| ಅಯಾನ್ ಪಾಲ್ |

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ರಾಜ್‍ಕುಮಾರ್ ರಾಯ್ ಯಾವುದೇ ಕ್ರಾಂತಿಕಾರಿ ವ್ಯಕ್ತಿಯಾಗಿರಲಿಲ್ಲ. ಪಶ್ಷಿಮ ಬಂಗಾಳದ ರಾಯಗಂಜ್‍ನ ರಾಹತ್‍ಪುರ್ ಶಾಲೆಯ ಒಬ್ಬ ಸಾಧಾರಣ ಶಿಕ್ಷಕ. 2018ರ ಪಂಚಾಯತಿ ಚುನಾವಣೆಗಳಲ್ಲಿ ಇತಹಾರ್ ವಿಧಾನಸಭೆ ಕ್ಷೇತ್ರದ ಬೂತ್ ಸಂಖ್ಯೆ 48ರಲ್ಲಿ ಪ್ರಿಸೈಡಿಂಗ್ ಆಫಿಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅಲ್ಲಿ ನಡೆದದ್ದೇನು ಎನ್ನುವುದು ಇಂದಿಗೂ ನಿಗೂಢ.

ಮತದಾನದ ಮರುದಿನ ತನ್ನ ಮತಗಟ್ಟೆಗೆ 25 ಕಿಲೋಮೀಟರ್ ದೂರದಲ್ಲಿಯ ರೈಲ್ವೇ ಹಳಿಯ ಮೇಲೆ ರಾಜ್‍ಕುಮಾರ್ ರಾಯ್ ಅವರ ಛಿದ್ರವಿಚ್ಛಿದ್ರವಾದ ಮೃತದೇಹ ಪತ್ತೆಯಾಗಿತ್ತು. ಈ ಹೃದಯವಿದ್ರಾವಕ ಘಟನೆಯು ಮುಂಬರುವ ದಿನಗಳಲ್ಲಿ ಬಂಗಾಳ ರಾಜಕೀಯದ ‘ನವೆಂಬರ್’ ಎಂದು ಕರಯಲಾಗುವುದೋ ಇಲ್ಲವೋ ಎನ್ನುವುದು ಭವಿಷ್ಯವೇ ತೀರ್ಮಾನಿಸುವುದು.

ಆದರೆ ಚುನಾವಣೆ, ಮತದಾನದ ಬಗ್ಗೆ ಜನರ ಮೇಲೆ ಈ ಘಟನೆಯಿಂದ ಪರಿಣಾಮವಂತೂ ಆಗಿದೆ, ಇದು ಸದ್ಯಕ್ಕೆ ನಡೆಯುತ್ತಿರುವ ಚುನಾವಣೆಗಳಲ್ಲಿ ಈ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಹಾಗೂ ಮುಂಬರುವ ಚುನಾವಣೆಗಳ ಸ್ವರೂಪವೇ ಬದಲಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

ಬಂಗಾಳದ ಚುನಾವಣೆಗಳಲ್ಲಿ ರಕ್ತಪಾತ ಹೊಸದಲ್ಲ. 2003ರ ಪಂಚಾಯತಿ ಚುನಾವಣೆಗಳಲ್ಲಿ ದಾಖಲಾದ ಸಾವುಗಳ ಸಂಖ್ಯೆ 76. 2008ರಲ್ಲಿ 48 ಮತ್ತು 2013ರ ಪಂಚಾಯತಿ ಚುನಾವಣೆಗಳಲ್ಲಿ ಆದ ಸಾವುಗಳು 36. 2018ರಲ್ಲಿ ಕೇವಲ 26, ಹಿಂದಿನ ಚುನಾವಣೆಗಳಿಗಿಂತಲೂ ಕಡಿಮೆ. ಆದರೆ ಹಿಂದಿನ ಚುನಾವಣೆಗಳಿಗಿಂತ ಭಿನ್ನವಿದ್ದದ್ದು ಹಿಂಸೆಯ ಸ್ವರೂಪ, ಅದರ ಆಟ ಮತ್ತು ಭಯದ ಪ್ರಮಾಣ ಮಾತ್ರ ಹೇರಳ.

