- Advertisement -
ಕಂಪ್ಲೀಟ್ ವಿಡಿಯೋ ಎಲ್ಲ ಮಾಧ್ಯಮಗಳ ಬಳಿಯಿದೆ. ಆದರೆ, ಅದರಲ್ಲಿ ಶೇ. 90 ರಷ್ಟು ಮಾಧ್ಯಮಗಳು ಕೋಲ್ಕತ್ತ ಹಿಂಸಾಚಾರದಲ್ಲಿ ಭಾಗವಹಿಸಿದವರಾರು, ವಿದ್ಯಾಸಾಗರ್ ಕಾಲೇಜಿನೊಳ್ಳಕ್ಕೆ ನುಗ್ಗಿದವರಾರು, ವಿದ್ಯಾಸಾಗರರ ಪುತ್ಥಳಿ ಒಡೆದವರಾರು ಎಂಬ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ‘ಈ ಕೃತ್ಯ ಮಾಡಿದ್ದು ನಿಮ್ಮ ಪಕ್ಷವೇ’ ಎಂದು ಬಿಜೆಪಿ ಮತ್ತು ಟಿಎಂಸಿ ಪಕ್ಷಗಳೆರಡೂ ಪರಸ್ಪರ ಆರೋಪ ಮಾಡುತ್ತಿವೆ ಎಂದು ಕೈ ತೊಳೆದುಕೊಂಡಿವೆ. ಇಲ್ಲಿ ಟಿಎಂಸಿ ನೀಡಿರುವ ವಿಡಿಯೋ ನಂಬಲರ್ಹವಾಗಿದ್ದರೆ, ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ, ಅಷ್ಟೇ ಅಲ್ಲ, ಅದು ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತ ನಡೆದಿದೆ. ಹಾಗಾಗಿ ಬಿಜೆಪಿಯ ಆರೋಪ ಅಥವಾ ಕ್ಲೈಮ್‍ಗಳ ಸತ್ಯಾಸತ್ಯತೆಯನ್ನು ಇಲ್ಲಿ ಪರಿಶೀಲಿಸಲಾಗಿದೆ….
ಮೇ 15ರ ಮುಂಜಾನೆ ಬಿಜೆಪಿ ಐಟಿ ಸೆಲ್‍ನ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ, ‘ವಿದ್ಯಾಸಾಗರ ಕಾಲೇಜಿನಲ್ಲಿ ನಡೆದ ದೊಂಬಿಯ ಮೊದಲ ಪ್ರತ್ಯಕ್ಷದರ್ಶಿ’ಯ ಫೇಸ್‍ಬುಕ್ ಪೋಸ್ಟ್ ಉಲ್ಲೇಖಿಸಿ, ಕಾಲೇಜಿನೊಳಗೆ ಇದ್ದ ಟಿಎಂಸಿ ವಿದ್ಯಾರ್ಥಿ ಘಟಕದ ಸದಸ್ಯರು ಈ ದೊಂಬಿ ಆರಂಭಿಸಿದರು’ ಎಂದು ಬರೆಯುತ್ತಾರೆ. ಇದರಲ್ಲಿ ಈ ಘಟನೆಯ ಮೊದಲ ‘ಪ್ರತ್ಯಕ್ಷದರ್ಶಿ’ ಆ ಕಾಲೇಜಿನ ವಿದ್ಯಾರ್ಥಿ ಬೀರಜ್ ನಾರಾಯಣ ರಾಯ್ ಮಾಡಿದ ಬೆಂಗಾಲಿ ಭಾಷೆಯ ಪೋಸ್ಟ್ ಉಲ್ಲೇಖಿಸಿ ಐಟಿ ಸೆಲ್‍ನ ಮಾಳವೀಯ ಅಪಾದನೆ ಮಾಡಿದರು.
