ಸ್ಪಾಟ್‌ಲೈಟ್ ಚಿತ್ರದ ದೃಶ್ಯ

‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು ಸರ್’

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ನಂತರ ಅನೇಕ ಸಲ ಕೇಳಿದ್ದು. ಅಲ್ಲೀತನಕ ಇಂಥ ಮಾತನ್ನು ನಾನು ಕೇಳಿಯೇ ಇರಲಿಲ್ಲ.

‘ಸಮಾಜವನ್ನು ಬದಲಿಸಲಿಚ್ಛಿಸುವವರು ರಾಜಕೀಯಕ್ಕೆ ಹೋಗಲಿ, ಸಮಾಜ ಸೇವೆ ಮಾಡಲಿ, ಅವರಿಗೆ ಇಲ್ಲೇನೂ ಕೆಲಸವಿಲ್ಲ’ ಎನ್ನುವ ಅರ್ಥದಲ್ಲಿ ಡೇವಿಡ್ ಮ್ಯಾಮೆಟ್ ತಮ್ಮ ಸಿನೆಮಾ ನಿರ್ದೇಶನದ ಪುಸ್ತಕದಲ್ಲಿ ಬರೆದಿದ್ದರು. ಅಮೇರಿಕದ ಇತಿಹಾಸವನ್ನು ಹಾಲಿವುಡ್ ಪೂರ್ವ ಮತ್ತು ಹಾಲಿವುಡ್ ನಂತರ ಎಂದು ವಿಂಗಡಿಸಬಹುದು, ಅಷ್ಟು ಪರಿಣಾಮ ಬೀರಿದೆ ಹಾಲಿವುಡ್ ಸಮಾಜದ ಮೇಲೆ ಎಂದು ಕೆಲವರು ಡೇವಿಡ್ ಮ್ಯಾಮೆಟ್ ಅವರ ಈ ಮೇಲಿನ ವಾದವನ್ನು ತಿರಸ್ಕರಿಸುತ್ತಾರೆ.

ಕನ್ನಡದ ಮೇರುನಟ ಡಾ. ರಾಜ್‍ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರವನ್ನು ನೋಡಿ ಅನೇಕರು ತಮ್ಮ ಕೆಲಸ ಬಿಟ್ಟು ಹಳ್ಳಿಗೆ ಹೋದರಂತೆ. ಏನಿದು ಮೆಸೇಜ್? ಸಿನೆಮಾ ಒಂದು ಸಂದೇಶವನ್ನು ಕೊಡಬಲ್ಲದೇ? ಮನರಂಜನೆಯೇ ಅದರ ಪ್ರಮುಖ ಕರ್ತವ್ಯವಲ್ಲವೇ? ಸಮಾಜಕ್ಕೆ ಮೆಸೇಜ್ ಕೊಡಲು ನಾವ್ಯಾರು? ಏನಕ್ಕೆ ಕೊಡಬೇಕು ಮೆಸೇಜ್?