2013ರಲ್ಲಿ ಕೋಲ್ಕತ್ತಾದ ಹರಿಮೋಹನ್ ಘೋಷ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚುನಾವಣೆಯ ನಾಮಾಂಕನ ಪ್ರಕ್ರಿಯೆಯಲ್ಲಿ ತಪಸ್ ಚೌಧರಿ ಎನ್ನುವ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು. 2015ರಲ್ಲಿ ಆದ ಮುನಿಸಿಪಲ್ ಚುನಾವಣೆಗಳಲ್ಲೂ ವ್ಯಾಪಕ ಹಿಂಸೆ ಕಂಡುಬಂದು, ಅನೇಕ ನಗರಪ್ರದೇಶದ ಮತದಾರರಿಗೆ ಮತಚಲಾಯಿಸಲು ಆಗಲೇ ಇಲ್ಲ. ಈಗ ನಡೆಯುತ್ತಿರುವ ಚುನಾವಣೆಗಳಲ್ಲೂ, ನೂರಾರು ಅರೆಸೈನಿಕ ಪಡೆಗಳ ಸಹಾಯದೊಂದಿಗೆ ನಿಗಾ ಇಟ್ಟಿರುವ ಚುನಾವಣಾ ಆಯೋಗದ ಉಸ್ತುವಾರಿಯಲ್ಲಿಯೂ ಒಂದು ಮತಗಟ್ಟೆಯ 50 ಮೀಟರ್ ಹತ್ತಿರದಲ್ಲಿಯೇ ಕೊಲೆಯಾಗಿದ್ದು ಕಂಡುಬಂದಿದೆ, ಮತದಾನದ ಪ್ರತಿ ಹಂತದಲ್ಲೂ ಗುಂಡು ಹಾರಿಸುವುದು, ಬಾಂಬ್ ಸ್ಫೋಟಿಸುವುದು ಮತ್ತು ಮತದಾನ ರಿಗ್ ಮಾಡುವುದು ಕಂಡುಬಂದಿದೆ.

ಬಂಗಾಳ ಚುನಾವಣೆಗಳಲ್ಲಿ ಹಿಂಸೆ ಎಷ್ಟರಮಟ್ಟಿಗೆ ಆಗುತ್ತೆ ಎನ್ನುವುದು ಈ ಅಂಶಗಳು ತೋರಿಸುತ್ತವೆ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಂದರ್ಭಗಳಲ್ಲಿ ನಾಮಪತ್ರ ಸಲ್ಲಿಸುವುದು ಮತ್ತು ಮತಎಣಿಕೆಯ ಪ್ರಕ್ರಿಯೆಗಳೂ ಎಷ್ಟು ಹಿಂಸಾತ್ಮಕವಾಗಿರುತ್ತವೆ ಎನ್ನುವುದನ್ನು ಈ ಅಂಶಗಳು ಹೇಳುವುದಿಲ್ಲ. ಮೂರು ಹಂತಗಳಲ್ಲಾದ ಕಳೆದ ಪಂಚಾಯತಿ ್ಲ (ಗ್ರಾಮ ಪಂಚಾಯತಿ, ಪಂಚಾಯತಿ ಸಮಿತಿ ಮತ್ತು ಜಿಲ್ಲಾ ಪಂಚಾಯಿತಿ) ಚುನಾವಣೆಗಳಲ್ಲಿ, 16814 (34.56%) ಗ್ರಾಮ ಪಂಚಾಯತಿ, 3059(33%) ಪಂಚಾಯಿತಿ ಸಮಿತಿ ಮತ್ತು 203 (26%) ಜಿಲ್ಲಾ ಪಂಚಾಯಿತಿಗಳಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‍ನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.