ವಿಚಿತ್ರ: ಸಂಪೂರ್ಣ ವಿಡಿಯೋ ಹೊರ ಬೀಳುತ್ತಿದ್ದಂತೆ, ‘ಮೊದಲ ಪ್ರತ್ಯಕ್ಷದರ್ಶಿ’ ಬೀರಜ್ ನಾರಾಯಣ್ ರಾಯ್‍ನ ‘ಫೇಸ್‍ಬುಕ್’ ಅಕೌಂಟೇ ನಾಪತ್ತೆ! ಇನ್ನೂ ವಿಚಿತ್ರವೆಂದರೆ, ಆತನ ಪೋಸ್ಟನ್ನೇ ಹಾಕಿ ‘ತಾನೇ ಪ್ರತ್ಯಕ್ಷದರ್ಶಿ’ ಎಂಬಂತೆ ವಿವಿಧ ಖಾತೆಗಳಿಂದ ಪೋಸ್ಟ್‍ಗಳು ಹೊರಹೊಮ್ಮಿದವು!
ಈ ‘ಮೊದಲ ಪ್ರತ್ಯಕ್ಷದರ್ಶಿ’(ಗಳ!) ಪೋಸ್ಟ್ ಆಧಾರದಲ್ಲಿ ಬಿಜೆಪಿ ಮಾಡಿರುವ ಅಪಾದನೆ ಅಥವಾ ಕ್ಲೈಮ್‍ಗಳನ್ನು ನೋಡೋಣ:
1. ಮೊದಲ ಇಟ್ಟಿಗೆ ಕಾಲೇಜ್ ಕ್ಯಾಂಪಸ್ ಒಳಗಿಂದ ತೂರಿ ಬಂತು…
ಈ ಆರೋಪ ಸಮರ್ಥಿಸಲು ಒಂದೇ ಒಂದು ವಿಡಿಯೋವೂ ಲಭ್ಯ ಇಲ್ಲ. ‘ಮೊದಲ ಪ್ರತ್ಯಕ್ಷದರ್ಶಿ’ಯ ಅಕೌಂಟೇ ಕ್ಲೋಸ್!
ಸ್ಥಳೀಯ ‘ಆನಂದ್ ಬಜಾರ್’ ಪತ್ರಿಕೆಯ ಸ್ಪಾಟ್ ವರದಿ ಪ್ರಕಾರ, ಕಾಲೇಜಿನ ಹೊರಭಾಗದ ರಸ್ತೆಯಿಂದ (ಅಮಿತ್ ಶಾ ರ್ಯಾಲಿ ಪಾಸಾಗುತ್ತಿದ್ದ ರಸ್ತೆ) ಕಲ್ಲುಗಳನ್ನು ಕಾಲೇಜಿನ ಕ್ಯಾಂಪಸ್ ಒಳಕ್ಕೆ ಎಸೆಯಲಾಯಿತು. ಅದನ್ನು ಎಸದವರು ‘ನಮೋ ಒನ್ಸ್ ಎಗೇನ್’ ಎಂಬ ಕೇಸರಿ ಟೀ ಶರ್ಟ್ ತೊಟ್ಟ, ರ್ಯಾಲಿಯ ಭಾಗವಾಗಿದ್ದ ಯುವಕರು. ಆದರೆ ಕಾಲೇಜ್ ಒಳಗಡೆಯಿಂದ ಯಾವುದೇ ಇಟ್ಟಿಗೆ ಎಸೆದಿದ್ದಕ್ಕೆ ಆಧಾರವಿಲ್ಲ.
ಈ ವಿಡಿಯೋ ನೋಡಿ:
2. ಟಿಎಂಸಿ ಬೈಕ್‍ಗಳನ್ನು ಸುಟ್ಟಿತು…
ಫೇಸ್‍ಬುಕ್ (ಮಾಯವಾದ ಪ್ರತ್ಯಕ್ಷದರ್ಶಿ ಮತ್ತು ನಂತರ ಅದನ್ನೇ ಕಾಪಿ ಮಾಡಿ ‘ಪ್ರತ್ಯಕ್ಷದರ್ಶಿ’ ಗಳಾದವರ ಪೋಸ್ಟ್) ಪೋಸ್ಟ್ ಮತ್ತು ಬಿಜೆಪಿ ನಾಯಕರ ಆರೋಪ ಎಂದರೆ, ಟಿಎಂಸಿ ಕಾರ್ಯಕರ್ತರು ಬೈಕ್‍ಗಳನ್ನು ಸುಟ್ಟರು.