ರಾಜ್‍ಕುಮಾರ್ ಹಿರಾನಿ, ತಮ್ಮ ಚಿತ್ರದ ಥೀಮ್‍ಗಳ ಬಗ್ಗೆ ತುಂಬಾ ಗಮನ ಕೊಡುತ್ತಾರೆ. ಅವರ ಮೊದಲ ಚಿತ್ರ ಮುನ್ನಾಭಾಯಿ ಎಮ್.ಬಿ.ಬಿ.ಎಸ್ ಮಾಡುವ ಮುನ್ನ ಅವರ ಮನಸ್ಸಿನಲ್ಲಿದ್ದದ್ದು ಒಂದೇ ವಿಷಯ; ವೈದ್ಯಕೀಯ ಕ್ಷೇತ್ರದ ಬಗ್ಗೆ ಒಂದು ಸಿನೆಮಾ ಮಾಡಬೇಕು ಎನ್ನುವುದು. ಈ ಕಾಲದ ವೈದ್ಯಕೀಯ ಕ್ಷೇತ್ರದ ಬಗ್ಗೆ ಅವರಿಗೆ ತುಂಬಾ ಸಿಟ್ಟೂ ಇತ್ತು. ಹಲವಾರು ವರ್ಷಗಳ ಕಾಲ ಚಿತ್ರಕತೆಯ ಮೇಲೆ ಕೆಲಸ ಮಾಡಿದಾಗ ಮೂಡಿಬಂದಿದ್ದು ಮುನ್ನಾಭಾಯಿ ಎಮ್.ಬಿ.ಬಿ.ಎಸ್. ಧರ್ಮದ ಬಗ್ಗೆ ಸಿನೆಮಾ ಮಾಡಲು ಹೊರಟಾಗ ಮೂಡಿಬಂದಿದ್ದು ಪೀಕೆ. ಹಿರಾನಿಯವರ ಲಗೇ ರಹೋ ಮುನ್ನಾಭಾಯಿ ಸಿನೆಮಾ ನೋಡಿದ ನಂತರ ಅನೇಕರು ಗಾಂಧಿಗಿರಿ ಮಾಡಲು ಶುರು ಮಾಡಿದರು.

Photo Courtesy: The Indian express

2016 ರಲ್ಲಿ ಅತ್ಯುತ್ತಮ ಚಿತ್ರವೆಂದು ಆಸ್ಕರ್ ಪ್ರಶಸ್ತಿ ಪಡೆದ ಸಿನೆಮಾ ‘ಸ್ಪಾಟ್‍ಲೈಟ್’. ಅಮೇರಿಕದ ಬೋಸ್ಟನ್ ಪ್ರದೇಶದಲ್ಲಿ ಹಲವಾರು ರೋಮನ್ ಕ್ಯಾಥಲಿಕ್ ಪಾದ್ರಿಗಳಿಂದ ಆಗಿತ್ತು ಎನ್ನಲಾದ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಈ ಘಟನೆಗಳನ್ನು ಬಯಲಿಗೆಳೆದ ತನಿಖಾ ಪತ್ರಿಕೋದ್ಯಮದ ಕಥೆಯನ್ನು ಸ್ಪಾಟ್‍ಲೈಟ್ ಚಿತ್ರ ಹೇಳಿತು. ಈ ಚಿತ್ರದಿಂದ ಕ್ಯಾಥೋಲಿಕ್ ಚರ್ಚ್ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು.  ಆದರೆ ಸ್ಪಾಟ್‍ಲೈಟ್ ಚಿತ್ರ ಮಕ್ಕಳ ಮೇಲೆ ದೌರ್ಜನ್ಯ ಮಾಡಬಾರದು ಎನ್ನುವ ಸಂದೇಶ ನೀಡಲು ಈ ಚಿತ್ರವನ್ನು ಮಾಡಿದರೇ? ಅಥವಾ ಪತ್ರಕರ್ತರಿಗೆ ಸಂದೇಶ ನೀಡಲು ಈ ಚಿತ್ರವನ್ನು ಮಾಡಿದರೇ? ಉತ್ತರ ನಾವೆಂದುಕೊಂಡ ಹಾಗೆ. ಆದರೆ ಒಂದು ಮಾತ್ರ ಸತ್ಯ. ಈ ಕಥನಕಾರರು ಮಾಡಲು ಪ್ರಯತ್ನಿಸಿದ್ದು ಆಯಾ ಸಮಸ್ಯೆಯ ಆಳವನ್ನು ಜಾಲಾಡುವುದು. ಹೀಗೇಕೆ ಆಯಿತು ಎನ್ನುವುದಕ್ಕೆ ಉತ್ತರಗಳನ್ನು ಹುಡುಕುವುದು, ಲೈಂಗಿಕ ಕಿರುಕುಳ ಮಾಡಿದ ಪಾದ್ರಿಗಳು ಮಾತ್ರ ತಪ್ಪಿತಸ್ಥರಾ ಅಥವಾ ಇತರರೂ ಇದಕ್ಕೆ ಕಾರಣೀಭೂತರಾ ಎನ್ನುವುದಕ್ಕೆ ಉತ್ತರ ಹುಡುಕುವುದು ಇವರ ಉದ್ದೇಶವಾಗಿತ್ತು. ಕೊನೆಯ ಪ್ರಶ್ನೆಗೆ ಎಷ್ಟು ಆಳವಾಗಿ ಉತ್ತರ ಹುಡುಕುತ್ತಾರೆಂದರೆ, ತಾವೂ, ಈ ಹಗರಣವನ್ನು ಅಂದು ಬಯಲಿಗೆಳಯಲು ಪ್ರಯತ್ನಿಸುತ್ತಿದ್ದ ಪತ್ರಕರ್ತರೂ ಇದಕ್ಕೆ ಒಂದು ರೀತಿಯಲ್ಲಿ ಕಾರಣವಾಗಿದ್ದರು ಎನ್ನುವ ಉತ್ತರವೂ ಸಿಗುತ್ತದೆ.

