯನ್ನು ಕೊಲ್ಲುವ, ಅಮಾನ್ಯಗೊಳಿಸುವ ಕೆಲಸ ಮಾಡಿದವು. ಅದಾದ ನಂತರ ಎಲ್ಲಾ ನೀತಿಸಂಹಿತೆಯನ್ನೂ ಗಾಳಿಗೆ ತೂರಿ ಪಕ್ಷವೊಂದರ ಪ್ರಚಾರಕ್ಕೆ ಇಳಿದುಬಿಟ್ಟವು. ಇದನ್ನು ಎದುರಿಸುವ ಧೈರ್ಯ ಸಿದ್ದರಾಮಯ್ಯನವರಿಗೆ ಇರಲಿಲ್ಲ. ನಿಜ ಹೇಳಬೇಕೆಂದರೆ ಕೆಲವು ಮಾಧ್ಯಮ ಖೂಳರು ಕೊಬ್ಬಲೂ ಅವರು ಕಾರಣರಾಗಿದ್ದರು. ಕುಮಾರಸ್ವಾಮಿಯವರದ್ದೂ ಸಹ ನೈತಿಕ ನೆಲೆಗಟ್ಟಿನ ಅಥವಾ ಸೈದ್ಧಾಂತಿಕ ವಿರೋಧವಲ್ಲ. ಅವರ ವಿರುದ್ಧ ಪ್ರಚಾರ ಮಾಡಿದಾಗ ಮಾತ್ರ ಅವರಿಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ.
ದೇಶದ, ರಾಜ್ಯದ ಹಿತದೃಷ್ಟಿಯಿಂದ ಈ ಮಾಧ್ಯಮಗಳ ಅನೈತಿಕ ನಡೆಯನ್ನು ತಡೆಯಲೇಬೇಕಿದೆ. ಅದೇ ಸಂದರ್ಭದಲ್ಲಿ ನೈಜ ಜರ್ನಲಿಸಂನ ಮೇಲೆ ನಡೆಯುವ ದಾಳಿಯನ್ನು ವಿರೋಧಿಸಬೇಕಿದೆ. ಈ ವಿಚಾರದಲ್ಲಿ ಪಕ್ಷಭೇದ ತೋರಬೇಕಿಲ್ಲ. ಹಾಗಾಗಿಯೇ ‘ಪತ್ರಿಕೆ’ಯಲ್ಲಿ ವಿಶ್ವೇಶ್ವರಭಟ್ಟರು ಮಾಡುವ ಅಪಪ್ರಚಾರವನ್ನು ಖಂಡಿಸುತ್ತಲೇ, ಅವರ ವಿರುದ್ಧ ಎಫ್‍ಐಆರ್ ಹಾಕಿದ್ದನ್ನು ವಿರೋಧಿಸಲಾಗಿತ್ತು.
ಒಟ್ಟಾರೆ ನೈಜ ಪತ್ರಿಕೋದ್ಯಮದ ಪರವಾದ ಕೆಲಸ ಹಾಗೂ ಯಾವುದು ಪತ್ರಿಕೋದ್ಯಮ ಅಲ್ಲ ಎನ್ನುವುದನ್ನು ಹೇಳುವ ಕೆಲಸ ಎರಡೂ ಆಗಬೇಕಿದೆ.