ವಿಡಿಯೋ ನೋಡಿ
: ಇಲ್ಲಿ ರ್ಯಾಲಿಯಲ್ಲಿದ್ದ ಕೇಸರಿ ಟೀ ಶರ್ಟಿನ ಹುಡುಗರೇ ಬೈಕ್‍ಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ.
3. ಕ್ಯಾಂಪಸ್‍ಗೆ ಬೀಗ ಹಾಕಿದ್ದರಿಂದ ಬಿಜೆಪಿ ಕಾರ್ಯಕರ್ತರು ಒಳಕ್ಕೆ ಪ್ರವೇಶಿಸಲು ಅಸಾಧ್ಯ.
ಇದನ್ನು ಅಮಿತ್ ಶಾ ಸೇರಿದಂತೆ ಮಾಳವಿಯ ಮತ್ತು ಭಕ್ತರು ಹೇಳುತ್ತಿದ್ದಾರೆ. ಈ ಕುರಿತು ಪಾತ್ರಿಕಾಗೋಷ್ಠಿಯಲ್ಲೂ ಶಾ ಹೇಳಿದ್ದಾರೆ. ಗಲಭೆ ನಡೆದ 7.30ರ ಸಮಯದಲ್ಲಿ ಕಾಲೇಜ ಮುಚ್ಚಿತ್ತು, ಎಲ್ಲ ಗೇಟ್ ಬಂದ್ ಆಗಿದ್ದವು. ಹೀಗಾಗಿ ಬಿಜೆಪಿ ಕಾರ್ಯಕರ್ತರು ಒಳಗೆ ಹೋಗುವುದು ಹೇಗೆ ಸಾಧ್ಯ? ಎಂದು ವಾದಿಸಿದ್ದಾರೆ.
ಆದರೆ ಈ ಕೆಳಗಿನ ವಿಡಿಯೊ ನೋಡಿ: ಗೇಟ್‍ನ ಬೀಗವನ್ನು ಒಡೆಯುತ್ತಿರುವುದು ಬಿಜೆಪಿ ಕಾರ್ಯಕರ್ತರು ಎಂಬುದು ಇಲ್ಲಿ ಸ್ಪಷ್ಟ..
ಬಿಜೆಪಿ ಕಾರ್ಯಕರ್ತರು ಗೇಟ್ ಬೀಗ ಒಡೆಯುತ್ತಿರುವ ವಿಡಿಯೋ
ಕ್ಯಾಂಪಸ್ ಒಳಗೆ ಪ್ರವೇಶಿಸಿದ ವಿಡಿಯೋ
ಒಳಗಿನ ದೃಶ್ಯ ತೋರಿಸುವ ಏರಿಯಲ್ ವೀವ್ ವಿಡಿಯೋ
4. ಕಬ್ಬಿಣದ ಗೇಟ್ ಮತ್ತು ನಂತರ ಕಟ್ಟಿಗೆ ಬಾಗಿಲಿರುವ ರೂಮ್‍ನಲ್ಲಿರುವ ವಿದ್ಯಾಸಾಗರರ ಪುತ್ಥಳಿಯನ್ನು ಬಿಜೆಪಿ ಕಾರ್ಯಕರ್ತರು ಒಡೆಯಲು ಹೇಗೆ ಸಾಧ್ಯ?