ಸಮಾಜವನ್ನು ಪ್ರಭಾವಿಸಿದ ಇನ್ನೂ ಕೆಲವು ಚಿತ್ರಗಳ ಬಗ್ಗೆ ನೋಡುವ.

  • ವಾಟರ್‌ಗೇಟ್ ಹಗರಣವನ್ನು ಬಯಲಿಗೆಳೆದ ಘಟನೆಯ ಬಗ್ಗೆ ಆಲ್ ದಿ ಪ್ರೆಸಿಡೆಂಟ್’ಸ್ ಮೆನ್ ಎನ್ನುವ ಚಿತ್ರ ಬಂದ ಮೇಲೆ ಅನೇಕ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡರಂತೆ.
  • ಜಾಸ್ (Jaws) ಎನ್ನುವ ಚಿತ್ರ (ಸಮುದ್ರ ತೀರದಲ್ಲಿ ತಿಮಿಂಗಿಲಗಳ ದಾಳಿಯ ಬಗ್ಗೆಯ ಚಿತ್ರ) ಬಂದ ಮೇಲೆ ಸಮುದ್ರತೀರಕ್ಕೆ ಹೋಗುವ ಪ್ರವಾಸಿಗಳ ಸಂಖ್ಯೆಯಲ್ಲಿ ಇಳಿಮುಖವಾಯಿತಂತೆ.
  • ದಿ ಫೈಟ್ ಕ್ಲಬ್ ಚಿತ್ರ ಬಂದ ನಂತರ ಅಮೇರಿಕದಲ್ಲಿ (ಇತರೆಡೆಯಲ್ಲೂ) ನಿಜವಾದ ಫೈಟ್ ಕ್ಲಬ್‍ಗಳು ಶುರುವಾದವಂತೆ.
  • 2004ರ ದಿ ಡೇ ಆಫ್ಟರ್ ಟುಮಾರೋ ಚಿತ್ರ ಬಂದ ನಂತರ ಜನರಲ್ಲಿ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಹೆಚ್ಚಿನ ಜಾಗರೂಕತೆ ಮೂಡಿಸಿತಂತೆ.

ಹೀಗೆ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇವೆ. ಈ ಎಲ್ಲಾ ಚಿತ್ರಗಳ ಕರ್ತೃರು ಆಯಾ ಸಮಸ್ಯೆಯನ್ನು ಆಳವಾಗಿ ಅರ್ಥೈಸಿಕೊಳ್ಳಲು ಮತ್ತು ಆಯಾ ವಿಷಯಗಳ ಬಗ್ಗೆ ಹುಡುಕಾಟ ಮಾಡಲು ಪ್ರಯತ್ನಿಸುತ್ತಾರೆ. ಅಲೆಕ್ಸಾಂಡರ್ ಪೇನ್‍ನಂತಹ ನಿರ್ದೇಶಕರು ಮನುಷ್ಯನ ಸೋಲು, ಸಾರ್ಥಕತೆಯನ್ನು ಅರ್ಥೈಸಿಕೊಳ್ಳುವ ಹುಡುಕಾಟ ಮಾಡಿದರೆ, ಇನ್ನೂ ಕೆಲವರು ಸಮಾಜಕ್ಕೆ ಕಾಡುವ ಸಮಸ್ಯೆಗಳನ್ನು ತಮ್ಮ ಚಿತ್ರಗಳ ಮೂಲಕ ಕೂಲಂಕಷವಾಗಿ ಪರಿಶೀಲಿಸುವ ಪ್ರಯತ್ನ ಮಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇವರೆಲ್ಲರಿಗೂ ಒಂದು ಕಥೆಯನ್ನು ಹೇಳುವುದು ಮೂಲ ಉದ್ದೇಶವಾಗಿರುತ್ತದೆ.