ಇದರಿಂದ ನಾವು ಇದೊಂದು ಒಂದೇ ಪಕ್ಷದ ಹಿಡಿತದಲ್ಲಿರುವ ರಾಜ್ಯ ಎಂದು ಅಭಿಪ್ರಾಯಕ್ಕೆ ಬರಬಹುದು ಆದರೆ ಸ್ವಾತಂತ್ರ್ಯದ ನಂತರದಿಂದ ರಾಜ್ಯವು ಇಷ್ಟು ಹದಗೆಟ್ಟಿರುವುದನ್ನು ಯಾರೂ ನೋಡಿರಲಿಲ್ಲ. ಅದರಲ್ಲೂ ಇದರ ಬಗ್ಗೆ ಸುಪ್ರೀಮ್ ಕೋರ್ಟಿನ ಅಭಿಪ್ರಾಯ ನಮ್ಮನ್ನು ಚಕಿತಗೊಳಿಸುತ್ತದೆ; ಪಂಚಾಯತಿ ಚುನಾವಣೆಗಳು ಪ್ರಾರಂಭವಾಗುವುದಕ್ಕಿಂತ ಮುಂಚೆ ಕೊಲ್ಕತಾ ಹೈಕೋರ್ಟಿನಲ್ಲಿ ಕನಿಷ್ಠ 5 ಅರ್ಜಿಗಳನ್ನು ಸಲ್ಲಿಸಲಾಗಿತ್ತು, ಚುನಾವಣೆಗಳ ದಿನಾಂಕ, ಭದ್ರತಾ ವ್ಯವಸ್ಥೆ, ನಾಮಪತ್ರ ಸಲ್ಲಿಕೆಗೆ ಅಡೆತಡೆಯ ವಿಷಯಗಳ ಬಗ್ಗೆ ಈ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಆದರೆ ನಾವು ಊಹಿಸಲೂ ಆಗದಂತಹ ಆದೇಶಗಳನ್ನು ನ್ಯಾಯಾಧೀಶರು ಜಾರಿ ಮಾಡಿದ್ದರು, ಉದಾಹರಣೆಗೆ, ವಾಟ್ಸಾಪ್ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ನೀಡಿದ್ದು ಮತ್ತು ಸಂತ್ರಸ್ತರ ಕುಟುಂಬಕ್ಕೆ ನೀಡಬೇಕಾದ ಸಹಾಯಧನವನ್ನು ಅಲ್ಲಿಯ ಜವಾಬ್ದಾರಿ ವಹಿಸಿಕೊಂಡ ಅಧಿಕಾರಿಗಳ ವೇತನದಿಂದ ಕಡಿತಗೊಳಿಸುವುದು ಇತ್ಯಾದಿ. ಒಂದು ವೇಳೆ ಉಚ್ಚ ನ್ಯಾಯಾಲಯ (ಸುಪ್ರೀಮ್ ಕೋರ್ಟ್) ಚುನಾವಣೆಗಳ ಫಲಿತಾಂಶಗಳಲ್ಲಿ ಕಂಡುಬಂದ ಲೋಪದೋಷಗಳು ಮತ್ತು ಕೊಲ್ಕತಾ ಹೈಕೋರ್ಟಿನಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಒಟ್ಟಿಗೆ ಆಲಿಸಿದ್ದರೆ ಅವರಿಗೆ ಸಂಪೂರ್ಣ ಚಿತ್ರಣ ಸಿಗಬಹುದಿತ್ತು ಹಾಗೂ ಚುನಾವಣೆಗಳನ್ನು ಸಿಂಧು ಎಂದು ಘೋಷಿಸುತ್ತಿರಲಿಲ್ಲ.

2018ರ ಮೇ 14 ರ ಮತದಾನದಂದು ಆದದ್ದಾದರೂ ಏನು? ಬಂಗಾಳದ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತಿದೆ ಆದರೆ ಅಧಿಕೃತ ವರದಿಯ ಕಿವಿಗೆ ಮಾತ್ರ ಬಿದ್ದಿಲ್ಲ. ಅಂದು ರಾಜ್ಯಾದ್ಯಂತ ಬಿಡಿಓ ಮತ್ತು ಡಿಎಮ್ ಕಛೇರಿಯ ಎದುರಿಗೆ ಆಡಳಿತ ಪಕ್ಷದ ಕಾರ್ಯಕರ್ತರು ಮತ್ತು ರೌಡಿಗಳಿಂದ ಅನೇಕ ಅಭ್ಯರ್ಥಿಗಳ ಮೇಲೆ ಹಲ್ಲೆ ಮಾಡಲಾಯಿತು. ಆ ಆಭ್ಯರ್ಥಿಗಳು ನಾಮಪತ್ರ ಸಲ್ಲಿಬಾರದು ಎನ್ನುವುದು ಈ ಹಲ್ಲೆಗಳ ಉದ್ದೇಶವಾಗಿತ್ತು.

