| ಕುಮಾರ್ |
ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಬಂದರು ಸಹ ತುಮಕೂರಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ನಡುವಿನ ವೈಮನಸ್ಯ ಕಡಿಮೆಯಾಗಿಲ್ಲ. ಬದಲಿಗೆ ಬೀದಿಕಾಳಗದ ರೂಪ ಪಡೆಯುವ ಸಂಭವ ಹೆಚ್ಚಾಗಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಡೆದು ನಿಲ್ಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚನೆಯಾಯಿತು. ಆದರೆ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಯೇ ಉಲ್ಟಾ ಹೊಡೆದಿರುವುದು ಎಲ್ಲರಿಗೂ ತಿಳಿದಿದೆ. ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ವತಃ ಮಾಜಿ ಪ್ರಧಾನಿ ದೇವೆಗೌಡರೇ ಅಭ್ಯರ್ಥಿಯಾಗಿ ಸೋತಿದ್ದಾರೆ. ಮೂರು ಜನ ಜೆಡಿಎಸ್ ಶಾಸಕರು ಒಬ್ಬ ಕಾಂಗ್ರೆಸ್ ಶಾಸಕ ಇದ್ದರು ಸಹ ದೇವೇಗೌಡರು ಪರಾಭವಗೊಂಡಿರುವುದು ಎರಡು ಪಕ್ಷಗಳಿಗೂ ಮುಖಭಂಗವಾಗಿದೆ. ಆದರೆ ಇದರಿಂದ ಎರಡು ಪಕ್ಷಗಳ ಕೆಲವರಿಗೆ ಒಳಗೊಳಗೆ ಖುಷಿಯಾಗಿರುವಂತೆ ಕಾಣಿಸುತ್ತಿದೆ. ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‍ನವರು ಕಣಕ್ಕಿಳಿಯುವುದನ್ನು ತೀವ್ರವಾಗಿ ವಿರೋಧಿಸಿದ್ದ ಕೆ.ಎನ್.ರಾಜಣ್ಣ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ ಎಂಬ ಅಸಮಾಧಾನ ಎರಡು ಪಕ್ಷಗಳಲ್ಲಿದೆ. ಇದೇ ಕಾರಣಕ್ಕೆ ರಾಜಣ್ಣನ ವಿರುದ್ಧ ಅಭಿಪ್ರಾಯ ರೂಪಿಸಲು ಹೊರಟ ಕೆಲವು ಕಾಂಗ್ರೆಸ್ ಮುಖಂಡರು ಈಗ ರಾಜಣ್ಣನ ತಂಟೆಗೆ ಹೋಗಿದ್ದೆ ತಪ್ಪಾಯಿತು ಎನ್ನುವಂತೆ ಕಸಿವಿಸಿ ಅನುಭವಿಸುತ್ತಿದ್ದಾರೆ.

ಚುನಾವಣೆಯ ಫಲಿತಾಂಶ ಬಂದನಂತರ ಕೆ.ಎನ್.ರಾಜಣ್ಣ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ ‘ತುಮಕೂರಿನಲ್ಲಿ ದೇವೇಗೌಡರು ಸೋಲಲು ನಿಕಿಲ್ ಕುಮಾರಸ್ವಾಮಿ ಕಾರಣ. ಆತ ಕುಂಚಿಟಿಗ ಹೆಣ್ಣುಮಗಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ನಂತರ ಮದುವೆಯಾಗದೆ ಇದ್ದರಿಂದ ಮಧುಗಿರಿಯಲ್ಲಿರುವ ಕುಂಚಿಟಿಗರು ಮತನೀಡಿಲ್ಲ ಮತ್ತು ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡರು ಕೂಡ ಒಕ್ಕಲಿಗರಾಗಿದ್ದು ಅವರನ್ನು ಕಡೆಗಣಿಸಿದ್ದುಕಾರಣ ಎಂದು ಹೇಳಿದ್ದಾರೆ. ಡಾ.ಜಿ.ಪರಮೇಶ್ವರ್ ಅವರನ್ನ ನಾನು ಉಪಮುಖ್ಯಮಂತ್ರಿ ಎಂದು ಪರಿಗಣನೆಯೇ ಮಾಡೋದಿಲ್ಲ, ಅವರು ಜೀರೋ ಟ್ರಾಫಿಕ್‍ಗೆ ಮಾತ್ರ ಸೀಮಿತ ಎಂದು ಹೇಳಿದ್ದರು.