ಇನ್ನು ಅನೇಕ ಚಿತ್ರಗಳನ್ನು ನೋಡಿದ ನಂತರ, ಹಲವರಿಗೆ ತಮ್ಮ ವ್ಯಕ್ತಿತ್ವಗಳನ್ನು ಪರದೆಯ ಮೇಲೆ ನೋಡಿದಾಗ, ತಮ್ಮ ವ್ಯಕ್ತಿತ್ವ ದೋಷಗಳ ಬಗ್ಗೆ ಸಹಾನುಭೂತಿ ಹೊಂದಿರುವ ಕಥೆಗಳನ್ನು ನೋಡಿದಾ, ಆ ಕಥೆಗಳನ್ನು ಇತರರೂ ನೋಡುತ್ತಾರೆ ಎನ್ನುವ ಭಾವನೆಯಿಂದ ಆ ವ್ಯಕ್ತಿಗಳ ಮೇಲೆ ಎಂತಹ ಗಂಭೀರವಾದ ಸಕಾರಾತ್ಮಕ ಪರಿಣಾಮಗಳಾಗಬಹುದು ಎನ್ನುವುದನ್ನೂ ಪರಿಗಣಿಸಬೇಕು. ನನಗೆ ವೈಯಕ್ತಿಕವಾಗಿ ಇದು ಯಾವುದೇ ಕಥನಕಲೆಯ ಬಹುಮುಖ್ಯ ಉದ್ದೇಶ ಅನಿಸುತ್ತದೆ.

ಸಿನೆಮಾಗಳಿಂದ ಸಮಾಜದಲ್ಲಿ ಬದಲಾಗಿದ್ದು ಏನು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿದರೆ, ಪ್ರಮುಖವಾಗಿ ಸಮಾಜದ ಟ್ರೆಂಡ್‍ಗಳಲ್ಲಿ ಬದಲಾವಣೆ ಆಗಿದ್ದು ಕಾಣಿಸುತ್ತದೆ. ಹಲವಾರು ಸಿನೆಮಾಗಳು ಹಿಟ್ ಆದ ನಂತರ ನಮ್ಮ ಜನರ ಉಡುಪುಗಳಲ್ಲಿ ಬದಲಾವಣೆ ಬಂದಿತ್ತು; ಸೀರೆಯ ಪ್ಯಾಟರ್ನ್‍ಗಳು, ಮೇಕ್‍ಅಪ್ ಮಾಡಿಕೊಳ್ಳುವುದು, ಗಂಡಸರ ಪ್ಯಾಂಟು ಶರ್ಟುಗಳ ವಿನ್ಯಾಸದಲ್ಲಿ ಬದಲಾವಣೆಗಳು (ಹಿಪ್ಪಿ-ಕಟ್ ನೆನಪಿಸಿಕೊಳ್ಳಿ) ಕಂಡುಬಂದಿದ್ದಂತೂ ನಾವು ನೋಡಿದ್ದೇವೆ.