ಅಂದಿನ ದಿನ ಬೂತ್ ಆಕ್ರಮಣ ಮಾಡಿದ್ದು, ಮತದಾನ ರಿಗ್ ಮಾಡಿದ್ದು, ಮತದಾರರ ಮತ್ತು ಮತಗಟ್ಟೆಯ ಅಧಿಕಾರಿಗಳ ಮೇಲೆ ಆದ ಹಲ್ಲೆಗಳ ನಿರ್ದಿಷ್ಟ ಸಂಖ್ಯೆ ಎಂದಿಗೂ ತಿಳಿಯಲಾಗದು. ಸಂಪೂರ್ಣ ಚುನಾವಣೆಯನ್ನು ನಿರ್ವಹಿಸಿದ್ದು ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗ, ಅವರ ಸಹಾಯಕ್ಕೆ ಅಲ್ಲಿಯ ಪೊಲೀಸ್, ಗುತ್ತಿಗೆಯ ಪೌರಾಡಳಿತ ಪೊಲೀಸ್, ಫಾರೆಸ್ಟ್ ಗಾಡ್ರ್ಸ್, ಹೋಮ್ ಗಾಡ್ರ್ಸ್. ಇವರೆಲ್ಲರೂ ಕೈಯಲ್ಲಿ ತಮಗೆ ನೀಡಿರುವ ಕೋಲನ್ನು ಹಿಡಿದು ಗನ್‍ಗಳು ಮತ್ತು ಬಾಂಬ್‍ಗಳನ್ನು ಹಿಡಿದಿರುವ ರೌಡಿಗಳನ್ನು ಎದುರಿಸಬೇಕಿತ್ತು. ಈ ಅಧಿಕಾರಿಗಳು ಸಂಪೂರ್ಣ ಶರಣಾಗತಿ ಮಾಡಿದರೂ ಕೇಡಿಗಳ ಆಕ್ರೋಶದಿಂದ ತಪ್ಪಿಸಿಕೊಳ್ಳುವಂತಿದ್ದಿಲ್ಲ. ಅಧಿಕಾರಿಗಳಲ್ಲಿ ಅನೇಕರು ಗಾಯಗೊಂಡೇ ಮನೆ ತಲುಪಿದರು.

ಆಗ ಬಂದಿದ್ದು ರಾಜ್‍ಕುಮಾರ್ ರಾಯ್ ಅವರ ಸಾವಿನ ಸುದ್ದಿ. ರಾಯಗಂಜ್‍ನ ಜನರು ತಕ್ಷಣ ಪ್ರತಿಭಟನೆ ಪ್ರಾರಂಭಿಸಿದರು. ಅವರ ಪ್ರಶ್ನೆಗಳಿಗೆ ಉತ್ತರದ ಬೇಡಿಕೆಯನ್ನಿಟ್ಟರು, 1) ಅವನ ಸಾವಿಗೆ ಮುಂಚೆ 24 ಗಂಟೆಗಳತನಕ ಎಲ್ಲಿದ್ದರು? 2) ಅಲ್ಲಿಯ ರಿಟರ್ನಿಂಗ್ ಅಧಿಕಾರಿ ರಾಜ್‍ಕುಮಾರ್ ಅವರ ಹೆಂಡತಿಯ ಅಪೀಲ್ ಅನ್ನು ಏಕೆ ನಿರ್ಲಕ್ಷಿಸಿದ್ದು? 3) ಆ ರಿಟರ್ನಿಂಗ್ ಅಧಿಕಾರಿ ತನ್ನಡಿಯಲ್ಲಿ ಬರುವ ಕರ್ತವ್ಯನಿರತ ಅಧಿಕಾರಿ ಕಾಣೆಯಾದಾಗ ಎಫ್‍ಐಆರ್ ಏಕೆ ಸಲ್ಲಿಸಲಿಲ್ಲ? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರವಿದ್ದಿಲ್ಲ. ಯಾವುದೇ ಅಧಿಕೃತ ವಿಚಾರಣೆ ಅಥವಾ ವರದಿಗೂ ಮುಂಚೆಯೇ ಇದೊಂದು ಆತ್ಮಹತ್ಯೆಯ ಸ್ಪಷ್ಟ ಪ್ರಕರಣ ಎಂದು ತಕ್ಷಣವೇ ಆಡಳಿತವು ಘೋಷಿಸಿಬಿಟ್ಟಿತು. ಆಡಳಿತವು ಯಾವುದೇ ವಿಳಂಬವಿಲ್ಲದೇ ಜಾಮೀನು ಸಿಗದಂತಹ ಕಾನೂನುಗಳ ಅಡಿಯಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲು ಪ್ರಾರಂಭಿಸಿತು.