ಇದರಿಂದ ಅಸಮಾಧಾನ ಹೆಚ್ಚಾಗಿ ಜೆಡಿಎಸ್ ನಾಯಕರು ನೇರವಾಗಿ ಕೆ.ಎನ್.ರಾಜಣ್ಣನವರನ್ನು ಟಾರ್ಗೆಟ್ ಮಾಡಿ ಟೀಕೆ ಮಾಡಲು ಶುರು ಮಾಡಿದರು. ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತನ್ನ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ರಾಜಣ್ಣ ಬಿಜೆಪಿಗೆ ಬೆಂಬಲಿಸಿದ್ದರೆ ನೇರವಾಗಿ ಹೇಳಲಿ ಅತಿಯಾಗಿ ಮಾತಾನಾಡುವುದನ್ನ ನಿಲ್ಲಿಸಲಿ ಮತ್ತು ನೇರ ಯುದ್ಧಕ್ಕೆ ಬರಲಿ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೈತ್ರಿಯಿಂದ ಅನಾನೂಕೂಲವೇ ಹೆಚ್ಚು ಇದರಿಂದ ಹೊರಬರಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎನ್.ಆರ್ ಕೇವಲ 500 ಮತಗಳ ಅಂತರದಿಂದ ಒಮ್ಮೆ ಮಧುಗಿರಿಯಿಂದ ಆರಿಸಿ ಬಂದ ಗೌರಿಶಂಕರ್ ಆಪರೇಷನ್ ಕಮಲದಲ್ಲಿ ಸೇಲಾಗಿದ್ದರು ಅವರ ಬಗ್ಗೆ ಮಾತನಾಡಲು ನನಗೆ ಹೇಸಿಗೆಯಾಗುತ್ತದೆ ಎಂದಿದ್ದಾರೆ.
ಡಾ.ಜಿ.ಪರಮೇಶ್ವರ್ ಹಠಾವೋ ಕಾಂಗ್ರೇಸ್ ಬಚಾವೋ

ತುಮಕೂರಿನ ವಾಲ್ಮೀಕಿ ನಗರದಲ್ಲಿ ಪರಮೇಶ್ವರ ಹಠಾವೋ ಕಾಂಗ್ರೆಸ್ ಬಚಾವೋ ಎಂಬ ಪೋಸ್ಟರ್‍ಗಳನ್ನು ಅಂಟಿಸಿದ್ದರು. ಈ ಪೋಸ್ಟರ್‍ಗಳಲ್ಲಿ ಡಾ.ಜಿ.ಪರಮೇಶ್ವರ್ ಅವರ ಭಾವಚಿತ್ರಗಳನ್ನು ಹಾಕಿದ್ದರು ಮತ್ತು ಮಧ್ಯಾಹ್ನದ ನಂತರ ಇವನ್ನು ತೆರವುಗೊಳಿಸಿದ್ದಾರೆ. ಇದು ಕೂಡ ಕೆ.ಎನ್.ಆರ್ ಕೆಲಸವೇ ಎಂದು ಕಾಂಗ್ರೆಸ್‍ನ ಕೆಲವರ ಅನುಮಾನ.