ಇದರೊಂದಿಗೆ ಇನ್ನೆರಡು ಅಂಶಗಳಿವೆ, ಮೊದಲನೆಯದು ನಮ್ಮ ಸಮಾಜದ ಮೇಲೆ ಪರಿಣಾಮ ಬೀರಿದ ಚಿತ್ರಗಳ ಬಂದ ಕಾಲಘಟ್ಟ. ಸುಮಾರು ಒಂದು ಶತಕದ ಹಿಂದೆ ಹುಟ್ಟಿಕೊಂಡ ಸಿನೆಮಾ ಕಲೆ, ಎಲ್ಲಕ್ಕಿಂತ ಪ್ರಭಾವಶಾಲಿಯಾದ ಮನರಂಜನೆಯ ಮಾಧ್ಯಮವಾಗಿದೆ. ನಮ್ಮ ದೇಶದಲ್ಲಿ ಸಾಕ್ಷರತೆಯ ದರ 50ರ ದಶಕದಲ್ಲಿ ಶೇ.20ಕ್ಕಿಂತಲೂ ಕಡಿಮೆಯಿತ್ತು ಎಂದರೆ ಆ ಕಾಲಘಟ್ಟ ಹೇಗಿತ್ತು ಎನ್ನುವುದನ್ನು ಊಹಿಸಲೂ ಅಸಾಧ್ಯ. ಅದರೊಂದಿಗೆ ಮನರಂಜನೆಯ ಮಾಧ್ಯಮಗಳೂ ವಿರಳವಾಗಿದ್ದವು. ಹಾಗಾಗಿ 50ರ, 60ರ ಅಥವಾ 70ರ ದಶಕದಲ್ಲಿ ಒಂದು ಸಂದೇಶವನ್ನಿಟ್ಟುಕೊಂಡ ಚಿತ್ರಗಳನ್ನು ಇಂದು ವಾಟ್ಸ್ಯಾಪ್, ಇನ್‍ಸ್ಟಾಗ್ರಾಮ್‍ಗಳ ಯುಗದಲ್ಲಿ ಅನುಕರಿಸಲಾಗುವುದಿಲ್ಲ.

ಆದರೂ ನಾವು ಮಾಡುವ ಚಿತ್ರಗಳು ಪರಿಣಾಮ ಬೀರಬಹುದು ಎನ್ನುವ ಆಶಾಭಾವನೆಯನ್ನು ಖಂಡಿತ ಹೊಂದಬಹುದು; ಅದಕ್ಕೆ ಅನುಕರಿಸಬೇಕಾದದ್ದು ಆ ಕರ್ತೃರ ಪರಿಶ್ರಮ, ಆಯಾ ಸಮಸ್ಯೆಗಳ ಆಳವಾದ ಅಧ್ಯಯನ ಅದರೊಂದಿಗೆ ಚಿತ್ರಕಥೆ ಮತ್ತು ಸಿನೆಮಾ ಮಾಡುವ ಕಲೆಯನ್ನು ಆಳವಾಗಿ ಅಭ್ಯಸಿಸಿ ಕರಗತ ಮಾಡಿಕೊಳ್ಳುವುದು. ನೀವು ನೀಡಬೇಕೆನ್ನುವ ಸಂದೇಶದ ಹಿಂದಿನ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿದ ತರುವಾಯ ಆ ಸಂದೇಶವೇ ಬದಲಾಗಬಹುದು. ಅಧ್ಯಯನದ ಆಳವೇ ಒಂದು ಸಂದೇಶವಾಗಬಹುದು. ಇಲ್ಲವಾದರೆ, ಹೋಗುವ ಸಂದೇಶ ಒಂದೇ- ‘ನನಗೆ ಸಿನೆಮಾ ಮಾಡಲು ಬರುವುದಿಲ್ಲ ಆದರೂ ಹೇಗೋ ಮಾಡಿದ್ದೀನಿ, ಈಗ ಅನುಭವಿಸಿ’.

  • ರಾಜಶೇಖರ್ ಅಕ್ಕಿ (ರಂಗನಿರ್ದೇಶಕರು ಹಾಗೂ ಸಾಮಾಜಿಕ ಕಾರ್ಯಕರ್ತರು)

ಇದನ್ನೂ ಓದಿ: ಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ರಾಜಶೇಖರ್ ಅಕ್ಕಿ
+ posts

LEAVE A REPLY

Please enter your comment!
Please enter your name here