ಇದು ಅಮಿತ್ ಶಾ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಪ್ರಶ್ನೆ. ನಿಜ, ಅಲ್ಲಿ ಕಬ್ಬಿಣದ ಗೇಟ್, ನಂತರ ಕಟ್ಟಿಗೆಯ ದ್ವಾರ ಎಲ್ಲ ಇರುವುದು ನಿಜ. ಅಂತಹ ಕಬ್ಬಿಣದ ಗೇಟ್ ಒಡೆಯಲು ಸಾಧ್ಯವೇ ಎಂಬುದು ಬಿಜೆಪಿಯ ಮೂರ್ಖ ಪ್ರಶ್ನೆ. ಯಾವುದೇ ಶಕ್ತಿಶಾಲಿ ಕಬ್ಬಿಣದ ಗೇಟ್ ಇರಲಿ, ಅದರ ಶಕ್ತಿ ಇರುವುದು ಅದರ ಲಾಕ್ ಎಷ್ಟು ಶಕ್ತಿಯುತವಾಗಿದೆಯೋ ಅಷ್ಟೇ.. ಮೇಲಿನ ವಿಡಿಯೊದಲ್ಲಿಯೇ ನೋಡಿ, ರಾಡ್‍ಗಳಿಂದ ಬಿಜೆಪಿ ಕಾರ್ಯಕರ್ತರು ಆ ಲಾಕ್ ಒಡೆದು ಒಳ ನುಗ್ಗಿರುವುದನ್ನು..
5. ಒಳಗಿರುವ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿಯನ್ನು ವಿರೂಪಗೊಳಿಸಿದ್ದು ಟಿಎಂಸಿ ಕಾರ್ಯಕರ್ತರು…
ಈ ಅಪಾದನೆಗೂ ಯಾವುದೇ ಸಾಕ್ಷ್ಯಗಳಿಲ್ಲ. ಬದಲಿಗೆ ಲಭ್ಯವಿರುವ ಎಲ್ಲ ವಿಡಿಯೊಗಳ ಪ್ರಕಾರ, ಶಾ ರ್ಯಾಲಿಯ ಬಿಜೆಪಿ ಕಾರ್ಯಕರ್ತರೇ ವಿದ್ಯಾಸಾಗರರ ಪುತ್ಥಳಿಯನ್ನು ವಿರೂಪಗೊಳಿಸಿ, ಅದರ ತುಂಡನ್ನು ಹೊರಗೆ ತಂದು ಬಿಸಾಡಿದ್ದಾರೆ ಎಂಬುದನ್ನು ವಿಡಿಯೋಗಳೇ ಹೇಳುತ್ತಿವೆ. ಜೊತೆಗೆ ಟೆಲಿಗ್ರಾಫ್ ಪತ್ರಿಕೆಯ ಪ್ರತ್ಯಕ್ಷ ವರದಿಯೂ ಅದನ್ನೇ ಹೇಳುತ್ತಿದೆ.
ಸಾರಾಂಶ: ಕೋಲ್ಕತ್ತ ಹಿಂಸಾಚಾರಕ್ಕೆ ಟಿಎಂಸಿ ಕಾರಣ ಎಂಬ ಬಿಜೆಪಿ ಅಪಾದನೆಗೆ ಯಾವ ತಳ ಸಾಕ್ಷ್ಯವೂ ಲಭ್ಯವಿಲ್ಲ. ಅದನ್ನು ತೋರಿಸು ಸಾಕ್ಷ್ಯಗಳೂ ಬಿಜೆಪಿ ಬಳಿಯಿಲ್ಲ. ಅದು ‘ಮೊದಲ ಪ್ರತ್ಯಕ್ಷದರ್ಶಿ’ಯ ಪೇಸ್‍ಬುಕ್ ಪೇಜ್ ಉಲ್ಲೇಖಿಸಿ ಬಚಾವಾಗಲು ನೋಡಿತು. ಆದರೆ ತಕ್ಷಣವೇ ಆ ಅಕೌಂಟ್ ಮಾಯ… ಇಲ್ಲಿ ತೋರಿಸಿರುವ ಎಲ್ಲ ವಿಡಿಯೊಗಳಲ್ಲಿ ರ್ಯಾಲಿಯಲ್ಲಿದ್ದ ‘ನಮೋ ಒನ್ಸ್ ಎಗೇನ್’ ಹೆಸರಿನ ಕೇಸರಿ ಟೀಶರ್ಟ್ ಧರಿಸಿದ್ದ ಮತ್ತು ಅವರ ಜೊತೆಗಿದ್ದ ಬಿಜೆಪಿ ಕಾರ್ಯಕರ್ತರೇ ಈ ಹಿಂಸಾಚಾರ, ಗಲಭೆ ಮಾಡಿದ್ದಾರೆ….)
(ಆಧಾರ:Altnews.in)