ಈ ಬಗ್ಗೆ ಕಾಂಗ್ರೆಸ್‍ನ ಮಾಜಿ ಜಿಲ್ಲಾಧ್ಯಕ್ಷರಾದ ಕೆಂಚಮಾರಯ್ಯನವರು, ಡಾ.ಜಿ.ಪರಮೇಶ್ವರ್ ಅವರ ವಿರುದ್ಧ ಪೋಸ್ಟರ್ ಅಂಟಿಸಿರುವುದನ್ನು ವಿರೋಧಿಸಿದ್ಧು, ಪರಮೇಶ್ವರರನ್ನ ಜೀರೋ ಟ್ರಾಪಿಕ್ ಎಂದು ಅವಹೇಳನ ಮಾಡುವುದು ಅಸ್ಪøಶ್ಯರ ಏಳಿಗೆಯನ್ನ ಸಹಿಸಿಕೊಳ್ಳದ ಕೆ.ಎನ್.ರಾಜಣ್ಣನ ಮನಸ್ಥಿತಿ ಎಂದು ಹೇಳಿದ್ದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದವರನ್ನು ಪಕ್ಷದಿಂದ ಹೊರಗೆ ಹಾಕಬೇಕೆಂದು ಆಗ್ರಹಿಸಿದ್ದಾರೆ

ಇತ್ತ ಕಾಂಗ್ರೆಸ್ ಬೆಂಬಲಿತ ದಲಿತ ಮುಖಂಡರಿಂದ ಕೆಂಚಮಾರಯ್ಯ ಹಠಾವೋ ಕಾಂಗ್ರೆಸ್ ಬಚಾವೋ ಎಂದು ಪ್ರೆಸ್ ಮೀಟ್ ಮಾಡಿಸುವ ಮೂಲಕ ಅವರನ್ನು ಹತ್ತಿಕ್ಕಲೂ ಕೆ.ಎನ್.ಆರ್ ಪಡೆ ಪ್ರಯತ್ನಿಸಿದೆ. ಇದರಿಂದ ಹಠವಾದಿ ರಾಜಣ್ಣ ತನ್ನ ಉಳಿವಿಗಾಗಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಲು ಸಿದ್ಧ ಎಂಬ ಸಂದೇಶವನ್ನು ಮತ್ತೊಮ್ಮೆ ರವಾನಿಸಿದ್ದಾರೆ.
ಕೆ.ಎನ್.ರಾಜಣ್ಣರ ಮಗ ಆರ್.ರಾಜೇಂದ್ರ ಸಹಾ ಪತ್ರಿಕಾಗೋಷ್ಠಿ ನಡೆಸಿ ದೇವೇಗೌಡರ ಸೋಲಿಗೆ ಅವರ ಇಬ್ಬರು ಸೊಸೆಯಂದಿರೆ ಕಾರಣ. ಇಬ್ಬರು ಮಕ್ಕಳಿಗೆ ಟಿಕೆಟ್ ಬೇಕೆಂದು ಹಠ ಹಿಡಿದರು. ಒಲ್ಲದ ಮನಸ್ಸಿನಲ್ಲಿ ದೇವೆಗೌಡರು ತುಮಕೂರಿನಲ್ಲಿ ಸ್ಫರ್ಧಿಸಿದ್ದಾರೆ. ಇದು ಅವರ ಸೋಲಿಗೆ ಕಾರಣ ಎಂದಿದ್ದಾರೆ.
ರಾಜಣ್ಣನಿಗೆ ಹೆದರಿ ನಾಪತ್ತೆಯಾದ ಕಾಂಗ್ರೆಸ್ ಕಾರ್ಯಕರ್ತರು

ಬಿಜೆಪಿ ಗೆಲ್ಲಲು ಕೆ.ಎನ್.ರಾಜಣ್ಣನೇ ಕಾರಣ ಎಂದು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಛೇರಿಯಲ್ಲಿ ಧಿಕ್ಕಾರ ಕೂಗಿದ್ದಾರೆ ಮತ್ತು ಟೌನ್‍ಹಾಲ್ ಹತ್ತಿರ ಪ್ರತಿಭಟನೆ ಮಾಡಲು ಹೊರಟಿದ್ದಾರೆ ಎಂದು ತಿಳಿದ ರಾಜಣ್ಣ, ತಾನೇ ಪಕ್ಷದ ಕಛೇರಿಗೆ ಹೋದರು. ಅಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಅಲ್ಲಿಂದ ಸೀದಾ ಪ್ರತಿಭಟನೆ ಸ್ಥಳಕ್ಕೆ ಹೋದರು. ಅಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕಾರ್ಯಕರ್ತರು ಸ್ಥಳಬಿಟ್ಟು ಒಬ್ಬೊಬ್ಬರೇ ಓಟ ಕಿತ್ತಿದ್ದಾರೆ. ಅಲ್ಲೇ ಪತ್ರಕರ್ತರ ಜೊತೆ ಮಾತನಾಡಿದ ಕೆ.ಎನ್.