ಹಿಂಸೆಯ ಸಂತ್ರಸ್ತರು ರಾಜ್ಯಸರಕಾರದ ಶಾಲಾ ಶಿಕ್ಷಕರು ಮತ್ತು ಶಾಲೆಯ ಬೋಧಕೇತರ ಸಿಬ್ಬಂದಿಯಾಗಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಸ್ತೆಗಳಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದರು. ಪ್ರತಿಭಟನೆಗಳು ಅಸಂಘಟಿತವಾಗಿದ್ದವು ಮತ್ತು ರಾಜ್ಯದೆಲ್ಲೆಡೆ ಚದುರಿದ್ದವು ಹಾಗಾಗಿ ಮುಂದುವರೆಯುವಂತಹ ಯಾವುದೇ ಯೋಜನೆ ಮಾಡಲಾಗಲಿಲ್ಲ. ಇದರೊಂದಿಗೆ ವಿರೋಧಪಕ್ಷಗಳು ಮತ್ತು ಅವರ ನಿಯಂತ್ರಣದಲ್ಲಿದ್ದ ಶಿಕ್ಷಕರ ಸಂಘಟನೆಗಳು ಈ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ಮುಖ್ಯವಾಹಿನಿಯ ಮಾಧ್ಯಮಗಳು ಎಷ್ಟು ಪಕ್ಷಪಾತಿಯಾಗಿದ್ದವೆಂದರೆ, ಈ ಪ್ರತಿಭಟನೆಗಳ ವರದಿ ಮಾಡಲು ನಿರಾಕರಿಸಿದ್ದಷ್ಟೇ ಅಲ್ಲ, ಈ ಪ್ರತಿಭಟನೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದವು. ರಾಜ್‍ಕುಮಾರ್ ರಾಯ್ ಅವರ ಸಾವಿಗೆ ಕಾರಣರಾದವರ ಬಂಧನದ ವಿರುದ್ಧ ಈ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಬಿಂಬಿಸಿದವು ಈ ಮಾಧ್ಯಮಗಳು. ಈ ಮಾಧ್ಯಮಗಳ ಕಳೆದ ಕೆಲವು ವರ್ಷಗಳ ಲೆಕ್ಕಪತ್ರಗಳನ್ನು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಪರಿಶೀಲಿಸಿದರೆ ಸತ್ಯ ಹೊರಬರಬಹುದು.

ಪಶ್ಚಿಮ ಬಂಗಾಳ ಈ ದುಸ್ಥಿತಿಗೆ ಏಕೆ ತಲುಪಿತು ಎನ್ನುವ ಪ್ರಶ್ನೆ ಮೂಡುತ್ತದೆ, ಖಂಡಿತವಾಗಿಯೂ ಅದೊಂದು ಅಧ್ಯಯನದ ವಿಷಯ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ವಿರೋಧಪಕ್ಷವನ್ನು ಯಾವ ದಾರಿಯನ್ನಾದರೂ ಬಳಸಿ ಮೂಲೆಗುಂಪು ಮಾಡುವ ಸಂಸ್ಕøತಿ ರಾಜ್ಯಕ್ಕೆ ಹೊಸದಲ್ಲ. ರಾಜ್ಯವು ನಿರಂತರವಾಗಿ ವಿತ್ತೀಯ ಸಂಕಷ್ಟದಲ್ಲಿದೆ. ಸಿಂಗೂರ್ ಟಾಟಾ ನ್ಯಾನೋ ಮತ್ತು ನಂದಿಗ್ರಾಮ್‍ನಂತಹ ಕೈಗಾರಿಕಾ ವಿರೋಧಿ ಹಾಗೂ ಕೃಷಿ ಪರ ಚಳವಳಿಗಳ ನೆರಳಲ್ಲೇ 2011ರಲ್ಲಿ ಅಧಿಕಾರಕ್ಕೆ ಬಂದ ತೃಣಮೂಲ ಕಾಂಗ್ರೆಸ್ ತನ್ನ ನಿಲುವನ್ನು ಮುಂದವರೆಸಿ, ಪಕ್ಷದ ಕಾರ್ಯಕರ್ತರ ಎಲ್ಲಾ ರೀತಿಯ ಕಾನೂನುಬಾಹಿರ ಮತ್ತು ಅಸಂಬದ್ಧ ಕಾರ್ಮಿಕ ಚಳವಳಿಗಳನ್ನು ಹಲವಾರು ಕೈಗಾರಿಕೆಗಳಲ್ಲಿ ಅನುಮೋದಿಸಿತು.

ಬಹುತೇಕ ಉದ್ಯಮಿಪತಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಈಗಾಗಲೇ ಹೂಡಿಕೆ ಮಾಡಿದವರು ತಮ್ಮ ಅಂಗಡಿಗಳನ್ನು ಮುಚ್ಚುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ದೀರ್ಘವಾದ ಅಂತರರಾಷ್ಟ್ರೀಯ ಗಡಿ ಹೊಂದಿದ ಮತ್ತು ಹೆಚ್ಚಿನ ಜನದಟ್ಟನೆಯನ್ನು ಹೊಂದಿದ ರಾಜ್ಯ ಸುಲಭವಾಗಿ ಕಪ್ಪು ಆರ್ಥಿಕತೆಯ ಅಡಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇತ್ತು. ಶಾರದಾ ಮತ್ತು ರೋಸ್‍ವ್ಯಾಲಿಯಂತಹ ಪಾಂಜಿ ಸ್ಕೀಮ್‍ಗಳ ಆಗಮನದಿಂದ ಅಗಿದ್ದು ಅದೇ. ಅದರೊಂದಿಗೆ ಶೆಲ್ ಕಂಪನಿಗಳು, ರಿಯಲ್ ಎಸ್ಟೇಟ್, ಸರಬರಾಜು ಮಾಡುವ ಗ್ಯಾಂಗ್‍ಗಳು (ಸಪ್ಲೈ ಸಿಂಡಿಕೇಟ್), ಮಾನವ ಸಾಗಾಣಿಕೆ, ಸ್ಮಗ್ಲಿಂಗ್ ಮುಂತಾದವುಗಳಿಂದ ಕಪ್ಪು ಆರ್ಥಿಕತೆ ಗಟ್ಟಿಯಾಗಿ ನೆಲೆಯೂರಿದೆ.

ಸರಕಾರವು ನೇಮಕಾತಿಯ ಪ್ರಕ್ರಿಯೆಗಳನ್ನೇ ನಿಲ್ಲಿಸಿದೆ. ನಗರಗಳ ಸುಂದರೀಕರಣಕ್ಕೆ ದೊಡ್ಡ ಮೊತ್ತಗಳನ್ನು ವ್ಯಯಿಸುತ್ತಿದೆ, ಕಳ್ಳರ ಅನುಕೂಲಕ್ಕಾಗಿ ನಿಯಮಗಳನ್ನು ಮುರಿದಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಒಂದು ಸರಕಾರ ಮಾಡಬಾರದ್ದನ್ನೆಲ್ಲವನ್ನೂ ಈ ಸರಕಾರ ಮಾಡಿದೆ.

ಪಶ್ಚಿಮ ಬಂಗಾಳವು ಇತರೆ ರಾಜ್ಯಗಳಿಗಿಂತ ರಾಜಕೀಯವಾಗಿ ತುಸು ಭಿನ್ನವಾಗಿದೆ. ದೇಶಾದ್ಯಂತ ಇರುವ ದಲಿತ ರಾಜಕೀಯ ಇಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಬಂಗಾಳದ ಪುನರುಜ್ಜೀವನದ ಅಗ್ರಗಣ್ಯರಾದ ವಿವೇಕಾನಂದ, ರವೀಂದ್ರನಾಥ್ ಟಾಗೋರ್, ಸುಭಾಶ್‍ಚಂದ್ರ ಬೋಸ್‍ರಂತಹ ಮಹಾನ್ ವ್ಯಕ್ತಿಗಳಿಂದಾಗಿ ಇಲ್ಲಿಯ ಜಾತಿ ವ್ಯವಸ್ಥೆ ಯಾವಾಗಲೂ ಮುನ್ನೆಲೆಗೆ ಬಂದಿಲ್ಲ. ಆದರೆ ಮಮತಾ ಬ್ಯಾನರ್ಜಿಯವರ ಸರಕಾರವು ಮತಗಳ ಸಲುವಾಗಿ ಈ ವಲಯವನ್ನು ಪುನಶ್ಚೇತನಗೊಳಿಸಿದೆ. ಅಲ್ಪಸಂಖ್ಯಾತರನ್ನು ಒಲಿಸಲು ಅಸಂಬದ್ಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ಪರಿಣಾಮವಾಗಿ ವೋಟ್ ಬ್ಯಾಂಕುಗಳು ಸೃಷ್ಟಿಯಾಗಿ ಕೋಮು ಪ್ರಕ್ಷುಬ್ಧತೆ ಹೆಚ್ಚುತ್ತಿದೆ.