ಆರ್ ‘ತಾಕತ್ ಇದ್ದರೆ ನನ್ನ ಎದುರುಗಡೆ ಧಿಕ್ಕಾರ ಕೂಗಲಿ, ದೊಡ್ಡವರಾಗಲಿ ಚಿಕ್ಕವರಾಗಲಿ ನಾಲಿಗೆ ಸೀಳುತ್ತೇನೆ ಎಂದಿದ್ದಾರೆ . ದೇವೆಗೌಡರ ಸೋಲಿಗೆ ಜೀರೋ ಟ್ರಾಫಿಕ್ ಮಂತ್ರಿಯೇ ಕಾರಣ. ಅವರು ಒಮ್ಮೆ ತುಮಕೂರಿಗೆ ಬಂದರೆ 500 ಓಟುಗಳು ಹೋಗುತ್ತವೆ’ ಎಂದು ಪರಮೇಶ್ವರ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ‘ಕಾಂಗ್ರೆಸ್ ಪಕ್ಷವನ್ನು ನಾನು ಮತ್ತೆ ಕಟ್ಟುತ್ತೇನೆ ಎಲ್ಲಾ ಅತೃಪ್ತರನ್ನು ಒಂದುಗೂಡಿಸುತ್ತೇನೆ. ಬಸವರಾಜು ಅವರನ್ನು ಮತ್ತೆ ಕಾಂಗ್ರೆಸ್ ತರುತ್ತೇನೆ ಎಂದು ಹೇಳಿದ್ದಾರೆ. ‘ನನ್ನನ್ನು ಆಪೆಕ್ಸ್ ಬ್ಯಾಂಕಿಂದ ಕೆಳಗಿಳಿಸಲು ನೋಡುತ್ತಿದ್ದಾರೆ. ಐದು ವರ್ಷ ನಾನೇ ಮುಂದುವರೆಯುವುದು ಖಚಿತ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ‘ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ವಿರುದ್ಧ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅವರನ್ನು ಕೆಳಗಿಳಿಸಲು ಪ್ರಯತ್ನ ನಡೆಯುತ್ತಿದೆ. ಇದು ಬರಿ ಅಧಿಕಾರದ ಆಸೆಯಿಂದ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಈ ಮಧ್ಯೆ ಕಾಂಗ್ರೆಸ್‍ನ ತುಮಕೂರು ಜಿಲ್ಲಾಧ್ಯಾಕ್ಷ ರಾಮಕೃಷ್ಣ , ರಾಜ್ಯ ಕಾಂಗ್ರೇಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಕೆ.ಎನ್.ರಾಜಣ್ಣನ ವಿರುಧ್ಧ ದೂರು ನೀಡಿದ್ದಾರೆ. ಕೆ.ಎನ್.ಆರ್ ಮೈತ್ರಿ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದ್ದಾರೆ ಹಾಗೂ ಜಿಲ್ಲಾ ಕಛೇರಿಗೆ ಬಂದು ತನ್ನ ವಿರುಧ್ದ ಮಾತನಾಡದಂತೆ ಬೆದರಿಕೆ ಹಾಕಿದ್ದಾರೆ’ ಎಂದು ದೂರಿದ್ದಾರೆ . ಜಿಲ್ಲೆಯ ಮತ್ತೊಬ್ಬ ಮುಖಂಡ ಮುರುಳಿಧರ್ ಹಾಲಪ್ಪ ‘ಪಕ್ಷದ ವಿರುದ್ಧ ಮಾತಾನಾಡುವ ಕೆಲಸ ಮಾಡಿದ ಎಲ್ಲರನ್ನೂ ಪಕ್ಷದಿಂದ ಉಚ್ವಾಟಿಸಬೇಕು’ ಎಂದು ಹೇಳಿದ್ದಾರೆ.

ತುಮಕೂರು ಜಿಲ್ಲೆ ಮೈತ್ರಿ ಪಕ್ಷ ಸೋತಿದ್ದೇ ಇಲ್ಲಿನ ಮುಖಂಡರ ಒಣ ಪ್ರತಿಷ್ಟೆ ಮತ್ತು ಇಂತಹ ಹತ್ತು ಹಲವು ಅಹಂಗಳಿಂದ ಎಂಬುದು ಸೋಲಿನ ನಂತರದಲ್ಲಾದರೂ ಅರಿವಾಗಬೇಕಿತ್ತು. ಆದರೆ ಅದು ಆಗುತ್ತಿಲ್ಲ. ಬದಲಾಗಿ ವಾತಾವರಣ ಹದಗೆಡುತ್ತಿದೆ. ಸಹಜವಾಗಿ ಅದರ ಲಾಭ ಬಿಜೆಪಿಗೆ ಆಗುತ್ತಿದೆ.