ಇದನ್ನು ಓದಿ: ಮಮತಾ ವರ್ಸಸ್ ಮೋದಿ ಜಗಳ

ಪ್ರಮುಖ ವಿರೋಧಪಕ್ಷವಾಗಿ ಬಿಜೆಪಿ ಬಡ್ತಿ ಪಡೆದಿದೆ. ಅರ್ಥಿಕತೆ ಗಂಭೀರ ಸಂಕಟ ಎದುರಿಸುತ್ತಿರುವ ಸಂದರ್ಭದಲ್ಲಿ ಚುನಾವಣೆಗಳು ಬಂದಾಗ ಅಧಿಕಾರ ದಾಹಿಗಳಿಗೆ ಹಲವಾರು ಸಾರ್ವಜನಿಕ ಯೋಜನೆಗಳಿಂದ ಲಾಭ ಮಾಡಿಕೊಳ್ಳುವ ಅವಕಾಶ ಸಿಕ್ಕಂತಾಗುತ್ತಿದೆ ಹಾಗೂ ಕಪ್ಪು ಆರ್ಥಿಕತೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇವರಿಗೆ ಸಾಮಾನ್ಯ ಜನರ ಅಥವಾ ಚುನಾವಣೆ ಅಧಿಕಾರಿಗಳ ಹಕ್ಕು, ಘನತೆಯ ಯಾವ ಕಾಳಜಿಯೂ ಇರುವುದಿಲ್ಲ.

ಇತ್ತೀಚಿಗೆ ಶಿಕ್ಷಕರು ಮತ್ತು ಇತರರು ಸೇರಿಕೊಂಡು ಚುನಾವಣೆ ಕಾರ್ಯವನ್ನು ಮಾಡುವ ಜನರ ಒಂದು ಒಕ್ಕೂಟವನ್ನು ಪ್ರಾರಂಭಿಸಿದರು. ಚುನಾವಣೆ ಕಾರ್ಯಕ್ಕೆ ಸಿಆರ್‍ಪಿಎಫ್ ದಿಂದಲೇ ಸುರಕ್ಷತೆ ಒದಗಿಸಬೇಕೆಂದು ಬೇಡಿಕೆಯನ್ನಿಟ್ಟು ರಾಜ್ಯಮಟ್ಟದ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ, ಎಲ್ಲೆಡೆಯಿಂದ ಒತ್ತಡ ಹಾಕಿದರು. ಇವರ ಒತ್ತಡದ ಮೇರೆಗೆ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯು ಮತಗಟ್ಟೆಯ ಅಧಿಕಾರಿಗಳ ಸುರಕ್ಷತೆಯನ್ನು ಖಚಿತಪಡಿಸಲಾಗುವುದು ಎಂದು ಪತ್ರಿಕಾ ಹೇಳಿಕೆ ನೀಡಿದರು. ಇದು ದೇಶದ ಚುನಾವಣೆಗಳ ಇತಿಹಾಸದಲ್ಲಿ ಮೊದಲ ಬಾರಿ ಆದದ್ದು. ಚುನಾವಣಾ ವೀಕ್ಷಕರು ಸಿಆರ್‍ಪಿಎಫ್ ಪಡೆಗಳನ್ನು ಸ್ಥಳಾಂತರಿಸಿ ಹೆಚ್ಚಿನ ಮತಗಟ್ಟೆಗಳಿಗೆ ಈ ಪಡೆಗಳು ರಕ್ಷಣೆ ನೀಡುವಂತೆ ಮಾಡಿದರು. ಒಂದು ವೇಳೆ ಈ ಕ್ರಮಗಳನ್ನು ಕೈಗೊಳ್ಳದಿದ್ದರೆ ಈ ಚುನಾವಣೆಗಳಲ್ಲೂ ಏನಾಯಿತು ಎನ್ನುವುದನ್ನು ಬಂಗಾಳದ ಜನರಿಗಷ್ಟೇ ಗೊತ್ತಿರುವಂತಾಗಿತ್ತಿತ್ತು.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here